ಸ್ವಬೀಜಾಭಿವೃದ್ಧಿ ಯೋಜನೆಯ ಸಾರ್ಥಕ ಬಳಕೆಗೆ ಕೆಲವು ಸಲಹೆ
ಸ್ವಬೀಜಾಭಿವೃದ್ಧಿಗೆ ಈಗಿನ ಘನ ಸರ್ಕಾರ ಈ ವರ್ಷದ ಆಯ-ವ್ಯಯದಲ್ಲಿ ಒತ್ತುಕೊಟ್ಟಿರುವುದು ಒಂದು ಮಹತ್ವದ ವಿಷಯ ಹಾಗೂ ಸ್ವಾಗತಾರ್ಹ. ಅದನ್ನು ಅನುಷ್ಠಾನಗೊಳಿಸುವ ಸಲುವಾಗಿ ಮಾರ್ಗಸೂಚಿಗಳನ್ನು ತಯಾರಿಸುವಲ್ಲಿ ಕೆಲವು ವಿಧಾನಗಳ ಅಳವಡಿಕೆ ಅನಿವಾರ್ಯ. ಇಲ್ಲವಾದರೆ ಯೋಜನೆ ಯಶಸ್ಸು ಕಾಣದಿರಬಹುದು.
ಸ್ವಬೀಜವೆಂದರೆ ಏನು? ಆಯಾ ಪ್ರದೇಶಗಳಲ್ಲಿ ಅಲ್ಲಿನ ರೈತರು ಇಷ್ಟಪಟ್ಟ ತಳಿಗಳನ್ನು ಮುಂದೆಯೂ ಬೆಳೆಯಲು ಬೀಜವನ್ನು ಉಳಿಸಿ, ಬೆಳೆಸಿ ತಳಿಯ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಹೀಗೆ ಮಾಡುವಾಗ ರೈತರು ಅನುಸರಿಸುವ ಮಾರ್ಗ ವೈಜ್ಞಾನಿಕವಾಗಿರಬೇಕು. ಯಾವುದೇ ತಳಿಯಾಗಲಿ ಅದಕ್ಕೆ ಅದರದ್ದೇ ಆದ ಗುಣ ವಿಶೇಷಗಳಿರುತ್ತವೆ.
- ಸ್ವಬೀಜಾಭಿವೃದ್ಧಿಗೆ ಯೋಗ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಜನಪ್ರಿಯವಾಗಿರುವ ತಳಿಗಳನ್ನು ಈ ಯೋಜನೆಯಡಿ ಆಯ್ಕೆಮಾಡಬೇಕು.
- ಗುರುತಿಸಲ್ಪಟ್ಟ ತಳಿಗಳನ್ನು ವೈಜ್ಞಾನಿಕವಾಗಿ, ಅಂದರೆ ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ ಅವುಗಳು ತಮ್ಮ ನೈಜ ಗುಣ ಹೊಂದಿರುವುದನ್ನು ಮಾತ್ರ ಪರಿಗಣಿಸಿ ಅವುಗಳಿಗೆ ಹೊಂದಿಕೊಳ್ಳುವ ಬೀಜವರ್ಗಗಳ ಸರಪಳಿಗೆ ಸೇರ್ಪಡಿಸಬೇಕು.
- ಹೀಗೆ ಸೇರ್ಪಡೆ ಮಾಡಲ್ಪಟ್ಟ ತಳಿಗಳು ಸಂಕರಣ ತಳಿಗಳಿರಬಹುದು, ಅಧಿಕ ಇಳುವರಿ ತಳಿಗಳಿರಬಹುದು ಅಥವಾ ನಾಡ ತಳಿಗಳಿರಬಹುದು. ಈ ಎಲ್ಲಾ ತಳಿಗಳ ಬೀಜ ಸಂವರ್ಧನೆಗೆ ಸಹಾಯಧನ ದೊರೆಯುವಂತಾಗಬೇಕು.
- ಬೀಜದ ಗುಣಮಟ್ಟ ಸೂಕ್ಷ್ಮ ವಾತಾವರಣಗಳಿಗೆ ಪ್ರತಿಕ್ರಿಯಿಸುವುದರಿಂದ ಸಂಖ್ಯೆ ಅಭಿವೃದ್ಧಿಯ ಜೊತೆಗೆ ಗುಣಮಟ್ಟ ಕಾಪಾಡಿಕೊಳ್ಳಲು ಬೇಕಾದ ದಾಸ್ತಾನನ್ನೂ ನಿರ್ಮಿಸಬೇಕು ಮತ್ತು ದಾಸ್ತಾನಿನಲ್ಲಿರಬಹುದಾದ ಕಾಲ ಪ್ರಮಾಣವನ್ನೂ ಅರಿತಿರಬೇಕು.
- ಈಗ ಬಳಕೆಯಲ್ಲಿರುವ ರೈತರ ಮತ್ತು ಇತರ ಪರಿಷ್ಕರಣಾ ಕೇಂದ್ರಗಳನ್ನು ವೈಜ್ಞಾನಿಕವಾಗಿ ನವೀಕರಿಸಬೇಕು.
- ಇತ್ತೀಚಿನ ದಿನಗಳಲ್ಲಿ ಸುಮಾರು ರೈತರು ಬೀಜಕ್ಕಾಗಿ ನಿಗಮಗಳು ಮತ್ತು ಕಂಪನಿಗಳನ್ನೇ ಅವಲಂಬಿಸಿರುವುದರಿಂದ ಸ್ವಲ್ಪಮಟ್ಟಿಗೆ ಅವರನ್ನು ಅದರಿಂದ ಹೊರತರುವ ಪ್ರಯತ್ನವಾಗಬೇಕು.
- ರೈತರಿಂದ ಕೈಬಿಟ್ಟುಹೋಗಿರುವ ತಳಿಗಳಲ್ಲಿ ಅನೇಕ ನಾಡ ತಳಿಗಳು ಇಂದಿಗೂ NBPGR ಮತ್ತು ಖಆ್ಖಗಳಲ್ಲಿ ಲಭ್ಯ. ಅವುಗಳನ್ನು ಮತ್ತೆ ಅಲ್ಪ ಪ್ರಮಾಣದಲ್ಲಿ ಪಡೆದು ಸಂಖ್ಯೆ ಅಭಿವೃದ್ಧಿ ಮಾಡುವುದು ಸಾಧ್ಯ.
- ಸ್ವಬೀಜ ಬಳಸುವಲ್ಲಿ ಬೀಜಕ್ಕಾಗಿ ತಗಲುವ ವೆಚ್ಚಕಡಿಮೆ, ನಿರೀಕ್ಷಿತ ಇಳುವರಿ ಲಭ್ಯ ಯಾವ ಉದ್ದೇಶಕ್ಕಾಗಿ ಬೆಳೆಯಲ್ಪಡುತ್ತದೆಯೋ ಆ ಉದ್ದೇಶ ಪೂರೈಸುತ್ತದೆ.
- ಸ್ವಬೀಜಾಭಿವೃದ್ಧಿ ಯೋಜನೆ ಜಾರಿಗೆ ತರುವುದರಿಂದ Genome saviour ಪ್ರಯತ್ನಗಳಲ್ಲಿ ಕ್ರಿಯಾಶೀಲರಾಗಿ ಪಾಲುದಾರರಾಗಬಹುದು. ಇದರಿಂದ ಮುಂಬರುವ ದಿನಗಳಲ್ಲಿ ವಿವಿಧ ಅಧಿಕ ಇಳುವರಿ ನೀಡುವ ಮತ್ತು ಸಂಕರಣ ತಳಿಗಳ ಉತ್ಪಾದನೆಗೆ ಬೇಕಾಗುವ ವಂಶವಾಹಿಗಳನ್ನು ಸಂರಕ್ಷಿಸಿದಂತಾಗುತ್ತದೆ. ಇದು ಒಂದು ರೀತಿಯಲ್ಲಿ ಭವಿಷ್ಯದ ಬೇಡಿಕೆಗೆ ಈಗಿನ ರೈತರ ಕೊಡುಗೆಯೇ ಆಗುತ್ತದೆ.
- ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಬೀಜಸಂಸ್ಕರಣಾ ಘಟಕಗಳನ್ನು ರೈತರೇ ನಿರ್ವಹಿಸುವ ಹೊಸ ಯೋಜನೆಯಿಂದ ಈಗ ರೈತರು ಪಡುತ್ತಿರುವ ಬವಣೆಯಿಂದ ಸ್ವಲ್ಪಮಟ್ಟಿಗೆ ಮುಕ್ತರಾಗುವುದರಲ್ಲಿ ಸಂದೇಹವಿಲ್ಲ.
- ಈ ಯೋಜನೆಯನ್ನು ಯಶಸ್ವಿಗೊಳಿಸಲು ಯೋಜನೆಗೆ ತಕ್ಕಂತೆ ರೂಪುರೇಷೆಗಳನ್ನು ತಯಾರು ಮಾಡಿ ವಿವಿಧ ಹಂತದ ತರಬೇತಿಗೆ ಬೇಕಾದ ಧನಸಹಾಯ ಅವಶ್ಯಕ.
ರಾಷ್ಟ್ರದಲ್ಲೇ ಕೃಷಿಯಲ್ಲಿ ಹೆಚ್ಚಿನ ಮಟ್ಟದ ಅನುಭವಿ ಹಾಗೂ ಪ್ರತಿಭಾವಂತ ರೈತರು ಮತ್ತು ವಿಜ್ಞಾನಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಯೋಜನೆ ಇಡೀ ರಾಷ್ಟ್ರಕ್ಕೆ ಒಂದು ಮಾದರಿಯಾಗಿ ಹೊರಹೊಮ್ಮಿಬರಬಲ್ಲ ಸಾಧ್ಯತೆ ಇದೆ. ಈ ವರ್ಷದ ಆಯ-ವ್ಯಯದಲ್ಲಿ 75ನೇ ಐಟಂನಲ್ಲಿನ ಸ್ವಲ್ಪ ಹಣವನ್ನು ಈ ಯೋಜನೆಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಏಕೆಂದರೆ ಸ್ವಬೀಜಾಭಿವೃದ್ಧಿಯಡಿ ಸಾಗಾಣಿಕೆ ವೆಚ್ಚದಲ್ಲಿ ಉಳಿತಾಯಕ್ಕೆ ಅವಕಾಶವಿದೆ.
ಈಗಾಗಲೇ ಜೆಎಸ್ಎಸ್ ಗ್ರಾಮೀಣಾಭಿವೃದ್ಧಿ (ಮೈಸೂರು) ಸಂಸ್ಥೆಯು ಬೀಜಗ್ರಾಮ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧನಸಹಾಯದಿಂದ (ರು 14.85ಕೋಟಿ) ನಿರ್ಮಿಸಲಾಗಿರುವ 21 ಬೀಜ ಸಂಸ್ಕರಣಾ ಘಟಕಗಳನ್ನು ಮತ್ತು 20 ಚಾಕಿ ಸಾಕಾಣಿಕಾ ಘಟಕಗಳನ್ನು ಈ ಯೋಜನೆಯಡಿ ತರುವುದರ ಜೊತೆಗೆ ಈಗಲೂ ಚಾಲ್ತಿಯಲ್ಲಿರುವ 2ನೇ ಹಂತದಲ್ಲಿ (ರು. 9.89 ಕೋಟಿ) 6 ಜಿಲ್ಲೆಗಳಲ್ಲಿ ಜಿಲ್ಲೆಗೊಂದರಂತೆ 6 ಬೀಜ ಸಂಸ್ಕರಣಾ ಘಟಕಗಳು ಅಂತಿಮಘಟ್ಟದಲ್ಲಿದ್ದು ಕೆಲವೇ ತಿಂಗಳಲ್ಲಿ ಕಾರ್ಯಾಚರಣೆಗೆ ಬರಲಿವೆ.
ಇಡೀ ರಾಷ್ಟ್ರದಲ್ಲೇ ಬೀಜೋದ್ಯಮದಲ್ಲಿ ಸಾಧನೆ/ಹೆಸರು ಮಾಡಿರುವ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಈ ಯೋಜನೆಯ ಯಶಸ್ಸನ್ನು ಕಾಣುವುದು ಸುಲಭಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಕಾರ್ಯಾರಂಭಕ್ಕೆ ಇದು ಸದಾವಕಾಶ.
ಮನೆಯ ಬೀಜ
(ಮರೆಯಬೇಡ ಮನವೆ ನೀನು ಎಂಬಂತೆ)
ಮರೆಯಬೇಡ ಕೃಷಿಕ ನೀನು ಮನೆಯ ಬೀಜವ
ಮನೆಯ ಬೀಜ ಬಂಗಾರವೆಂಬುದ, ಕೊಂಡಬೀಜ ನಂಬಲಾಗದೆಂಬುದ
ಕಂಪ್ನಿ ಬೀಜ ದುಬಾರಿ ಎಂಬುದ, ಸರ್ಕಾರಿ ಬೀಜವೂ ದುರ್ಲಭ ಎಂಬುದ...
ಮರೆಯಬೇಡ ಕೃಷಿಕ ನೀನು ...
ಕೊಂಡ ಬೀಜ ಕಳಪೆಯಾದ್ರೆ, ಮೊಳಕೆ ಶಕ್ತಿ ಕುಗ್ಗೋಗಿದ್ರೆ
ಕಾಲಕ್ ಸರಿಯಾಗ್ ಸಿಗದೇ ಹೋದ್ರೆ, ಲೇಬಲ್ ಅದಲ್ಬದಲ್ ಆಗೋಗಿದ್ರೆ
ಬೆಳೆಯು ಸರ್ಯಾಗಿ ಬರ್ದೇಹೋದ್ರೆ ಹಾಕಿದ್ ಕಾಸು ಸಿಕ್ದೇಹೋಗ್ಬೋದು
ಮರೆಯಬೇಡ ಕೃಷಿಕ ನೀನು...
ರೋಗದ ಸೋಂಕು ಸುಳಿಯದಿರಲಿ, ಕೀಟಗಳು ಹತ್ತಿರ ಸುಳಿಯದಿರಲಿ
ಜೊಳ್ಳು ಬೀಜ ಹೊರಗೆ ಹೋಗಲಿ, ಸುಪ್ತಾವಸ್ಥೆಯ ಮಾಹಿತಿ ಇರಲಿ
ಕಾಲಕ್ ಸರಿಯಾಗ್ ಬಿತ್ತನೆಯಾಗ್ಲಿ, ಸುಗ್ಗಿ ಕಾಲ ಓಡೋಡಿ ಬರಲಿ
ಮರೆಯಬೇಡ ಕೃಷಿಕ ನೀನು...
- ಎಂ. ಮಹದೇವಪ್ಪ
ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ವಿಭಾಗ
ಮೈಸೂರು