ಹೇಡಿ ಅಂತ್ಲೇ ಇಟ್ಕೊಳ್ಳಿ ವಸಿ ಕೇಳಿಸಿಕೊಳ್ಳಿ!
ಮು. ಅ. ಶ್ರೀರಂಗರವರೆ, ದಿನಾಂಕ 31.03.2013ರ ನಿಮ್ಮ ಗೋಡೆ ಬರಹಕ್ಕೆ ನನ್ನ ಪ್ರತಿಕ್ರಿಯೆ. ನನ್ನ ಪ್ರಶ್ನೆಯು ನಿಮ್ಮನ್ನು ಯೋಚಿಸುವಂತೆ ಮಾಡಿದೆ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದೀರಿ. ನನ್ನ ಅನಿಸಿಕೆಯನ್ನು ಉದಾಹರಣೆ ಸಮೇತ ತಿಳಿಸಿದ್ದೇನೆ. ವಿಷಯ ಇಷ್ಟೆ. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಸಂದರ್ಭದಲ್ಲಿ 'ಮೋದಿಯವರಿಗೆ ಜೈ ಅಂದು ಬಿಡಿ' ಎಂದು ಬರೆದ ಕೆಲವೇ ದಿನಗಳಲ್ಲಿ ಗುಜರಾತ್, ಗೋಧ್ರಾ ಮಾರಣ ಹೋಮವನ್ನು ಮರೆಯುವ ಕಾಲ ಬಂದಿದೆ' ಎಂದು ಓದುಗರನ್ನು ಓಲೈಸುವಂತೆ ಬರೆಯುವುದರ ಒಳ ಅರ್ಥವೇನು? ಸ್ವಹಿತಕ್ಕಾಗಿ ಸಾವನ್ನಪ್ಪಿದವರನ್ನು ಮರೆಯುವ ಮನಸ್ಸುಳ್ಳ ನೀವು ಹುಟ್ಟಿನಿಂದಲೇ ಸೆಕ್ಯುಲರ್ವಾದಿಗಳೆ? ಪತ್ರಿಕೆ ಓದುಗರೆಲ್ಲರೂ ಮುಗ್ಧರಲ್ಲ ಅನ್ನೋದಿಕ್ಕೆ ನಿಮ್ಮಲ್ಲೇನಾದ್ರೂ ಆಧಾರ ಇದೆಯೆ? ಓದುಗನಿಗೆ ಪತ್ರಿಕೆ ಓದುವುದರ ಜೊತೆಗೆ ಅಂಕಣಗಳನ್ನು ತರ್ಕಿಸುವ ಹಕ್ಕು ಸಹ ಇದೆ.
-ಡಿ. ರಾಧಾಕೃಷ್ಣ, ರಾಘವೇಂದ್ರ ಬಡಾವಣೆ, ಮೈಸೂರು -19.
ಪ್ರಿಯ ಪ್ರತಾಪ್ಸಿಂಹ ಅವರಿಗೆ ವಂದನೆಗಳು. ಯಾಕೆ ಸ್ವಾಮಿ ನಿಮ್ಮ ಬುದ್ಧಿಮತ್ತೆಯನ್ನು, ಯೌವನವನ್ನು, ಉತ್ಸಾಹವನ್ನು ಒಬ್ಬರನ್ನು ತೆಗಳುವುದಕ್ಕೆ, ಹೀಯಾಳಿಸುವುದಕ್ಕೆ, ಇಲ್ಲಸಲ್ಲದ ಆಪಾದನೆ ಹೊರಿಸುವುದಕ್ಕೆ ವ್ಯಯ ಮಾಡುತ್ತಿದ್ದೀರಾ? ಯಾರೋ ಒಬ್ಬರನ್ನು ತೆಗಳುವುದಕ್ಕೆ ನಿದರ್ಶನಗಳನ್ನು ಹುಡುಕುವುದಕ್ಕೆ ಸಮಯ ವ್ಯರ್ಥ ಮಾಡುತ್ತೀರಾ. ಇಲ್ಲವೆ ಒಬ್ಬರನ್ನು ಸಮರ್ಥಿಸುವುದಕ್ಕೆ ಸಾಕ್ಷಿ ಒಟ್ಟು ಮಾಡಲು ಶ್ರಮಿಸುತ್ತೀರಾ? ಕನ್ನಡಪ್ರಭ ನಿಮ್ಮನ್ನು ಈ ಕೆಲಸಕ್ಕಾಗಿಯೇ ನೇಮಿಸಿಕೊಂಡಿದೆಯೇ? ನಿಮಗಿಬ್ಬರು ಸಾಥ್ ನೀಡಲು ವಿನಾಯಕ ಭಟ್ಟರು ಮತ್ತು ಜಿತೇಶ್ವರರಿದ್ದಾರೆ. ಪತ್ರಿಕಾ ಧರ್ಮ ಎಂದರೆ ಇದೇ ಏನು?
-ಹೆಸರು ಬೇಡ, ಊರು ಬೇಡ, ಫೋನ್ ನಂಬರೂ ಬೇಡ, ಹೇಡಿ ಅಂತಲೇ ಇಟ್ಟುಕೊಳ್ಳಿ.
ವಿಶ್ವೇಶ್ವರಭಟ್ ಅವರ ನೂರೆಂಟು ನೋಟ ಲೇಖನ (ಕ.ಪ್ರ. 28/3)! 'ಹೇಳಿ ಮತದಾರನೆದುರು ಅದ್ಯಾವ ಆಯ್ಕೆ ಇದೆ?' ಮತದಾರನನ್ನು ಇನ್ನಷ್ಟು ಸಂಕಷ್ಟದಲ್ಲಿ ನೂಕುವಂತಿದೆ. ನಾವು ಭರವಸೆ ಕಳೆದುಕೊಳ್ಳುವುದು ಬೇಡ ಅಂತ ಹೇಳಿ ಅದಕ್ಕೆ ಸರಿಯಾದ ದಾರಿಯನ್ನು ತೋರುತ್ತಿಲ್ಲವಲ್ಲ. ನಿಮ್ಮ ಲೇಖನದುದ್ದಕ್ಕೂ ಎಲ್ಲ ಪಕ್ಷಗಳ ರಾಜಕೀಯ ಧುರೀಣರುಗಳ ಜಾತಕ ಬಿಡಿಸಿಟ್ಟಿದ್ದೀರಿ. ಚುನಾವಣೆ ಎಂದರೆ ಗೆಲ್ಲುವ ಕುದುರೆಗೆ ಡಿಮ್ಯಾಂಡ್ ಎಂದೂ, ಆ ಗೆಲ್ಲುವ ಕುದುರೆಯ ಗುಣಲಕ್ಷಣಗಳೆಲ್ಲವನ್ನೂ ದುಡ್ಡಿನಿಂದಲೇ ಪರಿಚಯಿಸಿದ್ದೀರಿ. ಹಾಗಾದರೆ ಈ ಆರು ಕೋಟಿಯಲ್ಲಿ 224 ಪ್ರಾಮಾಣಿಕರು ಸಿಗಲಾರರೇ? ಇವೆಲ್ಲಾ ಪ್ರಜಾಪ್ರಭುತ್ವದ ಅನಿವಾರ್ಯಗಳೇ? ಇಂಥ ಪ್ರಜಾಪ್ರಭುತ್ವ ರಾಜ್ಯವನ್ನು ಅಥವಾ ದೇಶವನ್ನು ನಿಜವಾಗಿಯೂ ಸುಸ್ಥಿತಿಯತ್ತ ನಡೆಸಬಲ್ಲುದೆ? ಒಬ್ಬ ಪ್ರಜೆಯ ನಿಜವಾದ ಪಾತ್ರ ಏನು ಹಾಗೂ ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ನಿಮ್ಮ ಲೇಖನ ಹೆಚ್ಚು ಬೆಳಕು ಚೆಲ್ಲಬೇಕಿತ್ತು.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ, ಮೊ. 9632 821920.
ಇದು ಪ್ರೀತಿ, ಪ್ರೇಮದ ವಿಚಾರವಲ್ಲ. ಪ್ರಣತಿ ವಿಚಾರ! ಇದು ನಾನು ನಿಮಗೆ ಬರೆದ 'ಪ್ರೀತಿ'ಯ ಅಥವಾ ಪ್ರೇಮದ ಪತ್ರವಲ್ಲ, ಅಥವಾ ಹೊಗಳಿಕೆಯೂ ಅಲ್ಲ. ಪುಟ್ಟ ಸಲಹೆ ಎಂದಷ್ಟೆ ಭಾವಿಸಿದರೆ ಸಾಕು. (ಪ್ರೀತಿ, ಪ್ರೇಮ ಪ್ರಣತಿಗೆ) ನಿಮ್ಮ ಬರಹಗಳನ್ನು ಓದುತ್ತೇನೆ. ಭಾಷೆಯ ಆಡಂಬರತೆಯಿಲ್ಲದ, ಭಾವನೆಗಳಿಗೆ ಪ್ರತಿಸ್ಪಂದಿಸುವ ಲೇಖನ ಶೈಲಿ ಆಕರ್ಷಣೀಯ. ಆದರೆ, 31ರ ಮಾರ್ಚ್ 2013ರ ಲೇಖನ ಅಷ್ಟು ಹುರುಳಿಲ್ಲ ಎನಿಸಿತು. ವಿಭಿನ್ನವಾದ ಎರಡು ವಿಚಾರಗಳನ್ನು ಒಂದಕ್ಕೇ ಪೋಣಿಸಲು ಹೋಗಿ, ನೀರಸ ಎಂಬಷ್ಟರ ಮಟ್ಟಿಗೆ ಲೇಖನ ಬರೆದಿದ್ದೀರಿ. ಕೇವಲ ಒಂದು ವಿಷಯವನ್ನೇ ಸ್ಪಷ್ಟವಾಗಿ ಹೇಳಿದ್ದರೆ ಚೆನ್ನಾಗಿರುತ್ತಿತ್ತೇನೋ ಎನಿಸಿತು.
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ಮತ್ತೀಕೆರೆ ಅಂಚೆ, ರಾಮನಗರ ಜಿಲ್ಲೆ, ಮೊ. 990 2797767.
ಭಾನುವಾರದ ಸಾಪ್ತಾಹಿಕದಲ್ಲಿ ಶ್ರುತಿ ಭಟ್ ಅವರ ಶ್ರುತಿ ಲಯ ಅಂಕಣ ತಪ್ಪದೆ ಓದುವಂತೆ ನಮ್ಮನ್ನು ಸೆಳೆದಿರುತ್ತದೆ. ದಿಟವಾಗಿ ಹೇಳುವುದಾದರೆ, ನಾವು ಈ ಅಂಕಣಕ್ಕಾಗಿ ಎದುರು ನೋಡುತ್ತಿರುತ್ತೇವೆ. ಸಂಗೀತ ಎಲ್ಲರಿಗೂ ಎಟಕುವ ವಿದ್ಯೆಯಲ್ಲ. ಆದಾಗ್ಯೂ, ಅದರ ವಿವಿಧ ಮಜಲುಗಳನ್ನು ನಮಗೆ ಪರಿಚಯಿಸುತ್ತಿದ್ದಾರೆ. ಇದು ಬರಿ ಕಿವಿಯಲ್ಲಿ ಕೇಳಿ ಆನಂದಿಸುವ ಪರಿಧಿಗೆ ಸೀಮಿತವಿಲ್ಲ ಎಂಬುದು ಅವರ ಬರಹಗಳಿಂದ ಗೋಚರಿಸುತ್ತಿದೆ. ಕೇವಲ ಮನರಂಜನೆಗಾಗಿ ಕೇಳಿ ಮರೆಯುವ ಸ್ವಭಾವ ಇರುವವರೂ ಇವರ ಲೇಖನಗಳನ್ನು ಓದುವುದು ಒಳಿತು. ಆಧ್ಯಾತ್ಮಿಕದಲ್ಲಿ ಅಡಗಿರುವ ಅಮೂರ್ತ ಭಾವನೆಗಳನ್ನು ಹೂವು ಅರಳಿದಂತೆ ದೇಶೀ ಮತ್ತು ಮಾರ್ಗಿ ಎಂಬುದನ್ನು ವಿವರಿಸುವುದು ಅಪ್ಯಾಯವಾಗಿದೆ. ಬರಹಗಾರರಿಗೂ, ನಿಮ್ಮ ಪತ್ರಿಕೆಗೂ ಧನ್ಯವಾದಗಳು.
-ಶೀಲ ಕೃಷ್ಣಮೂರ್ತಿ, ಮೈಸೂರು.