ಹಸಿವು ನೀಗಿಸುವ ಯೋಜನೆಗೆ ವಿರೋಧವೇಕೆ?
ಈ ಯೋಜನೆ ಜಾರಿ ಸರ್ಕಾರಕ್ಕೆ ಸವಾಲಿನ ಕೆಲಸವೇ. ಕೇಂದ್ರ ಸರ್ಕಾರ ರೂಪಿಸಿರುವ ಆಹಾರ ಭದ್ರತೆ ಯೋಜನೆ ಒಂದಿಷ್ಟು ಹೊರೆಯನ್ನು ಕಡಿಮೆ ಮಾಡಿರಬಹುದು. ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ.
ನಮ್ಮ ಸಂವಿಧಾನದ ಪ್ರಕಾರ ದೇಶದಲ್ಲಿ ಯಾರೂ ಹಸಿವಿನಿಂದ ಸಾಯಬಾರದು. ಯಾರಾದರೂ ಹಸಿವಿನಿಂದ ಸತ್ತರೆ, ಸಂಬಂಧಪಟ್ಟ ತಾಲೂಕು ಆಡಳಿತ, ಜಿಲ್ಲಾಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಬಹುದು. ಅದೇ ಕಾರಣಕ್ಕೆ ಇಂದಿಗೂ ಹಸಿವಿನಿಂದ ಸತ್ತ ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತದೆ. ಇವು ಅಸಹಜ ಸಾವು ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗುತ್ತವೆಯೇ ವಿನಾ ಹಸಿವಿನಿಂದಾದ ಸಾವು ಎಂತಲ್ಲ.
ದೇಶದಲ್ಲಿರುವ ಎಲ್ಲರಿಗೂ ಉಣ್ಣಲು ಅನ್ನ, ಉಡಲು ಬಟ್ಟೆ ಇದೆ ಎಂದು ತಿಳಿದುಕೊಂಡರೆ ಅದಕ್ಕಿಂತ ದೊಡ್ಡ ದಡ್ಡತನ ಇನ್ನೊಂದಿಲ್ಲ. ಹಾಗೆಂದ ಮಾತ್ರಕ್ಕೆ ಇವೆರಡು ಸಿಕ್ಕರೆ ಸಾಕೇಸಾಕು ಎನ್ನುವಂತೆಯೂ ಇಲ್ಲ. ಜನರಿಗೆ ಬೇರೆ ಏನಾದರೂ ಪಾಠ ಮಾಡುವ ಮುನ್ನ ಕನಿಷ್ಠ ಇಷ್ಟಾದರೂ ಬೇಕೆಂಬುದು ಮಾತ್ರ ಸತ್ಯ.
ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ನೋಡದೆ ಅವುಗಳನ್ನು ಕಾಮಾಲೆ ಕಣ್ಣಿನಿಂದ ಕೆಲವರು ನೋಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆ ಬಗ್ಗೆ ಮಾತನಾಡುತ್ತಾ, ನಾವೇನಾದರೂ ಇದರ ವಿರುದ್ಧ ಮಾತನಾಡಿದರೆ ವಿಲನ್ ಆಗಿಬಿಡುತ್ತೇವೆ ಎಂದಿದ್ದರು. ನೀವು ವಿಲನ್ ಆಗುವುದಿಲ್ಲ, ಮಾತನಾಡಿ ಎಂದಿದ್ದರೂ ಅವರು ಮಾತನಾಡುತ್ತಿರಲಿಲ್ಲವೇನೋ. ಏಕೆಂದರೆ ಈ ಯೋಜನೆಗಳ ಮೂಲ ಯೋಚನೆಯೇ ಅಂಥದ್ದು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಾರಿಗೆ ಬರುತ್ತಿರುವ ಈ ಎರಡು ಮಹತ್ವದ ಯೋಜನೆಗಳ ಕುರಿತು ರಾಜ್ಯದಲ್ಲಿ ಚರ್ಚೆ ಆರಂಭವಾಗಿದೆ. ಹಲವರು ಈ ಯೋಜನೆಗಳನ್ನು ಸ್ವಾಗತಿಸಿದ್ದರೆ, ಎಸಿ ಕಚೇರಿಗಳಲ್ಲಿ ಕುಳಿತು ಲಕ್ಷ ರು. ಸಂಬಳ ಎಣಿಸುವ ಸಾಫ್ಟ್ವೇರ್ ಮಂದಿ ಹಾಗೂ ಕಾರ್ಪೋರೇಟ್ ಕುಳಗಳು ಈ ಯೋಜನೆಗಳ ಕುರಿತು ಅಪಸ್ವರ ಎತ್ತುತ್ತಿದ್ದಾರೆ.
ಟ್ಯಾಕ್ಸ್ ಹಾಲಿಡೇ, ರಿಯಾಯಿತಿ ದರದಲ್ಲಿ ಭೂಮಿ, ಅಗ್ಗದ ದರದಲ್ಲಿ ಸರ್ಕಾರಿ ಸಂಪನ್ಮೂಲ ತೆರಿಗೆ ವಿನಾಯಿತಿ ಹೀಗೆ ಹಲವಾರು ಹೆಸರಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಈ ಮಂದಿಗೆ ಜನರ-'ಯಾರೂ ಹಸಿವಿನಿಂದ ಸಾಯಬಾರದು' ಎಂಬ ಮಹತ್ವದ ಉದ್ದೇಶವೊಂದನ್ನು ಜಾರಿಗೆ ತರಲು ಹೊರಟರೆ ಅದು ಕಣ್ಣು ಕುಕ್ಕುತ್ತದೆ. ಅದು ಸರ್ಕಾರಿ ಬೊಕ್ಕಸದ ದುರುಪಯೋಗ ಎಂಬಂತೆ ಕಾಣಿಸುವುದು ನಿಜಕ್ಕೂ ವಿಪರ್ಯಾಸ.
ಬೇರೆ ಯಾವ ಸಬ್ಸಿಡಿ ಕುರಿತೂ ಚಕಾರವೆತ್ತದ ಮಂದಿ ಸಹ ಬಡವರಿಗಾಗಿ, ರೈತರಿಗಾಗಿ ಯಾವುದಾದರೂ ಯೋಜನೆ ರೂಪಿಸಿದರೆ, ಅದರ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮುಂದಾಗುತ್ತಾರೆ. ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರುವ ಖಾಸಗಿ ಕಂಪನಿಗಳಿಗೆ ನೂರಾರು ಕೋಟಿ ಸಬ್ಸಿಡಿ ನೀಡುವ ಸರ್ಕಾರದ ವಿರುದ್ಧ ಮಾತನಾಡದ ಜನ ಒಂದು ಕೋಟಿ ರು. ಹೆಚ್ಚು ಜನರ ಹಸಿವನ್ನು ನೀಗಿಸುವ ಮಹತ್ವದ ಯೋಜನೆಗೆ ವಿರೋಧ ವ್ಯಕ್ತ ಪಡಿಸುವುದು ನಿಜಕ್ಕೂ ದುರದೃಷ್ಟಕರ. ಅನ್ನಭಾಗ್ಯ ಯೋಜನೆಗೆ ಸರ್ಕಾರ ಮೀಸಲಿಟ್ಟಿರುವುದು ಸುಮಾರು 4,500 ಕೋಟಿ, ಅಂದರೆ ಈ ರಾಜ್ಯದ ಬಜೆಟ್ನ ಶೇ.4ಕ್ಕಿಂತ ಕಡಿಮೆ. ಆದರೆ ಇದಕ್ಕಿಂತ ಹೆಚ್ಚು ಮೊತ್ತವನ್ನು ಕೆಲ ಖಾಸಗಿ ಕಂಪನಿಗಳಿಗೆ ಸಬ್ಸಿಡಿ ಹೆಸರಲ್ಲಿ ನೀಡುತ್ತಲೇ ಇರುತ್ತದೆ.
ಈ ಯೋಜನೆ ಜಾರಿ ಸರ್ಕಾರಕ್ಕೆ ಸವಾಲಿನ ಕೆಲಸವೇ. ಕೇಂದ್ರ ಸರ್ಕಾರ ರೂಪಿಸಿರುವ ಆಹಾರ ಭದ್ರತೆ ಯೋಜನೆ ಒಂದಿಷ್ಟು ಹೊರೆಯನ್ನು ಕಡಿಮೆ ಮಾಡಿರಬಹುದು. ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ.
ಕೆಲ ವರ್ಷಗಳ ಹಿಂದೆ ರಾಜ್ಯದ ಐದು ಜಿಲ್ಲೆಗಳಲ್ಲಿ ರೈಸ್ ಇಂಟೆನ್ಸಿಫಿಕೇಷನ್ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಇದು ಕೇಂದ್ರದ ಎನ್ಎಫ್ಎಸ್- (ರೈಸ್ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ- ಅಕ್ಕಿ) ಯೋಜನೆಯ ಒಂದು ಭಾಗ. ಒಂದು ಕಾಲದಲ್ಲಿ ಬತ್ತದ ಕಣಜವಾಗಿದ್ದ ರಾಜ್ಯದಲ್ಲಿ ಬತ್ತ ಬೆಳೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಅಂಶವನ್ನು ಗಮನಿಸಿ ಈ ಯೋಜನೆಯ ಚಿಂತನೆ ನಡೆದಿತ್ತು. ಯೋಜನೆಯ ಯಶಸ್ಸಿನ ಬಗ್ಗೆ ಕೃಷಿ ಇಲಾಖೆಯನ್ನು ಕೇಳಿದರೆ, ನಾವು ಬತ್ತ ಬೆಳೆಯುವ ಪ್ರದೇಶವನ್ನು ಹೆಚ್ಚು ಮಾಡಲು ಆಗಿಲ್ಲ. ಆದರೆ ಬತ್ತದ ಇಳುವರಿ ಹೆಚ್ಚು ಮಾಡಿದ್ದೇವೆ ಎನ್ನುತ್ತಾರೆ. ಇದು ಅನುಮಾನಾಸ್ಪದ ಹೇಳಿಕೆ.
ಬೇಸಾಯ ಎಂದರೆ 'ನೀ ಸಾಯ ನಾ ಸಾಯ' ಎಂಬ ಮಾತು ರೈತರ ನಡುವೆ ಚಾಲ್ತಿಯಲ್ಲಿದೆ. ಅದರಲ್ಲೂ ಬತ್ತ ಕೃಷಿ ಎಂದರೆ ಕಷ್ಟಗಳು ಇನ್ನೂ ಜಾಸ್ತಿ. ನೀರಾವರಿ ಪ್ರದೇಶದಲ್ಲಿ ಇಂತಿಷ್ಟೇ ಬೆಳೆ ಬೆಳೆಯಬೇಕೆಂದು ನೋಟಿಫಿಕೇಷನ್ ಮಾಡಲಾಗಿರುತ್ತದೆ. ಆದರೆ ಅದನ್ನು ಬಿಟ್ಟು ತೋಟ ಮಾಡಿರುವವರ ಸಂಖ್ಯೆಯೇ ಹೆಚ್ಚು. ವರ್ಷದಿಂದ ವರ್ಷಕ್ಕೆ ಬತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಷ್ಟೋ ಬತ್ತದ ತಳಿಗಳು ನಾಶವಾಗಿವೆ. ಬೀಜ ಸಂಗ್ರಹಿಸುವ ಅಭ್ಯಾಸ ರೈತರಲ್ಲಿ ಕಡಿಮೆಯಾಗುತ್ತಿದೆ. ಈ ದಿಕ್ಕಿನಲ್ಲಿ ಬತ್ತ ಬೆಳೆಯುವ ಪ್ರದೇಶ ಹೆಚ್ಚಾಗದಿದ್ದರೂ ಇಳುವರಿ ಹೆಚ್ಚು ಮಾಡಿದ್ದೇವೆ ಎನ್ನುವ ಕೃಷಿ ಇಲಾಖೆಯ ಮಾತುಗಳನ್ನ ಗಂಭೀರವಾಗಿ ಆಲಿಸಬೇಕಾಗಿದೆ.
ಈ ದಿಕ್ಕಿನಲ್ಲಿ ಸರ್ಕಾರ ಕೂಡಲೇ ಐದು ಜಿಲ್ಲೆಗಳಲ್ಲಿ ಜಾರಿಯಾಗಿರುವ ರೈಸ್ ಇಂಟೆನ್ಸಿಫಿಕೇಷನ್ ಯೋಜನೆಯ ಸಂಪೂರ್ಣ ಸಾಧಕಬಾಧಕಗಳನ್ನು ಪರಿಶೀಲನೆಗೆ ಒಡ್ಡಬೇಕು. ನಿಜಕ್ಕೂ ಇಳುವರಿ ಹೆಚ್ಚಾಗಿರುವುದು ನಿಜವೇ ಆದರೆ ಅದನ್ನು ಇತರೆ ಜಿಲ್ಲೆಗಳಲ್ಲಿಯೂ ಅನುಷ್ಠಾನ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಪ್ರಾಯೋಗಿಕವಾಗಿಯೇ ಈ ಯೋಜನೆ ವಿಫಲವಾಗಿದೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ಕೂಡಲೇ ಮಾಡಬೇಕು.
ಇನ್ನೂ ಮಲೆನಾಡಿನ ರೈತರಿಗೆ ಬತ್ತ ಬೆಳೆಗಿಂತ ಮೆಕ್ಕೆಜೋಳ ಬೆಳೆಯ ಮೇಲೆ ಪ್ರೀತಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಶುಂಠಿ ಆಕ್ರಮಿಸಿಕೊಳ್ಳುತ್ತಿದೆ. ಅಡಕೆ ಬೆಳೆಯುವುದಂತೂ ಸಾಮಾನ್ಯ. ರೈತರಿಗೂ ಸಹ ಭವಿಷ್ಯದ ಭದ್ರತೆಗಾಗಿ ವಾಣಿಜ್ಯ ಬೆಳೆಗಳನ್ನು ಉಪ್ಪಿನಕಾಯಿಯಂತೆ ಇಟ್ಟುಕೊಂಡು, ಆಹಾರ ಬೆಳೆಗಳನ್ನು ಮುಖ್ಯವಾಗಿ ಬೆಳೆಯುವ ಮಹತ್ವದ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯವಿದೆ. ಆದರೆ ಕೃಷಿ ಇಲಾಖೆಯಿಂದ ಈ ರೀತಿಯ ಯೋಜನೆಗಳು ಇರುವುದು ಕಾಣುತ್ತಿಲ್ಲ. ಕೇಳಿದರೆ ರೈತರ ಬೆಳೆ ಸ್ವಾತಂತ್ರ್ಯ ಎನ್ನುತ್ತಾರೆ. ದೀರ್ಘಕಾಲೀನ ಯೋಜನೆಗಳೇ ಇಲ್ಲವಾಗಿವೆ.
ಅತ್ಯಂತ ತುರ್ತಾಗಿ ಬತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸದಿದ್ದರೆ ಅನ್ನಭಾಗ್ಯ ಎನ್ನುವುದೇ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಅಗತ್ಯದ ಯೋಜನೆಗಳನ್ನು ಘೋಷಿಸಿದ್ದೇನೋ ಸರಿ, ಅದನ್ನು ಮುಂದುವರಿಸಬೇಕಾದರೆ ಮಾಡಬೇಕಾದ ಕೆಲಸಗಳು ಇನ್ನೂ ಬಹಳ ಇವೆ.
-ವೈ.ಕೆ. ಸೂರ್ಯನಾರಾಯಣ
ಸಂಪಾದಕರು, ಎಚ್ಚರಿಕೆ ದಿನಪತ್ರಿಕೆ, ಶಿವಮೊಗ್ಗ