ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಮ್ಮ ಗೂಢಚರರನ್ನೆಲ್ಲ ಕತ್ತಲ ಕೋಣೆಗೆ ತಳ್ಳಿ ಕೈಬಿಟ್ಟೆವೇ?

Mainashree
Updated On : 30 Apr 2013, 9:51 am

ಕಳೆದ ಬೇಸಿಗೆಯಲ್ಲಿ ಬಿಳಿಗೂದಲ ಗಡ್ಡದ ವ್ಯಕ್ತಿಯೊಬ್ಬ ವಾಘಾದ ಗಡಿ ದಾಟಿ ಭಾರತಕ್ಕೆ ಕಾಲಿರಿಸಿದ. ಪಾಕಿಸ್ತಾನದ ಬಿಗಿ ಪಹರೆಯ ಜೈಲಿನಿಂದ 30 ವರ್ಷ ಆರು ತಿಂಗಳ ನಂತರ ಬಿಡುಗಡೆ ಆಗಿ ಭಾರತಕ್ಕೆ ಬಂದಿದ್ದ ವ್ಯಕ್ತಿಯ ಹೆಸರು ಸುರ್ಜಿತ್ ಸಿಂಗ್. 1981ರ ಡಿಸೆಂಬರ್‌ನಲ್ಲಿ ತನ್ನ ಹಳ್ಳಿ ಫಿದ್ದಾವನ್ನು ಬಿಟ್ಟಾಗ ಬಲುಬೇಗನೇ ಹಿಂತಿರುಗುವುದಾಗಿ ಹೆಂಡತಿಗೆ ಹೇಳಿ ಹೋಗಿದ್ದ ಸುರ್ಜಿತ್, ತಿರುಗಿ ತಾಯ್ನಾಡಿಗೆ ಬಂದ ಸಂದರ್ಭದಲ್ಲಿ ಆತನ ಗುರುತೇ ಹತ್ತದಂತಾಗಿತ್ತು.  
'ನಾನು ಪಾಕಿಸ್ತಾನಕ್ಕೆ ಹೋಗಿದ್ದು ಭಾರತದ ಪರ ಬೇಹುಗಾರಿಕೆಗೆ' ಅಂತ ಸುರ್ಜಿತ್ ಪತ್ರಕರ್ತರ ಮುಂದೆ ಘೋಷಿಸಿದಾಗ ಹಲವರಿಗೆ ಆಘಾತವಾಯಿತು. ಆದರೆ ಇದರಲ್ಲಿ ಅಚ್ಚರಿ ತರುವಂಥದ್ದೇನಿಲ್ಲ.
ಈಗ ಪಾಕಿಸ್ತಾನದ ಜೈಲಿನಲ್ಲಿ ಸರಬ್‌ಜೀತ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಆತ ಕೋಮಾಕ್ಕೆ ಜಾರಿರುವ ಸುದ್ದಿ ಬಂದಿದೆ. ಈ ಸಂದರ್ಭದಲ್ಲಿ ಇಂಥದೇ ಹಲವು ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿ ಜಮೆಯಾಗಿರುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಪಾಕಿಸ್ತಾನದ ಕೋರ್ಟ್ ಹೇಳುವಂತೆ 14 ಜನರ ಪ್ರಾಣಹಾನಿಯಾದ ಬಾಂಬ್‌ಸ್ಫೋಟವೊಂದರಲ್ಲಿ ಸರಬ್‌ಜೀತ್ ಪಾಲ್ಗೊಂಡಿದ್ದ ಎಂದು ಹೇಳಲಾಗದು. ಏಕೆಂದರೆ ಸರಬ್‌ಜೀತ್ ಕುಟುಂಬ ಇದೊಂದು ಐಡೆಂಟಿಟಿ ಬದಲಾಗಿರುವ ಸನ್ನಿವೇಶ ಎಂದು ನ್ಯಾಯವಾದಿಯ ಮೂಲಕ ಪ್ರತಿಪಾದಿಸುತ್ತಿದೆ. ಆದರೆ, ಒಂದು ವಿಷಯವನ್ನು ನಿಖರವಾಗಿ ಹೇಳಬಹುದು. ಪಾಕಿಸ್ತಾನದ ವಿರುದ್ಧದ ಭಾರತದ ರಹಸ್ಯ ಯುದ್ಧದಲ್ಲಿ ಅನೇಕ ಕತೆಗಳನ್ನು ಹೇಳಲಾಗದ ರೀತಿ ಮುಚ್ಚಿಟ್ಟುಕೊಂಡಿದ್ದೇವೆ. ಸರಬ್‌ಜೀತ್ ಅವೆಲ್ಲದರ ಪ್ರತೀಕ.
ಡಿಸೆಂಬರ್ 1979. 'ನೀರು ಸರಿಯಾದ ಶಾಖದಲ್ಲಿ ಕುದಿಯಬೇಕು' ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್ ಮೊಹಮದ್ ಜಿಯಾ ಉಲ್ ಹಕ್, ಗೂಢಚಾರ ಗುರು ಜನರಲ್ ಅಖ್ತರ್ ಮಲ್ಲಿಕ್‌ಗೆ ಹೇಳಿದ ಮಾತು. ಅಫ್ಘಾನಿಸ್ತಾನದಲ್ಲಿ ಸೋವಿಯತ್ ಯೂನಿಯನ್ ಹಿಮ್ಮೆಟ್ಟಿಸುವುದಕ್ಕೆ ಜಿಹಾದಿಗಳನ್ನೊದಗಿಸಿ ನೇಪಥ್ಯದಲ್ಲಿ ನಿಂತು ಸಮರದ ಕಿಚ್ಚು ಹತ್ತಿಸಿದ್ದ ಮಲ್ಲಿಕ್. ಆದರೆ ಒಂದು ಹಂತಕ್ಕೆ ಆ ಸೂಪರ್‌ಪವರ್ ದೇಶವನ್ನು ಹಿಮ್ಮೆಟ್ಟಿಸಿದ ಮೇಲೆ ಅದು ಮರುದಾಳಿ ಮಾಡಲಾರದೇ ಎಂಬ ಆತಂಕವೂ ಅದಕ್ಕಿತ್ತು. ಪಾಕ್‌ನ ಈ ಆತಂಕಕ್ಕೆ ಪ್ರಮುಖ ಕಾರಣವಾಗಿದ್ದದ್ದು ಭಾರತ. ಸೋವಿಯತ್ ಯೂನಿಯನ್‌ನ ಒತ್ತಡಕ್ಕೆ ಮಣಿದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ವಿರುದ್ಧ ಯುದ್ಧ ಸಾರಬಹುದೆಂಬ ಆತಂಕ ಅವರದ್ದು. ಹೀಗಾಗಿಯೇ ಪಂಜಾಬ್‌ನಲ್ಲಿ ಭಾರತ ಎದುರಿಸುತ್ತಿದ್ದ ಆಂತರಿಕ ಸಂಘರ್ಷಕ್ಕೆ ತುಪ್ಪ ಸುರಿದು ದೇಶದ ಗಮನ ಅಲ್ಲೇ ನೆಲೆಗೊಳ್ಳುವಂತೆ ಮಾಡುವ ತಂತ್ರದಲ್ಲಿ ಪಾಕಿಸ್ತಾನ ಶಕ್ತಿ ವ್ಯಯಿಸಿತು. 80ರ ದಶಕದ ಪ್ರಾರಂಭದಲ್ಲೇ ಖಾಲಿಸ್ತಾನದ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ಶಸ್ತ್ರಗಳನ್ನು ಪಡೆದರು. ಆ ಸಂಘರ್ಷ ತಹಬಂದಿಗೆ ಬರುವಷ್ಟರಲ್ಲಿ 20 ಸಾವಿರ ಪ್ರಾಣಗಳನ್ನು ಆಹುತಿ ತೆಗೆದುಕೊಂಡಿತ್ತು.
ಇದಕ್ಕೆ ಉತ್ತರ ಕೊಡಬೇಕು ಅಂತ ಫರ್ಮಾನು ಹೊರಡಿಸಿದರು ರಾಜೀವ್ ಗಾಂಧಿ. ಭಾರತದ ಗುಪ್ತಚರ ಸಂಸ್ಥೆ ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಎರಡು ರಹಸ್ಯ ತಂಡಗಳನ್ನು ರೂಪಿಸಿತು. ಟೀಮ್ ಎಕ್ಸ್ ಎಂಬುದು ಒಟ್ಟಾರೆ ಪಾಕಿಸ್ತಾನದೊಂದಿಗೆ ವ್ಯವಹರಿಸಿದರೆ, ಟೀಮ್ ಜೆ, ಖಾಲಿಸ್ತಾನದ ಪ್ರತ್ಯೇಕತಾವಾದಿಗಳನ್ನು ವಿಚಾರಿಸಿಕೊಳ್ಳುವುದಕ್ಕೆ ಮುಡಿಪಾಯಿತು. ಭಾರತದ ನಗರಗಳನ್ನು ಗುರಿಯಾಗಿರಿಸಿಕೊಂಡು ಖಾಲಿಸ್ತಾನ ಪ್ರತ್ಯೇಕತಾವಾದಿಗಳು ನಡೆಸಿದ ಪ್ರತಿ ದಾಳಿಗೂ ಲಾಹೋರ್, ಕರಾಚಿ, ಮುಲ್ತಾನ್‌ಗಳಲ್ಲಿ ಪ್ರತ್ಯುತ್ತರ ನೀಡಿತು ಭಾರತದ ಟೀಮ್ ಎಕ್ಸ್. ಪಂಜಾಬ್‌ನಲ್ಲಿ ನಿಮ್ಮ ಮಧ್ಯಪ್ರವೇಶವನ್ನು ಕಡಿಮೆ ಮಾಡಿ ಎಂದು ಐಎಸ್‌ಐಗೆ ಸಂದೇಶ ರವಾನಿಸುವ ಕೆಲಸ ಮಾಡಿದೆವು ಎಂದು ರಾ ದ ನಿವೃತ್ತ ಅಧಿಕಾರಿ ಬಿ. ರಾಮನ್ 2002ರಲ್ಲಿ ಬರೆದುಕೊಂಡಿದ್ದರು.
ಸುರ್ಜೀತ್ ಸಿಂಗ್ ಅಂಥವರು ಈ ರಹಸ್ಯ ಯುದ್ಧದಲ್ಲಿ ಭಾರತದ ಕಾಲಾಳುಗಳಾಗಿದ್ದವರು. ಹಲವು ದಶಕಗಳವರೆಗೆ ಪರಸ್ಪರರ ಮಿಲಿಟರಿ ಚಟುವಟಿಕೆಗಳ ಬಗ್ಗೆ ಬೇಹುಗಾರಿಕೆ ನಡೆಸುವುದಕ್ಕೆ ಗಡಿಭಾಗದ ಮಂದಿಯನ್ನು ಉಭಯ ರಾಷ್ಟ್ರಗಳೂ ನೆಚ್ಚಿಕೊಂಡಿದ್ದವು. ಆಲ್ಕೋಹಾಲ್, ಚಿನ್ನ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮಾದಕ ವಸ್ತು ಇಂಥವನ್ನು ಕಳ್ಳತನದಿಂದ ತರುವುದಕ್ಕೆ ಸಹಕರಿಸಿದರೆ ಬೇಹುಗಾರಿಕೆ ಮಾಡಿಕೊಡುವುದಾಗಿ ಕೆಲವರು ಒಪ್ಪಿಕೊಳ್ಳುತ್ತಿದ್ದರು. ಇನ್ನು ಕೆಲವರು ದೇಶಭಕ್ತಿಯಿಂದ ಉತ್ತೇಜಿತರಾಗಿ ಸ್ವಪ್ರೇರಿತವಾಗಿ ಬೇಹುಗಾರಿಕೆ ಜಾಲಕ್ಕೆ ಸೇರ್ಪಡೆಗೊಳ್ಳುತ್ತಿದ್ದರು. ಅವರಲ್ಲಿ ಕೆಲವರಿಗೆ ಬಂಧನದಿಂದ ತಪ್ಪಿಸಿಕೊಳ್ಳುವ, ಗುರುತು ಮರೆಮಾಚುವ ವಿದ್ಯೆಗಳಿಂದ ಹಿಡಿದು ಬಾಂಬ್ ತಯಾರಿಕೆವರೆಗೆ ಹಲವು ಸೂಕ್ಷ್ಮ ವಿಷಯಗಳಲ್ಲಿ 'ರಾ' ತರಬೇತಿ ನೀಡಿತ್ತು.
ಕಾರಣಗಳೇನೋ ಗೊತ್ತಿಲ್ಲವಾದರೂ 1997ರಲ್ಲಿ ಐ ಕೆ ಗುಜ್ರಾಲ್ ಅವರು ಪ್ರಧಾನಿಯಾದಾಗ ಈ ಎರಡೂ ರಹಸ್ಯ ತಂಡಗಳನ್ನು ಬರ್ಖಾಸ್ತುಗೊಳಿಸಿದರು. ಅದಕ್ಕೂ ಮುಂಚೆ ಚೀನಾ ಮತ್ತು ಮ್ಯಾನ್ಮಾರ್ ಜತೆ ಸಂಬಂಧ ಸುಧಾರಣೆಗೆ ಆ ಭಾಗದ ರಾ ಕಾರ್ಯಾಚರಣೆಗಳನ್ನು ನರಸಿಂಹರಾವ್ ಅವರು ಸ್ಥಗಿತಗೊಳಿಸಿದ್ದರು ಎಂಬ ಮಾತಿದೆ. ಅದೇನೇ ಇರಲಿ, ಈ ರಹಸ್ಯ ಸಮರಗಳನ್ನು ಕಾದಾಡಿದ ಸೇನಾನಿಗಳ ಬಗ್ಗೆ ನಮಗೆ ಕೃತಜ್ಞತೆ ಇಲ್ಲದಿರುವುದಂತೂ ಖರೆ. 1988ರಲ್ಲಿ ಪಾಕ್‌ನಲ್ಲಿ ಬಂಧನಕ್ಕೆ ಒಳಗಾಗಿ 2005ರವರೆಗೂ ಕತ್ತಲ ಕೋಣೆಯಲ್ಲಿ ಕಾಲ ತಳ್ಳಿದ ಕರಮತ್ ರೋಹಿ 'ರಾ'ಕ್ಕೆ ಸೇವೆ ಸಲ್ಲಿಸಿದವರು. 'ನಾನು ಬಳಸಿ ಒಗೆವ ನ್ಯಾಪ್‌ಕಿನ್‌ನಂತೆ ಆಗಿಹೋದೆ. ನಾನೇನೋ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಅಂದುಕೊಂಡೆ. ಇದಕ್ಕೆ ಪ್ರತಿಫಲಾಪೇಕ್ಷೆ ಏನೂ ಇರಲಿಲ್ಲ. ಆದರೆ ಇವನು ನಮ್ಮವನಲ್ಲ ಎಂದು ಹೇಳಿಸಿಕೊಳ್ಳುವುದಿದೆಯಲ್ಲ... ಅದರಂಥ ಅವಮಾನ ಮತ್ತೊಂದಿಲ್ಲ' ಅಂದಿದ್ದ ಕರಮತ್.
ಭಾರತದ ಬೇಹುಗಾರಿಕೆ ಚರಿತ್ರೆಯಲ್ಲಿ ಇಂಥ ವ್ಯಥೆಗಳು ಮಾಮೂಲಾಗಿವೆ. 27 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿದ್ದ ಗುರುದಾಸ್‌ಪುರದ ಗೋಪಾಲ್ ದಾಸ್ 2011ರಲ್ಲಿ ಬಿಡುಗಡೆಯಾದರು. ಸರ್ಕಾರದಿಂದ ಪರಿಹಾರ ಧನ ಸಿಗದಿದ್ದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. 'ರಾ'ದ ಏಜೆಂಟ್ ಎಂಬುದಕ್ಕೆ ಅಗತ್ಯ ದಾಖಲೆಗಳು ಇಲ್ಲವಾದ್ದರಿಂದ ಪರಿಹಾರಕ್ಕೆ ಆದೇಶಿಸಲಾಗದು ಎಂದು ಸುಪ್ರೀಂಕೋರ್ಟ್ ಸಹ ಕೈಚೆಲ್ಲಿಬಿಟ್ಟಿತು.
ಭಾರತವು ಸಮರೋಪಾದಿಯಲ್ಲಿ ಬೇಹುಗಾರಿಕೆ ಆರಂಭಿಸಿದ್ದಕ್ಕೂ ಸಕಾರಣಗಳಿವೆ. ಭಾರತವು ಬ್ರಿಟಿಷರಿಂದ ಸ್ವತಂತ್ರಗೊಂಡಾಗ ಇಂಟಲಿಜೆನ್ಸ್ ಬ್ಯೂರೋದ ಮುಖ್ಯ ಅಧಿಕಾರಿ ಆಗಿದ್ದವರು ಕುರ್ಬಾನ್ ಅಲಿಖಾನ್. ಆತ ಕೆಲ ಸೂಕ್ಷ್ಮ ಕಡತಗಳನ್ನು ಎತ್ತಿಕೊಂಡು ಪಾಕಿಸ್ತಾನ ಸೇರಿಬಿಟ್ಟ. ಭಾರತವು ಮಾಹಿತಿಗಳೇ ಇಲ್ಲದ ಅಸಾಹಯಕತೆಯ ಕೂಪಕ್ಕೆ ಬಿತ್ತು. 1947ರಲ್ಲಿ ಪಾಕಿಸ್ತಾನದೊಂದಿಗೆ ಕದನ ಶುರುವಾದಾಗ ಹೊಸದೆಹಲಿಯ ಮಿಲಿಟರಿ ಇಂಟಲಿಜೆನ್ಸ್ ಡೈರೆಕ್ಟೋರೇಟ್‌ಗೆ ರೇಡಿಯೋ ಸಿಗ್ನಲ್ ಬೇಧಿಸಿದ್ದರಿಂದ ಸಿಕ್ಕ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸೋಣ ಅಂತಂದ್ರೆ ಅದಕ್ಕೆ ಬೇಕಾದ ಜಮ್ಮು-ಕಾಶ್ಮೀರದ ಭೂಪಟವೇ ಇರಲಿಲ್ಲ!
ಪಾಕಿಸ್ತಾನವು ಸಾಂಪ್ರದಾಯಿಕ ಕದನದಲ್ಲಿ ಭಾರತವನ್ನು ಮಣಿಸುವುದು ಅಸಾಧ್ಯದ ಮಾತಾಗಿರುವುದರಿಂದ ರಹಸ್ಯ ಯುದ್ಧಗಳಿಗೆ ಬೇಕಾಗುವ ಗೂಢಚಾರಿಕೆಯನ್ನು ಚೆನ್ನಾಗಿಯೇ ಗಟ್ಟಿಗೊಳಿಸಿತು. ಕಾಲ ಕಾಲಕ್ಕೆ ಇಲ್ಲಿನ ಪ್ರತ್ಯೇಕತಾವಾದಿ ಗುಂಪುಗಳಿಗೆ ಸಹಾಯ ಒದಗಿಸುತ್ತ ಸಾಗಿತು.
ಭಾರತದ ಗೂಢಚಾರಿಕೆ ಗಣನೀಯವಾಗಿ ಬಲಗೊಂಡಿದ್ದು 1962ರ ಚೀನಾ ಯುದ್ಧದ ನಂತರವಷ್ಟೇ. ಅಮೆರಿಕದ ಸಹಾಯವೂ ಆಗ ಲಭ್ಯವಾಗಿತ್ತು. ಭಾರತದಲ್ಲಿರುವ ಟಿಬೆಟ್ ನಿರಾಶ್ರಿತರನ್ನೇ ಬಳಸಿಕೊಂಡು ಎಸ್ಟಾಬ್ಲಿಶ್‌ಮೆಂಟ್ 22 ಎಂಬ ಪಡೆಯೊಂದನ್ನು ಕಟ್ಟಿತು ರಾ. ಅದು ಚೀನಾದಲ್ಲಿ ದೊಡ್ಡ ಮಟ್ಟದ ಬೇಹುಗಾರಿಕೆ ನಡೆಸಿತು. ಮೇಜರ್ ಜನರಲ್ ಸುರ್ಜಿತ್ ಸಿಂಗ್ ಉಬನ್ ಅವರ ನೇತೃತ್ವದಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ನಿಖರ ದಾಳಿ ನಡೆಸುವುದಕ್ಕೆ ಸಹಾಯವಾಗಿ ಬಂದೊದಗಿದ್ದು ಎಸ್ಟಾಬ್ಲಿಷ್‌ಮೆಂಟ್ 22 ನೀಡಿದ ಮಾಹಿತಿಯೇ. ಭಾರತದೊಳಗೆ ಸಿಕ್ಕಿಂ ವಿಲೀನಕ್ಕೂ ಇದರ ಕೊಡುಗೆ ಅಪಾರ. ನಂತರ ಲಂಕಾ, ಮ್ಯಾನ್ಮಾರ್‌ಗಳ ಮೇಲೆ ರಾ ದ ಗಮನ ಹರಿಯಿತು. 1971ರಲ್ಲಿ ಪಾಕಿಸ್ತಾನಕ್ಕೆ ಸರಿಯಾದ ಏಟನ್ನೇ ಕೊಟ್ಟ ನಂತರ ಎಲ್ಲವೂ ಸರಿಯಾಯಿತು ಎಂದೇ ನಿರಾಳರಾದರು.
ಆದರೆ ಈಗ ಅಣ್ವಸ್ತ್ರ ದೇಶವಾಗಿರುವ ಪಾಕಿಸ್ತಾನ ತನಗೆ ಬೇಕೆಂದಾಗಲೆಲ್ಲ ಭಾರತದ ಮೇಲೆ ಪರೋಕ್ಷ ಸಮರ ಸಾರುತ್ತಿರುವಾಗ ನಾವು ರಹಸ್ಯ ಯುದ್ಧಗಳನ್ನು ಕೊನೆಗೊಳಿಸಿರುವುದರ ಬಗ್ಗೆ ಮರುವಿಮರ್ಶೆ ಮಾಡಬೇಕಲ್ಲವೇ ಎಂಬ ಪ್ರಶ್ನೆ ಏಳುತ್ತಲೇ ಇದೆ. ಆದರೆ ಪ್ರತಿದಾಳಿ ಮಾಡುತ್ತ ಹೋದರೆ 1980ರ ಸಮಯದಲ್ಲಾದಂತೆ ಹಿಂಸಾಚಾರ ಹೆಚ್ಚುತ್ತದೆಯಾದ್ದರಿಂದ ಪಾಕ್ ಕುತಂತ್ರಗಳನ್ನು ತಡೆಯುವುದಕ್ಕೆ ಮಾತ್ರ ಬೇಹುಗಾರಿಕೆ ಬಲವನ್ನು ಉಪಯೋಗಿಸೋಣ ಎಂಬುದು ಭಾರತದ ರಾಜನೀತಿಯ ಯೋಚನೆ. ಕಾರ್ಗಿಲ್ ಯುದ್ಧವಾದ ನಂತರವೂ ಗುಪ್ತಚಾರಿಕೆ ದಳದ ಕೆಲವು ಅಧಿಕಾರಿಗಳು ವಾಜಪೇಯಿ ಅವರನ್ನು ಸಂಪರ್ಕಿಸಿ, ನಾವು ಮತ್ತೆ ರಹಸ್ಯ ಪ್ರತಿಯುದ್ಧದ ಮಾರ್ಗ ಹಿಡಿಯೋಣವೇ ಎಂದು ಕೇಳಿದ್ದರಂತೆ. ಅದಕ್ಕೆ ಅಟಲರು ಸರಿ ಎನ್ನಲೂ ಇಲ್ಲ, ಬೇಡವೆಂದೂ ಹೇಳಲಿಲ್ಲ ಅನ್ನುತ್ತವೆ ಮೂಲಗಳು.  ಮೂಲಗಳ ಪ್ರಕಾರ, ಮುಂಬಯಿ ದಾಳಿಯ ನಂತರವೂ ಗುಪ್ತಚಾರಿಕೆ ವಿಭಾಗದ ಅಧಿಕಾರಿಗಳು ಪಾಕಿಸ್ತಾನದಲ್ಲಿರುವ ಜಿಹಾದಿ ಪ್ರಮುಖರನ್ನು ಗುರಿ ಮಾಡುವ ವ್ಯೂಹ ರಚನೆಗೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪಿಗೆ ಸಿಗಲಿಲ್ಲ ಅನ್ನುತ್ತವೆ ಮೂಲಗಳು.
ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುವುದಕ್ಕೆ ರಹಸ್ಯ ಯುದ್ಧಗಳು ಮತ್ತೆ ಶುರುವಾಗುತ್ತವೋ ಬಿಡುತ್ತವೋ ತಿಳಿಯದು. ಆದರೆ ಸರಬ್‌ಜೀತ್ ಸಿಂಗ್ ಎಂಬ ಭಾರತೀಯ ಗೂಢಚಾರಿಕೆ ಆರೋಪ ಹೊತ್ತು ಪಾಕ್‌ನಲ್ಲಿ ಮರಣಶಯ್ಯೆಯಲ್ಲಿ ಮಲಗಿರುವಾಗ, 1980ರ ರಹಸ್ಯ ಯುದ್ಧಗಳಲ್ಲಿ ಪ್ರಾಣತೆತ್ತ ಹೆಸರಿಲ್ಲದ ಹೀರೋಗಳನ್ನು ಈಗಲಾದರೂ ನೆನಪಿಸಿಕೊಳ್ಳೋಣ.

-ಪ್ರವೀಣ್ ಸ್ವಾಮಿ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement