ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದೇವದಾಸಿ ಪದ್ಧತಿ ದೂರ ಮಾಡಲು ಎಲ್ಲರೂ ಕೈಜೋಡಿಸೋಣ

Mainashree
Updated On : 12 Aug 2013, 11:52 am

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಒಂದು ಪರಿಶೀಲನಾ ಸಭೆಯಲ್ಲಿ ನಮ್ಮ ರಾಜ್ಯದಲ್ಲಿನ ದೇವದಾಸಿಯರ ಸಂಖ್ಯೆಯನ್ನು ಕಂಡು ಖೇದಗೊಂಡೆ. ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿಯಲ್ಲಿ 3600, ಬಿಜಾಪುರದಲ್ಲಿ 1964, ಬಾಗಲಕೋಟೆಯಲ್ಲಿ 4804, ಬಳ್ಳಾರಿಯಲ್ಲಿ 635, ಕೊಪ್ಪಳದಲ್ಲಿ 4880, ರಾಯಚೂರಿನಲ್ಲಿ 2494, ಗುಲ್ಬರ್ಗಾದಲ್ಲಿ 991, ಧಾರವಾಡದಲ್ಲಿ 481, ಹಾವೇರಿಯಲ್ಲಿ 617, ಗದಗದಲ್ಲಿ 1407...ಒಟ್ಟು 22873 ಗುರುತಿಸಲಾದ ದೇವದಾಸಿಯರ ಸಂಖ್ಯೆಯನ್ನು ಕಂಡು ಈ ಮೌಢ್ಯವನ್ನು ಸಮಾಜದಿಂದ ಅಳಿಸಲು ನನ್ನ ಕೈಲಾದ ಸೇವೆಯನ್ನು ಬಹಳ ಗಂಭೀರವಾಗಿ ಮಾಡಬೇಕೆಂದು ನಿರ್ಧರಿಸಿದೆ.
ಆರನೇ ಶತಮಾನದಿಂದ ಇರುವ ಪಿಡುಗು ಈ ದೇವದಾಸಿ ಪದ್ಧತಿ. ಕಾಳಿದಾಸನ ಮೇಘದೂತದಲ್ಲಿ ದೇವಸ್ಥಾನಗಳಿಗೆ ಅರ್ಪಿತಗೊಂಡ ನ್ಯತ್ಯಗಾತಿಯರ ಉಲ್ಲೇಖ ಕಂಡು ಬರುತ್ತದೆ. ಅಂದಿನಿಂದ ಇಂದಿನವರೆಗೆ ಬೆಳೆದು ಬಂದಿರುವ ಈ ಪದ್ಧತಿಯನ್ನು ಸಮಾಜ ಒಪ್ಪಿಕೊಂಡಿರುವುದರಿಂದಲೇ ಇಂಥ ಘೋರ ಸಂಪ್ರದಾಯಕ್ಕೆ ಸಂಪೂರ್ಣ ಕಡಿವಾಣ ಇನ್ನೂ ಬಿದ್ದಿಲ್ಲವೆಂಬುದು ವಿಷಾದದ ಸಂಗತಿ.
ಆರ್ಥಿಕವಾಗಿ ಸಮಾಜದ ಬಹಳ ಕೆಳ ಮಟ್ಟದಲ್ಲಿರುವವರೇ ಬಹುತೇಕ ಈ ದೇವದಾಸಿ ಪದ್ಧತಿಯನ್ನು ಪಾಲಿಸುವುದು. ಗಂಡು ಮಕ್ಕಳು ಬೇಕೆಂದು ಬಯಸಿ, ಮೊದಲನೆಯದು ಹೆಣ್ಣಾದರೆ ಅವಳನ್ನು ಯಲ್ಲಮ್ಮನಿಗೆ ಬಿಡುತ್ತೇವೆ ಎನ್ನುತ್ತಾರೆ. ಮನೆಯಲ್ಲಿ ಬಹಳ ಬಡತನವಿದ್ದರೆ ಒಬ್ಬ ಮಗಳನ್ನು ಯಲ್ಲಮ್ಮನಿಗೆ ಅರ್ಪಿಸಿ, ಅವಳನ್ನು ದೇವದಾಸಿಯನ್ನಾಗಿ ಮಾಡಿ, ಅವಳ ದುಡಿಮೆಯಿಂದ ಮನೆಯವರೆಲ್ಲ ಉಣ್ಣುತ್ತಾರೆ. ಇದರ ಬಗ್ಗೆ ಆ ಮನೆಯವರಿಗೆ ಯಾವುದೇ ಬೇಸರವಿಲ್ಲ. ಅತ್ಯಂತ ಬಡತನದಲ್ಲಿ ನರಳುತ್ತಿರುವವರನ್ನು ಮೇಲ್ವರ್ಗದ ಸಮಾಜ ಈ ರೀತಿಯ ಮೂಢನಂಬಿಕೆಗಳಿಗೆ ಕಟ್ಟಿ ಹಾಕಿ, ತಾವು ಅವರನ್ನು ತಮಗೆ ಬೇಕಾದಾಗ ಅನುಭವಿಸುವುದನ್ನು ಕಂಡಾಗ ಇದಕ್ಕೆಲ್ಲಾ ಪರಿಹಾರ 'ಶಿಕ್ಷಣ'ವೊಂದೇ ಎನಿಸುತ್ತದೆ. ಅಲ್ಲದೆ ಪ್ರತಿಯೊಬ್ಬರಿಗೂ ಆರೋಗ್ಯ, ಆರ್ಥಿಕ ಸ್ವಾತಂತ್ರ್ಯ ದೊರೆತರೆ ಇಂಥ ಅಸಮಾನತೆಯನ್ನು ತೊಡೆದು ಹಾಕಲು ಸಾಧ್ಯ.
ಕರ್ನಾಟಕ ಸರ್ಕಾರ ಈ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಾರಿಗೊಳಿಸಿದೆ. ಉದಾಹರಣೆಗೆ ಆಸರೆ ಯೋಜನೆಯಡಿಯಲ್ಲಿ ದೇವದಾಸಿಯರಿಗೆ ರು. 40,000ದಂತೆ 7,500 ಮನೆಗಳನ್ನು ಕಟ್ಟಿಸಿ ಕೊಟ್ಟಿದೆ. ಸ್ವಂತ ನಿವೇಶನ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇಂತಹ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ತರಬೇತಿ ಕೊಟ್ಟು ರು. ಹತ್ತು ಸಾವಿರ ಸಹಾಯ ಧನ ಮತ್ತು ರು. ಹತ್ತು ಸಾವಿರ ಬ್ಯಾಂಕ್ ಸಾಲವನ್ನೂ ಸಹ ವ್ಯವಸ್ಥೆ ಮಾಡಿಕೊಡುತ್ತಿದೆ. ಅಮೃತ ಯೋಜನೆಯಡಿಯಲ್ಲಿ ಹಸುಗಳನ್ನು ಸಾಕಲು ಉತ್ತೇಜನ ಹಾಗೂ ಸಹಾಯಧನ ನೀಡಲಾಗುತ್ತಿದೆ. ದೇವದಾಸಿ ಪದ್ಧತಿಯಿಂದ ಮುಕ್ತರಾಗಿರುವ ಮಹಿಳೆಯರಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿಕೊಳ್ಳಲು ಎಲ್ಲ ರೀತಿಯ ತರಬೇತಿಯನ್ನೂ ಕೊಡಲಾಗುತ್ತಿದೆ. ಜೊತೆಗೆ ರು. ಐದು ಸಾವಿರ ಸುತ್ತುನಿಧಿಯನ್ನು ನೀಡಲಾಗುತ್ತದೆ. ಈಗಾಗಲೇ ಇಂತಹ 942 ಸ್ವಸಹಾಯ ಗುಂಪುಗಳು ಇವೆ. ನಲವತ್ತೈದು ವರ್ಷದ ಮೇಲಿನ ಮಾಜಿ ದೇವದಾಸಿಯರಿಗೆ ತಿಂಗಳಿಗೆ ರು. 400 ಮಾಸಾಶನ ಸರ್ಕಾರದಿಂದ ಕೊಡಲಾಗುತ್ತಿದೆ.  ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಂಬಂಧಪಟ್ಟ ಮಹಿಳೆಯರಿಗೆ ತಲುಪಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗವನ್ನು ಪಡೆಯಲಾಗುತ್ತಿದೆ.  
ಮಹಿಳಾ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ (ಂಆಖಖ)ಯ ಸತತ ಪರಿಶ್ರಮದಿಂದಾಗಿ ಇಂದು ಬೆಳಗಾವಿ ಜಿಲ್ಲೆಯನ್ನು 'ದೇವದಾಸಿ ಪದ್ಧತಿ ಮುಕ್ತವಾದ ಜಿಲ್ಲೆ'ಯೆಂದು ಘೋಷಿಸಲಾಗಿದೆ. ಂಆಖಖ ಸಂಸ್ಥೆಯ ಶೋಭಾ ಗಸ್ತಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಸಕಾರಾತ್ಮಕವಾಗಿ ದುಡಿಯುತಿದ್ದಾರೆ. ಈ ಸಂಸ್ಥೆ ಜಾಗೃತಿ ಶಿಬಿರಗಳ ಮೂಲಕ ಆರ್ಥಿಕವಾಗಿ ಸಬಲರಾಗಲು ಬೇಕಾದ ತರಬೇತಿ, ಸ್ವಾವಲಂಬನೆಗೆ ವ್ಯಾಪಾರ, ಬಟ್ಟೆ ಹೊಲಿಯುವುದು, ಕಸೂತಿ ಮಾಡುವುದು, ಸಣ್ಣ ಅಂಗಡಿಯನ್ನಿಟ್ಟುಕೊಳ್ಳುವುದು, ಚಾಪೆ ಹೆಣೆಯುವುದು, ಹಗ್ಗ ಹೊಸೆಯುವುದು, ಹಸುವನ್ನು ಸಾಕಿ ಹಾಲನ್ನು ಡೈರಿಗೆ ಹಾಕುವುದು, ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಅದೇ ರೀತಿ ಬಾಗಲಕೋಟೆಯಲ್ಲಿ 'ಚೈತನ್ಯ ಮಹಿಳಾ ಸಂಘವು' ಸ್ವಸಹಾಯ ಸಂಘಗಳ ಸ್ಥಾಪನೆ, ಆರೋಗ್ಯ ಪಾಲನೆ, ಏಡ್ಸ್ ತಡೆಗಟ್ಟಲು ತಿಳವಳಿಕೆ ಮತ್ತು ಆರ್ಥಿಕವಾಗಿ ಸಬಲರಾಗಲು ತರಬೇತಿ, ಉದ್ಯೋಗ, ಇಂಥ ಹಲವಾರು ಕಾರ್ಯಗಳಲ್ಲಿ ತೋಡಗಿದೆ. ಇಂತಹ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವ ಶೋಭಾ ಗಸ್ತಿ, ಮಧು ಮತ್ತು ಇನ್ನಿತರ ಸದಸ್ಯರುಗಳ ಕಾರ್ಯ ವೈಖರಿ, ದೂರದೃಷ್ಟಿಯನ್ನು ಕಂಡು ನನ್ನ ಎಲ್ಲಾ ಪ್ರಯತ್ನಗಳನ್ನು ಇಂಥವರ ಮೂಲಕ ಸಾಕಾರಗೊಳಿಸಬಹುದು ಎಂದು ನನಗನ್ನಿಸಿತು. ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಹೆಚ್ಚಿನ ಮಟ್ಟದಲ್ಲಿ ಈ ಪದ್ಧತಿ ಇದ್ದುದರಿಂದ, ಅಲ್ಲಿಂದಲೇ ಆರಂಭ ಮಾಡಬೇಕೆಂದು ನಿರ್ಧರಿಸಿದೆ.
ಜೋಗಿ ಹುಣ್ಣಿಮೆಯಲ್ಲಿ ಸುಮಾರು ಎಂಟು ಹುಡುಗಿಯರನ್ನು ಬಾಗಲಕೋಟೆಯಲ್ಲಿ ಮತ್ತು ನಾಲ್ವರನ್ನು ಬೆಳಗಾವಿಯಲ್ಲಿ, ಎರಡು ದಿನ ಮುಂಚಿತವಾಗಿಯೇ ಆ ಮನೆಯವರು ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ತಮ್ಮ  ದೇವದಾಸಿಯರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ನನಗೆ ಸಿಕ್ಕಿತ್ತು. ಈ ಬಗ್ಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಜಿಲ್ಲೆಗಳಲ್ಲಿ ಪೊಲೀಸಿನವರ ಸಹಕಾರದಿಂದ ಕಟ್ಟೆಚ್ಚರ ವಹಿಸುತ್ತಾರೆ ಎಂಬ ಅರಿವು ಜನರಿಗೆ ಇದ್ದುದರಿಂದ, ನನಗೆ ಸಿಕ್ಕ ಮಾಹಿತಿಯನ್ನು ಬಳಸಿಕೊಂಡು ಹೇಗೆ ಇದನ್ನು ತಡೆಯಬಹುದು ಎಂದು ಚರ್ಚಿಸಿದೆವು. ಆಗ ನಾವು ಮಾಡಿದ ಯೋಜನೆಯೆಂದರೆ, ಮರು ದಿನದಿಂದಲೇ ಸಂಘದ ಸದಸ್ಯರು ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿ ಬಸ್ಸುಗಳು ಬರುವ ಸಮಯದಲ್ಲಿ ಹಾಜರಿರಬೇಕು. ಯಾರಾದರೂ ಹೆಣ್ಣು ಮಕ್ಕಳನ್ನು ಬೇರೆ ಊರಿಗೆ ಕರೆದುಕೊಂಡು ಹೋಗುತ್ತಿದ್ದರೆ, ಅವರನ್ನು ನಿಲ್ಲಿಸಿ, ಪ್ರಶ್ನಿಸಿ, ತಕ್ಷಣವೇ ಪೊಲೀಸರಿಗೆ ಹೇಳಿ ಕಳುಹಿಸಬೇಕು. ಹೆಣ್ಣು ಮಕ್ಕಳಿರುವ ಮನೆಗಳಿಗೆಲ್ಲಾ ಸಂಘದ ಸದಸ್ಯರು ಭೇಟಿ ನೀಡಿ ಸರ್ಕಾರ ತೀವ್ರ ಕ್ರಮ ಜರುಗಿಸಲಿದೆ ಎಂಬ ಮಾಹಿತಿಯನ್ನು ನೀಡಿ, ಅವರಿಗೆ ಬದುಕಲು ಯಾವ ರೀತಿಯ ಸಹಾಯ ಬೇಕು ಎಂಬುದನ್ನು ಪತ್ತೆ ಮಾಡಿ, ಈ ದುರಂತವನ್ನು ತಪ್ಪಿಸಬೇಕು ಎಂದು ನಿರ್ಧಾರವಾಯಿತು. ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಅವರ ಸಹಾಯವನ್ನು ಪಡೆದೆವು. ಬಾಗಲಕೋಟೆಯಲ್ಲಿ ಏಡ್ಸ್ ತಡೆಗಟ್ಟಲು ಕೆನಡಾ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯಾಲಯವು, ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿತ್ತು. ಅವರ ನೆರವನ್ನೂ ಪಡೆದು ಮುಂದಿನ ಹತ್ತು ದಿನಗಳಲ್ಲಿ ಹಲವಾರು ಕಾರ್ಯಾಗಾರಗಳನ್ನು ಏರ್ಪಡಿಸಿ, ದೇವದಾಸಿಯನ್ನಾಗಿ ಮಾಡಿದರೆ ಆಗುವ ಬಾಧಕಗಳು, ದೇವದಾಸಿ ನಿರ್ಮೂಲನಾ ಕಾಯ್ದೆಯ ನಿಯಮಗಳು, ಎಲ್ಲವನ್ನೂ ವಿವರಿಸಲಾಯಿತು.
ರಾಷ್ಟ್ರೀಯ ಕಾನೂನು ಶಿಕ್ಷಣ ಮಂಡಳಿಯು ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಯಲ್ಲಿದ್ದರೂ ಅದರ ಬಗ್ಗೆ ನ್ಯಾಯಮೂರ್ತಿಗಳಿಗೆ, ನ್ಯಾಯವಾದಿಗಳಿಗೆ, ಪೊಲೀಸಿನವರಿಗೆ, ಅಧಿಕಾರಿಗಳಿಗೆ ಸಾಕಷ್ಟು ಅರಿವು ನೀಡಬೇಕು ಎನ್ನುವುದನ್ನು ಮನಗಂಡು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಶೇಷ ತರಬೇತಿಯನ್ನು 'ಪ್ರಾಜೆಕ್ಟ್ ಕಾಂಬ್ಯಾಟ್‌' ಎಂಬ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರಗಳನ್ನು ಏರ್ಪಡಿಸಲು ನಾವೂ ಕೈಜೋಡಿಸಿದೆವು. ಹಾಗಾಗಿ ಯುದ್ಧಕ್ಕೆ ಸಜ್ಜಾಗುವ ಹಾಗೆ, ಎಲ್ಲಾ ರೀತಿಯಲ್ಲಿಯೂ ತಯಾರಿ ನಡೆಸಿದೆವು. ನಮಗೆ ಬಂದ ವರದಿಯ ಪ್ರಕಾರ ಯಾವ ಅಚಾತುರ್ಯವೂ ಆ ಹುಣ್ಣಿಮೆಯಂದು ನಡೆಯಲಿಲ್ಲ.
ಜೋಗಿ ಹುಣ್ಣಿಮೆ ಕಳೆದ ಒಂದು ವಾರಕ್ಕೆ ಶೋಭಾ ಗಸ್ತಿ ದೇವದಾಸಿಯರಾಗಬೇಕಾಗಿದ್ದ ನಾಲ್ವರನ್ನೂ, ಮಧು ಏಳು ಹುಡುಗಿಯರನ್ನೂ ಬೆಂಗಳೂರಿಗೆ ನನ್ನ ಕಚೇರಿಗೆ ಕರೆದು ತಂದರು. ಅವರೆಲ್ಲರ ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯಿತು. ಅವರಾರಿಗೂ ತಾವು ದೇವದಾಸಿಯರಾಗುವುದು ಬೇಕಿರಲಿಲ್ಲ. ಹಾಗಾಗಿ ಅವರುಗಳೇ ಶೋಭಾ ಗಸ್ತಿ, ಮಧು ಮತ್ತು ಇತರ ಸದಸ್ಯರಿಗೆ ತಮ್ಮ ಮನೆಯವರ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದರು. ಹಾಗಾಗಿ ಅವರನ್ನು ದುರಂತದಿಂದ ತಪ್ಪಿಸಲು ಸಾಧ್ಯವಾಯಿತು. ಜನ್ಮ ಸಾರ್ಥಕವಾಯಿತೆಂಬ ಭಾವ ನನ್ನಲ್ಲೂ ಮೂಡಿತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 'ವಿಮೋಚನ ಸ್ವಯಂ ಸೇವಾ ಸಂಸ್ಥೆ' ದೇವದಾಸಿಯರ ಮಕ್ಕಳಿಗೆಂದೇ ಒಂದು ಶಾಲೆಯನ್ನು ಪ್ರಾರಂಭಿಸಿತು. ನಾನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ  ಸರ್ಕಾರ ಒಂದು ಹೊಸ ಯೋಜನೆಯ ಅಡಿಯಲ್ಲಿ ಆ ಶಾಲೆಯ ಪರಿಕರಗಳು ಮತ್ತು ವ್ಯವಸ್ಥೆಗೆಂದು ಒಂದು ಕೋಟಿ ಐವತ್ತು ಲಕ್ಷ ಹಣವನ್ನು ಮಂಜೂರು ಮಾಡಿದೆ. ಇಂದು ಆ ಮಕ್ಕಳು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ನ್ಯಾಯಾಂಗದ ಕ್ಷೇತ್ರದಲ್ಲಿ ಪದವಿ ಪಡೆದಿದ್ದಾರೆ.  ಮಾತ್ರವಲ್ಲ ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ಕರ್ನಾಟಕ ಅಡಳಿತ ಸೇವೆಗೆ ಸೇರಿದ್ದಾರೆ.  ಇದು ನಿಜವಾಗಿ ಸ್ವತಂತ್ರ ರಾಜ್ಯದ, ಸ್ವತಂತ್ರ ಬದುಕಿನ ಒಂದು ನೋಟವಾಗಿದೆ. ಸಮಾಜದ ಕೀಳು ಪದ್ಧತಿಗೆ ಒಳಪಟ್ಟ ತಂದೆ ತಾಯಿಯರ ಮಕ್ಕಳು ಉತ್ತಮ ಅವಕಾಶಗಳನ್ನು ಬಳಸಿ ಇವತ್ತು ತಾವೂ ಸ್ವಾವಲಂಬಿಯಾಗಿ, ಬೇರೆಯವರಿಗೂ ರಕ್ಷಣೆ ನೀಡಲು ಸಕ್ಷಮರಾಗಿರುವುದು ಹೆಮ್ಮೆಯ ವಿಷಯ.
ಕೇವಲ ನಾವಷ್ಟೇ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ವಾತಂತ್ರ್ಯ ಪಡೆದರೇ ಸಾಲದು. ಒಬ್ಬ ಪ್ರಜ್ಞಾವಂತ ನಾಗರಿಕನಾದವನು ನತದೃಷ್ಟರ ಕೈ ಹಿಡಿದು ಸ್ವಾಭಿಮಾನದಿಂದ ಬದುಕಲು ದಾರಿಯನ್ನು ತೋರಿದರೆ ಮಾತ್ರ ಮಾನವ ಜನ್ಮವನ್ನು ಪಡೆದದ್ದು ಸಾರ್ಥಕವಾಗುತ್ತದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಸಮಾಜದ ಮೌಢ್ಯಗಳು ಅಳಿಯಬೇಕಾದರೆ ಕೇವಲ ಸರ್ಕಾರ ಕೆಲಸ ಮಾಡಿದರೆ ಸಾಲದು, ಪ್ರತಿಯೊಬ್ಬ ನಾಗರಿಕನೂ ಈ ಕೆಲಸದಲ್ಲಿ ಕೈಜೋಡಿಸಬೇಕು. ಆಗಲೇ ಜಾಗೃತ ಸಮಾಜ, ಉತ್ತಮ ನಾಗರಿಕರನ್ನು ಹೊಂದಲು ಸಾಧ್ಯ. ನಿಮ್ಮ ಗಮನಕ್ಕೆ ದೇವದಾಸಿ ಪದ್ಧತಿ ಇನ್ನೂ ನಡೆಯುತ್ತಿರುವುದು ತಿಳಿದು ಬಂದರೆ ದಯವಿಟ್ಟು ಉಚಿತ ದೂರವಾಣಿ ಸಂಖ್ಯೆ 1091ಗೆ ಕರೆ ಮಾಡಿ.

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement