ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸತ್ಯ ಹೇಳಿದವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗವೇಕೆ?

Srinivasa Murthy VN
Updated On : 3 Aug 2013, 9:43 am

ಭೂ ಒತ್ತುವರಿ ವಿಷಯದಲ್ಲಿ ರಾಜಕಾರಣಿಗಳ ಹೆಸರು ಉಲ್ಲೇಖಿಸಿದರು ಎಂಬ ಕಾರಣಕ್ಕೆ ಬಾಲಸುಬ್ರಮಣಿಯಂ ಅವರ ವಿರುದ್ಧ ಹಕ್ಕುಚ್ಯುತಿಯ ಮಾತನಾಡುತ್ತಿರುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯ ಒತ್ತುವರಿಗೆ ಸಂಬಂಧಿಸಿದಂತೆ ಈ ಹಿಂದೆ ರಚಿತವಾಗಿದ್ದ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಎ. ಟಿ. ರಾಮಸ್ವಾಮಿ

ಬೆಂಗಳೂರು ಸುತ್ತಮುತ್ತ ನಡೆದಿರುವ ಭಾರಿ ಅಕ್ರಮ ಭೂ ಒತ್ತುವರಿ ಬಗ್ಗೆ ತನಿಖೆ ನಡೆಸಲು 2006 ರಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿ ಭೂಮಾಫಿಯಾ ಮತ್ತು ಅಧಿಕಾರಸ್ಥರ ನಡುವಿನ ಅಪವಿತ್ರ ನೆಂಟಸ್ಥಿಕೆಯನ್ನು ಬಟಾ ಬಯಲು ಮಾಡುವ ಮೂಲಕ ದಕ್ಷತೆ ಮೆರೆದಿದ್ದ ಎ.ಟಿ.ರಾಮಸ್ವಾಮಿ ಎಂತಹ ಕಠಿಣ ಸಂದರ್ಭದಲ್ಲೂ ತಮ್ಮ ಪ್ರಾಮಾಣಿಕತೆಯನ್ನು ಬಿಟ್ಟುಕೊಟ್ಟು ರಾಜಕಾರಣ ಮಾಡಿದರವರಲ್ಲ. ಈ ಕಾರಣಕ್ಕೇನೆ ಚುನಾವಣೆಗಳಲ್ಲಿ ಅವರು ಸೋತಿರಬಹುದು. ಆದರೆ ಅವರಲ್ಲಿ ಇರುವ ಅವ್ಯವಸ್ಥೆಯ ವಿರುದ್ಧ ದನಿ ಮಾಡಬೇಕೆಂಬ ಮನೋಧೋರಣೆ ಕುಗ್ಗಿಲ್ಲ. ಇತ್ತೀಚೆಗೆ ಬಾಲ ಸುಬ್ರಮಣಿಯನ್ ಅವರು, ಭೂ ಒತ್ತುವರಿ ಮಾಡಿಕೊಂಡ ಬಗ್ಗೆ ನೀಡಿದ ಹೇಳಿಕೆಗೆ ಹಕ್ಕುಚ್ಯುತಿ ಮಂಡಿಸಬೇಕೆಂಬ ರಾಜಕಾರಣಿಗಳ ವಾದ ಮತ್ತಿತರ ವಿಚಾರಗಳ ಬಗ್ಗೆ 'ಕನ್ನಡಪ್ರಭ'  ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

-ಭೂ ಒತ್ತುವರಿ ರಾಜಕಾರಣಿಗಳಿಂದಲೂ ನಡೆದಿದೆ ಎಂದು ಬಾಲಸುಬ್ರಮಣಿಯನ್ ಹೇಳಿಕೆ ಖಂಡಿಸಿ ಹಕ್ಕುಚ್ಯುತಿ ಮಂಡಿಸಲು ಒತ್ತಾಯ ಹೇರಲಾಗುತ್ತಿದೆ  
ವಿಧಾನಸಭೆಯ ಎರಡು ಸದನಗಳಲ್ಲಿ ಬಾಲಸುಬ್ರಮಣಿಯನ್ ಹೇಳಿಕೆ ಬಗ್ಗೆ ಹಕ್ಕುಚ್ಯುತಿ ಮಂಡಿಸಬೇಕೆಂದು ಆಗ್ರಹಿಸಿರುವುದು ಸದನದೊಳಗೆ ನಡೆದಿರುವ ಒಳ ವ್ಯವಹಾರ.  ಆದರೆ  ಇಂದು ಸಾರ್ವಜನಿಕರ ಆಸ್ತಿಪಾಸ್ತಿ ಕಬಳಿಸುತ್ತಿರುವ ಭೂಮಾಫಿಯಾಗಳು ಮತ್ತು ಅವರೊಂದಿಗೆ ಅಪವಿತ್ರ ನೆಂಟಸ್ಥಿಕೆ ಮಾಡಿಕೊಂಡು ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಬಗ್ಗೆ  ಗಂಭೀರ ಚರ್ಚೆ, ವಿಮರ್ಶೆ ನಡೆಯಬೇಕಾದ ಅಗತ್ಯವಿದೆ. ಅದನ್ನು ಬಿಟ್ಟು ಸತ್ಯ ಹೇಳಿದವರ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೋದರೆ ಭ್ರಷ್ಟ ವ್ಯವಸ್ಥೆ ತೊಲಗುವುದು ಯಾವಾಗ?

-ಹಾಗಿದ್ದರೆ ಆಳುವ ಸರ್ಕಾರಗಳು ಏನು ಮಾಡಬೇಕು ಅಂತಾ ಹೇಳ್ತೀರಿ?
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಧಾನಮಂಡಲದ ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಚರ್ಚೆ ನಡೆದು ಭೂಕಬಳಿಕೆ ನಿಷೇಧ 2007 ವಿಧೇಯಕಕ್ಕೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ಅದನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಡಬೇಕಿತ್ತು. ಅದಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ವಿಧೇಯಕ ಕಾಯ್ದೆಯಾಗಿ ಜಾರಿಗೊಂಡಿದ್ದರೆ ಭೂಕಬಳಿಕೆ ಬಗ್ಗೆ ವಿಚಾರಣೆ ನಡೆಸಲೆಂದೇ ಪ್ರತ್ಯೇಕ ಕೋರ್ಟ್ ಸ್ಥಾಪನೆಯಾಗುತ್ತಿತ್ತು. ಪ್ರಕರಣಗಳು 6 ತಿಂಗಳಲ್ಲಿ ಇತ್ಯರ್ಥವಾಗುತ್ತಿದ್ದವು. ತಪ್ಪಿತಸ್ಥರಿಗೆ ಶಿಕ್ಷೆ ಮಾತ್ರ ಅಲ್ಲ, ಕಬಳಿಕೆ ಮಾಡಿಕೊಂಡಿದ್ದ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕಿತ್ತು. ದುರದೃಷ್ಟವಶಾತ್ ಕೇಂದ್ರ ಒಪ್ಪಿಗೆ ನೀಡಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡದೇ ಇರುವುದು ವಿಷಾದನೀಯ.

-ಪರಿಸ್ಥಿತಿ ಹೀಗೇ ಮುಂದುವರಿದರೆ ಇದನ್ನೆಲ್ಲ ತಪ್ಪಿಸುವುದು ಹೇಗೆ?
ಏನಿಲ್ಲಾ, ಈಗ ನೋಡಿ ಜೆಡಿಎಸ್ ಬಿಜೆಪಿ ಸರ್ಕಾರ ಪತನಗೊಂಡ ನಂತರದಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್, ಸದಾನಂದಗೌಡರಲ್ಲದೇ, ಈಗಿನ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು 'ಭೂಕಬಳಿಕೆ, ಒತ್ತುವರಿ ಬಗ್ಗೆ ಕಠಿಣ ಕ್ರಮ ಜರುಗಿಸುತ್ತೇವೆ ಎ.ಟಿ.ರಾಮಸ್ವಾಮಿ ವರದಿ, ಸುಬ್ರಮಣಿಯನ್ ವರದಿ ಅನುಷ್ಠಾನಗೊಳಿಸಲಾಗುವುದು' ಅಂತ ಹೇಳ್ತಾನೇ ಇದ್ದಾರೆ. ಅನುಷ್ಠಾನಕ್ಕೆ ತರುವದಿಟ್ಟತನ, ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು.

-ದಿನೇ ದಿನೇ ಭೂ ಒತ್ತುವರಿ ಹೆಚ್ಚಾಗುತ್ತಿದೆ ಎಂಬ ಬಗ್ಗೆ ಏನು ಹೇಳ್ತೀರಿ?
ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿ ಮೇಲೆ ಹಕ್ಕು ಸ್ಥಾಪನೆ ಮಾಡುವುದು ಇಂದಿನ ದಿನಗಳಲ್ಲಿ ಸುಲಭವಾಗಿದೆ. ಇದಕ್ಕೆ ಕಾರಣ ನಮ್ಮ ಕಾನೂನುಗಳಲ್ಲಿ ಇರುವ ಉದಾರತೆ. ಈ ಉದಾರತೆಯನ್ನು ದುರುಪಯೋಗ ಮಾಡಿಕೊಂಡೇ ಕಾನೂನು ಬಾಹಿರ ಚಟುವಟಿಕೆಗಳನ್ನು ಸುಲಭವಾಗಿ ನಡೆಸಲಾಗುತ್ತಿದೆ.  ಇದು ಅಧಿಕಾರಿಶಾಹಿಯ ಪ್ರೋತ್ಸಾಹ, ಬೆಂಬಲ ಇಲ್ಲದೇ ನಡೆಯಲು ಸಾಧ್ಯವೇ ಇಲ್ಲ.  ಭೂಮಾಫಿಯ ಕೈ ಚಳಕ ನಡೆಸುವುದು ಅಧಿಕಾರಿಶಾಹಿಯ ಭ್ರಷ್ಟತೆಯಿಂದಲೇ. ಕಂದಾಯ ಇಲಾಖೆಯ ಮಾಹಿತಿ ಪ್ರಕಾರವೇ ಬೆಂಗಳೂರು ನಗರ ಮತ್ತು ಜಿಲ್ಲೆ ಸುತ್ತಮುತ್ತ 8334 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ.  ಇದನ್ನು ತಡೆಯುವ ಬಗ್ಗೆ ಯಾವುದೇ ಸರ್ಕಾರಗಳಿಗೂ ಬದ್ಧತೆ ಇಲ್ಲ. ವಿಧಾನಸಭೆಯಲ್ಲೋ, ಸುದ್ದಿಗೋಷ್ಠಿಯಲ್ಲೋ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಭೂ ಒತ್ತುವರಿ ಸೇರಿದಂತೆ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲು ವಿಶೇಷವಾಗಿ ಜನಪ್ರತಿನಿಧಿಗಳು ಮನಸು ಮಾಡಬೇಕು.

-ಭೂ ಒತ್ತುವರಿ ಯಲ್ಲಿ ರಾಜಕಾರಣಿಗಳು ಭಾಗಿ ಆಗಿದ್ದಾರೆ ಎಂದು ಹೇಳುತ್ತಿರುವ ನಡುವೆ ತಡೆಯಲು ಸಾಧ್ಯವೇ?
ಇಂದು ಪ್ರಜಾಪ್ರಭುತ್ವದ ಖರೀದಿ ನಡೆಯುತ್ತಿದೆ. ಹಣ ಚೆಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಕೆಟ್ಟ ವ್ಯವಸ್ಥೆ ಇದೆ. ಕೋಟಿಗಟ್ಟಲೇ ಹಣ ಸುರಿದು ಗೆಲ್ಲುವ ಮೂಲಕ ಪ್ರಜಾಪ್ರಭುತ್ವವನ್ನು ಖರೀದಿ ಮಾಡಲಾಗುತ್ತಿದೆ. ಜನರು ಸಾವಿರ ರು. ಕೊಟ್ಟವರಿಗೆ ಓಟು ಹಾಕೋದು ಎಂದು ಹೇಳುತ್ತಾರೆ. ಹನಿ ಹನಿಗೂಡಿದರೇ ಹಳ್ಳ ಎಂಬಂತೆ, ಪ್ರತಿಯೊಬ್ಬ ಮತದಾರರರು 'ಹಣ ಕೊಟ್ರು, ಓಟ್ ಹಾಕೋದೋ' ಅಂದು ಬಿಟ್ಟರೆ ಏನು ಮಾಡೋದು ಹೇಳಿ? ಚುನಾವಣೆಯಲ್ಲಿ ಗೆಲ್ಲಬೇಕಾದರೆ  ಭೂಮಾಫಿಯ ದಂಧೆ ಮಾಡಬೇಕು. ಇಲ್ಲ ಆ ದಂಧೆ ಮಾಡುವವರಿಂದ ಆರ್ಥಿಕ ನೆರವು ಪಡೆದುಕೊಳ್ಳಬೇಕು. ಇದರಿಂದಾಗಿ ಭೂಮಾಫಿಯವಲ್ಲದೇ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಭ್ರಷ್ಟಾಚಾರವನ್ನು ತಡೆಯಲು ಆಗುತ್ತಿಲ್ಲ. ಇಂದು ಲಿಕ್ಕರ್ ಮಾಫಿಯಾ ಕುಗ್ಗಿದೆ. ಆದರೆ ಶಿಕ್ಷಣ ಮತ್ತು ಭೂಮಾಫಿಯ ಬಲಾಢ್ಯ ಮತ್ತು ಪ್ರಭಾವಶಾಲಿಯಾಗಿವೆ.

-ಚುನಾವಣೆ ದುಬಾರಿ ಆಗುವುದನ್ನು ತಪ್ಪಿಸುವುದು ಹೇಗೆ?
ಸಿಂಪಲ್. ಜನರು ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಇನ್ನೊಂದು ವಿಷಯ, ಸಣ್ಣ ಪುಟ್ಟ ರೈತರು ಬದುಕುವ ಉದ್ದೇಶದಿಂದ ಕೊಂಚ ಭೂಮಿಯನ್ನು ಒತ್ತುವರಿ ಮಾಡಿಕೊಂಡರೆ ಹಠಾತ್ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ನುಂಗಿದವರ ವಿರುದ್ಧ ಚಕಾರ ಎತ್ತುವುದಿಲ್ಲ. ಏಕೆಂದರೆ ಅಧಿಕಾರಸ್ಥರ, ರಾಜಕಾರಣಿಗಳ ಸುತ್ತ ಮಾಫಿಯಾಗಳೇ ಸೇರಿ ಬಿಡುತ್ತಾರೆ. ಅವರನ್ನು ನಿಯಂತ್ರಿಸುವ ಶಕ್ತಿ ಇಲ್ಲ.

-ಇದಕ್ಕೆ ಕಾರಣ?
ಕಾರಣ ಏನು ಅಂದ್ರೆ, ಚುನಾವಣೆ ಕಾಲಕ್ಕೆ ಹಣ ನೀಡಿರುತ್ತಾರೆ. ಹಾಗಾಗಿ ಅವರ ಹಂಗಿಗೆ ಮುಲಾಜಿಗೆ ಈಡಾಗಬೇಕಾಗುತ್ತದೆ. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಶಾಸಕಾಂಗ, ಕಾರ್ಯಾಂಗ ಮಾತ್ರವೇ ಅಲ್ಲ ನ್ಯಾಯಾಂಗದಲ್ಲೂ ಭ್ರಷ್ಟಾಚಾರದ ಹೊಗೆಯಾಡುತ್ತಿದೆ. ನ್ಯಾಯಾಲಯ ಸೀತೆಯಂತೆ ಪರಿಶುದ್ಧವಾಗಿರಬೇಕು ಎಂಬುದು ಜನರ ನಿರೀಕ್ಷೆ ಮತ್ತು ಅಪೇಕ್ಷೆ.

-ಭೂ ಒತ್ತುವರಿ ಆಗಿರುವ ಬಗ್ಗೆ ತನಿಖೆ ನಡೆಸಿ ನೀಡಿದ ವರದಿಗಳ ಅನುಷ್ಠಾನ ಇಲ್ಲ. ಭೂ ಹಗರಣ ನಡೆಸಿದವರ ಬಗ್ಗೆ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರೆ ಯಾರು ತಾನೇ ಸತ್ಯ ಹೇಳೋಕೆ ಮುಂದೆ ಬರ್ತಾರೆ?
ಹಣ ಸುರಿದು ಗೆದ್ದ ಬಂದವರು, ಯಾರಾದರೂ ತಮ್ಮ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರೆ ಭಯ ಹುಟ್ಟಿಸುವುದು ಸಹಜ. ಎಂಥ ಕೆಟ್ಟ ವ್ಯವಸ್ಥೆ ಇದೆ ಅಂದ್ರೆ, ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ಇಟ್ಟಿದ್ದ ಠೇವಣಿ ಹಣವೇ ನಾಪತ್ತೆ ಆಗುತ್ತಾ ಇದೆ.  ಇದು ಸಣ್ಣ ವಿಷಯವೇ? ಇಂದು ರುಪಾಯಿ ಮೌಲ್ಯ ಡಾಲರ್ ಮುಂದೆ ಕುಸಿದು ಬೆಲೆಗಳು ಏರಿಕೆಯಾಗಲು ಕಾರಣ ಕಪ್ಪು ಹಣ ಹೇರಳವಾಗಿ ಹರಿದು ಬರುತ್ತಿರುವುದು. ಭೂ ಮಾಫಿಯಾದಿಂದಲೇ ಇಂದು ಕಪ್ಪು ಹಣ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಪ್ಪು ಹಣವನ್ನು ಭೂಮಿ ಮೇಲೆ ಹೂಡಲಾಗುತ್ತಿದೆ. ಅಲ್ಲದೇ ಅಮಾಯಕರಿಗೆ ಶಿಕ್ಷೆ ಆಗುತ್ತಿದೆ. ಬಲಾಢ್ಯರ ರಕ್ಷಣೆ ಆಗುತ್ತಿದೆ. ಇದು ನಿಲ್ಲಬೇಕು. ಸರ್ಕಾರಗಳು ತಾವೇ ನೇಮಿಸಿದ ಆಯೋಗ, ಸಮಿತಿಗಳು ನೀಡಿದ ವರದಿಯನ್ನು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಅನುಷ್ಠಾನಗೊಳಿಸಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕ್ರಮ ಜರುಗಿಸುವ ಮಾತುಗಳನ್ನು ನುಡಿಯುವುದು ಸಹ್ಯವಲ್ಲ. ಏನೇ ಇರಲಿ. ರಾಜಕಾರಣಿಗಳು ಸರಿ ದಾರಿಯಲ್ಲಿ ನಡೆದರೆ ಅಧಿಕಾರಿಶಾಹಿ ಸರಿ ದಾರಿಯಲ್ಲಿ ನಡೆಯುತ್ತದೆ. ಆಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಇದು ಸಾಧ್ಯವಾಗೋದು ಪ್ರಜಾಪ್ರಭುತ್ವ ಪ್ರಭುಗಳಾದ ಮತದಾರರು ಪ್ರಾಮಾಣಿಕರಿಗೆ ಮತ ನೀಡಿದಾಗ ಮಾತ್ರ.

-ದಯಾಶಂಕರ ಮೈಲಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement