ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಖುಷಿಯಾಗಿದೆ ಇಂದು ನಿಮ್ಮಿಂದಲೇ....

ಡಿಸೆಂಬರ್ 8. ಅಂದ್ರೆ ನಿನ್ನೆಯ ಭಾನುವಾರ. ಕರ್ನಾಟಕದಲ್ಲಿ ಏನಪ್ಪಾ ಹೊಸಾ ಸುದ್ದಿ? ...

Mainashree
Updated On : 9 Dec 2013, 11:58 am

ಡಿಸೆಂಬರ್ 8. ಅಂದ್ರೆ ನಿನ್ನೆಯ ಭಾನುವಾರ. ಕರ್ನಾಟಕದಲ್ಲಿ ಏನಪ್ಪಾ ಹೊಸಾ ಸುದ್ದಿ? ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಖಂಡಿತಾ ಆಗಿರ್ಲಿಲ್ಲ! 'ಕನ್ನಡಪ್ರಭ'ದ ಹೊಸ ಪುರವಣಿ 'ಖುಷಿ'ಯದ್ದೇ ಎಲ್ಲೆಡೆ ಸುದ್ದಿ. ಎರಡು ಸೀಟಿಗೆ ಸರಿಯಾಗಿ ಆವರಿಸಿಕೊಳ್ಳುತ್ತಿದ್ದ ಸಾಪ್ತಾಹಿಕ ಈಗ ಸ್ಲಿಮ್ಮಾಗಿ, ತೊಡೆ ಮೇಲೆ ಮಲಗಿಸಿದ ಪುಟ್ಟ ಮಗುವಿನಂತೆ ಕೊಟ್ಟ 'ಖುಷಿ' ಅಷ್ಟಿಷ್ಟಲ್ಲ. ನೂರಾರು ಇಮೇಲ್‌ಗಳು, ಎಸ್ಸೆಮ್ಮೆಸ್‌ಗಳು 'ಖುಷಿ'ಗೆ ಬೆನ್ನು ತಟ್ಟಿದವು. ಅವುಗಳಲ್ಲಿ ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಟ್ಟಿದ್ದೇವೆ...

'ಖುಷಿ' ಎಗರಿಸಿಬಿಟ್ಟಿದ್ದ!
'ಖುಷಿ' ಜಾಹೀರಾತನ್ನು ಕಂಡು ಯಾವಾಗ ಆ ಮ್ಯಾಗಜಿನ್ ಓದ್ತೀನೋ ಅಂತಂದ್ಕೊಂಡಿದ್ದೆ. ಬೆಳಗ್ಗೆ ಬೇಗೆದ್ದು, ಮನೆ ಬಾಗಿಲ ಬಳಿ ಬಿದ್ದಿದ್ದ ಅಷ್ಟೂ ಪತ್ರಿಕೆಗಳಲ್ಲಿ ಮೊದಲು 'ಕನ್ನಡಪ್ರಭ'ವನ್ನೇ ಕೈಗೆತ್ಕೊಂಡೆ. ಮುಖಪುಟ ಬಹಳ ಮುದ್ದಾಗಿತ್ತು. ಎಲ್ಲಿ 'ಖುಷಿ' ಅಂತ ತಡಕಾಡ್ತೀನಿ, ಪೇಪರ್ ಜೊತೆ 'ಖುಷಿ'ನೇ ಇಲ್ಲ. ಪೇಪರ್ ಹಾಕುವ ಹುಡುಗನಿಗೆ ನನಗಿಂತ ಹೆಚ್ಚು ಕುತೂಹಲ ಇತ್ತೋ ಏನೋ! ಎಗರಿಸಿಬಿಟ್ಟಿದ್ದ! ಆದರೂ, ನನ್ಗೆ ಸಿಟ್ಟು ಬರ್ಲಿಲ್ಲ. ಹಂಸಲೇಖ ಯಾವತ್ತೂ ಧಾರಾಳಿ. 'ಖುಷಿ'ಗಾಗಿ ಮತ್ತೆ ಪೇಪರ್ ಅಂಗಡಿಗೆ ಹೋದೆ. ಕನ್ನಡ ಪುರವಣಿ ಪ್ರಪಂಚದಲ್ಲಿ ಒಳ್ಳೆಯ ಪ್ರಯತ್ನ ಇದು. ಈ 'ಖುಷಿ' ಪರಂಪರೆ ಹೀಗೆ ಮುಂದುವರಿಯಲಿ...
-ಹಂಸಲೇಖ, ಸಂಗೀತ ನಿರ್ದೇಶಕ

ಮಿನಿ ದೀಪಾವಳಿ ಸಂಚಿಕೆ
ನೀವು ಬಿಡಿಯಪ್ಪಾ, 'ಕನ್ನಡಪ್ರಭ'ದವರು ಹೊಸದೇನಾದ್ರೂ ಮಾಡ್ತಾನೇ ಇರ್ತೀರಿ. 'ಖುಷಿ' ಸಣ್ಣ ದೀಪಾವಳಿ ಸಂಚಿಕೆ ರೀತಿ ಮಜಾ ಕೊಡ್ತು. ಅಂದ್ರೆ, ನಮಗೀಗ ಪ್ರತಿ ಭಾನುವಾರ ದೀಪಾವಳಿ! ದೊಡ್ಡ ಶೀಟಿನ ಪೇಪರ್ ಅನ್ನು ಇಟ್ಕೊಳ್ಳೋದೂ ರಗಳೆ, ಆದರೆ ಇದು ಹ್ಯಾಂಡಿಯಾಗಿದೆ. ವೆರೈಟಿ ಇದೆ. ವಿರಾಮದ ಭಾನುವಾರದಲ್ಲಿ ತಾಜಾ ಗಾಳಿ ಬೀಸಿದ ಹಾಗಾಯ್ತು. ರಿಯಲೀ ಗುಡ್.
- ಟಿ.ಎನ್. ಸೀತಾರಾಂ, ನಿರ್ದೇಶಕ

ಒಳ್ಳೆಯ ಪ್ರಯತ್ನ
ತುಂಬಾ ಚೆನ್ನಾಗಿದೆ. ಮುಖಪುಟವಂತೂ ಆಕರ್ಷಕವಾಗಿದೆ. ಪ್ರತಿವಾರ ಹೀಗೆಯೇ ಬರಲಿ. ಒಳ್ಳೆಯ ಪ್ರಯತ್ನ.
- ಶಿವರಾಜ್ ಕುಮಾರ್, ಚಿತ್ರನಟ

ಮನ್ನಣೆ ಗಳಿಸಲಿ...
ನಿಜಕ್ಕೂ ಖುಷಿಯಾಯಿತು. ಕಣ್ಮನ ತಣಿಸುವಂತೆ ರೂಪುಗೊಂಡು ಬಂದಿರುವ 'ಖುಷಿ'ಗೆ ಹೃತ್ಪೂರ್ವಕ ಸ್ವಾಗತ. ಇದು ಪ್ರತಿವಾರ ಸೌಂದರ್ಯ ಮತ್ತು ಸತ್ವ- ಎರಡನ್ನೂ ಒಳಗೊಂಡು, ಮನರಂಜನೆಯ ಜೊತೆಗೆ ಮನೋವಿಕಾಸವನ್ನೂ ನೀಡುತ್ತ, ಪಂಡಿತ, ಪಾಮರರಿಬ್ಬರಿಗೂ ಬೇಕಾದ ಸಂಚಿಕೆಯಾಗಿ ಮುಂದುವರಿಯಲಿ. ಎಲ್ಲ ಕಲಾಮಾಧ್ಯಮಗಳಿಗೂ ಮುಕ್ತ ವೇದಿಕೆಯಾಗಿ ಜನ ಮನ್ನಣೆ ಗಳಿಸಲಿ ಎಂದು ಹಾರೈಸುತ್ತೇನೆ.
-ಬಿ.ಆರ್. ಲಕ್ಷ್ಮಣರಾವ್, ಕವಿ

ಸಣ್ಣ ಸಂಗತಿಗಳ ಖುಷಿ
ಹಳೆಯ 'ಸಖಿ' ಸಿಕ್ಕ 'ಖುಷಿ'. ತುಂಬಾ ವಿಶೇಷ. ಅಚ್ಚರಿದಾಯಕವೂ ಆಗಿದೆ. ಬದುಕಿನ ದೊಡ್ಡ ಖುಷಿಗಳೆಲ್ಲ ಸಣ್ಣ ಸಂಗತಿಗಳಲ್ಲೇ ಇರುತ್ತೆ.
-ಭುವನಾ ಸುರೇಶ್, ಲೇಖಕಿ

ಜಯ ಸಿಗಲಿ...
ಕನ್ನಡಪ್ರಭದ ಹೊಸ ಪ್ರಯೋಗಕ್ಕೆ ಜಯ ಸಿಗಲಿ. ಸಿನಿಮಾ ನಟ, ನಟಿಯರ ಕಡೆಗಲ್ಲದೆ ನಿರ್ಮಾಪಕರ ಕಡೆಗೂ ಗಮನ ಕೊಡಿ. ಚಿತ್ರೋದ್ಯಮಕ್ಕೆ ಮಹತ್ವ ನೀಡಿ.
-ಸೂರಪ್ಪ ಬಾಬು, ನಿರ್ಮಾಪಕ

ಖುಷಿಯೋ ಖುಷಿ
ವ್ಹಾವ್, ಸೂಪರ್. ಸಿನಿಮಾ ಸುದ್ದಿಗಳನ್ನು ಹೀಗೆಯೇ ಕೊಡ್ತೀರಾ ಅಲ್ವಾ? 'ಖುಷಿ' ಓದಿ ತುಂಬಾ ಖುಷಿ ಆಯ್ತು.
-ಶುಭಾ ಪೂಂಜಾ, ನಟಿ

ಖುಷಿಗೆ ಕಾರಣ
ಪ್ರೀತಿಯ ಭಟ್ ಸರ್, 'ಚಾಲ್ ಮೆ ಡೌಲಾ' ಅಂತ ನಮ್ಮೂರಾಗ ಭಾಳ ಫೇಮಸ್ ಬಾಯಿಮಾತು ಅದ ಸರ್. ಅದು ಈ ವಾರದ 'ಖುಷಿ'ಗೆ ಅಕ್ಷರಶಃ ಅನ್ವಯಿಸ್ತದ. 'ಖುಷಿ'ಯೊಳಗ ಹೊಸತನ ಅದ, ಅದಕ್ಕಾಗಿ ನಮ್ಮೊಳಗ 'ಖುಷಿ' ಅದ; 'ಖುಷಿ'ಯೊಳಗ ಕಮಿಟ್‌ಮೆಂಟ್ ಕಾಣಿಸ್ತದ, ಹೀಗಾಗಿ ನಮಗೂ ಖುಷಿ ಆಗೇದ. ನಮ್ಮ ಜೀವನಕ್ಕೆ 'ಖುಷಿ'ಯ ಶ್ರೀಮಂತಿಕೆ ತಂದೊದಗಿಸಿದ ನಿಮಗ, ರಾಧಾಕೃಷ್ಣ ಭಡ್ತಿಯ ತಂಡಕ್ಕ ಖುಷ್‌ಖುಷಿಯ ಅಭಿನಂದನೆಗಳು.
- ಯಶವಂತ ಸರದೇಶಪಾಂಡೆ, ಹಾಸ್ಯ ಕಲಾವಿದ   

5 ರು. ಮಾಡಿಬಿಡಿ!
ಕೇವಲ 4 ರು.ಗೆ ಇಷ್ಟೊಂದು ವೈವಿಧ್ಯ ಕೊಡ್ತಾ ಇದ್ದೀರಂದ್ರೆ, ಅಬ್ಬಾ! ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಭಾನುವಾರದ ಸಂಚಿಕೆಯ ಬೆಲೆಯನ್ನು 5 ರು. ಮಾಡಿಬಿಡಿ. 'ಖುಷಿ'ಯಲ್ಲೇ ಸ್ವೀಕರಿಸುತ್ತೇವೆ
- ಗೋವಿಂದ ರೆಡ್ಡಿ, cm‌g‌reddy1@‌gma‌il.‌c‌om​

ಹೊಸ ಪ್ರಯೋಗ
ಕನ್ನಡಪ್ರಭದ 'ಖುಷಿ' ಹೊಸ ಪ್ರಯೋಗ, ವೈವಿಧ್ಯಮಯ ವಾಙ್ಮಯ ಸವಿಯುವ ಸುಯೋಗ
ನೀಡಿದ್ದಕ್ಕೆ ಇಂಥ ಪುರವಣಿ ಓದುಗನಾಗಿ ಚಿರಋಣಿ.
- ಡುಂಡಿರಾಜ್, ಹನಿಗವಿ

ಹೃದಯ ನವಿಲಾಯಿತು...
ಇದು ಬದುಕಿನ 'ಖುಷಿ'. ಬಿಡದೆ ಕೂತು ಓದಿದೆ. ಹೃದಯ ನವಿಲಿನಂತೆ ಗರಿಬಿಚ್ಚಿ ನರ್ತಿಸಿದ್ದು ನನಗೂ ಗೊತ್ತಾಗಲಿಲ್ಲ. ಅದೇನು 'ಖುಷಿ'ಯ ಪವಾಡವೋ ನಾ ಕಾಣೆ. ಈ 'ಖುಷಿ'ಹೀಗೆ ಮುಂದುವರಿಯಲಿ.
- ಎಚ್.ಎಸ್. ವೆಂಕಟೇಶಮೂರ್ತಿ, ಸಾಹಿತಿ

ಸಂಡೇಗೆ ಗಿಫ್ಟ್
ಖುಷಿ ತುಂಬಾ ವೈವಿಧ್ಯಪೂರ್ಣವಾಗಿ ಬಂದಿದೆ. ಭಾನುವಾರದ ಮೂಡ್‌ಗೆ ಇದು ಒಳ್ಳೆಯ ಗಿಫ್ಟ್. ಟಾಪ್ 20 ನ್ಯೂಸ್ ಹೇಗೆ ಇಷ್ಟವಾಯ್ತೋ, ಖುಷಿಯ ಪ್ರಯೋಗವೂ ಅಷ್ಟೇ ಇಷ್ಟ ಆಯ್ತು.
-ವಿನಯ ಬಿದರೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ

ಎರಡು ಖುಷಿ!
'ಖುಷಿ' ತುಂಬಾ ಚೆನ್ನಾಗಿ ಬಂದಿದೆ. ಇಂಥದ್ದೊಂದು ಹೊಸ ಸ್ಪರ್ಶ ಕನ್ನಡ ಪತ್ರಿಕೋದ್ಯಮಕ್ಕೆ ಬೇಕಿತ್ತು. ಇಲ್ಲಿ ಎಲ್ಲವೂ ಓದುವುದಕ್ಕೆ ಯೋಗ್ಯವಾಗಿವೆ. ನನ್ನ ಮಗಳ ಹೆಸರೂ 'ಖುಷಿ' ಆಗಿರುವ ಕಾರಣಕ್ಕಾಗಿ ಮತ್ತೊಂದು ಖುಷಿ ನನಗೆ.
- ರಾಜು ಕೆ. ಬಜ್ಜಿ,
raj‌u‌k​b​a​jj‌i8@‌gma‌il.‌c‌om​

'ಲಿಪ್‌ಕಿಸ್‌' ಬೇಕಿತ್ತಾ?
'ಖುಷಿ' ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಅಚ್ಚುಕಟ್ಟಾದ ವಿನ್ಯಾಸ. ಓದಿ ಖುಷಿಯಾಯಿತು. ಆದರೆ, 'ಬೆಡ್‌ಜಾಮ್‌' ಅಂಕಣದಲ್ಲಿ ಲಿಪ್‌ಕಿಸ್ ಅಂತೆಲ್ಲ ಬರೆದಿದ್ದು ಅತಿ ಆಯ್ತೇನೋ ಅಂತನ್ನಿಸ್ತು. ಮಕ್ಕಳೂ ಪತ್ರಿಕೆ ಓದ್ತಾರೆ. ಆ ಥರ ಎಲ್ಲಾ ಬರೀಬೇಡಿ...
- ಬಿ. ಗೀತಾ, ಟೊರಾಂಟೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement