ಆಂಧ್ರ ವಿಭಜನೆ, ಇನ್ನಷ್ಟೇ ಶುರು ತಲೆಬೇನೆ
ಅಖಂಡ ಆಂಧ್ರಪ್ರದೇಶವನ್ನು ವಿಭಜಿಸಿ ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳಾಗಿ ಘೋಷಣೆ ಮಾಡಿಯಾಗಿದೆ. ಇದಕ್ಕೆ ರಾಯಲಸೀಮೆ ಮತ್ತು ಕರಾವಳಿ ಪ್ರದೇಶಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೆ, ತೆಲಂಗಾಣ ಪ್ರದೇಶದಲ್ಲಿ ಹರ್ಷವ್ಯಕ್ತವಾಗಿದೆ. ಅದು ಏನೇ ಇದ್ದರೂ ವಿಭಜಿತ ನೂತನ ರಾಜ್ಯಕ್ಕೆ ರಾಜಧಾನಿ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಯಾವರೀತಿಯಲ್ಲಿ ವ್ಯವಹರಿಸಲಿದೆ ಎಂಬುದು ಕುತೂಹಲಕರ ವಿಷಯವಾಗಿದೆ.
ನೂತನ ರಾಜಧಾನಿಯಲ್ಲಿ ಸಚಿವಾಲಯ, ಹೈಕೋರ್ಟ್, ವಿವಿಧ ಶಾಖೆಗಳ ಪ್ರಮುಖ ಕಚೇರಿಗಳ ನಿರ್ಮಾಣ ತುರ್ತು ಅಗತ್ಯವಿದೆ. ಇವುಗಳಿಗಾಗಿ ಸುಮಾರು 500 ರಿಂದ ಒಂದು ಸಾವಿರ ಎಕರೆ ಪ್ರದೇಶದ ಅವಶ್ಯಕತೆ ಇದೆ ಎಂಬುದು ತಜ್ಞರ ಅಭಿಪ್ರಾಯ. 13 ವರ್ಷಗಳ ಹಿಂದೆ ದೇಶದ ಜಾರ್ಖಂಡ್, ಛತ್ತೀಸ್ಘಡ್, ಉತ್ತರಾಖಂಡ್ ರಾಜ್ಯಗಳು ಏರ್ಪಟ್ಟವು. ಆಯಾ ರಾಜ್ಯಗಳ ಬೃಹತ್ ನಗರಗಳನ್ನೇ ರಾಜ್ಯದ ರಾಜಧಾನಿಗಳಾಗಿ ಅಂದಿನ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿತು. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಉತ್ತಮ ಸಾರಿಗೆ ಸಂಪರ್ಕ, ರಾಜಧಾನಿ ಸೌಕರ್ಯಕ್ಕೆ ಅಗತ್ಯವಾದ ಭೂಮಿ ಮುಂತಾದ ವಿಚಾರಗಳನ್ನು ಪರಿಗಣಿಸಿ ಅಂದು ಜಾರ್ಖಂಡ್ಗೆ ರಾಂಚಿ, ಉತ್ತರಾಖಂಡ್ಗೆ ಡೆಹ್ರಾಡೂನ್, ಛತ್ತೀಸ್ಘಡ್ಗೆ ರಾಯಪೂರ್ ನಗರಗಳನ್ನು ಆರಿಸಿ ಅಲ್ಲಿದ್ದ ಶಾಲಾ ಕಾಲೇಜು ಕಟ್ಟಡಗಳನ್ನು ಸಚಿವಾಲಯಗಳಾಗಿ ಬದಲಿಸಲಾಯಿತು. ನಂತರದ ಎರಡು ವರ್ಷಗಳಲ್ಲಿ ಆ ಮೂರೂ ರಾಜ್ಯಗಳಲ್ಲಿ ನೂತನ ಸಚಿವಾಲಯ, ಹೈಕೋರ್ಟ್ ಕಟ್ಟಡಗಳನ್ನು ನಿರ್ಮಿಸಲಾಯಿತು.
ಅದೇ ರೀತಿಯಾಗಿ ಸೀಮಾಂಧ್ರಪ್ರದೇಶದ ರಾಜಧಾನಿ ಎಲ್ಲಿರಬೇಕು ಎಂಬ ಪ್ರಶ್ನೆಗೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಸಮಾನ ದೂರದಲ್ಲಿರಬೇಕು ಎಂಬ ಉತ್ತರ ಬರುತ್ತದೆ. ಈ ಮಾತಿಗೆ ಕರ್ನಾಟಕ ಮತ್ತು ತಮಿಳುನಾಡು ತದ್ವಿರುದ್ಧವಾಗಿವೆ. ಯಾಕೆಂದರೆ ಈ ಎರಡೂ ರಾಜ್ಯಗಳು ಉದಯಿಸಿದ ಕಾಲದಲ್ಲಿ ದೂರವನ್ನು ಪರಿಗಣಿಸದೆ ಎಲ್ಲ ಮೂಲ ಸೌಕರ್ಯಗಳುಳ್ಳ ಚನ್ನೈ ಮತ್ತು ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿಯಾಗಿ ಆಂಧ್ರಪ್ರದೇಶ ವಿಭಜನೆ ವಿಚಾರವಾಗಿ ಸೀಮಾಂಧ್ರ ಪ್ರದೇಶದ ರಾಜಧಾನಿ ವಿಚಾರದಲ್ಲಿ ಹಲವು ಪ್ರದೇಶಗಳು ಚರ್ಚೆಗೆ ಬಂದಿವೆ.
ವಿಶಾಖಪಟ್ಟಣ, ವಿಜಯವಾಡ, ತಿರುಪತಿ, ರಾಜಮಂಡ್ರಿ ನಗರಗಳಲ್ಲಿ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳು ಲಭ್ಯವಿದ್ದರೂ ಇವು ಎಲ್ಲ ಪ್ರದೇಶಗಳಿಗೆ ಸಮೀಪದಲ್ಲಿಲ್ಲ ಎಂಬ ಕೊರಗು ಎದ್ದು ಕಾಣುತ್ತದೆ. ತಿರುಪತಿ ದೂರದ ವಿಚಾರದಲ್ಲಿ ಮತ್ತು ಸೌಕರ್ಯಗಳ ವಿಷಯದಲ್ಲಿ ಸರಿ ಎನಿಸಿದರೂ ಇದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ವರ್ಷದ 365 ದಿನಗಳೂ ಇಲ್ಲಿ ಜನ ಸಂದಣಿ ಅತಿಯಾಗಿರುತ್ತದೆ. ಇದರ ಜೊತೆಗೆ ರಾಜಧಾನಿ ಪಟ್ಟ ಬಂದರೆ ಸಾರಿಗೆ ನಿಯಂತ್ರಣಕ್ಕೆ ತೀರಾ ಕಷ್ಟ ಎದುರಾಗುತ್ತದೆ ಎಂಬ ಅಭಿಪ್ರಾಯಗಳಿವೆ ಎನ್ನಲಾಗಿದೆ.
ಉಳಿದ ಪ್ರದೇಶಗಳಿಗೆ ಹೋಲಿಸಿದರೆ ವಿಜಯವಾಡ ಪ್ರಶಸ್ತವಾದ ನಗರ ಎಂಬ ಮಾತುಗಳು ತಜ್ಞರ ವಲಯದಲ್ಲಿ ಕೇಳಿಬರುತ್ತಿವೆ. ರಾಜ್ಯದ ಎಲ್ಲ ಪ್ರದೇಶಕ್ಕೂ ಸಮಾನ ದೂರ ಹೊಂದಿದ ನಗರವಾಗಿದೆ. ಹಾಗಾಗಿ ಇದೇ ನಗರವನ್ನು ಸೀಮಾಂಧ್ರ ಪ್ರದೇಶದ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಸೂಚನೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನು ರಾಜಧಾನಿ ವಿಚಾರವನ್ನು ಪಕ್ಕಕ್ಕಿಟ್ಟು ರಾಜಕೀಯ ವಿಚಾರವನ್ನು ಗಮನಿಸಿದಾಗ ಮುಂದಿನ ಲೋಕ ಸಭಾ ಚುನಾವಣೆಗೂ ಮೊದಲು ಆಂಧ್ರಪ್ರದೇಶದಲ್ಲಿ ಎರಡು ಸರ್ಕಾರಗಳು ತಲೆ ಎತ್ತಲಿವೆಯೇ? ಎಂಬುದಕ್ಕೆ ಇತ್ತೀಚಿನ ಯುಪಿಎ ನಡೆ ಹೌದು ಎನ್ನುವುದರತ್ತಲೇ ಬೆರಳು ತೋರಿಸುತ್ತದೆ. ಮೋದಿ ನೇತೃತ್ವದ ಎನ್ಡಿಎ ತೆಲಂಗಾಣ ವಿಷಯದಲ್ಲಿ ಮುಂದಿನ ಆ.10ರಂದು ತೀರ್ಮಾನ ಕೈಗೊಳ್ಳಲಿದೆ ಎಂಬ ಆತುರದಲ್ಲಿ ಆಂಧ್ರವನ್ನು ಇಬ್ಬಾಗ ಮಾಡಿ ಕೇಂದ್ರ ಸರ್ಕಾರ. ಈಗ ವಿಭಜಿತ ಉಭಯ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಿದ್ಧತೆಯಲ್ಲಿದೆ.
ಕೇಂದ್ರ ಗೃಹ ಸಚಿವಾಲಯದ ಪತ್ರದ ಸಾರಾಂಶದಂತೆ ನೂತನ ರಾಜ್ಯ ಏರ್ಪಾಟಿಗೆ 215 ದಿನ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಆದರೆ ಕೇಂದ್ರ ಸಚಿವ ಗುಲಾಮ್ನಬಿ ಆಜಾದ್ ಅವರ ಪ್ರಕಾರ ನೂತನ ರಾಜ್ಯ ನಿರ್ಮಾಣಕ್ಕೆ 180 ದಿನ ಸಾಕು ಎಂದು ಹೇಳಿದ್ದಾರೆ. ವಿಭಜನೆ ವಿಚಾರವಾಗಿ ವಿಧಾನಸಭೆ ತೀರ್ಮಾನದಿಂದ ರಾಷ್ಟ್ರಪತಿ ಅಂಕಿತದ ವರೆಗೆ 12 ಹಂತದಲ್ಲಿ ವಿಭಜನೆ ಪ್ರಕ್ರಿಯೆ ನಡೆಯಬೇಕಾಗಿದೆ. ಆದರೆ ಇಷ್ಟು ಕಾಲಾವಕಾಶವನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂಬ ಸೂಚನೆಗಳು ಕಂಡುಬರುತ್ತಿವೆ. ಅವಧಿಗೂ ಮುನ್ನ ಅಂದರೆ ನವೆಂಬರ್ನಲ್ಲಿ ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ತೀರ್ಮಾನಿಸಿದರೆ ಅಕ್ಟೋಬರ್ ತಿಂಗಳ ಒಳಗೆಯೇ ನೂತನ ರಾಜ್ಯ ಪ್ರಕ್ರಿಯೆ ಪೂರ್ಣಗೊಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಿನ ವಿಭಜಿತ ತೆಲಂಗಾಣ ರಾಜ್ಯದಲ್ಲಿ 119 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ ಅಗತ್ಯವಿರುವುದು 60 ಸ್ಥಾನಗಳು. ಆದರೆ ಈಪ್ರದೇಶದಲ್ಲಿ ಮೂರು ಜನ ಶಾಸಕರು ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅವರ ವಿರುದ್ಧ ವಿಧಾನಸಭಾ ಸ್ಪೀಕರ್ ಕ್ರಮ ಕೈಗೊಂಡರೆ ಒಟ್ಟು ಸದಸ್ಯರ ಸಂಖ್ಯೆ 116ಕ್ಕೆ ಇಳಿಯಲಿದೆ. ಆಗ ಸರ್ಕಾರ ರಚನೆಗೆ 59 ಸದಸ್ಯ ಬಲದ ಅವಶ್ಯಕತೆ ಇರುತ್ತದೆ. ಇಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 49 ಆಗಿರುವುದರಿಂದ ಇದು ಎಂಐಎಂ ಬೆಂಬಲ ಕೋರುವ ಸೂಚನೆಗಳು ಕಾಣಿಸುತ್ತಿವೆ.
ಇದರ ಜೊತೆಗೆ ತೆಲಂಗಾಣ ರಾಜ್ಯ ಪ್ರಕಟಣೆ ಮಾಡಿದ ಕಾರಣ ಟಿಆರ್ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಕಾಂಗ್ರೆಸ್ನಲ್ಲಿ ವಿಲೀನವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಂದು ವೇಳೆ ಪಕ್ಷ ವಿಲೀನ ಆಗದಿದ್ದರೂ ಕೆಲವು ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದು ಖಚಿತ ಎಂಬ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿ ತುಂಬಿದೆ. ಇದರಿಂದ ಸರ್ಕಾರ ರಚನೆಗೆ ಯಾವುದೇ ತೊಂದರೆ ಇಲ್ಲ ಎಂಬ ಧೈರ್ಯದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ತೆಲಂಗಾಣ ವಿಭಜನೆಯಾಗಿ ಉಳಿದ ಸೀಮಾಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ 88 ಶಾಸಕರ ಅಗತ್ಯವಿದೆ. ಕಾಂಗ್ರೆಸ್ನ 97 ಶಾಸಕರಿರುವ ಕಾರಣ ಕೆಲವರು ರಾಜಿನಾಮೆ ನೀಡಿದರೂ ಸರ್ಕಾರ ರಚನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿದೆ. ಈ ಪ್ರದೇಶದ 15 ಶಾಸಕರ ವಿರುದ್ಧ ವಿಪ್ ಉಲ್ಲಂಘನೆ ಪೆಟ್ಟು ಬಿದ್ದಿದೆ. ಈ 15 ಸ್ಥಾನಗಳು ಖಾಲಿ ಇವೆ. ಜೊತೆಗೆ ತೆಲುಗುದೇಶಂ ಪಕ್ಷದ ಶಾಸಕ ಅಂಬಟಿ ಬ್ರಾಹ್ಮಣಯ್ಯ ಮೃತಪಟ್ಟ ಕಾರಣ ಒಂದು ಸ್ಥಾನ ಖಾಲಿಯಾಗಿದೆ.
ಇನ್ನು ಮುಖ್ಯಮಂತ್ರಿಯಾಗಿ ಕಿರಣ್ಕುಮಾರ್ ರೆಡ್ಡಿ ಮುಂದುವರೆಯುತ್ತಾರಾ ಅಥವಾ ನಾಯಕತ್ವ ಬದಲಾವಣೆಯತ್ತ ಕಾಂಗ್ರೆಸ್ ಗಮನ ಹರಿಸುತ್ತಾ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಒಂದು ವೇಳೆ ನೂತನ ನಾಯಕರ ಆಯ್ಕೆಯಾದರೆ ಕೇಂದ್ರ ಸಚಿವ ಚಿರಂಜೀವಿ ಮುಂದಿನ ಸಾಲಿನಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಜೊತೆಗೆ ಎರಡೂ ರಾಜ್ಯಗಳಿಗೆ (ಎಪಿಸಿಸಿ) ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಗಳು ಲಭಿಸಲಿದ್ದು ಅವರ ನೇಮಕವಾಗಬೇಕಿದೆ.
ಉಭಯರಾಜ್ಯಗಳ ಶಾಸಕರ ಬಲಾಬಲ
ವಿಭಜಿತ ತೆಲಂಗಾಣ- ಒಟ್ಟು ಶಾಸಕ ಬಲ 119
ಕಾಂಗ್ರೆಸ್ 49
ಟಿಡಿಪಿ 31
ಟಿಆರ್ಎಸ್ 21
ಎಂಐಎಂ 07
ಬಿಜೆಪಿ 04
ಸಿಪಿಐ 04
ಸಿಪಿಎಂ 01
ಲೋಕಸತ್ತಾ 01
ವೈಎಸ್ಆರ್ ಕಾ. 01
ಸೀಮಾಂಧ್ರಪ್ರದೇಶ- ಒಟ್ಟು ಶಾಸಕ ಬಲ 175
ಕಾಂಗ್ರೆಸ್ 97
ಟಿಡಿಪಿ 45
ವೈಎಸ್ಆರ್ ಕಾ. 17
ಖಾಲಿ ಸ್ಥಾನಗಳು 16
- ಅಶ್ವತ್ಥನಾರಾಯಣ ಎಲ್.
ಕನ್ನಡಪ್ರಭ