ಕನ್ನಡ ಸಂಸ್ಕೃತಿಗೆ ಹಾನಿಮಾಡಲಿದೆ ಈ ವಿಳಂಬ ನೀತಿ
ಕರ್ನಾಟಕ ಸರ್ಕಾರವು ವಿವಿಧ ಪ್ರಾಧಿಕಾರ, ಅಕಾಡೆಮಿ, ನಿಗಮ, ಮಂಡಳಿ, ರಂಗಾಯಣದ ಕೇಂದ್ರಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ನಾಟಕ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಚಲನಚಿತ್ರ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ತುಳು ಅಕಾಡೆಮಿ, ಉರ್ದು ಅಕಾಡೆಮಿ ಹಾಗೂ ರಂಗಾಯಣದಂತಹ (ಶಿವಮೊಗ್ಗ, ಗುಲ್ಬರ್ಗಾ ಹಾಗೂ ಧಾರವಾಡ ಕೇಂದ್ರಗಳು) ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲದು. ಈಗಾಗಲೆ ಬಹುತೇಕ ಅಕಾಡೆಮಿ ಹಾಗೂ ಪ್ರಾಧಿಕಾರಗಳ ನಿರ್ದೇಶಕರು ಹಾಗೂ ಅಧ್ಯಕ್ಷರ ಅವಧಿ ಮುಗಿದಿದ್ದರೆ, ಮತ್ತೆ ಕೆಲವು ಅಕಾಡೆಮಿಗಳ ನಿರ್ದೇಶಕರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜೀನಾಮೆಯನ್ನು ಪಡೆದಿದೆ. ಹಾಗೆ ರಾಜೀನಾಮೆಯನ್ನು ಪಡೆದ ನಂತರ ಆದಷ್ಟು ಶೀಘ್ರವಾಗಿ ನೇಮಕಾತಿಯನ್ನು ನಡೆಸಬೇಕಾಗಿತ್ತು. ಆದರೆ ಈ ವಿಷಯದಲ್ಲಿನ ಅನವಶ್ಯಕ ವಿಳಂಬ ಅನುಮಾನವನ್ನು ಮೂಡಿಸುತ್ತಿದೆ.
ಕನ್ನಡ ಸಂವರ್ಧನೆಯ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಾ, ಡಿ.ಆರ್.ನಾಗರಾಜ್ರವರು ಅನೇಕ ಆಯಾಮಗಳೊಡನೆ ನಮ್ಮನ್ನು ಮುಖಾಮುಖಿಯಾಗಿಸುತ್ತಾರೆ. ಇಲ್ಲಿ ಕನ್ನಡದ ಸಂವರ್ಧನೆಯೊಡನೆ ಕನ್ನಡಿಗರ ಸಂವರ್ಧನೆಯ ಸಾಧ್ಯತೆಯೊಂದರ ಹುಡುಕಾಟವಿದೆ. ಇಂಗ್ಲಿಷ್ ಭಾಷೆಯು ಜಾಗತಿಕ ಭಾಷೆಯಾಗಿ ರೂಪಿತವಾಗಿ, ದೇಶೀ ಭಾಷೆಗಳ ಮೇಲೆ ಸವಾರಿ ಮಾಡುತ್ತಿದೆ ಎಂಬ ರೂಪಣೆಗಳಿಗಿಂತ ಭಿನ್ನವಾದ ನೆಲೆಯಲ್ಲಿ ಕನ್ನಡ-ಕನ್ನಡಿಗರ ಸಂವರ್ಧನೆಯನ್ನು ಅವರು ಮಂಡಿಸುತ್ತಾರೆ.
ನೀಷೆಯ ಪ್ರಕಾರ ರಾಜಕೀಯ, ಅಧಿಕಾರ, ಆರ್ಥಿಕತೆ, ವಿಶ್ವವ್ಯಾಪಾರ, ಸೈನ್ಯ, ಸಂಪತ್ತು ಇತ್ಯಾದಿಗಳ ದಿಕ್ಕಿನಲ್ಲಿ ಏಕಾಗ್ರತೆಯಿಂದ ಶಕ್ತಿ ಹಿಡಿಸಿದಷ್ಟು ಉಳಿದ ಕಡೆಗೆ ಅಷ್ಟರಮಟ್ಟಿಗೆ ಶಕ್ತಿಯ ಕೊರತೆ ಉಂಟಾಗುತ್ತದೆ. ಅಂದರೆ, ಸಾಂಸ್ಕೃತಿಕವಾಗಿ ಅಷ್ಟರ ಮಟ್ಟಿಗೆ ಒಂದು ಸಮಾಜ ಬಡವಾಗುತ್ತದೆ. ಪ್ರಭುತ್ವ ಮತ್ತು ಸಂಸ್ಕೃತಿಗಳೆರಡೂ ಒಟ್ಟಿಗೆ ಹೋಗಲಾರವು ಎನ್ನುವುದು ಅವನ ವಾದ. ಸರ್ಕಾರ ಮತ್ತು ಸಂಸ್ಕೃತಿಗಳ ಸಂಬಂಧವೂ ಹಾಗೆಯೇ ಒಂದು ಇನ್ನೊಂದನ್ನು ಮುಕ್ಕಿ ಜೀವಿಸುತ್ತದೆ. ಪ್ರಭುತ್ವ ಬಲಿಷ್ಠವಾದರೆ ಸಂಸ್ಕೃತಿ ಸೊರಗುತ್ತದೆ. ಜರ್ಮನಿ ರಾಜಕೀಯವಾಗಿ ದೊಡ್ಡ ಶಕ್ತಿ ಆಗಿ ಬೆಳೆದ ಕಾಲದಲ್ಲೇ ಅದರ ಸಂಸ್ಕೃತಿ ಶಿಥಿಲವಾಯಿತು ಎನ್ನುವುದು ನೀಷೆಯ ವಾದ. ಭಾಷಿಕ ಕುಲವೊಂದು ರಾಜಕೀಯವಾಗಿ ಏಕಾಗ್ರತೆಯಿಂದ ಶಕ್ತಿಶಾಲಿಯಾಗಲು ಪ್ರಯತ್ನಿಸಿದ ಹಾಗೆಲ್ಲ ಅದರ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ ಎಂಬ ನೀಷೆಯ ವಿಚಾರ ಕುತೂಹಲಕಾರಿ. ಆದರೆ ಪೂರ್ಣವಾಗಿ ಅದನ್ನು ಒಪ್ಪುವುದು ಕಷ್ಟ.(ಡಿ.ಆರ್.ನಾಗರಾಜ್, ಸಂಸ್ಕೃತಿ ಕಥನ) ನೀಷೆಯ ಈ ಅಭಿಪ್ರಾಯಗಳ ಪ್ರಕಾರ ಪ್ರಭುತ್ವವು ನೀಡುವ ಆದ್ಯತೆಯ ಕ್ಷೇತ್ರಗಳಲ್ಲಿ ವ್ಯವಸ್ಥಿತ ಬೆಳವಣಿಗೆ ಉಂಟಾಗುತ್ತದೆ. ಆದ್ಯತೆಯೇ ರಾಜಕಾರಣವಾಗುವ ಸಾಧ್ಯತೆಗಳಿರುವಾಗ, ಸರ್ಕಾರಗಳ ನೀತಿಯಲ್ಲಿ ಸಂಸ್ಕೃತಿ, ಭಾಷೆಯಂತಹ ವಸ್ತುಗಳಿಗೆ ಎಂದಿಗಾದರೂ ಪ್ರಧಾನ ಆದ್ಯತೆ ಸಿಗುವುದು ಕಷ್ಟಸಾಧ್ಯವೇ. ಆ ಕಾರಣದಿಂದಾಗಿ ಭಾಷೆ, ಸಂಸ್ಕೃತಿಯಂತಹ ವಿಷಯಗಳು ಹಿನ್ನೆಲೆಗೆ ಸರಿಯುವುದು ಅನಿವಾರ್ಯ. ಆ ಕಾರಣದಿಂದಲೇ ಸಂಸ್ಕೃತಿ ಬಡವಾಗುತ್ತದೆ. ಅಲ್ಲದೆ ಸರ್ಕಾರ ಮತ್ತು ಸಂಸ್ಕೃತಿಗಳ ಸಂಬಂಧವು ಒಂದನ್ನೊಂದು ಮುಕ್ಕುವ ಬಗ್ಗೆ ಗಮನ ಸೆಳೆಯಲಾಗಿದೆ. ಸಾಂಸ್ಕೃತಿಕವಾಗಿ ಬಲಿಷ್ಠವಾದ ದೇಶಗಳಲ್ಲಿ ಬಹುಮುಖೀ ಧಾರೆಗಳಿರಬೇಕು. ಈ ಬಗೆಯ ಬಹುತ್ವವು ಪ್ರಭುತ್ವ ಮಾನ್ಯವಾಗುವುದು ಕಷ್ಟಸಾಧ್ಯ. ಆ ಕಾರಣದಿಂದಲೇ ಇವು ಒಂದನ್ನೊಂದು ಮುಕ್ಕಿ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಈ ಬಗೆಯಲ್ಲಿ ರಾಜಕೀಯ ಹಾಗೂ ಸಂಸ್ಕೃತಿಗಳು ಒಂದರೊಡನೊಂದು ಅವಿನಾಭಾವ ವೈರುಧ್ಯಮಯ ಸಂಬಂಧಗಳನ್ನು ಹೊಂದಿರುತ್ತವೆ. ಆಯಾ ರಾಜಕೀಯ ಸ್ಥಿತ್ಯಂತರಗಳು ಸಂಸ್ಕೃತಿಯ ಏರಿಳಿತಗಳನ್ನು ಕೂಡ ನಿರ್ಧರಿಸುವಷ್ಟು ಪ್ರಬಲವಾಗಿರುವುದರಿಂದ ಈ ಅಂಶವನ್ನು ಮುಖ್ಯವಾಗಿಯೇ ಪರಿಗಣಿಸಬೇಕೆನಿಸುತ್ತದೆ. ನಮ್ಮ ರಾಜಕೀಯ ಶಕ್ತಿ ಸಂವರ್ಧನೆಯ ಕೋಲಾಹಲದಲ್ಲಿ ಸಾಂಸ್ಕೃತಿಕ ಪ್ರತಿಭೆ ಮೊಂಡಾಗಿದೆ ಎಂಬ ಮಾತು ನಿಜ. ಆದರೆ, ಸಮಕಾಲೀನ ಜಾಗತಿಕ ರಾಜಕಾರಣದ ವ್ಯಂಗ್ಯ ಎಂದರೆ, ರಾಜಕೀಯವಾಗಿ ಕರ್ನಾಟಕ ಪ್ರಬಲವಾಗದಿದ್ದರೆ ನಮ್ಮ ಸಂಸ್ಕೃತಿ ಎದ್ದು ಕಾಣುವುದೂ ಇಲ್ಲ.(ಡಿ.ಆರ್.ನಾಗರಾಜ್, ಸಂಸ್ಕೃತಿ ಕಥನ) ಈ ಬಗೆಯ ವೈರುಧ್ಯವು ಭಾಷಿಕ ಚಿಂತನೆಗಳನ್ನು ಸಂಕೀರ್ಣವಾಗಿಸುತ್ತವೆ. ಇವು ಒಂದನ್ನೊಂದು ಕಬಳಿಸುವ ಹಾಗೂ ಪೊರೆಯುವ ಎರಡೂ ಸಾಧ್ಯತೆಗಳು ಇರುವುದನ್ನು ಕಾಣಬಹುದು.
ಕನ್ನಡ ಸಂಸ್ಕೃತಿಯನ್ನು ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಆಕರ್ಷಕವಾಗಿ ಹೊರಜಗತ್ತಿಗೆ ಮಂಡಿಸುವ ಪ್ರಶ್ನೆಯನ್ನು ಪರಿಭಾವಿಸುವ ಡಿ.ಆರ್.ನಾಗರಾಜ್ರವರು, "ಇದರೊಳಗೆ ಹುದುಗಿರುವ ರಾಜಕೀಯ ಆಯಾಮವನ್ನು ದೃಷ್ಟಿಯಲ್ಲಿರಿಸಿಕೊಂಡು ಇದರಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸುತ್ತಾ, ನವವಸಾಹತೀಕರಣದ ಎಲ್ಲ ಸಮಸ್ಯೆಗಳು ಈ ಶೈಕ್ಷಣಿಕ ಯೋಜನೆಗಳಲ್ಲೂ ತಲೆಹಾಕುತ್ತವೆ. ಈ ವೈರುಧ್ಯವನ್ನು ದಾಟಲು ಇರುವ ಒಂದು ಮಾರ್ಗ ಎಂದರೆ, ಕನ್ನಡದ ಬೌದ್ಧಿಕ ಪರಂಪರೆಗಳು ತಾವು ತೀವ್ರವಾಗಿ ಅಂತರ್ಮುಖಿಯಾಗಿ ಬೆಳೆಯುತ್ತಾ ಹೋಗುವುದು. ಕನ್ನಡ ಕುಲ ತೀವ್ರವಾಗಿ ಅಂತರ್ಮುಖಿಯಾದಷ್ಟು ಅದರ ಶಕ್ತಿ ಸಂವರ್ಧಿಸುತ್ತದೆ. ನವವಸಾಹತೀಕರಣದಿಂದ ಪಾರಾಗಲು ಇದೊಂದು ಸಮರ್ಥದಾರಿ" ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಈ ಅಂತರ್ಮುಖಿ ಮಾದರಿಯು ನಿರ್ವಸಾಹತೀಕರಣದ ಹಂತ. ನವ ವಸಾಹತುಶಾಹಿಗಳ ದಾಳಿಯ ಸಂದರ್ಭದಲ್ಲಿ ಈ ಬಗೆಯ ದೇಶೀ ಮಾದರಿಗಳಿಗೆ ಇರುವುದು, ತನ್ನೊಳಗೆ ಆಳಕ್ಕೆ ಇಳಿದು, ತನ್ನ ಅಂತ-ಶಕ್ತಿಯನ್ನು ಕಂಡುಕೊಳ್ಳುವುದು ಇದರ ಮುಖ್ಯ ಮಾದರಿಯಾದರೆ ಮಾತ್ರ ನವವಸಾಹತೀಕರಣದಿಂದ ಮುಕ್ತವಾಗಬಹುದು. ಆದರೆ ವಸಾಹತುಶಾಹಿಯ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದ ನಮ್ಮ ದೇಶದಲ್ಲಿ ಗ್ಯಾಟ್ ಒಪ್ಪಂದಾನಂತರ ನವ ವಸಾಹತುಶಾಹಿಗಳಿಗೆ ಕೆಂಪುಹಾಸಿನ ಸ್ವಾಗತವನ್ನು ನೀಡುತ್ತಿರುವುದರ ಕಡೆಗೆ ನಮ್ಮ ಗಮನವೇ ಹರಿದಿಲ್ಲ. ಪ್ರಾದೇಶಿಕ ಭಾಷೆ, ಸಂಸ್ಕೃತಿಗಳ ಕುರಿತ ಸಾಧ್ಯಾಸಾಧ್ಯತೆಗಳ ಕುರಿತ ವಿಸ್ತರಣೆಯ ಭಾಗವಾಗಬೇಕಾಗಿದ್ದ ಕರ್ನಾಟಕದ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಇದುವರೆಗಿನ ಸಾಧನೆಯನ್ನು ಗಮನಿಸಿದರೆ ಉದ್ದೇಶಗಳ ಸಾರ್ಥಕತೆಯ ಸಮೀಪ ಕೂಡ ಅವುಗಳು ಸುಳಿಯುವುದು ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ಮೂಡದಿರದು. ಈ ಸಂದೇಹಕ್ಕೆ ಕಾರಣಗಳೆಂದರೆ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕಮರುತ್ತಿರುವ ಕನ್ನಡ ವಾತಾವರಣ, ಇಲ್ಲಿ ಹೆಚ್ಚುತ್ತಿರುವ ಪರಭಾಷಿಕ ಪರಿಸರ, ಹೊರಗಿನವರಿಂದ ಉದ್ಯೋಗಾವಕಾಶಗಳ ಕಬಳಿಕೆ, ಹೆಚ್ಚುತ್ತಿರುವ ಸರ್ಕಾರಿ ಶಾಲಾಕಾಲೇಜುಗಳ ದುಸ್ಥಿತಿ, ಕನ್ನಡ ಮಾಧ್ಯಮ ಶಾಲೆಗಳಿಗಾಗಿ ಹೋರಾಟ ಮಾಡಬೇಕಾಗಿರುವ ಪರಿಸ್ಥಿತಿ, ಕಲೆ ಹಾಗೂ ಮಾನವಿಕ ವಿಷಯಗಳಲ್ಲಿ ಕುಂದುತ್ತಿರುವ ಆಸಕ್ತಿ, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರುವುದು, ಅತ್ಯಾಧುನಿಕ ಉಪಕರಣಗಳಿಂದ ಅನಾಧುನಿಕ ಮೌಢ್ಯಗಳನ್ನು ಪ್ರಚಾರಕ್ಕೆ ತರುವ ಪ್ರಯತ್ನಗಳ ನಿರಂತರ ಮುಂದುವರಿಕೆ.
ಹೇಳಿಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಲ್ಲ ವರ್ಗಗಳ ನಿರೀಕ್ಷೆಗಳೂ ಹೆಚ್ಚಾಗಿವೆ. ಪ್ರಾಯಶಃ ಈ ನಿರೀಕ್ಷೆಗಳ ಭಾರವನ್ನು ಹೊತ್ತು ಯಶಸ್ವಿಯಾಗಿ ನಿಭಾಯಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆನಿಸುತ್ತದೆ. ಕನ್ನಡ ನಾಡು-ನುಡಿಯ ಅಭಿವೃದ್ಧಿಯನ್ನು ಮೂಲೋದ್ದೇಶವಾಗುಳ್ಳ ಪ್ರಾಧಿಕಾರ ಹಾಗೂ ಅಕಾಡೆಮಿಗಳ ಮುಖ್ಯಸ್ಥರ ನೇಮಕಾತಿಯಲ್ಲಿ ವ್ಯಕ್ತವಾಗುತ್ತಿರುವ ವಿಳಂಬವನ್ನು ಸರ್ಕಾರದ ಕರ್ತವ್ಯಲೋಪವೆಂದೇ ನಾವು ಅರ್ಥೈಸಿಕೊಳ್ಳಬೇಕಿದೆ. ಪ್ರಸ್ತುತ ಈ ವಿಷಯವನ್ನು ಬುದ್ಧಿಜೀವಿಗಳು ಹಾಗೂ ಸಾಹಿತಿಗಳು ವಿರೋಧಿಸುವ ಕೆಲಸವನ್ನು ಮಾಡುತ್ತಿಲ್ಲ. ಕಾರಣಗಳೇನಿರಬಹುದೆಂದರೆ 1)ಸ್ವತಃ ಕೆಲವರು ಈ ಹುದ್ದೆಗಳ ಮೇಲೆ ಕಣ್ಣಿಟ್ಟಿರುವುದು. 2)ಇನ್ನು ಕೆಲವರು ಈ ಸರ್ಕಾರದ ಪರವಾಗಿ ಸೌಮ್ಯಭಾವವನ್ನು ಹೊಂದಿರುವುದು. 3)ಚುನಾವಣಾಪೂರ್ವದಲ್ಲೇ ಕೆಲವರು ಈ ಸರ್ಕಾರದ ಪರವಾಗಿ ಆಡಿರುವ ಮಾತುಗಳು ಹಾಗೂ ಇಟ್ಟ ಭರವಸೆಗಳು. ಈ ಕೆಲವು ಕಾರಣಗಳಿಂದ ಈ ವಿಷಯವನ್ನು ಯಾರೂ ಜೋರುದನಿಯಲ್ಲಿ, ಬಹಿರಂಗವಾಗಿ ವಿರೋಧಿಸುತ್ತಿಲ್ಲ. (ಕೆ.ಎಸ್.ನಿಸಾರ್ ಅಹಮದ್ ಅವರೊಬ್ಬರನ್ನು ಹೊರತು ಪಡಿಸಿ) ಅಲ್ಲದೇ ಈ ಸರ್ಕಾರದ ಅನೇಕ ಜನವಿರೋಧಿ ನೀತಿಗಳನ್ನೂ ಕೂಡ ಹೀಗೆಯೆ ಸಹಿಸಿಕೊಂಡು ಬರಲಾಗುತ್ತಿದೆ. ಉದಾ: ರೈತರ ಅಹವಾಲುಗಳನ್ನು ಕೇಳದೆ, ಸಾವಿಗೆ ಕಾರಣವಾಗಿದ್ದು ಹಾಗೂ ರೈತರ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ಮಾಡಿರುವ ಕ್ರಮ.
ರಾಜ್ಯದಾದ್ಯಂತ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳ ಬಗೆಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಿದೆ. ಅನುದಾನಿತ ಕಾಲೇಜುಗಳ ಉಪನ್ಯಾಸಕರ, ಅತಿಥಿ ಉಪನ್ಯಾಸಕರ, ದಿನಗೂಲಿ ನೌಕರರ, ಅಂಗನವಾಡಿ ಕಾರ್ಯಕರ್ತೆಯರ, ರೈತರ ಪ್ರತಿಭಟನೆಗಳಲ್ಲದೆ ಮಾಜಿಮುಖ್ಯಮಂತ್ರಿಗಳ ಪ್ರತಿಭಟನೆಗಳೂ ಸರ್ಕಾರದ ಗಮನಸೆಳೆದಿಲ್ಲ. ಅಷ್ಟು ಈ ಸರ್ಕಾರ ತನ್ನ ಸಂವೇದನೆಯನ್ನು ಕಳೆದುಕೊಂಡಿದೆ. ಇನ್ನು ಸಾಂಸ್ಕೃತಿಕ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಬಗೆಗೆ ಸರ್ಕಾರಕ್ಕೆ ಅರಿವಿರುವುದೇ ಎಂಬ ಪ್ರಶ್ನೆಯನ್ನು ಮೂಡಿಸುತ್ತಿದೆ. ಅಹಿಂದ ಚಳವಳಿ ಹಾಗೂ ಸಂಘಟನೆಯಿಂದ ಮುಖ್ಯಮಂತ್ರಿ ಹುದ್ದೆವರೆಗೆ ಕ್ರಮಿಸಿರುವ ಮುಖ್ಯಮಂತ್ರಿಗಳ ಈ ಚಳವಳಿ ವಿರೋಧಿ ನಿಲುವಿನ ಕುರಿತು ಯಾರೂ ಪ್ರಶ್ನಿಸದಿರುವುದು ಇಂತಹ ಅನಾಹುತಗಳು ಕರ್ನಾಟಕದಲ್ಲಿ ಇನ್ನೂ ಬೇರೆ ವಿನ್ಯಾಸದಲ್ಲಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ.
ಪ್ರದೀಪ್ ಮಾಲ್ಗುಡಿ
ಸಂಪಾದಕ, ಜನಸಂಸ್ಕೃತಿ ಮಾಸಿಕ