ಅಂಕಣಗಳು

ಬೀಸಿಹೋದ ಬಿರುಗಾಳಿ: ಕೆಟ್ಟ ಅಪಪ್ರಚಾರದ ಸಮರ

ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಜನ್ಮ ಜಾಲಾಡಿ, ತೇಜೋವಧೆ ಮಾಡುವ ಪ್ರವೃತ್ತಿ..

ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಜನ್ಮ ಜಾಲಾಡಿ, ತೇಜೋವಧೆ ಮಾಡುವ ಪ್ರವೃತ್ತಿ ಚುನಾವಣೆಗೆ ಹೊಸದೇನೂ ಅಲ್ಲ. ಆದರೆ ದಕ್ಷಿಣ ಕರ್ನಾಟಕದ ಮಂಡ್ಯ, ಬೆಂಗಳೂರು ಗ್ರಾಮೀಣ ಕ್ಷೇತ್ರಗಳ ಲೋಕಸಭೆ ಮರು ಚುನಾವಣೆಯ ಸಂಬಂಧದಲ್ಲಿ ನಾಯಕರು ತಮ್ಮ ವಿಚಾರವನ್ನು ಹೇಳಿಕೊಂಡಿದ್ದಕ್ಕಿಂತ ತೀರಾ ಕೆಟ್ಟದಾಗಿ ಎದುರಾಳಿಗಳನ್ನು ಹಳಿದಿದ್ದೇ ಅದೂ ವ್ಯಕ್ತಿಗತವಾಗಿ ವಿಪರೀತವಾಗಿತ್ತು.
  ಹೌದು- ಆ ಚುನಾವಣೆಯ ಸ್ವರೂಪವೇ ಹಾಗಿತ್ತು. ಯಾರಿಗೂ ಬೇಡದ ಚುನಾವಣೆ ಅದು. ಒಂದು ರೀತಿಯಲ್ಲಿ ನಡೆದಿದ್ದು ಚುನಾವಣೆಯೇ ಅಲ್ಲ. ಜಗಳ. ಒಂದು ಕಡೆ ದೇವೇಗೌಡರು - ಪುತ್ರ ಕುಮಾರಸ್ವಾಮಿ. ಇನ್ನೊಂದು ಕಡೆ ಎಸ್ಸೆಮ್ ಕೃಷ್ಣ - ಸಿದ್ದರಾಮಯ್ಯ, ಇತರರೆಲ್ಲರೂ ಇಲ್ಲಿ ಸಹಪಾತ್ರಧಾರಿಗಳಷ್ಟೇ.
  ಈ ಜಗಳಕ್ಕೆ ಸುಮಾರು ದಶಕದ ಇತಿಹಾಸವಿದೆ. 2004ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಲೇ ಜಗಳ ದೊಡ್ಡ ರೀತಿಯಲ್ಲಿ ಆರಂಭವಾಗಿದ್ದು. ಆ ಜಗಳಕ್ಕೆ ಇನ್ನೂ ವಿರಾಮವೇ ಸಿಕ್ಕಿಲ್ಲ. ದೇವೇಗೌಡರು, ಎಸ್ಸೆಮ್ ಕೃಷ್ಣ ವಿಧಾನಸಭೆಯನ್ನು ಪ್ರವೇಶಿಸಿದ್ದು ವಿರೋಧ ಪಕ್ಷಗಳು ಬಳಸುವ ಬಾಗಿಲುಗಳ ಮೂಲಕವೇ. ಕೆಲವು ವರ್ಷಗಳ ಕಾಲ ಸದನದ ಒಂದೇ ಭಾಗದಲ್ಲಿ ಇಬ್ಬರೂ ಮಿಂಚಿದ್ದಾರೆ. ಅನಂತರದ ಹಾವು ಏಣಿಯ ಆಟದಲ್ಲಿ ಗೌಡರು ಜನತಾ ಪರಿವಾರದ ಕಡೆಗೆ ಹೊರಳಿದರೆ ಕೃಷ್ಣ ಕಾಂಗ್ರೆಸ್ಸಿನತ್ತ ಸಾಗಿದರು. ಒಮ್ಮೆ ಕೃಷ್ಣ ರಾಜಕೀಯವಾಗಿ ತೊಂದರೆಯಲ್ಲಿದ್ದಾಗ ಅವರಿಗೆ ರಾಜ್ಯಸಭೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟವರೂ ದೇವೇಗೌಡರೇ. ಅವರು ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ಅವರ ಮನೆಯಲ್ಲಿ ಕೃಷ್ಣ ಅವರನ್ನು ಅನೇಕರು ನೋಡಿದ್ದಾರೆ. 2004 ರ ವಿಧಾನಸಭೆ ಚುನಾವಣೆ ನಡೆದಾಗ ಕೃಷ್ಣ ರಾಜ್ಯದ ಮುಖ್ಯಮಂತ್ರಿ. ಆ ಕಾಲದಲ್ಲಿ ಅವರಿಬ್ಬರ ನಡುವೆ ದ್ವೇಷ ಅಂಕುರವಾಗಿರಬಹುದು. ಆದರೆ ಅದು ಪ್ರಕಟವಾಗಿದ್ದು ಚುನಾವಣೆಯ ಫಲಿತಾಂಶ ಹೊರಬಿದ್ದು ಅತಂತ್ರ ವಿಧಾನಸಭೆಯ ರಚನೆ ಖಚಿತವಾದಾಗಲೇ.
  ಇನ್ನೂ ಚುನಾವಣೆ ಫಲಿತಾಂಶ ಪೂರ್ತಿಯಾಗಿ ಪ್ರಕಟವಾಗಿರಲಿಲ್ಲ. ಒಂದು ಸಂಜೆ, ಲಂಕೇಶ ಪತ್ರಿಕೆಯ ಇಪ್ಪತ್ತು ವರ್ಷಗಳು ಮುಗಿದ ಸಮಾರಂಭ ಏರ್ಪಾಟಾಗಿತ್ತು. ದೇವೇಗೌಡರು ಮುಖ್ಯ ಅತಿಥಿ.
-ಯಾವ ಕಾರಣಕ್ಕೋ ಏನೋ ಗೊತ್ತಿಲ್ಲ, ಆಗ ದೇವೇಗೌಡರಲ್ಲಿ ಮೂಡಿದ್ದ ಅನಿಸಿಕೆ; ಯಾವ ಕಾರಣಕ್ಕೂ ಕೃಷ್ಣ ಅವರನ್ನು ಮತ್ತೆ ಮುಖ್ಯಮಂತ್ರಿಯ ಸಿಂಹಾಸನವನ್ನೇರಲು ಬಿಡಬಾರದು. ಆ ಸಂಬಂಧದ ಮಾತುಕತೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ. ಕಮಿಷನರ್ ಜೈಕರಜಿರೋಮ್ ಅವರ ಹೆಸರನ್ನು ಬಹಿರಂಗವಾಗಿಯೇ ಪ್ರಸ್ತಾಪಿಸಲಾಗಿತ್ತು. ಆಗಲೂ ದೇವೇಗೌಡರು ಪಠಿಸುತ್ತಿದ್ದ ಮಂತ್ರ; ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಅದಕ್ಕಾಗಿ ಜೆಡಿಎಸ್ ಯಾರ ಜತೆಯಲ್ಲಿ ಬೇಕಾದರೂ ಕೈ ಜೋಡಿಸಲು ಸಿದ್ಧ.
  ಅದಾದ ಒಂಭತ್ತು ವರ್ಷಗಳ ಅನಂತರದ ಜೆಡಿಎಸ್ ನಾಯಕರ ಮಾತು; ಕಾಂಗ್ರೆಸ್ಸನ್ನು ಸೋಲಿಸಲು ಯಾವ ಮೂಲದಿಂದ ನೆರವು ಸಿಕ್ಕಿದರೂ ಅದನ್ನು ಪಡೆಯಲು ಸಿದ್ಧ.  ನಿಜ. 2004ರ ಕಾಲಘಟ್ಟದ ಪ್ರತಿಜ್ಞೆಯನ್ನು 2013ರಲ್ಲಿ ನೆನಪು ಮಾಡಿಕೊಳ್ಳುವುದು ತಪ್ಪು. ಈ ಅವಧಿಯಲ್ಲಿ ಕರ್ನಾಟಕ ಎರಡು ಪಕ್ಷಗಳ ಎರಡು ಸಮ್ಮಿಶ್ರ ಸರ್ಕಾರಗಳನ್ನು ಕಂಡಿದೆ. ಎರಡು ವಿಭಿನ್ನ ಏಕಪಕ್ಷೀಯ ಸರ್ಕಾರಗಳನ್ನೂ ಕಂಡಿದೆ. ಆದರೆ ಎಲ್ಲ ಸರ್ಕಾರಗಳೂ ಅವಾಂತರಗಳ ಗೂಡುಗಳಂತಾಗಿದ್ದವು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅವಾಂತರ ಎಗ್ಗು ಸಿಗ್ಗಿಲ್ಲದೇ ನಿರಂತರವಾಗಿ ಈಗಲೂ ನಡೆದಿದೆ.   ಕೃಷ್ಣ, ದೇವೇಗೌಡರ ಆಸೆಗೆ ತಕ್ಕಂತೆ ಮುಖ್ಯಮಂತ್ರಿಯಾಗಲಿಲ್ಲ. ಮಹಾರಾಷ್ಟ್ರದ ರಾಜ್ಯಪಾಲರಾಗಿ, ಅನಂತರ ರಾಜ್ಯಸಭೆ ಸದಸ್ಯರಾಗಿ, ವಿದೇಶಾಂಗ ಮಂತ್ರಿಯಾಗಿ, ಈಗ ಎಂ.ಪಿ. ಆಗಿದ್ದಾರೆ.

ದೇವೇಗೌಡರ ಸಂಕಟ:  ದೇವೇಗೌಡರ ಮಾರ್ಗದರ್ಶನದಲ್ಲಿ (2004) ಧರಂ ಸಿಂಗ್‌ರ ನೇತೃತ್ವದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಬಂದಿದ್ದು ಬಿಜೆಪಿ ವಿರೋಧಿ ಸರ್ಕಾರವಾಗಿ. ಆದರೆ ಇಪ್ಪತ್ತೇ ತಿಂಗಳ ಅನಂತರ ದೇವೇಗೌಡರ ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ತಾವೇ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದರು. ಆ ಸರ್ಕಾರಕ್ಕೆ ದೇವೇಗೌಡರ ಆಶೀರ್ವಾದ ಇರಲಿಲ್ಲ.  ಮುಂದಿನ ಕತೆ ಗೊತ್ತೇ ಇದೆ.
ಕುಮಾರಸ್ವಾಮಿ ಕಾಲದಲ್ಲಾಗಲಿ, ಯಡಿಯೂರಪ್ಪ ಕಾಲದಲ್ಲಾಗಲಿ ಸಾಮಾಜಿಕ ನ್ಯಾಯ ವಿತರಣೆಯ ಮಾತು ಕೇಳಿ ಬರಲೇ ಇಲ್ಲ.  ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿ ಗೆದ್ದರು, ಮತ್ತೆ ವಿಧಾನಸಭೆ ಚುನಾವಣೆ ಬಂದಾಗ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಸೆ ಪಟ್ಟು ಲೋಕಸಭೆಗೆ ರಾಜಿನಾಮೆ ನೀಡಿ ರಾಮನಗರದಲ್ಲಿ ಗೆದ್ದರು. ಆಗ ಸ್ಥಾಪನೆಯಾಗಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.  ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದ ಮರುಚುನಾವಣೆ - ಕ್ಷೇತ್ರದಲ್ಲಿ ಗೆದ್ದಿದ್ದ ಕುಮಾರ ಸ್ವಾಮಿ ಜೆಡಿಎಸ್ ಪ್ರಚಾರ ರಥದ ಸಾರಥಿ. ದೇವೇಗೌಡರೂ ಮೈದಾನಕ್ಕಿಳಿದರು. ಪಕ್ಷದ ಸ್ಪರ್ಧಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅನಿತಾ ಕುಮಾರಸ್ವಾಮಿ. ದೇವೇಗೌಡ, ಕುಮಾರ ಸ್ವಾಮಿಯ ಪ್ರತಿಷ್ಠೆಯ ಅಗ್ನಿ ಪರೀಕ್ಷೆಗೆ ಇನ್ನೇನು ಬೇಕು? ಕಾಂಗ್ರೆಸ್ಸೂ ಆರಿಸಿದ್ದು ಗೌಡ ಕುಟುಂಬದ ಸ್ಥಳೀಯ ಎದುರಾಳಿ ಶಿವಕುಮಾರ್ ಅವರ ಸೋದರರನ್ನೇ. ಕಾಂಗ್ರೆಸ್ ಪ್ರಚಾರದ ಹೊಣೆ ಶಿವಕುಮಾರ್‌ರೇ ಆದರೂ ಪ್ರತಿಷ್ಠೆ ಸಿದ್ದರಾಮಯ್ಯ ಅವರದ್ದೇ.  ಕುಮಾರ ಸ್ವಾಮಿ ಅವರ ಜತೆಯಲ್ಲೇ ವಿಧಾನ ಸಭೆ ಚುನಾವಣೆ ಗೆದ್ದಿದ್ದ ಚೆಲುವರಾಯ ಸ್ವಾಮಿ ಅವರೂ ರಾಜಿನಾಮೆ ಕೊಟ್ಟು ತೆರವು ಮಾಡಿದ ಮಂಡ್ಯ ಕ್ಷೇತ್ರದ ಉಪಚುನಾವಣೆಯಲ್ಲಿ ಈಗ ಪ್ರತಿಷ್ಠಿತ ಅಭ್ಯರ್ಥಿಗಳಿಲ್ಲದೇ ಇದ್ದರೂ ಒಂದೆಡೆ ಸಿದ್ದರಾಮಯ್ಯ, ಇನ್ನೊಂದೆಡೆ ಗೌಡ - ಕುಮಾರ ಸ್ವಾಮಿ ಅವರ ಪ್ರತಿಷ್ಠೆಗಳೇ ಪಣವಾಗಿದ್ದದ್ದು.
  ಇಂತಹ ಸ್ಥಿತಿಯಲ್ಲಿ ರಾಜ್ಯದಲ್ಲಿ ಈಗ ಮೂರನೆಯ ಪಕ್ಷವಾಗಿ ಕೆಳಗೆ ಬಿದ್ದಿರುವ ಬಿಜೆಪಿಯ ಕತೆ ಏನು? ಯಡಿಯೂರಪ್ಪ ಅವರದ್ದೇ ಬೇರೆ ಜಾಡಿನ ನಡೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪಾತ್ರವೇ ಇರಲಿಲ್ಲ. ಯಾರದ್ದಾದರೂ ಬಾಲಂಗೋಚಿಯಾಗಲೇ ಬೇಕಾಗಿತ್ತು. ಕುಮಾರಸ್ವಾಮಿ ಅವರ ಆಯ್ಕೆಯಂತೆ ಜೆಡಿಎಸ್ - ಬಿಜೆಪಿ ನಡುವೆ ಅಘೋಷಿತ ಆದರೆ ಪರಿಣಾಮಕಾರಿ ಸಹಕಾರದ ಒಡಂಬಡಿಕೆಯ ಒಪ್ಪಂದವಾಗಿತ್ತು.   ಈಗ ದೇವೇಗೌಡರ ಪಾಲಿಗೆ ಜಾತ್ಯತೀತ ಜನತಾದಳ - ಬಿಜೆಪಿಯ ಪ್ರತ್ಯಕ್ಷ - ಪರೋಕ್ಷ ಸಂಬಂಧವೇ, ಅವರ ರಾಷ್ಟ್ರೀಯ ರಾಜಕೀಯದ ಪ್ರತಿಷ್ಠೆಯ ದೃಷ್ಟಿಯಿಂದ ದೊಡ್ಡ ಪೆಟ್ಟೇ ಬಿದ್ದಂತೆ ಆಗಿದೆ. ಅದೇ ಅವರ ಸಂಕಟ ಅದನ್ನು ಬೆಂಗಳೂರಿನಲ್ಲಿ ದೇವೇಗೌಡರು ನಿಭಾಯಿಸುವುದು ಸಾಧ್ಯ, ಅವರಿಗೆ ಅದು ಸುಲಭವೂ ಆಗಿರಬಹುದು. ಆದರೆ ದೆಹಲಿಯ ರಾಜಕೀಯದ ನೆಲೆಯಲ್ಲಿ ಅದರಲ್ಲೂ ಈಗ ಕಾಂಗ್ರೆಸ್ - ಬಿಜೆಪಿ ವಿರೋಧಿ ಸ್ವತಂತ್ರ ನಿಲವಿನ ಪ್ರಾದೇಶಿಕ ಪಕ್ಷಗಳ ತೃತೀಯ ರಂಗದ ರಚನೆಯ ಸಂಬಂಧದ ಮಾತುಕತೆ ಆರಂಭವಾಗಿರುವಾಗ ಗೌಡರು ಸಾಕಷ್ಟು ಕಸರತ್ತನ್ನೇ ಮಾಡಬೇಕಾಗುತ್ತದೆ. ಅದು ಅವರ ಸ್ವಂತದ ವಿಚಾರವಲ್ಲ. ಈಗಾಗಲೇ ದೆಹಲಿಯಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಸೀತಾರಾಮ ಯಚೂರಿ ಅವರು ಹಿಂದೆ ದೇವೇಗೌಡರನ್ನು ಸಂಯುಕ್ತ ರಂಗದ ಸರ್ಕಾರದ ಪ್ರಧಾನಿಯಾಗಿ ಆರಿಸಿದ್ದು ಅವರು ಪ್ರಕಟಿಸಿದ್ದ ಬಿಜೆಪಿ ವಿರೋಧಿ ಸೆಕ್ಯುಲರ್ ನೀತಿಯನ್ನು ಗಮನಿಸಿ ಎಂದಿದ್ದಾರೆ. ಇದು ಆರಂಭ ಮಾತ್ರ. ಈಗಾಗಲೇ ಕರ್ನಾಟಕದಲ್ಲಿ, ಪ್ರಮುಖವಾಗಿ ಕಾಂಗ್ರೆಸ್ ಮೂಲಗಳಿಂದ ಕೇಳಿ ಬರುತ್ತಿರುವ ಜೆಡಿಎಸ್ - ಬಿಜೆಪಿ ಕುರಿತ ಚುಚ್ಚು ಮಾತುಗಳು ಸದ್ಯದಲ್ಲೇ ದೆಹಲಿಯಲ್ಲೂ ಪ್ರತಿಧ್ವನಿಯನ್ನು ಹೊರಡಿಸುವುದು ತೀರ ಸಹಜ. ಗೌಡರು, ಜೆಡಿಎಸ್ - ಬಿಜೆಪಿ ಸಂಬಂಧದ ಎಲ್ಲ ಹೊಣೆಗಾರಿಕೆಯನ್ನು ಕುಮಾರಸ್ವಾಮಿ ಅವರ ತಲೆಗೇ ಕಟ್ಟುವುದು ಸಾಧ್ಯವೇ?

ರಮ್ಯಾ ಕಣಕ್ಕೆ ಬಂದಾಗ...: ಮಂಡ್ಯದ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್ಸಿಗೆ ಒಂದು ರೀತಿಯ ತಲೆ ನೋವೇ ಆಗಿತ್ತು. ಅಲ್ಲಿನ ನಾಯಕರ ತಂಡದಲ್ಲಿ ಯಾರನ್ನೂ ಆರಿಸುವಂತಿರಲಿಲ್ಲ. ಯಾರನ್ನೂ ಬಿಡುವಂತಿರಲಿಲ್ಲ. ಎಸ್ಸೆಮ್ ಕೃಷ್ಣ, ಆರಂಭದ ದಿನಗಳಲ್ಲಿ ಹೆಚ್ಚು ಆಸಕ್ತಿ - ಉತ್ಸುಕತೆಯನ್ನು ತೋರಿಸಲಿಲ್ಲ. ಮಾನಸಿಕವಾಗಿ ಅವರು ಮಂಡ್ಯದ ರಾಜಕೀಯದಿಂದ ದೂರವಾಗುತ್ತಿರುವಂತಿದೆ.  ಕೊನೆಗೆ ಯಾರದೋ ಸಲಹೆಯಂತೆ, ಚಲನಚಿತ್ರ ಕಲಾವಿದೆ ರಮ್ಯಾ ಅವರನ್ನು ಆರಿಸಿದಾಗ ಮಂಡ್ಯದ ಚುನಾವಣೆ ವೇದಿಕೆ ಕೃಷ್ಣ, ಸಿದ್ದರಾಮಯ್ಯ - ಅಂಬರೀಷ್, ದೇವೇಗೌಡ, ಕುಮಾರಸ್ವಾಮಿ - ಚೆಲುವರಾಯಸ್ವಾಮಿ ಅವರ ಪ್ರತಿಷ್ಠೆಯ ವೇದಿಕೆಯಾಗಿ ಪರಿವರ್ತನೆಯಾಯಿತು.   ಯಾವುದೇ ರಾಜಕೀಯ, ಸೈದ್ಧಾಂತಿಕ ಅಥವಾ ವೈಚಾರಿಕ ವಿವಾದ ಇಲ್ಲದಿರುವಾಗ ಸುಲಭವಾಗಿ ಸ್ಪರ್ಧಿಗಳಿಗೆ ಎಟುಕುವ ಅಸ್ತ್ರ ವ್ಯಕ್ತಿ ನಿಂದನೆ ಅಥವಾ ಹಿಯಾಳಿಕೆ. ಅದನ್ನು ಜಾತ್ಯತೀತ ಜನತಾದಳದವರು ರಮ್ಯಾ ವಿರುದ್ಧ ಯಥೇಚ್ಛವಾಗಿ ಬಳಸಿದ್ದು ನಿಜ.  ಈ ಅವಾಂತರದಲ್ಲಿ ಪಾಪ ಯಾವ ತಪ್ಪನ್ನೂ ಮಾಡದ, ಇಂತಹ ಚಟುವಟಿಕೆಯಲ್ಲಿ ಯಾವ ಪಾತ್ರವನ್ನೂ ವಹಿಸದ ರಮ್ಯಾ ಸ್ವಲ್ಪ ಹೆಚ್ಚಾಗಿ, ಅನಿತಾ ಕುಮಾರಸ್ವಾಮಿ ತುಸು ಕಡಿಮೆ ಎನ್ನುವ ಮಟ್ಟದಲ್ಲಿ ಅಸಹಾಯಕರಾಗಿ ಬಲಿಯಾಗಬೇಕಾಯಿತು.
 ಮತದಾನ ಮುಗಿದಿದೆ. ಇನ್ನು ಉಳಿದಿರುವುದು ಎಣಿಕೆ ಮಾತ್ರ. ಮಂಡ್ಯ - ಬೆಂಗಳೂರಿನಲ್ಲಿ ಯಾರು ಗೆದ್ದರೂ ಒಂದೇ. ಆದರೂ ಈ ಚುನಾವಣೆಯ ಫಲಿತಾಂಶ ಯಾವುದಕ್ಕೆ ದಿಕ್ಸೂಚಿ?  ಆ ಪ್ರಶ್ನೆಗೆ ಉತ್ತರ ನೀಡಲು ರಾಜ್ಯದ ರಾಜಕೀಯ ಗಟಾರಕ್ಕೆ ಬಿದ್ದಿರುವುದಕ್ಕೆ ಚುನಾವಣೆ ಪ್ರಚಾರ ಅಥವಾ ಅಪಪ್ರಚಾರಗ ವೈಖರಿ ಸಾಕ್ಷಿಯಾಗಿದೆ. ಫಲಿತಾಂಶ ಆ ಕಲೆಯಲ್ಲಿ ಯಾರು ಹೆಚ್ಚು ನಿಷ್ಣಾತರು ಎನ್ನುವುದನ್ನು ಸೂಚಿಸಬಹುದಷ್ಟೇ.   ಈ ಎಲ್ಲ ಅವಾಂತರದ ನಡುವೆಯೇ ಹಲವಾರು ಸಾಹಿತಿಗಳು ಸ್ವಯಂ ಪ್ರೇರಣೆಯಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೇ ಬೆಂಬಲ ಸೂಚಿಸುವ (ಅಭ್ಯರ್ಥಿಗಳಿಗಲ್ಲ) ಅಗತ್ಯ ನಿಜವಾಗಿಯೂ ಇತ್ತೇ?  ಆ ಪ್ರಶ್ನೆಗಳಿಗೆ ಸಾಹಿತ್ಯ ಲೋಕದ ಹಿರಿಯರೇ ಉತ್ತರಗಳನ್ನು ಹುಡುಕಿಕೊಳ್ಳಬೇಕು.  ಬಿಜೆಪಿ ಪ್ರಚಾರಕ್ಕೆ ಬಂದಿದ್ದು ಚುನಾವಣೆಯ ಸಮಯದ ಕಾರ್ಯಕರ್ತರಿಗೆ ಉದ್ಯೋಗ ಒದಗಿಸುವುದಕ್ಕೆ ಅಷ್ಟೇ. ಇಲ್ಲದಿದ್ದರೆ ಅವರು ಬೇರೆಡೆಗೆ ಹೋಗುತ್ತಿದ್ದರು.

ಕಿಡಿಗೇಡಿತನ: ಇನ್ನೇನು ಮುಂದಿನ ತಿಂಗಳೇ ರಾಜಸ್ಥಾನ ವಿಧಾನಸಭೆ ಚುನಾವಣೆ ಪ್ರಕಟಣೆ ಹೊರಬೀಳಬಹುದು. ನಂತರ ದೆಹಲಿ. ಮಧ್ಯಪ್ರದೇಶ, ಚತ್ತೀಸಘಡ, ಮಿಜೋರಾಂ. ಆ ಸಮಯದಲ್ಲಿ ಕೇಂದ್ರದ ಮೇಲೆ ಚುನಾವಣೆ ಆಚಾರ ಸಂಹಿತೆಯ ಬಂಧನವಿರುತ್ತದೆ. ಅಲ್ಲಿಗೆ ಲೋ. ಚುನಾವಣೆಯ ಸಮಯ ಸಮೀಪದಲ್ಲೇ ಇರುವುದರಿಂದ ಹೊಸ ನೀತಿಯ ಪ್ರಕಟಣೆ ಸಾಧ್ಯವಿಲ್ಲ ಅಲ್ಲವೇ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ