ಹಗಲುಗನಸು ಕಾಣ್ತಾ ಇದೀರಾ?
'ಇಂಥ ಭಾಷಣವನ್ನು ಇಂದು ನಮ್ಮ ಪ್ರಧಾನಿಯೂ ಮಾಡಬಾರದಾ' ಎಂದು ವಿಶ್ವೇಶ್ವರ ಭಟ್ಟರು ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಏನ್ಸಾರ್, ಹಗಲುಗನಸು ಕಾಣ್ತಾ ಇದೀರಾ? ಯಾರಾದ್ರೂ ಬರೆದು ಕೊಟ್ಟ ಭಾಷಣವನ್ನು ಮೇಡಂ ಅವರ ಅನುಮತಿ ದೊರಕಿದ ನಂತರವಷ್ಟೇ ಪ್ರಧಾನಿಗಳು ಓದ್ತಾರಷ್ಟೆ. ನಿಮ್ಮ ಆಸೆ/ಕಲ್ಪನೆಗೂ ಒಂದು ಮಿತಿ ಇರ್ಬೇಕಲ್ವಾ?!
-ಕಿರಣ್
ಹಲವು ವಿಶಿಷ್ಟ ಅಂಕಣಗಳ ನಡುವೆ ಬೈಟುಕಾಫಿಯ "ಜೋಕ್ ಫಾಲ್ಟ್" ಸಕ್ಕರೆಯ ನಡುವೆ ಉಪ್ಪಿನಹರಳು ಮೆದ್ದಂಥ ಅನುಭವ ನೀಡುತ್ತಿದೆ. ಇಂದಿನವರೆಗೂ ಒಂದು ದಿನವೂ ನನಗೆ ಅದು ನಗೆ ತರಿಸಿಲ್ಲ. ಇದು 'ಜೋಕ್'ನ ಒಂದು "ಫಾಲ್ಟ್" ಸಂದೇಶ!
-ಕೆ. ಶ್ರೀನಿವಾಸರಾವ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ
ಬೆಳಗ್ಗೆ ಎದ್ದ ಕೂಡಲೇ ತಾಜಾ ಸುದ್ದಿಗಾಗಿ ಕನ್ನಡಪ್ರಭದ ಮುಖಪುಟವನ್ನು ನೋಡಿದರೆ, ಮನಸ್ಸಿಗೆ ಕಿರಿಕಿರಿಯಾಗುವಂತಹ ರಾಜಕಾರಣಿಗಳ ಫೋಟೋಗಳು, ಚಿನ್ನ-ಬೆಳ್ಳಿ ಅಂಗಡಿಯ ಫೋಟೋಗಳು ಮುಖಪುಟದ ಅರ್ಧಭಾಗವನ್ನು ಆಕ್ರಮಿಸಿಕೊಂಡಿರುತ್ತವೆ. ಜಾಹೀರಾತುಗಳಿಲ್ಲದೇ ದಿನಪತ್ರಿಕೆ ನಡೆಸಲು ಸಾಧ್ಯವಿಲ್ಲ ಸರಿ. ಆದರೆ ಜಾಹೀರಾತೇ ಪತ್ರಿಕೆಯ ಮುಖ್ಯ ಸುದ್ದಿಯಾಗಬಾರದಲ್ಲವೇ? ಜಾಹೀರಾತುಗಳ ಸಂಖ್ಯೆ ಹೆಚ್ಚಿದ್ದರೆ ಜಾಹೀರಾತುಗಳಿಗಾಗಿಯೇ ಪ್ರತ್ಯೇಕ 'ಸಪ್ಲಿಮೆಂಟರಿ' ಮಾಡಿ. ಈ ಮೊದಲು ಪತ್ರಿಕೆಯ ಮುಖಪುಟದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವಿಡಂಬನೆ ಮಾಡುವ ಎಸ್.ವಿ. ಪದ್ಮನಾಭ್ ಅವರ ದೊಡ್ಡ ದೊಡ್ಡ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿದ್ದವು. ಆದರೆ ಬರುಬರುತ್ತಾ ಪದ್ಮನಾಭ್ ಅವರ ವ್ಯಂಗ್ಯ ಚಿತ್ರಗಳು ಮೂಲೆಗುಂಪಾಗಿವೆ.
-ಫ್ಯಾಷನ್ ಡಿಸೈನರ್ ಮಧು, ಹಾಸನ,
ಗಾಳಿಮಾತು- 99457- 37427
ರಾಧಾಕೃಷ್ಣ ಭಡ್ತಿ ಅವರ ದೇವನೆಲದಲ್ಲಿ ರುದ್ರಭೂಮಿ/ಪ್ರವಾಹೋತ್ತರಕಾಂಡ ಇದರ 12ನೇ ಭಾಗವನ್ನು ಓದಿ ಮನಸ್ಸಿನಲ್ಲಿ ಒಂದು ಅನಿರ್ವಚನೀಯ ಅನುಭವ ಉಂಟಾಗಿದೆ. ಭಡ್ತಿಯವರು ಜಲ ಸಂಬಂಧಿಲೇಖನಗಳಲ್ಲಿ ಚಿರಪರಿಚಿತರಾಗಿದ್ದರೂ ಈಗ ಸಾಹಸಪೂರ್ಣ ಲೇಖನಕ್ಕೂ ಸೈ ಎನಿಸಿದ್ದಾರೆ. ಯುದ್ಧದ ಮಾಹಿತಿಗಳಿಗಿಂತಲೂ ಯುದ್ಧೋತ್ತರ ಮಾಹಿತಿ ನೀಡುವುದು ಬಲುಕಷ್ಟ ಎನ್ನುವಂತೆ ಉತ್ತರಾಖಂಡದ ದಯನೀಯ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ, ಕಣ್ಣೀರು ಸುರಿಯುವಂತೆ ಅಕ್ಷರಗಳಲ್ಲಿ ನಿರೂಪಿಸಿದ್ದಾರೆ. ಗೊರಿಲ್ಲಾಗಳ ಜೀವನ ವಿಧಾನ (ವಿಶ್ವೇಶ್ವರ ಭಟ್ಟರ ಲೇಖನಗಳು)ದ ಗುಂಗಿನಿಂದ ಹೊರಬರುತ್ತಿರುವಾಗಲೇ ಭಡ್ತಿ ಅವರ ಉತ್ತರಾಖಂಡ ದುರಂತದ ಕುರಿತಾದ ಲೇಖನವು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಭಡ್ತಿಯವರಿಗೆ ಅನೇಕ ವಂದನೆಗಳು.
-ಎನ್.ಡಿ. ಕಾರಂತ್, 8105530343
ಚಪ್ಪರ್‌ಬಂದ್, ಬಣಜಿಗರು, ಹಂಡೆ ವಜೀರ ಸಮುದಾಯ, ಸ್ವಕುಳಸಾಳಿ ಸಮುದಾಯ, ಕರಕರಮುಂಡಿ ಸಮುದಾಯ...ಹೀಗೆ ಪ್ರತಿವಾರವೂ ಒಂದೊಂದು ಜಾತಿಯ ಬಗ್ಗೆ, ಆ ಜನರ ಜೀವನದ ಬಗ್ಗೆ ಬೆಳಕು ಚೆಲ್ಲುತ್ತಿರುವ ಕೆ.ವಿ. ಪ್ರಭಾಕರ್ ಅವರ ಲೇಖನಗಳು ಅದ್ಭುತವಾಗಿ ಮೂಡಿಬರುತ್ತಿವೆ. ಇನ್ನು ಅವರ ಬುಡ್‌ಬುಡ್ಕೆ ಅಂಕಣವಂತೂ ಸೂಪರ್. ಭಾನುವಾರದ ಪತ್ರಿಕೆ ಕೈಗೆತ್ತಿಕೊಂಡಕೂಡಲೇ ನನ್ನ ದೃಷ್ಟಿ ಆಟೋಮೆಟಿಕ್ ಆಗಿ ಬುಡ್‌ಬುಡ್ಕೆಯತ್ತ ಹರಿಯುತ್ತದೆ. ಮೈಲಾರಿಯ ಮಾತುಗಳಂತೂ ಯಾವ ಸಿನೆಮಾ ಡೈಲಾಗ್‌ಗೂ ಕಡಿಮೆ ಇಲ್ಲ. ಹಾಸ್ಯದ ಮೂಲಕ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುವ ಅವರ ಬರಹ ಹೀಗೇ ಮುಂದುವರಿಯಲಿ.
-ವಾಸುದೇವ್ ಖೆಣೆದ್, ನೋಬೋ ನಗರ, ದಾವಣಗೆರೆ
ಇತ್ತೀಚೆಗೆ ತಮ್ಮ ಪತ್ರಿಕೆ ನರೇಂದ್ರ ಮೋದಿ ಬಗ್ಗೆ ಹೆಚ್ಚು ಪ್ರಚಾರ ಕೊಡುವಂತೆ ಕಾಣುತ್ತಿದೆ. ಪತ್ರಿಕೆಯಲ್ಲಿ ಮೋದಿಯವರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಗುಣಗಾನ ಮಾಡಲಾಗುತ್ತಿದೆ. ಈ ಮೋಹಕ ಸುದ್ದಿಗಳಿಗೆ ಇನ್ನಾದರೂ ಕಡಿವಾಣವಿರಲಿ.
- ಪಟ್ಟಸೋಮನಹಳ್ಳಿ ಗಾನಸುಮಾ, ಪಾಂಡವಪುರ, ಮಂಡ್ಯ, 9844486924
ನರೇಂದ್ರ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿರುವ ಹುಸಿ ಜಾತ್ಯತೀತವಾದಿಗಳ ಮೇಲಾಟ ಈಗ ಹೆಚ್ಚಾಗುತ್ತಿದೆ. ದಿಗ್ವಿಜಯ್ ಸಿಂಗ್, ಖುರ್ಷಿದ್‌ರಂಥವರಿಂದ ನಮ್ಮ ದೇಶದ ಮಾನ ಹರಾಜಾಗುತ್ತಿದೆ. ಯಾವುದಕ್ಕೂ ಪ್ರತಿಕ್ರಿಯೆ ನೀಡದ ಪ್ರಧಾನಿ ಲೆಕ್ಕಕ್ಕಿಲ್ಲದಂತಾಗಿದ್ದಾರೆ. ಇಂಥವರು ನಮ್ಮ ದೇಶವನ್ನು ಆಳುವುದಕ್ಕೇ ನಾಲಾಯಕ್ಕು. ಇಂಥವರ ನಿಜಬಣ್ಣ ಬಯಲು ಮಾಡುವ ಲೇಖನಗಳು ನಮ್ಮ ಕನ್ನಡಪ್ರಭದಲ್ಲಿ ಇನ್ನಷ್ಟು ಬರಲಿ ಎಂದು ಕೋರುತ್ತೇವೆ.
- ಪ್ರಮೋದ್ ಕುಮಾರ್, ಶಾಂತಿನಗರ,
ಬೆಂಗಳೂರು, 9886712628
ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.