ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಾಂಗ್ರೆಸ್‌ನ ಕುಟುಂಬ ರಾಜಕಾರಣ ಕೆಡವಲಿದ್ದಾರೆಯೇ ಮೋದಿ?

Mainashree
Updated On : 14 Aug 2013, 12:00 pm

ಡಿಎಲ್‌ಎಫ್‌ನೊಂದಿಗಿನ ಭೂ ವ್ಯವಹಾರದಲ್ಲಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಮತ್ತೆ ಸದ್ದು ಮಾಡುತ್ತಿದೆ. ಹಾಗಾಗೇ ಮುಂಬರುವ ಚುನಾವಣೆಗಳಲ್ಲಿ ಗಾಂಧಿ ಕುಟುಂಬದ ಮೇಲೆ ನೇರ ದಾಳಿ ಮಾಡುವುದೇ ವಿರೋಧ ಪಕ್ಷಗಳ ಪ್ರಮುಖ ತಂತ್ರವಾಗಲಿದೆ ಎನ್ನುವುದು ನಿಶ್ಚಿತ.
ಮತದಾನಕ್ಕೆ ಇನ್ನು ಕೇವಲ ಎಂಟು ತಿಂಗಳು ಮಾತ್ರ ಉಳಿದಿವೆ. ಹಾಗಾಗೇ ಈ ಚಿಕ್ಕ ಸಮಯದಲ್ಲೇ ರಾಬರ್ಟ್ ವಾದ್ರಾ ಅವರ ಮೇಲಿನ ಆರೋಪಗಳನ್ನು ರುಜುವಾತು ಮಾಡಲು ಅಥವಾ ಅವನ್ನೆಲ್ಲ ನಿರ್ಣಾಯಕವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಅದಾಗ್ಯೂ ಈ ಪ್ರಕರಣದ ಸುತ್ತ ಹಬ್ಬಿರುವ ದುರ್ನಾತ ಮತ್ತು ಅನುಮಾನವನ್ನು ಹೋಗಲಾಡಿಸುವುದಕ್ಕಂತೂ ಸಾಧ್ಯವಿಲ್ಲ. ಸದ್ಯಕ್ಕೆ ವಾದ್ರಾರ ಪ್ರಹಸನವೆಲ್ಲ ಆಕರ್ಷವಾಗಿ ಕಾಣುತ್ತಿದೆಯಾದರೂ, ವಾದ್ರಾರ ವಿಷಯದಲ್ಲಿ ಗಾಂಧಿ ಕುಟುಂಬ ಸ್ವಜನ ಪಕ್ಷಪಾತ ಮಾಡಿದೆ ಎನ್ನುವ ಆರೋಪಕ್ಕಿಂತಲೂ ಗಂಭೀರವಾದ ಸಮಸ್ಯೆಗಳು ಇಂದು ಕಾಂಗ್ರೆಸ್ ಅನ್ನು ಕಾಡುತ್ತಿವೆ. 9 ವರ್ಷದ ಆಡಳಿತದ ನಂತರ ಯುಪಿಎ ಸರ್ಕಾರದ ವಿರುದ್ಧ ಭಾರೀ ಆಡಳಿತ ವಿರೋಧಿ ಅಲೆಯೇ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್ ಅನ್ನು ಕಂಗಾಲಾಗಿಸಿರುವ ವಿಷಯವೆಂದರೆ, 2014ರ ಚುನಾವಣಾ ಸಮಯದಲ್ಲಿ ಎಲ್ಲಿ ಗಾಂಧಿ ಕುಟುಂಬಕ್ಕೆ ಕಳಂಕ ಅಂಟಲಿದೆಯೋ ಎಂಬುದು. ಇದಕ್ಕೆಲ್ಲ ಇದೇ ಸರಿಯಾದ ಸಮಯವೆಂದು ನಿರ್ಧರಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿ ಪಕ್ಷಗಳು ನೇರವಾಗಿ ಸೋನಿಯಾ-ರಾಹುಲ್‌ರ ಮೇಲೆ ದಾಳಿ ಮಾಡಲು ಕತ್ತಿ ಮಸೆಯತೊಡಗಿವೆ. ಆರ್ಥಿಕ ಅಧೋಗತಿಗೆ ಮತ್ತು ದೆಹಲಿಯ ಕಳಪೆ ಆಡಳಿತಕ್ಕೆ ಸೋನಿಯಾ-ರಾಹುಲ್‌ರ ಸ್ವಹಿತಾಸಕ್ತಿಯೇ ಕಾರಣ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂಬ ವಿರೋಧ ಪಕ್ಷಗಳು ಪ್ರಯತ್ನಕ್ಕಿಳಿದಿವೆ.
ಇದು ಸಂಪೂರ್ಣವಾಗಿ ಸತ್ಯವಾಗಿರಬಹುದು ಅಥವಾ ಸುಳ್ಳಾಗಿರಲೂಬಹುದು. ಇದು ಸಂಪೂರ್ಣವಾಗಿ ಸರಿಯಾಗಿರಬಹುದು ಅಥವಾ ತಪ್ಪಾಗಿರಲೂಬಹುದು- ಆದರೆ ಚುನಾವಣಾ ರಾಜಕೀಯದಲ್ಲಿ ಇಂಥದ್ದೆಲ್ಲವೂ ಸಮರ್ಥನೀಯವೇ. ಸ್ವಾತಂತ್ರ್ಯಾ ನಂತರ ಭಾರತವನ್ನು ಅತಿ ಹೆಚ್ಚು ವರ್ಷಗಳ ಕಾಲ ಆಳಿದ ಕುಟುಂಬಕ್ಕೀಗ ಕಠಿಣ ಸವಾಲೊಂದು ಎದುರಾದಂತಾಗಿದೆ. ಮೇ 27, 2014 ರಂದು ನೆಹರೂರ 50ನೇ ಪುಣ್ಯತಿಥಿಯಿದೆ. ಚುನಾವಣೆಗಳೇನಾದರೂ ಸರಿಯಾದ ಸಮಯಕ್ಕೆ ನಡೆದರೆ, ನೆಹರೂರ ಪುಣ್ಯತಿಥಿಗೆ ಸನಿಹದ ದಿನಗಳಲ್ಲೇ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರ ಹಣೆಬರಹ ನಿರ್ಧಾರವಾಗಲಿದೆ.
ಕಾಂಗ್ರೆಸ್‌ನ ನಾಯಕತ್ವಕ್ಕೇನಾಗಿದೆ? ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರ ನಡುವೆ ಅಧಿಕಾರ ವಿಂಗಡಣೆಯಾಗಿದ್ದು, ಗಾಂಧಿ ಕುಟುಂಬಕ್ಕೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ. ನೇರ ಟೀಕೆಯಿಂದ ತಾವು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಸೋನಿಯಾ ಇದುವರೆಗೂ ಮನಮೋಹನ್ ಸಿಂಗ್‌ರನ್ನು ಕವಚದಂತೆ ಬಳಸುತ್ತಾ ಬಂದಿದ್ದಾರೆ. ಅಸಮರ್ಥ ಮತ್ತು ಅರ್ಥಹೀನ ಯೋಜನೆಗಳೆಲ್ಲವಕ್ಕೂ ಮನಮೋಹನ್‌ರನ್ನು ದೋಷಿಯನ್ನಾಗಿ ಮಾಡಿ, ಯಶಸ್ವಿಯಾದ ಯೋಜನೆಗಳಿಗೆ ತಮ್ಮ ಹೆಸರಿನಲ್ಲಿ ಬಹುಪರಾಕು ಹಾಕಿಸಿಕೊಳ್ಳುತ್ತಾ ಬಂದಿದ್ದರು ಸೋನಿಯಾ.
ಆದರೆ ಇಂಥ ಗುಣವನ್ನು ಸಹಿಸಿಕೊಳ್ಳುವವರ ಸಂಖ್ಯೆ ಈಗ ಗಣನೀಯವಾಗಿ ಇಳಿದಿದೆ. ನಿಜ ಹೇಳಬೇಕೆಂದರೆ
ಭಾರತದ ಉತ್ಪಾದನಾ ಸಾಮರ್ಥ್ಯವನ್ನು, ಆರ್ಥಿಕತೆಯನ್ನು ಮತ್ತು ಸುಧಾರಣೆಗಳನ್ನು ಹಳ್ಳಹಿಡಿಸಿದ್ದೇ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯಲ್ಲಿರುವ ಅವರ ಚೇಲಾಗಳು. ಇದರಿಂದಾಗಿ ಭಾರತೀಯ ಸಮಾಜದಲ್ಲಿ ಅತಿ ಶ್ರೀಮಂತ ನಗರವಾಸಿಗಳು ಮತ್ತು ಕಡು ಬಡವ ಗ್ರಾಮವಾಸಿಗಳು ಎಂಬ ಎರಡು ವರ್ಗಗಗಳು ಹುಟ್ಟಿಕೊಂಡಿವೆ. ಆದರೆ ಈ ಸಮಯದಲ್ಲೇ ಯುಪಿಎ, ಹೊಸ ಮಧ್ಯಮ ವರ್ಗದ ಆಕಾಂಕ್ಷೆಗಳು ಮತ್ತು ಏಳಿಗೆಯನ್ನು ನಿರ್ಲಕ್ಷಿಸಿತು. ಉದಾರೀಕರಣದ ನಂತರ ಆದ ಗಮನಾರ್ಹ ಆರ್ಥಿಕ ಬೆಳವಣಿಗೆಯ ಲಾಭ ಪಡೆದ, ಲಕ್ಷಾಂತರ ಸಂಖ್ಯೆಯ ಮಧ್ಯಮ ವರ್ಗದ ಜನರೂ ಇದ್ದಾರೆ. ಜಿಡಿಪಿಯಲ್ಲಿ ಇವರುಗಳ ಪಾತ್ರ ದೊಡ್ಡದು. ದಟ್ಟ ದಾರಿದ್ರ್ಯ ಮತ್ತು ಅತಿ ದೊಡ್ಡ ಶ್ರೀಮಂತ ವರ್ಗದ ನಡುವಿನ ಅಂತರದಲ್ಲಿ ನಡುವಿನ ಸ್ಥಾನ ಇವರುಗಳದ್ದು. ಈ ಮಧ್ಯಮ ವರ್ಗದ ಆಕಾಂಕ್ಷೆಗಳ ಬಗ್ಗೆ ರಾಹುಲ್ ಗಾಂಧಿ ಕಡೆಗೂ ಮಾತನಾಡಿದ್ದು ಜನವರಿ 2013ರಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪರಸ್ಪರ ಭಿನ್ನವಾಗಿರುವ ಈ ಮಧ್ಯಮವರ್ಗವನ್ನು ಕಳೆದ 9 ವರ್ಷಗಳಲ್ಲಿ ಬಹಳ ಕಡೆಗಣಿಸಲಾಯಿತು. ಇನ್ನು ಆರ್ಥಿಕ ವಿಸ್ತಾರದಿಂದ ಲಾಭ ಪಡೆದ ಮಧ್ಯಮ ವರ್ಗ ಬಹುಸಂಖ್ಯಾತ ಮತದಾರರನ್ನಂತೂ ಪ್ರತಿನಿಧಿಸುವುದಿಲ್ಲ. ಆದರೂ ಇವರುಗಳ ಮತ ನಿರ್ಣಾಯಕವಾಗಬಲ್ಲದು. 2009ರ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ್ದೂ ಇವರುಗಳೇ. ಆದರೆ ಈ ಆದೇಶವನ್ನು ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತಪ್ಪಾಗಿ ಅರ್ಥ ಮಾಡಿಕೊಂಡಿತು. ಈ ತಪ್ಪು, ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಂದಲೇ ಮೊದಲು ಶುರುವಾದದ್ದು.
ಕಾಂಗ್ರೆಸ್ ಅನ್ನು ಬಹುವಾಗಿ ಕಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ, ರಾಹುಲ್ ಗಾಂಧಿ. ರಾಹುಲ್ ಅಂದುಕೊಂಡಂತೆ ಯಶಸ್ಸು ಪಡೆಯುತ್ತಿಲ್ಲ. ಇತ್ತೀಚೆಗೆ ಅವರು ಭಾರತೀಯ ಉದ್ಯಮಗಳ ಬಗ್ಗೆ ಆಡಿದ ಮಾತುಗಳಿಗೆ ಕಾಂಗ್ರೆಸ್‌ನ ವಕ್ತಾರರು ಆಧ್ಯಾತ್ಮಿಕ ಲೇಪ ಹಚ್ಚಿ, 'ಯುವ ಜನತೆಗೆ ರಾಹುಲ್ ಗಾಂಧಿಯೆಂದರೆ ಎಲ್ಲಿಲ್ಲದ ಪ್ರೀತಿ' ಎಂದು ಹಾಡಿ ಹೊಗಳುತ್ತಿದ್ದಾರಾದರೂ, ಸತ್ಯವೇ ಬೇರೆಯಿದೆ. ರಾಹುಲ್ 2009ರಿಂದ ನಿರಂತರವಾಗಿ ವೈಫಲ್ಯ ಅನುಭವಿಸುತ್ತಾ ಬಂದಿದ್ದಾರೆ.
ರಾಹುಲ್‌ರ ಗೊಂದಲಮಯ ನಡೆ, ಅದರೊಟ್ಟಿಗೆ ಅವರ ಅರೆಬೆಂದ ಪಾಶ್ಚಾತ್ಯ ಸಮಾಜಶಾಸ್ತ್ರದ ನೀತಿಗಳೆಲ್ಲ ಕೇವಲ ಸಾಮಾನ್ಯ ಜನರಿಗಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕರಿಗೆ ಗೊಂದಲ ಹುಟ್ಟಿಸುತ್ತಿವೆ. ರಾಷ್ಟ್ರ ರಾಜಕೀಯದಲ್ಲಿ ಮಿಂಚಲು ರಾಹುಲ್‌ರ ಬಳಿ ಬಹಳಷ್ಟು ಸಮಯವೇನೋ ಇರಬಹುದು. ಆದರೆ ಕಾಂಗ್ರೆಸ್‌ನ ಉಳಿದ ನಾಯಕರಿಗೆ ಅಷ್ಟೊಂದು ಅವಕಾಶವಿಲ್ಲವಲ್ಲ? ಕೆಲವರಿಗಂತೂ ಈ ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ ಎನ್ನುವಂಥ ಸನ್ನಿವೇಶ ನಿರ್ಮಾಣ ಮಾಡಿದೆ. ಅದೇ ಅವರಿಗೆ ಕೊನೆಯ ಆಸರೆ. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ವಿರೋಧಿಗಳನ್ನು ಎದುರಿಸುವ ಬದಲು ಕಾಂಗ್ರೆಸ್‌ನ ನಾಯಕ ತಮ್ಮವರ ಹಿಂದೆ ಅಡಗಿ ಕುಳಿತಿದ್ದಾರೆ. ಹಾಗಾಗಿ ಅವರನ್ನು ಉಳಿಸಲು ರಕ್ಷಣಾತ್ಮಕ ಹೆಜ್ಜೆಯಿಡತೊಡಗಿದೆ ಕಾಂಗ್ರೆಸ್. ಹೀಗಾದರೆ ಕಾಂಗ್ರೆಸ್‌ನ ಚುನಾವಣಾ ಹಾದಿ ಎತ್ತ ಸಾಗುತ್ತದೋ ಯೋಚಿಸಿ? ಕಾಂಗ್ರೆಸ್‌ನ ಪ್ರಮುಖ ಪ್ರತಿಸ್ಪರ್ಧಿ ಮತ್ತು ಬಿಜೆಪಿಯ ಚುನಾವಣಾ ಮುಖ್ಯಭೂಮಿಕೆಯಲ್ಲಿರುವ ನರೇಂದ್ರ ಮೋದಿ, ಯುಪಿಎದ ಆರ್ಥಿಕ ವೈಫಲ್ಯ, ಕುಟುಂಬ ರಾಜಕಾರಣ ಮತ್ತು ವಾದ್ರಾ ವಿಷಯದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಂಥ ವಿಷಗಳಿಗೆ ಒತ್ತು ಕೊಟ್ಟು ಕಾಂಗ್ರೆಸ್ ಅನ್ನು ಕಂಗಾಲು ಮಾಡುತ್ತಿದ್ದಾರೆ. ಮೋದಿಯವರು ತಮ್ಮ ಸರಳ ಹಿನ್ನೆಲೆಯನ್ನು ಮುಂದಿಟ್ಟು, ಮಧ್ಯಮ ವರ್ಗಗಳ ಆಕಾಂಕ್ಷೆಗಳೇನು ಮತ್ತು ನವ ಭಾರತದ ನಿರ್ಮಾಣಕ್ಕೆ ಏನು ಬೇಕು ಎನ್ನುವುದು ತಮಗೆ ಗಾಂಧಿ ಕುಟುಂಬಕ್ಕಿಂತಲೂ ಚೆನ್ನಾಗಿ ಗೊತ್ತು ಎಂದು ಜನರಿಗೆ ಸಂದೇಶ ಕಳುಹಿಸುತ್ತಿದ್ದಾರೆ.
ಇಂಥ ತಂತ್ರದಿಂದಾಗಿ 2014ರಲ್ಲಿ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವ ಭಯವಷ್ಟೇ ಅಲ್ಲ, ಅದರೊಟ್ಟಿಗೆ ನೆಹರು-ಗಾಂಧಿ ಕುಟುಂಬ ರಾಜಕಾರಣದ ಅರಮನೆ ಎಲ್ಲಿ ಕುಸಿದುಹೋಗುತ್ತದೋ ಎನ್ನುವ ಭಯವೂ ಅದನ್ನು ಕಾಡುತ್ತಿದೆ.
(ಲೇಖಕರ ಅನುಮತಿಯೊಂದಿಗೆ ಅನುವಾದಿತ)

- ಅಶೋಕ್ ಮಲಿಕ್
ಅಂಕಣಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement