ಸೋನಿಯಾ ಅವ್ರೇ ಟೈಮ್ಗೆ ಬರ್ತಾರೆ..!
ಶನಿವಾರ ಮಂಗಳೂರಿನ ಪಿಲಿಕುಳದಲ್ಲಿ ಕಾಂಗ್ರೆಸ್ ಸೇವಾದಳದ ಅಭ್ಯಾಸ ವರ್ಗದ...
ಶನಿವಾರ ಮಂಗಳೂರಿನ ಪಿಲಿಕುಳದಲ್ಲಿ ಕಾಂಗ್ರೆಸ್ ಸೇವಾದಳದ ಅಭ್ಯಾಸ ವರ್ಗದ ಕಾರ್ಯಕ್ರಮಕ್ಕೆ ಜನಾರ್ದನ ಪೂಜಾರಿ ಆಗಮಿಸಿದಾಗ ಅಲ್ಲಿ ಒಬ್ಬನೇ ಒಬ್ಬ ಇರಲಿಲ್ಲ. ನಂತರ ಪೂಜಾರಿ ಉದ್ಘಾಟನೆಗಾಗಿ ದೀಪ ಹೊತ್ತಿಸಿದಾಗ ಅದು ಆರಿಹೋಯಿತು. ಚರಕದ ನೂಲು ತೆಗೆಯಲು ಹೊರಟಾಗ ಗಾಲಿಯೇ ತಿರುಗಲಿಲ್ಲ. ಭಾಷಣ ಮಾಡುವಾಗ ವಿಳಂಬವಾಗಿ ಬಂದವರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, ಶಿಸ್ತುಪಾಲನೆ ಮುಖ್ಯ. ಕಾಂಗ್ರೆಸ್ ಸೇವಾದಳದವರು ಸಮಯವನ್ನ ಸರಿಯಾಗಿ ಪಾಲಿಸುತ್ತಾರೆ ಎಂದಾಗ ಜಿಲ್ಲಾ ಮುಖ್ಯಸಂಘಟಕರ ಮೊಬೈಲ್ ರಿಂಗಾಯಿತು. ಇದರಿಂದ ವಿಚಲಿತರಾದ ಪೂಜಾರಿ ಕೆಲಕಾಲ ಸುಮ್ಮನೆ ನಿಂತರು. ಭಾಷಣ ಮುಂದುವರಿಸಿ, 'ಸೇವಾದಳದ ಕಾರ್ಯಕರ್ತರು ಊರಲ್ಲಿ ಯಾರು ಸತ್ತರೂ ಅಲ್ಲಿಗೆ ಹೋಗಬೇಕು. ಹೆಣದ ಅಂತ್ಯಸಂಸ್ಕಾರ ಆಗುವವರೆಗೆ ಅಲ್ಲಿ ಇರಬೇಕು. ವಿಮಾನ ದುರಂತವಾದಾಗ ನಾನು ಬೆಳಗ್ಗೆಯಿಂದ ಸಂಜೆವರೆಗೆ ನೂರು ಹೆಣ ಹೊತ್ತಿದ್ದೇನೆ' ಎಂದು ಹೇಳುತ್ತಿರುವಂತೆಯೇ ವೇದಿಕೆಯಲ್ಲಿದ್ದ ಜಿಲ್ಲಾ ಮುಖ್ಯ ಸಂಘಟಕರು ಹೊರನಡೆದು ವಿಳಂಬವಾಗಿ ಬಂದ ಗಣ್ಯರನ್ನು ಸ್ವಾಗತಿಸಿದರು. ಇದು ಪೂಜಾರಿಯವರನ್ನು ಮತ್ತಷ್ಟು ಕೆರಳುವಂತೆ ಮಾಡಿತು. ವಾಪಸ್ ಬಂದ ಮುಖ್ಯ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, 'ಏನ್ರೀ... ಸ್ವಾಗತ ಮಾಡ್ಲಿಕ್ಕೆ ಹೋಗಿದ್ದಾ... ಗಣ್ಯಾತಿಗಣ್ಯ ಸೋನಿಯಾ ಗಾಂಧಿಯೂ ಸಮಯಕ್ಕೆ ಸರಿಯಾಗಿ ಬರುತ್ತಾರೆ. ನೀವ್ಯಾಕ್ರೀ ಹೋಗಿದ್ದು' ಎಂದು ಆವಾಜ್ ಹಾಕಿದರು.
ಉಪ ಚುನಾವಣೆ ವೇಳೆಗೆ ಮೈತ್ರಿ ಸಕ್ರಮ!
ಬೆಂಗಳೂರು ಸೇರಿದಂತೆ ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ಅಂದರೆ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳ ಸಕ್ರಮಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ರೂಪಿಸಿರುವ ಅಕ್ರಮ- ಸಕ್ರಮ ವಿಧೇಯಕಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಜಾಗಗಳಲ್ಲಿ ಬಡವರು ಕಟ್ಟಿರುವ ಅಕ್ರಮ ಮನೆಗಳ ಸಕ್ರಮದ ವಿಷಯವೂ ಬಗೆಹರಿದಿಲ್ಲ. ಆದರೆ, ಮೈಸೂರು ಸಂಸದ ಎಚ್. ವಿಶ್ವನಾಥ್ ಅವರ ಪ್ರಕಾರ, ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಒಪ್ಪಂದ 20-20 ಸರ್ಕಾರದಲ್ಲಿ ಅಕ್ರಮವಾಗಿತ್ತಂತೆ. ಈಗ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆ ವೇಳೆಗೆ ಸಕ್ರಮವಾಗಿದೆಯಂತೆ!
ನೆಕ್ಟ್ಸ್ ಕ್ವಶ್ಚನ್... ಇದು ಪೂಜಾರಿ ಮಂತ್ರ
ನೆಕ್ಸ್ಟ್ ಕ್ವಶ್ಚನ್, ನೆಕ್ಸ್ಟ್ ಕ್ವಶ್ಚನ್... ಇದು ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರ ಮಂತ್ರ. ಪ್ರತಿ ಸುದ್ದಿಗೋಷ್ಠಿಯಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಪತ್ರಕರ್ತರನ್ನು ಲೇವಡಿ ಮಾಡುವ ಪೂಜಾರಿ, ಪ್ರಶ್ನೆ ಕೇಳಿದ ಪತ್ರಕರ್ತರಿಗೆ 'ನಾನು ಹೇಳಿದ ಉತ್ತರ ನಾಳೆ ಬರುತ್ತದಲ್ವಾ ಅಥವಾ ಒಂದೇ ಲೈನ್ ಬರೋದಾ' ಎಂದೆಲ್ಲ ಟೀಕಿಸುತ್ತಿದ್ದರು. 'ನಾನು ಹೇಳಿದ್ದನ್ನು ಸರಿಯಾಗಿ ಬರೆಯದಿದ್ದರೆ ಸಂಪಾದಕರಿಗೆ ದೂರು ಕೊಡುತ್ತೇನೆ' ಎಂದೂ ಗದರುತ್ತಿದ್ದರು. ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಪೂಜಾರಿ ವರ್ತನೆ ಭಿನ್ನವಾಗಿತ್ತು. ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ನೆಕ್ಸ್ಟ್ ಕ್ವಶ್ಚನ್ ಎಂದರು. ಮತ್ತೊಬ್ಬ ಪತ್ರಕರ್ತರು ಇನ್ನೊಂದು ಪ್ರಶ್ನೆ ಕೇಳಿದಾಗ ಅದಕ್ಕೂ ನೆಕ್ಸ್ಟ್ ಕ್ವಶ್ಚನ್... ಮೂಡ್ಆಫ್ ಆಗಿದ್ದ ಪೂಜಾರಿ ನೆಕ್ಸ್ಟ್ ಕ್ವಶ್ಚನ್ ಎಂಬ ಮಂತ್ರವನ್ನು ಜಪಿಸುತ್ತಲ್ಲೇ ಇದ್ದರು. ಇದರಿಂದ ಬೇಸತ್ತ ಪತ್ರಕರ್ತರೊಬ್ಬರು ಗೋಷ್ಠಿಯನ್ನೇ ಬಹಿಷ್ಕರಿಸಿ ಹೊರನಡೆದ ಘಟನೆಯೂ ನಡೆಯಿತು.
ನಾನು ಸಾಮಾನ್ಯ ಕಾರ್ಯಕರ್ತ ಹೇಗೆ ಆಗಲಿ?
ಸುದೀರ್ಘ ಅವಧಿಗೆ ಸರ್ಕಾರಿ ಸೇವೆಯಲ್ಲಿದ್ದು, ಸಂಬಳ-ಸೌಲಭ್ಯಗಳನ್ನು ಯಥೇಚ್ಛವಾಗಿ ಸವಿದು ನಿವೃತ್ತಿಯಾಗುತ್ತಿದ್ದಂತೆ ರಾಜಕೀಯ ಸೇರುವ ಅಧಿಕಾರಿಗಳಿಗೆ ಆಯಾ ಪಕ್ಷಗಳು ಯಾವ ಸ್ಥಾನ ನೀಡಬೇಕು? ಇಂಥದ್ದೊಂದು ಪ್ರಶ್ನೆ ಮೊಳೆಯುವಂತೆ ಮಾಡಿದವರು ನಿವೃತ್ತ ಡಿಜಿಪಿ ಶಂಕರ ಬಿದರಿ.
ಆರು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಸೇರಿ, ಈಗಷ್ಟೇ ಕಾಂಗ್ರೆಸ್ ತೊರೆದು ಸೈಕಲ್ (ಸಮಾಜವಾದಿ ಪಾರ್ಟಿ) ಏರಿರುವ ಬಿದರಿ ಅವರಿಗೆ ಕಾಂಗ್ರೆಸಿನ ಬಗ್ಗೆ ಕಡು ಕೋಪ. ಬಾಗಲಕೋಟೆಗೆ ಬಂದಿದ್ದ ಬಿದರಿ ಅವರನ್ನು ಪತ್ರಕರ್ತರು ನೀವೇಕೆ ಕಾಂಗ್ರೆಸ್ ತೊರೆದಿರಿ ಎಂದು ಪ್ರಶ್ನಿಸಿದ್ದಕ್ಕೆ, ಅಲ್ಲಿ ಸೂಕ್ತ ಅವಕಾಶ ಸಿಗಲಿಲ್ಲ. ಸ್ಥಾನ-ಮಾನ ಕೊಡಲಿಲ್ಲ. ನಿರುದ್ಯೋಗಿಯಾಗಿ ಕೂಡ್ರಲಾರದೇ ಹೊರ ಬಂದೆ ಎಂದು ಅಸಮಾಧಾನ ತೋಡಿಕೊಂಡರು. ಆದರೆ, ಪತ್ರಕರ್ತರು ಬಿಡಬೇಕಲ್ಲ. ಮತ್ತೆ ಪ್ರಶ್ನೆ ಹಾಕಿ, ಒಂದು ರಾಜಕೀಯ ಪಕ್ಷ ಎಂದ ಮೇಲೆ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಒಂದೊಂದೇ ಹಂತ ಏರುತ್ತ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಇಷ್ಟು ಬೇಗ ದೊಡ್ಡ ಸ್ಥಾನ ಕೊಡಿ ಎಂದರೆ ಹೇಗೆ? ಎಂದು ಕಿಚಾಯಿಸಿದರು. ಬಿದರಿ ಸಾಹೇಬರ ಕೋಪ ನೆತ್ತಿಗೇರಿ, 'ಏನ್ರೀ ನಾನು ಡಿಜಿಪಿಯಾಗಿ ಸೇವೆ ಸಲ್ಲಿಸಿದವ. ನಾನು ಸಾಮಾನ್ಯ ಕಾರ್ಯಕರ್ತ ಹೇಗೆ ಆಗಲಿ? ಒಬ್ಬ ಪತ್ರಕರ್ತ ಸಂಪಾದಕನ ಸ್ಥಾನಕ್ಕೆ ಏರಿದಾಗ, ಬೇರೊಂದು ಪತ್ರಿಕೆಗೆ ಹೋದಾಗ ಸಂಪಾದಕ ಆಗುತ್ತಾನೆಯೇ ವಿನಾ ಸಾಮಾನ್ಯ ರಿಪೋರ್ಟ್ರ್ ಆಗಲ್ಲ. ನಾನೂ ಹಾಗೆಯೇ' ಎಂದಾಗ ನೆರೆದಿದ್ದ ಪತ್ರಕರ್ತರು ಕಂಗಾಲು.
ಮತದಾರರನ್ನು ಒಲಿಸಿಕೊಳ್ಳಲು ಸತ್ಯಾಗ್ರಹ!?
ಚುನಾವಣೆಗೆ ಸ್ಪರ್ಧಿಸಿದವರು ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಾರೆ. ಬಹುತೇಕ ಮಂದಿ ಒಂದೊಂದು ಮತಕ್ಕಾಗಿ ಕಾಲಿಗೆ ಬೀಳಲು ಸಿದ್ಧರಿರುತ್ತಾರೆ. ಆದರೆ, ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಅಯೂಬ್ಖಾನ್ ಎಂಬವರು ಸುದ್ದಿಗೋಷ್ಠಿ ನಡೆಸಿ, ಒಟ್ಟು ಏಳು ಸಾವಿರ ಮತದಾರರಲ್ಲಿ 5,300ಕ್ಕು ಹೆಚ್ಚು ಮಂದಿ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಈಗಾಗಲೇ ಮತ ಎಣಿಕೆಯ ವಿವರ ನೀಡಿದ್ದಾರೆ. ಇದು ಇಷ್ಟಕ್ಕೆ ನಿಂತಿಲ್ಲ. ಅವರ ಕೆಲವು ಬೆಂಬಲಿಗರು ಮತ್ತೊಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ನಾಯಕನನ್ನು ಬೆಂಬಲಿಸುವಂತೆ ಮತದಾರರ ಮನವೊಲಿಸಲು ಗಾಂಧಿ ಚೌಕದಲ್ಲಿ ಸತ್ಯಾಗ್ರಹ ನಡೆಸುವುದಾಗಿ ಹೇಳಿ ನಗೆಪಾಟಿಲಿಗೀಡಾದರು. ಇದೇನಿದು ಹೊಸ ವರಸೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಅವರು, 'ನಮ್ ನಾಯಕ್ರು ಹೇಳಿದ್ರು ಅಂತಾ ಪ್ರೆಸ್ಮೀಟ್ ಕರೆದಿದ್ದೇವೆ. ನಮ್ಗೇನೂ ಗೊತ್ತಿಲ್ಲ' ಎಂದು ಸದ್ದಿಲ್ಲದೇ ಜಾಗ ಖಾಲಿ ಮಾಡಿದರು. ಎಲ್ಲಿಗೆ ಬಂತು ಪ್ರಜಾಪ್ರಭುತ್ವ ನೋಡಿ.
- ನಂಬಿರಾಜ್