ಮಾರ್ಟಿನ್ ಲೂಥರ್ ಕಿಂಗ್ ಮತ್ತು ಗಾಂಧೀಜಿಯಂತೆಯೇ ನೆಲ್ಸನ್ ಮಂಡೇಲಾ ಕೂಡ ಈ ಶತಮಾನದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದವರು. ಈ ಮೂವರೂ ತಮ್ಮ ರಾಷ್ಟ್ರದ ಗತಿಯನ್ನು ಬದಲಿಸಿದವರು. ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಿ, ಅದಕ್ಕೆ ಪ್ರಪಂಚವೇ ಗೌರವಿಸುವಂಥ ಮುತ್ಸದ್ದಿ ರೂಪವನ್ನು ಕೊಟ್ಟವರು. ಗಾಂಧಿ ಮತ್ತು ಕಿಂಗ್ ಅಸಹನೆಯ ಗುಂಡಿಗೆ ಬಲಿಯಾದರು. ಆದರೆ ಮಂಡೇಲಾರದ್ದು ಶತ್ರುಗಳನ್ನೇ ಸೃಷ್ಟಿಸಿಕೊಳ್ಳದೆ ಪ್ರಶಾಂತವಾಗಿಯೇ ಕಣ್ಮುಚ್ಚಿದರು.
ಮಂಡೇಲಾ ಕೂಡ ತೀವ್ರ ಸಂಕಟ ಅನುಭವಿಸಿದ್ದರು. ಅವರಿಗೆ ಮೂರು ಮದುವೆಯಾಗಿದ್ದವು. ಭೂಗತ ಪ್ರಪಂಚದೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ ಎಂದು ಅವರ ಎರಡನೇ ಹೆಂಡತಿ ವಿನ್ನಿಯ ಮೇಲೆ ಆರೋಪಗಳು ಬಂದಾಗ, ಮಂಡೇಲಾ ಒದ್ದಾಡಿಹೋಗಿದ್ದರು. ಮಂಡೇಲಾರ ಆರೋಗ್ಯ ಕೆಡುತ್ತಿದ್ದಂತೆಯೇ ಅವರ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆ ಸ್ಥಾಪಿಸಿದ್ದ ಮಂಡಳಿಯೊಂದರ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಬಂಧನದಲ್ಲಿದ್ದಾಗ ಕಲ್ಲು ಒಡೆಯುವ ಕೆಲಸ ಮಾಡಿದ್ದರಿಂದ ಮಂಡೇಲಾರಿಗೆ ಟಿ.ಬಿ. ರೋಗ ಅಂಟಿಕೊಂಡಿತ್ತು. ಆ ಶ್ವಾಸಕೋಶದ ತೊಂದರೆಯೇ ಕೊನೆಗೆ ಅವರ ಉಸಿರುಗಟ್ಟಿಸಿತು.
ಇದೆಲ್ಲದರ ನಡುವೆಯೇ ಮಂಡೇಲಾ ಮಾನವೀಯತೆಯ ಮೂರ್ತರೂಪವಾಗಿ ಮೆರೆದರು. ದೀರ್ಘ ಕಾಲದ ಬಂಧನವೂ ಮಂಡೇಲಾರ ಮನಸ್ಸನ್ನು ಕಲ್ಮಷಗೊಳಿಸಲಿಲ್ಲ, ಕುಸಿದುಹೋಗುವಂತೆ ಮಾಡಲಿಲ್ಲ. 1994ರಲ್ಲಿ ತಮ್ಮ ದೇಶದ ಮೊದಲ ಕಪ್ಪುವರ್ಣೀಯ ಅಧ್ಯಕ್ಷನಾಗಿ ಅವರು ಅಧಿಕಾರ ಸ್ವೀಕರಿಸಿದಾಗ, ಅವರು ಸಂಯಮ ಮತ್ತು ಸಹಿಷ್ಣುತೆಯ ಜೀವಂತ ಚಿತ್ರವಾಗಿದ್ದರು. ಅವರು ಅಧ್ಯಕ್ಷರಾಗಿ ಮಾಡಿದ ಮೊದಲ ಕೆಲಸವೆಂದರೆ, ಶಾಂತಿ ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸಿ, ಬಿಳಿಯರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಹಪಾಹಪಿಸುತ್ತಿದ್ದವರನ್ನು ಸುಮ್ಮನಾಗಿಸಿದ್ದು ಮತ್ತು ದಕ್ಷಿಣ ಆಫ್ರಿಕಾದ ಎಲ್ಲಾ ಪ್ರಜೆಗಳಿಗೂ ಸಮಾನಹಕ್ಕನ್ನು ನೀಡುವ ನೀತಿಗಳನ್ನು ರೂಪಿಸಿದ್ದು.
ಎಲ್ಲಾ ರಾಷ್ಟ್ರಪಿತರಂತೆ ಮಂಡೇಲಾಗೂ ಕೂಡ ತಮ್ಮ ಸಾರ್ವಜನಿಕ ವರ್ಚಸ್ಸು ಮತ್ತು ಅದರ ಸೂಚ್ಯಾರ್ಥಗಳ ಬಗ್ಗೆ ಸ್ಪಷ್ಟವಾಗಿ ಅರಿವಿತ್ತು. ಅವರು ತೊಡುತ್ತಿದ್ದ ರೇಷ್ಮೆಯ ಬುಶ್ ಶರ್ಟ್‌ಗಳು ಕೇವಲ ಸ್ಟೈಲ್ ಸ್ಟೇಟ್‌ಮೆಂಟ್‌ಗಳಾಗಿರಲಿಲ್ಲ, ಅವು ವಿಮೋಚಿತ ಆಫ್ರಿಕನ್ನರು ಮತ್ತು ಸೂಟು ಬೂಟು ಧರಿಸಿದ ದಬ್ಬಾಳಿಕೆಗಾರರ
ನಡುವಿನ ಅಂತರವನ್ನು ತೋರಿಸುತ್ತಿದ್ದವು. ಅವರ ಭಾಷಣ ಮತ್ತು ಬರಹಗಳು ವಿವೇಚನಾಯುಕ್ತ ಮನಸ್ಸಿನಿಂದ ಹೊರಬರುತ್ತಿದ್ದವು. ತಾವು ಇಡುವ ಪ್ರತಿಯೊಂದು ಹೆಜ್ಜೆಯನ್ನು ಜನ ಗಮನಿಸುತ್ತಾರೆ ಎನ್ನುವುದು ಅವರಿಗೆ ಗೊತ್ತಿತ್ತು. ಅಧ್ಯಕ್ಷರಾಗಿ ಎರಡನೆಯ ಅವಧಿಗೂ ಅವರು ಮುಂದುವರಿಯಬಹುದಿತ್ತಾದರೂ ಆ ಕೆಲಸವನ್ನು ಅವರು ಮಾಡಲಿಲ್ಲ. ಇನ್ನೊಬ್ಬರಿಗೆ ಅಧಿಕಾರ ಕೊಡುವ ಮಹತ್ವವವನ್ನು ತಮ್ಮ ಈ ನಡೆಯ ಮೂಲಕ ಅವರು ಪ್ರಪಂಚಕ್ಕೆ ತೋರಿಸಿದರು.
ದೇಶದ ಒಳಿತಿಗಾಗಿ ತಮ್ಮ ಇಚ್ಛೆಗಳನ್ನು ಕಾಲಲ್ಲಿ ತುಳಿದದ್ದೇ ಈ ಮೂವರು, ಅಂದರೆ, ಕಿಂಗ್, ಮಂಡೇಲಾ ಮತ್ತು ಗಾಂಧಿಯವರನ್ನು ಬೇರೆಲ್ಲಾ ನಾಯಕರಿಗಿಂತ ಭಿನ್ನವಾಗಿಸುತ್ತದೆ. ಅವರ ನಿಸ್ವಾರ್ಥ ಗುಣವನ್ನು ಜನರು ಸ್ಪಷ್ಟವಾಗಿ ಗುರುತಿಸುತ್ತಾರೆ. ಇವರುಗಳು, ಪಡೆದದ್ದಕ್ಕಿಂತ ಕೊಟ್ಟದ್ದೇ ಹೆಚ್ಚು. ಇಂಥವರು ಆರಾಧನಾ ರೂಪವನ್ನು ಪಡೆಯುವುದೂ ಇದೇ ಕಾರಣಕ್ಕೆ. ಆದರೆ ಈ ತ್ರಿಮೂರ್ತಿಗಳ ಸಹಚರರಿಗೆ ಮಾತ್ರ ಇವರ ಮಟ್ಟಕ್ಕೆ ಏರಲು ಸಾಧ್ಯವಾಗಲೇ ಇಲ್ಲ. ಜವಾಹರ್‌ಲಾಲ್ ನೆಹರು ಹೃದಯವಂತರಾಗಿದ್ದರೂ, ಇತಿಹಾಸದ ಪುಟಗಳಲ್ಲಿ ಮಹಾನ್ ಪಾತ್ರವಾಗಬೇಕು ಎಂಬ ಆಸೆಗೆ ಮತ್ತು ಕುಟುಂಬದ ದೌರ್ಬಲ್ಯಕ್ಕೆ ಬಿದ್ದು 'ಬೇರೆಯದ್ದೇ' ಪಾತ್ರ ಪಡೆದರು. ಮಾರ್ಟಿನ್
ಲೂಥರ್ ಕಿಂಗ್ ಅವರಷ್ಟೇ ಪ್ರಖ್ಯಾತರಾಗಿದ್ದ ಅಮೆರಿಕದ ಕರಿಯ ನಾಯಕ ರೇವ್ ಜೆಸ್ಸಿ ಹಗರಣಗಳ ಹೂರಣದಲ್ಲಿ ಮುಳುಗಿ ಮರೆಯಾದರು. ಇನ್ನು ಮಂಡೇಲಾರ ಸಹಚರರದ್ದೂ ಇದೇ ಪಾಡಾಯಿತು.
ಇನ್ನೊಂದು ಕುತೂಹಲಕರ ಅಂಶವೆಂದರೆ, ಗಾಂಧಿ-ಕಿಂಗ್-ಮಂಡೇಲಾರ ಶ್ರೇಷ್ಠತೆಯನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದು ಅವರುಗಳ ಅಹಿಂಸಾ ಮಾರ್ಗ. ಗಾಂಧಿಯವರ ಅಹಿಂಸಾ ಮಾರ್ಗಕ್ಕೆ ಸಾಮ್ರಾಜ್ಯಶಾಹಿ ಮನಸ್ಥಿತಿಯ ಜನರಲ್ ಸ್ಮಟ್ಸ್‌ನ ಮನಸ್ಸು ಕರಗಿತ್ತು. ಮಂಡೇಲಾ ಕೂಡ ಅದೇ ನಾಡಲ್ಲಿ ಅದೇ ಮಾರ್ಗವನ್ನು ಅನುಸರಿಸಿ ಸರ್ವಾಧಿಕಾರಿಗಳ ಸದ್ದಡಗುವಂತೆ ಮಾಡಿದರು. ಅದಾಗ್ಯೂ ಮಂಡೇಲಾ, ವರ್ಣಭೇದ ಮತ್ತು ವಿವೇಚನಾರಹಿತ ವ್ಯವಸ್ಥೆಯನ್ನು ಕೊನೆಗಾಣಿಸಬೇಕು ಎಂಬ ಆತುರದಲ್ಲಿ ಅವರು ಕೆಲ ಕಾಲ ಹಿಂಸಾ ಮಾರ್ಗಕ್ಕೂ ಕೈಹಾಕಿದ್ದರಾದರೂ, ಅವರೊಳಗಿನ ಮಾನವೀಯ ಗುಣ ಕೊನೆಗೆ ಅಹಿಂಸೆಯನ್ನೇ ಅಪ್ಪಿಕೊಂಡಿತು.
ಹಾಗಿದ್ದರೆ, ಕೊನೆಯಲ್ಲಿ ಗಾಂಧಿ ಗೆದ್ದರೆ? ಇದಕ್ಕೆ ಉತ್ತರ, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ರಾಜ್ಯ ವ್ಯವಹಾರಗಳಿಂದ ದೂರ ಉಳಿಯಬೇಕು ಎಂಬ ಅವರ ನಿರ್ಧಾರದಲ್ಲಿ ಸಿಗುತ್ತದೆ. ಹಾಗಿದ್ದರೆ ಮಾರ್ಟಿನ್ ಲೂಥರ್ ಕಿಂಗ್ ಗೆದ್ದರೆ? ರಿಪಬ್ಲಿಕನ್ ಸಂಪ್ರದಾಯವಾದಿಗಳು ಕಪ್ಪು ವರ್ಣೀಯ ನಾಯಕ ಒಬಾಮಾ ಅವರ ವಿರುದ್ಧ ಗುಂಪುಕಟ್ಟಿಕೊಂಡಿರುವುದರಲ್ಲಿ ಇದಕ್ಕೆ ಉತ್ತರ ಸಿಗುತ್ತದೆ. ನೆಲ್ಸನ್ ಮಂಡೇಲಾ ನಿಸ್ಸಂಶಯವಾಗಿಯೂ ತಮ್ಮ ರಾಷ್ಟ್ರವನ್ನು ಪ್ರಪಂಚದ ಪಟದಲ್ಲಿ ಎತ್ತಿ ನಿಲ್ಲಿಸುವಲ್ಲಿ ಗೆದ್ದಿದ್ದಾರೆ. ಸೊವೆಟೋದ ಮಹಿಳೆಯೊಬ್ಬಳು ಹೇಳಿದ ಮಾತು ಮಂಡೇಲಾರ ಯಶಸ್ಸನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆಕೆ ಹೇಳುತ್ತಾಳೆ: "ಅವರಿಲ್ಲದಿದ್ದರೆ(ಮಂಡೇಲಾ) ನಮ್ಮ ಕಥೆ ಮುಗಿದೇ ಹೋಗಿರುತ್ತಿತ್ತು"
ಒಬ್ಬ ನಾಯಕನಿಗೆ ಇದಕ್ಕಿಂತ ಹೆಚ್ಚಿನದ್ದೇನು ಬೇಕು?
-ಟಿಜೆಎಸ್ ಜಾರ್ಜ್