ಖೇಮ್ಕಾ ಕುರಿತು ಪ್ರಧಾನಿಗೇಕಿಲ್ಲ ಪತ್ರ?
ಸೋನಿಯಾ ಗಾಂಧಿಯವರನ್ನು ಮೆಚ್ಚಲೇಬೇಕು. ಅವರೇನು ಸಾಮಾನ್ಯ ನಟಿಯೇ? ಮರಳು ಮಾಫಿಯಾದ ಜಾಲವನ್ನು ಬಯಲು ಮಾಡಿ ಸಸ್ಪೆಂಡ್ ಆದ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರ ಪರವಾಗಿ ಮಾತನಾಡಿ ಹೇಗೆ ನಮ್ಮನ್ನೆಲ್ಲ ಮರುಳು ಮಾಡುತ್ತಿದ್ದಾರೋ ನೋಡಿ? ಮನಮೋಹನ್ ಸಿಂಗ್ ಅವರಿಗೆ ಭಾವುಕರಾಗಿ ಪತ್ರ ಬರೆದಿರುವ ಸೋನಿಯಾ- 'ಕಾನೂನನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವ ಅಧಿಕಾರಿಗಳನ್ನು ರಕ್ಷಿಸಬೇಕು. ಈ ಅಧಿಕಾರಿಗೆ(ದುರ್ಗಾ) ಅನ್ಯಾಯವಾಗದಂತೆ ನಾವು ಎಚ್ಚರವಹಿಸಬೇಕಿದೆ' ಎಂದು ಹೇಳಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ 'ಬಕೀಟು' ಮಾಧ್ಯಮಗಳೆಲ್ಲ 'Sonia Fights for Durga' (ದುರ್ಗೆಗಾಗಿ ಹೋರಾಡುತ್ತಿರುವ ಸೋನಿಯಾ) ಎಂದು ಬಹುಪರಾಕು ಹಾಕತೊಡಗಿವೆ.
ಆದರೆ ಒಂದು ವಿಷಯ ಅರ್ಥವಾಗುತ್ತಿಲ್ಲ. ಸಿಂಗ್‌ಗೆ ಪತ್ರ ಬರೆಯುವ ಅಗತ್ಯವಾದರೂ ಏನಿತ್ತು? ಬರೀ ಕಣ್ಸನ್ನೆಯಲ್ಲೆ ಸಿಗ್ನಲ್ ಕೊಟ್ಟರೂ ಸಾಕಿತ್ತು. ಪ್ರಧಾನಿಗಳು ಎಲ್ಲವನ್ನೂ ಅರ್ಥಮಾಡಿಕೊಂಡು ಮೇಡಂರ ಆಜ್ಞೆಯನ್ನು 'ಠೀಕ್ ಹೆ' ಎಂದು ನಡುಬಗ್ಗಿಸಿ ಪಾಲಿಸುತ್ತಿದ್ದರು!
ಅಥವಾ ಮೊದಲಿನಿಂದಲೂ ಸೋನಿಯಾ-ಮನಮೋಹನ್‌ರ ಪತ್ರ ವ್ಯವಹಾರ ನಡೆದುಕೊಂಡೇ ಬಂದಿದೆಯೇ? ಹಾಗಿದ್ದರೆ ಆ ಪತ್ರಗಳೇಕೆ ಇಲ್ಲಿಯವರೆಗೆ ಹೊರಬರಲಿಲ್ಲ? ಭವಿಷ್ಯದಲ್ಲಿ ಸೋನಿಯಾ ಅವರು ಮನಮೋಹನ್ ಸಿಂಗ್‌ರಿಗೆ ಕಳಿಸುವ ಪತ್ರಗಳೆಲ್ಲ ನಮಗೆ ಓದಲು ಸಿಗುತ್ತವೆಯೇ? 'ಹಮ್ ಕರೇತೋ ಲೀಲಾ, ದೂಸ್ರಾ ಕರೇತೋ ಕ್ಯಾರೆಕ್ಟರ್ ಢೀಲಾ' ಎನ್ನುವ ಸಿದ್ಧಾಂತವನ್ನು ಮಾನ್ಯ ಮೇಡಮ್‌ಜಿಯವರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ದುರ್ಗಾ ಶಕ್ತಿಯವರ ಬಗ್ಗೆ ಪತ್ರ ಬರೆಯುವಾಗ ಸೋನಿಯಾರಿಗೆ ಒಂದು ಕ್ಷಣಕ್ಕಾದರೂ ಹರ್ಯಾಣಾದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ನೆನಪಾಗಲಿಲ್ಲವೇ?
ಎರಡು ದಶಕದಲ್ಲಿ 44 ಬಾರಿ ಅಶೋಕ್ ಖೇಮ್ಕಾರನ್ನು ವರ್ಗಾವಣೆ ಮಾಡಲಾಗಿದೆ. ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ ಸರ್ಕಾರವೇ ಮಾರ್ಚ್ 2005ರಿಂದ ಇಲ್ಲಿಯವರೆಗೆ ಅವರನ್ನು 17 ಬಾರಿ ವರ್ಗಾವಣೆ ಮಾಡಿದೆ! ಸೋನಿಯಾರ ಅಳಿಯದೇವರು ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವಿನ ಭೂ ವ್ಯವಹಾರವನ್ನು ಖೇಮ್ಕಾ ಬಯಲಿಗೆಳೆದಾಗಲೂ ಅವರನ್ನು ವರ್ಗಾವಣೆ ಮಾಡಲಾಯಿತು! ಖೇಮ್ಕಾ ಮಾಡಿದ ತಪ್ಪೇನು? ಕಾನೂನು ಎತ್ತಿಹಿಡಿಯಲು ತಾನೇ ಅವರು ಪ್ರಯತ್ನಿಸುತ್ತಿದದ್ದು? ಆಗ ಸೋನಿಯಾ ಏನು ಮಾಡುತ್ತಿದ್ದರು? ಪತ್ರ ಬರೆಯಲು ಅವರ ಬಳಿ ಕಾಗದಗಳಿರಲಿಲ್ಲವೇ?
ಈಗ ರಾಜಸ್ಥಾನದ ನಿಷ್ಠಾವಂತ ಐಪಿಎಸ್ ಅಧಿಕಾರಿ ಪಂಕಜ್ ಚೌಧರಿ ಎನ್ನುವವರನ್ನೂ ಕಾಂಗ್ರೆಸ್‌ನ ಕೈಗಳು ಬೇರೆಡೆಗೆ ದೂಡಿವೆ. ಗಾಝೀ ಫಾಕಿರ್ ಎನ್ನುವ ವ್ಯಕ್ತಿಯ ಪ್ರಕರಣವನ್ನು ಕೈಗೆತ್ತಿಕೊಂಡದ್ದೇ ಪಂಕಜ್ ಚೌಧರಿ ಮಾಡಿದ ತಪ್ಪು! ಇದಾದ ಎರಡೇ ದಿನಗಳಲ್ಲಿ ಚೌಧರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಫಾಕೀರ್, ಕಾಂಗ್ರೆಸ್ ಶಾಸಕ ಸಲೇಹ್ ಮೊಹಮ್ಮದ್ ಅವರ ತಂದೆ ಎಂಬುದೇ ಇದಕ್ಕೆ ಕಾರಣ!
ಎಡವಟ್ಟು ಮಾಡುವುದರ ಗುತ್ತಿಗೆ ಪಡೆದಂತಿರುವ ದಿಗ್ವಿಜಯ್ ಸಿಂಗ್, ಸೆಕ್ಯುಲರಿಸಂನ ವಕೀಲನಂತಾಡುವ ಶಕೀಲ್ ಅಹಮದ್ ಮತ್ತು 'ಮೇಡಂ ಕಣ್ಣೀರು' ಕಥೆಯ ಲೇಖಕ ಖುರ್ಷಿದ್ ಅವರೇ ಬಹುಶಃ ಈ ಪತ್ರದ ಯೋಜನೆ ತಯಾರಿಸಿರಬಹುದು. ಆದರೆ ಕಾಂಗ್ರೆಸ್‌ನ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಈ ಪತ್ರ ಬರೆಯುವ ಪ್ಲಾನ್‌ನಿಂದ ಖೇಮ್ಕಾರ ವಿಷಯ ಸದ್ದು ಮಾಡುತ್ತದೆ ಎನ್ನುವುದು ಬಹುಶಃ ಅವರಿಗೆ ಗೊತ್ತಿರಲಿಲ್ಲವೇನೋ!
ಇದೇನೇ ಇದ್ದರೂ, ಈಗ ದುರ್ಗಾ ಶಕ್ತಿ ಅವರ ಹೋರಾಟಕ್ಕೆ ಅಶೋಕ್ ಖೇಮ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ವೇಳೆಯಲ್ಲೇ ಇನ್ನೊಂದು ವಿಷಯ ನಿಜಕ್ಕೂ ಬೇಸರ ತರಿಸುತ್ತಿದೆ. ಈ ಪ್ರಕರಣದಲ್ಲಿ ದುರ್ಗಾ ಅವರ ತಪ್ಪು ಇಲ್ಲವೆಂದು ಗೊತ್ತಿದ್ದರೂ ಕೂಡ, ಅದೇಕೆ ಖೇಮ್ಕಾರನ್ನು ಬಿಟ್ಟು ಒಬ್ಬೇ ಒಬ್ಬ ಐಎಎಸ್/ಐಪಿಎಸ್ ಅಧಿಕಾರಿಯೂ ದುರ್ಗಾ ಅವರ ಪರವಾಗಿ ಮಾತನಾಡುತ್ತಿಲ್ಲ? ನಿವೃತ್ತ ಅಧಿಕಾರಿಗಳೇಕೆ ಬಾಯಿಗೆ ಬೀಗ ಜಡಿದುಕೊಂಡು ಕುಳಿತಿದ್ದಾರೆ? ತಮ್ಮ ಬಳಗದಲ್ಲೇ ಇಂಥ ದುರ್ಗೆಯೊಬ್ಬಳಿದ್ದಾಳೆ ಎನ್ನುವುದು ಅವರಿಗೆ ಸಂತಸ ತರಿಸುತ್ತಿಲ್ಲವೇ?!
- ರಾಘವೇಂದ್ರ ಆಚಾರ್ಯ, ಕನ್ನಡಪ್ರಭ
raghu.bioastra@gmail.com