ದಲ್ಲಾಳಿ ಸರ್ಕಾರದ ಮೇಲೆ ದಲಾಲ್ ಸಾಮ್ರಾಜ್ಯಕ್ಕಿಲ್ಲ ನಂಬಿಕೆ!
ಯುಪಿಎ ಸರ್ಕಾರದ ವಿಶ್ವಾಸಾರ್ಹತೆ ಅದೆಂಥ ಪಾತಾಳವನ್ನು ಕಂಡಿದೆ ಎಂದರೆ ಅದು ತಾನೇನನ್ನು ಸಾಧಿಸಬೇಕೆಂದಿದೆಯೋ ಅದಕ್ಕೆ ಅತ್ಯಂತ ವ್ಯತಿರಿಕ್ತ ಫಲಿತಾಂಶವನ್ನೇ ಸಾಧಿಸುತ್ತಿದೆ.
ಅದು ಹಲವು ವಿಭಾಗಗಳನ್ನು ವಿದೇಶಿ ನೇರ ಬಂಡವಾಳ ಹೂಡಿಕೆಗೆ ತೆರೆದಿರಿಸಿತು. ಆದರೆ ಯಾವ ಲಾಭವೂ ಆಗಲಿಲ್ಲ. ಬಂಗಾರವು ಕೆಲಸಕ್ಕೆ ಬಾರದ ಲೋಹ, ಅದನ್ನು ಕೊಂಡೇನು ಮಾಡುವಿರಿ ಎಂದು ನಮಗೆ ತಿಳಿಹೇಳುತ್ತಾ ಅದು ತನ್ನ ಸಂಕಷ್ಟವನ್ನು ಮುಚ್ಚಿಕೊಂಡಿತು. ಹತ್ತು ಗ್ರಾಂ ಚಿನ್ನಕ್ಕೆ 31 ಸಾವಿರದವರೆಗೆ ಬೆಲೆ ಜಿಗಿದು ನಿಂತಿತು. ಆಗ ಹೂಡಿಕೆದಾರರಿಗೆ ಚಿನ್ನಕ್ಕೆ ನಿಜವಾದ ಮೌಲ್ಯವೊಂದಿದೆ ಎಂದೂ ಈ ನಿಟ್ಟಿನಲ್ಲಿ ಸರ್ಕಾರ ಅವಿವೇಕದ ಮಾತುಗಳನ್ನಾಡುತ್ತಿದೆ ಎಂದೂ ಮನದಟ್ಟಾಗಿಹೋಯಿತು. ಹೊರಗಿನಿಂದ ಜಮಾ ಮಾಡುವವರಿಗೆ ಹೊಸ ನಿಯಂತ್ರಣಗಳನ್ನು ಆರ್ಬಿಐ ವಿಧಿಸಿತಾದರೂ ರುಪಾಯಿಯ ಮೌಲ್ಯ ಕುಸಿಯುತ್ತಲೇ ಸಾಗಿತು. ಸ್ವಾತಂತ್ರ್ಯದಿನದ ಪ್ರಯುಕ್ತ ಮಾರುಕಟ್ಟೆ ಮುಚ್ಚಿದ್ದರಿಂದ ಆಗ ಸೆನ್ಸೆಕ್ಸ್ 770 ಪಾಯಿಂಟ್ಗಳಷ್ಟು ಕುಸಿತ ಕಂಡಿತು ಎಂದು ಚಿದಂಬರಂ ಅವರು ಕಾರಣ ಕೊಟ್ಟರು. ಆದರೆ ಸೋಮವಾರದಂದು ಇನ್ನೂ 290 ಪಾಯಿಂಟ್ಗಳಿಗೆ ಕುಸಿದ ಸೆನ್ಸೆಕ್ಸ್, ಚಿದು ತರ್ಕದಲ್ಲಿ ಯಾವುದೇ ಹುರುಳಿಲ್ಲದ್ದನ್ನು ಸಾಬೀತು ಮಾಡಿತು.
ಬಡ್ಡಿದರ ಕಡಿಮೆ ಇರುವಂತೆ ನೋಡಿಕೊಳ್ಳುವ ಆಶಯ ಹೊಂದಿರುವುದಾಗಿ ಸರ್ಕಾರ ಹೇಳುತ್ತದೆ. ಆದರೆ ಅಲ್ಪಾವಧಿಯ ಲಿಕ್ವಿಡಿಟಿಯನ್ನು ಹಿಂಡಿ ರುಪಾಯಿಯಲ್ಲಿ ಸ್ಥಿರತೆ ತರುವ ಪ್ರಯತ್ನಕ್ಕೆ ಕೈ ಹಾಕುತ್ತದೆ. ಇದರ ಪರಿಣಾಮವೆಂದರೆ ಬಡ್ಡಿದರವು ತೀವ್ರವಾಗಿ ಏರಿ ಬೆಳವಣಿಗೆಯನ್ನು ಕೊಲ್ಲುವ ನಿಶ್ಚಿತ ಮಾರ್ಗ ತೆರೆದುಕೊಂಡಿದೆ. ಹಣಕಾಸು ಮಾರುಕಟ್ಟೆ ಸಾಧನಗಳು ಶೇ. 11ರಷ್ಟು ಗಳಿಸುತ್ತಿವೆ. ಐದು ಮತ್ತು ಹತ್ತು ವರ್ಷಗಳ ಬಾಂಡ್ಗಳು ಕ್ರಮವಾಗಿ 9.5ರಿಂದ 9.25 ಶೇಕಡದಷ್ಟು ಗಳಿಸುತ್ತಿವೆ. ಈ ದರವು ಸ್ಟೇಟ್ಬ್ಯಾಂಕ್ ತನ್ನ ಠೇವಣಿದಾರರಿಗೆ ನೀಡುವುದಕ್ಕಿಂತ ಹೆಚ್ಚಿನದ್ದು. ಸಾಲದ ದರ ಹೆಚ್ಚಾಗುತ್ತಿದ್ದರೂ ಬ್ಯಾಂಕ್ಗಳು ತಮ್ಮಲ್ಲಿ ಇಟ್ಟುಕೊಂಡಿರುವ ಬಾಂಡ್ಗಳ ಮೌಲ್ಯ ಕುಸಿಯುತ್ತಿದೆ. ಕೆಲ ಕೆಟ್ಟ ಸಾಲಗಳಿಂದ ಬ್ಯಾಂಕ್ಗಳು ಏನೆಲ್ಲ ಕಳೆದುಕೊಂಡಿವೆಯೋ ಅದರ ಜತೆಯಲ್ಲೇ ಈ ಮೇಲಿನ ಪ್ರಕರಣದ ನಷ್ಟವನ್ನೂ ಅವು ಅನುಭವಿಸುವಂತಾಗಿದೆ. ಸರ್ಕಾರವು ಹಣವಿಲ್ಲ ಎನ್ನುತ್ತಿರುವಾಗಲೇ ಈ ಬ್ಯಾಂಕ್ಗಳು ಅವುಗಳಿಂದ ಇನ್ನಷ್ಟು ಬಂಡವಾಳವನ್ನು ನಿರೀಕ್ಷಿಸುವ ಸ್ಥಿತಿ ಇದೀಗ ಎದುರಾಗಿದೆ.
ಇವೆಲ್ಲದರ ಸಂದೇಶವನ್ನು ಗ್ರಹಿಸುವುದಕ್ಕೆ ಯುಪಿಎಗೆ ಇನ್ನೂ ಸಾಧ್ಯವಾಗಿಲ್ಲ ಎಂದಾದರೆ, ಆ ಸಂದೇಶ ಸಾರ ಇಷ್ಟೆ: ಮಾರುಕಟ್ಟೆ ಎಂಬುದು ಈ ಸರ್ಕಾರವನ್ನು ನಂಬುತ್ತಿಲ್ಲ. ಮಾರುಕಟ್ಟೆ ಬಗ್ಗೆ ಸರ್ಕಾರ ಮಾತನಾಡಿದಷ್ಟೂ, ಅದು 'ಸುಧಾರಣೆ'ಗಳ ಮಾತನ್ನು ಆಡಿದಂತೆಲ್ಲ ಮಾರುಕಟ್ಟೆಯ ಅಪನಂಬಿಕೆ ಹೆಚ್ಚುತ್ತಲೇ ಸಾಗಿದೆ. ಏಕೆಂದರೆ ಚುನಾವಣಾ ವರ್ಷವಾಗಿರುವ ಈ ಹಂತದಲ್ಲಿ- ಆಹಾರ ಭದ್ರತೆ ಮತ್ತು ಕಡಿಮೆ ಬೆಲೆ ಇಂಧನ- ಮುಂದಿನ ಸರ್ಕಾರ ಬರುವವರೆಗೂ ಜಾರಿಯಲ್ಲಿರುತ್ತವೆ ಎಂಬುದು ಅದಕ್ಕೆ ಗೊತ್ತು.
ನೈಜ ಅರ್ಥ ವ್ಯವಸ್ಥೆ ಎಂಬುದು ಅತಿ ಗಂಭೀರವಾಗಿ ಗಾಯಗೊಂಡಿದೆ ಎಂಬುದು ಮಾರುಕಟ್ಟೆಗೆ ತಿಳಿದಿದೆ. ಸೆನ್ಸೆಕ್ಸ್ನಲ್ಲಿ ಉಂಟಾಗಿರುವ ಕುಸಿತವು ಕಾರ್ಪೋರೇಟ್ ಭಾರತವು ಎದುರಿಸುತ್ತಿರುವ ಸಮಸ್ಯೆಗೆ ಹಿಡಿದಿರುವ ಕನ್ನಡಿ. ಈ ವರ್ಷದ ಆರಂಭದಿಂದ ಸೆನ್ಸೆಕ್ಸ್ 5.76 ಶೇಕಡ ಕುಸಿದಿದೆ. ಬಿಎಸ್ಇ ಬ್ಯಾಂಕೆಕ್ಸ್ 27 ಶೇಕಡದಷ್ಟು ಕುಸಿತ ಕಂಡಿದ್ದರೆ ಮಿಡ್ಕ್ಯಾಪ್ ಸೂಚ್ಯಂಕ 25 ಶೇಕಡದಷ್ಟು ಕುಸಿತ ಕಂಡಿದೆ.
ಈ ಸೆನ್ಸೆಕ್ಸ್ ಕುಸಿತವು ಭಾರತದ ಅಗ್ರಶ್ರೇಣಿ ಉದ್ಯಮದ ಸ್ಥಿತಿಯ ಪ್ರತಿಫಲನವಾದರೆ, ನಿಜವಾಗಿಯೂ ಉದ್ಯೋಗ ನೀಡುವ ಸಣ್ಣ ಮತ್ತು ಮಧ್ಯಮ ಕಂಪನಿಗಳು ಅತ್ಯಂತ ಘಾಸಿಗೊಳಗಾಗಿವೆ. ನೌಕರರನ್ನು ಮನೆಗೆ ಕಳುಹಿಸುತ್ತ ಅಂಧಕಾರದ ಸ್ಥಿತಿಯನ್ನು ಎದುರಿಸುವತ್ತ ಸಾಗಿವೆ.
ಹಾಗಾದರೆ ಮಾರುಕಟ್ಟೆಗೆ ತನ್ನಲ್ಲಿ ನಂಬಿಕೆ ಬರುವಂತೆ ಒಂದಿಷ್ಟು ಒಳ್ಳೆಯದನ್ನು ಮಾಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಿಲ್ಲವೇ? ಅದು ಮೂರು ಅಂಶಗಳನ್ನು ಅನುಸರಿಸಬಹುದು. ಆದರೆ ಇವ್ಯಾವವೂ ರಾಜಕೀಯವಾಗಿ ಲಾಭ ತಂದುಕೊಡುವಂಥವುಗಳಲ್ಲ.
ಮೊದಲನೆಯದಾಗಿ ರುಪಾಯಿಯನ್ನು ಬೇರೆ ಬೆಂಬಲದಿಂದ ನಿಲ್ಲಿಸುವ ಯತ್ನ ಕೈಬಿಡಬೇಕು. ಇದರ ಸೂಚನೆ ಮಾರುಕಟ್ಟೆಗೆ ಗೊತ್ತಾಗುತ್ತಿದ್ದಂತೆ ರುಪಾಯಿ ತನ್ನದೇ ಲೆವಲ್ ಅನ್ನು ಕಾಪಾಡಿಕೊಳ್ಳುತ್ತದೆ. ಅದು ಡಾಲರ್ ವಿರುದ್ಧ 70 ರುಪಾಯಿಯಾಗಿ ಕುಸಿತ ಕಂಡರೂ ಅದು ಪುನಃ ಚಿಗಿತುಕೊಳ್ಳುತ್ತದೆ. ರಫ್ತು ಹೆಚ್ಚಾಗಿ ಆಮದು ನಿಯಂತ್ರಣಕ್ಕೆ ಬರುವುದು. ಕೊರತೆ ನೀಗಿಸಿ ರುಪಾಯಿಯ ಸ್ಥಿರತೆ ತರುವುದಕ್ಕೆ ಇದುವೇ ಈಗ ಅವಶ್ಯ. ರುಪಾಯಿ ಪತನವಾಗದಿದ್ದರೆ ಅದು ಬಹುಕಾಲದವರೆಗೆ ದುರ್ಬಲವಾಗಿಯೇ ಇದ್ದು ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಅಡ್ಡಗಾಲಾಗಿಯೇ ಇರುತ್ತದೆ.
ಎರಡನೆಯದಾಗಿ, ಈ ಕ್ಷಣವೇ ಅದು ಡೀಸೆಲ್ ಬೆಲೆಯನ್ನು ದೊಡ್ಡಮಟ್ಟದಲ್ಲಿ ಏರಿಸಬೇಕು. ರುಪಾಯಿಯ ಈಗಿನ ಸ್ಥಾನಮಾನ ಮತ್ತು ಜಾಗತಿಕವಾಗಿ ಕಚ್ಚಾತೈಲದ ಬೆಲೆ ಗಮನದಲ್ಲಿ ಇರಿಸಿಕೊಂಡಾಗ ಪ್ರತಿ ಲೀಟರ್ಗೆ ಆಗುತ್ತಿರುವ ಲುಕ್ಸಾನು 10.22 ರುಪಾಯಿಗಳು. ಈ ತಿಂಗಳು ಹಾಗೂ ಮುಂದಿನ ತಿಂಗಳಲ್ಲಿ ಒಂದೆರಡು ಹಂತಗಳಲ್ಲಿ ಡೀಸೆಲ್ ಬೆಲೆಯನ್ನು ಏರಿಸಿದ್ದೇ ಆದಲ್ಲಿ ಸರ್ಕಾರವನ್ನು ಮಾರುಕಟ್ಟೆಯು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಬೆಳವಣಿಗೆಗೆ ಹೊಡೆತವಾದರೂ ಕಠಿಣ ನಿರ್ಧಾರ ಕೈಗೊಳ್ಳುವ ಶಕ್ತಿ ಸರ್ಕಾರಕ್ಕಿದೆ ಎಂದು ಮಾರುಕಟ್ಟೆಗೆ ಮನದಟ್ಟಾಗುತ್ತದೆ. ವಿತ್ತೀಯ ಕೊರತೆ ಕುಗ್ಗುತ್ತದೆ. ಕೈಗಾರಿಕೆಗಳ ಒಕ್ಕೂಟ ಮಾರುಕಟ್ಟೆಗೆ ಮರಳುತ್ತದೆ. ಹೊಸದರಗಳಿಗೆ ಅರ್ಥವ್ಯವಸ್ಥೆ ಒಗ್ಗಿಕೊಳ್ಳುತ್ತಿರುವಂತೆಯೇ ಬೆಳವಣಿಗೆ ಮತ್ತೆ ಹಳಿಗೆ ಬರುತ್ತದೆ. ವಿತ್ತೀಯ ಕೊರತೆ ನೀಗುತ್ತಲೇ ಬಡ್ಡಿದರವನ್ನು ಕಡಿಮೆ ಮಾಡಿ ಬೆಳವಣಿಗೆ ಮತ್ತೆ ಚುರುಕುಗೊಳ್ಳುವಂತೆ ಮಾಡಬಹುದು. ಇದಾಗದಿದ್ದರೆ, ಅತ್ತ ಅಮೆರಿಕ ಮತ್ತು ಯುರೋ ವಲಯದ ಆರ್ಥಿಕತೆ ಚಿಗಿತುಕೊಳ್ಳುತ್ತಿದ್ದಂತೆ ಕಚ್ಚಾತೈಲದ ಬೆಲೆ ಏನಾಗಬಹುದು? ಡಿಸೇಲ್ ಬಗ್ಗೆ ಯುಪಿಎ ತ್ವರಿತ ನಿರ್ಣಯ ಕೈಗೊಳ್ಳಲೇಬೇಕಿದೆ.
ಮೂರನೆಯದಾಗಿ, ಜಿಡಿಪಿಯ ಶೇ. 3ರಷ್ಟಕ್ಕೆ ವಿತ್ತೀಯ ಕೊರತೆ ತಲುಪಿದ ಮೇಲಷ್ಟೇ ಆಹಾರ ಭದ್ರತಾ ಕಾಯ್ದೆಯನ್ನು ಅನುಷ್ಠಾನಗೊಳಿಸುವುದಾಗಿ ಸರ್ಕಾರ ಘೋಷಿಸಬೇಕು. ಜನಸಂಖ್ಯೆಯ ಶೇ. 67 ಭಾಗಕ್ಕೆ ಅಲ್ಲ, ಬಡತನ ರೇಖೆ ಕೆಳಗಿರುವ ಶೇ. 22 ಮಂದಿಗಷ್ಟೇ ಸದ್ಯದಲ್ಲಿ ಕಾಯ್ದೆಯನ್ನು ಅನ್ವಯಿಸುವ ಕ್ರಮಕ್ಕೆ ಮುಂದಾಗಬೇಕು. ಯುಪಿಎ ಸರ್ಕಾರ ಹೀಗೊಂದು ರಾಜಕೀಯ ತ್ಯಾಗಕ್ಕೆ ಮುಂದಾದರೆ ಅದರ ಉದ್ದೇಶ ದೃಢತೆ ಬಗ್ಗೆ ಮಾರುಕಟ್ಟೆಗೆ ಪ್ರಬಲ ಸಂದೇಶ ರವಾನೆಯಾಗುತ್ತದೆ.
ಇವನ್ನೆಲ್ಲ ಯುಪಿಎ ಮಾಡುವುದೇ? ಮಾರುಕಟ್ಟೆ ಹಾಗೆಂದು ನಂಬುವುದಕ್ಕೆ ಸಿದ್ಧವಿಲ್ಲ. ಚುನಾವಣಾ ವರ್ಷವನ್ನು ಎದುರಿಗೆ ಇರಿಸಿಕೊಂಡು ಇಂಥ ಕ್ರಮಗಳಿಗೆಲ್ಲ ಯಾವ ಸರ್ಕಾರವೂ ಮುಂದಾಗುವುದಿಲ್ಲ ಎಂಬ ಮಾತು ಒಪ್ಪುವಂಥದ್ದೆ. ಹಾಗಾದರೆ ಇರುವ ಆಯ್ಕೆಯಾದರೂ ಏನು? ಸರ್ಕಾರದೆದುರು ಇನ್ನೂ ಒಂದು ಬ್ರಹ್ಮಾಸ್ತ್ರವಿದೆ. ಅವಧಿಪೂರ್ವ ಚುನಾವಣೆಯನ್ನು ಕರೆಯುವುದು. ಆಗ ಬದಲಾವಣೆ ಎಂಬುದು ಸನಿಹದಲ್ಲೇ ಇದೆ ಎಂದು ಮಾರುಕಟ್ಟೆ ಸ್ಥಿರವಾಗುತ್ತದೆ. ಆದರೆ ಯುಪಿಎಗೆ ಅಧಿಕಾರಕ್ಕೆ ಅಂಟಿಕೊಳ್ಳುವುದೇ ಆದ್ಯತೆ ಆದ್ದರಿಂದ ಅದು ರುಪಾಯಿ ಕುಸಿದರೂ, ಚಿನ್ನ ಗಗನಕ್ಕೆ ನೆಗೆದರೂ, ಬಡ್ಡಿದರ ಹೆಚ್ಚಿದರೂ ಸುಮ್ಮನಿದೆ.
- ಆರ್. ಜಗನ್ನಾಥನ್
ಸಂಪಾದಕ, ಫಸ್ಟ್ ಪೋಸ್ಟ್