ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈ ಎರಡು ದುಷ್ಕೃತ್ಯಗಳ ನಂತರವೂ ಪಾಕಿಸ್ತಾನ ಮುಗ್ಧ ರಾಷ್ಟ್ರವೇ?

Mainashree
Updated On : 13 Aug 2013, 12:55 pm

ಹೌದು, ಭಾರತೀಯರಿಗೆ ಇರುವಷ್ಟು ತಾಳ್ಮೆ ಬೇರಾವ ದೇಶದಲ್ಲಿರುವವರಿಗೂ ಇಲ್ಲ. ಭಾರತದಲ್ಲಿನ ಅನೇಕ ಬಾಂಬ್ ಸ್ಫೋಟಗಳು ಮತ್ತು ಭಾರತೀಯ ಸೈನಿಕರ ಮೇಲೆ ಯಾವುದೇ ಕಾರಣವಿಲ್ಲದೇ ದಾಳಿ ಮಾಡುತ್ತಿರುವುದು ಪಾಕಿಸ್ತಾನವೇ ಎಂದು ಎಲ್ಲರಿಗೂ ತಿಳಿದಿದೆ. ಹತ್ತು ವರ್ಷದ ಬಾಲಕನಿಗೂ ಸಹ ಪಾಕಿಸ್ತಾನ ಎಂದೊಡನೆ ಮೈ ರೋಮವೆಲ್ಲಾ ಎದ್ದು ನಿಲ್ಲುತ್ತದೆ. ಇಷ್ಟಾದರೂ ಸಹ ಇದ್ದೂ ಇಲ್ಲದಂತಿರುವ ನಮ್ಮ ಪ್ರಧಾನಿ ಸಿಂಗ್ಗೆ ಭಾರತೀಯರ ಪ್ರಾಣತ್ಯಾಗದ ಅರಿವಾಗಿಲ್ಲವೆಂದೆನಿಸುತ್ತದೆ. ಪ್ರಧಾನಿಗಳು ಭಾರತಕ್ಕಾಗಿ ಸತ್ತವರ ಮನೆಯ ತಿಥಿ ಊಟಕ್ಕೆಂದು ಹೊರಟರೆ ದಿನಕ್ಕೆ ನಾಲ್ಕು ಹೊತ್ತು ಉಂಡರೂ, ಇನ್ನು ನೂರಾರು ಮನೆಗಳು ಉಳಿದುಕೊಳ್ಳುಷ್ಟು ಜನ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಸಿಂಗ್ ಇದುವರೆಗೂ ಈ ವಿಚಾರವಾಗಿ ಒಂದೂ ಮಾನಾಡಿಲ್ಲ.
ಇತ್ತೀಚೆಗಷ್ಟೇ ಭಾರತದಲ್ಲಿನ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಏಕಾಏಕಿ ದಾಳಿ ಮಾಡಿದ್ದರಿಂದ 5 ಯೋಧರು ಅಸುನೀಗಿದ್ದರು. ನಾಯಕ್ ಪ್ರೇಮನಾಥ್ ಸಿಂಗ್ (21 ಬಿಹಾರ್ ರೆಜಿಮೆಂಟ್), ಲ್ಯಾನ್ಸ್  ನಾಯಕ್ ಶಂಭು ಶರಣ್ (21 ಬಿಹಾರ್ ರೆಜಿಮೆಂಟ್), ಸಿಪಾಯಿ ವಿನಯ್ ಕುಮಾರ್ (21 ಬಿಹಾರ್ ರೆಜಿಮೆಂಟ್), ಸಿಪಾಯಿ ರಘುನಂದನ್ ಪ್ರಸಾದ್ (21 ಬಿಹಾರ್ ರೆಜಿಮೆಂಟ್), ನಾಯಕ್ ಪುಂಡಲೀಕ್ ಮಾನೆ (ಮಹಾರಾಷ್ಟ ರೆಜಿಮೆಂಟ್). ಇವಿಷ್ಟೂ ಸೈನಿಕರ ಕಥೆ ಕೇಳಿದಾಗ ಮನಸ್ಸು ಮಿಡಿಯುತ್ತದೆ. ಇನ್ನು ಕೆಲವರಿಗೆ ಆಗಷ್ಟೇ ಮದುವೆಯಾಗಿ ಒಂದು ವಾರವೂ ಕಳೆದಿರಲಿಲ್ಲ.  ಅದರಲ್ಲಿ ಸಿಪಾಯಿ ವಿನಯ್ ಕುಮಾರ್ ಸಹ ಒಬ್ಬ. ವರದಿಗಳ ಪ್ರಕಾರ ವಿನಯ್ ಮನೆಯವರೇ ನೋಡಿ ಒಪ್ಪಿಗೆ ಮಾಡಿದ ಹುಡುಗಿಯನ್ನು ಮದುವೆಯಾಗಲು ರಜೆ ಪಡೆದು ನೇರವಾಗಿ ಮದುವೆ ಮನೆಗೆ ಬಂದಿಳಿದಿದ್ದರು. ಮದುವೆಯಾಗಿ ಹೆಂಡತಿ ಜೊತೆ ಇದ್ದದ್ದು ಕೇವಲ 5 ದಿನಗಳು ಮಾತ್ರ! 'ಇನ್ನು ಒಂದು ವರ್ಷ ರಜೆ ಸಿಗುವುದಿಲ್ಲ, ಹಾಗಾಗಿ ಆರು ತಿಂಗಳ ನಂತರ ಅನಾರೋಗ್ಯದ ನೆಪ ನೀಡಿ ಮತ್ತೆ ಬರುತ್ತೇನೆ' ಎಂದು ಹೆಂಡತಿಗೆ ಭಾಷೆ ನೀಡಿದ್ದ. ಆದರೆ ಅದ್ಯಾವ ಪ್ರೀತಿಯೋ ಗೊತ್ತಿಲ್ಲ. ಹೋದ ಒಂದೇ ತಿಂಗಳಿಗೆ ಮನೆಗೆ ಶಾಶ್ವತವಾಗಿ ವಾಪಸ್ ಬಂದಿದ್ದಾನೆ. ಹೀಗೆಂದು ಮಾಧ್ಯಮದ ಮುಂದೆ ಅವನ ಹೆಂಡತಿ  ಕಣ್ಣೀರಿಟ್ಟಿದ್ದನ್ನು ನೋಡಿದರೆ ಸಾಕು ಎಂಥವನಿಗಾದರೂ ಹೃದಯ ಕಿತ್ತು ಬರುವಂತಿತ್ತು. ಆದರೆ ಕಾಂಗ್ರೆಸ್ಸಿಗರಿಗೆ ಆ ಸೈನಿಕನ ಹೆಂಡತಿಯ ಮನದ ವೇದನೆಗಳು ಗೊತ್ತಾಗುವುದಾದರೂ ಯಾವಾಗ? ಇನ್ನು, ಮಹಾರಾಷ್ಟ ರೆಜಿಮೆಂಟಿನ ನಾಯಕ್ ಪುಂಡಲೀಕ್ ಮಾನೆಯ ಕಥೆ ಇನ್ನೊಂದು ರೀತಿಯಲ್ಲಿದೆ. ಆತನ ಪರ್ಸನಲ್ ಡೈರಿಯಲ್ಲಿ ಆತನೇ ಬರೆದಿರುವಂತೆ...
'ನಾನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮದುವೆಯಾಗಿ ಒಂದು ವರ್ಷದ ಮೇಲಾಗಿರಬಹುದೆಂದು ಊಹಿಸುತ್ತೇನೆ. ನನಗೆ ಹದಿನೆಂಟು ವರ್ಷವಾದಾಗ ನಾನು ಸೈನ್ಯದಲ್ಲಿದ್ದೆ. ಇಂದಿಗೆ ನಾನು ಸೈನ್ಯಕ್ಕೆ ಬಂದು ನಾಲ್ಕು ವರ್ಷಗಳು ತುಂಬಿವೆ. ಕೆಲ ತಿಂಗಳ ಹಿಂದಷ್ಟೇ ನನ್ನ ಹೆಂಡತಿ ಮೊದಲನೇ ಮಗುವಿಗೆ(ಗಂಡು) ಜನ್ಮ ಕೊಟ್ಟಿದ್ದಾಳೆ. ಆದರೆ ಇನ್ನು ಮಗುವಿನ ಮುಖ ನೋಡಲು ಸಾಧ್ಯವಾಗಿಲ್ಲ. ನನ್ನ ತಂದೆಯೂ ಸೈನ್ಯದಲ್ಲಿದ್ದೇ ಪ್ರಾಣತ್ಯಾಗ ಮಾಡಿದವರು, ಹಾಗಾಗಿ ನಾನು ಅವರ ಹೆಜ್ಜೆಗಳನ್ನೇ ಅನುಸರಿಸಿದ್ದೇನೆ. ಹಾಗೆಯೇ ನನ್ನ ಹೆಜ್ಜೆಗಳನ್ನು ಅನುಸರಿಸುವುದಕ್ಕೆ ನನ್ನ ಮಗ ಹುಟ್ಟಿದ್ದಾನೆಂದು ಬಹಳ ಖುಷಿಯಾಗುತ್ತಿದೆ. ನನ್ನನ್ನು ಈಗ ಲೈನ್ ಆಫ್ ಕಂಟ್ರೋಲ್ಗೆ ಹಾಕಿದ್ದಾರೆ. ಇಲ್ಲಿನ ಪರಿಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿದೆ. ನಾನು ಇಲ್ಲೆ ಪ್ರಾಣ ಬಿಟ್ಟರೆ ನನ್ನ ಮಗನ ಪ್ರಾಣವೂ ಸೈನ್ಯಕ್ಕೆ ಮೀಸಲು ಎಂದು ತಿಳಿಸಿ' ಎಂದು ಬರೆದುಕೊಂಡಿದ್ದಾನೆ.  ಇಲ್ಲಿ ಸೈನಿಕರ ಕುಟುಂಬ ಅಳುತ್ತಿದ್ದರೆ ಅಲ್ಲಿ ಗಡಿಗಳಲ್ಲಿ ರಂಜಾನ್ ಪ್ರಯುಕ್ತ ಭಾರತದ ಬಿಎಸ್ಎಫ್ ಯೋಧರ ಕೈಯಲ್ಲೇ ಪಾಕಿಸ್ತಾನದ ಯೋಧರಿಗೆ ಸಿಹಿ ಹಂಚಿಸಲಾಯಿತು. ಯಾರನ್ನ ಮೆಚ್ಚಿಸಲು ಅವರಿಗೆ ಸಿಹಿ ಹಂಚಿದ್ದು? ಪ್ರಾಣತ್ಯಾಗ ಮಾಡಿದವರ ಮನೆಗಳಲ್ಲಿ ಇನ್ನು ವರ್ಷಗಳ ಕಾಲ ಸಿಹಿ, ಶುಭ ಕಾರ್ಯಗಳೇ ಮಾಡುವಂತಿಲ್ಲವಲ್ಲ? ಎಂದಾದರೂ ಅದರ ಬಗ್ಗೆ ಆಲೋಚನೆ ಮಾಡಿದೆಯೇ ಕಾಂಗ್ರೆಸ್?  ನಮ್ಮ ಐದು ಯೋಧರು ಪ್ರಾಣತ್ಯಾಗ ಮಾಡಿ ಸುಮಾರು 16 ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ ಎ.ಕೆ. ಆ್ಯಂಟೋನಿ ' ಭಾರತೀಯ ಯೋಧರನ್ನು  ಹತ್ಯೆಗೈದವರು ಪಾಕಿಸ್ತಾನಿ ಸೈನ್ಯದ ವೇಷದಲ್ಲಿದ್ದ ಉಗ್ರರು' ಎಂದು ಹೇಳುತ್ತಾರೆ!ನಮ್ಮ ಸರ್ಕಾರ ಪಾಕಿಸ್ತಾನದ ಜೊತೆ ಮಾತನಾಡುತ್ತೇವೆ, ಅದಾಗಲೇ ಪತ್ರ ಬರೆದಿದ್ದೇವೆ ಎನ್ನುತ್ತಿದೆ. ಇದು ಪತ್ರದಲ್ಲಿ ಬಗೆಹರಿಯುವ ವಿಚಾರವೇ? ಇದುವರೆಗೂ 58 ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಗುಂಡಿನ ದಾಳಿ ಮಾಡಿದ ಪಾಕಿಸ್ತಾನದ ಜೊತೆ ಇದುವರೆಗೂ ಅಧಿಕೃತವಾಗಿ ಎಷ್ಟು ಬಾರಿ ಮಾತನಾಡಲಾಗಿದೆ ಮತ್ತು ಅವರ ಮೇಲೆ ಏನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರವೇ ಇಲ್ಲ.
ಇನ್ನು 5 ಯೋಧರನ್ನು ಹತ್ಯೆಗೈದ ಸುದ್ದಿ ತಣ್ಣಾಗಾಗುವಷ್ಟರಲ್ಲೇ ಆಗಸ್ಟ್ 11ರಂದು ಮತ್ತೊಂದು ಬಾರಿ ಅಂದರೆ ಒಟ್ಟು 59ನೇ ಬಾರಿ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಸ್ನೈಪರ್ನಿಂದ ಪಾಕಿಸ್ತಾನಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ಗಡಿ ಭದ್ರತಾ ಪಡೆಯ ಜವಾನ ಪವನ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲಿಗೆ ಪಾಕಿಸ್ತಾನ ಯುದ್ಧ ನಡೆಸುವ ಮುನ್ಸೂಚನೆಯನ್ನು ಪದೇ ಪದೇ ನೀಡುತ್ತಿದ್ದರೂ ನಮ್ಮ ಸರ್ಕಾರದ್ದು ಮಾತ್ರ ಮೌನ ಮಂತ್ರ! ಅಯ್ಯಾ ಮನಮೋಹನರೇ.. ಇನ್ನೂ ಎಷ್ಟು ಸೈನಿಕರ ಮನೆಯ ದೀಪ ಆರಬೇಕೆಂದು ಕಾಯುತ್ತಿದ್ದೀರ?
----
ಪಾಕಿಸ್ತಾನ ಎಂಬ ಉಗ್ರರೇ ತುಂಬಿಕೊಂಡಿರುವ ರಾಷ್ಟ್ರದಿಂದ ಭಾರತಕ್ಕಾದ ಉಪಟಳ ಇಷ್ಟಕ್ಕೇ ಮುಗಿದಿಲ್ಲ. ರಂಜಾನ್ ದಿನ ಜಮ್ಮು-ಕಾಶ್ಮೀರದ ಕಿಶ್ತ್ವಾರ್ನಲ್ಲಿ ಹಿಂದುಗಳ ಮೇಲೆ ಮತ್ತೊಮ್ಮೆ ಮುಸಲ್ಮಾನರ ಗುಂಪೊಂದು ನಮಾಜ್ ಮುಗಿದ ನಂತರ ದಾಳಿ ಮಾಡಿದೆ. ಆದರೆ ಮೇಲ್ನೋಟಕ್ಕೆ ಇದು ಭಾರತೀಯ ಮುಸಲ್ಮಾನರ ಗುಂಪೇ ದಾಳಿ ಮಾಡಿದ್ದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆಯಾದರೂ. ಆದರೆ ಇದರಲ್ಲೂ ಪಾಕಿಸ್ತಾನಿ ಉಗ್ರರ ಕೈವಾಡವಿದೆ. ಭಾರತದ ಯಾವೊಂದು ಪ್ರತಿಷ್ಟಿತ ಮಾಧ್ಯಮವೂ ಸಹ ಈ ಬಗ್ಗೆ ವರದಿ ಮಾಡಲಿಲ್ಲವೇಕೆ?
ಬೆಳಿಗ್ಗೆ ನಮಾಜ್ ಮುಗಿಸಿದ ಮೊಹಮ್ಮದ್ ಇಕ್ಬಾಲ್ ಅಲಿ ಮತ್ತು ಅವನ ತಂಡ ಸಾವಿರಾರು ಮುಸಲ್ಮಾರನರನ್ನು ಸಂಘಟಿಸಿತ್ತು. ನಮಾಜ್ ಮುಗಿಸಿ ಬರೋಬ್ಬರಿ 1 ತಾಸು ಪ್ರಚೋದಿಸುವ ಭಾಷಣ ಬಿಗಿದ ಇಕ್ಬಾಲ್
ಮೆಲ್ಲಗೆ ಕ್ರಿಶ್ಚಿಯನ್ನರು ಮತ್ತು ಮೇಲಾಗಿ ಹಿಂದುಗಳ ಮೇಲೆ ಹರಿಹಾಯ್ದಿದ್ದಾನೆ. ಗೋಧ್ರಾ ಹತ್ಯಾಕಾಂಡ ಮತ್ತಿನ್ನಿತರ ಉದಾಹರಣೆಗಳನ್ನೆಲ್ಲಾ ಕೊಟ್ಟು ಪ್ರಚೋದಿಸಿ 'ಆ ಕಾಫಿರ್ಗಳನ್ನು ಇನ್ನೂ ಈ ನೆಲದಲ್ಲಿ ಬೆಳೆಸಬೇಕೇ?' ಎಂದು ಕೇಳಿದ್ದಾನೆ. ಇದರಿಂದ ಸಿಡಿದೆದ್ದ ಬರೋಬ್ಬರಿ 20,000 ಜನ ಮೊದಲಿಗೆ ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಾ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಾ ಹಿಂದುಗಳ ಮೇಲೆ ದಾಳಿ ಮಾಡಿದ್ದಾರೆ. ಆದರೆ ಕೆಲ ಹೊತ್ತಿನ ನಂತರ ಒಂದೇ ಸಮನೇ ಆ ಗುಂಪಿನಲ್ಲಿದ್ದ ಕೆಲ ಜನ ಅಲ್ ಖೈದಾ ಬಾವುಟವನ್ನು ಪ್ರದರ್ಶಿಸಿದ್ದಾರೆ. ಇದಾದ ಬಳಿಕವೇ ಘಟನೆ ತೀವ್ರ ಸ್ವರೂಪಕ್ಕೆ ತಿರುಗಿದ್ದು ಎನ್ನಲಾಗಿದೆ. ಈ ಮೊಹಮ್ಮದ್ ಇಕ್ಬಾಲ್ ಅಲಿ ಯಾರು ಎಂದು ಅಲ್ಲಿದ್ದ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ.  ಅಸಲಿಗೆ ಈತ ಅಲ್ ಖೈದಾ ಉಗ್ರ ಸಂಘಟನೆಯ ಕಾಶ್ಮೀರ ಪ್ರಾಂತ್ಯದ ಮುಖ್ಯಸ್ಥ. ಈತ ಭಾರತದ ಓಳಪ್ರವೇಶಿಸಿದ್ದಾದರೂ ಹೇಗೆ, ಈಗ ಏನು ಮಾಡುತ್ತಿದ್ದಾನೆ ಎಂಬುದು ಪತ್ತೆಯೇ ಇಲ್ಲ. ಆದರೆ ಹಿಂದುಗಳ ಮೇಲಿನ ದಾಳಿಯ ನಂತರ ಅವನ ತಂಡ ಕಾಶ್ಮೀರದಿಂದ ಕಾಲ್ಕಿತ್ತಿದೆ. ಆತ ಒಂದು ತಾಸು ಭಾರತದಲ್ಲಿ ಇಂಥ ಭಾಷಣ ಮಾಡುತ್ತಿರುವಾಗ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾಗೆ ಈ ವಿಷಯ ಮುಟ್ಟೇ ಇಲ್ಲವೇ? ಅಲ್ಲಿಗೆ ಹಿಂದುಗಳನ್ನು ನಿಧಾನವಾಗಿ ಕಾಶ್ಮೀರದಿಂದ ಓಡಿಸುವ ಪ್ರಯತ್ನ ಸಾಗುತ್ತಿದೆ ಎಂಬುದು ಸಾಬೀತಾಯಿತಲ್ಲವೇ? ಈ ಎಲ್ಲಾ ವಿಷಯಗಳನ್ನು ಕಾಶ್ಮೀರದ ಆನ್ಲೈನ್ ಪತ್ರಿಕೆಯೊಂದು ಘಟನೆ ನಡೆದು 10 ಗಂಟೆಗಳಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಬಿಟ್ಟಿತ್ತು. ಆದರೆ ಕೆಲ ನಿಮಿಷಗಳ ನಂತರ ಆ ವರದಿ ಕಾಣೆಯಾಯಿತು. ಹಾಗಿದ್ದರೆ ಆ ವರದಿಯನ್ನು ತೆಗೆಯಲು ಆ ಪತ್ರಿಕೆಯ ಮೇಲೆ ಒತ್ತಡ ಹೇರಿದವರಾರು? ಅಂಥ ಇನ್ನು ಅನೇಕ ವಿಚಾರಗಳಿಗೆ ಉತ್ತರವೇ ಇಲ್ಲ. ಇಷ್ಟಾದರೂ ಕಾಂಗ್ರೆಸ್ ಮಾತ್ರ ಶಾಂತಿ ಕಾಪಾಡಿಕೊಂಡು ಬರುತ್ತಿದೆ. ಉಮರ್ ಅಬ್ದುಲ್ಲಾ ಸಹ 'ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ನಾವು ಸಫಲರಾಗಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಮುಸಲ್ಮಾನ್ ಗುಂಪೊಂದು ಏಕಾಏಕಿ ಹಿಂದುಗಳ ಮೇಲೆ ದಾಳಿ ಮಾಡಲು ಕಾರಣವೇನು ಎಂದು ತಿಳಿಯಲು ಇನ್ನು ಅಧಿಕೃತವಾಗಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವೇಕೆ? ದಾಳಿ ಮಾಡಿದ ಆ 20,000 ಜನರ ಗುಂಪು ಎಲ್ಲಿ ಹೋಯಿತು? ಅವರಲ್ಲಿ ಕನಿಷ್ಟ ಪಕ್ಷ 100 ಜನರನ್ನಾದರೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನೆಡೆಸಬಹುದಿತ್ತಲ್ಲವೇ? ಇನ್ನೂ ಅನೇಕ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ. ಉತ್ತರ ಮತ್ತೊಂದಿಷ್ಟು ಅವಘಢಗಳ ನಂತರವಷ್ಟೇ ತಿಳಿಯಲಿದೆ!

- ಚಿರಂಜೀವಿ ಭಟ್
mechirubhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement