ಅಂಕಣಗಳು

ವರ್ತಮಾನದ ಕೆಸರು- ಗತಕಾಲದ ವೈಭವದ ನೆನಪು

ದೇಶದ ಭವಿಷ್ಯದ ಸ್ವರೂಪವನ್ನೇ ನಿರ್ಧರಿಸಬಹುದಾದ ಮಂಡ್ಯ- ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳ ಮರು ಚುನಾವಣೆಯ ಸಂಬಂಧದಲ್ಲಿ ಬೆಂಗಳೂರು- ಕನಕಪುರ- ರಾಮನಗರ- ಮೈಸೂರು ಸೀಮೆಯಲ್ಲಿ ನಡೆಯುತ್ತಿರುವ ರಾಜಕೀಯ ಚೆಲ್ಲಾಟದ ಅಂತರಂಗ- ಬಹಿರಂಗ ಚಟುವಟಿಕೆಗಳನ್ನು ಕಂಡಾಗ, ದೇಶದಲ್ಲಿ ಹೊಸ ರಾಜಕೀಯದ ಇತಿಹಾಸವನ್ನೇ ನಿರ್ಮಿಸಿದ ಕೆಲವು ಹಿಂದಿನ ಮರು ಚುನಾವಣೆಗಳ ವೈಭವದ ನೆನಪು ಬರುವುದು ಸಹಜ.  ಇದು ಒಂದು ರೀತಿಯಲ್ಲಿ ವರ್ತಮಾನದ ಕೆಸರಿನಲ್ಲಿ ನಿಂತು, ಭೂತಕಾಲದ ಸುವರ್ಣ ಯುಗದ ನೆನಪನ್ನು ಮೆಲುಕು ಹಾಕುತ್ತಾ ಭವಿಷ್ಯದ ರಾಜಕೀಯದ ಭಯಾನಕ ದೃಶ್ಯವನ್ನು ಊಹಿಸಿಕೊಂಡು ಬೆವರುವ ಪ್ರಯತ್ನ. ಇಂತಹ ಪ್ರಯತ್ನ ಆಗಾಗ್ಗೆ ನಡೆಯುವುದುಂಟು. ಈಗ ಕರ್ನಾಟಕದಲ್ಲಿನ ಮರು ಚುನಾವಣೆಗಳು ಅದಕ್ಕೊಂದು ನೆಪವಷ್ಟೇ. ಅದು 1960ರ ದಶಕದ ಮಾತು. ಕೇಂದ್ರದಲ್ಲಿ, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಹೊಣಗೇಡಿ ನೀತಿಯ ಪರಿಣಾಮವಾಗಿ, ಜನ ತತ್ತರಿಸಿದ್ದ ದಿನಗಳವು. ರಾಜಕೀಯ, ಸಿದ್ಧಾಂತದ ಆಧಾರದ ಮೇಲೆ ಸ್ಫುಟವಾಗಿ ವಿಂಗಡನೆಯಾಗಿರಲಿಲ್ಲ. ನಾಲಿಗೆ ತುದಿಯ ಸಿದ್ಧಾಂತಕ್ಕೂ, ಅಂತರಂಗದ ಸ್ವಾರ್ಥದ ಬಯಕೆಗಳಿಗೂ ವಿಪರೀತ ಅಂತರವಿದ್ದ ಕಾಲ ಅದು.
ಆದರೂ ಆಗಿನ ಮೂರು ಲೋಕಸಭೆ ಕ್ಷೇತ್ರಗಳ ಮರು ಚುನಾವಣೆ ಉತ್ತರ ಪ್ರದೇಶದಲ್ಲಿ ಸ್ಪಷ್ಟವಾದ ಸಿದ್ಧಾಂತದ ಆಧಾರದ ಮೇಲೇ ನಡೆದಿದ್ದು, ಮೂರೂ ಕಡೆ ಕಾಂಗ್ರೆಸ್ ಸೋತಿದ್ದೇ ಒಂದು ಐತಿಹಾಸಿಕ ಘಟನೆ. ಫರೂಕಾಬಾದ್ (ಈಗಿನ ಉಜ್ಜಯಿನಿ) ಕ್ಷೇತ್ರದಿಂದ ಸಮಾಜವಾದಿ ಚಿಂತಕ, ಡಾ॥ ರಾಮಮನೋಹರ ಲೋಹಿಯಾ ಕಾಂಗ್ರೆಸ್ಸಿನ ಬೌದ್ಧಿಕ ನಾಯಕ ಡಾ॥ ಬಿ.ವಿ. ಕೇಸ್ಟರ್‌ರನ್ನು (ಇಬ್ಬರೂ ಮದುವೆಯಾಗದ ಏಕಾಂಗಿಗಳು) ಅಮ್ರೋಹದಲ್ಲಿ ಕಾಂಗ್ರೆಸ್ ಬಂಡಾಯಗಳ ಆದ್ಯ ಪ್ರವರ್ತಕ ಆಚಾರ್ಯ ಜೆ.ಬಿ. ಕೃಪಲಾನಿ, ಆಗಿನ ಕಾಲದ ಕಾಂಗ್ರೆಸ್‌ನ ಮುಸ್ಲಿಮ್ ಮಹಾನಾಯಕ ಹಫೀಸ್ ಮಹಮದ್ ಇಬ್ರಾಹಿಂ, ಅವರನ್ನು ಜಾನ್‌ಪುರ ಕ್ಷೇತ್ರದಲ್ಲಿ ಭಾರತೀಯ ಜನಸಂಘದ ಹಿರಿಯ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ (ಅವರ ವಿರುದ್ಧ ನಿಂತಿದ್ದ ಕಾಂಗ್ರೆಸ್ ಅಭ್ಯರ್ಥಿಯ ನೆನಪಾಗುತ್ತಿಲ್ಲ) ಅವರು ಖಡಾಖಡಿ ಹೋರಾಟದಲ್ಲಿ ಸೋಲಿಸಿ ವಿಜಯಿಗಳಾಗಿ ಲೋಕಸಭೆಯನ್ನು ಪ್ರವೇಶಿಸಿದ್ದು ರಾಷ್ಟ್ರೀಯ ರಾಜಕೀಯದಲ್ಲಿ ಮಿಂಚಿನ ಸಂಚಾರವನ್ನೇ ಉಂಟು ಮಾಡಿತ್ತು.
 ಆ ಸಮಯದಲ್ಲೇ ಲೋಕಸಭೆಯಲ್ಲಿ ಆಚಾರ್ಯ ಕೃಪಲಾನಿ, ರಕ್ಷಾಮಂತ್ರಿ ಕೃಷ್ಣಮೆನನ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು. ಲೋಹಿಯಾ ತಮ್ಮ ಪ್ರಸಿದ್ಧ ಸಿದ್ಧಾಂತವಾದ 27 ಕೋಟಿ ಭಾರತೀಯರು ದಿನಕ್ಕೆ 27 ಪೈಸೆಯ ದಟ್ಟ ದಾರಿದ್ರ್ಯದಲ್ಲಿ ಬದುಕುವ ಕತೆಯನ್ನು ಪ್ರತಿಪಾದಿಸಿದ್ದು. ಆ ಕಾಲದ ಗಂಭೀರ ಚರ್ಚೆ, ಎದುರಾಳಿಗಳನ್ನು ಎಷ್ಟೇ ಕಠಿಣ ಮಾತುಗಳಲ್ಲಿ ಟೀಕಿಸಿದ್ದರೂ, ಮರ್ಯಾದೆಯ ಎಲ್ಲೆಯನ್ನು ಮೀರದೇ ಇದ್ದ ಸಂಯಮದಂತಹ ಗುಣಗಳನ್ನು ಈಗ ಹುಡುಕಬೇಕು.  ಮುಂದೆ ಉತ್ತರ ಮುಂಬೈ ಕ್ಷೇತ್ರದಲ್ಲಿ ಕೃಷ್ಣ ಮೆನನ್ ಸ್ಪರ್ಧಿಸಿದ್ದ ಲೋಕಸಭೆ ಮರು ಚುನಾವಣೆ, ಅಲಹಾಬಾದ್‌ನಲ್ಲಿ ವಿಶ್ವನಾಥ ಪ್ರತಾಪಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರೀಯವರ ಪುತ್ರ ಸುನೀಲ್ ಶಾಸ್ತ್ರಿ ವಿರುದ್ಧ ನಡೆಸಿದ ಹೋರಾಟದ, ತೀಸ್ರಿ ಘರವಾಲದಲ್ಲಿ ಕಾಂಗ್ರೆಸ್ಸನ್ನು ಬಿಟ್ಟು ಹೋರಾಟಕ್ಕಿಳಿದಿದ್ದ ಹೇಮವತೀ ನಂದನ ಬಹುಗುಣ ಅವರು ಸ್ಪರ್ಧಿಸಿದ್ದ ಮರು ಚುನಾವಣೆಯಲ್ಲಿ ಪ್ರಚಾರ ಸಮರದ ಕಾಲದ ದೊಂಬಿ, ಬೆಂಕಿ, ಹಿಂಸಾಚಾರದ ಪರಿಣಾಮವಾಗಿ ಚುನಾವಣೆಯೇ ರದ್ದಾಗಿದ್ದು- ಈ ಎಲ್ಲ ಪ್ರಕರಣಗಳಲ್ಲೂ ಚರ್ಚೆಗಿದ್ದ ವಿಷಯ ರಾಜಕೀಯವೇ. ಅದು ಅಖಿಲ ಭಾರತ ಆಸಕ್ತಿಯನ್ನು ಕೆರಳಿಸಿತ್ತು.
 ಆದರೆ ಈಗ ಮಂಡ್ಯ- ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಚುನಾವಣೆಯ ಸಮಯದಲ್ಲಿ (ಇನ್ನೂ ಪ್ರಚಾರ ಸಮರ ಆರಂಭವೇ ಆಗಿಲ್ಲ) ಪತ್ರಿಕಾಗೋಷ್ಠಿ, ಸಂದರ್ಶನಗಳಲ್ಲಿ ಪ್ರಸ್ತಾಪವಾಗುತ್ತಿರುವ ತೀರ ವೈಯಕ್ತಿಕ ವಿಚಾರಗಳನ್ನು ಗಮನಿಸಿದರೆ, ಈ ಚುನಾವಣೆಯ ಫಲಿತಾಂಶದಲ್ಲಿ ಯಾವ ಆಸಕ್ತಿಯೂ, ಯಾರಲ್ಲೂ ಮೂಡಲಿಕ್ಕಿಲ್ಲ ಎನಿಸಿದರೆ ಆಶ್ಚರ್ಯವೇನೂ ಇಲ್ಲ.

ಮಂಡ್ಯದಲ್ಲಿ ರಮ್ಯಾ: ಉದಾಹರಣೆಗೆ ಮಂಡ್ಯ ಕ್ಷೇತ್ರದಲ್ಲಿನ ಚುನಾವಣೆಯ ಪರಿಸ್ಥಿತಿಯನ್ನೇ ಗಮನಿಸಿ. ಅಲ್ಲಿ ಹಿಂದೆ ಗೆದ್ದಿದ್ದ ಜಾತ್ಯತೀತ ಜನತಾ ದಳದ ನಾಯಕ ಚೆಲುವರಾಯ ಸ್ವಾಮಿ ಅವರು ವಿಧಾನ ಸಭೆಗೆ ಆಯ್ಕೆಯಾಗಿದ್ದರಿಂದ ಖಾಲಿಯಾದ ಕ್ಷೇತ್ರ ಅದು. ಜಾತ್ಯತೀತ ಜನತಾದಳದ ಭದ್ರಕೋಟೆ. ಅಲ್ಲಿ ಜೆಡಿಎಸ್‌ನ ಅಭ್ಯರ್ಥಿ ಪುಟ್ಟರಾಜು ಅವರನ್ನು ಆರಿಸಿದ ರೀತಿ-ನೀತಿ, ಪಕ್ಷದ ಹಿರಿಯರು ಅವಲಂಬಿಸಿದ ಮೌಲ್ಯಗಳ ಪ್ರಸ್ತಾಪವನ್ನೇ ಯಾರೂ ಮಾಡುತ್ತಿಲ್ಲ. ಈಗ ಅಲ್ಲಿರುವ ವಿವಾದವೆಲ್ಲ ಎಲ್ಲಿಂದಲೋ ಬಂದು, ಯಾರದೋ ಶಿಫಾರ್ಸಿನ ಪರಿಣಾಮವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಚಲನಚಿತ್ರ ತಾರೆ ರಮ್ಯಾ ಅವರ ನಿಜ ರಾಜಕೀಯ ಆಸಕ್ತಿ ಕುರಿತದ್ದೇ. ಮಂಡ್ಯ, ಕರ್ನಾಟಕದ, ಅದರಲ್ಲೂ ಹಳೆಯ ಮೈಸೂರು ಸಂಸ್ಥಾನ. ಪ್ರದೇಶದಲ್ಲಿ, ರಾಜಕೀಯದ ಹೃದಯದಂತಿದ್ದ ಕ್ಷೇತ್ರ. ಕಾಂಗ್ರೆಸ್ಸಿಗೆ ಎದುರೇ ಇಲ್ಲವೆನ್ನುವ ಸ್ಥಿತಿ ಇತ್ತು. ಈಗ?
ಕ್ಷೇತ್ರದ ಘಟಾನುಘಟಿ ನಾಯಕರನೇಕರಲ್ಲಿ ಯಾರನ್ನಾದರೊಬ್ಬರನ್ನು ಆರಿಸಿ, ಚುನಾವಣೆಯಲ್ಲಿ ಗೆಲ್ಲಿಸಬೇಕೆನ್ನುವ ಛಲ ಪಕ್ಷಕ್ಕೇ ಇದ್ದಂತಿಲ್ಲ. ಮಂಡ್ಯದಲ್ಲಿ ನಾಯಕರಿಲ್ಲ ಎಂದೇನೂ ಅಲ್ಲ. ಇದ್ದಾರೆ. ಆದರೆ ಯಾರನ್ನು ಆರಿಸಿದರೂ, ಅವರ ವಿರೋಧಿಗಳು ಒಂದಾಗಿ ಸದೆ ಬಡಿಯುತ್ತಾರೆ. ಅದು ಕಾಂಗ್ರೆಸ್‌ನ ಕಥೆ-ವ್ಯಥೆ. ಆ ಕಾರಣದಿಂದಲೇ ವಿವಾದಕ್ಕೆ ನಿಲುಕದಂತಹ ಚಿತ್ರನಟಿ ರಮ್ಯಾ ಅವರನ್ನು ಕಾಂಗ್ರೆಸ್ ಮುಂದಿಟ್ಟಿರುವುದು. ಅವರಿಗೂ ರಾಜಕೀಯ ಅಧಿಕಾರದ ಆಸೆ ಇರಬೇಕು. ಅದಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ತಮಗೇ ಟಿಕೆಟ್ ಕೊಡಬೇಕೆನ್ನುವ ಮನವಿ ಪತ್ರ ಕೈಯಲ್ಲಿ ಹಿಡಿದೇ ಈಗಿನ ಚುನಾವಣೆಯಲ್ಲಿ ನಾಮಪತ್ರಕ್ಕೆ ಸಹಿ ಹಾಕಿದ್ದು. ಅದಕ್ಕೆ ರಾಹುಲ ಗಾಂಧಿ ಆಶೀರ್ವಾದ ಇತ್ತಂತೆ. 

ಶಿವಕುಮಾರ- ಕುಮಾರಸ್ವಾಮಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕರ್ನಾಟಕದ ಮೊದಲ ರಾಜಕೀಯ ಕುಟುಂಬವೆನಿಸಿದ ಹರದನಹಳ್ಳಿ ದೊಡ್ಡೇಗೌಡ- ದೇವೇಗೌಡರ ಕುಟುಂಬದ ಕರ್ಮಭೂಮಿ. ದೇವೇಗೌಡರಿಗೆ ಸೋಲಿನ ಗ್ರಹಣದಿಂದ ಮುಕ್ತಿ ದೊರಕಿಸಿಕೊಟ್ಟ ಕ್ಷೇತ್ರ. ರಾಜ್ಯದಲ್ಲಿ ಹೋಳಾಗಿದ್ದ ಜನತಾ ಪರಿವಾರವನ್ನು ಒಂದು ಗೂಡಿಸಿದ್ದ ಕ್ಷೇತ್ರ. ದೇವೇಗೌಡರ ಅನಂತರ ಕುಮಾರಸ್ವಾಮಿ, ಚುನಾವಣೆ ರಾಜಕೀಯದಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಕ್ಷೇತ್ರ. ಒಬ್ಬ ಪ್ರಧಾನಿ, ಇಬ್ಬರು ಮುಖ್ಯಮಂತ್ರಿಗಳನ್ನು ರೂಪಿಸಿರುವ ಕ್ಷೇತ್ರ ಇದು. ಇಂತಹ ಕ್ಷೇತ್ರದಲ್ಲೂ ಈಗಿನ ಮರು ಚುನಾವಣೆಯಲ್ಲಿ ಪ್ರಸ್ತಾಪವಾಗುತ್ತಿರುವ ವಿಷಯಗಳು ಯಾವುವು?
 ದಶಕಗಳ ಹಿಂದೆ, ರಾಮಕೃಷ್ಣ ಹೆಗಡೆ, ಸೋಮಪ್ಪಾ ರಾಯಪ್ಪಾ ಬೊಮ್ಮಾಯಿ ಅವರಂತಹವರಿಂದ ದೇವೇಗೌಡರಿಗೆ ಆಗಿದೆ ಎಂದು ಭಾವಿಸಲಾದ ಅಥವಾ ಆಗಿರಬಹುದೆಂದು ಪ್ರಚಾರಕ್ಕೆ ಸಿಕ್ಕಿಬಿದ್ದಿರುವ ಅನ್ಯಾಯದ ವಿಚಾರ ಅಷ್ಟೇ. ಬೆಂಗಳೂರಿಗೆ ಹತ್ತಿರವಾಗಿರುವ ಈ ಕ್ಷೇತ್ರದಲ್ಲಿ ಚುನಾವಣೆ ಎಂದರೆ ಯಾವಾಗಲೂ ರಮಾರಮಿ ಚುನಾವಣೆಯೇ. ಸಾಮಾನ್ಯವಾಗಿ ಇಲ್ಲಿ ಸ್ಪರ್ಧಿಸಿ ಗೆದ್ದವರು (ಜಾಫರ್ ಷರೀಫ್‌ರಿಂದ ಹಿಡಿದು ಕುಮಾರಸ್ವಾಮಿ ಅವರವರೆಗೆ) ಪ್ರತಿಷ್ಠಿತರೇ ಆಗಿ ಬಿಟ್ಟಿದ್ದಾರೆ.  ಇಂತಹ ಕ್ಷೇತ್ರದ ಚುನಾವಣೆಯ ಸ್ಪರ್ಧೆಯನ್ನು ಇಲ್ಲಿನ ಪ್ರಬಲ ರಾಜಕೀಯ ಪಕ್ಷಗಳು, ಕಾಂಗ್ರೆಸ್ಸಿನ ಶಕ್ತಿ ಕೇಂದ್ರ, ಮಾಜಿ ಮಂತ್ರಿ ಡಿ.ಕೆ. ಶಿವಕುಮಾರ್ ಸೋದರ ಡಿ.ಕೆ. ಸುರೇಶ್ ಹಾಗೂ ಜಾತ್ಯತೀತ ದಳದ ಮಾಜಿ ಪ್ರಧಾನಿ ದೇವೇಗೌಡರ ಸೊಸೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ, ಅವರ ನಡುವಣ ಕೌಟುಂಬಿಕ ಸ್ಪರ್ಧೆಯ ಮಟ್ಟಕ್ಕೆ ಇಳಿಸಿಬಿಟ್ಟಿವೆ. ಇಲ್ಲೆಲ್ಲಿದೆ ರಾಜಕೀಯ?
ಮಂಡ್ಯದಲ್ಲಿ ಹೆಚ್ಚಾಗಿ ಕೇಳಿಬರದೇ ಇರುವ ರಾಜಕೀಯ ಹೊಂದಾಣಿಕೆಯ ಮಾತು ಕನಕಪುರದಲ್ಲಿ ಕೇಳಿ ಬರುವುದು ಸಹಜ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಆನೇಕಲ್- ರಾಜರಾಜೇಶ್ವರಿನಗರದ ವಿಧಾನ ಸಭೆ ಕ್ಷೇತ್ರಗಳ ಬಿಜೆಪಿಯ ಪ್ರಭಾವ ಸಾಕಷ್ಟಿದೆ. ಈ ಬೆಂಬಲವನ್ನು ಗಳಿಸಲು ಕುಮಾರಸ್ವಾಮಿ ಅವರು ಉತ್ಸುಕರಾಗಿದ್ದಾರೆ. ದೇವೇಗೌಡರ ಸೆಕ್ಯುಲರ್ ಪ್ರತಿಷ್ಠೆಯನ್ನೂ ಉಳಿಸಿ, ಬಿಜೆಪಿಯ ಸ್ಥಳೀಯ ನಾಯಕರ ಮೂಗಿಗೆ ತುಪ್ಪವನ್ನೂ ಸವರಿ, ಅನಿತಾ ಅವರ ಪರವಾಗಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕ್ರೋಢೀಕರಿಸುವ ತಂತ್ರಕ್ಕೆ ಎಲ್ಲವೂ ಸಜ್ಜಾಗಿದೆ.
 ಇನ್ನು ಉಳಿದಂತೆ ಚುನಾವಣೆ ಕಾಲದ ಭಾಷಣಗಳೆಲ್ಲವೂ ಬುರ್ನಾಸು. ಪತ್ರಿಕೆ, ಟಿ.ವಿ. ವಾಹಿನಿಗಳ ಅನುಕೂಲಕ್ಕೆಂದೇ ಕೈಗೊಳ್ಳುವ ಶಾಸ್ತ್ರದ ಆಚರಣೆ.

ಕಿಡಿಗೇಡಿತನ- ದೇವೇಗೌಡರು ಮುಖ್ಯಮಂತ್ರಿಯಾಗುವ ಮುನ್ನ ನಡೆದ ಚುನಾವಣೆ ಸಮಯದಲ್ಲೇ ಹೊಳೆನರಸೀಪುರದಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿ ಕಣ್ಣೀರು ಹಾಕಿದ್ದರು. ಆ ಕೊನೇ ಚುನಾವಣೆಯಲ್ಲಿ ಗೆದ್ದು ಹತ್ತೊಂಬತ್ತು ವರ್ಷಗಳ ಅನಂತರವೂ ಅದೇ ಮಾತು ಕೇಳುವುದು ಹಿತಕರವಾದ ಅನುಭವ ಅಲ್ಲ.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!