ನಮ್ಮ ಆರ್ಥಿಕ ಬೆಳವಣಿಗೆಯ ಯಂತ್ರಗಳನ್ನು ಕೊಂದ ಯುಪಿಎ!
ಹಿಂದಿನ ದಶಕದ ಮಧ್ಯಭಾಗದಲ್ಲಿ 8 ಪ್ರತಿಶತದಿಂದ 5.5 ಪ್ರತಿಶತಕ್ಕೆ ಕುಸಿದಿದ್ದ ಭಾರತದ ಆರ್ಥಿಕ ಬೆಳವಣಿಗೆಯ ಪ್ರಮಾಣ, ಈ ಹಣಕಾಸು ವರ್ಷದಲ್ಲಿ 5 ಪ್ರತಿಶತಕ್ಕಿಂತಲೂ ಕೆಳಗಿಳಿಯುವ ಸಂಭವವಿದೆ. ಸರ್ಕಾರ ಮತ್ತು ಅರ್ಥಶಾಸ್ತ್ರಜ್ಞರು ಈ ಕುಸಿತಕ್ಕೆ ಅನೇಕ ಕಾರಣಗಳನ್ನು ಕೊಡುತ್ತಾರೆ. ಜಾಗತಿಕ ಮಂದಗತಿ, ಭೂ ಸ್ವಾಧೀನದಲ್ಲಿನ ತಡವಾದ ನಿರ್ಧಾರಗಳು ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಪರವಾನಗಿ ನೀಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಾರೆ.
ಭಾರತದ ಸಮಗ್ರ ದೇಶೀಯ ಉತ್ಪನ್ನ(ಜಿಡಿಪಿ)ದಲ್ಲಿ ಸೇವಾ ಕ್ಷೇತ್ರಗಳ ಪಾಲು 65 ಪ್ರತಿಶತದಷ್ಟಿದೆ. 'ಸೇವಾ ಕ್ಷೇತ್ರಗಳು' ಎಂಬ ಪದ ಕೇಳುತ್ತಿದ್ದಂತೆ ನಮಗೆ ತಟ್ಟನೆ ನೆನಪಾಗುವುದು ಇನ್ಫೋಸಿಸ್ ಮತ್ತು ವಿಪ್ರೋದಂಥ ಐಟಿ ಕಂಪನಿಗಳು. ವಾಸ್ತವಿಕವಾಗಿ ಎಲ್ಲಾ ಸಾಫ್ಟವೇರ್ ಸಂಬಂಧಿತ ಚಟುವಟಿಕೆಗಳು ಬರುವುದು ಉದ್ಯಮ ಸೇವೆಗಳಡಿಯಲ್ಲಿ. ನಮ್ಮ ಜಿಡಿಪಿಯಲ್ಲಿ ಇವುಗಳ ಪಾಲು 5 ಪ್ರತಿಶತಕ್ಕಿಂತಲೂ ಕಡಿಮೆಯಿದೆ. ಇನ್ನು ಸೇವಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಚಟುವಟಿಕೆಗಳೆಂದರೆ ವ್ಯಾಪಾರ, ಹೊಟೆಲ್-ರೆಸ್ಟೊರೆಂಟ್ಗಳು, ಸಾರಿಗೆ(ಖಾಸಗಿ ಪ್ರವಾಸಿ ಸಾರಿಗೆಗಳನ್ನೊಳಗೊಂಡು), ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್, ರಿಯಲ್ ಎಸ್ಟೇಟ್ ಮತ್ತು ವಾಸದ ಮಾಲೀಕತ್ವ, ಸಾರ್ವಜನಿಕ ಆಡಳಿತ ಮತ್ತು ರಕ್ಷಣೆ, ಆರೋಗ್ಯ-ವೈದ್ಯಕೀಯ, ಧಾರ್ಮಿಕ ಸಂಬಂಧಿ ಸೇವೆಗಳು ಮತ್ತು ಮನರಂಜನಾ ಕ್ಷೇತ್ರಗಳು ಇತ್ಯಾದಿ.
ಈ ವಲಯ, ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು ರಸ್ತೆ ಬದಿಯ ವ್ಯಾಪಾರಿಗಳನ್ನೂ ಒಳಗೊಂಡಿದೆ. ದೇಶದ ಜಿಡಿಪಿಯಲ್ಲಿ ಈ ಸೇವಾ ಕ್ಷೇತ್ರದ ಪಾಲು ಬಹಳ ಹೆಚ್ಚು. 2004-05ರಲ್ಲಿ 60 ಪ್ರತಿಶತದಿಂದ 65 ಪ್ರತಿಶತಕ್ಕೇರಿದ್ದ ಸೇವಾ ಕ್ಷೇತ್ರದ ಜಿಡಿಪಿಯಲ್ಲಿನ ಪಾಲು, 2011-12ರ ವೇಳೆಗೆ ಇನ್ನೂ 17 ಪ್ರತಿಶತ ಹೆಚ್ಚಳ ಕಂಡಿತು. ಕಳೆದ ಏಳು ವರ್ಷಗಳಲ್ಲಿ ಸಮಗ್ರ ದೇಶೀಯ ಉತ್ಪನ್ನದಲ್ಲಿ ಅತಿಹೆಚ್ಚು ಪಾಲು ಹೊಂದಿರುವ ಮತ್ತು ದೇಶದ ಬೆಳವಣಿಗೆಗೆ ಅತಿಹೆಚ್ಚು ಸಹಕಾರಿಯಾಗಿರುವ ವಲಯವಿದು.
ಇನ್ನು ಸೇವಾ ಕ್ಷೇತ್ರಗಳಲ್ಲಿ 1) ನಿರ್ಮಾಣ 2) ವ್ಯಾಪಾರ 3) ಹೊಟೆಲ್ ಮತ್ತು ರೆಸ್ಟೋರೆಂಟ್ಗಳು 4)ರೈಲ್ವೇಯೇತರ ಸಾರಿಗೆ 5) ವ್ಯಾಪಾರಿ ಸೇವೆಗಳು ಮತ್ತು ಇನ್ನುಳಿದ ಕ್ಷೇತ್ರಗಳಿಂದ ಅತಿ ಹೆಚ್ಚು ಲಾಭವಿದೆ. ಇನ್ನು ಅವುಗಳಲ್ಲೂ ಕಂಪನಿಯೇತರ ವಲಯಗಳದ್ದೇ (ಮುಖ್ಯವಾಗಿ ಪಾಲುದಾರಿಕೆ/ಒಡೆತನ) ಮೇಲುಗೈ. 'ಅಸಂಘಟಿತ' ಎಂದು ಕರೆಸಿಕೊಳ್ಳುವ ಈ ಕ್ಷೇತ್ರಗಳು 2010-11ರಲ್ಲಿ ರೈಲ್ವೇಯೇತರ ಸಾರಿಗೆಯಲ್ಲಿ 80 ಪ್ರತಿಶತ ಮತ್ತು ಹೊಟೆಲ್ ಮತ್ತು ರೆಸ್ಟೋರೆಂಟ್ ವ್ಯಾಪಾರದಲ್ಲಿ 77 ಪ್ರತಿಶತ ಪಾಲು ಹೊಂದಿವೆ. ಅಸಂಘಟಿತ ವಲಯ, ಉತ್ಪಾದನೆ ಮತ್ತು ಸೇವಾ ವ್ಯವಹಾರಗಳಲ್ಲಿ(ಸಣ್ಣ ಮತ್ತು ಮಧ್ಯಮ) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಅಸಂಘಟಿತ ವಲಯ ಗಮನಾರ್ಹ ಕುಸಿತ ಕಂಡಿದೆ. 2004/05 ರಿಂದ 2007/08ರ ನಡುವೆ ಶೇ. 10ರಷ್ಟಿದ್ದ ಅಸಂಘಟಿತ ಉತ್ಪಾದನೆಯ ಪ್ರಮಾಣ 2012ರ ವೇಳೆಗೆ 4 ಪ್ರತಿಶತಕ್ಕೆ ಕುಸಿದಿದೆ.
ಇನ್ನು ನಿರ್ಮಾಣ ಕ್ಷೇತ್ರದ ಹಣೆಬರಹವೂ ಭಿನ್ನವಾಗಿಲ್ಲ. ನಿಜ ಹೇಳಬೇಕೆಂದರೆ, ಯುಪಿಎ-2ರ ಅವಧಿಯಲ್ಲಿ ನಮ್ಮ ಜಿಡಿಪಿಗೆ ಭಾರೀ ಹೊಡೆತ ಬಿದ್ದಿದೆ. ಎನ್ಡಿಎ ಸರ್ಕಾರದ ವೇಳೆಯ ಬೆಳವಣಿಗೆಯಿಂದಾಗಿ ಯುಪಿಎ-1 ಅವಧಿಯಲ್ಲಿ ಹೆಚ್ಚು ತೊಂದರೆಗಳು ಆ ಸರ್ಕಾರಕ್ಕೆ ಎದುರಾಗಿರಲಿಲ್ಲ. ಅಸಂಘಟಿತ ಕ್ಷೇತ್ರಗಳಿಗೆ ನೀಡಲಾಗುವ ಬ್ಯಾಂಕ್ ಸಾಲಗಳನ್ನು ಗೃಹೋಪಯೋಗಿ ವಲಯದ (ಪಾಲುದಾರಿಕೆ, ಅಸೋಷಿಯೇಷನ್ಗಳು, ಕ್ಲಬ್ಗಳು, ಸೊಸೈಟಿಗಳು, ಮಂಡಳಿಗಳು, ಗುಂಪುಗಳು, ವ್ಯಕ್ತಿ ಮತ್ತು ಗುಂಪಿಗೆ ನೀಡಲಾಗುವ ಸಾಲ)ಸಾಲಿಗೆ ಸೇರಿಸಿದೆ ನಮ್ಮ ಆರ್ಬಿಐ. 2004ರಲ್ಲಿ, ಬ್ಯಾಂಕ್ ಸಾಲದಲ್ಲಿ 48 ಪ್ರತಿಶತದಷ್ಟಿದ್ದ ಈ ವಲಯದ ಸಾಲದ ಪ್ರಮಾಣ, ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 33 ಪ್ರತಿಶತಕ್ಕೆ ಕುಸಿಯಿತು. ಅಂದರೆ ಬ್ಯಾಂಕ್ ಸಾಲ ಪಡೆಯುವಲ್ಲಿ ಇವರೆಲ್ಲ ಹಿಂದೇಟು ಹಾಕುತ್ತಿದ್ದಾರೆ ಅಥವಾ ವಿಫಲರಾಗುತ್ತಿದ್ದಾರೆ ಎಂದರ್ಥ. ಆದರೆ ಕಾರ್ಪೊರೇಟ್ ವಲಯಗಳು ಮತ್ತು ಸರ್ಕಾರ, ಬ್ಯಾಂಕ್ಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಸಾಲ ಪಡೆಯತೊಡಗಿವೆ. ಕಾರ್ಪೊರೇಟ್ ವಲಯಗಳ ಸಾಲದ ಪ್ರಮಾಣ 30 ಪ್ರತಿಶತದಿಂದ 49 ಪ್ರತಿಶತಕ್ಕೆ ಏರಿದ್ದರೆ, ಸರ್ಕಾರದ್ದು 10 ರಿಂದ 20 ಪ್ರತಿಶತಕ್ಕೆ ತಲುಪಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಮ್ಮ ಸಮಗ್ರ ದೇಶೀಯ ಉತ್ಪನ್ನದಲ್ಲಿ 15 ಪ್ರತಿಶತಕ್ಕಿಂತಲೂ ಕಡಿಮೆ ಪಾಲು ಹೊಂದಿರುವ ಕಾರ್ಪೊರೇಟ್ ಕಂಪನಿಗಳು ಬ್ಯಾಂಕ್ಗಳ ಅರ್ಧದಷ್ಟು ಸಾಲವನ್ನು ತಾವೇ ಪಡೆಯುತ್ತಿವೆ ಎನ್ನುವುದನ್ನು. ಹಾಗೆ ನೋಡಿದರೆ, ದೇಶೀಯ ಉತ್ಪನ್ನ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಸಂಘಟಿತ ಕ್ಷೇತ್ರಕ್ಕೇ ಹೆಚ್ಚು ಸಾಲ ಸಿಗಬೇಕು. ಬ್ಯಾಂಕುಗಳಿಂದ ಸಾಲ ಸಿಗದ ಕಾರಣ ಅವರು ಖಾಸಗಿ ಬಡ್ಡಿ ವ್ಯವಹಾರ ನಡೆಸುವವರಿಂದ ಸಾಲ ಪಡೆಯುತ್ತಿದ್ದಾರೆ.
ಸರಳವಾಗಿ ಹೇಳಬೇಕೆಂದರೆ, ದೇಶದ ಆರ್ಥಿಕತೆಗೆ ಅತಿ ಹೆಚ್ಚು ಕೊಡುಗೆ ಕೊಡುತ್ತಿರುವ ವಲಯಕ್ಕೇ ಇಂದು ಸಾಲದ ರೂಪದಲ್ಲಿ ಸಹಾಯ ದೊರಕುತ್ತಿಲ್ಲ. ಬದಲಾಗಿ ಬ್ಯಾಂಕ್ ಸಾಲವನ್ನು ಬೇಕಾಬಿಟ್ಟಿ ಬಳಸುವ ಬಂಡವಾಳಶಾಹಿಗಳಿಗೆ ಅತಿ ಹೆಚ್ಚು ಸಾಲ ದೊರೆಯುತ್ತದೆ! ಇದರಿಂದ ಒಂದಂತೂ ಸ್ಪಷ್ಟವಾಗುತ್ತದೆ, ನಮ್ಮ ಬ್ಯಾಂಕಿಂಗ್ ವಲಯದಲ್ಲಿ ಏನೋ ಗಂಭೀರವಾದ ಲೋಪವಿದೆ. ಅದರಲ್ಲೂ ಮುಖ್ಯವಾಗಿ ಸಾಲ ಕೊಡುವ ವಿಷಯದಲ್ಲಿ. ಅತಿ ವೇಗವಾಗಿ ಬೆಳೆಯುತ್ತಿರುವ ವಲಯಕ್ಕೆ ಬ್ಯಾಂಕ್ಗಳು ಸಹಾಯ ಮಾಡುವುದಿಲ್ಲ ಎಂದರೆ ಏನರ್ಥ?
ಒಂದು ಅಂದಾಜಿನ ಪ್ರಕಾರ, 2010/ 2011ರ ವೇಳೆಗೆ ಚಿಲ್ಲರೆ ವ್ಯಾಪಾರಿಗಳ ಶೇ. 70 ರಷ್ಟು ಹಣದ ಬೇಡಿಕೆಗಳನ್ನು ಈಡೇರಿಸಿದ್ದು ಖಾಸಗಿ ಬಡ್ಡಿ ವ್ಯಾಪಾರಿಗಳು ಮತ್ತು ಚೀಟಿ ವ್ಯವಹಾರಗಳು. ಇನ್ನು ಚಿಕ್ಕ ವ್ಯಾಪಾರಿಗಳು ಸಾಲಕ್ಕಾಗಿ ಹೆಚ್ಚಾಗಿ ಅಡವಿಡುವುದು ಚಿನ್ನವನ್ನು. ಬ್ಯಾಂಕ್ಗಳಿಂದ ಸಾಲ ದೊರಕದೇ ಇರುವುದರಿಂದ ಅವರು ಚಿನ್ನಕ್ಕೆ ಹೆಚ್ಚಾಗಿ ಮೊರೆ ಹೋಗಿದ್ದಾರೆ, ಆದರೆ ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್ಐಐ) ಮತ್ತು ವಿದೇಶಿ ನೇರ ಬಂಡವಾಳ(ಎಫ್ಡಿಐ) ನಮಗೆ ಅನ್ನ ಲಕ್ಷಿಯಂತೆ, ಅವುಗಳಿಂದಲೇ ನಾವು ಬದುಕುತ್ತಿದ್ದೇವೆ ಎನ್ನುವ ಸುಳ್ಳು ಕತೆಯನ್ನು ನಮಗೆಲ್ಲ ಹೇಳಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಹೂಡಿಕೆಯ ಅವಶ್ಯಕತೆಗಳಲ್ಲಿ ಇವೆರಡರ ಪಾಲು ಕೇವಲ 6 ಮತ್ತು 8 ಪ್ರತಿಶತದಷ್ಟೇ ಇತ್ತು. ನಮ್ಮ ವಿತ್ತ ಸಚಿವರು ಕಿರಾಣಿ ಅಂಗಡಿಗಳ ಅವಶ್ಯಕತೆಗಳನ್ನು ಪೂರೈಸುವ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ನ್ಯೂಯಾರ್ಕ್ ಮತ್ತು ಟೋಕಿಯೋಗಳಿಗೆ ಓಡಿಹೋಗಿ ಎಫ್ಐಐ ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ.
ಕಿರಾಣಿ ವ್ಯಾಪಾರಿಗಳು, ಉಡುಪಿ ಹೊಟೆಲ್ಗಳು, ಕ್ಷೌರಿಕರು, ಕೊಳಾಯಿಗಾರರು, ಮತ್ತು ಅಲ್ಪಾವಧಿಯ ಕಾಂಟ್ರಾಕ್ಟರ್ಗಳು ಯೋಗ್ಯವಾದ ದರದಲ್ಲಿ ಸಾಲ ಬೇಕೆಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಅವರ ನೋವನ್ನು ಕೇಳಿಸಿಕೊಳ್ಳುವುದಕ್ಕೆ ಸಮಯವಿಲ್ಲ! ನಮ್ಮ ಆರ್ಥಿಕ ಪ್ರಗತಿಯ ನಿಜವಾದ ಯಂತ್ರಗಳುಈ ಚಿಕ್ಕ ಪುಟ್ಟ ವ್ಯಾಪಾರಿಗಳೇ. ಅವರ ಕುತ್ತಿಗೆ ಹಿಚುಕಿದಾಗ, ಆರ್ಥಿಕ ಕುಸಿತ ಅಥವಾ ಮಂದಗತಿಯ ಬೆಳವಣಿಯಾಗದೆ ಮತ್ತೇನಾದೀತು? ಲಂಚ ಮತ್ತು ಸಾಲದ ಕೊರತೆ ಅಸಂಘಟಿತ ಕ್ಷೇತ್ರಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ, ಇದಕ್ಕೆ ಪರಿಹಾರ ನ್ಯೂಯಾರ್ಕ್ ಅಥವಾ ಪ್ಯಾರಿಸ್ನಲ್ಲಿಲ್ಲ, ಬದಲಾಗಿ ಸಾಲದ ಕೊರತೆಯಿಂದ ಬಳಲುತ್ತಿರುವ ಉತ್ಪಾದನಾ ವಲಯಗಳಲ್ಲಿದೆ. ಹಾರ್ವರ್ಡ್ ಅಥವಾ ವಾರ್ಟ್ನ್ನ ಕನ್ನಡಕವನ್ನು ಧರಿಸದೆ ಈ ಸತ್ಯವನ್ನು ನಾವು ನೋಡಬೇಕಿದೆ!
ಇದಕ್ಕೆ ಪರಿಹಾರವೆಂದರೆ, ಬ್ಯಾಂಕಿಂಗ್ನಿಂದ ಹೊರತಾದ ಹಣಕಾಸು ವಲಯವೊಂದನ್ನು ಸೃಷ್ಟಿಸುವುದಕ್ಕೆ ಅಭಿವೃದ್ಧಿ ಪ್ರಾಧಿಕಾರವೊಂದನ್ನು ಸ್ಥಾಪಿಸುವುದು ಮತ್ತದನ್ನು ಆರ್ಬಿಐ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವರ್ಗದ ಹಿಡಿತದಿಂದ ದೂರವಿಡುವುದು. ಈ ಹಣಕಾಸು ವಲಯದ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ ಆರ್ಥಿಕತೆಯಲ್ಲಿನ ಪಾಲುದಾರಿಕೆ ಮತ್ತು ಮಾಲೀಕತ್ವದ ವಲಯಗಳಿಗೆ ಸಾಲ ಕೊಡುವ ನಿಟ್ಟಿನಲ್ಲಿ ಗಮನಹರಿಸಬೇಕು ಮತ್ತು ಕುತ್ತಿಗೆ ಹಿಚುಕುವಂತಹ ನಿಯಮಗಳನ್ನು ಹೇರದಂತೆ ಎಚ್ಚರಿಕೆ ವಹಿಸಬೇಕು.
ವಿದೇಶದ ಹಿತಕರ ವಾತಾವರಣದಲ್ಲಿ ಪರಿಹಾರ ಹುಡುಕುತ್ತಿರುವ ನಮ್ಮ ಮಂತ್ರಿಗಳು ಮತ್ತು ನಾಯಕರು ತಮ್ಮ ಗಮನವನ್ನು ಭಾರತದೊಳಗೆ ಹರಿಸುವರೇ?
- ಪ್ರೊ. ಆರ್. ವೈದ್ಯನಾಥನ್
vaidya@IIMB.ERNET.IN