ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಓಟ್ ಬ್ಯಾಂಕ್ ಗೆಲ್ಲಲು ಒಡೆದು ಆಳುವ ಕಾಂಗ್ರೆಸ್

Srinivasa Murthy VN
Updated On : 27 Aug 2013, 12:17 pm

ಅಪರಾಧಿಗಳ ವಿಷಯದಲ್ಲಿ ಜಾತಿ ಭೇದ ತರುವುದು ತರವಲ್ಲ. ಹಿಂದುಗಳಾದರೇನು? ಮುಸ್ಲಿಮರಾದರೇನು? ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಅಪರಾಧಿಯೇ. ಒಂದು ಕೋಮಿಗೆ ಸಹಾನುಭೂತಿ ತೋರಿಸಿ, ಇನ್ನೊಂದನ್ನು ಕಡೆಗಣಿಸುವ ಬದಲು ಸರ್ವರೂ ಸಮಾನರೆಂದು ನೋಡುವುದನ್ನು ಕಲಿಯಬೇಕು.

"ಮುಸ್ಲಿಂ ಕೈದಿಗಳಿಗೆ ಮಮಕಾರ ತೋರುವುದು ಕೋಮುವಾದವಲ್ಲವೇ?" ಎಂದು ಆಗೀಗ ಅಂಕಣದಡಿಯಲ್ಲಿ ವಿನಾಯಕ ಭಟ್ ಮೂರೂರೂರವರು, ಈ ದೇಶದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಅವರಿಗೆ ತಾರತಮ್ಯ ಮಾಡುವ ಕೇಂದ್ರ ಸರ್ಕಾರದ ನೀತಿಯ ಕುರಿತಾಗಿ ಬರೆದಿದ್ದಾರೆ. ಕೇಂದ್ರ ಸರ್ಕಾರ, ಜೈಲಿನಲ್ಲಿರುವ ಮುಸ್ಲಿಂ ಕೈದಿಗಳಿಗೆ ಔದಾರ್ಯ ತೋರಲು ಮುಂದಾಗಿರುವ ಬಗ್ಗೆ ಲೇಖಕರು ಪ್ರತಿಕ್ರಿಯಿಸಿರುವ ವಿಚಾರದ ಕುರಿತಾಗಿ ನಾನೊಬ್ಬ ಮುಸ್ಲಿಂ ಆಗಿ, ಅಲ್ಪಸಂಖ್ಯಾತರಲ್ಲಿರುವ ಕೆಲವು ಆಗುಹೋಗುಗಳ ಬಗ್ಗೆ ತಿಳಿಸಲು ಇಚ್ಛಿಸುತ್ತೇನೆ. ನಾನು ಚಿತ್ರದುರ್ಗದ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವಾರ ಬೆಂಗಳೂರಿನ 'ಅಜಿತ್‌' ಎಂಬ ಏಕಾಂಗಿ ಪ್ರವಾಸಿ ಕೋಟೆ ಟಿಕೆಟ್ ಪಡೆದು ಒಳಪ್ರವೇಶಿಸಿದರು. ಕೋಟೆಯ ಇತಿಹಾಸ ತಿಳಿಯಲು ಇಚ್ಛಿಸಿದ ಅವರಿಗೆ ಸಹಾಯ ಮಾಡಲು ನಾನು ರೆಡಿಯಾದೆ. ಸಂಪೂರ್ಣ ಕೋಟೆ ಮಾಹಿತಿಯನ್ನು ಅವರಿಗೆ ನೀಡಿದೆ. ಕೊನೆಗೆ ಕೋಟೆಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಸಕಡ್ಡಿಯನ್ನು ನೋಡಿ 'ಹೊರ ರಾಷ್ಟ್ರಗಳಲ್ಲಿ ಹೀಗಿಲ್ಲ' ಎಂದು ಮರುಗಿದರು. ತಕ್ಷಣವೇ  'ನಿಮಗೆ ವಿಶ್ವೇಶ್ವರಭಟ್ ಗೊತ್ತಾ?' ಎಂದರು. ಗೊತ್ತು, ಅವರು ಕನ್ನಡಪ್ರಭದ ಸಂಪಾದಕರೆಂದೆ. ಆಗ ಅವರು "ವಿಶ್ವೇಶ್ವರಭಟ್ಟರು 'ರವಾಂಡಾ ಡೈರಿ' ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆದಿದ್ದಾರೆ" ಎಂದರು. ನನಗೆ ಖಂಡಿತ ಅದರ ಅರಿವು ಇರಲಿಲ್ಲ. ಅಜಿತ್ ಹೇಳಿದರು.
"ಆಫ್ರಿಕಾ ಖಂಡದಲ್ಲಿರುವ ರವಾಂಡ ದೇಶದಲ್ಲಿ ಬಹು ಸಂಖ್ಯಾತರಾದ 'ಹುಟು' ಮತ್ತು ಅಲ್ಪಸಂಖ್ಯಾತರಾದ 'ತುಟ್ಸಿ' ಜನಾಂಗದವರಿದ್ದಾರೆ. ಬೆಲ್ಜಿಯನ್ನರು ಅಲ್ಪಸಂಖ್ಯಾತರಾದ ತುಟ್ಸಿಗಳ ಸಹಾಯ ಪಡೆದು ಈ ಭಾಗವನ್ನು ಆಳತೊಡಗಿದರು. ಆಯಕಟ್ಟಿನ ಜಾಗಗಳಲ್ಲಿ ಕುಳಿತು ಬಹುಸಂಖ್ಯಾತರಾದ ಹುಟುಗಳ ವಿರುದ್ಧ ದಂಗೆ ಏಳಲು ತುಟ್ಸಿಗಳಿಗೆ ಪ್ರೇರೇಪಿಸಿದರು. ಇವೆರಡೂ ಜನಾಂಗದ ಮಧ್ಯೆ ವೈಮನಸ್ಸು ಮೂಡುವಂತೆ ಮಾಡಿದರು. ಕೊನೆಗೆ ಆ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟರೂ ತುಟ್ಸಿಗಳ ಮತ್ತು ಹುಟುಗಳ ಮನಸ್ಸುಗಳು ಒಂದಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ನಂತರದ ದಿನಗಳಲ್ಲಿ ಹುಟುಗಳು ಅಧಿಕಾರಕ್ಕೆ ಬಂದರು. ಆಗ ಹಿಂದಾದದ್ದಕ್ಕೆ ಪ್ರತೀಕಾರವಾಗಿ ತುಟ್ಸಿಗಳ ವಿರುದ್ಧ ಸಮರ ಸಾರಿದರು. ನಂತರ ತುಟ್ಸಿಗಳು ಬೆಲ್ಜಿಯನ್ನರ ಸಹಾಯದಿಂದ ಹುಟುಗಳ ವಿರುದ್ಧ ಹೊಡೆದಾಡಿದಾಗ ಒಂದೇ ತಿಂಗಳಲ್ಲಿ ಹತ್ತು ಲಕ್ಷ ನರಮೇಧ ಅಲ್ಲಿ ಆಯಿತು. ಆದರೆ ಈಗಲ್ಲಿ ಯಾವುದೇ ಜನಾಂಗದ ನಡುವೆ ಜಗಳವಿಲ್ಲ, ಹೋರಾಟವಿಲ್ಲ. ರವಾಂಡಾ ಶಾಂತಿ ನೆಮ್ಮದಿಯ ತಾಣವಾಗಿದೆ" ಎಂದು ಹೇಳಿದಾಗ ಈ ಕಥಾನಕ ಕೇಳಿ ನನ್ನ ಮೈ ಜುಂ ಅಂದಿತು. ನಮ್ಮಲ್ಲಿ ಬ್ರಿಟಿಷರಂತೆ, ರವಾಂಡಾದಲ್ಲಿ ಬೆಲ್ಜಿಯನ್ನರು ಒಡೆದು ಆಳುವ ನೀತಿಯನ್ನು ಅನುಸರಿಸಿದರು.  ಕಾಂಗ್ರೆಸ್ ಪಕ್ಷ ಕಟ್ಟಲು ಮುಂದಾದಾಗ ಬ್ರಿಟಿಷರು- 'ಕಾಂಗ್ರೆಸ್‌ನಲ್ಲೆಲ್ಲ ಹಿಂದುಗಳಿದ್ದಾರೆ, ಅವರ ವಿರುದ್ಧವಾಗಿ ನೀವೇ ಒಂದು ಪಕ್ಷ ಕಟ್ಟಿ' ಎಂದು ಸೈಯದ್ ಅಹಮದ್‌ರಿಗೆ ಪುಸಲಾಯಿಸಿದರು. 'ಮುಸ್ಲಿಂ ಲೀಗ್‌' ಅನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟಿದವರು ಬ್ರಿಟಿಷರು. ಅಲಿಘಡ್‌ನಲ್ಲಿ ಮುಸ್ಲಿಂ ಯೂನಿವರ್ಸಿಟಿ ಕಟ್ಟಿದವರೇ ಸರ್ ಸೈಯದ್ ಅಹಮದ್. ಹಾಗೆಯೇ ಹೋರಾಟಗಳಲ್ಲಿ ಹಿಂದುಗಳ ಶಸ್ತ್ರಾಸ್ತ್ರಗಳಿಗೆ ದನದ ಕೊಬ್ಬನ್ನು ಸವರಿ, ಮಸೀದಿಗಳಲ್ಲಿ ಹಂದಿ ಮಾಂಸದ ತುಂಡುಗಳನ್ನು ಎಸೆದು ಹಿಂದು- ಮುಸ್ಲಿಮರ ನಡುವೆ ಒಡಕು ತಂದರು. ಇದು ಯಾರಿಗೆ ತಾನೇ ಗೊತ್ತಿಲ್ಲ? ಈಗ ನಮ್ಮ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೂ ಇಂಥದ್ದೇ ಧೋರಣೆ ತಾಳಿದೆಯೇನೋ ಎಂದು ಭಾಸವಾಗುತ್ತಿದೆ. ಜೈಲಿನಲ್ಲಿರುವ ಕೈದಿಗಳೆಂದರೆ ತಪ್ಪು ಮಾಡಿದವರೆಂದೇ ಅರ್ಥ.  ನ್ಯಾಯಾಲಯವೇ ಈ ಕುರಿತು ತೀರ್ಮಾನ ಕೈಗೊಂಡಿರುತ್ತದೆ. ಇಲ್ಲಿ ವರ್ಣಭೇದ, ಜಾತಿ ಭೇದ ತರುವುದು ತರವಲ್ಲ. ಹಿಂದುಗಳಾದರೇನು? ಮುಸ್ಲಿಮರಾದರೇನು? ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಅಪರಾಧಿಯೇ. ಓಟ್ ಬ್ಯಾಂಕ್ ಆಸೆಗೆ ಬಿದ್ದು ಸರ್ಕಾರ ಈ ರೀತಿ ಯೋಚಿಸುತ್ತಿರುವುದು ಘೋರ ಅಪರಾಧವೇ ಸರಿ. ಆ ವಿಷಯವೇನಿದ್ದರೂ ಕೋರ್ಟಿಗೆ ಸಂಬಂಧಪಟ್ಟಿದ್ದು. ನ್ಯಾಯಾಂಗಕ್ಕೆ ವಿರುದ್ಧವಾಗಿ, ಕಾರ್ಯಾಂಗ ಮತ್ತು ಶಾಸಕಾಂಗಗಳು ನಡೆದುಕೊಳ್ಳುವುದು ಸರಿಯೇ?
ಇನ್ನು ನಮ್ಮ ಕೋಮಿನ ಕೆಲವರು ಮಾಡುವ ಮೂಲಭೂತ ತಪ್ಪೆಂದರೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಗೆದ್ದಾಗ ಪಟಾಕಿ ಹಚ್ಚೋದು, ಆ ದೇಶದ ಬಾವುಟಗಳನ್ನು ಭಾರತದಲ್ಲಿ ಹಾರಿಸುವುದು ಇತ್ಯಾದಿ. ಈ ರೀತಿ ಮಾಡುವುದು ಸರಿಯಲ್ಲ. ಸರ್ವ ಜಗತ್ತಿಗೆ ಇಸ್ಲಾಂ ಧರ್ಮದ ನೀತಿ ಒಂದೇ ಆಗಿದೆ. ಧರ್ಮಾಂಧ ಕಾರ್ಯಗಳಿಗೆ ಕುರಾನ್‌ನಲ್ಲಿ ಜಾಗವಿಲ್ಲದಿದ್ದರೂ ಕಳ್ಳತನ, ದರೋಡೆ, ಅಮಾನವೀಯ ಕೃತ್ಯಗಳನ್ನು ಎಸಗಿ "ಏಕ್ ದಿನ್‌ಕಾ ಸುಲ್ತಾನ್ ಆಗಲು ಅರ್ಧ ರೊಟ್ಟಿಯಲ್ಲಿ ಹೈದ್ರಾಬಾದ್ ಕಾಣಲು ಹೋದವರಿಗೆ" ಜೈಲೇ ಗತಿಯಲ್ಲವೇ? ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕಲ್ಲವೇ?
ಇನ್ನು ಇಂತವರಿಂದಾಗಿ ಒಳ್ಳೆಯವರಿಗೂ ನಮ್ಮ ದೇಶದಲ್ಲಿ ಬೆಲೆ ಇಲ್ಲದಂತಾಗಿದೆ. ಕೆಲವು ಪೋಕರಿಗಳು ಮಾಡುವ ಕೃತ್ಯಗಳಿಗೆ ಇಡೀ ಜನಾಂಗವೇ ತಲೆತಗ್ಗಿಸುವಂತಾಗುತ್ತದೆ. ಇಂತ್ತು ಮುಸ್ಲಿಮರೆಂದಾಕ್ಷಣ ಅಂಜುವ, ಮನದಲ್ಲೇ ಶಪಿಸುವಂತಹ ವಾತಾವರಣ ಸೃಷ್ಟಿಯಾಗಿಬಿಟ್ಟಿದೆ.
ಪಾಕಿಸ್ತಾನದಂಥ ವಿದ್ರೋಹಿ ರಾಷ್ಟ್ರ ಹುಟ್ಟಿಸುತ್ತಿರುವ ಉಗ್ರ ಸಂಘಟನೆಗಳನ್ನು ಪತ್ತೆ ಹಚ್ಚಿ ನಾಶಪಡಿಸಬೇಕಿದೆ. ಪಾಕಿಸ್ತಾನದವರು ನಮ್ಮ ದೇಶಕ್ಕೆ ಬಂದು ಹೇಗೆ ಭಯೋತ್ಪಾದನೆ ನಡೆಸುತ್ತಿದ್ದಾರೆ ಎನ್ನುವುದರ ಬಗ್ಗೆ ಸೂಕ್ಷ್ಮವಾಗಿ ಪರಿಶೋಧನೆಯನ್ನು ನಡೆಸಬೇಕಾಗಿದೆ. ಕೆಲವು ಮುಸ್ಲಿಮರು ತಪ್ಪು ಮಾಡಲು ಕಾರಣ ಅವರ ಅಜ್ಞಾನ. ಸರಿಯಾದ ಶಿಕ್ಷಣವಿಲ್ಲದೇ ಇರುವುದರಿಂದಲೇ ಬಹುತೇಕರು ಇಂಥ ಕುಕೃತ್ಯಕ್ಕಿಳಿಯುತ್ತಾರೆ. ಓಟ್ ಬ್ಯಾಂಕ್ ಆಸೆಯಿಂದ ಇಂಥವರನ್ನು ಓಲೈಸುತ್ತಿದೆ ಸರ್ಕಾರ. ಪ್ರತಿಯೊಬ್ಬ ನಾಗರಿಕನಿಗೂ  ಶಿಕ್ಷಣ ದೊರಕುವಂತಾಗಬೇಕು. ಕೊನೆಯ ಪಕ್ಷ 10ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಯುವ ಜನಾಂಗ ನಾಗರಿಕತೆಯತ್ತ ಸಾಗಬಲ್ಲದು.
ಎಲ್ಲದಕ್ಕೂ ಅಜ್ಞಾನವೇ ಮೂಲ ಕಾರಣ. ಇಂದಿಗೂ ಹಳ್ಳಿಗಳಲ್ಲಿ ಸವರ್ಣೀಯರಿಂದ ದಲಿತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ದಲಿತರು ಮನುಜರಲ್ಲವೇ? ಸ್ವಾತಂತ್ರ್ಯ ದೊರೆತು 67 ವರ್ಷ ಗತಿಸಿದರೂ ಇಂಥ ಕೆಟ್ಟ ಪದ್ಧತಿಗಳನ್ನು ಹೋಗಲಾಡಿಸಲು ಇನ್ನೂ ಆಗುತ್ತಿಲ್ಲ. ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದು ಬಿಟ್ಟರೆ, ಬ್ರಿಟಿಷರಂತೆ ಒಡೆದು ಆಳುವುದಕ್ಕೆ ಸರ್ಕಾರಕ್ಕೆ ಸುಲಭವಾಗಿ ಸಾಧ್ಯವಾಗುತ್ತದೆ.  ಇದೇನೇ ಇದ್ದರೂ ಬ್ರಿಟಿಷರು ನಮ್ಮ ದೇಶಕ್ಕೆ ಮಾಡಿದ ಅತಿ ದೊಡ್ಡ ಹಾನಿಯೆಂದರೆ, ಹಿಂದು ಮತ್ತು ಮುಸಲ್ಮಾನರ ನಡುವೆ ವೈಮನಸ್ಸು ಹಚ್ಚಿಹೋಗಿರುವುದು. ಈ ನಿಟ್ಟಿನಲ್ಲಿ ಆಲೋಚಿಸುವುದಾದರೆ, ಈಗಿನ ಸರ್ಕಾರವೂ ತನ್ನ ನೀತಿಗಳ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಒಂದು ಕೋಮಿಗೆ ಸಹಾನುಭೂತಿ ತೋರಿಸಿ, ಇನ್ನೊಂದನ್ನು ಕಡೆಗಣಿಸುವ ಬದಲು ಸರ್ವರೂ ಸಮಾನರೆಂದು ನೋಡುವುದನ್ನು ಕಲಿಯಬೇಕು. ಸಮಾನ ನೀತಿ, ಸಮಬಾಳು, ಸಮಪಾಲು ನೀತಿಗೆ ಎಲ್ಲರನ್ನೂ ಒಳಪಡಿಸಬೇಕಲ್ಲವೇ?

- ಬಿ. ಮೊಹಿದ್ದೀನ್‌ಖಾನ್, ಚಿತ್ರದುರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement