ಜರ್ಮನಿ ಕ್ರೈಸ್ತ ರಾಷ್ಟ್ರವಾದರೆ, ಭಾರತ ಹಿಂದು ರಾಷ್ಟ್ರವೇಕಲ್ಲ?
ಬಹಳ ವರ್ಷಗಳಿಂದಲೂ ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ. ಹಾಗಿದ್ದರೂ ಕೆಲವೊಂದು ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅರಗಿಸಿಕೊಳ್ಳಲೂ ನನಗೆ ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ -ಚಾನೆಲ್ಗಳಲ್ಲಿ ಆಗಿಂದಾಗ್ಗೆ ನಡೆಯುವ ಚರ್ಚೆಯ ಸಂದರ್ಭದಲ್ಲಿ, ಹಿಂದುತ್ವ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು: ವಿದ್ಯಾವಂತರು ಅನ್ನಿಸಿಕೊಂಡ ಭಾರತೀಯರೇ ಮುಖ ತಿರುವಿಕೊಂಡು ಕೂರುತ್ತಾರಲ್ಲ ಏಕೆ? ಎಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಹಿಂದೂಗಳು. ಹಿಂದೂ ನಾಗರೀಕತೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಕಾರಣದಿಂದಲೇ ಭಾರತವನ್ನು ಹಿಂದೂ ದೇಶ ಎಂದು ಕರೆಯಲಾಗಿದೆ. ವಾಸ್ತವ ಹೀಗಿರುವಾಗ, 'ಹಿಂದುತ್ವ' ಎಂಬ ಮಾತಿನಿಂದ, ಹಿಂದುತ್ವ ಕುರಿತ ವಾದದಿಂದ ದೇಶದ ಹಿರಿಮೆಗೆ ಭಂಗ ಉಂಟಾಗುತ್ತದೆ ಎಂದೆಲ್ಲಾ ವಾದಿಸುವುದು ಎಷ್ಟರಮಟ್ಟಿಗೆ ಸರಿ? ಹಿಂದುತ್ವವಾದದಿಂದ ದೇಶಕ್ಕೆ ಅಪಾಯ ಎಂಬಂಥ ವಿತಂಡ ವಾದಕ್ಕೆ ಅವರು ಹೇಗೆ ಮುಂದಾಗುತ್ತಾರೆ.
ಬಹುಸೂಕ್ಷ್ಮ ಸಂಗತಿಯೊಂದನ್ನು ಗಮನಿಸಿ. 'ಹಿಂದುತ್ವ' ಎಂದಾಕ್ಷಣ ಉರಿದು ಬೀಳುವ ಹಲವರಿಗೆ 'ಭಾರತವನ್ನು ಹಿಂದೂರಾಷ್ಟ್ರ' ಎಂದು ಕರೆಯುವ ವಿಷಯವಾಗಿಯೇ ತಕರಾರುಗಳಿವೆ. ಆದರೆ ಜಗತ್ತಿನ ಉಳಿದ ಧರ್ಮಗಳಾದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ರಾಷ್ಟ್ರಗಳನ್ನು ಆ ಧರ್ಮದ ಹೆಸರಿನಿಂದಲೇ ಕರೆಯುವುದರ ಕುರಿತು ಇವರ್ಯಾರೂ ತುಟಿಪಿಟಿಕ್ ಎನ್ನುವುದಿಲ್ಲ. ಈಗ ಮೊದಲಿಗೆ ಜರ್ಮನಿಯನ್ನೇ ಉದಾಹರಿಸಿ ಹೇಳುವುದಾದರೆ -ಆ ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ. 59ರಷ್ಟು ಮಂದಿ ಮಾತ್ರ ಕ್ರಿಶ್ಚಿಯನ್ನರು. (ಅದರಲ್ಲೂ ಪ್ರೊಟೆಸ್ಟೆಂಟರು ಮತ್ತು ಕ್ಯಾಥೋಲಿಕ್ ಎಂಬ ಎರಡು ಗುಂಪು ಬೇರೆ) ಉಳಿದ ಶೇ. 41ರಷ್ಟು ಜನರು ಬೇರೆ ಧರ್ಮಗಳಿಗೆ ಸೇರಿದವರು. ಆದರೆ, ಜರ್ಮನಿ ಎಂಬುದು ಕ್ರಿಶ್ಚಿಯನ್ನರ ನಾಡು ಎಂದು ಘೋಷಿಸಿದರೆ, ಅಲ್ಲಿ ಯಾರೊಬ್ಬರೂ ಮೂಗು ಮುರಿಯುವುದಿಲ್ಲ. ಈಗ ಜರ್ಮನಿಯ ಆಡಳಿತ ಪಕ್ಷದ ಮುಖ್ಯಾಧಿಕಾರಿಯಾಗಿರುವ ಏಜೆಂಲೋ ಮಾರ್ಕೆಲ್, ದೇಶದಲ್ಲಿರುವ ನಾಗರಿಕರಿಗೆಲ್ಲ ಕ್ರಿಶ್ಚಿಯನ್ ಧರ್ಮದ ಆಶಯದಂತೆಯೇ ಬದುಕಲು ಸಿದ್ಧರಾಗಬೇಕು ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಅವರ ಮಾತಿಗೆ ಅಲ್ಲಿರುವ ಉಳಿದ ಧರ್ಮದ ಜನ ತಕರಾರು ಮಾಡಲಿಲ್ಲ. ಜರ್ಮನ್ ಪಾರ್ಲಿಮೆಂಟ್ನಲ್ಲಿ ಭಾಷಣ ಮಾಡುವಂತೆ ಪೋಪ್ ಅವರನ್ನೇ ಆಹ್ವಾನಿಸಲಾಗಿತ್ತು. ಅದನ್ನೂ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಜರ್ಮನಿಯಲ್ಲಿರುವ ಎರಡು ಪ್ರಬಲ ರಾಜಕೀಯ ಪಕ್ಷಗಳು, ಕ್ರಿಶ್ಚಿಯನ್ ಎಂಬ ಹೆಸರಿನಿಂದಲೇ ಕೊನೆಯಾಗುತ್ತವೆ. ಅದನ್ನು ಗಮನಿಸಿದ ಯಾರೊಬ್ಬರೂ-'ಅಯ್ಯೋ, ಇದೇನ್ರೀ ಹೀಗೇ...' ಎಂದು ವ್ಯಂಗ್ಯವಾಡಿಲ್ಲ. ಅಷ್ಟೇ ಅಲ್ಲ, ಆದಾಯ ತೆರಿಗೆಯಲ್ಲಿ ಶೇ.8ರಷ್ಟು ಹಣವನ್ನು ಚರ್ಚ್ ತೆರಿಗೆ ಎಂದು ಪರಿಗಣಿಸಿ, ಆ ಹಣವನ್ನು ಚರ್ಚ್ಗಳಿಗೆ ನೀಡುವ ನಿಯಮವೂ ಜರ್ಮನಿಯಲ್ಲಿದೆ. ನಿಮ್ಮ ದೇಶದಲ್ಲಿ ಯಾಕ್ರೀ ಹೀಗೆ ಎಂದು ಈವರೆಗೂ ಯಾರೊಬ್ಬರೂ ಪ್ರಶ್ನೆ ಹಾಕಿಲ್ಲ.
ಹೌದು. ದೇಶದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇ. 59ರಷ್ಟು ಮಾತ್ರ ಕ್ರಿಶ್ಚಿಯನ್ನರಿರುವ ಜರ್ಮನಿಯನ್ನು ಕ್ರಿಶ್ಚಿಯನ್ ರಾಷ್ಟ್ರ ಎಂದು ಕರೆಯುವುದು ಸರಿಯಲ್ಲ ಎಂದು ಜರ್ಮನಿಯಲ್ಲಿ ಯಾರೊಬ್ಬರೂ ಹೇಳುವುದಿಲ್ಲ. ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಅವಲೋಕಿಸಿದರೆ, ಹಲವು ರಾಷ್ಟ್ರಗಳಲ್ಲಿ ದಬ್ಬಾಳಿಕೆ ನಡೆಸುವ ಮೂಲಕವೇ ಕ್ರಿಶ್ಚಿಯನ್ ಧರ್ಮವು ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂಬುದು ಎಂಥ ಪೆದ್ದರಿಗೂ ಅರ್ಥವಾಗುತ್ತದೆ. ನೂರಾರು ವರ್ಷಗಳ ಹಿಂದೆ, ಹಲವು ರಾಷ್ಟ್ರಗಳಲ್ಲಿ ಲಕ್ಷಾಂತರ ಮಂದಿಯನ್ನು ಹೆದರಿಸಿ, ಬೆದರಿಸಿ ಮತಾಂತರ ಮಾಡಿಸಲಾಯಿತು ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ಸಾಕ್ಷಿಗಳು ಸಿಗುತ್ತವೆ.
ಒಂದು ಕಾಲದಲ್ಲಿ, ಚರ್ಚ್ನ ನಿರ್ಣಯಗಳನ್ನು ಬಹಿರಂಗವಾಗಿ ವಿರೋಧಿಸಿದರೆ, ಅಂಥವರ ಮೇಲೆ ಹಲ್ಲೆಗಳಾಗುತ್ತಿದ್ದವು. ಚರ್ಚ್ನ ಸಿದ್ಧಾಂತಗಳನ್ನು ವಿರೋಧಿಸಿದವರ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. 2011ರಲ್ಲಿ ನಡೆದ ಸಮೀಕ್ಷೆಯೊಂದರ ವರದಿಯಂತೆ, 6 ಲಕ್ಷಕ್ಕೂ ಹೆಚ್ಚು ಜನರು, ಜರ್ಮನಿಯಲ್ಲಿ ಚರ್ಚ್ಗೆ ಹೋಗದಿರಲು ನಿರ್ಧರಿಸಿದ್ದಾರಂತೆ. 'ಎಲ್ಲ ಸಮಸ್ಯೆಗಳಿಗೂ ಜೀಸಸ್ ಪರಿಹಾರ ತೋರಿಸುತ್ತಾನೆ. ಚರ್ಚ್ಗಳು ಬೋಧಿಸುವುದನ್ನು ತಿರಸ್ಕರಿಸುತ್ತಾರಲ್ಲ; ಅಂಥವರಿಗೆ ನರಕಕ್ಕೆ ಹೋಗುವ ಶಿಕ್ಷೆಯನ್ನು ದೇವರು ದಯಪಾಲಿಸುತ್ತಾನೆ' ಎಂಬಂಥ ಮಾತುಗಳ ಬಗ್ಗೆ ನಮಗೆ ಆಕ್ಷೇಪವಿದೆ ಎಂದು ಅವರೆಲ್ಲ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ ಎಂದೂ ಸಮೀಕ್ಷೆಯ ವರದಿಯಲ್ಲಿ ವಿವರಿಸಲಾಗಿದೆ.
ಈಗ ಭಾರತದ ವಿಷಯಕ್ಕೆ ಬರೋಣ. ಭಾರತದ ನೆಲದಲ್ಲಿ ನಿಂತು 'ಹಿಂದುತ್ವ' ಅಂದರೆ, ಮರುಕ್ಷಣವೇ ಮುಖ ಸಿಂಡರಿಸಲಿಕ್ಕೆ ಕಾರಣವಾದರೂ ಏನಿದೆ? ಹಿಂದೂ ಧರ್ಮ ಎಂಬುದಕ್ಕೆ ಒಂದು ವಿಶಿಷ್ಟತೆಯಿದೆ. ಚೆಂದದ ಹಿನ್ನೆಲೆಯಿದೆ, ಅದು ಅರೇಬಿಯನ್ ಧರ್ಮಗಳಿಗಿಂತ ಭಿನ್ನ. ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳಿಗೆ ಇದೆಯಲ್ಲ; ಅಂಥದೇ ಪುರಾತನ ಇತಿಹಾಸದ ಬೆಂಬಲ ಹಿಂದೂಧರ್ಮಕ್ಕೂ ಇದೆ. ಆದರೆ ಬೇರೆ ಧರ್ಮದವರನ್ನು ಹೆದರಿಸಿ, ಬಗೆಬಗೆಯ ಆಸೆ ತೋರಿಸಿ ಹಿಂದೂಧರ್ಮಕ್ಕೆ ಮತಾಂತರ ಮೂಡಿಸಿದ ಉದಾಹರಣೆ ಎಲ್ಲಿಯೂ ಸಿಗುವುದಿಲ್ಲ.
ಅನುಮಾನವೇ ಬೇಡ. ಹಿಂದೂಧರ್ಮದ ನಿಯಮ ಮತ್ತು ಸಿದ್ಧಾಂತಗಳು ಸದಾಶಯದಿಂದ ಕೂಡಿದೆ. ಮಹಾಮಹಿಮರಾದ ಋಷಿ ಮುನಿಗಳು ಈ ಧರ್ಮದ ಹಲವು ಸಿದ್ಧಾಂತಗಳಿಗೆ ಕಾರಣರಾಗಿದ್ದರು. ಎಲ್ಲರನ್ನೂ ಗೌರವಿಸು ಮತ್ತು ಆದರಿಸು ಎಂಬುದು ಹಿಂದೂ ಧರ್ಮದ ತಿರುಳು. ವ್ಯಕ್ತಿಯೊಬ್ಬನ ಬೌದ್ಧಿಕ ಸಾಮರ್ಥ್ಯ ವಿಕಸನಗೊಳ್ಳುವುದಕ್ಕೆ ಈ ಒಂದೇ ಮಾತು ಸಾಕಲ್ಲವೆ? ಹಿಂದೂಯಿಸಂನಲ್ಲಿ ಏನಿಲ್ಲ ಹೇಳಿ; ಅಲ್ಲಿ ಪ್ರಾಚೀನ ಕಾಲದ ಸಾಹಿತ್ಯವನ್ನು ನೋಡಬಹುದು. ಧರ್ಮ ಹಾಗೂ ತತ್ವಶಾಸ್ತ್ರದ ಬಗ್ಗೆ ಮಾತ್ರವಲ್ಲ, ಕೃಷಿ, ಸಂಗೀತ, ಚಿತ್ರಕಲೆ, ವಿಜ್ಞಾನ, ರಾಜಕೀಯ... ಈ ಎಲ್ಲದರ ಸಾರವೂ ಹಿಂದೂಯಿಸಂನಲ್ಲಿ ಹಾಸು ಹೊಕ್ಕಾಗಿದೆ.
ಒಂದು ವೇಳೆ, ಹಿಂದೂಧರ್ಮ ಒಳಗೊಂಡಿರುವ ವಿಫುಲ ಸಂಗತಿಗಳು ಜರ್ಮನಿ ಅಥವಾ ಬೇರೆ ಯಾವುದೇ ಪಾಶ್ಚಾತ್ಯ ರಾಷ್ಟ್ರದ ಧರ್ಮದಲ್ಲಿ ಕಾಣಿಸಿ ಬಿಟ್ಟಿದ್ದರೆ, ನಿಜವಾಗಿಯೂ ಅದೊಂದು ಮಹತ್ವದ ಸುದ್ದಿಯಾಗುತ್ತಿತ್ತು. ನಮ್ಮ ದೇಶಕ್ಕೆ, ನಮ್ಮ ಧರ್ಮಕ್ಕೆ ಅತಿ ಪ್ರಾಚೀನ ಇತಿಹಾಸವಿದೆ ಎಂಬುದನ್ನೇ ವಿದೇಶಿಯರು ಮೇಲಿಂದ ಮೇಲೆ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರು. ಆದರೆ ಬ್ಯಾಡ್ಲಕ್. ನಮ್ಮ ಹಿಂದೂಯಿಸಂನಲ್ಲಿ ಬೇರ್ಯಾವ ಧರ್ಮದಲ್ಲಿ ಇಲ್ಲದ ವಿಶಿಷ್ಟ ಹೊಳಹುಗಳಿವೆ ಎಂದು ಹೇಳಿಕೊಳ್ಳಲು ಭಾರತದ ಬಹಳಷ್ಟು ಮಂದಿ ಹಿಂಜರಿಯುತ್ತಿದ್ದಾರೆ!
ನಮ್ಮ ಜರ್ಮನ್ ನೆಲದ ಇತಿಹಾಸವನ್ನು ಅವಲೋಕಿಸಿದರೆ, ಪುರಾತನ ಕಾಲ ಎಂದರೆ ನಮಗೆ ದಕ್ಕುವುದು 800 ವರ್ಷಗಳ ಹಿಂದಿನ ಇತಿಹಾಸ ಮಾತ್ರ. ಅದಕ್ಕೂ ಹಿಂದೆ ಅದು ಜರ್ಮನ್ ಸಂಸ್ಕೃತಿ ಅನ್ನಿಸಿಕೊಂಡಿರಲಿಲ್ಲ. ಆದರೆ ಭಾರತದ ವಿಷಯ ಹಾಗಲ್ಲ. ಈ ದೇಶದ ಹಲವು ನಗರಗಳು ಹಾಗೂ ಇಲ್ಲಿನ ಸಂಸ್ಕೃತಿ ಸಾವಿರಾರು ವರ್ಷಗಳ ಹಿಂದೆಯೇ ಇತ್ತು ಎಂಬುದಕ್ಕೆ ರಾಮಾಯಣ ಮತ್ತು ಮಹಾಭಾರತದ ಪುಟಗಳಲ್ಲಿ ಸಾಕ್ಷಿಗಳಿವೆ. ಹಿಂದೂಯಿಸಂ ಎಂಬುದು ಹೆಮ್ಮೆಯ ಪ್ರತೀಕ ಎಂದು ಎದೆಯುಬ್ಬಿಸಿ ನಿಲ್ಲಲು ಅಷ್ಟು ಸಾಕಲ್ಲವೆ?
'ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಜರ್ಮನಿಯ ಕೋಪರ್ನಿಕಸ್ ಮೊದಲಿಗೆ ಪ್ರತಿಪಾದಿಸಿದನು' ಎಂದು ಎಲ್ಲರೂ ಹೇಳುತ್ತಾರೆ. ಭಾರತದಲ್ಲಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಪಠ್ಯಪುಸ್ತಕದಲ್ಲಿ ಕೂಡ ಇವೇ ಸಾಲುಗಳಿವೆ. ಅಷ್ಟೇ ಅಲ್ಲ, ಹೊಸ ದಿಲ್ಲಿಯಲ್ಲಿ ಕೋಪರ್ನಿಕಸ್ ಮಾರ್ಗ ಎಂಬ ಹೆಸರಿನ ಒಂದು ರಸ್ತೆಯೇ ಇದೆ. ಆದರೆ, ಈ ಭವ್ಯ ಭಾರತದಲ್ಲಿ ಋಗ್ವೇದದ ಕಾಲದಲ್ಲಿಯೇ ಭೂಮಿ ದುಂಡಾಗಿದೆ. ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುತ್ತವೆ ಎಂದು ಋಷಿ ಮುನಿಗಳು ಉದ್ಧರಿಸಿರುವ ಮಾತುಗಳಿವೆ. ಇದನ್ನು ಗಮನಿಸಿದರೆ ಉಳಿದೆಲ್ಲ ಧರ್ಮ ಹಾಗೂ ರಾಷ್ಟ್ರಗಳಿಗಿಂತ ಭವ್ಯವಾದ ಪರಂಪರೆಯೊಂದು ಭಾರತಕ್ಕಿದೆ ಅನಿಸುವುದಿಲ್ಲವೆ? ಇದು ಹಿಂದೂಗಳೆಲ್ಲರೂ ಹೆಮ್ಮೆ ಪಡುವಂಥ ಸಂಗತಿಯಲ್ಲವೆ?
ಬಹುಶಃ ಭಾರತದಲ್ಲಿರುವ ಸಮಸ್ತ ಹಿಂದೂಗಳೂ ತಮ್ಮ ಧರ್ಮವನ್ನು ಅಪಾರವಾಗಿ ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂದು ಬಾಲ್ಯದ ದಿನಗಳಲ್ಲಿ ನಾನು ಭಾವಿಸಿದ್ದೆ. ಆದರೆ ನಂತರದ ಕೆಲವೇ ದಿನಗಳಲ್ಲಿ ನನ್ನ ನಂಬಿಕೆ ಹುಸಿಯಾಯಿತು. ಇಂಥದೊಂದು ಸ್ಥಿತಿ ನಿರ್ಮಾಣವಾಗಲಿಕ್ಕೆ ಭಾರತವನ್ನು ಆಳಿದ ಬ್ರಿಟಿಷರೂ ಕಾರಣ ಎಂಬುದನ್ನು ಮರೆಯಬಾರದು. ತಮ್ಮ ಪ್ರಭುತ್ವ ಮೆರೆಯುತ್ತಿದ್ದ ದಿನಗಳಲ್ಲಿ ಬ್ರಿಟಿಷರು ಶಿಕ್ಷಣದ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಠ ಎಂದು ಸಲ್ಲದ ವಿಚಾರಗಳನ್ನು ಹೇಳಿಕೊಟ್ಟರು. ಭಾರತೀಯ ಸಂಸ್ಕೃತಿಯನ್ನು ಪದರ ಪದರವಾಗಿ ತಿಳಿಸುತ್ತಿದ್ದ ಸಂಸ್ಕೃತ ಭಾಷೆಯನ್ನು ಬೇಕೆಂದೇ ದೂರವಿಟ್ಟರು. ದುರಂತವೆಂದರೆ, ಬ್ರಿಟಿಷರ ಈ ಹೊಸ ಬಗೆಯ ಹೇರಿಕೆಯನ್ನು ಭಾರತದ ಜನತೆ ಅರ್ಥ ಮಾಡಿಕೊಳ್ಳಲೇ ಇಲ್ಲ. ಬ್ರಿಟಿಷರು ತೋರಿದ ದಾರಿಯಲ್ಲಿ ಅಂಧರಂತೆ ನಡೆದು ಬಿಟ್ಟರು.
ಹಿಂದೂ ಧರ್ಮ ಎಂದಾಕ್ಷಣ ಮುಖ ತಿರುಗಿಸುವ ಕೆಲಸವನ್ನು ಮಿಷನರಿಗಳಿಗೆ ಸೇರಿದ ಜನರು ಮಾತ್ರ ಮಾಡಿಕೊಂಡಿದ್ದರೆ, ಆ ವಿಚಾರದ ಬಗ್ಗೆ ಚಿಂತಿಸುವ ಅಗತ್ಯವೇ ಇರಲಿಲ್ಲ. ಆದರೆ ಹಿಂದೂ ಧರ್ಮಕ್ಕಿಂತ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಠ. ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೇ ಭಾರತದ ಭವಿಷ್ಯ ಅಡಗಿದೆ ಎಂಬಂಥ ಮಾತುಗಳನ್ನು ಭಾರತದ ಕೆಲವು ತರುಣರೇ ಹೇಳುತ್ತಿದ್ದಾರೆ. ಅದು ನಿಜವಾಗಿ ನೋವಿನ ವಿಚಾರ. ಹಿಂದುತ್ವದಿಂದ ದೇಶದ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಮಾತುಗಳಲ್ಲಿ ಅರ್ಥವಿಲ್ಲ. ವಿದೇಶವೇ ಶ್ರೇಷ್ಠ, ಅಲ್ಲಿನ ಸಂಸ್ಕೃತಿಯನ್ನು ಪಾಲಿಸುವುದರಲ್ಲೇ ನಮ್ಮ ಒಳಿತು ಅಡಗಿದೆ ಎಂದು ವಾದಿಸುವವರಿಗೆ, ಕೆಲವೇ ದಿನಗಳ ಹಿಂದೆ ದಲೈಲಾಮ ಅವರು ಹೇಳಿದ್ದ ಮಾತೊಂದನ್ನು ನೆನಪಿಸಲೇಬೇಕಾಗಿದೆ. ಅವರು ಹೇಳಿದ್ದರು: 'ಜಗತ್ತಿನ ಬಲಾಢ್ಯ ರಾಷ್ಟ್ರವಾಗುವ ಎಲ್ಲ ಸಾಮರ್ಥ್ಯ ಹಾಗೂ ಅರ್ಹತೆಯೂ ಭಾರತಕ್ಕಿದೆ...'
ವಿದೇಶಿ ವ್ಯಾಮೋಹದ ಹುಚ್ಚಿನಲ್ಲಿ ತಮ್ಮ ಅಸ್ತಿತ್ವವನ್ನೇ ಮಾರಿಕೊಳ್ಳಲು ನಿಂತಿರುವ ಮಂದಿಗೆ, ದಲೈಲಾಮಾ ಅವರ ಮಾತುಗಳು ಅರ್ಥವಾದರೆ ಸಾಕು...
- ಮರಿಯಾ ವರ್ತ್
ಬ್ಲಾಗಿಗರು