ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಂಗಾರದ ಸುತ್ತ ಜಗತ್ತೇಕೆ ಪರಿಭ್ರಮಿಸುತ್ತಿದೆ ಗೊತ್ತೇ?

Vishwanath S
Updated On : 19 Apr 2013, 12:46 pm

ಚಿನ್ನದ ದರದ ಇಳಿಕೆ ದಿಗ್ಭ್ರಮೆ ಹುಟ್ಟಿಸುತ್ತಿರುವ ಸಂದರ್ಭದಲ್ಲಿ ಅದರ ಕುರಿತ ಭಯ- ವ್ಯಾಮೋಹಗಳ ಆಳವನ್ನು ಸ್ಪರ್ಶಿಸುವ ಲೇಖನವೊಂದನ್ನು ಟೈಮ್ ನಿಯತಕಾಲಿಕ ಪ್ರಕಟಿಸಿದೆ. ಬಂಗಾರದ ಬಹು ಆಯಾಮಗಳನ್ನು ಸವರಿರುವ ಲೇಖನವಿದು.
---
ಇತ್ತೀಚಿನ ಆರ್ಥಿಕ ನೆನಪುಗಳ ಅಂಗಳದಲ್ಲಿ ಅದ್ಭುತವಾಗಿ ಕಾಡಿದ್ದು ಬಂಗಾರದ ಮೌಲ್ಯ ಆಕಾಶಕ್ಕೇರಿದ ರೀತಿ. 2001 ಹಾಗೂ 2011ರ ದಶಕದ ನಡುವಿನಲ್ಲಿ ಔನ್ಸ್‌ಗೆ 256 ಡಾಲರ್‌ಗಳಿದ್ದ ಚಿನ್ನ 1920 ಡಾಲರ್‌ಗಳಿಗೆ ಏರಿತು. ಅಂದರೆ ಸಮಯಕ್ಕೆ ಸರಿಯಾಗಿ ಚಿನ್ನದ ವಹಿವಾಟು ಮಾಡಿದವರಿಗೆ ಶೇಕಡ 650ರ ಭಾರೀ ಫಲ ದೊರೆಯಿತು. ಆದರೆ 2011ರ ನಂತರ ಚಿನ್ನದ ಮಾರುಕಟ್ಟೆ ತಾನು ದುರ್ಬಲವಾಗಿರುವುದರ ಸೂಚನೆ ನೀಡಿತ್ತು. ಇದೀಗ 'ವಾಲ್‌ಸ್ಟ್ರೀಟ್ ಜರ್ನಲ್‌'ನ ವರದಿ ಹೇಳುವಂತೆ- 'ಗೋಲ್ಡ್ ಫ್ಯೂಚರ್‌ನ ಏಪ್ರಿಲ್ ಡೆಲಿವರಿ 140.40 ಡಾಲರ್ ಅಂದರೆ ಶೇ. 9.4ರಷ್ಟು ಕುಸಿದಿದೆ. ಕಳೆದ ಗುರುವಾರದಿಂದ ಶುರುವಾಗಿ ಚಿನ್ನದ ಬೆಲೆ ಔನ್ಸ್‌ಗೆ ಒಟ್ಟಾರೆ 203 ಡಾಲರ್‌ಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಅಮೆರಿಕದಲ್ಲಿ 1974ರಲ್ಲಿ ಫ್ಯೂಚರ್ಸ್ ತನ್ನ ವಹಿವಾಟು ಆರಂಭಿಸಿದಾಗಿನಿಂದ ಕಂಡ ದಾಖಲೆ ಕುಸಿತ ಇದು.'
ಈ ಅಂಕಿಅಂಶಗಳ ಕತೆ ಹಾಗಿರಲಿ. ಆದರೆ ಚಿನ್ನದ ಮೌಲ್ಯ ಆಗಸಕ್ಕೆ ನೆಗೆದಿದ್ದು ಹೇಗೆ? ನಂತರ ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಅದರ ಮೇಲೆ ವಿಶ್ವಾಸ ತಗ್ಗಿಸಿಕೊಂಡಿರುವುದಕ್ಕೆ ಕಾರಣವೇನು?
ಈ ಹಂತದಲ್ಲಿ ನೀವು ಚಿನ್ನದ ಬಗ್ಗೆ ಅಸಡ್ಡೆಯಿಂದಲೇ ಮಾತನಾಡುವ ಜಾಗತಿಕ ಶ್ರೀಮಂತ ವಾರೆನ್ ಬಫೆಟ್ ಮಾತಿಗೆ ಕಿವಿಯಾಗಬೇಕು. ಅವರ ಪ್ರಕಾರ, ಈ ಹಳದಿ ಲೋಹಕ್ಕೆ ತೈಲ ಅಥವಾ ತಾಮ್ರದಂಥ ತುಷ್ಟಿಗುಣವೇ ಇಲ್ಲ. ನಾವದನ್ನು ಆಭರಣ ಹಾಗೂ ಹಲ್ಲಿನ ಕುಳಿ ತುಂಬಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೇವೆ. ಉಳಿದಂತೆ ಅದು ತಟಸ್ಥವಾಗಿ ಬಳಕೆಯಲ್ಲಿರದೇ ಕುಳಿತಿರುತ್ತದೆ. 1998ರಲ್ಲಿ ಬಫೆಟ್ ಪ್ರಸಿದ್ಧ ಮಾತೊಂದನ್ನು ಉದುರುಸಿದ್ದರು: 'ಆಫ್ರಿಕಾದಲ್ಲೋ ಇನ್ಯಾವುದೋ ಪ್ರದೇಶಗಳಲ್ಲೋ ಚಿನ್ನವನ್ನು ಅಗೆಯಲಾಗುತ್ತದೆ. ನಂತರ ನಾವದನ್ನು ಕರಗಿಸಿ, ಇನ್ನೊಂದು ಗುಂಡಿ ಮಾಡಿ ಹೂತಿಡುತ್ತೇವೆ. ಅದನ್ನು ಕಾಯುವುದಕ್ಕೆ ಒಂದಿಷ್ಟು ಮಂದಿ. ಏನಿದೆ ಅದರಲ್ಲಿ ತುಷ್ಟಿಗುಣ? ಮಂಗಳದಿಂದ ಯಾರಾದರೂ ನೋಡುತ್ತಿದ್ದರೆ ನಮ್ಮ ವಿಕ್ಷಿಪ್ತತೆ ಗಮನಿಸಿ ಇದೇನಪ್ಪಾ ಅಂತ ತಲೆಕೆರೆದುಕೊಳ್ಳುತ್ತಿದ್ದರು!'
ಈ ಹೊಳೆವ ಲೋಹದಿಂದ ದೂರ ಇರುವ ಅಭಿಪ್ರಾಯವನ್ನು ಬಫೆಟ್ ಅವರ ವೈಯಕ್ತಿಕ ನೆಲೆಯಲ್ಲಿ ಒಪ್ಪಿಕೊಳ್ಳಬಹುದಾದರೂ ಅವರು ಚಿನ್ನದ ಪ್ರಾಮುಖ್ಯವನ್ನು ಕಡಿಮೆ ಅಂದಾಜು ಮಾಡುತ್ತಿದ್ದಾರೆ ಎನಿಸುವುದು ಸುಳ್ಳಲ್ಲ. ಏಕೆಂದರೆ ಮನುಕುಲದ ಇತಿಹಾಸದಲ್ಲಿ ಬಂಗಾರವು ಪಡೆದುಕೊಂಡಿರುವ ಆಪ್ಯಾಯಮಾನವಾದ ಸ್ಥಾನ ಅಂತಹುದು. 19ನೇ ಶತಮಾನದ ಪ್ರಾರಂಭದಿಂದ 1971ರವರೆಗೂ ಚಿನ್ನವು ಅಂತಾರಾಷ್ಟ್ರೀಯ ಹಣಕಾಸು ನೀತಿಯಲ್ಲಿ ಕೇಂದ್ರಪಾತ್ರವನ್ನು ವಹಿಸಿತ್ತು. ಒಂದು ಮಟ್ಟದ ಚಿನ್ನವನ್ನು ಇರಿಸಿ ಅದಕ್ಕೆ ಅನುಗುಣವಾಗಿ ಕರೆನ್ಸಿ ಮುದ್ರಿಸುವ ಪರಿಪಾಠದ 'ಗೋಲ್ಡ್ ಸ್ಟ್ಯಾಂಡರ್ಡ್‌' ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. 1971ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಈ ಪದ್ಧತಿಗೆ ಇತಿಶ್ರೀ ಹಾಡಿದ ನಂತರ ಜಗತ್ತಿನ ಸರ್ಕಾರಗಳೆಲ್ಲ ತಾವು ಛಾಪಿಸುವ ಕರೆನ್ಸಿಗೆ ಕೇವಲ ನಂಬಿಕೆಯನ್ನಷ್ಟೇ ಆಧಾರವಾಗಿ ಇರಿಸಿಕೊಂಡಿವೆ. ಉದಾಹರಣೆಗೆ ಈ ವ್ಯವಸ್ಥೆಯಲ್ಲಿ ಯಾವುದೇ ದೇಶವು ಹಣವನ್ನು ಮುದ್ರಿಸಿ ಖರ್ಚು ಮಾಡುತ್ತ ಇರಬಹುದು, ಅದರ ಚಿನ್ನದ ಜಮಾವನ್ನು ಡಾಲರ್‌ಗಳ ಮೌಲ್ಯ ಮೀರಿಸುತ್ತಿದೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.
ಹೀಗಾಗಿಯೇ ಈ ಪದ್ಧತಿ ನಾಶವು ಫ್ಲೋಟಿಂಗ್ ಕರೆನ್ಸಿ ಯುಗಕ್ಕೆ ಕರೆದೊಯ್ದಿತು. ಫ್ಲೋಟಿಂಗ್ ಕರೆನ್ಸಿ ಅಂದರೆ ಕರೆನ್ಸಿಯ ಮೌಲ್ಯ ಮುಕ್ತ ಮಾರುಕಟ್ಟೆಯಿಂದ ನಿರ್ಧಾರವಾಗುವಿಕೆ. ಇದೇ ಅಂಶವು ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚು ಹೆಚ್ಚು ಸಾಲ ಮಾಡಿಕೊಂಡಿರುವುದಕ್ಕೆ ದಾರಿಯಾಗಿ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ವಿರಾಟ್ ರೂಪವನ್ನು ಪ್ರದರ್ಶಿಸಿತು. ಈ ಮೊದಲು ಚಿನ್ನದ ದರ ಏರಿದ್ದನ್ನು ಕೂಡ ಈ ಅಂಶಕ್ಕೇ ಬೆಸೆಯಬಹುದಾಗಿದೆ. ಸರ್ಕಾರಗಳು ಸಾಲವನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ ಸಾಮರ್ಥ್ಯ ಉಳಿಸಿಕೊಂಡಿವೆ ಎಂಬ ನಂಬಿಕೆ ಹೂಡಿಕೆದಾರರಲ್ಲಿ ಕರಗತೊಡಗಿತು. ಹೀಗಾಗಿ ಸರ್ಕಾರಗಳ ಕರೆನ್ಸಿ ಮೇಲೆ ವಿಶ್ವಾಸ ಕರಗತೊಡಗಿತು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಕೇಂದ್ರ ಬ್ಯಾಂಕುಗಳೆಲ್ಲ ತಮ್ಮ ಆಯಾತವನ್ನು ಚಿನ್ನದಲ್ಲಿ ಮಾರ್ಪಡಿಸಿ ಡಾಲರ್ ಮೌಲ್ಯ ಕುಸಿಯುತ್ತಿರುವುದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಶ್ರಮಿಸಿವೆ.
ಇದನ್ನೇನೋ ಅರ್ಥ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಚಿನ್ನದ ಮೌಲ್ಯ ಕುಸಿಯುತ್ತಿದೆಯಲ್ಲ, ಇದಕ್ಕೇನು ಕಾರಣ? ಇಂಥ ಮಾರುಕಟ್ಟೆ ತಿದ್ದುಪಡಿಯ ವಿದ್ಯಮಾನಗಳಿಗೆ ಇದಮಿತ್ಥಂ ಎಂದು ಒಂದು ಕಾರಣವನ್ನು ನೀಡುವುದು ಸಾಧ್ಯವಿಲ್ಲ. ಹೀಗಾಗಿ ವಿಶ್ಲೇಷಕರು ಹತ್ತೆಂಟು ಕಾರಣಗಳನ್ನು ಪರಾಮರ್ಶಿಸುತ್ತಿದ್ದಾರೆ. ಸಿಪ್ರಿಯಾಟ್ ಸೆಂಟ್ರಲ್ ಬ್ಯಾಂಕ್‌ಗೆ ತನ್ನ ಆರ್ಥಿಕ ಸಂಕಷ್ಟ ನೀಗಿಸಿಕೊಳ್ಳಲು ಚಿನ್ನವನ್ನು ಮಾರುವುದು ಅನಿವಾರ್ಯವಾಗಿದೆ ಎಂಬುದರಿಂದ ಹಿಡಿದು ಇತ್ತೀಚೆಗೆ ಚೀನಾ ಅರ್ಥವ್ಯವಸ್ಥೆ ದುರ್ಬಲಗೊಂಡಿದೆ ಎಂಬುದರವರೆಗೆ ಚಿನ್ನದ ದರ ಇಳಿದಿರುವುದಕ್ಕೆ ಹಲವಾರು ಕಾರಣಗಳನ್ನು ಕೊಡಲಾಗುತ್ತಿದೆ. ಚಿನ್ನದ ಮೌಲ್ಯ ಇಳಿಕೆಗೆ ನಿರ್ದಿಷ್ಟ ಕಾರಣವನ್ನು ಕೊಡುವುದಕ್ಕೆ ಆಗುತ್ತಿಲ್ಲ ಏಕೆಂದರೆ, ಚಿನ್ನದ ಮೂಲಭೂತ ಮೌಲ್ಯ ಏನು ಎಂಬುದರ ಬಗ್ಗೆಯೇ ಸ್ಪಷ್ಟ ಚಿತ್ರಣವಿಲ್ಲ! ಹೆಚ್ಚಿನ ಆಸ್ತಿಗಳು ಮೌಲ್ಯಮಾಪನಕ್ಕೆ ಒಳಗಾಗುವುದು ಭವಿಷ್ಯದಲ್ಲಿ ಅದು ಎಷ್ಟು ಆದಾಯವನ್ನು ತರಬಹುದು ಎಂಬ ಆಧಾರದಲ್ಲಿ. ಆದರೆ ಬಂಗಾರಕ್ಕೆ ಅದರದ್ದೇ ಆದ ಮೌಲ್ಯ ಇಲ್ಲ. ಅಂದರೆ ಚಿನ್ನಕ್ಕೇಕೆ ಅಷ್ಟು ವಿಶೇಷ ಸ್ಥಾನಮಾನ ಎಂದರೆ, ಅದು ವಿಶೇಷ ಎಂದು ಜನ ಮೌಲ್ಯ ನೀಡಿದ್ದಾರೆ ಎಂಬ ಕಾರಣಕ್ಕೆ ಮಾತ್ರ.
ಹಣದುಬ್ಬರವನ್ನು ಹಿಮ್ಮೆಟ್ಟಿಸುವುದಕ್ಕೆ ಚಿನ್ನ ಉತ್ತಮ ದಾರಿ ಎಂಬುದು ನಂಬುಗೆ. ವಾಸ್ತವದಲ್ಲಿ ಚಿನ್ನ ಎಂಬುದು ವಿಪತ್ತನ್ನು ಎದುರಿಸುವ ಆಪದ್ಧನ. ಸಾಗಣೆಯ ವಿಷಯದಲ್ಲೂ ಸುಲಭ ಎನ್ನಿಸುವಂಥದ್ದು ಚಿನ್ನ. ರಾಜಕೀಯ ಪರಿಸ್ಥಿತಿಗಳು ಹೇಗೆಯೇ ಬದಲಾದರೂ ಚಿನ್ನಕ್ಕೆ ಮೌಲ್ಯವಿದ್ದೇ ಇರುವುದು.
ಇತಿಹಾಸವನ್ನು ಓದಿದವರಿಗೆ ಬದಲಾವಣೆಗಳ ಹಾಗೂ ಸಂಘರ್ಷಗಳ ಅರಿವಿರುತ್ತದೆ. ಆದರೆ ಅಂಥ ಎಲ್ಲ ಸಂಘರ್ಷಗಳಲ್ಲೂ ಮೌಲ್ಯ ಉಳಿಸಿಕೊಂಡುಬಂದ ಒಂದು ಪದಾರ್ಥವೆಂದರೆ ಚಿನ್ನ. ನೋಟು ಪ್ರಿಂಟು ಹಾಕಿಸುವ ಸಾಮ್ರಾಜ್ಯ ತನ್ನ ನಾಲ್ಕನೇ ದಶಕದಲ್ಲಿದೆ. ಈ ವ್ಯವಸ್ಥೆ ಇನ್ನೆಷ್ಟು ದಿನ ಮುಂದುವರೆದೀತು ಎಂಬುದು ಬಂಗಾರದ ಪ್ರೇಮಿಗಳು ಕೇಳುವ ಪ್ರಶ್ನೆ. ಗೋಲ್ಡ್ ಸ್ಟ್ಯಾಂಡರ್ಡ್ ಕೊನೆಗೊಳಿಸಿದ್ದರಿಂದ ಬರ್ಖಾಸ್ತುಗೊಂಡ ಬ್ರೆಟನ್‌ವುಡ್ ಹಣಕಾಸು ಮಾದರಿ ಆಯಸ್ಸು 30 ವರ್ಷಗಳಾಗಿದ್ದವು ಅಷ್ಟೆ. ಈ ಗೋಲ್ಡ್‌ಸ್ಟಾಂಡರ್ಡ್ ಯುಗಕ್ಕೂ (1871-1913) ಒಂದು ಆಯಸ್ಸಿತ್ತು. ಹೀಗಾಗಿ ಬದಲಾವಣೆ ಘಟಿಸುತ್ತದೆ ಎಂಬುದು ನಮಗೆ ಇತಿಹಾಸ ಹೇಳುವ ಪಾಠ. ಈಗಿರುವ ಹಣಕಾಸು ವ್ಯವಸ್ಥೆಯೂ ಬದಲಾವಣೆಗೆ ಒಳಪಡುವುದು ಶತಃಸಿದ್ಧ. ಆ ಬದಲಾವಣೆ ಹೇಗಿರಲಿದೆ ಎಂಬುದಷ್ಟೇ ರಹಸ್ಯ.
ಇದೇ ಕಾರಣಕ್ಕೆ ಬಂಗಾರದಲ್ಲಿ ಹೂಡಿಕೆ ಮಾಡುವುದು ಬುದ್ಧಿವಂತಿಕೆ ಎನ್ನಿಸಿಕೊಂಡಿದೆ. ಆದರೆ ಇಲ್ಲೂ ಒಂದು ಸಂದಿಗ್ಧ ಇದ್ದೇ ಇದೆ. ಜಾಗತಿಕ ಕಾಂಚಾಣ ಲೋಕದಲ್ಲಿ ಡಾಲರ್‌ನ ನರ್ತನ ಇನ್ನೆಷ್ಟು ದಿನ ಪ್ರಸ್ತುತವಾದೀತು ಅಥವಾ ಸರ್ಕಾರದ ಸಾಲ ತಾಳಿಕೊಳ್ಳುವ ಸಾಮರ್ಥ್ಯ ಎಷ್ಟು ಕಾಲ ಇದ್ದೀತು ಎಂಬ ಪ್ರಶ್ನೆಗಳೆಲ್ಲ ಪ್ರಸ್ತುತವೇ. ಆದರೆ ಇವೆಲ್ಲದಕ್ಕೂ ಬಂಗಾರವೇ ಪರ್ಯಾಯವಾದೀತು ಎಂದು ಹೇಗೆ ಹೇಳುವುದು? ಸರ್ಕಾರಗಳು ಅತಿಯಾಗಿ ಖರ್ಚು ಮಾಡುವುದರಿಂದ ಹಣದುಬ್ಬರ ಏರುತ್ತದೆ ಅಷ್ಟೆ. ಆದರೆ ಏರಿದ ಹಣದುಬ್ಬರವು ಸರ್ಕಾರಗಳನ್ನೇ ಅಪ್ರಸ್ತುತವಾಗಿಸುತ್ತದೆ ಅಥವಾ ಈಗಿನ ಹಣಕಾಸು ವ್ಯವಸ್ಥೆಯನ್ನೇ ಅಡಿಮೇಲಾಗಿಸುತ್ತದೆ ಎನ್ನುವಂತಿಲ್ಲ. ಹಣದುಬ್ಬರವೇ ನಿಮ್ಮ ಪ್ರಮುಖ ಚಿಂತೆ ಎಂದಾದರೆ ಅದಕ್ಕೆ ಚಿನ್ನವಲ್ಲದೇ ಬೇರೆ ಮೌಲ್ಯಯುತ ಪದಾರ್ಥಗಳು ಉತ್ತರವಾಗಬಲ್ಲವು. ಚಿನ್ನಕ್ಕೆ ಅದರದ್ದೇ ಆದ ವ್ಯಾಖ್ಯಾನಿತ ಮೌಲ್ಯ ಇಲ್ಲದಿರುವುದೇ ಇಷ್ಟೆಲ್ಲ ಅಲ್ಲೋಲಕಲ್ಲೋಲಗಳಿಗೆ ಕಾರಣ. ಹೀಗಾಗಿ ಸರ್ಕಾರದ ಕರೆನ್ಸಿ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರು, ಹಣದುಬ್ಬರ ಎದುರಿಸಬೇಕೆನ್ನುವವರು ಅದೇ ಕಾರಣಕ್ಕೆ ಚಿನ್ನದ ಸೆಳೆತಕ್ಕೆ ಬಿದ್ದಾಗ ಇದರ ಬೆಲೆಯಲ್ಲಾಗುವ ಕುಸಿತ ಅಂತಃಸತ್ವವನ್ನೇ ಅಲ್ಲಾಡಿಸುತ್ತದೆ. ಅಂಥ ತೀವ್ರತೆ ಇರುವವರು ಚಿನ್ನದ ವ್ಯಾಮೋಹದಿಂದ ಹೊರಬಂದು ಹಣದುಬ್ಬರ ಎದುರಿಸುವುದಕ್ಕೆ ನಿರೀಕ್ಷಿತ ಫಲವನ್ನೇ ನೀಡಬಹುದಾದ ಮೂಲ ಹುಡುಕಿಕೊಳ್ಳುವುದೊಳಿತು.
ಒಂದಂತೂ ಖರೆ. ನಿನ್ನೆ-ಮೊನ್ನೆಯ ಚಿನ್ನದ ಮೌಲ್ಯ ಕುಸಿತದಿಂದ ಅದರ ಹೊಳಪೇ ಮಾಯವಾಗಿದೆ ಎಂಬ ನಿರ್ಧಾರಕ್ಕಂತೂ ಬರುವ ಅಗತ್ಯವಿಲ್ಲ. ಸಾಂಪ್ರದಾಯಿಕ ಕರೆನ್ಸಿ ಪದ್ಧತಿಗೆ ಪರ್ಯಾಯವಾಗಿ ಬಿಟ್‌ಕಾಯಿನ್ ಎಂಬ ಭೌತಿಕ ಅಸ್ತಿತ್ವರಹಿತವಾದ ಕರೆನ್ಸಿ ಜಾರಿಗೆ ತರುವ ಪ್ರಯತ್ನಗಳಾಗಿವೆ. ಅದೇನೂ ಫಲಪ್ರದವಾಗಿಲ್ಲ. ಯಾರಿಗೆ ಗೊತ್ತು, ಈ ಒಟ್ಟಾರೆ ಮಂಥನದಲ್ಲಿ ಚಿನ್ನವೆಂಬ ಜಗತ್ತಿನ ಅತಿ ಹಳೆಯ ಕರೆನ್ಸಿ ಮತ್ತೆ ಪ್ರವರ್ಧಮಾನಕ್ಕೆ ಬಂದು ಇನ್ನೊಮ್ಮೆ ಐತಿಹಾಸಿಕ ಪಾತ್ರ ನಿಭಾಯಿಸುವ ಅವಕಾಶವೂ ಇದ್ದಿರಬಹುದು.

- ಕ್ರಿಸ್ಟಫರ್ ಮ್ಯಾಥ್ಯೂ, 'ಟೈಮ್ ಬಿಸಿನೆಸ್‌' ವರದಿಗಾರ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement