ಬಾಂಗ್ಲಾದೊಂದಿಗಿನ ಭೂಗಡಿ ಒಪ್ಪಂದಕ್ಕೆ ಬೇಕಿದೆ ಬೆಂಬಲ
ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿ ಇನ್ನು ಕೆಲವೇ ತಿಂಗಳಲ್ಲಿ ...
ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿ ಇನ್ನು ಕೆಲವೇ ತಿಂಗಳಲ್ಲಿ ಮುಗಿದು ಹೋಗಲಿದೆ. ತನ್ನ ಆಡಳಿತದ ಮೊದಲ ಅವಧಿಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಯುಪಿಎ ಸರ್ಕಾರ, ಎರಡನೇ ಅವಧಿಯಲ್ಲಿ ಒಂದೊಂದೇ ಹಗರಣಗಳಲ್ಲಿ ಸಿಕ್ಕಿಕೊಂಡು ಎಲ್ಲ ನಿರೀಕ್ಷೆಗಳನ್ನೂ ಉಲ್ಟಾ ಮಾಡಿಬಿಟ್ಟಿತು. ಯುಪಿಎ ಸರ್ಕಾರದ ದುರಾಡಳಿತದಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭಾರೀ ಏರುಪೇರುಗಳಾದವು. ಅಷ್ಟೇ ಅಲ್ಲ, ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧವೂ ಹಳಸಿಕೊಂಡಿದೆ ಎನ್ನುವಂಥ ಸಂದರ್ಭ ನಿರ್ಮಾಣವಾಗಿ ಹೋಯ್ತು. ಇಂಥ ಸಂದರ್ಭದಲ್ಲಿಯೇ, ಬಾಂಗ್ಲಾದೇಶದೊಂದಿಗೆ ಭೂಗಡಿ ಒಪ್ಪಂದಕ್ಕೆ ಅನುಮೋದನೆ ನೀಡುವ ನಿರ್ಣಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಭದ್ರತೆ ಹಿತಾಸಕ್ತಿಯ ವಿಷಯದಲ್ಲಿ ತನಗೆ ಹೆಚ್ಚಿನ ಕಾಳಜಿ ಇದೆ ಎಂಬುದನ್ನು ಸಾಬೀತುಪಡಿಸಲಿಕ್ಕಾದರೂ ಈ ಒಪ್ಪಂದವನ್ನು ಬಿಜೆಪಿ ಬೆಂಬಲಿಸಲೇಬೇಕಾಗಿದೆ.
ನೆರೆಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ವಿಷಯದಲ್ಲಿ ಎಲ್ಲರೂ ಮೆಚ್ಚುವಂಥ ಕೆಲಸ ಮಾಡಿದವರು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ. ವಾಜಪೇಯಿಯವರು ಪ್ರಧಾನಿಯಾಗಿದ್ದ ದಿನಗಳಲ್ಲಿ ಅಮೆರಿಕದೊಂದಿಗೆ ಭಾರತದ ಸಂಬಂಧ ಇಂದಿಗಿಂತ ಎರಡು ಪಟ್ಟು ಚೆನ್ನಾಗಿತ್ತು. ಮುಂದೆ ಪ್ರಧಾನಿ ಹುದ್ದೆಗೇರಿದ ಮನಮೋಹನಸಿಂಗ್ ಕೂಡ ಆರಂಭದ ದಿನಗಳಲ್ಲಿ ವಾಜಪೇಯಿಯವರು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆದಿದ್ದರು. ಆದರೆ, ಕಳೆದ ಐದು ವರ್ಷಗಳ ಆಡಳಿತ ಮತ್ತು ಈಗ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉಳಿದಿರುವ ರಾಜತಾಂತ್ರಿಕ ಸಂಬಂಧವನ್ನು ಗಮನಿಸಿದರೆ, ಮನಮೋಹನಸಿಂಗ್ ತಮ್ಮ ಛಾರ್ಮ್ ಮತ್ತು ಫಾರ್ಮ್ ಕಳೆದುಕೊಂಡಿದ್ದಾರೆ ಎನಿಸುತ್ತದೆ. ಈ ಮಾತಿಗೆ ಪುಷ್ಟಿ ಕೊಡುವಂತೆ, ಈಚೆಗೆ ಪಾಕಿಸ್ತಾನದೊಂದಿಗೆ ಭಾರತದ ಬಾಂಧವ್ಯ ಹಳಸಿಕೊಂಡಿದೆ. ಅದಕ್ಕಿಂತ ಹೆಚ್ಚಾಗಿ, ನೆರೆಯ ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಅಗತ್ಯವಿದ್ದ ದಿಟ್ಟ ಪ್ರಯತ್ನವೊಂದು ಎನ್ಡಿಎ ಸರ್ಕಾರದ ಸಂದರ್ಭದಲ್ಲೇ ಶುರುವಾಗಿತ್ತು. ಆದರೆ, ಆನಂತರದಲ್ಲಿ ಅದು ಹಾಗೆಯೇ ಉಳಿದು ಹೋಯಿತು. ಈ ಅವಿವೇಕದ ಬೆಳವಣಿಗೆಗೆ ಈಗಿನ ಯುಪಿಎ ಸರ್ಕಾರದ ನಿಷ್ಕ್ರಿಯತೆಯೇ ಕಾರಣ ಎನ್ನದೇ ವಿಧಿಯಿಲ್ಲ.
ದೇಶದ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾಗಬಲ್ಲ ಹಲವು ಕೀಲಿ ಕೈಗಳು ಕೇಂದ್ರ ಸರ್ಕಾರದ ಬಳಿ ಇರುತ್ತವೆ. ಆದರೆ, ಯಾವುದೇ ಒಂದು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾದರೆ, ಆ ಸಂಬಂಧವಾಗಿ ಎಲ್ಲ ವಿರೋಧ ಪಕ್ಷಗಳ ಒಪ್ಪಿಗೆ ಪಡೆಯಲೇಬೇಕಾದ ಅನಿವಾರ್ಯತೆ ಆಡಳಿತ ಪಕ್ಷಕ್ಕೆ ಇರುತ್ತದೆ. ಅಣು ನೀತಿ ಒಪ್ಪಂದದ ಸಂದರ್ಭದಲ್ಲಿ ಯುಪಿಎ ಸರ್ಕಾರವು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಬೆಂಬಲ ಪಡೆದ ಸಂದರ್ಭವನ್ನು ಇಲ್ಲಿ ಉದಾಹರಿಸಬಹುದು. ಅಣು ನೀತಿ ಒಪ್ಪಂದವನ್ನು ಬೆಂಬಲಿಸದಿದ್ದರೆ ದೇಶದ ಸಮಗ್ರತೆ ಮತ್ತು ರಕ್ಷಣೆಗೆ ಭಂಗ ಉಂಟಾಗಬಹುದು ಎಂಬ ಆಶಯದಿಂದ ಎಲ್ಲ ಪಕ್ಷಗಳೂ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದು ಈಗ ಇತಿಹಾಸ. ಇದೆಲ್ಲಾ ಯುಪಿಎ ಸರ್ಕಾರದ ಮೊದಲ ಅವಧಿಯ ಮಾತಾಯಿತು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ನೆರೆಯ ಶ್ರೀಲಂಕಾ ಅಥವಾ ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಮೈತ್ರಿಗೆ ಮುಂದಾಗುವ ಮೊದಲು ಪ್ರಾದೇಶಿಕ ಪಕ್ಷಗಳ ಸಮ್ಮತಿ ಪಡೆಯಬೇಕಾದಂಥ ಸಂಕಟದ ಸ್ಥಿತಿಗೆ ಈಗಿನ ಯುಪಿಎ ಸರ್ಕಾರ ತಲುಪಿಕೊಂಡಿದೆ. ಶ್ರೀಲಂಕಾದೊಂದಿಗೆ ಯಾವುದೇ ಮಹತ್ವದ ಒಪ್ಪಂದದ ಮಾತು ಕೇಳಿ ಬಂದರೆ ಸಾಕು, ತಮಿಳುನಾಡಿನ ಸಂಸದರು ತಕರಾರು ತೆಗೆಯುತ್ತಾರೆ. ಆನಂತರದಲ್ಲಿ ಅವರ ಮಾತಿಗೆ ಹಲವು ದನಿಗಳು ಸೇರಿಕೊಂಡು ಎರಡು ರಾಷ್ಟ್ರಗಳ ಮಧ್ಯೆ ಮಧುರ ರಾಜತಾಂತ್ರಿಕ ಸಂಬಂಧ ಏರ್ಪಡಲು ಸಾಧ್ಯವಾಗುವುದೇ ಇಲ್ಲ. ಇಂಥದೇ ಬ್ಲಾಕ್ಮೇಲ್ ತಂತ್ರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತುಂಬಾ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಈ ಕಾರಣದಿಂದಲೇ ಬಾಂಗ್ಲಾದೇಶದೊಂದಿಗೆ ಮಧುರ ಬಾಂಧವ್ಯ ಹೊಂದಲು, ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಸಾಧ್ಯವಾಗಿರಲೇ ಇಲ್ಲ.
ಆದರೆ ಈಗ, ತುಂಬ ತಡವಾಗಿಯಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡರೆ ಅದರಿಂದ ದೇಶದ ಭದ್ರತೆಗೆ ಹಲವು ರೀತಿಯಲ್ಲಿ ಲಾಭವಾಗಲಿದೆ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಈ ಕಾರಣದಿಂದಲೇ ಬಾಂಗ್ಲಾದೇಶದೊಂದಿಗೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ವಿಷಯವಾಗಿ ಮಸೂದೆಯೊಂದನ್ನು ಮಂಡಿಸಲು ಮೊನ್ನೆಯ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಪ್ರಧಾನಿ ಮನಮೋಹನಸಿಂಗ್ ಕೂಡ ಈ ಬಾರಿ ಬಾಂಗ್ಲಾದೇಶದೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಒಂದು ವೇಳೆ, ಬಾಂಗ್ಲಾದೇಶದೊಂದಿಗೆ ಮಧುರ ಮೈತ್ರಿ ಸಾಧ್ಯವಾದರೆ, ಭಾರತಕ್ಕೆ ಅದರಿಂದ ಹಲವು ಉಪಯೋಗಗಳು ಖಂಡಿತ ಇವೆ. ಹಾಗಾಗಿ, ಇಂಥದೊಂದು ಮಸೂದೆಯ ಅಗತ್ಯದ ಪರವಾಗಿ ಈ ಬಾರಿ ಬಿಜೆಪಿ ಕೂಡ ದನಿ ಎತ್ತಲೇಬೇಕಾಗಿದೆ.
ಬಾಂಗ್ಲಾದೇಶ ಹಾಗೂ ಭಾರತದ ನಡುವಣ ಗಡಿ ವಿವಾದದ ಸಮಸ್ಯೆಗೆ 67 ವರ್ಷಗಳ ಸುಧೀರ್ಘ ಇತಿಹಾಸವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷದಿಂದಲೇ ಈ ಗಡಿ ವಿವಾದವೂ ಶುರುವಾಯಿತು ಎಂಬುದು ಹಲವರ ವಾದ. ಈ ವಿಷಯವಾಗಿ ಎರಡೂ ದೇಶಗಳಿಗೆ ಒಪ್ಪಿಗೆಯಾಗುವಂಥ ಸರ್ವಸಮ್ಮತ ನಿರ್ಧಾರಕ್ಕೆ ಬರಲು ದಶಕಗಳ ಹಿಂದೆಯೇ ಶ್ರೀಮತಿ ಇಂದಿರಾಗಾಂಧಿ ಹಾಗೂ ಮುಜಿಬುರ್ ರೆಹಮಾನ್ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಒಬ್ಬರ ನಿಲುವನ್ನು ಮತ್ತೊಬ್ಬರು ಒಪ್ಪದ ಕಾರಣದಿಂದ ಪ್ರತಿ ಸಂದರ್ಭದಲ್ಲಿಯೂ ಮಾತುಕತೆಗಳು ಮುರಿದು ಬೀಳುತ್ತಿದ್ದವು.
ಇವತ್ತಿನ ಸಂದರ್ಭವನ್ನು ಅವಲೋಕಿಸಿದರೆ, ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿ ಮಾಡಿಕೊಂಡರೆ ಅದರಿಂದ ಭಾರತಕ್ಕೆ ಖಂಡಿತ ಹೆಚ್ಚಿನ ಲಾಭವಿದೆ ಅನ್ನಿಸದಿರದು. ಏಕೆಂದರೆ, ಒಂದು ಕಡೆಯಲ್ಲಿ ಚೀನಾ, ಮತ್ತೊಂದು ಕಡೆಯಲ್ಲಿ ಪಾಕಿಸ್ತಾನ ಭಾರತದ ಏಕತೆಗೆ ಭಂಗ ತರಲು ರಣಹದ್ದುಗಳಂತೆ ಕಾದು ನಿಂತಿವೆ. ಇಂಥ ಸಂದರ್ಭದಲ್ಲಿ ಶತ್ರುಗಳು ಭಾರತಕ್ಕೆ ನುಸುಳದಂತೆ ತಡೆಯುವ ರಕ್ಷಣಾ ಗೋಡೆಯಂತೆಯೂ, ಅದೇ ಶತ್ರುಗಳಿಗೆ ರಹಸ್ಯ ಮಾರ್ಗ ತೋರುವ ಸುರಂಗದಂತೆಯೂ ಕಾಣುತ್ತಿದೆ ಬಾಂಗ್ಲಾದೇಶ. ಅಂದರೆ, ಆ ದೇಶದೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಂಡರೆ, ಅದು ಚೀನಾ ಹಾಗೂ ಪಾಕಿಸ್ತಾನದ ಪಾಲಿಗೆ ತಡೆಗೋಡೆಯಾಗುತ್ತದೆ. ಆ ದೇಶದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ಗಟ್ಟಿಯಾಗದೇ ಹೋದರೆ, ಅದೇ ಬಾಂಗ್ಲಾದೇಶದ ಗಡಿಯಿಂದ ಶತ್ರು ಸೈನಿಕರು ಭಾರತಕ್ಕೆ ನುಗ್ಗಿ ಬರುವುದಕ್ಕೆ ಒಂದು ಅವಕಾಶದ ಸಾಧ್ಯತೆಯೂ ಹೆಚ್ಚಾಗುತ್ತದೆ.
ವಾಸ್ತವ ಹೀಗಿರುವಾಗಲೇ, ಗಡಿ ವಿವಾದದ ವಿಷಯವಾಗಿ ಎರಡೂ ರಾಷ್ಟ್ರದ ನಾಯಕರ ಮಧ್ಯೆ ಮಾತುಕತೆ ನಡೆಯಲಿ. ದಶಕಗಳಿಂದಲೂ ಕಗ್ಗಂಟಾಗಿಯೇ ಉಳಿದಿರುವ ಸಮಸ್ಯೆಗೆ ಈ ಬಾರಿಯಾದರೂ ಪರಿಹಾರ ದೊರೆಯಬಹುದೆಂಬ ಸದಾಶಯದ ಮಾತನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೇ ಆಡಿದ್ದಾರೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಹಾಗೂ ಅಫ್ಘಾನಿಸ್ತಾನದೊಂದಿಗೆ ಭಾರತದ ಸಂಬಂಧ ಅಷ್ಟಕಷ್ಟೆ ಎಂಬಂತಿರುವ ಸಂದರ್ಭದಲ್ಲಿ, ಭಾರತದೊಂದಿಗೆ ಮಧುರಮೈತ್ರಿ ಹೊಂದುವ ಮಾತುಗಳನ್ನು ಶೇಖ್ ಹಸೀನಾ ಆಡಿದ್ದಾರೆ ಎಂಬುದು ಗಮನಾರ್ಹ. ಇಂಥದೊಂದು ಮಹತ್ವದ ಮಾತುಕತೆ ನಡೆದ ಸಂದರ್ಭದಲ್ಲಿಯೇ ತೀಸ್ತಾ ನದಿ ನೀರಿನ ಹಂಚಿಕೆ ವಿಷಯವೂ ಚರ್ಚೆಯಾಗಿ ಅದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆಯಬೇಕು ಎಂಬುದೂ ಹಸೀನಾ ಅವರ ಮಾತಿನಲ್ಲಿರುವ ಮತ್ತೊಂದು ಪ್ರಮುಖ ಅಂಶ.
ಈಗ ಎಲ್ಲರಿಗೂ ಗೊತ್ತಿರುವಂತೆ, ಸಾಕಷ್ಟು ಪ್ರಬಲವಾಗಿರುವ ಮುಸ್ಲಿಂ ರಾಷ್ಟ್ರಗಳ ಪೈಕಿ ಬಾಂಗ್ಲಾದೇಶ ಕೂಡ ಒಂದು. ಆ ದೇಶದಿಂದ ಈವರೆಗೂ ಯಾವುದೇ ತೊಂದರೆಯೂ ಭಾರತಕ್ಕೆ ಎದುರಾಗಿಲ್ಲ. ಹಾಗಾಗಿ, ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಮುಂದಾದರೆ ಅದರಿಂದ ಎರಡು ರಾಷ್ಟ್ರಗಳ ನಡುವಣ ಸಂಬಂಧ ಗಟ್ಟಿಯಾಗಿ, ಕೆಲವೊಂದು ಆರ್ಥಿಕ ಪುನಶ್ಚೇತನದ ಯೋಜನೆಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ದೇಶದ ರಕ್ಷಣೆಗೆ ಬಾಂಗ್ಲಾದೇಶ ಪರೋಕ್ಷವಾಗಿ ನೆರವಾಗುತ್ತದೆ. ಸಂದರ್ಭ ಹೀಗಿರುವಾಗ, ದೂರದೃಷ್ಟಿ ಹೊಂದಿದ ನಾಯಕರು ಮಾಡಲೇಬೇಕಾದ ಮುಖ್ಯ ಕೆಲಸವೆಂದರೆ- ಬಾಂಗ್ಲಾದೇಶದೊಂದಿಗೆ ಮಾತುಕತೆಗೆ ಮುಂದಾಗುವುದು ಅಧಿಕಾರದಿಂದ ನಿರ್ಗಮಿಸುವ ಮುನ್ನ ಮಾಡುತ್ತಿರುವ ಒಂದು ಒಳ್ಳೆಯ ಕೆಲಸ ಎಂಬಂತೆ, ಯುಪಿಎ ಸರ್ಕಾರವು ಬಾಂಗ್ಲಾದೇಶದೊಂದಿಗೆ ಮಾತುಕತೆಗೆ ಮುಂದಾಗಲು, ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲು ನಿರ್ಧರಿಸಿದೆ. ಇಂಥದೊಂದು ಮಾತುಕತೆ ಸಾಧ್ಯವಾಗಬೇಕಾದರೆ ಮೊದಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಬೇಕು. ಅದಕ್ಕೆ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಸೇರಿದಂತೆ ಹೆಚ್ಚಿನ ಸದಸ್ಯರ ಬೆಂಬಲ ದೊರೆಯಬೇಕು.
ಯಾವ ದಿಕ್ಕಿನಿಂದ ನೋಡಿದರೂ ಬಾಂಗ್ಲಾದೇಶದೊಂದಿಗೆ ಭೂಗಡಿ ಒಪ್ಪಂದ ಮಾಡಿಕೊಳ್ಳುವ ಮಸೂದೆಯನ್ನು ಬೆಂಬಲಿಸುವುದರಿಂದ ದೇಶದ ಸಮಗ್ರತೆ ಕಾಪಾಡಿಕೊಳ್ಳಲು ಹಾಗೂ ರಕ್ಷಣೆಗೆ ಹೊಸದೊಂದು ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ, ಇದೊಂದು ಸಂದರ್ಭದಲ್ಲಿ ಮಾತ್ರ ಯುಪಿಎ ಸರ್ಕಾರದ ನಿಲುವನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಮತ್ತು ತುರ್ತು, ಭಾರತೀಯ ಜನತಾಪಕ್ಷಕ್ಕೂ ಇದೆ. ಈ ಸೂಕ್ಷ್ಮ ಹಾಗೂ ಸರಳ ಸತ್ಯವನ್ನು ಬಿಜೆಪಿಯ ಎಲ್ಲ ನಾಯಕರೂ ಅರ್ಥ ಮಾಡಿಕೊಳ್ಳಬೇಕಾಗಿದೆ.
- ಸಿ. ರಾಜಮೋಹನ್
anisikeprabha@gmail.com