ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯೇ?

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ...

Vishwanath S
Updated On : 19 Aug 2013, 1:25 am

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗ, ಒಂದು ದಿನ ಕೊಪ್ಪಳದಿಂದ ಬಂದ ಒಬ್ಬ ಮಹಿಳೆ ನನಗೊಂದು ಮನವಿ ಸಲ್ಲಿಸಿದಳು. ಅದರಲ್ಲಿ ಅವಳ ಹದಿನೈದು ವರ್ಷದ ಮಗಳು ಮತ್ತು ಅವಳ ಓರಗೆಯವರಾದ ಸುಮಾರು ಹನ್ನೆರಡು ಹೆಣ್ಣು ಮಕ್ಕಳು ಸುತ್ತ ಮುತ್ತಲಿನ ಊರಿನಿಂದ ಕಾಣೆಯಾಗಿದ್ದಾರೆಂದೂ, ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆಂದೂ, ಪೊಲೀಸರಿಗೆ ದೂರು ಕೊಟ್ಟು ಮೂರು ತಿಂಗಳಾದ ಮೇಲೆ ಏನೂ ಸುಳಿವು ಸಿಕ್ಕಿಲ್ಲ ಎಂಬ ಹೇಳುತ್ತಾರೆಂದು ಹೇಳಿದಳು. 'ಹೆಣ್ಣು ಮಕ್ಕಳು ಮಾತ್ರವಲ್ಲದೆ ಹಲವಾರು ಎಳೆಯ ಬಾಲಕರೂ ನಾಪತ್ತೆಯಾಗುತ್ತಿದ್ದಾರೆ ಮತ್ತು ತಮಗೆ ಕೆಲವರ ಮೇಲೆ ಅನುಮಾನವಿದೆ ಎಂದು ಹೇಳಿದರೂ, ಅವರ ಮೇಲೆ ಪೊಲೀಸರು ಯಾವ ಕ್ರಮವನ್ನೂ ಜರಗಿಸುತ್ತಿಲ್ಲವೆಂದು' ಆಕೆ ಮನವಿ ಪತ್ರದಲ್ಲಿ ಬರೆದಿದ್ದಳು. ತಕ್ಷಣವೇ ನಾನು ಒಂದು ತಂಡವನ್ನು ರಚಿಸಿ, ಈ ಪ್ರಕರಣಗಳ ಬುಡವನ್ನೇ ಜಾಲಾಡಬೇಕೆಂದು ಒಂದು ತಿಂಗಳ ಕಾಲಾವಧಿಯನ್ನೂ ನಿಗದಿಗೊಳಿಸಿದೆ.
 ತನಿಖೆಯಿಂದ ತಿಳಿದು ಬಂದದ್ದೇನೆಂದರೆ, ಮಹಿಳೆಯರ ಅದರಲ್ಲೂ ಸಣ್ಣ ಪ್ರಾಯದ ಹೆಣ್ಣು ಮತ್ತು ಗಂಡು ಮಕ್ಕಳನ್ನು ಈ ಕೆಳಕಂಡ ಕಾರಣಗಳಿಗೆ ಅನೈತಿಕವಾಗಿ ಸಾಗಣೆ ಮಾಡುತ್ತಾರೆ: ಬಂಧನದಲ್ಲಿರಿಸಿ ಕೆಲಸ ಮಾಡಿಸಲು, ಮನೆಗೆಲಸಕ್ಕೆ ನೇಮಿಸಲು, ಹೊಲಗಳಲ್ಲಿ ದುಡಿಸಿಕೊಳ್ಳಲು, ಕಟ್ಟಡ ನಿರ್ಮಾಣದ ಕೆಲಸಗಳಲ್ಲಿ ದುಡಿಯಲು, ಕಾರ್ಪೆಟ್ ಕೈಗಾರಿಕೆ, ಬಟ್ಟೆ ಹೊಲೆಯುವುದು, ಮೀನು, ಸಿಗಡಿಗಳನ್ನು ರಫ್ತು ಮಾಡುವುದು, ಭಿಕ್ಷೆ ಬೇಡುವುದು, ಅಫೀಮು, ಗಾಂಜಾ ಮಾರಾಟ ಮಾಡಲು, ವೇಶ್ಯಾ ವೃತ್ತಿಗಾಗಿ, ಸರ್ಕಸ್‌ಗಳಲ್ಲಿ ದುಡಿಯಲು, ಬಾರು-ಹೋಟೆಲ್ಲುಗಳಲ್ಲಿ ದುಡಿಯಲು, ಮತ್ತು ಇಂಥ ಅನೇಕ ಚಟುವಟಿಕೆಗಳಿಗೆ ರಾಜ್ಯದಲ್ಲಿ ಹಾಗೂ ರಾಜ್ಯದ ಹೊರಗೆ ಬಳಸಿಕೊಳ್ಳಲು ಸಾಗಣೆ ನಡೆಯುತ್ತದೆ. ಕೆಲವೊಮ್ಮೆ ಮನೆಯವರೇ ಮಕ್ಕಳನ್ನು ದುಷ್ಕರ್ಮಿಗಳಿಗೆ ಮಾರಿಬಿಡುತ್ತಾರೆ. ಬಹಳ ಸಲ ಕದ್ದು ಕರೆದೊಯ್ಯುತ್ತಾರೆ ಅಥವಾ ದುಡ್ಡು ಮತ್ತಿತರ ಅಮಿಷ ಒಡ್ಡಿ ಸಾಗಣೆ ಮಾಡುತ್ತಾರೆ. ಈ ಜಾಲಕ್ಕೆ ತುತ್ತಾಗುವವರು ಬಡತನದಲ್ಲಿ ನರಳುತ್ತಿರುವವರು, ಮಳೆ, ಪ್ರವಾಹ, ಬರಗಾಲ, ಮುಂತಾದ ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ತಂದೆ ತಾಯಿಯರನ್ನು ಕಳೆದುಕೊಂಡವರು, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಗಂಡನನ್ನು ಕಳೆದುಕೊಂಡು ಮನೆಯಿಂದ ಅನಿಷ್ಠವೆಂದು ಹೊರಗೆ ಬಿದ್ದವರು, ಚಿಕ್ಕ ವಯಸ್ಸಿನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿ ಯಾರೊಡನೆಯೋ ಓಡಿಹೋಗಿ ಅವನಿಂದ ಮೋಸ ಹೋದವರು, ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಕರೆದುಕೊಂಡು ಹೋಗಿ ಮಾರಿದವರು, ಇಂಥಹ ಅನೇಕರು. ಇಂಥಹ ಚಿಕ್ಕ ವಯಸ್ಸಿನವರನ್ನು ಒದಗಿಸುವ ಒಂದು ತಂಡವೇ ಇದೆ. ಇವರ ಜಾಲದಲ್ಲಿ ಅರಿಯದೆ ಸಿಕ್ಕು ಬಿದ್ದರೆ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಈ ಮಧ್ಯಸ್ಥರಿಗೆ ಕೈ ತುಂಬಾ ಹಣ ದೊರಕುತ್ತದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಸ್ವಲ್ಪ ದಿನ ಗೋಳಾಡಿ ನಂತರ ಸುಮ್ಮನಾಗುತ್ತಾರೆ. ದೂರು ಕೊಟ್ಟ ಆ ಮಹಿಳೆ ಅನುಮಾನಪಟ್ಟಿದ್ದ ಜನರನ್ನು ಬಂಧಿಸಿ, ಆ ಮಕ್ಕಳನ್ನು ಪೋಷಕರಿಗೆ ಹಿಂದಿರುಗಿಸಿದಾಗ ಮನಸ್ಸಿಗೆ ನೆಮ್ಮದಿ ಎನಿಸಿತು. ಆದರೆ ಎಲ್ಲಾ ಪ್ರಕರಣಗಳೂ ನಮ್ಮ ಗಮನಕ್ಕೆ ಬರುವುದಿಲ್ಲ ಎನ್ನುವುದು ದುರದೃಷ್ಟದ ಸಂಗತಿ.
ಈ ವಿಷಯಗಳಲ್ಲಿ ಜನರಿಗೆ ತಿಳವಳಿಕೆ ಮೂಡಿಸಲು ಸ್ವಯಂ ಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪುಗಳು, ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಶಿಕ್ಷಣ ಶಿಬಿರಗಳನ್ನು ಏರ್ಪಡಿಸಲಾಯಿತು. ಅಕ್ರಮ/ಅನೈತಿಕ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆ 1987ರಲ್ಲಿ ಜಾರಿಗೊಂಡುದರ ಬಗೆಗೆ ಜಾಗೃತಿ ಮೂಡಿಸಲಾಯಿತು. ಅನೈತಿಕ ಸಾಗಾಣಿಕೆಯ ಹೆಚ್ಚಾದ ಪರಿಣಾಮವಾದ ವೇಶ್ಯಾವೃತ್ತಿಯ ಬಗ್ಗೆ ಕಾಯ್ದೆಯ ಪರಿಚ್ಛೇದ ಮೂರರ ಅಡಿಯಲ್ಲಿ, ವೇಶ್ಯಾಗೃಹವನ್ನು ತಾವೇ ನಡೆಸುವುದು ಅಥವಾ ಬೇರೆಯವರಿಗೆ ಸ್ಥಳಾವಕಾಶವನ್ನು ಒದಗಿಸುವುದಕ್ಕೆ ಒಂದರಿಂದ ಮೂರು ವರ್ಷ ಸಜೆ ಮತ್ತು ಎರಡು ಸಾವಿರ ರು.ಗಳ ದಂಡ ವಿಧಿಸಲಾಗುವ ಬಗ್ಗೆ ತಿಳಿಸಿ ಹೇಳಲಾಯಿತು. ಯಾವುದೇ ಆಕ್ರಮಣಕಾರರು (ಬಾಡಿಗೆದಾರರು, ಗೇಣಿದಾರರು ಇತ್ಯಾದಿ) ತಿಳಿದೂ ತಿಳಿದೂ ಇಂಥಹ ಕೆಲಸಕ್ಕೆ ಸ್ಥಳಾವಕಾಶ ಕಲ್ಪಿಸಿದರೆ ಗರಿಷ್ಟ ಎರಡು ವರ್ಷಗಳ ಸಜೆ ಮತ್ತು ಎರಡು ಸಾವಿರ ರು.ಗಳ ದಂಡ ವಿಧಿಸಲಾಗುವುದು ಎಂದು ಮನವರಿಕೆ ಮಾಡಿಕೊಡಲಾಯಿತು. ಈ ಮೇಲೆ ಹೇಳಿದ ಎಲ್ಲಾ ವಿಷಯಗಳನ್ನೂ ತರಬೇತಿ ಶಿಬಿರಗಳಲ್ಲಿ ಎಚ್ಚರಿಕೆ ನೀಡಿ ದೊಡ್ಡ ಕೈಬರಹಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿಸಿ, ಬೀದಿ ನಾಟಕಗಳು ಸಂತೆಗಳಲ್ಲಿ ನಡೆಯುವಂತೆ ಏರ್ಪಡಿಸಿ, ಅಂಗನವಾಡಿ ಕಾರ್ಯಕರ್ತೆಯರು ಈ ವಿಷಯವನ್ನು ಎಲ್ಲರಿಗೂ ತಿಳಿಸಬೇಕು ಎಂದು ಆದೇಶ ನೀಡಿ, ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಯಿತು.
ಅನೈತಿಕ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಇಷ್ಟೊಂದು ಶಿಕ್ಷೆ ಇದ್ದರೂ ಏಕೆ ಈ ಕೆಟ್ಟ ಪದ್ಧತಿ ನಿಲ್ಲುವುದಿಲ್ಲ ಎಂದು ಸಮಾಲೋಚನೆ ನಡೆಸಿದೆ. ಮೊಟ್ಟಮೊದಲನೆಯದಾಗಿ ಬಡತನದಿಂದ ಪೀಡಿತರಾದ ಜನರಿಗೆ ಮಾನವ ಜೀವನದ ಮೌಲ್ಯ ಕೆಲವು ಸಾವಿರ ರುಪಾಯಿಗಳಿಗಿಂತ ಕಡಿಮೆ ಅನಿಸುತ್ತದೆ. ಅನೈತಿಕ ಮಾರಾಟ ಮಾಡುವವರು ಹೆಚ್ಚೆಚ್ಚು ಹಣ ಗಳಿಸುವ ದುರಾಸೆಯಲ್ಲಿ ಮಾನವೀಯತೆಯನ್ನು ಮರೆಯುತ್ತಾರೆ. ಮನೆಯವರು ಹಾಗೂ ಖರೀದಿ ಮಾಡುವವರು ಇಬ್ಬರೂ ರಾಜಿಯಾಗುವುದರಿಂದ ಕಾನೂನಿನ ಚೌಕಟ್ಟಿನಲ್ಲಿ ಈ ವಿಷಯ ಬರುವುದೇ ಇಲ್ಲ. ಒಂದು ವೇಳೆ ಬಂದರೂ ಅದನ್ನು ಮುಚ್ಚಿಹಾಕಲು ಶಕ್ತರಾಗಿರುತ್ತಾರೆ ದುಷ್ಕರ್ಮಿಗಳು. ಇಂಥಹ ಪರಿಸ್ಥಿತಿಯಲ್ಲಿ ಮುಗ್ಧ ಮಕ್ಕಳನ್ನು ರಕ್ಷಿಸುವುದು ಹೇಗೆ?  
ನಗರಗಳಲ್ಲಿ ಪಕ್ಕದ ಮನೆಯಲ್ಲಿ ಏನು ಆಗುತ್ತಿದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಹಳ್ಳಿಯಲ್ಲಿ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೂ ಜನ ಇನ್ನೊಂದು ಮನೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಮುಂದೆ ಬರುವುದಿಲ್ಲ. ಏಕೆಂದರೆ 'ನಿಮಗೇನಾಗಬೇಕು ನೀವು ನಮ್ಮ ಮಕ್ಕಳ ಪೋಷಣೆ ಮಾಡುತ್ತೀರಾ' ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಉತ್ತರ ಹಾಗೂ ಉಪಾಯವಿರುವುದಿಲ್ಲ. ಆಗ ಗ್ರಾಮ ಪಂಚಾಯತಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಊರಿನಲ್ಲಿ ಯಾವುದಾದರೂ ಮಕ್ಕಳು ಕಾಣೆಯಾದರೆ ಅವರು ತಕ್ಷಣ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ತಿಳಿಸಬೇಕು ಎಂದು ಒಂದು ಸುತ್ತೋಲೆ ಹೊರಡಿಸಲಾಯಿತು. ಇದಕ್ಕಾಗಿ ಒಂದು ಗ್ರಾಮ ಪಂಚಾಯತಿ ಜಾಗೃತಿ ಸಮಿತಿಯನ್ನೂ ಸಹ ರಚಿಸಲಾಯಿತು. ಈ ಸಮಿತಿಯಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯರೂ ಇರಬೇಕು. ಏಕೆಂದರೆ ಹೆಚ್ಚಾಗಿ ದುರ್ಬಲ ವರ್ಗಗಳ ಕುಟುಂಬದಲ್ಲಿ ಇಂಥ ಘಟನೆಗಳು ನಡೆಯುತ್ತವೆ.
ಇಲಾಖೆಗೆ ತಿಳಿಸಿದ ನಂತರ ಯಾವ ರೀತಿ ಆ ಮಕ್ಕಳನ್ನು ಹುಡುಕಬೇಕು ಎಂಬ ಪ್ರಶ್ನೆ ಬಂತು. ಪೊಲೀಸರಿಗೆ ತಿಳಿಸಿದರೂ ಸಹ ಅವರ ಹತ್ತಿರ ಬೇರೆ ಅಪರಾಧಗಳನ್ನು ನೋಡಲು ಬೇಕಾದಷ್ಟು ಒತ್ತಡ ಇರುತ್ತದೆ. ಆಗ ಬಡ ಜನರ ಸಮಸ್ಯೆಗಳಿಗೆ ಹೇಗೆ ಆದ್ಯತೆಯನ್ನು ನೀಡಲು ಸಾಧ್ಯ?
ಆಂಧ್ರ ಪ್ರದೇಶದ ಒಂದು ಸ್ವಯಂ ಸೇವಾ ಸಂಸ್ಥೆ ಈ ನಿಟ್ಟಿನಲ್ಲಿ ತುಂಬಾ ಉತ್ತಮ ಕೆಲಸ ಮಾಡಿದ್ದನ್ನು ನಾನು ದೆಹಲಿಯಲ್ಲಿ ಇರುವಾಗ ಗಮನಿಸಿದ್ದೆ. ಅದೇ ರೀತಿ ನಮ್ಮಲ್ಲಿ ಸಹಾ ಕೆಲವು ಸಂಸ್ಥೆಗಳು ಸಕ್ರಿಯವಾಗಿರುವುದರಿಂದ ಅವರ ಮೂಲಕ ಇಂಥ ಅಕ್ರಮವನ್ನು ತಡೆಗಟ್ಟುವ ಮತ್ತು ನಿವಾರಿಸುವ ಕ್ರಮ ಜರಗಿಸಲು ನಿಶ್ಚಯಿಸಿದೆ. ಆಗ ನನ್ನ ಕರೆಗೆ ಓಗೊಟ್ಟು ಡಾನ್ ಬಾಸ್ಕೋ ಸಂಸ್ಥೆ, ಮಕ್ಕಳನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದೆ ಬಂದಿತು. ಎಲ್ಲಿಯಾದರೂ ಒಂದು ಮಗು ಕಾಣೆಯಾದಾಗ, ಮಕ್ಕಳ ಸಹಾಯವಾಣಿ 1098ಕ್ಕೆ ಆಯಾ ಗ್ರಾಮ ಪಂಚಾಯತಿ ಸಮಿತಿಯ ಸದಸ್ಯರು ಅಥವಾ ಸ್ವಸಹಾಯ ಗುಂಪುಗಳು ಮಾಹಿತಿ ನೀಡಬೇಕು. ಸಹಾಯವಾಣಿಯಿಂದ ಅಂಥ ಮಕ್ಕಳ ಮಾಹಿತಿಯನ್ನು ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು. ಮಕ್ಕಳನ್ನು ಪತ್ತೆ ಹಚ್ಚುವ ತಂತ್ರಾಂಶದಿಂದ ಆಯಾ ಮಕ್ಕಳ ಭಾವಚಿತ್ರ ಹಾಗೂ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಲಾಗುವುದು ಹಾಗೂ ಅಂತರ್ಜಾಲದ ಮೂಲಕ ರಾಷ್ಟ್ರಾದ್ಯಂತ ಸುಮಾರು ನೂರೈವತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ವಿತರಿಸಲಾಗುವುದು. ಇವರುಗಳು ಸಂಬಂಧಪಟ್ಟ ಮಗುವನ್ನು ಹುಡುಕಲು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿಗಾ ವಹಿಸುವುದು. ಜೊತೆಗೆ ಅವರು ನಡೆಸುತ್ತಿದ್ದ ಅನಾಥ ಮಕ್ಕಳ ಅಥವಾ ಮಹಿಳಾ ನಿಲಯಗಳಲ್ಲಿ ಸಹ ವಿಚಾರಿಸುವುದು. ಎಲ್ಲಿಯಾದರೂ ಇದರ ಬಗ್ಗೆ ಮಾಹಿತಿ ಸಿಕ್ಕಿದರೆ ಅದನ್ನು ಅಂತರ್ಜಾಲದ ಮೂಲಕ ಸಮಯ ಕಳೆಯದೆ ಹಂಚಿಕೊಳ್ಳುವುದು. ಮಗುವನ್ನು ಪೊಲೀಸರ ಸಹಾಯದಿಂದ ರಕ್ಷಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಸಂಸ್ಥೆಯವರೇ ತೆಗೆದುಕೊಂಡರು.
ಬಹಳಷ್ಟು ಸಲ ಚಲನಚಿತ್ರಗಳಲ್ಲಿ ತೋರಿಸುವ ಹಾಗೆ ದುಷ್ಕರ್ಮಿಗಳ ಬಲೆಯಿಂದ ಹೆಣ್ಣು ಮಕ್ಕಳನ್ನು ಪಾರು ಮಾಡುವ ಬಹಳ ಅಪಾಯಕಾರಿ ಕಾರ್ಯಾಚರಣೆಯನ್ನು ಸಹ ನಡೆಸಲಾಯಿತು. ಕೆಲವೊಮ್ಮೆ ಪೊಲೀಸರಿಗೆ ತಿಳಿಸದೆ ಇಂಥ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಅನಂತರ ಆಯಾ ಮಕ್ಕಳ ಕುಟುಂಬಗಳನ್ನು ಸಂಪರ್ಕಿಸಿ, ಮನ ಒಲಿಸುವುದು ಇನ್ನಷ್ಟು ಕಷ್ಟದ ಕೆಲಸ. ಕೆಲವೊಮ್ಮೆ ಮನೆಯವರು ಮಗುವನ್ನು ವಾಪಸ್ಸು ತೆಗೆದುಕೊಳ್ಳಲು ನಿರಾಕರಿಸಿದರು. ಆಗ ಅವರನ್ನು ನಿರ್ಗತಿಕ ಮಕ್ಕಳ ಕುಟೀರದಲ್ಲಿ ಇಡಬೇಕಾಗಿತ್ತು. ಇದನ್ನೂ ಸಹ ಸಂಘ ಸಂಸ್ಥೆಗಳು ತುಂಬಾ ಚೆನ್ನಾಗಿ ನಿಭಾಯಿಸಿದವು. ಸರ್ಕಾರದ ವತಿಯಿಂದ ಸಂಸ್ಥೆಗಳಿಗೆ ಮಕ್ಕಳ ಸಹಾಯವಾಣಿ ಹಾಗೂ ನಿಲಯಗಳನ್ನು ನಡೆಸಲು ಸಹಾಯಧನವನ್ನು ನೀಡಲಾಗುತ್ತದೆ. ಸಹಾಯಧನಕ್ಕಿಂತ ಸಹಾಯ ನೀಡುವುದು ಮುಖ್ಯವಾಗಿದೆ. ನಾವು ಮೊದಲು ವೈಯಕ್ತಿಕವಾಗಿ ಸಹಾಯ ಮಾಡಬೇಕು ನಂತರ ಬೇರೆಯವರ ಸಹಾಯಕ್ಕೆ ಆಶಿಸಬೇಕು. ಆಗ ತಾನಾಗಿ ಸಮಾಜದ ಕೆಡಕುಗಳು ದೂರವಾಗುತ್ತವೆ.   
ಇದೇ ಮಾದರಿಯಲ್ಲಿ ನಾವು ಪೊಲೀಸ್ ಇಲಾಖೆ, ಬೆಂಗಳೂರು ಮಹಾ ನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜೊತೆ ಸೇರಿ ಬೆಂಗಳೂರಿನಲ್ಲಿ ವಾಹನ ಸಂಚಾರದ ಸಿಗ್ನಲ್ಲುಗಳಲ್ಲಿ ಇರುವ ಭಿಕ್ಷೆ ಬೇಡುವ ಮಕ್ಕಳನ್ನು ರಕ್ಷಿಸಲು ಪ್ರಾರಂಭಿಸಿದೆವು. ಬೇರೆ ರಾಜ್ಯಗಳಿಂದ ಬಂದಿರುವ ಸುಮಾರು ಮಕ್ಕಳನ್ನು ವಾಪಸ್ಸು ಕಳುಹಿಸಲಾಯಿತು. ಇದು ಬಹಳ ದೊಡ್ಡ ಪ್ರಮಾಣದ ಜಾಲ. ಅದರ ವಿರುದ್ಧದ ಹೋರಾಟವನ್ನು ಎಲ್ಲರ ಸಹಾಯದೊಂದಿಗೆ ನಡೆಸಿದರೆ ಮಾತ್ರ ಈ ಸಮಸ್ಯೆಯ ನಿರ್ಮೂಲನೆಯಾಗಬಲ್ಲದು.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement