ಹೀಗಿದೆ ನೋಡಿ ಕನ್ನಡಿಗರ ಜಾಯಮಾನ
ಈಗ್ಗೆ ಸುಮಾರು ಆರು ವರ್ಷಗಳ ಕೆಳಗೆ, ನಾವು ಅಂಡಮಾನ್ನ ಪೋರ್ಟ್ಬ್ಲೇರ್ನಲ್ಲಿ ಸುಮಾರು ಮೂರೂವರೆ ವರ್ಷಗಳ ಕಾಲ ವಾಸವಿದ್ದೆವು. ನನ್ನ ಪತಿಯವರ ಕಡ್ಡಾಯ ವರ್ಗಾವಣೆಯಿಂದ ನಮ್ಮ ಅಂಡಮಾನ್ ವಾಸ ಅನಿವಾರ್ಯವಾಗಿತ್ತು. ಕೇವಲ ಕೇಳಿ ತಿಳಿದಿದ್ದ ಆ ಸ್ಥಳ, ನಮ್ಮ 3 ವರ್ಷದ ವಾಸದಲ್ಲಿ ಅಪ್ಯಾಯಮಾನವೆನಿಸಿದ್ದು ಮಾತ್ರ ಸುಳ್ಳಲ್ಲ.
ಮನೆಯವರಿಂದ ದೂರ, ಹೊಸ ಭಾಷೆಗಳು, ಹೊಸ ಸ್ಥಳ, ಹೊಸ ಜನ, ಎಲ್ಲವೂ ಹೊಸತು. ಕೇಬಲ್ ಸಂಪರ್ಕವಿದ್ದರೂ, ಕನ್ನಡವಾಹಿನಿಗಳ ಪ್ರಸಾರವಿಲ್ಲ. ಸರಿ, ಎಲ್ಲಾ ಹಿಂದಿ, ಇಂಗ್ಲೀಷ್ ಭಾಷೆಗಳ ಮಧ್ಯೆ. "ದಕ್ಷಿಣ ಭಾರತೀಯ" ಎಂಬ ಕಾರಣಕ್ಕೆ ತೆಲುಗು, ತಮಿಳು, ಮಲೆಯಾಳಂ ವೀಕ್ಷಿಸಲು ಪ್ರಾರಂಭಿಸಿದೆ. ನನಗೋ, ಆ ಭಾಷೆಗಳ ಗಂಧ -ಗಾಳಿ ತಿಳಿದಿರಲಿಲ್ಲ. ಅಡುಗೆ ಕಾರ್ಯಕ್ರಮಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ನಾನು, ಹೆಚ್ಚಾಗಿ ಅವುಗಳನ್ನೇ ವೀಕ್ಷಿಸತೊಡಗಿದೆ. ತಮಿಳು ಚಾನೆಲ್ಗಳು ಹೆಚ್ಚು ಸ್ಪಷ್ಟವಾಗಿ ಬರುತ್ತಿದ್ದರಿಂದ ಅವೇ ನನಗೆ ಪ್ರಮುಖವಾಯಿತು.
ನನಗೇ ಆಶ್ಚರ್ಯವೆನಿಸುವ ಮಟ್ಟಿಗೆ, ಕೆಲವೇ ದಿನಗಳಲ್ಲಿ ನಾನು ಆ ಭಾಷೆಗಳ ಎಲ್ಲಾ ಸಾಂಬಾರ ಪದಾರ್ಥಗಳ, ತರಕಾರಿಗಳ ಹೆಸರನ್ನು ಅರಿತೆ. ನನಗಂತೂ ವೆಂಗಾಯಂ (ಈರುಳ್ಳಿ), ಮಿಳಗಾಯಿ (ಮೆಣಸಿನಕಾಯಿ), ಮಿಳಗು (ಮೆಣಸಿನಕಾಯಿ), ತಕ್ಕಾಳಿ (ಟೊಮೆಟೋ), ಪಿಸುಪು (ಅರಿಶಿಣ), ಕಡಗು (ಸಾಸಿವೆ), ಅರಿಸಿ (ಅಕ್ಕಿ), ನೆಯ್ಯಿ (ತುಪ್ಪ), ವೆಲ್ಲರಿಕಿ (ಸೌತೆ), ಕತ್ತಿರಿಕಾಯಿ (ಬದನೆ), ದೆಂಡೆ (ಬೆಂಡೆ)...ಹೀಗೆ ಎಲ್ಲವೂ ಬಾಯಿಪಾಠವಾದವು. ತಮಿಳನ್ನು, ವ್ಯವಹರಿಸುವಷ್ಟಾದರೂ ಕಲಿತೆ! ಭಾಷೆ ಗೊತ್ತಿಲ್ಲದ ನಮ್ಮಂಥವರು, ಪದಾರ್ಥ ನೋಡದಿದ್ದರೆ, ಅದೇನೆಂದು ತಿಳಿಯುವುದೇ ಇಲ್ಲ! ಅಷ್ಟರಮಟ್ಟಿಗೆ ತಮಿಳುಮಯ. ನಿಜಕ್ಕೂ ನನಗೆ ತಮಿಳರ ಭಾಷಾಭಿಮಾನದ ಬಗ್ಗೆ ಹೆಮ್ಮೆಯೆನಿಸಿತು.
ಮೂರು ವರ್ಷಗಳ ನಂತರ ನಮ್ಮ ಕನ್ನಡನಾಡಿಗೆ ಬಂದೆವು. ಇಲ್ಲಿಯೂ ಯಥಾಪ್ರಕಾರ ನನ್ನ ಅಡುಗೆ ಕಾರ್ಯಕ್ರಮ ವೀಕ್ಷಣೆ ಅವ್ಯಾಹತವಾಗಿ ಸಾಗಿತ್ತು. ಆದರೆ, ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು. ಒನ್ ಕಪ್ ಆನಿಯನ್ಗೆ, ಒನ್ ಕಪ್ ಟೊಮೆಟೋ ಬೇಕಾಗತ್ತೆ. ರೈಸ್ನ ನೀರಲ್ಲಿ ಸೋಕ್ ಮಾಡಿಟ್ಟಿರೋಣ. ಈಗ ಪ್ಯಾನ್ ಇಟ್ಟು, ಆಯಿಲ್ ಹೀಟ್ ಆದ ಮೇಲೆ ಮಸ್ಟರ್ಡ್ ಜೀರಾ ಹಾಕಬೇಕು. ಅವು ಸ್ಪ್ಲಿಟ್ ಆಗಬೇಕು. ಆಮೇಲೆ ಆನಿಯನ್ ಹಾಕಿ, ಗೋಲ್ಡನ್ ಬ್ರೌನ್ ಆಗೋವರೆಗೂ ಫ್ರೈ ಮಾಡಬೇಕು. ದೆನ್, ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ, ಕೋಕೋನಟ್ ಗ್ರೈಂಡ್ ಮಾಡಿರ್ತೀವಲ್ಲ, ಅದು ಹಾಕ್ಬೇಕು. ಅವೆಲ್ಲಾ ಬಾಯಿಲ್ ಆಗುವಾಗ ಸ್ವಲ್ಪ ವಾಟರ್ ಆಡ್ ಮಾಡಿ, ಚಿಲ್ಲಿ ಪೌಡರ್ ಹಾಕಬೇಕು. ಆಮೇಲೆ ಎಲ್ಲಾ ಹಸಿ ವಾಸನೆಹೋದ್ ಮೇಲೆ ನಿಮಗೆ ಲೈಕಾಗೋ ವೆಜಿಟೇಬಲ್ಸ್ -ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಾಮ್, ಗೋಬಿ ಎಲ್ಲಾ ಹಾಕ್ಬಹುದು. ನೋ ಪ್ರಾಬ್ಲಂ. ಕೊನೇಲಿ ರೈಸ್ ಹಾಕಿ, ಡಬ್ಬಲ್ ವಾಟರ್ ಹಾಕಿ ಕುಕ್ಕರ್ ಕ್ಲೋಸ್ ಮಾಡಿ...
ಅಬ್ಬಬ್ಬಾ, ನನ್ನ ತಲೆ ಚಿಟ್ಟು ಹೊಡೆದು ಹೋಯಿತು. ಅವರುಗಳ ಹುಚ್ಚು ಆಂಗ್ಲಾಭಿಮಾನ ವಾಕರಿಕೆ ತರಿಸಿತು. ನನ್ನ ಜೊತೆ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನನ್ನ ಅತ್ತೆ-"ಏನೋ ಎಲ್ಲಾ ಬರೀ ಇಂಗ್ಲೀಷಿನಲ್ಲೇ ಹೇಳ್ತಿವೆ. ಕೇಳಿಸ್ಕೊಂಡ್ರೆ ಗೊತ್ತಾಗಲ್ಲ. ಟಿವಿ ಮುಂದೇನೇ ಕೂರ್ಬೇಕು ಎಂದಾಗ, ನನಗೆ ಇದೊಂದು ನಕ್ಕು ತೇಲಿಸುವ ಸಮಸ್ಯೆಯಾಗಿ ಕಾಣಲೇ ಇಲ್ಲ. ಗಂಭೀರವೆನಿಸಿತು.
ಕೇವಲ ಅಡುಗೆ ಕಾರ್ಯಕ್ರಮದ ಪಾಡು ಮಾತ್ರ ಇದಲ್ಲ. ಎಲ್ಲಾ ನಿರೂಪಣಾಧಾರಿತ ಕಾರ್ಯಕ್ರಮಗಳನ್ನು ನೋಡಿ, ಇದೇ ದುರ್ಗತಿ ಕನ್ನಡಕಲ್ಲಿ. ಇನ್ನು ಸುದ್ದಿವಾಹಿನಿಗಳಂತೂ ಕನ್ನಡದ ಮಾಧುರ್ಯ, ಸೌಂದರ್ಯ, ಸೊಗಡು, ಸೌಜನ್ಯ ಎಲ್ಲವನ್ನೂ ಸಾರಾಸಗಟಾಗಿ ನಾಶ ಮಾಡಿವೆ. ಎಫ್ಎಂ ವಾಹಿನಿಗಳದ್ದೂ ಇದೇ ಕಥೆ. ಕನ್ನಡಪ್ರಭದಲ್ಲಿಯೇ ನವೆಂಬರ್ 1ರಂದು ಪ್ರಕಟವಾದ ಅಭಿಪ್ರಾಯಗಳಲ್ಲಿ ಎಫ್ಎಂ ನಿರೂಪಕಿಯೊಬ್ಬರು, ಕಂಗ್ಲೀಷ್ ್ಛಛಝ್ಛಿಣ ಆಗಿರುತ್ತೆ. ಅದಕ್ಕೆ ಅದನ್ನೇ ಬಳಸ್ತೀವಿ ಎಂದು ಸ್ಪಷ್ಟನೆ ಬೇರೆ ಕೊಟ್ಟರು. ಸುದ್ದಿ ಮಾಧ್ಯಮದ ನಿರೂಪಕರೂ ಬಹುಷಃ, ಟಿಆರ್ಪಿ ಏರುವುದು ಕಂಗ್ಲೀಷ್ನಿಂದಲೇ ಎಂದು ಹೇಳುತ್ತಾರೆ.ಆಕಾಶವಾಣಿ, ದೂರದರ್ಶನ ಬಿಟ್ಟರೆ, ಖಾಸಗಿ ಒಡೆತನದ ಎಲ್ಲಾ ವಾಹಿನಿಗಳಲ್ಲೂ ಕಂಗ್ಲೀಷ್ ಜ್ಞಾನ (!) ಅಲಿಖಿತ ನಿಯಮವಾಗಿದೆ. ಇಂದಿನ ಧಾರಾವಾಹಿ, ಚಲನಚಿತ್ರಗಳಲ್ಲಂತೂ, ಕನ್ನಡ ಸಂಸ್ಕೃತಿ ಸೊಗಡಿಗೆ ಪ್ರವೇಶವೇ ಇಲ್ಲ. ಎಲ್ಲವೂ, ಒಂದೋ ಪಾಶ್ಚ್ಯಾತೀಕರಣಗೊಂಡಿರುತ್ತದೆ. ಇಲ್ಲವೇ ಉತ್ತರ ಭಾರತೀಯತೆ ಎದ್ದು ಕಾಣುತ್ತಿರುತ್ತದೆ. ಎಲ್ಲಿಯೂ ಪಂಚೆ-ಶಲ್ಯ, ಸೀರೆ, ಲಂಗ-ದಾವಣಿ ಕಾಣುವುದೇ ಇಲ್ಲ. ಘೌಘ್ರಾ ಚೋಲಿ, ಶೇವಾರ್ನಿಗಳದ್ದೇ ಕಾರುಬಾರು. ಧಾರಾವಾಹಿಗಳನ್ನು ಆವರಿಸಿರುವ ರಿಮೇಕ್ಭೂತ, ಮೆಹೆಂದಿ, ದಾಂಡಿಯಾ, ಕರ್ವಾಚೌತ್ಗಳಂಥ ಉತ್ತರ ಭಾರತೀಯ ಸಂಸ್ಕೃತಿಯನ್ನು ಚಿತ್ರಿಸುತ್ತದೆ. ಕಡೇಪಕ್ಷ ಕನ್ನಡೀಕರಣಗೊಳಿಸಬೇಕೆಂಬ ಜವಾಬ್ದಾರಿಯನ್ನು ನಿರ್ದೇಶಕರು ಹೊರುವುದಿಲ್ಲ.
ಮೊನ್ನೆ ಒಂದು ತಮಿಳು ಸಿನಿಮಾ ನೋಡುತ್ತಿದ್ದೆ. ಅದರಲ್ಲಿ ಸಹಿಯಿಂದ, ದ್ವಿಪಾತ್ರದ ನಾಯಕರಲ್ಲಿ, ನಿಜವಾದ ನಾಯಕನನ್ನು ಗುರುತು ಹಚ್ಚುವ ಸನ್ನಿವೇಶ. ಆ ದೃಶ್ಯದಲ್ಲಿ ನಾಯಕಿ ಹಾಗೂ ಇತರರು, "ಕೈ ಎಡತ್ತು ಪೋಡು ಗುರು" ಎನ್ನುತ್ತಿದ್ದರೇ ಹೊರತು, ಸೈನ್ ಎಂದು ಎಲ್ಲಿಯೂ ಒಮ್ಮೆಯೂ ಉಚ್ಛರಿಸಲಿಲ್ಲ. ಸುಮಾರು ಹತ್ತು ನಿಮಿಷಗಳ ದೃಶ್ಯದಲ್ಲಿ! ಇಂಥ ಉದಾಹರಣೆ ಹೇರಳವಾಗಿ ಸಿಗುತ್ತವೆ ಅನ್ಯ ಭಾಷೆಯ ಚಿತ್ರಗಳಲ್ಲಿ. ನಮ್ಮ ಚಿತ್ರಗಳಲ್ಲಿ? ಜನ ಅವನ್ನೇ ನೋಡಲು ಬಯಸುತ್ತಾರೆ ಎಂದು, ನಮ್ಮತನವನ್ನೇ ಪಣಕ್ಕಿಡುವುದು, ಒಂದು ಸಂಸ್ಕೃತಿಯನ್ನು ಅವಸಾನದ ಅಂಚಿಗೆ ತಳ್ಳುತ್ತದೆ ಎಂಬ ಜ್ಞಾನ ಇವರುಗಳಿಗೆ ಇರಬಾರದೆ? ಅಂಡಮಾನ್ನಲ್ಲಿ ಕನ್ನಡವಾಹಿನಿಗಳ ಪ್ರಸಾರ ಇರಲಿಲ್ಲ ಎಂದೆನಲ್ಲ? ಅದೂ ನಮ್ಮ ಅಭಿಮಾನ್ಯಶೂನ್ಯತಿಯ ಪ್ರತೀಕವೇ! ಸುಮಾರು ಒಂದೂವರೆ ಸಾವಿರದಷ್ಟು ಕನ್ನಡಿಗರಿರುವ ಪೋರ್ಟ್ಬ್ಲೇರ್ನಲ್ಲಿ, ಒಮ್ಮೆಯೂ ಯಾರೂ ಬಂದು ಕೇಳಿಯೂ ಇರಲಿಲ್ಲವಂತೆ, ಒತ್ತಾಯ ಪಡಿಸಿರಲಿಲ್ಲವಂತೆ ಕನ್ನಡವಾಹಿನಿಗಾಗಿ! ನಾನು ಮತ್ತು ನನ್ನ ಪತಿಯವರು ದಿನೇ ದಿನೇ ಒತ್ತಡ ಹೇರಿದ್ದಕ್ಕೆ ಸುವರ್ಣ ವಾಹಿನಿಯೊಂದನ್ನು ಕೊಟ್ಟರು. ಅದೂ ಕಡೆಯ ಕ್ರಮಾಂಕದ ಚಾನೆಲ್ ಆಗಿ. ಅದು, ನಾವು ಇದ್ದ ಮೂರು ವರ್ಷದಲ್ಲೂ ಒಂದು ದಿನವಾದರೂ ನೋಡಲರ್ಹವಾಗಿ ಬರಲಿಲ್ಲ! ಆಗ ಡಿಟಿಎಚ್ ಬಂದಿರಲಿಲ್ಲ.
ಇವೆಲ್ಲಾ ಏಕೆ ಹೇಳಬೇಕೆಂದೆನಿಸಿತೆಂದರೆ, ನವೆಂಬರ್ ಮುಗಿದಿದೆ. ಅದರೊಂದಿಗೆ ನಮ್ಮ ಕನ್ನಡ ಕಾಳಜಿ ಮುಗಿಯೋದು ಬೇಡ. ನಾಡಿನ ಎಲ್ಲಾ ಮೂಲೆ -ಮೂಲೆಗೂ ತಲುಪುವ ರೇಡಿಯೋ ಹಾಗೂ ಟಿವಿ ವಾಹಿನಿಗಳಲ್ಲಿ ಬಿಡುಬೀಸಾಗಿ, ಎಗ್ಗಿಲ್ಲದೇ ಪ್ರದರ್ಶಿತವಾಗುತ್ತಿರುವ ಕಂಗ್ಲೀಷ್ ಹುಚ್ಚು ವ್ಯಾಮೋಹಕ್ಕೆ ತಡೆ ಹಾಕಲು, ಬಹುಷಃ ಒಂದು ಚಳವಳಿಯ ಅಗತ್ಯವೇ ಇದೆಯೇನೋ ಎನಿಸುತ್ತಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯಗೊಳಿಸಬೇಕೆಂಬ ಕೂಗಿನೊಂದಿಗೆ, ಮಾಧ್ಯಮಗಳಲ್ಲೂ ಕನ್ನಡ ಕಡ್ಡಾಯಗೊಳಿಸುವ ಕೆಲಸವಾಗಬೇಕಿದೆ. ಇದೊಂದು ಶೋಚನೀಯ ಅನಿವಾರ್ಯತೆ. ಬೇರೆ ಯಾವ ಭಾಷೆಗೂ ಬಹುಷಃ ಇಂಥ ದುರ್ಗತಿ ಖಂಡಿತಾ ಒದಗಿಲ್ಲವೆನಿಸುತ್ತದೆ. ಈ ಬಾರಿಯ 'ಕನ್ನಡಕಾಲ' ಇನ್ನೇನು ಮುಗಿದು ಹೋಗುತ್ತವೆ. ಮುಂದಿನ ಕನ್ನಡ ಕಾಲ ಬರುವ ಹೊತ್ತಿಗಾದರೂ ನಾವುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡಪರ ಸಂಘಟನೆಗಳು ಈ ಬಗ್ಗೆ ಎಚ್ಚೆತ್ತುಕೊಂಡರೆ, ಆಡು ಮಾತಿನಲ್ಲಾದರೂ ಕನ್ನಡವನ್ನು ಉಳಿಸಿಕೊಳ್ಳಬಹುದು.
- ನಿವೇದಿತ ಎಚ್.
ಗೃಹಿಣಿ