ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆ ಮಹಾಪೂರ ಕೇವಲ ನಲವತ್ತೆಂಟು ಗಂಟೆಗಳ ಗಡುವು ಕೊಟ್ಟಿತ್ತು!

Mainashree
Updated On : 14 Apr 2013, 9:20 am

ನನ್ನ ವೃತ್ತಿ ಜೀವನದಲ್ಲಿ ನನಗೆ ಬೆಳಗಾವಿಗೆ ವರ್ಗಾವಣೆ ಅತ್ಯಂತ ಚಾರಿತ್ರಿಕವೂ ಮತ್ತು ಮಹತ್ವಪೂರ್ಣ ಘಟ್ಟವೂ ಆಗಿದ್ದಿತು. ನಾನು ಅಧಿಕಾರ ಸ್ವೀಕರಿಸಿದ ಒಂದು ತಿಂಗಳೊಳಗೆ ಹಿಂದೆಂದೂ ಕೇಳರಿಯದ ಮಳೆಯ ಪ್ರವಾಹ ಬೆಳಗಾವಿಯನ್ನು ದಂಗುಬಡಿಸಿತ್ತು. 27, 28 ಮತ್ತು 29 ಜುಲೈ, 2005ನೇ ಇಸವಿಯಂದು ಒಂದೇ ಸಮನೆ ಸುರಿದ ಕುಂಭದ್ರೋಣ ಮಳೆಯು ಇಡೀ ವರ್ಷದಲ್ಲೇ ಸುರಿದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿತ್ತು.  ಕೃಷ್ಣಾ ನದಿ ವೇಗವಾಗಿ ಹರಿದು ಎಲ್ಲರನ್ನೂ ತಲ್ಲಣಗೊಳಿಸಿತ್ತು. ನಮ್ಮ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿಯೂ ಸಹ ಇಂತಹ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆದರೆ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ತಿಳಿಸದೆ, ಸಾಂಗ್ಲಿ ಅಣೆಕಟ್ಟೆನಲ್ಲಿ ಕೂಡಿಟ್ಟಿದ್ದ ನೀರೆಲ್ಲವನ್ನು ಹೊರಗೆ ಬಿಟ್ಟು ಬಿಟ್ಟರು. ಸಾಂಗ್ಲಿ ಅಣೆಕಟ್ಟೆಯಿಂದ ಬೆಳಗಾವಿಗೆ ನೀರು ಹರಿದು ಬರಲು ಕೇವಲ ನಲವತ್ತೆಂಟು ಗಂಟೆಗಳು ಸಾಕು. ಹಾಗಾಗಿ ನಮಗೆ ಸಿಕ್ಕಿದ ಕೇವಲ ನಲವತ್ತೆಂಟು ಗಂಟೆಗಳೊಳಗೆ ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಮಳೆ ಸುರಿಯುವುದು ಕಡಮೆಯಾಗಿದ್ದರೂ ಹೆಚ್ಚುತ್ತಿದ್ದ ನೀರಿನ ಮಟ್ಟದ ಅಂತರ ಗಾಬರಿಗೊಳಿಸುತ್ತಿತ್ತು. ಕೃಷ್ಣಾ ನದಿ ದಂಡೆಯ ಎರಡೂ ಕಡೆಗಳಲ್ಲಿದ್ದ ನೂರಾರು ಹಳ್ಳಿಗಳು ನೀರಿನಿಂದ ಮುಚ್ಚಿಹೋಗಿದ್ದವು. ಅತ್ಯಂತ ಜರೂರಾಗಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕಾಯಿತು. ಇಂಥ ವಿಪತ್ತಿನ ಪರಿಸ್ಥಿತಿಗಳಲ್ಲಿ ಯೋಚನೆ ಮಾಡುತ್ತಾ ಕೂರಲು ಸಮಯವಿರುವುದಿಲ್ಲ. ನಾವು ಪಡೆದಿರುವ ತರಬೇತಿ, ಮುಂದಾಳತ್ವವನ್ನು ವಹಿಸಿಕೊಂಡು ನಿರ್ಭಯವಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಗುಣ, ಎಲ್ಲೆಲ್ಲಿ ಸಹಾಯವನ್ನು ಪಡೆಯಬಹುದು ಎನ್ನುವ ಪರಿಜ್ಞಾನ, ಸಂಬಂಧಪಟ್ಟವರೆಲ್ಲರನ್ನೂ ಹುರಿದುಂಬಿಸಿ ಅವರಿಂದ ಅತ್ಯುತ್ತಮ ಸೇವೆಯನ್ನು ಪಡೆಯುವ ಪರಿ, ಎಷ್ಟೇ ಒತ್ತಡವಿದ್ದರೂ ಧೃತಿಗೆಡದೆ ಸಮಚಿತ್ತವನ್ನು ಕಾಪಾಡಿಕೊಂಡು ಮಾಡಬೇಕಾದ ಮುಂದಿರುವ ಕೆಲಸ, ಧೈರ್ಯದಿಂದ ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾದ ನಿರ್ಧಾರ, ಇವೆಲ್ಲವೂ ನಾವು ಮೈಗೂಡಿಸಿಕೊಂಡ ಶಿಕ್ಷಣ, ಆತ್ಮವಿಶ್ವಾಸಗಳನ್ನು ಪರೀಕ್ಷೆಗೆ ಒಡ್ಡುತ್ತವೆ. ತಕ್ಷಣವೇ ಮುಂಬೈಯಲ್ಲಿ ನೌಕಾದಳದ ಮುಖ್ಯಸ್ಥರೊಡನೆ ಮಾತನಾಡಿ ಜನರನ್ನು ರಕ್ಷಿಸಲು ಹೆಲಿಕಾಪ್ಟರ್‌ಗಳನ್ನು ಕಳುಹಿಸಬೇಕೆಂದು ಕೇಳಿಕೊಂಡೆವು. ರಾಜ್ಯ ಸರ್ಕಾರದ ಗೃಹ ಖಾತೆ ಮತ್ತು ಕಂದಾಯ ಖಾತೆ ಪ್ರಧಾನ ಕಾರ್ಯದರ್ಶಿಗಳಾದ ಬ್ರಹ್ಮಂದತ್ತ ಅವರನ್ನು ಸಂಪರ್ಕಿಸಿ ನಮ್ಮ ಪರಿಸ್ಥಿತಿಯನ್ನು ವಿವರಿಸಿ ಎಲ್ಲಾ ರೀತಿಯಲ್ಲೂ ನಮಗೆ ಸಹಾಯ ಹಸ್ತ ನೀಡುವಂತೆ ವಿನಂತಿಸಿಕೊಂಡೆ. ರಾತ್ರೋ ರಾತ್ರಿ ತುರ್ತು ಸಭೆಯನ್ನು ಕರೆದು ಪರಿಸ್ಥಿತಿಯನ್ನು ಎಲ್ಲಾ ಅಧಿಕಾರಿಗಳೊಡನೆ ಚರ್ಚಿಸಿ ಹಲವಾರು ಅಧಿಕಾರಿಗಳ ತಂಡಗಳನ್ನು ಜಾವಾಬ್ದಾರಿಗಳೊಂದಿಗೆ ರಚಿಸಿ ಕಾರ್ಯೋನ್ಮುಖಗೊಳಿಸಲಾಯಿತು.
ನಾನು ಮತ್ತು ಅಧೀಕ್ಷಕ ಆರಕ್ಷಕ ಇಬ್ಬರೂ ಹೆಲಿಕಾಪ್ಟರ್‌ನಲ್ಲಿ ಮೇಲಿನಿಂದ ಪರಿಸ್ಥಿತಿಯನ್ನು ವೀಕ್ಷಿಸಿದಾಗ ಅತೀ ಹೆಚ್ಚಿನ ಭಯಾನಕ ಮಟ್ಟದಲ್ಲಿದ್ದ ನೀರನ್ನು ಕಂಡು, ತಕ್ಷಣವೇ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದೆವು.  ಮೊಟ್ಟಮೊದಲಿಗೆ ಅಪಾಯದ ಅಂಚಿನಲ್ಲಿದ್ದ ಹಳ್ಳಿಯ ಜನರೆಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಎಲ್ಲಾ ವರ್ತಮಾನ ಪತ್ರಿಕೆ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಎಚ್ಚರಿಕೆಯ ಕರೆಗಂಟೆಗಳನ್ನು ಪದೇ ಪದೆ ಮೊಳಗಿಸಲಾಯಿತು. ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಹಳ್ಳಿಯ ಜನರೆಲ್ಲರಿಗೂ ಅಪಾಯದ ಭೀತಿ ಇರುವುದರಿಂದ ತಮ್ಮ ಹಳ್ಳಿಗಳನ್ನು ಬಿಟ್ಟು ಸುರಕ್ಷಿತ ಪರಿಹಾರ ಕ್ಯಾಂಪ್‌ಗಳಿಗೆ ಸ್ಥಳಾಂತರಗೊಳ್ಳಲು ಜನರನ್ನು ಒಪ್ಪಿಸುವಂತೆ ಮನವಿ ಮಾಡಿಕೊಂಡೆ. ಕಾರವಾರ ಮತ್ತು ಮಂಗಳೂರಿನಿಂದ ದೋಣಿಗಳನ್ನು ಕಳುಹಿಸಿಕೊಡಲು ವಿನಂತಿಸಿಕೊಂಡೆ. ಮಿಲಿಟರಿ ಸೇವೆಯನ್ನು ನಮಗೆ ನೀಡಬೇಕೆಂದು ಪ್ರಾರ್ಥಿಸಿಕೊಂಡೆ. ಉತ್ಸಾಹದ ಹವ್ಯಾಸಿ ಈಜುಗಾರರು ಮತ್ತು ನೀರಿನ ಆಳಕ್ಕೆ ಹೋಗುವವರನ್ನು ವಿನಂತಿಸಿಕೊಂಡು ಕಾರ್ಯೋನ್ಮುಖರಾಗುವಂತೆ ಮಾಡಲಾಯಿತು. ಇದೆಲ್ಲಕ್ಕಿಂತ ನೂರಾರು ಹಳ್ಳಿಗಳು ನೀರಿನಲ್ಲಿ ಮುಳುಗಿ ಜನರು ಮತ್ತು ಜಾನುವಾರುಗಳಿಗೆ ಹಾನಿಯಾಗುವ ಸಂಭವ ಇದ್ದಿತು.  ಜಾಮ್‌ದಾರ್ ಅವರು ಕಂದಾಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದರು. ಅವರು ಬೆಳಗಾವಿಯವರೇ ಆಗಿದ್ದರು.  ಹಾಗಾಗಿ ಅವರಿಗೆ ಬೆಳಗಾವಿ ತಮ್ಮ ಅಂಗೈನಂತೆ ಸಮರ್ಪರ್ಪಕವಾಗಿ ತಿಳಿದಿತ್ತು. ಅವರು ನಮಗೆ ಉನ್ನತ ಮಟ್ಟದ ಸಹಕಾರವನ್ನು ನೀಡಿ ಉತ್ತಮವಾದ ಮಾರ್ಗದರ್ಶನವನ್ನು ಮಾಡಿದರು. ಗೋಕುಲ್ ರಾಮ್ ಅವರು ಕೈಗಾರಿಕಾ ಕಾರ್ಯದರ್ಶಿಯಾಗಿದ್ದರು. ಅವರು ಶೆಡ್ಡುಗಳನ್ನು ರಚಿಸಲು ಮುಂಬೈನಿಂದ ಜಿಂಕ್ ಶೀಟುಗಳನ್ನು ಕಳುಹಿಸಿಕೊಟ್ಟರು. ದೇವರ ದಯೆಯಿಂದ ಪ್ರವಾಹ ನಿಂತಿದ್ದ ಪ್ರದೇಶಗಳಲ್ಲಿ ಒಂದೇ ಒಂದೂ ಜೀವಹಾನಿಯಾಗಿರಲಿಲ್ಲ. ಆದರೆ ಖಾನಾಪುರದಲ್ಲಿ ಹೆಚ್ಚು ಮಳೆಯಿಂದಾಗಿ ಐದಾರು ಜನ ಬೇರೆ ಬೇರೆ ಜಾಗದಲ್ಲಿ ಸಾವನ್ನಪ್ಪಿದ್ದರು.
ನಾವು ಅನುಭವಿಸಿದ ಮುಖ್ಯ ತೊಂದರೆ ಏನೆಂದರೆ ಪ್ರವಾಹದ ಭೀತಿಯಲ್ಲಿದ್ದ ಹಳ್ಳಿಯ ಜನರು ತಾವು ಹಳ್ಳಿಯನ್ನು ಬಿಟ್ಟು ಹೋಗುವುದಿಲ್ಲವೆಂದು ಪ್ರತಿಭಟಿಸಿದರು. ಅದಕ್ಕೆ ಮುಖ್ಯವಾದ ಕಾರಣ ತಮ್ಮ ಜೀವನದ ಆಧಾರವಾಗಿರುವ ಹಸು ಮತ್ತು ಎತ್ತುಗಳನ್ನು ಅವರು ಬಿಟ್ಟು ಹೋಗಲು ತಯಾರಿರಲಿಲ್ಲ. ನಾವು ಅವರ ಹಸುಗಳನ್ನು ಎತ್ತರದ ಗುಡ್ಡಬೆಟ್ಟಗಳಿಗೆ ಸಾಗಿಸುತ್ತೇವೆ, ಅವುಗಳ ಪ್ರಾಣಗಳನ್ನು ರಕ್ಷಿಸುತ್ತೇವೆಂದು ಭರವಸೆ ಕೊಟ್ಟ ಮೇಲೆ ಸ್ಥಳಾಂತರಗೊಳ್ಳಲು ಒಪ್ಪಿದರು. ದೋಣಿಗಳು ಮತ್ತು ಟ್ರಕ್ಕುಗಳ ಮುಖಾಂತರ ಜಾನುವಾರುಗಳನ್ನು ಎತ್ತರದ ಗುಡ್ಡ ಮತ್ತು ಬೆಟ್ಟಗಳಿಗೆ ಸ್ಥಳಾಂತರಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ಬೇಡಿಕೆಗಳಿಗೆಲ್ಲ ಉತ್ತಮವಾಗಿ ಸ್ಪಂದಿಸಿತು. ಕ್ಯಾಂಪ್‌ಗಳಲ್ಲಿದ್ದ ಜನರಿಗೆ ಆಹಾರದ ವ್ಯವಸ್ಥೆ, ಮಕ್ಕಳಿಗೆ ಹಾಲು, ಬಟ್ಟೆ ಬರೆಗಳು ಮತ್ತು ಬೆಚ್ಚಗಿರಲು ಕಂಬಳಿಗಳನ್ನು ಕೊಟ್ಟೆವು. ವೈದ್ಯಕೀಯ ಸಿಬ್ಬಂದಿ ಸೇವೆ ನೆರವಿಗಿರುಂತೆ ವ್ಯವಸ್ಥೆ ಮಾಡಲಾಯಿತು. ಸಾಂಕ್ರಾಮಿಕ ರೋಗಕಾರಕ ಕ್ರಿಮಿಗಳನ್ನು ತಡೆಯಲು ಹೊಗೆ ಮತ್ತು ಧೂಪಗಳನ್ನು ಹಾಕಲಾಯಿತು. ಅರಣ್ಯ ಇಲಾಖೆಯಿಂದ ಸೌದೆ ಮತ್ತು ಕಟ್ಟಿಗೆಗಳನ್ನು ವಿತರಿಸಲಾಯಿತು. ಪ್ರತಿಯೊಂದು ಕುಟುಂಬಕ್ಕೂ ಸಾವಿರ ರೂಪಾಯಿಯವರೆಗೆ ಪರಿಹಾರವನ್ನು ನೀಡಲಾಯಿತು. ಸರ್ಕಾರದೊಂದಿಗೆ, ಸ್ವಯಂ ಸೇವಕರ ಸಹಕಾರದೊಂದಿಗೆ, ಯೂನಿಸೆಫ್ ಸಂಸ್ಥೆ ಕೂಡ ಸಹಾಯ ಹಸ್ತವನ್ನು ಚಾಚಿತು. ಯೂನಿಸೆಫ್ ಸಂಸ್ಥೆ ಕುಡಿಯುವ ನೀರಿನ ಬಕೆಟ್‌ಗಳು, ನೀರು ಶೇಖರಿಸಿಟ್ಟುಕೊಳ್ಳಲು ಟ್ಯಾಂಕರುಗಳು, ಬಿಸ್ಕತ್ತುಗಳು ಮತ್ತು ಕಂಬಳಿಗಳನ್ನು ಒದಗಿಸಿದರು. ನಮ್ಮ ನೆರವಿಗೆ ಬಂದ ಪ್ರತಿಯೊಬ್ಬರನ್ನೂ ದಾಖಲಿಸುವ ಮಂಚೂಣಿಯ ಕ್ರಮವನ್ನು ಕೈಗೊಂಡೆವು. ಆಗ ಯಲ್ಲಮ್ಮ ದೇವಸ್ಥಾನದ ಆಡಳಿತಾಧಿಕಾರಿಯ ಜವಾಬ್ದಾರಿಯೂ ಕೂಡ ನನ್ನ ಮೇಲೆ ಇದ್ದಿತ್ತು. ಮಹಿಳೆಯರಿಗೆಲ್ಲಾ ದಾನಿಗಳು ನೀಡಿದ ಹಸಿರು ಸೀರೆಗಳನ್ನು ಕೊಡಲಾಯಿತು. ಹೊಸ ಹಸಿರು ಸೀರೆಗಳನ್ನು ಉಟ್ಟು ಮಹಿಳೆಯರು ಪ್ರವಾಹ ಭೀತಿಯ ಪರಿಶೀಲನೆಗೆ ದಿಲ್ಲಿಯಿಂದ ಬಂದ ಅಧಿಕಾರಿಗಳು ಹಾಗೂ ನೇತಾರರನ್ನು ಭೇಟಿ ಮಾಡಿದರು. ಹಳ್ಳಿಯಲ್ಲಿ ನಡೆಯುತ್ತಿದ್ದ ಉತ್ತಮ ಕಾರ್ಯವನ್ನು ನೇತಾರರು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳ ಮುಖ್ಯಸ್ಥರು ಈ ಪ್ರವಾಹ ಪೀಡಿತ ಜನರ ನೋವುಗಳಿಗೆ ಸಾಂತ್ವನ ನೀಡಿ ಅವರಿಗೆ ಸಲಹೆ ಮತ್ತು ಮಾರ್ಗದರ್ಶನ ಬಹಳ ಅಗತ್ಯವೆಂದು ಮನಗಂಡು ಈ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಿದರು. ಸ್ವಯಂಪ್ರೇರಿತರಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಸಾವಿರಾರು ಜನ ಸ್ವಯಂ ಸೇವಕರು ತಮ್ಮನ್ನು ಪರಿಹಾರ ಸೇವೆಯಲ್ಲಿ ತೊಡಗಿಸಿಕೊಂಡರು. ಆ ಸಂದರ್ಭದಲ್ಲಿ ಹಳ್ಳಿಯ ಮುಖ್ಯ ನಾಯಕರುಗಳಾದ ಹಲವಾರು ಗೌಡರು, ಸ್ವಯಂ ಪ್ರೇರಿತರಾಗಿ ಏಳು ದಿನಗಳ ಕಾಲ ತಮ್ಮ ಮನೆಯಲ್ಲಿ ಅಡುಗೆಗಳನ್ನು ಮಾಡಿಸಿ ಸಾವಿರಾರು ಸ್ಥಳಾಂತರಗೊಂಡ ಹಳ್ಳಿಯ ಜನರಿಗೆ ಉಣಬಡಿಸಿದರು. ಆ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ, ವಾರದ ಏಳು ದಿನಗಳೂ, ನನ್ನೊಂದಿಗೆ ಹಲವಾರು ಜನರು ದುಡಿಯುತ್ತಿದ್ದರು. ನನ್ನ ಪತಿ ರಜನೀಶ್ ಗೋಯಲ್ ಅವರು ರಾತ್ರಿ ಹೊತ್ತು ಬರುತ್ತಿದ್ದ ದೂರವಾಣಿ ಕರೆಗಳನ್ನು ಸ್ವೀಕರಿಸಿ ನನಗೆ ಕೆಲವು ಗಂಟೆಯಾದರೂ ನಿದ್ದೆ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದರು. ಸುಮಾರು ಒಂದು ತಿಂಗಳ ಕಾಲ ಒತ್ತಡದಿಂದಾಗಿ ನಾನು ನನ್ನ ನಲ್ಮೆಯ ಮಗಳು ಮುಸ್ಕಾನ್‌ಳನ್ನು ನೋಡಿಕೊಳ್ಳಲು ಆಗಲಿಲ್ಲ. ಅವಳ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಪತಿ ರಜನೀಶ್ ಗೋಯಲ್ ಅವರೇ ಹೊತ್ತುಕೊಂಡಿದ್ದರು. ನನ್ನ ಮಗಳಿಗೆ ಆ ಸಮಯದಲ್ಲಿ ಅವರೇ ತಂದೆ ಮತ್ತು ತಾಯಿಯೂ ಆಗಿದ್ದರು. ಸಾಮಾನ್ಯವಾಗಿ ಇಂಥಹ ಸಂದರ್ಭಗಳಲ್ಲಿ ನಾವು ನಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡಿದ್ದರೂ ಸಹ ನಂತರದ ದಿನಗಳಲ್ಲಿ ಸಾಕಷ್ಟು ಟೀಕೆಗಳು ಹಲವಾರು ಕಡೆಗಳಿಂದ ಬರುವುದು ಸಹಜ. ಆದರೆ ನಂತರದ ದಿನಗಳಲ್ಲಿ ಸತ್ಯಾಂಶ ಮುಂದೆ ಬಂದಾಗ ಟೀಕೆಗಳನ್ನು ಎದುರಿಸುವುದು ಕಷ್ಟವಾಗುವುದಿಲ್ಲ.
ದೇವರ ದಯೆಯಿಂದ, ಎಲ್ಲರ ಸಹಕಾರದಿಂದ ಪ್ರವಾಹ ಕಡಿಮೆಯಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement