ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನೇತಾಜಿ ಸಾವಿನ ಬಗ್ಗೆ ಪ್ರಶ್ನೆ ಹುಟ್ಟುಹಾಕಿದ ರಹಸ್ಯ ದಾಖಲೆ

ವಿಮಾನ ಅಪಘಾತದಲ್ಲಿ ಸತ್ತು ಹೋದರೆಂಬ ಸುದ್ದಿ ಎಲ್ಲೆಡೆ ಹರಡಿದ ನಂತರವೂ...

Mainashree
Updated On : 3 Dec 2013, 11:47 am

ವಿಮಾನ ಅಪಘಾತದಲ್ಲಿ ಸತ್ತು ಹೋದರೆಂಬ ಸುದ್ದಿ ಎಲ್ಲೆಡೆ ಹರಡಿದ ನಂತರವೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರಷ್ಯಾದಲ್ಲಿ ಬದುಕಿದ್ದರೇ ಎಂಬ ಸತ್ಯ ತಿಳಿದುಕೊಳ್ಳಲು ಭಾರತ ಸರ್ಕಾರವು ಹಿಂದೇಟು ಹಾಕಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಹಸ್ಯ ಕಡತಗಳಿಂದ ಬಯಲಾಗಿದೆ.
ಅತೀ ಮಹತ್ವದ ಕಡತಗಳ ಮೇಲೆ 'ಟಾಪ್ ಸೀಕ್ರೆಟ್' ಎಂದು ಬರೆಯಲಾಗುತ್ತದೆ. ಅದಕ್ಕಿಂತ ಸ್ವಲ್ಪ ಕಡಿಮೆ ಮಹತ್ವದ ಕಡತಗಳ ಮೇಲೆ 'ಸೀಕ್ರೆಟ್' ಎಂದು ಬರೆಯಲಾಗುತ್ತದೆ. ಈಗ ದೊರಕಿರುವ ನೇತಾಜಿ ಬೋಸ್ ಅವರ ಸಾವಿನ ರಹಸ್ಯದ ಕಡತದ ಮೇಲೆ 'ಸೀಕ್ರೆಟ್' ಎಂಬ ಮೊಹರು ಬಿದ್ದಿದೆ. 1996ನೇ ಇಸವಿಯ ಕಾಲಮಾನದ್ದಾದ ಈ ಕಡತದಲ್ಲಿ, ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಪ್ರಣಬ್ ಮುಖರ್ಜಿ (ಈಗಿನ ರಾಷ್ಟ್ರಪತಿಗಳು)ಯವರು ಬರೆದ ಟಿಪ್ಪಣಿಗಳೂ, ಅಂದಿನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಲ್ಮಾನ್ ಹೈದರ್ ಅವರು ನೀಡಿರುವ ಅಡಿಬರಹಗಳ ಟಿಪ್ಪಣಿಯೂ ಇದೆ.
ಎರಡು ಪುಟಗಳನ್ನು ಹೊಂದಿರುವ ಈ ಕಡತದಲ್ಲಿ, ನೇತಾಜಿಯವರನ್ನೂ ಕುರಿತಾದ ಹಲವು ಮಾಹಿತಿಗಳಿವೆ. ಜೊತೆಗೆ ಅವರ ಸಾವಿನ ಕುರಿತು ಹುಟ್ಟಿಕೊಂಡ ಹಲವು ಅಂತೆಕಂತೆಗಳನ್ನು ಕುರಿತ ವಿವರಗಳೂ ಇವೆ. 1996ರ ಸಂದರ್ಭದಲ್ಲಿ ಪೂರ್ವ ಯುರೋಪ್ನ ಸಚಿವಾಲಯದ ಕಾರ್ಯದರ್ಶಿಯಾಗಿದ್ದ, ಆನಂತರದಲ್ಲಿ ಅದೇ ರಾಷ್ಟ್ರದಲ್ಲಿ ಭಾರತದ ವಿಶೇಷ ರಾಯಭಾರಿಯ ಹುದ್ದೆಯನ್ನು ಅಲಂಕರಿಸಿದ ಆರ್.ಎಲ್. ನಾರಾಯಣ್ ಅವರ ಉಸ್ತುವಾರಿಯಲ್ಲಿ ರೂಪುಗೊಂಡಿರುವ ಈ ರಹಸ್ಯ ಕಡತದಲ್ಲಿ,  ಸುಭಾಷ್ಚಂದ್ರ ಬೋಸ್ ಅವರು ರಷ್ಯಾದಲ್ಲಿ ಇದ್ದರೇ? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಹತ್ತಾರು ವಿವರಣೆಗಳಿವೆ.
 ಈಗಾಗಲೇ ನೂರಾರು ಬಾರಿ ಹೇಳಿರುವ ಸರ್ಕಾರಿ ಹೇಳಿಕೆಯನ್ನೇ ಮತ್ತೊಮ್ಮೆ ಹೇಳುವುದಾದರೆ, 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ನಿಧನರಾದರು. ಆದರೆ, ನೇತಾಜಿಯ ಶಿಷ್ಯರು, ಅಭಿಮಾನಿಗಳು ಹಾಗೂ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದೇನೆಂದರೆ, ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ. ವಿಮಾನ ಅಪಘಾತವಾಗಿದೆ ಎಂಬುದೇ ಸುಳ್ಳು ಸುದ್ದಿ. ನೇತಾಜಿಯವರು ರಷ್ಯಾದಲ್ಲಿ ಜೀವಂತವಿದ್ದಾರೆ. ಅವರು ವೇಷ ಮರೆಸಿಕೊಂಡು ಬದುಕುತ್ತಿದ್ದರು. ಒಬ್ಬರಲ್ಲ, ಇಬ್ಬರಲ್ಲ, ಲಕ್ಷಾಂತರ ಮಂದಿ ಹೀಗೆಯೇ ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲ, ನೇತಾಜಿ ಸಾವಿನ ಕುರಿತು ಹುಟ್ಟಿಕೊಂಡ ವಾದವಿವಾದಗಳ ಸತ್ಯಾಸತ್ಯತೆ ತಿಳಿಯುವಂತೆಯೂ ಒತ್ತಾಯಿಸಿದರು. ಮುಂದೆ ಈ ವಿಷಯದ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ನೀಡುವ ಹೊಣೆಯನ್ನು ನಿವೃತ್ತ ನ್ಯಾಯಮೂರ್ತಿ ಮುಖರ್ಜಿ ನೇತೃತ್ವದ ಆಯೋಗಕ್ಕೆ ಒಪ್ಪಿಸಲಾಯಿತು. ಈ ಆಯೋಗವು ತನ್ನ ವರದಿ ನೀಡಿತು ನಿಜ. ಆದರೆ ಅದನ್ನು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿತು. ಕಾರಣ, ಬೋಸ್ ಅವರು ವಿಮಾನ ಅಪಘಾತದಲ್ಲಿ ನಿಧನರಾದರು ಎಂಬ ಸುಳ್ಳು ಸುದ್ದಿಯನ್ನು ಜಪಾನ್ ದೇಶದವರು ತೇಲಿ ಬಿಟ್ಟರೆಂದೂ, ವಾಸ್ತವವಾಗಿ ಆ ಸುದ್ದಿ ಕೇಳಿ ಬಂದ ನಂತರವೂ ಬೋಸ್ ಅವರು ರಷ್ಯಾದಲ್ಲಿ ಮಾರುವೇಷದಲ್ಲಿದ್ದುಕೊಂಡು ಜೀವಿಸಿದರೆಂದೂ ಮುಖರ್ಜಿ ಆಯೋಗದ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.
1991ರಲ್ಲಿ ಸೋವಿಯತ್ ಒಕ್ಕೂಟದ ಪತನವಾಯಿತಲ್ಲ, ಆನಂತರದಲ್ಲಿ ಮಾಸ್ಕೋಗೆ ಭೇಟಿ ನೀಡಿದ ಏಷ್ಯಾ ರಾಷ್ಟ್ರಗಳ ಹಲವು ರಾಜಕೀಯ ಮುತ್ಸದ್ದಿಗಳು, ಸುಭಾಷ್ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದಂತೆ ಇರುವ ಪ್ರಮುಖ ದಾಖಲೆಗಳನ್ನು ಅಲ್ಲಿಂದ ತಕ್ಷಣವೇ ಭಾರತಕ್ಕೆ ತರಿಸಿಕೊಳ್ಳುವಂತೆ ಸರ್ಕಾರದ ಪ್ರಮುಖ ನಾಯಕರನ್ನು ಒತ್ತಾಯಿಸಿದರು. ಆದರೆ ಯಾರು ಎಷ್ಟೇ ಮನವಿ ನೀಡಿದರೂ ಯುಪಿಎ ಸರ್ಕಾರ ಆ ಕಡೆಗೆ ತಿರುಗಿಯೂ ನೋಡಲಿಲ್ಲ. ಅದನ್ನು ಗಮನಿಸಿಯೇ ಜಾಧವಪುರ ವಿ.ವಿ.ಯ ಹಿರಿಯ ಸಂಶೋಧಕರಾದ ಡಾ॥ ಪುರಭಿರಾಯ್ ತುಂಬ ಬೇಸರದಿಂದ ಹೇಳಿದ್ದರು: 'ಕೇಂದ್ರ ಸರ್ಕಾರಕ್ಕೆ ನೇತಾಜಿ ಸಾವಿನ ರಹಸ್ಯಗಳ ವಿವರಣೆ ಸಂಗ್ರಹಿಸುವ ಆಸಕ್ತಿಯಿಲ್ಲ. ಈ ವಿಷಯವಾಗಿ ಮಾಹಿತಿ ಸಂಗ್ರಹಣೆಗೆ ಹೊರಡುವ ಇತರರನ್ನೂ ಅದು ಪ್ರೋತ್ಸಾಹಿಸುವುದಿಲ್ಲ...'
ಈಗ, ಅನುಜ್ಧರ್ ಎಂಬ ಲೇಖಕ 'No Secrets' ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಅದರಲ್ಲಿ, ನೇತಾಜಿಯವರ ಸಾವಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಒಳಗೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಡತಗಳಲ್ಲಿದ್ದ ಪತ್ರಗಳ ಸಂಪೂರ್ಣ ವಿವರಣೆಯಿದೆ. ನೇತಾಜಿಯವರ ಸಾವಿಗೆ ಸಂಬಂಧಿಸಿದಂತೆ ಇರುವ ಎಲ್ಲ ಮಾಹಿತಿಯನ್ನೂ ರಷ್ಯಾ ಸರ್ಕಾರದಿಂದ ತಿಳಿದುಕೊಳ್ಳುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಅಂಥ ಯಾವುದೇ ಪ್ರಯತ್ನಗಳಿಗೂ ಕೇಂದ್ರ ಸರ್ಕಾರ ಮುಂದಾಗಲಿಲ್ಲ ಎಂದೂ ತಮ್ಮ ಪುಸ್ತಕದಲ್ಲಿ ಅನೂಜ್ಧರ್ ಉಲ್ಲೇಖಿಸಿದ್ದಾರೆ.
 ವೇದಿಕೆಗಳಲ್ಲಿ ಭಾಷಣ ಮಾಡುವ ಸಂದರ್ಭಗಳಲ್ಲಿ, ನಾನು ಸುಭಾಷ್ಚಂದ್ರ ಬೋಸ್ ಅವರ ಅಭಿಮಾನಿ ಎಂದು ಪ್ರಣಬ್ ಮುಖರ್ಜಿಯವರು ಹೇಳಿಕೊಳ್ಳುತ್ತಾರೆ. ಆದರೆ, ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸಂದರ್ಭದಲ್ಲಿ, ನೇತಾಜಿಯವರ ಸಾವಿನ ರಹಸ್ಯ ಕುರಿತಂತೆ ಎಲ್ಲ ವಿವರವನ್ನೂ ಮುಖರ್ಜಿಯವರು ಪಡೆಯಬಹುದಿತ್ತು. ಆದರೆ, ಈ ಕೆಲಸಕ್ಕೆ ಅವರು ಮುಂದಾಗಲೇ ಇಲ್ಲ. ಮಾಹಿತಿ ಸಂಗ್ರಹಣೆ ಕುರಿತು ವಿಷಯ ಪ್ರಸ್ತಾಪವಾದಾಗಲೆಲ್ಲ ಅವರು ಎಲ್ಲರ ಕಣ್ಣೊರೆಸುವ ತಂತ್ರವನ್ನಷ್ಟೇ ಅನುಸರಿಸಿದರು ಎಂದು ಅನೂಜ್ಧರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಅನೂಜ್ಧರ್ ಅವರ ಪುಸ್ತಕದ ಮೊದಲ ಪ್ಯಾರಾ ಹೀಗೆ ಶುರುವಾಗುತ್ತದೆ: ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ನಿಧನರಾದರು ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿ ವರ್ಷಗಳು ಕಳೆದ ನಂತರವೂ, ಬೋಸ್ ಅವರು ರಷ್ಯಾದಲ್ಲಿ ವೇಷ ಮರೆಸಿಕೊಂಡು ಬದುಕಿದ್ದಾರೆ ಎಂದು ವಿವರಿಸುವ ಸುದ್ದಿಗಳು ರಷ್ಯಾದ ಪತ್ರಿಕೆಗಳಲ್ಲಿ ಆಗಿಂದ್ದಾಗ್ಗೆ ಪ್ರಕಟವಾಗುತ್ತಲೇ ಇದ್ದವು. ಅದರರ್ಥ; ನೇತಾಜಿ ಸತ್ತಿಲ್ಲ, ಅವರು ಬದುಕಿದ್ದಾರೆ ಎಂಬುದು ಭಾರತೀಯರು ಮಾತ್ರವಲ್ಲ, ರಷ್ಯಾದಲ್ಲಿರುವ ಅವರ ಅಭಿಮಾನಿಗಳ ನಂಬಿಕೆಯೂ ಆಗಿತ್ತು. ಹೀಗೆ, ನೇತಾಜಿಯವರ ಸಾವಿನ ವಿಷಯ ಎಲ್ಲರ ಚರ್ಚೆಯ ವಿಷಯವಾದಾಗ, ಈ ಸಂಬಂಧವಾಗಿ ಲಭ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಮಾಸ್ಕೋದಲ್ಲಿದ್ದ ಭಾರತದ ರಾಯಭಾರಿಯವರ ಮೂಲಕ ರಷ್ಯನ್ ಅಧಿಕಾರಿಗಳಿಗೆ ಪತ್ರವೊಂದನ್ನು ಸಲ್ಲಿಸಿದ್ದೆವು. 'ತಮ್ಮ ಪತ್ರವನ್ನು ಪರಿಶೀಲಿಸಿ ಸಮಗ್ರ ತಪಾಸಣೆ ನಡೆಸಲಾಯಿತು. ಆದರೆ ಬೋಸ್ ಅವರು ರಷ್ಯಾದಲ್ಲಿ ಜೀವಂತವಾಗಿದ್ದರು' ಎಂಬುದನ್ನು ಸಮರ್ಥಿಸುವ ಯಾವುದೇ ದಾಖಲೆಯೂ ರಷ್ಯಾದ ಸರ್ಕಾರಿ ಕಡತಗಳಲ್ಲಿ ದಾಖಲಾಗಿಲ್ಲ' ಎಂಬ ಉತ್ತರವನ್ನು ಹೊಂದಿದ ಪತ್ರವು 1992ರ ಜನವರಿಯಲ್ಲಿ ನಮ್ಮ ಕೈ ಸೇರಿತು.
ಮುಂದಿನ ಪ್ಯಾರಾದಲ್ಲಿ ಅನೂಜ್ ಬರೆಯುತ್ತಾರೆ: 1992ಕ್ಕೂ ಮೊದಲು, ನೇತಾಜಿ ಬೋಸ್ ಅವರ ವಿಷಯವಾಗಿ ಎಲ್ಲ ವಿವರ ನೀಡುವಂತೆ ಒತ್ತಾಯಿಸುವ ಎಲ್ಲ ಅವಕಾಶವೂ ಕೇಂದ್ರ ಸರ್ಕಾರಕ್ಕೆ ಇತ್ತು. ಆದರೆ ಈ ಸಂಬಂಧವಾಗಿ ಯಾರೂ ಆಸಕ್ತಿಯನ್ನೇ ತೋರಲಿಲ್ಲ. ಅಷ್ಟೇ ಅಲ್ಲ, ರಷ್ಯಾದೊಂದಿಗೆ ಮೊದಲಿಂದಲೂ ಎಲ್ಲ ರೀತಿಯಲ್ಲೂ ಸ್ನೇಹ ಸೌಹಾರ್ದ ಹೊಂದಿದ್ದರೂ, ನೇತಾಜಿಯವರ ಸಾವಿನ ಕುರಿತು ಸತ್ಯಾಂಶ ತಿಳಿಯುವ ಸಣ್ಣದೊಂದು ಪ್ರಯತ್ನವನ್ನೂ ಭಾರತದ ರಾಜಕಾರಣಿಗಳು ಮಾಡಲಿಲ್ಲ...'
ಅನೂಜ್ಧರ್ ಅವರ ಈ ಮಾತುಗಳಲ್ಲಿ ಖಂಡಿತ ಸತ್ಯಾಂಶವಿದೆ ಎಂದು ಎಲ್ಲರೂ ನಂಬುವಂತೆಯೇ, ಪ್ರಣಬ್ ಮುಖರ್ಜಿಯವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ನಾರಾಯಣ್ ಬರೆದಿರುವ ಅಡಿ ಟಿಪ್ಪಣಿಗಳಿವೆ. ನೇತಾಜಿಯವರು ಬದುಕಿದ್ದಾರೆಯೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ದೊರಕಿಲ್ಲವೆಂದು ರಷ್ಯನ್ ಅಧಿಕಾರಿಗಳು ಷರಾ ಬರೆದಿದ್ದಾರೆ. ಆದರೆ ರಷ್ಯಾದ ಮಹಾನಾಯಕನಾಗಿದ್ದ ಸ್ಟಾಲಿನ್ರ ಅವಧಿಯ ದಾಖಲೆ ಪತ್ರಗಳನ್ನು ಈಗಲೂ ಪ್ರತ್ಯೇಕ ಕಡತಗಳಲ್ಲಿ ಇಡಲಾಗಿದೆ. ಅವುಗಳನ್ನೂ ರಷ್ಯನ್ ಸಂಶೋಧಕರೂ ಸೇರಿದಂತೆ ಈವರೆಗೂ ಯಾರೊಬ್ಬರೂ ಪರಿಶೀಲಿಸಿಲ್ಲ. ಲೆನಿನ್ ಹಾಗೂ ಸ್ಟಾಲಿನ್ ಅವರ ಜೀವನ ಚರಿತ್ರೆಗಳನ್ನು ಬರೆದ ರಷ್ಯದ ಇತಿಹಾಸಕಾರ ಛೇಲ್ಕಾನೋವ್ ಅವರಿಗೆ ಮಾತ್ರ ಈ ಅಪರೂಪದ, ರಹಸ್ಯ ಮಾಹಿತಿಗಳಿಂದ ಕೂಡಿರುವ ವಿಶಿಷ್ಟ ದಾಖಲೆಗಳನ್ನು ಪರಿಶೀಲಿಸುವ ಅವಕಾಶ ದೊರಕಿತ್ತು. ಅವರನ್ನು ಹೊರತುಪಡಿಸಿದರೆ ಬೇರೆ ಯಾರೊಬ್ಬರೂ ಈ ದಾಖಲೆಯ ಪುಟಗಳನ್ನು ಮುಟ್ಟುವುದಕ್ಕೂ ಸಾಧ್ಯವಾಗಿಲ್ಲ...'
ಹೀಗೆಲ್ಲ ತಮ್ಮ ಟಿಪ್ಪಣಿಯಲ್ಲಿ ದಾಖಲಿಸುವ ನಾರಾಯಣ್ ಕಡೆಯಲ್ಲಿ, ನೇತಾಜಿಯವರ ಸಾವಿನ ರಹಸ್ಯಕ್ಕೆ ಸಂಬಂಧಿತ ವಿಷಯವಾಗಿ ರಷ್ಯಾದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮಾಸ್ಕೋದಲ್ಲಿರುವ ಭಾರತದ ರಾಯಭಾರಿಗೆ ಸಲಹೆ ನೀಡಬಹುದು' ಎಂದು ತಮ್ಮ ಮಾತು ಮುಗಿಸುತ್ತಾರೆ. ನಂತರದಲ್ಲಿ ಈ ಕಡತಕ್ಕೆ ಅಂತಿಮ ಸಂದೇಶ ದಾಖಲಿಸುವ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವರಾದ ಪ್ರಣಬ್ ಮುಖರ್ಜಿಯವರು, ನಾರಾಯಣ್ ಅವರೊಂದಿಗೆ ತಕ್ಷಣವೇ ಚರ್ಚಿಸಿ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಲ್ಮಾನ್ ಹೈದರ್ಗೆ ಆದೇಶಿಸುತ್ತಾರೆ.
ಯಾವುದೇ ಒಂದು ವಿಷಯವಾಗಿ ಏನೂ ರಹಸ್ಯವಿಲ್ಲ ಎನ್ನುವುದಾದರೆ, ಹೀಗೆ ಕೇಂದ್ರ ಸರ್ಕಾರದ ಸಚಿವಾಲಯದ ಮಟ್ಟದಲ್ಲಿ 'ರಹಸ್ಯ' ಎಂಬ ಹಣೆಪಟ್ಟಿ ಹೊಂದಿದ ಕಡತಗಳು ಓಡಾಡುವುದಿಲ್ಲ. ನೇತಾಜಿ ಸಾವಿನ ವಿಷಯವಾಗಿ ಈವರೆಗೂ ಲಭ್ಯವಾಗಿರುವ ದಾಖಲೆಗಳನ್ನು ಮುಂದಿಡುವ ಮನಸ್ಸು ಮತ್ತು ಧೈರ್ಯವನ್ನು ಕೇಂದ್ರ ಸರ್ಕಾರ ಈಗಲಾದರೂ ಮಾಡುತ್ತದೆಂದು ನಿರೀಕ್ಷಿಸಬಹುದೆ?

- ರಾಜೀವ್ ಶರ್ಮ
ರಕ್ಷಣಾ ಪರಿಣತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement