ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈ ಮೂರ್ಖತನಕ್ಕೆ ಏನೆನ್ನಬೇಕು?

Mainashree
Updated On : 3 Dec 2013, 11:49 am

ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದು ಇಷ್ಟು ದಿನಗಳಾದರೂ ಆರೋಪಿಯನ್ನು ಪತ್ತೆ ಮಾಡಿಲ್ಲವೇಕೆ ನಮ್ಮ ಪೊಲೀಸರು? ಈ ಪ್ರಶ್ನೆಯಲ್ಲೇ ಉತ್ತರವಿದೆ. ಆರೋಪಿ ಪತ್ತೆಯಾಗದಿರಲು ಪೊಲಿಸರೇ ಕಾರಣ. ಕೆಲವು ಮಾಧ್ಯಮದವರೂ ಸಹ ಪೋಲೀಸರಷ್ಟೇ ಕಾರಣ!
  ಆರೋಪಿ ತಪ್ಪಿಸಿಕೊಂಡು ಹೋಗಲು ಪೊಲೀಸರೇ ಸಹಕರಿಸಿದ್ದಾರೆ. ಜೊತೆಗೆ ಕೆಲವು ಮಾಧ್ಯಮಗಳೂ ಕೈ ಜೋಡಿಸಿವೆ. ಹೇಗಂತೀರಾ? "ಎಟಿಎಂನಲ್ಲಿ ಮಹಿಳೆಯಿಂದ ದೋಚಿದ ಮೊಬೈಲ್ ಫೋನನ್ನು ಆರೋಪಿಯು 500 ರು.ಗೆ ಮಾರಿದ್ದ. ಆ ಮೊಬೈಲ್ ಕೊಂಡವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಈಗಲೂ ಅದೇ ಅಂಗಿ ಅದೇ ಪ್ಯಾಂಟ್ ಧರಿಸಿದ್ದಾನೆ. ಅದೇ ಬ್ಯಾಗ್ ಹಿಡಿದು ಓಡಾಡುತ್ತಿದ್ದಾನೆ. ಆತನಿಗೆ ಬುದ್ಧಿ ಇಲ್ಲವಾ?" ಎಂದು ವರದಿ ಮಾಡಿ ಟಿವಿ/ಪತ್ರಿಕೆ... ಇತ್ಯಾದಿ ಮಾಧ್ಯಮಗಳು ಆತ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿವೆ. ಪೊಲೀಸರ ಪ್ರಚಾರ ಪ್ರಿಯತೆಯಿಂದ ಆರೋಪಿ ಆರಾಮವಾಗಿ ತಪ್ಪಿಸಿಕೊಂಡಿದ್ದಾನೆ.
  ಪೊಲೀಸರಿಗೂ ಬುದ್ಧಿಯಿಲ್ಲ. ಮಾಧ್ಯಮದವರಿಗೆ ವಿವೇಚನೆಯಿಲ್ಲ. ಇದರಿಂದಾಗಿ ಆರೋಪಿ ಆರಾಮವಾಗಿದ್ದಾನೆ. ಮತ್ತೊಂದು ಹಲ್ಲೆ/ ಕೊಲೆಗೆ ಹೊಂಚು ಹಾಕುತ್ತಿದ್ದಾನೆ. ನಮ್ಮ ಪೊಲೀಸರು ಮತ್ತು ನಮ್ಮ ಮಾಧ್ಯಮದವರೇಕೆ ಹೀಗೆ?
  ಮೈಸೂರು ದಸರಾ ಸಮಯದಲ್ಲೂ ಪೊಲೀಸರು ಇಂತಹುದೇ ಮೂರ್ಖತನ ಪ್ರದರ್ಶಿಸಿದ್ದರು. ಮಾಧ್ಯಮದ ಕೆಲವರೂ ಅವರನ್ನು ಅನುಸರಿಸಿದ್ದರು. ಉಗ್ರರ ದಾಳಿ ಹಿನ್ನೆಲೆಯಲ್ಲಿ ಮೈಸೂರಿನ ಹಲವೆಡೆ ರಹಸ್ಯ ಕ್ಯಾಮರಾ ಅಳವಡಿಸಲಾಗಿದೆ ಎಂದು ಕಮೀಷನರ್ರವರೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ನಮ್ಮ  ಮಾಧ್ಯಮದವರು ಈ ರಹಸ್ಯ ಕ್ಯಾಮರಾಗಳೆಲ್ಲಿವೆ ಎಂಬುದನ್ನು ಫೋಟೋ ಸಹಿತ ವರದಿ ಮಾಡಿದ್ದವು. ರಹಸ್ಯ ಕ್ಯಾಮರಾಗಳು ಎಲ್ಲೆಲ್ಲಿವೆ ಎಂಬುದು ರಹಸ್ಯವಾಗಿರಬೇಕಲ್ಲವೇ? ಅದು ಬಹಿರಂಗಗೊಂಡರೆ ಅದನ್ನು ರಹಸ್ಯ ಕ್ಯಾಮೆರಾ ಎಂದೇಕೆ ಕರೆಯಬೇಕು? ಈ ರೀತಿ ಅವು ಎಲ್ಲೆಲ್ಲಿ ಇವೆ ಎನ್ನುವುದನ್ನು ತೋರಿಸುವುದರಿಂದ ಉಗ್ರರಿಗೆ ಮಾಹಿತಿ ನೀಡಿದಂತಾಗುವುದಿಲ್ಲವೇ? ಇದು ನಮ್ಮ ಪೊಲೀಸರಿಗಾಗಲೀ, ಮಾಧ್ಯಮದವರಿಗಾಗಲೀ ಏಕೆ ಅರ್ಥವಾಗುತ್ತಿಲ್ಲ?

- ಪಿ.ಜೆ. ರಾಘವೇಂದ್ರ
ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement