ಅಂಕಣಗಳು

ಕಾಂಗ್ರೆಸ್‌ನದ್ದು ದೂರದೃಷ್ಟಿಯ ಕೊರತೆಯೋ, ಸ್ವಹಿತಾಸಕ್ತಿಯೋ?

ಆಂಧ್ರದ ಮುಖ್ಯಮಂತ್ರಿ ಮತ್ತು ಕೇಂದ್ರ ಕ್ಯಾಬಿನೆಟ್‌ನ ಐವರು ತೆಲುಗು ಮಂತ್ರಿಗಳು..

ತೆಲಂಗಾಣ ರಚೆನೆಗೆ ಗ್ರೀನ್ ಸಿಗ್ನಲ್ ಕೊಡುವಾಗ ಮತ್ತೊಮ್ಮೆ ಕಾಂಗ್ರೆಸ್‌ನ ಎರಡು ನಾಲಿಗೆಗಳ ದರ್ಶನವಾಯಿತು. 'ಪಕ್ಷದ ಪ್ರತಿಯೊಬ್ಬ ನಾಯಕರು ಈ ನಿರ್ಧಾರದ ಹಿಂದೆ ಬಲಿಷ್ಠವಾಗಿ ನಿಂತಿದ್ದಾರೆ' ಎಂದದು ಹೇಳಿತು. ಈ ನಿರ್ಧಾರ ರಾಜಕೀಯ ಪ್ರೇರಿತವಲ್ಲ ಎಂದೂ ಸಾರಿತು. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ. ಆಂಧ್ರದ ಮುಖ್ಯಮಂತ್ರಿ ಮತ್ತು ಕೇಂದ್ರ ಕ್ಯಾಬಿನೆಟ್‌ನ ಐವರು ತೆಲುಗು ಮಂತ್ರಿಗಳು ಪಕ್ಷದ ಈ ನಿರ್ಧಾರಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಅದಾಗಲೇ ಹಲವಾರು ಶಾಸಕರು ರಾಜಿನಾಮೆ ನೀಡಿದ್ದಾರೆ. ಸ್ವಹಿತಾಸಕ್ತಿಯಿಂದಲೇ ಕಾಂಗ್ರೆಸ್ ಈ ಹೆಜ್ಜೆಯಿಟ್ಟಿದೆ ಎನ್ನುವುದು ನಿಶ್ಚಿತ.
ಮೊದಲನೆಯದಾಗಿ, ಜಗಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ರಾಯಲಸೀಮಾ ಮತ್ತು ಕರಾವಳಿ ಪ್ರದೇಶಗಳ ಜನರ ಮನಸ್ಸನ್ನು ಗೆಲ್ಲುತ್ತಾ ಹೊರಟಿದೆ. ಹಾಗಾಗೆ, ಒಂದೋ ತೆಲಂಗಾಣಾ ಕಾರ್ಡ್‌ನೊಂದಿಗೆ ಆಡಬೇಕು ಇಲ್ಲವೇ ಇಡೀ ಆಂಧ್ರವನ್ನು ಕಳೆದುಕೊಳ್ಳಬೇಕು ಎಂಬ ಎರಡೇ ಆಯ್ಕೆಗಳು ಕಾಂಗ್ರೆಸ್‌ನ ಎದುರು ಉಳಿದದ್ದು. ಇನ್ನು ಪ್ರತ್ಯೇಕ ತೆಲಂಗಾಣ ರಚನೆಗಾಗಿ ಬಿಜೆಪಿ ಎಂದಿನಿಂದಲೋ ಮನಸ್ಸು ಮಾಡಿತ್ತು. ಅಧಿಕಾರ ದೊರಕಿದೊಡನೆ(ಒಂದು ವೇಳೆ) ಅದು ಈ ಹೊಸ ರಾಜ್ಯ ರಚನೆಗೆ ಅಸ್ತು ಅನ್ನುತ್ತಿತ್ತು. ಈ ಕ್ರೆಡಿಟ್ ಅನ್ನು ಬಿಜೆಪಿಗೆ ಬಿಟ್ಟು ಕೊಡುವುದು ಕಾಂಗ್ರೆಸ್‌ಗೆ ಇಷ್ಟವಿರಲಿಲ್ಲ. ತೆಲಂಗಾಣ ಆಂಧ್ರದ ಒಟ್ಟು 42 ಸಂಸತ್ ಸ್ಥಾನಗಳಲ್ಲಿ 17 ಸ್ಥಾನಗಳನ್ನು ಹೊಂದಿದೆ. ಇನ್ನು 294ರಷ್ಟಿರುವ ಅಸೆಂಬ್ಲಿ ಸೀಟುಗಳಲ್ಲಿ ತೆಲಂಗಾಣಾದ ಪಾಲು 119 ಸ್ಥಾನಗಳು. ಈಗ ತೆಲಂಗಾಣಾ ರಾಜ್ಯ ರಚನೆ ಮಾಡಿ ಕಾಂಗ್ರೆಸ್ ಲಾಭಮಾಡಿಕೊಳ್ಳಲಿದೆ ಎನ್ನುವುದಂತೂ ಸುಳ್ಳಲ್ಲ.
ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣಕ್ಕೆ ಒಂದು ವಿಡಂಬನಾತ್ಮಕ ಹಿನ್ನೆಲೆಯನ್ನು ಒದಗಿಸುತ್ತದೆ ಇತಿಹಾಸ. 1920ರಲ್ಲಿ, ಅಂದರೆ ಕಾಂಗ್ರೆಸ್ ರಾಜಕೀಯ ಪಕ್ಷವಾಗಿರದೆ ಕೇವಲ ರಾಷ್ಟ್ರೀಯ ಆಂದೋಲನದ ರೂಪದಲ್ಲಿದ್ದಾಗ, ಅದರ ನಾಯಕರು ಭಾರತದಲ್ಲಿ 'ಭಾಷಾವಾರು ಪ್ರಾಂತಗಳ ರಚನೆಯಾಗಬೇಕು' ಎಂದು ಹಠಹಿಡಿದರು. ಆ ಸಮಯದಲ್ಲಿ ಇದು ತಾರ್ಕಿಕವಾಗೇ ಕಂಡಿತು. ಏಕೆಂದರೆ ಬ್ರಿಟಿಷರ ವಸಾಹತು ಶೈಲಿಯ ವಿಭಜನೆಯಿಂದ ಸ್ಥಳೀಯ ಸಂಸ್ಕೃತಿಗಳಿಗೆ ಆಗ ಭಾರೀ ಹೊಡೆತ ಬೀಳುತ್ತಿತ್ತು.
ಸ್ವಾತಂತ್ರ್ಯಾ ನಂತರ ಇದೇ ನಾಯಕರು 'ಭಾಷಾವಾರು ಗುರುತನ್ನು' ಪ್ರೋತ್ಸಾಹಿಸುವ ಇನ್ನೊಂದು ದುಸ್ಸಾಹಸಕ್ಕೆ ಇಳಿದರು. ಡಾ. ರಾಜೇಂದ್ರ ಪ್ರಸಾದ್ ಅವರ ಆದೇಶದ ಮೇರೆಗೆ ಭಾಷಾ ಪ್ರಾಂತಗಳ ಸಮಿತಿಯೊಂದನ್ನು 1948ರಲ್ಲಿ ರಚಿಸಲಾಯಿತು. ಆದರೆ ಈ ಸಮಿತಿ, ಭಾಷೆಯ ಆಧಾರದ ಮೇಲೆ ವಿಂಗಡಣೆ ನಡೆದರೆ ದೇಶಕ್ಕೆ ಹೊಡೆತ ಬೀಳಲಿದೆ ಎಂದು ಹೇಳಿತಲ್ಲದೆ, ಬಾಂಬೆ, ಮದ್ರಾಸ್ ಮತ್ತು ಕೇಂದ್ರೀಯ ಪ್ರಾಂತಗಳನ್ನು 'ಭೌಗೋಳಿಕ ಮುಂದುವರಿಕೆ, ಆರ್ಥಿಕ ಸ್ವಾವಲಂಬನೆ ಮತ್ತು ಆಡಳಿತದ ಅನುಕೂಲತೆಗಳ' ಆಧಾರದ ಮೇಲೆ ಪುನಾರಚನೆ ಮಾಡಬೇಕೆಂದು ಶಿಫಾರಸು ಮಾಡಿತು.
ಈ ಯೋಜನೆಯೇನಾದರೂ ಸರಿಯಾದ ಸಮಯದಲ್ಲಿ ಜಾರಿಗೆ ಬಂದಿದ್ದರೆ, ಗುಜರಾತ್ ಮತ್ತು ಮಹಾರಾಷ್ಟ್ರದ ಮಧ್ಯೆ 'ಬಾಂಬೆ'ಯ ವಿಷಯವಾಗಿ ವೈಮನಸ್ಸು ಉಂಟಾಗುತ್ತಿರಲಿಲ್ಲ. ಅಲ್ಲದೆ ಮದ್ರಾಸ್‌ನ ವಿಷಯವನ್ನು ಮರೆತು ಆಂಧ್ರಪ್ರದೇಶ ಹಾಯಾಗಿರುತ್ತಿತ್ತು. ಆದರೆ 1952ರಲ್ಲಿ ಪೊಟ್ಟಿ ಶ್ರೀರಾಮುಲು ಆಮರಣಾಂತ ಉಪವಾಸ ಆಚರಿಸಿ ಸಾಯುವವರೆಗೂ ನೆಹರು ಈ ವಿಷಯವಾಗಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದಾದ ಒಂದು ವರ್ಷದಲ್ಲೇ ನೆಹರು ಸರ್ಕಾರ ರಾಜ್ಯಗಳ ಪುನಾರಚನಾ ಸಮಿತಿಯನ್ನು ರಚಿಸಿತು. ಭಾಷೆಯ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಮೊದಲ ರಾಜ್ಯ ಆಂಧ್ರಪ್ರದೇಶವಾಯಿತು. ಇನ್ನು ಗುಜರಾತ್ ಮತ್ತು ಅದರಲ್ಲೂ ಮುಖ್ಯವಾಗಿ ಬಾಂಬೆ ನಗರದ ಕುರಿತ ತೀರ್ಮಾನದಲ್ಲಿ ವಿಳಂಬವಾಗಿದ್ದರಿಂದ ಎಷ್ಟೋ ಗಲಭೆಗಳಾದವು, ಜೀವಹಾನಿಗಳಾದವು. ಸನ್ನಿವೇಶ ಕುತ್ತಿಗೆಗೆ ಬಂದಾಗ ಕಾಂಗ್ರೆಸ್ ಕಾಗದದ ಮೇಲೆ ಮುದ್ರೆಯೊತ್ತಿತು. ಇಂಥ ದೂರದೃಷ್ಟಿಯ ಕೊರತೆಯನ್ನೇ ಇಂದಿನ ಕಾಂಗ್ರೆಸ್ ಕೂಡ ಪ್ರದರ್ಶಿಸುತ್ತಿದೆಯೇ?
ಅಚ್ಚರಿಗೊಳಿಸುವಂಥ ವೈವಿಧ್ಯತೆ ಹೊಂದಿರುವ ದೇಶದಲ್ಲಿ, ವೈಜ್ಞಾನಿಕವಾಗಿ ವಿಸ್ತೃತವಾದ ಪರಿಕಲ್ಪನೆಯ ಮೇಲೆ ರಾಜ್ಯಗಳ ನಿರ್ಮಾಣವಾಗಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಅಂಥ ಸಂದರ್ಭದಲ್ಲಿ, ರಾಜಧಾನಿಯಿಂದ ದೂರವಿರುವುದರಿಂದ ನಿರ್ಲಕ್ಷ್ಯಕ್ಕೊಳಗಾದ ಪ್ರದೇಶಗಳು ಏಳಿಗೆ ಕಾಣುತ್ತಿದ್ದವು. ಆದರೆ ಇಂಥ ವಿಷಯಗಳ ಬಗ್ಗೆ ಥಟ್ಟನೆ ನಿರ್ಧಾರ ಕೈಗೊಳ್ಳುವುದು ತರವಲ್ಲ. ದೂರದೃಷ್ಟಿ, ಬುದ್ಧಿವಂತಿಕೆಯಿಂದ ರಾಜ್ಯಗಳ ರಚನೆಗೆ ಮುಂದಾಗಬೇಕು. ಆ ದೂರದೃಷ್ಟಿ ದೇಶಕ್ಕೆ ಒಳಿತುಮಾಡುವುದಕ್ಕೆ ಇರಬೇಕೇ ಹೊರತು ಪಕ್ಷಕ್ಕೆ ಲಾಭವಾಗಲಿ ಎಂಬ ಕಾರಣಕ್ಕಲ್ಲ. ಕಾಂಗ್ರೆಸ್‌ನ ಇಂಥ ನಡೆಯಿಂದಾಗಿಯೇ ಅಂದು ಹಿಂಸಾಚಾರದಲ್ಲಿ ಆಂಧ್ರ ಹುಟ್ಟಿಕೊಂಡಿತು, ಇಂದು ಹಿಂಸಾಚಾರದಲ್ಲಿ ಅದು ಅವಸಾನ ಕಂಡಿತು.
 ಆಡಳಿತ ವರ್ಗದ ಈ ಸಿನಿಕತೆ ಮುಂದುವರಿದದ್ದೇ ಆದರೆ, 29 ರಾಜ್ಯಗಳ ಭಾರತ, ಕೆಲವೇ ಸಮಯದಲ್ಲಿ 35-40 ರಾಜ್ಯಗಳ ಭಾರತವಾಗಿ ಬದಲಾದೀತು. ಅಂದರೆ ನೀವೇ ಲೆಕ್ಕ ಹಾಕಿ. ಅಷ್ಟೊಂದು ರಾಜ್ಯಪಾಲರುಗಳು, ಮುಖ್ಯಮಂತ್ರಿಗಳು, ಶಾಸಕರು! ಇದರಿಂದಾಗಿ ಜನತೆ ಇನ್ನಷ್ಟು ಸಮಸ್ಯೆಗಳ ಸುಳಿಗೆ ಸಿಲುಕುತ್ತಾ ಹೋಗುತ್ತಾರೆ. ಈಗ ಗೋರ್ಖಾಲ್ಯಾಂಡ್, ಬೋಡೋಲ್ಯಾಂಡ್ ಮತ್ತು ಕರ್ಬಿ ಆ್ಯಂಗ್‌ಲಾಂಗ್(ಅಸ್ಸಾಂ)ನ ರಚನೆಗಾಗಿ ನಡೆಯುತ್ತಿರುವ ಹೋರಾಟ ಹಿಂಸೆಯ ರೂಪ ಪಡೆದಿದೆ,  ವಿದರ್ಭದ ಸದ್ದು ಜೋರಾಗುತ್ತಿದೆ! ಇಂಥ ಕ್ಲಿಷ್ಟ ಸಮಸ್ಯೆಗೆ ಪರಿಹಾರಕಂಡುಕೊಳ್ಳಲು ಆಡಳಿತ ಮತ್ತು ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ 'ಏಕ' ನಿರ್ಧಾರಕ್ಕೆ ಬರಬೇಕು. ವಿವೇಕಯುತ ನಡೆಯೆಂದರೆ ಈಗ ಮತ್ತೊಂದು 'ರಾಜ್ಯಗಳ ಪುನಾರಚನಾ ಸಮಿತಿ'ಯನ್ನು ರಚಿಸಬೇಕು. ಹಾಗಾದಾಗ ಮಾತ್ರ ಸಮಗ್ರ, ನಿಯಂತ್ರಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ಮಾಡುವುದು ಸಾಧ್ಯವಾಗುತ್ತದೆ. 'ಭಾರತ ಚಿಕ್ಕ ಚಿಕ್ಕ ರಾಷ್ಟ್ರಗಳಾಗಿ ಕಾಣೆಯಾಗುತ್ತದೆ' ಎಂದು ವಿನ್ಸ್‌ಟನ್ ಚರ್ಚಿಲ್ ಕುಹಕವಾಡಿದ್ದರು. ಒಂದು ವೇಳೆ ಸರ್ಕಾರ ತನ್ನ ಸ್ವಾರ್ಥ ಮತ್ತು ಕುಟಿಲತೆಯನ್ನು ಬಿಡದಿದ್ದರೆ, ವಿನ್ಸ್‌ಟನ್ ಚರ್ಚಿಲ್ ಹೇಳಿದ ಮಾತು ನಿಜವಾಗುತ್ತದೆ!

-ಟಿ ಜೆ ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ