ಅಂಕಣಗಳು

ಕಾಲವನ್ನೂ ಮರೆಮಾಚುವ ಡಾ. ರಾಜ್ ನೆನಪು

ಇಂದು ಅಣ್ಣಾವ್ರ ಜನ್ಮದಿನ. ಅವರು ನಮ್ಮನ್ನು ಭೌತಿಕವಾಗಿ ಅಗಲಿ ಏಳು ವರ್ಷಗಳು ಸಂದಿವೆ.

ಕನ್ನಡಕ್ಕೊಬ್ಬನೇ ಕೈಲಾಸಂ, ಕನ್ನಡಕ್ಕೊಬ್ಬರೇ ರಾಜ್‌ಕುಮಾರ್, ಕನ್ನಡಕ್ಕೊಂದೇ ಇರುವುದು ವಿವಿಧ ಭಾರತಿ. ಇದು ನಮ್ಮ ಆಕಾಶವಾಣಿ ವಿವಿಧ ಭಾರತಿ ನಿಲಯದಿಂದ ದಿನನಿತ್ಯ ಪ್ರಚಾರ ಮಾಡುತ್ತಿರುವ ಘೋಷವಾಕ್ಯ. ಹೌದು ಕೈಲಾಸಂ ನಾಟಕಗಳ ವಿಡಂಬನೆ, ರಾಜ್‌ಕುಮಾರ್ ಚಿತ್ರಗಳ ಸಂದೇಶ ಈ ನಾಡಿನ ಸಂಸ್ಕೃತಿಯನ್ನು ಸಮಾಜವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದನ್ನು ಯಾರೊಬ್ಬರೂ ಮರೆಯುವಂತಿಲ್ಲ. ಮಾಧ್ಯಮದ ಗುಂಪಿನಲ್ಲಿ ಆಕಾಶವಾಣಿ ವಿವಿಧ ಭಾರತಿಯು ದಶಕಗಳಿಂದ ಹೊತ್ತು ತಂದ ಗುರುತರ ಹೊಣೆಯನ್ನು ಹೀಗೆ ಚರಿತ್ರಾರ್ಹ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದು ಉಲ್ಲೇಖನಾರ್ಹವೂ ಹೌದು.
ಕನ್ನಡ-ಕನ್ನಡಿಗ-ಕನ್ನಡನಾಡು ಈ ಮೂರರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ವಿವಿಧ ಕ್ಷೇತ್ರಗಳ ಬಹುಮಾನ್ಯ ಕನ್ನಡದ ಸಾಧಕರು ಇಡೀ ನಾಡೇ ಏಕೆ? ದೇಶ ವಿದೇಶಗಳ ಗಡಿಯನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿ ಕನ್ನಡಿಗರು ಧನ್ಯರಾಗುವಂತೆ ಮಾಡಿದ್ದಾರೆ.
ಆದರೆ ಸರ್ವಕ್ಷೇತ್ರಗಳಿಂದಲೂ ಮಾನ್ಯರಾಗಿ ಕನ್ನಡಿಗರ ಭಾವನೆಗಳ ದನಿಯಾಗಿ, ಸಾಂಸ್ಕೃತಿಕ ಪ್ರತಿನಿಧಿಯಾಗಿ, ಪರಂಪರೆಯ ರಾಯಭಾರಿಯಾಗಿ ಯಶಸ್ವಿ ಕಾರ್ಯನಿರ್ವಹಿಸಿದ ಸಮರ್ಥ ನಾಯಕನ ಪಟ್ಟವನ್ನು ಕನ್ನಡಿಗರು ಯಾರಿಗಾದರೂ ನೀಡಿದ್ದರೆ ಅದು ಖಡಾಖಂಡಿತವಾಗಿ ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ರವರಿಗೆ ಮಾತ್ರ. ಇದು ನಿತ್ಯ ಸತ್ಯದ ಮಾತು.
ಡಾ. ರಾಜ್ ನಮ್ಮನ್ನು ಭೌತಿಕವಾಗಿ ಅಗಲಿ ಏಳು ವರ್ಷಗಳು ಸಂದಿವೆ. ಅವರ ಸ್ಥಾನವನ್ನು ತುಂಬಬಲ್ಲ ಪರಿಪೂರ್ಣನಾದ ಮತ್ತೊಬ್ಬ ರಾಜ್‌ಕುಮಾರ್ ಇದುವರೆಗೆ ಕನ್ನಡಿಗರಿಗೆ ದೊರೆತಿಲ್ಲವೆಂದರೆ ರಾಜ್‌ಕುಮಾರ್ ತುಂಬಿದ್ದ ಆ ಶ್ರೇಷ್ಠ ಸ್ಥಾನದ ಮಹತ್ವ ಮತ್ತು ಅವರು ಬಿಟ್ಟು ಹೋಗಿರುವ ಸ್ಥಾನವನ್ನು ತುಂಬಬಲ್ಲವರ ಬಹುದೊಡ್ಡ ಕೊರತೆಯ ಚಿತ್ರಣ ನಮಗೆ ಸ್ಪಷ್ಟವಾಗುತ್ತದೆ.  ರಾಜ್ ಕನ್ನಡವನ್ನು ಕೆರಳಿಸುವುದರ ಮೂಲಕ ಬೆಳೆಸುವುದರಲ್ಲಿ ಆಸಕ್ತರಾಗಿರಲಿಲ್ಲ. ಅದನ್ನವರು ಪ್ರೀತಿಯಿಂದ ಅರಳಿಸುವುದರ ಮೂಲಕ ಸಾಧ್ಯ ಎಂಬುದನ್ನು ಕೃತಿಯ ಮೂಲಕ ಸಾರಿದವರು. ತಾವೇ ದೃಷ್ಟಾಂತವಾಗಿ ನಿಂತರು. ಅವರ ಮೊದಲ ಗುರುವಾರ ತಂದೆ ಪುಟ್ಟಸ್ವಾಮಯ್ಯನವರು ನಾಟಕದ ದಿನಗಳಲ್ಲಿ ಕನ್ನಡವನ್ನು ಕೇವಲ ನಾಲಿಗೆಯಿಂದಲ್ಲ ನಾಭಿಯಿಂದ ಉಚ್ಚರಿಸಬೇಕು. ಇಲ್ಲದಿದ್ದರೆ ನಾಲಿಗೆ ಸ್ವಚ್ಛವಾಗಿ ಹೊರಳದು ಎಂದಿದ್ದರು. ರಾಜ್ ಅಂದಿನಿಂದಲೇ ಕನ್ನಡವನ್ನು ಕರುಳ ಬಳ್ಳಿಯಂತೆ ತಿಳಿದರು.ಕನ್ನಡವನ್ನು ಸುಸ್ಪಷ್ಟವಾಗಿ ಮಾತನಾಡುವುದನ್ನು ಕಲಿತರು. ಅದೂ ಸುಶಿಕ್ಷಿತರೂ ನಾಚುವಂತೆ, ಕವಿಗಳು ಹೇಳುವಂತೆ ಕನ್ನಡವನ್ನು ಸುಲಿದ ಬಾಳೆಯ ಹಣ್ಣಿನಂತೆ ನುಡಿದು ಅದರ ಸವಿಯನ್ನು ಕೇಳುವವರಿಗೆ ಹಂಚಿದರು.
ಡಾ. ರಾಜ್ ಸಿನಿಮಾಗಳಲ್ಲಿ ಉತ್ತಮವಾದ ಸಂದೇಶಗಳೊಂದಿಗೆ, ಸಂಬಂಧಗಳನ್ನು ಕಟ್ಟುವ ಮೌಲ್ಯಗಳೊಂದಿಗೆ ಸರಳ ಸಜ್ಜನಿಕೆಯ ಕನ್ನಡವೂ ಇತ್ತು. ಇವುಗಳನ್ನು ಕನ್ನಡಿಗರು ಮನಸಾರೆ ಸ್ವೀಕರಿಸಿದರು ಎಂಬುದಕ್ಕೆ ಯಶಸ್ಸಿನ ಶಿಖರವನ್ನು ತಲುಪಿದ ಡಾ. ರಾಜ್ ಸಿನಿಮಾಗಳೇ ಸಾಕ್ಷಿ.
ಡಾ. ರಾಜ್ ನಡೆದು ಬಂದ ಹಾದಿ ಹೂವಿನ ಹಾಸೇನೂ ಆಗಿರಲಿಲ್ಲ. ಅಗಾಧವಾದ ಕಲ್ಲು ಮುಳ್ಳುಗಳ ನಡುವೆಯೇ ಸ್ಥಿತಪ್ರಜ್ಞರಾಗಿ ಕಲಾ ಸೇವೆಯಲ್ಲಿ ಮಗ್ನರಾಗಿ ಮುನ್ನಡೆದರು. ಅದುವೇ ರಾಜ್ ಮಾರ್ಗವಾಯಿತು. ರಾಜ್ ಮುಗಿಲೆತ್ತರ ಬೆಳೆದು ನಿಲ್ಲುವ ಮುನ್ನ ಕೆಳಗೆ ಬಿದ್ದಾಗ ಅವರು ಪುಟಿದು ಎಷ್ಟು ಬಾರಿ ಸ್ವಪ್ರಯತ್ನದಿಂದ ಮೇಲೆದ್ದರೆಂಬುದನ್ನು ಸಹ ಅವರ ಯಶಸ್ಸಿನಲ್ಲಿ ಅಳೆಯಬೇಕು. ಅವರನ್ನು ಅರಸಿ ಬಂದ ಪಾತ್ರಗಳು ಮತ್ತೊಬ್ಬರ ಪಾಲಾದಾಗ ಡಾ. ರಾಜ್ ಶಾಂತಚಿತ್ತರಾಗಿ ಹೇಳಿದ್ದೇನೆಂದರೆ, ಪ್ರತಿ ಅಗುಳಿನ ಮೇಲೆ ತಿನ್ನುವವನ ಹೆಸರಿರುವಂತೆ ಪ್ರತಿಯೊಂದು ಪಾತ್ರದ ಮೇಲೂ ಕಲಾವಿದನ ಹೆಸರಿರುತ್ತದೆ. ನನ್ನ ಪಾಲಿಗೆ ಬಂದದ್ದು ಪಂಚಾಮೃತ.
 ರಾಜ್ ಭಕ್ತಿ ಪಾತ್ರಗಳಿಗಷ್ಟೇ ಮೀಸಲು ಎಂದವರ ನಡುವೆ ರಾಜ್ಯ ಸರ್ಕಾರ ಮೊದಲ ಪ್ರಶಸ್ತಿಗಳನ್ನು ಘೋಷಣೆ ಮಾಡಿದಾಗ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು ರಾಜ್‌ಕುಮಾರ್; ಅದೂ ಸಾಮಾಜಿಕ ಬಂಗಾರದ ಹೂವು ಚಿತ್ರಕ್ಕಾಗಿ. ಗುರು ರಾಘವೇಂದ್ರರ ಪಾತ್ರ ಬ್ರಾಹ್ಮಣೇತರರಾದ ರಾಜ್ ಮಾಡುವರೆಂದಾಗ, ಗುರುರಾಯರ ಅನುಗ್ರಹ ರಾಜ್‌ರಿಗೆ ಒಲಿದು ಅವರು ಪಾತ್ರ ನಿರ್ವಹಿಸಿದಾಗ ಅವರನ್ನು ಟೀಕಿಸಿದವರೇ ಸ್ವಯಂ ರಾಘವೇಂದ್ರಸ್ವಾಮಿಗಳನ್ನು ಕಂಡಂತಾಯಿತು ಎಂದರು. ಚಿತ್ರೀಕರಣದಲ್ಲಿ ನಡೆದ ಹಲವಾರು ಅವಘಡಗಳಿಗಾಗಿ ಯಾರನ್ನೂ ದೂಷಿಸದೇ ನೋವನ್ನು ನುಂಗಿಕೊಂಡರು. ವರ್ಣ ಮತ್ತು ವರ್ಗಗಳ ಅಂತರವನ್ನು ಸೃಷ್ಟಿಸಿ ಹಲವು ಪರ್ಯಾಯ ಪಾತ್ರಗಳು ನಡೆಯುತ್ತಾ ಬಂತಾದರೂ ರಾಜ್ ಅಂಥ ವ್ಯವಸ್ಥೆಗಳ ಬಗ್ಗೆ ನಿರ್ಲಿಪ್ತರಾಗಿದ್ದರು. ವಿಶೇಷವೆಂದರೆ ನಟ ಸಾರ್ವಭೌಮ ರಾಜ್‌ರೊಂದಿಗೆ ಕೊನೆಯವರೆಗೂ ಸಾಹಿತ್ಯ ಸೌರ್ವಭೌಮರಾಗಿದ್ದು ರಾಜ್ ಚಿತ್ರಗಳ ಯಶಸ್ಸಿಗೆ ದುಡಿದ ಆಪ್ತ ಗೆಳೆಯ ಚಿ. ಉದಯಶಂಕರ್ ಅಪ್ಪಟ ಸಂಪ್ರದಾಯವಾದಿಗಳಾಗಿದ್ದರು. ಪಿ.ಬಿ. ಶ್ರೀನಿವಾಸ್ ಅವರೇ ಸ್ವಯಂ ಹೇಳಿಕೆ ನೀಡಿ ರಾಜ್ ಸ್ವತಃ ನಾಯಕರಾಗಿದ್ದುಕೊಂಡು ಎರಡು ದಶಕಗಳ ಕಾಲ ತಮಗೆ ಹಾಡುವ ಅವಕಾಶ ನೀಡಿದ ಹೃದಯವಂತ ಎಂದಾಗ ಟೀಕಾಕಾರರು ಸುಮ್ಮನಾದರು. ರಾಜ್‌ರ ಕಾಲ್‌ಶೀಟ್‌ಗಳ ದುರುಪಯೋಗ ನಿರ್ಮಾಣಗಳ ಏರುಪೇರಿನಿಂದ ದಿಕ್ಕು ತಪ್ಪುತ್ತಿರುವ ಸನ್ನಿವೇಶದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ರವರ ಮುತ್ಸದ್ಧಿತನದಿಂದ  ಸ್ವತಂತ್ರ ನಿರ್ಮಾಣ ಹಂಚಿಕೆ ಕಛೇರಿಗಳನ್ನು ತೆರೆದು ಗೆದ್ದರಲ್ಲದೆ ರಾಜ್‌ರ ಪ್ರಚಂಡ ಜನಪ್ರಿಯತೆಗೆ ಭದ್ರವಾದ ರಕ್ಷಾ ಕೋಟೆಯನ್ನು ಕಟ್ಟಿದರು. ಡಾ. ರಾಜ್‌ಕುಮಾರ್‌ರವರು ದಾದಾಸಾಹೇಬ್ ಫಾಲ್ಕೆ ಪುರಸ್ಕೃತರಾಗಿ ಅಖಿಲ ಭಾರತ ಮಟ್ಟದಲ್ಲಿ ವಿರಾಜಮಾನರಾಗಲು ಪಾರ್ವತಮ್ಮನವರ ಕೊಡುಗೆ ಅಪಾರವಾದುದು.
ರಾಜ್ ಜೀವನಕ್ಕೆ ಧನ್ಯತೆಯನ್ನು ನೀಡಿದ್ದು ಯೋಗ ಮತ್ತು ಅಧ್ಯಾತ್ಮ. ಆಕಸ್ಮಿಕವಾಗಿ ಯೋಗಾಭ್ಯಾಸ ಆರಂಭ ಮಾಡಿದ ರಾಜ್‌ರಿಂದ ನಾಡಿನ ಜನತೆಗೆ ಅದರಲ್ಲಿಯೂ ಯುವಜನತೆಯ ಪಾಲಿಗೆ ಒಂದು ವರದಾನವೇ ಅಯಿತು. ಇನ್ನು ಅಧ್ಯಾತ್ಮಿಕ ಸಾಮಾಜಿಕ ಜೀವನದಲ್ಲಿ ಎಲ್ಲರೊಡನಿದ್ದು ಇಲ್ಲದಂತಾಗುವ ಸ್ಥಿತಿಯನ್ನು ಅಂದರೆ ಸಂತನ ಛಾಯೆಯನ್ನು ಪಡೆದುಕೊಂಡ ರಾಜ್, ಅವಕಾಶವಾದಾಗಲೆಲ್ಲ ಅದನ್ನು ರಸವತ್ತಾಗಿ ಹಂಚಿದರು. ಜನಪ್ರಿಯ ವ್ಯಕ್ತಿಯ ಶೃಂಗದಲ್ಲಿರಬೇಕಾದ ರೀತಿಗೆ ರೂಪಕವಾಗಿ ಕಾಣಿಸಿದರು. ಅಧ್ಯಾತ್ಮ ಚಿಂತನೆ ಪ್ರಾರಂಭವಾಗುವಂತಹುದಲ್ಲ. ಎಲ್ಲರಲ್ಲೂ ಇರುವಂಥಹುದು. ಯಾವುದೇ ಸಮಯದಲ್ಲಿ ಹಾವು ಹೆಡೆ ಎತ್ತಿದಂತೆ ಇದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂದೇ ರಾಜ್ ನಂಬಿದ್ದರು.
ರಾಜ್ ಬದುಕಿನ ಕರಾಳ ಅಧ್ಯಾಯ ವೀರಪ್ಪನ್‌ನಿಂದ ಅಪಹರಣ. ಆದರೆ ರಾಜ್ ಆ ಪ್ರಸಂಗವನ್ನು ಅನುಭವಿಸಿದ ರೀತಿ ಅವರೇ ಹೇಳುವಂತೆ ನನ್ನ ಬಾಳಿನಲ್ಲಿ ನಾನು ಎಲ್ಲಾ ರೀತಿಯ ಅನುಭವಗಳನ್ನು ಪಡೆದಾಗಿದೆ. ಅದರಲ್ಲಿ ಈ ಅರಣ್ಯವಾಸವೂ ಒಂದು. ದಟ್ಟ ಅರಣ್ಯದಲ್ಲಿ ನೀರವತೆಯಲ್ಲಿ ಒಂಟಿಯಾಗಿ ಮಲಗಿದ್ರೆ ನನಗೆ ನನ್ನ ತಾಯಿ ತಂದೆಯದೇ ನೆನಪಾಗುತ್ತಿತ್ತು. ಅಪ್ಪಾಜಿ ಪಕ್ಕದಲ್ಲೇ ಇದ್ದಾರೇನೋ ಅನಿಸುತ್ತಿತ್ತು. ರಾತ್ರಿ ಇಡೀ ನಿದ್ದೆ ಇಲ್ಲದೆ ಆಕಾಶದಲ್ಲಿ ನಕ್ಷತ್ರಗಳ್ನು ನೋಡುತ್ತಾ ಕೂತಿರುತ್ತಿದ್ದೆ. ಆಕಾಶದ ತುಂಬಾ ನನ್ನ ತಾಯಿ ಹಣೆಯಲ್ಲಿ ದೊಡ್ಡ ಕುಂಕುಮ ಇಟ್ಟುಕೊಂಡು ಇದ್ದಂತೆ, ನನ್ನ ಬಗ್ಗೇನೆ ನಾನು ಯೋಚನೆ ಮಾಡ್ತಿದ್ದೆ. ಕನ್ನಡಿಯಲ್ಲಿ ನಾವು ಕಣ್ಣು, ಮೂಗು, ಮುಖ ಮುಂತಾದ ಹೊರಗಿನದನ್ನೆಲ್ಲಾ ನೋಡಿಕೊಳ್ಳುತ್ತೇವೆ. ಆದರೆ ನಮ್ಮ ಒಳಗಿರೋದನ್ನ ನೋಡಿಕೊಳ್ಳೋದು ಯಾವಾಗ? ನಮ್ಮೊಳಗೆ ಎಷ್ಟೆಷ್ಟು ಹುಳುಕಿದೆ. ಎಷ್ಟೆಷ್ಟು ತಾಪತ್ರಯ ಇದೆ ಅಂತ ನೋಡಿಕೊಳ್ಳೋ ಅವಕಾಶ ಸಿಕ್ತು. ಅದೇ ಧ್ಯಾನ ಅದು ಒಂದು ರೀತಿ ಒಳಗನ್ನಡಿ ಇದ್ದ ಹಾಗೆ ಶೋಧನೆ.
ಎಂತಹ ಸ್ವಯಂ ಹೃದಯ ಸಂವೇದನೆ; ಬಹುಶಃ ರಾಜ್ ಪ್ರತಿಯೊಬ್ಬ ಕನ್ನಡಿಗನಿಗೆ ನೀಡಿರುವ ಆತ್ಮ ಶೋಧನೆಯ ಮಾರ್ಗವೇ ಆಗಿದೆ ಎನಿಸುತ್ತದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗ ಧ್ವನಿಸಬೇಕಾದ ಆತ್ಮಶಕ್ತಿಗೆ ಇದು ಪೂರಕ ಬಲವೂ ಆದೀತು.
ರಾಜ್ ಮೊದಲಿನಿಂದಲೂ ಸಂಗೀತ ಪ್ರಿಯರು. ಸದಾ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಬಿನ್ನಹಕೆ ಬಾಯಿಲ್ಲವಯ್ಯ... ದೀನ ನಾನು... ಬದುಕಿದೆನು ಭವ ಎನಗೆ ಇಂಗಿತು... ಇತ್ಯಾದಿ ಗೀತೆಗಳನ್ನೇ ಆರಿಸಿಕೊಂಡು ಹಾಡುತ್ತಿದ್ದರು. ಪಾರ್ವತಮ್ಮನವರೇ ಖುದ್ದಾಗಿ ಒಮ್ಮೆ ನೀವ್ಯಾಕೆ ಹೀಗೆ ಸದಾ ನೊಂದು ಅಧೀನರಾಗಿ ಹಾಡು ಹೇಳ್ತೀರಿ? ಏನು ಕೊರಗು? ನನ್ನ ಮನಸ್ಸಿಗೆ ವ್ಯಥೆಯಾಗುತ್ತದೆ. ಆ ದೈನ್ಯ ನಾನು ಸಹಿಸಲಾರೆ ಅಂದು ಬಿಟ್ಟರು.
  ಆಗ ರಾಜ್- "ಪಾರ್ವತೀ, ನಾನೇ ನನ್ನೊಳಗಿನ ಅಪರಾಧಗಳಿಗೆ ದೀನನಾಗಿ ಬೇಡುತ್ತೇನೆ. ಅದು ಪ್ರಾಯಶ್ಚಿತ್ತದ ಹಾಗೆ. ಮನುಷ್ಯನಿಗೆ ಆ ಭಾವನೆ ಮುಖ್ಯ" ಎಂದರು. ರಾಜ್ ಹೇಳುವ ಅನ್ನ ಮದ, ಅರ್ಥ ಮದ, ಅಖಿಲ ವೈಭವದ ಮದ, ಇಷ್ಟು ಬೇಕೆಂಬಾಸೆ, ಮತ್ತರಷ್ಟಾಸೆ... ಮೊದಲಾದ ಸಾಲುಗಳು ಪ್ರತಿ ಹೆಜ್ಜೆಗೂ ಅಡ್ಡ ನಿಂತು ನಮ್ಮನ್ನು ಎಚ್ಚರಿಸುತ್ತವೆ. ರಾಜ್‌ರಿಗೇ ತಿಳಿಯದೇ ಅದನ್ನು ಆಲಿಸುವವರ ಬದುಕಿಗೆ ಸಂಯಮ ಸ್ವನಿಯಂತ್ರಣವನ್ನು ರಾಜ್ ತಂದು ಕೊಟ್ಟಿದ್ದಾರೆಂಬುದು ಪಾರ್ವತಮ್ಮನವರ ಅಭಿಮತವೂ ಹೌದು.
ಡಾ. ರಾಜ್ ಮೌಲ್ಯಗಳು ಕನ್ನಡಿಗರಿಗೆ ಕನ್ನಡಿಯಂತೆ! ಕನ್ನಡಿಗರ ನೋವು ನಲಿವಿನಲ್ಲಿ ರಾಜ್ ತಮ್ಮ ಪಾತ್ರಗಳು ಮತ್ತು ವ್ಯಕ್ತಿತ್ವದ ಮೂಲಕ ಅಂತರ್ದವ್ಯವಾಗಿದ್ದಾರೆ. ಆಶ್ರಯ ವಸ್ತುವಾಗಿದ್ದಾರೆ. ಕಾಲ ಕೆಲವರ ನೆನಪುಗಳನ್ನು ಮರೆಮಾಚುತ್ತದೆ ಎನ್ನುತ್ತಾರೆ. ಆದರೆ ಡಾ. ರಾಜ್‌ಕುಮಾರ್‌ರವರ ನೆನಪು ಮಾತ್ರ ಕಾಲವನ್ನೂ ಸಹ ಮರೆಮಾಚುತ್ತದೆ.
ಇಂದು ಅಣ್ಣಾವ್ರ ಜನ್ಮದಿನ.

-ಎಸ್. ಜಗನ್ನಾಥರಾವ್ ಬಹುಳೆ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!