ಪ್ರತಿವಾದಕ್ಕೆ ಧನ್ಯವಾದ ಆದರೇಕೆ ದ್ವಂದ್ವ?
ಬೈಟುವಿನಲ್ಲಿ ಬರುವ 'ಅನೇಕ', 'ರನ್ವೇ' ಬಹಳ ಉತ್ತಮವಾಗಿದೆ ಎಂದು ನನ್ನ ಅನಿಸಿಕೆ. ಇದನ್ನು ಬಿಡದೆ ಮೊದಲು ಓದುವೆನು ಹಾಗೂ ಆ ಭಾಗವನ್ನು ಕತ್ತರಿಸಿ ಪುಸ್ತಕದಲ್ಲಿ ಅಂಟಿಸುತ್ತಿರುವೆನು. ಈ ಭಾಗವನ್ನು ಬರೆಯುವವರು ಅದನ್ನು ಪುಸ್ತಕ ರೂಪದಲ್ಲಿ ಬರೆದು ಪ್ರಕಟಿಸಿದರೆ ಓದುವ ಹವ್ಯಾಸವಿರುವವರಿಗೆ ಉತ್ತಮವಾದ ಕೃತಿಯಾಗಬಹುದು. ಓದಿದ ಮೇಲೆ ತಮ್ಮ ಸ್ವಭಾವ ಮತ್ತು ನಡವಳಿಕೆಯನ್ನು ಉತ್ತಮಪಡಿಸಿಕೊಳ್ಳಬಹುದು.
-ಕೆ. ನಾಗರಾಜ, ಎನ್ಹೆಚ್ಸಿಎಸ್ ಲೇಔಟ್, ವಿಜಯನಗರ, ಬೆಂಗಳೂರು, ದೂ. 23111 213.
ಜುಲೈ 29ರ ವಿನಾಯಕಭಟ್ಟ ಮೂರೂರುರವರ "ಮಕ್ಕಳು ಶೌಚಾಲಯ ತೊಳೀಬಾರ್ದು ಅಂದ್ರೆ ಇನ್ಯಾರು ತೊಳೀಬೇಕು?" ನಿಜಕ್ಕೂ ವಾಸ್ತವತೆಯಿಂದ ಕೂಡಿದ ಲೇಖನವೆನ್ನಬಹುದು. ಕೆಲವೇ ದಿನಗಳ ಹಿಂದೆ ಇದಕ್ಕೆ ಸಂಬಂಧಿಸಿದ ವರದಿ ಪ್ರಕಟವಾಗಿತ್ತು. ರಾಮನಗರದ ಕೊತ್ತಿಪುರ ಶಾಲೆಯಲ್ಲಿ ಶೌಚಾಲಯ ತೊಳೆದ ವಿದ್ಯಾರ್ಥಿಗಳ ಬಗ್ಗೆ 'ಕನ್ನಡಪ್ರಭ'ದಲ್ಲೇ ಬರೆಯಲಾಗಿತ್ತು. ಯಾರೇ ಈ ವರದಿಯನ್ನು ಓದಿದ್ದರೂ, ಅದೊಂದು 'ವೈಭವೀಕೃತ ವರದಿ'- ಎನಿಸುತ್ತಿತ್ತಾದರೂ 'ಕನ್ನಡಪ್ರಭದಲ್ಲಿ ಮಾತ್ರ' ಎಂಬ ಗಂಭೀರವಾಕ್ಯದೊಡನೆ ಪ್ರಕಟವಾಗಿತ್ತು. ಆದರೆ ಅಂದಿನ ವರದಿಯ ಎಲ್ಲಾ ಪ್ರಶ್ನೆಗಳಿಗೂ ಲೇಖನ ಸಮಜಾಯಿಷಿ ನೀಡುವಂತಿತ್ತು. ಪತ್ರಿಕೆಗಳು ಸುದ್ದಿಯ ಜೊತೆಗೆ ನೈತಿಕಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿ ಹೊಂದಿರಬೇಕಾದ್ದು ಅಪೇಕ್ಷಿತ. ಶಿಕ್ಷಕರೂ ಕೂಡ ಸಮಾಜದ ಒಂದು ಬಿಂದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿತ್ತಲ್ಲವೇ? ನಾವು ಮಾಡಿದ (ಮಕ್ಕಳು) ಮಲಮೂತ್ರಗಳನ್ನು ನಾವೇ ತೊಳೆದುಕೊಳ್ಳಬೇಕು-ಎನ್ನುವ ಸಾಮಾನ್ಯ ಪ್ರಜ್ಞೆಯನ್ನು ಬೆಳೆಸದ ಶಾಲೆ-ಶಿಕ್ಷಣ ಅಪ್ರಯೋಜಕವಲ್ಲವೆ? ಅಂತೂ ಒಂದೇ ಪತ್ರಿಕೆಯಲ್ಲಿ ಈ ದ್ವಂದ್ವಗಳು ಪ್ರಕಟವಾಗಿದ್ದರೂ ಪತ್ರಿಕೆಯ ನಿಷ್ಪಕ್ಷಪಾತವಾದ ಪ್ರತಿವಾದಕ್ಕೆ ಧನ್ಯವಾದಗಳು.
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ ಜಿಲ್ಲೆ.
ದಿನಾಂಕ 31.07.13ರಲ್ಲಿ ಪ್ರಕಟವಾದ "ನೀರು ಕೊಡುವ ಕೊಡಗಿಗೆ ನಾವು ಕೊಟ್ಟಿದ್ದೇನು?", ಕೆ.ಎನ್. ರವಿಯವರ ವಿಶೇಷ ಲೇಖನ ಓದಿ ಮನಸ್ಸು ತುಂಬಿ ಬಂತು. ಸಾಮಾನ್ಯವಾಗಿ ಕೊಡಗಿನವರ ಆಚಾರ- ಸಂಸ್ಕೃತಿ ಇವೆಲ್ಲವನ್ನೂ ನೋಡಿ ಕೊಡಗಿನ ಜನರೆಲ್ಲಾ ಶ್ರೀಮಂತರು ಎನ್ನುವ ತಪ್ಪಾದ ಭಾವನೆ ಜನರ ಮನಸ್ಸಿನಲ್ಲಿದೆ. ಕೊಡಗಿನಲ್ಲಿ ಕಾಫಿ ಬೆಳೆ ಮುಖ್ಯವಾದರೂ ಕಾಫಿ ತೋಟದ ನಿರ್ವಹಣೆ ಸಾಮಾನ್ಯ ಬೆಳೆಗಾರರಿಗೆ ತುಂಬಾ ತ್ರಾಸದಾಯಕ. ಹಿಂದಿನಂತೆ ಈಗ ಕೊಡಗಿನ ಮೂಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ, ದುಪ್ಪಟ್ಟು ಹಣ ನೀಡಿ ಹೊರಗಿನಿಂದ ಕಾರ್ಮಿಕರನ್ನು ಕರೆ ತರುವುದು ಅನಿವಾರ್ಯವಾಗಿದೆ. ಈ ವರ್ಷದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಬೆಳೆಗಾರರಲ್ಲಿ ತೀವ್ರ ಆತಂಕ ಮನೆಮಾಡಿದೆ. ಕಾಡಾನೆ ಹಾವಳಿಯಿಂದಲೂ ಹಲವು ಪ್ರದೇಶಳಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿವೆ. 1956ರ ವಿಲೀನ ಸಂದರ್ಭದಲ್ಲಿ ಅಂದಿನ ಸರ್ಕಾರ ಕೊಡಗಿನ ಅಭಿವೃದ್ಧಿಯ ಬಗ್ಗೆ ಭರವಸೆಯ ಮಹಾಪೂರವನ್ನೇ ಹರಿಸಿತ್ತು. ಆದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತರುವ ಈ ಪುಟ್ಟ ಜಿಲ್ಲೆಯನ್ನು ಅಂದಿನಿಂದ-ಇಂದಿನವರೆಗಿನ ಎಲ್ಲಾ ಸರ್ಕಾರಗಳು ಕಡೆಗಣಿಸುತ್ತಾ ಬಂದಿದೆ. ಸಣ್ಣ-ಪುಟ್ಟ ವಿಷಯಗಳಿಗೂ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
-ದರ್ಶನ್ ಸುಬ್ಬಯ್ಯ, ಮೈಸೂರು
ದಿನಾಂಕ 28ರ ಕ.ಪ್ರ. ಪತ್ರಿಕೆಯಲ್ಲಿ "ವಕ್ರತುಂಡೋಕ್ತಿ"ಗೆ ವೈಯೆನ್ಕೆ ಅವರೇ ಸ್ಫೂರ್ತಿ ಎಂಬುದಾಗಿ ವಿವರಿಸಲಾಗಿದೆ. ಸ್ವರ್ಗದಲ್ಲಿರುವ ವೈಯೆನ್ಕೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿಯಿಂದ, ಅವರನ್ನು ಲೇಖನದಲ್ಲಿ ಸಿಕ್ಕಿ ಹಾಕಿಸಿ, ತಾನು ತುಂಬ ಸಭ್ಯನೆಂಬ ಸೋಗು ಹಾಕಿ, ಓದುಗರ ಅನುಕಂಪ ಗಿಟ್ಟಿಸಲು ಯತ್ನಿಸಿದ ಭಟ್ಟರು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. 29ರ ಸೋಮವಾರದ ಪತ್ರಿಕೆಯಲ್ಲಿ, ಗಂಡನಿಗೆ ಹೊಡೆಯಲು, ಟೇಬಲ್ ಭಾರವಾದ್ರಿಂದ, ಹೆಂಡತಿಯರು ಕುರ್ಚಿಯನ್ನೆತ್ತಿ ಹೊಡೆಯುತ್ತಾರೆ ಎಂಬ ವಕ್ರತುಂಡೋಕ್ತಿಯಿದೆ. ಹೆಂಗಸರು ಅಷ್ಟು ದುರ್ಬಲರಲ್ಲ. ಕೋಪ ಬಂದಾಗ, ಹೆಂಡತಿಯರಿಗೆ ವಿಪರೀತ ಶಕ್ತಿ ಬರುತ್ತದೆ. ಟೇಬಲ್ ಎತ್ತಲು ಕಷ್ಟವಾದರೆ, ಗಂಡನನ್ನೇ ಟೇಬಲ್ ಮೇಲೆ ಕುಕ್ಕಿ, ನಂತರ ಕುರ್ಚಿಯನ್ನೆತ್ತಿ ಆತನಿಗೆ ಹೊಡೆಯಬಹುದು. ಕನ್ನಡ ಸಿನಿಮಾದ ಪ್ರಣಯದ ಹಾಡಿನ ಸನ್ನಿವೇಶವೊಂದರಲ್ಲಿ, ಭಾರತಿ ಅನಾಯಾಸವಾಗಿ ರಾಜ್ಕುಮಾರ್ರನ್ನು ಎತ್ತಿದ್ದರು. ಟೇಬಲ್ಗಿಂತ ರಾಜಕುಮಾರ್ ತುಂಬಾ ಭಾರವಿದ್ದರೂ ಕೂಡಾ, ಭಾರತಿ ಭಾರದ ವಿಷಯದಲ್ಲಿ ತಲೆ ಬಿಸಿ ಮಾಡಿಕೊಳ್ಳಲಿಲ್ಲ. ಇದು ನಿಜಕ್ಕೂ ಮಹಿಳೆಯರು ಹೆಮ್ಮೆ ಪಡುವ ವಿಷಯ. ಈ ಹಾಡಿನ ದೃಶ್ಯ ಭಟ್ಟರು ಮರೆತಿರಬಹುದು ಅಥವಾ ಜಾಣಮರೆವು ಇದ್ದಿರಲಿಕ್ಕೂ ಸಾಕು.
-ಜಯಶ್ರೀ ಕೆ., ಮೈಸೂರು.
ಕಾರ್ಗಿಲ್ ವಿಜಯದ ರೂವಾರಿಗಳಾದ ನಮ್ಮ ವೀರಸೈನಿಕರ ಅರ್ಪಣಾ ಮನೋಭಾವ, ತ್ಯಾಗಗಳನ್ನು ಸವಿವರವಾಗಿ ಚಿತ್ರಿಸಿರುವ ಲೇಖನಗಳನ್ನು ಸಂದರ್ಭೋಚಿತವಾಗಿ ಪ್ರಕಟಿಸಿ ಕನ್ನಡಪ್ರಭ ಕರ್ತವ್ಯಪ್ರಜ್ಞೆ ಮೆರೆದಿದೆ. ದೇಶವಿರೋಧಿ, ವಿದ್ರೋಹಿ ಉಗ್ರರ ವಿರುದ್ಧ ನಮ್ಮ ರಾಜಕಾರಣಿಗಳು ವಕಾಲತ್ತು ವಹಿಸುತ್ತಿರುವ ಸಂದರ್ಭದಲ್ಲಿ ದೇಶ ಕಾಯುವ ಸೈನಿಕರಿಗೆ ಜನಸಾಮಾನ್ಯರೆಲ್ಲಾ ಬೆಂಬಲವಾಗಿ ನಿಲ್ಲಬೇಕಾಗಿದೆ. ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ.
-ಕೆ.ಎಂ. ಲಿಂಗರಾಜು, ನಂಜನಗೂಡು, ಮೊ. 99160 21365
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.