ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಎಲ್ಲಿ ಹೋಯಿತು ಸಾಮಾಜಿಕ ಕಳಕಳಿ?

Vishwanath S
Updated On : 19 Aug 2013, 1:26 am

ದಿನಾಂಕ 5.8.13ರಂದು ಕನ್ನಡಪ್ರಭದಲ್ಲಿ, 'ಹಾವೇರಿ ರೈಲ್ವೇ ನಿಲ್ದಾಣದಲ್ಲಿ ಅವಸರದಲ್ಲಿ ಇಳಿದುಕೊಳ್ಳುವಾಗ ಒಬ್ಬ ಪ್ರಯಾಣಿಕ ಕೆಳಗೆ ಬಿದ್ದು, ಗಾಲಿಗೆ ಸಿಲುಕಿ ಕೈಕಾಲು ಕಳೆದುಕೊಂಡ' ದುರಂತ ಸುದ್ದಿ ಪ್ರಕಟವಾಗಿದೆ. ಅದಕ್ಕಿಂತ ಆಘಾತಕಾರಿ ಸುದ್ದಿ ಇದು- ಆ ವ್ಯಕ್ತಿ ನೋವಿನಿಂದ ನರಳುತ್ತಿದ್ದರೂ ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರೇ ಹೊರತು ಯಾರೂ ಅವನ ಸಹಾಯಕ್ಕೆ ಮುಂದಾಗಲಿಲ್ಲ. ಹಳಿಯ ಪಕ್ಕದಲ್ಲಿ ಮೂರು ತಾಸು ಅವನು ನರಳುತ್ತಿದ್ದರೂ ಅಲ್ಲಿದ್ದ ಜನ ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತುದು ಪತ್ರಿಕೆಯಲ್ಲಿ ಮಾತ್ರವಲ್ಲ, ಹಲವಾರು ದೃಶ್ಯಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಆ ವ್ಯಕ್ತಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದರೂ ಜನ ನಿಂತುಕೊಂಡೇ ನೋಡುತ್ತಿದ್ದರು. ದೃಶ್ಯ ಮಾಧ್ಯಮದವರು ಅಲ್ಲಿಗೆ ಬರುವವರೆಗೆ ಜನ ಏನು ಮಾಡುತ್ತಿದ್ದರು? ಅವನ ಸಹಾಯಕ್ಕೆ ಹೋಗಬೇಡವೇ? ಅವನನ್ನು ಎತ್ತಿ ನಿಲ್ದಾಣದಲ್ಲಿದ್ದ ಯಾವುದಾದರೂ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಿತ್ತು. ಪೊಲೀಸರು ಬರುವುದು ತಡವಾಗಿದ್ದರೆ ಅಕ್ಷಮ್ಯ; ಅದಕ್ಕಿಂತಲೂ ಅಕ್ಷಮ್ಯ, ಜನ ನಿಂತುಕೊಂಡು ಎಲ್ಲವನ್ನೂ ಮೌನವಾಗಿ ನೋಡುತ್ತಿದ್ದುದು. ಆ ವಿಷಯದಲ್ಲಿ ಮಾಧ್ಯಮದವರಾದರೂ ಅವನನ್ನು ಅಲ್ಲಿಂದ ಕೊಂಡೊಯ್ಯಲು ಸಹಾಯ ಮಾಡಬಹುದಿತ್ತಲ್ಲವೇ?
ಇಂತಹ ಘಟನೆಗಳನ್ನು ನಾನು ಸ್ವತಃ ಅನುಭವಿಸಿದ್ದೇನೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪಕ್ಕದ ವೃತ್ತದಲ್ಲಿ ಎಡಗಡೆ ಹೋಗುತ್ತಿದ್ದ ನಾನಿದ್ದ ಆಟೋಗೆ ಒಂದು ಕಾರು ಬಡಿದು ವೇಗವಾಗಿ ಮುಂದೆ ಹೋಯಿತು. ತಲೆಕೆಳಗಾಗಿ ಬಿದ್ದಿದ್ದ ಆಟೋದಲ್ಲಿ ಚಾಲಕ ಮತ್ತು ನಾನು ಬಿದ್ದಿದ್ದರೂ ಯಾವ ವಾಹನದವರೂ, ಜನಗರೂ ಸಹಾಯಕ್ಕೆ ಬರಲಿಲ್ಲ. ಚಾಲಕನೇ ಹೇಗೋ ಹೊರಬಂದು ನನ್ನನ್ನು ಹಿಡಿದು ಎತ್ತಿ ನಿಲ್ಲಿಸಿ ಆಟೋವನ್ನು ಸರಿಯಾಗಿ ನಿಲ್ಲಿಸಿದ. ನಾನು ಅದೇ ಆಟೋದಲ್ಲಿ ನನ್ನ ಮನೆ ಹತ್ತಿರದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆ. ಇದು 'ಆಧುನಿಕ ನಾಗರಿಕತೆ'!
ಹಲವು ಬಾರಿ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದ್ದೇನೆ. ಅವಘಡಗಳು ನಡೆದಾಗ ಅಸಡ್ಡೆ ವಹಿಸದೆ ಕೂಡಲೇ ಕಾರ್ಯತತ್ಪರರಾಗಬೇಕು. ಮೂವತ್ತು ವರ್ಷಗಳ  ಹಿಂದೆ ಮೈಸೂರಿನಲ್ಲಿ ಕುಕ್ಕರ ಹಳ್ಳಿ ಕೆರೆ ಪಕ್ಕದಲ್ಲಿ ನಡೆದು ಹೋಗುತ್ತಿರುವಾಗ ಹಿಂದಿನಿಂದ ಬಂದ ಕಾರು ನನ್ನ ಬಲಗೈಗೆ ತರಚಿಕೊಂಡು, ವೇಗವಾಗಿ ಸಾಗಿ ಮುಂದೆ ಹೋಗುತ್ತಿದ್ದವರಲ್ಲಿ ಒಬ್ಬನಿಗೆ ಢಿಕ್ಕಿಹೊಡೆದು ಹೋಯಿತು. ಆಗ ನಾನು ಹುಣಸೂರು ಮೈಸೂರು ರಸ್ತೆಗೆ ಅಕ್ಷರಶಃ ಓಡಿಹೋಗಿ ರಸ್ತೆ ಮಧ್ಯೆ ಎರಡೂ ಕೈಗಳನ್ನು ಅಗಲವಾಗಿ ಚಾಚಿಕೊಂಡು ನಿಂತುಕೊಂಡೆ. ಎದರಿಗೆ ಬಂದು ನಿಂತ ಕಾರಿನವರು ತಕ್ಷಣ ಘಟನೆಗೆ ಸ್ಪಂದಿಸಿ, ಅದೇ ಕಾರಿನಲ್ಲಿ ಕೆಳಗೆ ಬಿದ್ದವನನ್ನು ಕೂರಿಸಿ ಜೊತೆಯಲ್ಲಿದ್ದವರ ಸಮೇತ ಸಮೀಪದ ಆಸ್ಪತ್ರೆಗೆ ಕಳುಹಿಸಿಕೊಟ್ಟೆ.
ಹಳ್ಳಿಯ ಜನ ಯಾರದ್ದಾದರೂ ಮನೆಗೋ, ಬವಣೆಗೋ ಬೆಂಕಿ ಹತ್ತಿದರೆ ತಾವಾಗೇ ಓಡಿ ಬಂದು ಬಾವಿ ಕೆರೆಯಿಂದ ನೀರು ತಂದು ಬೆಂಕಿ ನಂದಿಸುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಊರಿನ ಜನ ಮುಂದಾಗುತ್ತಿದ್ದರು. ಈಗ ಸ್ವಾರ್ಥ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಸಾಮಾಜಿಕ ಕಳಕಳಿ ಸಂಪೂರ್ಣವಾಗಿ ಮಾಯವಾಗಿ ಹೋಗಿದೆಯೇ?

- ಡಾ.ಎಂ. ಚಿದಾನಂದಮೂರ್ತಿ   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement