ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರಧಾನಿ ಕನಸಿನ ನಿತೀಶರಿಗೆ ಜನರ ಮಿಡಿತ ಅರ್ಥವಾಗುತ್ತಿಲ್ಲವೇಕೆ?

Mainashree
Updated On : 12 Aug 2013, 11:55 am

ಬಿಹಾರದಲ್ಲಿ ಅಭಿವೃದ್ಧಿಯ ಅಧ್ಯಾಯವನ್ನು ಶುರು ಮಾಡಿದ್ದಕ್ಕೆ ಹಾಗೂ ಉತ್ತಮ ಆಡಳಿತದ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕೆ ಈ ಹಿಂದೆ ನಿತೀಶ್ ಕುಮಾರ್ ಅವರು ಶ್ರೇಯಸ್ಸು ಪಡೆದಿದ್ದರು. ಆದರೆ ಇತ್ತೀಚೆಗೆ ಒಂದಿಲ್ಲೊಂದು ತಪ್ಪು ಹೆಜ್ಜೆಗಳನ್ನಿಟ್ಟು ಎಡವುತ್ತಲೇ ಇರುವ ಮುಖ್ಯಮಂತ್ರಿ ಅವರಾಗಿದ್ದಾರೆ.
ಕಳೆದ ಮಂಗಳವಾರ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರ ಕುತಂತ್ರದಿಂದ ನಮ್ಮ ಐವರು ಯೋಧರು ಹತ್ಯೆಯಾದರು. 2003ರಲ್ಲಿ ಉಭಯ ರಾಷ್ಟ್ರಗಳ ನಡುವೆ ಕದನವಿರಾಮ ಘೋಷಣೆಯಾದ ನಂತರದ ಉಲ್ಲಂಘನೆಯಲ್ಲಿ ಅತಿಹೆಚ್ಚಿನ ಪ್ರಾಣಹಾನಿಯಾದ ಘಟನೆ ಇದು. ಅವರಲ್ಲಿ ನಾಲ್ವರು ಹುತಾತ್ಮರು ಬಿಹಾರಕ್ಕೆ ಸೇರಿದವರು. ಆಗ ದೆಹಲಿಯಲ್ಲಿದ್ದ ನಿತೀಶ್ ಕುಮಾರ್ ಅವರಿಗೆ ಪಟ್ನಾಕ್ಕೆ ಹಿಂತಿರುಗಿ ಈ ಹುತಾತ್ಮ ಯೋಧರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬೇಕು ಎಂದೆನಿಸಲೇ ಇಲ್ಲ.
ಭೀಮ್‌ಸಿಂಗ್, ನಿತೀಶ್ ಕುಮಾರ್ ಅವರ ಸಂಪುಟದ ಹಿರಿಯ ಸದಸ್ಯ. 'ಯೋಧರ ಅಂತ್ಯಕ್ರಿಯೆಯಲ್ಲಿ ವಿಶೇಷ ಎನ್ನಿಸುವಂಥದ್ದು ಏನಿದೆ' ಎಂಬುದು ಅವರ ಪ್ರಶ್ನೆ. ಈ ಹೇಳಿಕೆ ಹೊರಬಿದ್ದ ತಾಸಿನೊಳಗೆ ಪಕ್ಷದ ವಕ್ತಾರ ಈ ಮಾತನ್ನು ನಿರಾಕರಿಸುವುದಾಗಿ ಹೇಳಿದ್ದಾಯಿತು. ದೆಹಲಿಯಲ್ಲಿದ್ದ ನಿತೀಶ್ ಕುಮಾರ್ ಈ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು. ವಿಶೇಷ ವಿಮಾನದಲ್ಲಿ ಬುಧವಾರ ಸಾಯಂಕಾಲ ಪಟ್ನಾಕ್ಕೆ ನಾಲ್ವರು ಯೋಧರ ಪಾರ್ಥಿವ ಶರೀರ ಬಂದಿಳಿದಾಗ ನಿತೀಶ್ ಕುಮಾರ್ ಸಂಪುಟದ ಒಬ್ಬನೇ ಒಬ್ಬ ಸಚಿವನೂ ಅವುಗಳನ್ನು ಗೌರವದೊಂದಿಗೆ ಬರ ಮಾಡಿಕೊಳ್ಳುವುದಕ್ಕೆ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರಲಿಲ್ಲ.
ಶಿಷ್ಟಾಚಾರ ಪಾಲಿಸಿದರಾಯಿತು ಎಂಬಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಆಡಳಿತ ವಿಭಾಗದ ಅಧಿಕಾರಿಗಳನ್ನು ಅಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಟೀಕಾಕಾರರು ಹೇಳುವುದಿಷ್ಟೆ. ಆ ದಾಳಿಯ ತೀವ್ರತೆ ಮತ್ತು ಆ ಬಗ್ಗೆ ದೇಶ ಎಷ್ಟರಮಟ್ಟಿಗೆ ಆಕ್ರೋಶಗೊಂಡಿತ್ತು ಎಂಬುದನ್ನು ನಿತೀಶ್ ಕುಮಾರ್ ಅವರು ಅರ್ಥಮಾಡಿಕೊಳ್ಳಬೇಕಿತ್ತು. ದೇಶದ ಏಕತೆ ಮತ್ತು ಮಾನವತೆಯ ಪರ ನಿಲ್ಲಬೇಕಾದ ಸಂದರ್ಭ ಅದಾಗಿತ್ತು.
1999ರ ಕಾರ್ಗಿಲ್ ಯುದ್ಧದ ಸಂದರ್ಭ. ಬಿಹಾರಕ್ಕೆ ಸೇರಿದ 20 ಯೋಧರು ಹುತಾತ್ಮರಾಗಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ರಾಬ್ಡಿದೇವಿ, ಪ್ರಾದೇಶಿಕ ರಾಜಕೀಯ ಶಕ್ತಿಯಾದ ತಮ್ಮ ಪತಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದು ಶವಪೆಟ್ಟಿಗೆಗಳನ್ನು ಪಡೆದಿದ್ದರು. ತಮ್ಮವರನ್ನು ಕಳೆದುಕೊಂಡ ಸೈನಿಕರ ಕುಟುಂಬಗಳನ್ನು ಸ್ವತಃ ಭೇಟಿ ನೀಡಿದ ಲಾಲು ಪ್ರಸಾದ್, ಸಾಂತ್ವನ ವ್ಯಕ್ತಪಡಿಸಿ 10 ಲಕ್ಷ ರುಪಾಯಿಗಳ ಚೆಕ್ ಕೊಟ್ಟು ಬಂದರು.
2010ರಲ್ಲಿ ಎರಡನೆ ಅವಧಿಗೆ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದ ನಿತೀಶ್ ಕುಮಾರ್ ಅವರು ತಾವು 'ಜನರ ಮನುಷ್ಯ' ಎಂಬ ಇಮೇಜ್ ಅನ್ನು ಬಹಳ ಕಾಳಜಿಯಿಂದ ಬೆಳೆಸಿಕೊಂಡು ಬಂದಿದ್ದಾರೆ. 2011ರಲ್ಲಿ ಅವರ ತಾಯಿ ಮರಣಿಸಿ ಮೂರು ದಿನಗಳಾಗಿತ್ತು. ಆಗಲೂ ನಿತೀಶ್ ಕುಮಾರ್ ತಮ್ಮ ವಾರದ ಕಾರ್ಯಕ್ರಮವಾದ ಜನತಾ ದರ್ಬಾರ್ ತಪ್ಪಿಸಲಿಲ್ಲ. ಸಾರ್ವಜನಿಕರು ಮುಖ್ಯಮಂತ್ರಿಯನ್ನು ಮತ್ತು ಸಚಿವರನ್ನು ಭೇಟಿಯಾಗಿ ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳುವ ವೇದಿಕೆ ಅದು. ಕೌಟುಂಬಿಕವಾಗಿ ಹೀಗೊಂದು ದುಃಖದ ಆಘಾತ ಬಡಿದಿದ್ದರೂ ನಿಮ್ಮ ಕಾರ್ಯಕ್ರಮವನ್ನು ಏಕೆ ಮುಂದೂಡಲಿಲ್ಲ ಎಂದು ಪ್ರಶ್ನಿಸಿದಾಗ, 'ಜನ ಸಾಮಾನ್ಯರ ಕೆಲಸವೇ ಅತಿದೊಡ್ಡ ಕರ್ತವ್ಯ. ಅದನ್ನು ನಿರ್ಲಕ್ಷಿಸುವಂತೆಯೇ ಇಲ್ಲ.'
ಇಂಥ ಇಮೇಜ್ ಬೆಳೆಸಿಕೊಂಡ ನಿತೀಶ್ ಕುಮಾರ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಈಗ ಮತ್ತೆ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಪಟ್ನಾದಿಂದ ಕೇವಲ ಒಂದು ತಾಸಿನ ಪ್ರಯಾಣದ ನಿಲುಕಿನಲ್ಲಿರುವ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟು ಕಳೆದ ತಿಂಗಳು ಮಧ್ಯಾಹ್ನದ ಬಿಸಿ ಊಟದಲ್ಲಿ ವಿಷ ಸೇರಿದ್ದರಿಂದ ಮರಣಿಸಿದ 23 ಶಾಲಾ ಮಕ್ಕಳ ಕುಟುಂಬಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿ ಬರುವುದಕ್ಕೆ ನಿತೀಶ್ ಕುಮಾರ್ ಅವರನ್ನು ತಡೆದವರು ಯಾರು? ಇದಕ್ಕೆ ಪ್ರತ್ಯುತ್ತರವಾಗಿ ನಿತೀಶ್ ಕುಮಾರ್ ಹೇಳುವುದೆಂದರೆ, ತಮ್ಮ ಬೆರಳು ಮುರಿದಿರುವುದರಿಂದ ತಿರುಗಾಟ ಸೂಕ್ತವಲ್ಲ ಎಂದು ವೈದ್ಯರು ಉಪದೇಶಿಸಿದ್ದರು ಎಂಬುದು. ಬಿಹಾರ ವಿಧಾನಸಭೆಗೆ ಬಂದು ಹೋಗುವುದಕ್ಕೆ ಈ ಗಾಯಏನೂ ತೊಂದರೆ ಕೊಡಲಿಲ್ಲ. ಹೋಗಲಿ, ಪಟ್ನಾದ ಮೆಡಿಕಲ್ ಕಾಲೇಜ್‌ಗೆ ಭೇಟಿ ಕೊಡುವ ಶ್ರಮವನ್ನೂ ಅವರು ತೆಗೆದುಕೊಳ್ಳಲಿಲ್ಲ. ಅದೇ ಮಧ್ಯಾಹ್ನದ ಊಟದ ವಿಷಪ್ರಾಸನಕ್ಕೆ ತುತ್ತಾಗಿದ್ದ ಇನ್ನೂ 23 ವಿದ್ಯಾರ್ಥಿಗಳು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿತೀಶ್ ಕುಮಾರ್ ಪಕ್ಷದ ಕಾರ್ಯಕರ್ತರೇ ಹೇಳುವ ಪ್ರಕಾರ ಪಟ್ನಾದ ಜೆಡಿಯು ಮುಖ್ಯ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ನಡೆಯುತ್ತಿದ್ದ ವಾರದ ಸಭೆಗಳು ಈಗ ತಿಂಗಳಿಗೊಮ್ಮೆ ಆಗಿವೆ. ಇದರ ಪರಿಣಾಮವಾಗಿ ಈ ಕಾರ್ಯಕರ್ತರಿಗೆ ತಮ್ಮ ಜಿಲ್ಲೆ ಮತ್ತು ಹಳ್ಳಿಗಳಲ್ಲಿ ಎದುರಾಗುತ್ತಿರುವ ಸೂಕ್ಷ್ಮ ಸಮಸ್ಯೆಗಳನ್ನು ತೋಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕಾಕತಾಳೀಯ ಎಂಬಂತೆ ಆಡಳಿತಾತ್ಮಕ ವಲಯದಲ್ಲಿ ಭ್ರಷ್ಟಾಚಾರವೂ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರವರು. ಭ್ರಷ್ಟ ಅಧಿಕಾರಿಗಳ ಮೇಲೆ ನಿಗಾ ಇಡುವುದಕ್ಕೆ, ಲಂಚ ತೆಗೆದುಕೊಂಡವರ ಆಸ್ತಿ ಜಪ್ತು ಮಾಡಿ ಅವುಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುವ ನಡೆಗಳಿಂದಲೇ ನಿತೀಶ್ ಕುಮಾರ್ ಅವರು ಪ್ರಸಿದ್ಧಿಗೆ ಬಂದಿದ್ದರು. ಆದರೆ ಪಕ್ಷದ ಕಾರ್ಯಕರ್ತರು ಹೇಳುವ ಪ್ರಕಾರ ಇಂಥದೊಂದು ಕ್ರಮದ ಇತ್ತೀಚಿನ ಉದಾಹರಣೆ ಹುಡುಕುವುದಾದರೆ ಕನಿಷ್ಠ ಆರು ತಿಂಗಳ ಹಿಂದೆ ಹೋಗಬೇಕಾಗುತ್ತದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ 'ಸೇವಾ ಯಾತ್ರೆ' ಮಾಡುವುದನ್ನು ಮುಂದುವರಿಸಿದ್ದಾರಾದರೂ ಸಾಮಾನ್ಯ ಜನರ ಅಳಲನ್ನು ಆಲಿಸುವ, ಅಧಿಕಾರಿಗಳನ್ನು ಪರಿಹಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಜನತಾ ದರ್ಬಾರ್ ಅನ್ನು ನಿಲ್ಲಿಸಿದ್ದಾರೆ. ಯೋಜನೆ ಮತ್ತು ಸುಧಾರಣೆಗಳನ್ನು ಪರಾಮರ್ಶಿಸುವ ಅಧಿಕಾರಿಗಳೊಂದಿಗಿನ ಸಭೆ ಜಾರಿಯಲ್ಲಿದೆ.

- ಮನೀಶ್ ಕುಮಾರ್, ಎನ್‌ಡಿಟಿವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement