ಶಾಂತಿದೇಸಾಯಿಯಂಥವರು ಶಿಕ್ಷಣ ಕ್ಷೇತ್ರದಲ್ಲಿ ಜಾದೂ ಮಾಡಬಲ್ಲರು!
ನೈಸರ್ಗಿಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಮಾನವ...
ನೈಸರ್ಗಿಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಅತಿ ಪ್ರಮುಖವಾಗಿರುತ್ತದೆ. ಈ ಪೈಕಿ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಶಿಕ್ಷಣದ ಪಾತ್ರ ಅತಿ ಅಮೂಲ್ಯವಾಗಿರುತ್ತದೆ. ಸಿ.ಡಿ. ಹೋವೆ ಇನ್ಸ್ಟಿಟ್ಯೂಟ್ನ 2005ರ ವರದಿಯ ಪ್ರಕಾರ ಶೇಕಡ ಒಂದರಷ್ಟು ಶಿಕ್ಷಣ ಪ್ರಮಾಣ ಹೆಚ್ಚು ಮಾಡಿದಲ್ಲಿ ಶೇಕಡ 1.5 ರಷ್ಟು ತಲಾ ನಿವ್ವಳ ದೇಶೀಯ ಉತ್ಪನ್ನ ಮತ್ತು ಶೇಕಡ 2.5 ಕಾರ್ಮಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ. 2001ರ ಜನಗಣತಿ ಪ್ರಕಾರ ರಾಜ್ಯದ ಶಿಕ್ಷಣ ಪ್ರಮಾಣ ಶೇಕಡ 67 ಇದ್ದು, ರಾಯಚೂರು ಜಿಲ್ಲೆಯಲ್ಲಿ ಈ ಪ್ರಮಾಣ ಶೇಕಡ 49.54 ಮತ್ತು ಗುಲ್ಬರ್ಗಾ ಶೇಕಡ 50.65 ಇತ್ತು. ಇದರ ಅರ್ಥ ಈ ಭಾಗದ ಸುಮಾರು ಅರ್ಧದಷ್ಟು ಜನಸಂಖ್ಯೆ ಇನ್ನೂ ಶಿಕ್ಷಣದಿಂದ ವಂಚಿತವಾಗಿದೆ. ಶಿಕ್ಷಣ ಇಲ್ಲದೇ ಇರುವುದರಿಂದ ಹೆಚ್ಚು ಆದಾಯ ಬರುತಕ್ಕಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಭಾಗದ ಜನರಿಗೆ ಕಷ್ಟವಾಗುತ್ತದೆ. ಆದುದರಿಂದ ಅವರ ಆದಾಯಕಡಿಮೆ ಇದ್ದು, ಬಡತನಕ್ಕೆ ಹಾಗೂ ಹಿಂದುಳಿದಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹತ್ತು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಲಭ್ಯವಿರುವ ಶಾಲೆಗಳ ಸಂಖ್ಯೆ ರಾಜ್ಯದ ಸರಾಸರಿಗಿಂತ ಕಡಿಮೆ ಇದ್ದು, ಅದೇರೀತಿ ಒಂದು ಉಪ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪ್ರಮಾಣ ಸಹ ರಾಜ್ಯದ ಸರಾಸರಿಗಿಂತ ಕಡಿಮೆ ಇತ್ತು. ಮಾತ್ರವಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅತಿ ಹೆಚ್ಚು ಬೇಡಿಕೆ ಆಂಗ್ಲಭಾಷೆ ಶಿಕ್ಷಕರಿಗಾಗಿ ಇತ್ತು. ಇನ್ನೂ ತುಂಬಾ ವಿಪರೀತವಾಗುವಂಥ ಸಂದರ್ಭ ಏನೆಂದರೆ, ಶೇಕಡ ಇಪ್ಪತ್ತೈದರಷ್ಟು ಮಕ್ಕಳು ಪ್ರತಿವರ್ಷ ಶಾಲೆಯನ್ನು ಬಿಟ್ಟು ಹೋಗುತ್ತಾ ಇದ್ದರು. ಕಾರಣ ಈ ಮಕ್ಕಳು ಅಥವಾ ಅವರ ತಂದೆ-ತಾಯಿಗಳು ಬೇರೆ ರಾಜ್ಯ/ಜಿಲ್ಲೆಗಳಲ್ಲಿ ವಲಸೆ ಹೋಗಿ ಕೂಲಿ ಮಾಡುವಂತಹ ಪರಿಸ್ಥಿತಿ ಇತ್ತು. ಮೂಲಭೂತ ಸೌಕರ್ಯಗಳನ್ನು ನೋಡಿದರೆ ಕೇವಲ ಶೇಕಡ 43 ರಷ್ಟು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳಿದ್ದು ಮತ್ತು ಕೇವಲ ಶೇಕಡ 27 ರಷ್ಟು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳಿದ್ದವು. ಈ ಕೊರತೆಯಿಂದ, ಮುಖ್ಯವಾಗಿ ಹೆಣ್ಣು ಮಕ್ಕಳು ಹಿರಿಯ ಪ್ರಾಥಮಿಕ ಶಾಲೆ ಮಟ್ಟದಲ್ಲಿ ಬರುವುದು ಕಡಿಮೆಯಾಗುತ್ತದೆ. ಅದೇರೀತಿ ವರ್ಷ 2010 ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸುಮಾರು 8067 ಹೊಸ ಶಾಲಾ ಕೊಠಡಿಗಳ ಅವಶ್ಯಕತೆ ಇತ್ತು. ಅಂತೆಯೇ ಕುಡಿಯುವ ನೀರು, ವಿದ್ಯುಚ್ಛಕ್ತಿ ವ್ಯವಸ್ಥೆ, ವಾಚನಾಲಯ, ಗಣಕಯಂತ್ರ ಹಾಗೂ ಪ್ರಯೋಗಾಲಯ ಮುಂತಾದ ಸೌಕರ್ಯಗಳು ಸಹ ಶಾಲೆಗಳಲ್ಲಿ ಲಭ್ಯವಿರಲಿಲ್ಲ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ವರ್ಗದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಪದವಿ ಪೂರ್ವ ಹಾಗೂ ಪದವಿ ನಂತರದ ವಸತಿ ನಿಲಯಗಳನ್ನು ಸ್ಥಾಪಿಸಿರುತ್ತದೆ. ರಾಜ್ಯದ ಸರಾಸರಿಯೊಂದಿಗೆ ಹೋಲಿಸಿದರೆ ಈ ಭಾಗದ ವಸತಿ ನಿಲಯಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಸೇರುತ್ತಾ ಇರುವುದು ಬಹಳ ಸಂತೋಷದ ವಿಷಯ. ಈ ಸೌಲಭ್ಯವನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿದಲ್ಲಿ ಈ ಜನಾಂಗದ ಶಿಕ್ಷಣ ಪ್ರಮಾಣ ಹೆಚ್ಚಾಗುತ್ತದೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಸರ್ಕಾರದ ನಿಯಮಗಳಂತೆ ಪ್ರತಿ ಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಾಲೆ ಇರಬೇಕು ಹಾಗೂ ಐದು ಕಿ.ಮೀ. ಒಳಗೆ ಒಂದು ಹಿರಿಯ ಪ್ರಾಥಮಿಕ ಶಾಲೆ ಇರಬೇಕು. ಈ ನಿಯಮಗಳಂತೆ ನಿಜವಾಗಿ ಸರ್ಕಾರಿ ಶಾಲೆಗಳು ಎಲ್ಲರಿಗೂ ಲಭ್ಯವಿವೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಲು ಜಿಲ್ಲಾ ಪಂಚಾಯತ್ನಲ್ಲಿರುವ ಎನ್.ಆರ್.ಡಿ.ಎಂ.ಎಸ್ ಕೇಂದ್ರದ ಮೂಲಕ ಒಂದು ನಕಾಶೆಯನ್ನು ತಯಾರಿಸಲಾಯಿತು. ಅದರ ಪ್ರಕಾರ , ಕೆಲವು ಬಡವಾಣೆಗಳಲ್ಲಿ ಯಾವುದೇ ಶಾಲೆ ಸೌಲಭ್ಯಗಳು ಇರಲಿಲ್ಲ ಮತ್ತು ಕೆಲವು ಕಡೆ ಒಂದಕ್ಕಿಂತ ಹೆಚ್ಚು ಶಾಲೆಗಳು ಲಭ್ಯವಿದ್ದವು. ಇದೇ ನಕಾಶೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪ್ರಮಾಣವನ್ನು ತೋರಿಸಿದರೆ ನಗರ ಸಮೀಪದಲ್ಲಿ ಇರುವ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ತುಂಬಾ ಹೆಚ್ಚು ಇತ್ತು ಮತ್ತು ಹಳ್ಳಿಗಳಲ್ಲಿ ತೀರಾ ಕಡಿಮೆಯಿತ್ತು. ಕೆಲವು ಕಡೆ ಮೂರು ಮಕ್ಕಳಿಗೆ ಒಬ್ಬ ಶಿಕ್ಷಕನಿದ್ದ!
ಶಿಕ್ಷಣ ಕ್ಷೇತ್ರದಲ್ಲಿ ಅತಿ ಗಂಭೀರವಾಗಿ ಕಾಡುತ್ತಿರುವ ವಿಷಯ ಏನೆಂದರೆ ಈ ವಿಭಾಗದ ಎಸ್.ಎಸ್.ಎಲ್.ಸಿ. ಫಲಿತಾಂಶಗಳು ರಾಜ್ಯದಲ್ಲಿ ಕೊನೆ ಶ್ರೇಣಿಯನ್ನು ಪಡೆದಿರುತ್ತವೆ. ಉದಾ: 2010ರಲ್ಲಿ ಬೀದರ್ 34ನೇ ಶ್ರೇಣಿ ಹಾಗೂ ಯಾದಗಿರಿ 32ನೇ ಶ್ರೇಣಿ ಮತ್ತು ಕೊಪ್ಪಳ 31ನೇ ಶ್ರೇಣಿಯನ್ನು ಪಡೆದಿದ್ದವು. ಈ ಫಲಿತಾಂಶಗಳ ಶಾಲಾವಾರು ವಿವರವನ್ನು ನಾವು ಶಿಕ್ಷಣ ಇಲಾಖೆಯಿಂದ ತೆಗೆದುಕೊಂಡು ವಿಶ್ಲೇಷಣೆ ಮಾಡಿದಾಗ ಸುಮಾರು 360 ಶಾಲೆಗಳಲ್ಲಿ ಶೇಕಡ 40 ಕ್ಕಿಂತ ಕಡಿಮೆ ಫಲಿತಾಂಶ ಬರುತ್ತದೆ ಎಂದು ತಿಳಿದುಬಂತು. ಅಲ್ಲದೇ ವಿದ್ಯಾರ್ಥಿವಾರು ಹಾಗೂ ವಿಷಯವಾರು ಅಂಕಗಳ ವಿಶ್ಲೇಷಣೆಯನ್ನು ಮಾಡಿದ್ದರಿಂದ ನಾವು ಅರ್ಥ ಮಾಡಿಕೊಂಡಿರುವುದು ಏನೆಂದರೆ ಅತಿ ಕಡಿಮೆ ಅಂಕಗಳನ್ನು ಮೂರು ವಿಷಯಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆಯುತ್ತಿದ್ದರು. ಅವುಗಳು ಆಂಗ್ಲಭಾಷೆ, ವಿಜ್ಞಾನ ಮತ್ತು ಗಣಿತ. ಆದುದರಿಂದ ಈ ಮೂರು ವಿಷಯಗಳಲ್ಲಿ ಸಂಬಂಧಪಟ್ಟ ಶಾಲೆಗಳಲ್ಲಿ ಇರುವ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿದರೆ ಖಂಡಿತವಾಗಿ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಬಹುದು ಎಂದರಿತು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಸಹಾಯದಿಂದ ಕೆಳ ಶ್ರೇಣಿಯಲ್ಲಿರುವ ಶಾಲೆಗಳು, ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಲು 2009 ರಿಂದ ಕ್ರಮ ಜರುಗಿಸಲಾಯಿತು.
ಮಕ್ಕಳಲ್ಲಿ ಶಿಕ್ಷಣ ಯಾವರೀತಿಯಲ್ಲಿ ಸುಲಭ ಹಾಗೂ ಆಸಕ್ತಿದಾಯಕವಾಗಿ ನೀಡಬಹುದೆಂದು ನಾನು ಈ ಪ್ರಯೋಗದಿಂದ ಕಲಿತುಕೊಂಡೆ. ಈ ವಿನೂತನ ಶೈಲಿಯಲ್ಲಿ ನನಗೆ ಒಬ್ಬ ಅಪರೂಪದ ಶಿಕ್ಷಕಿ ಸಿಕ್ಕರು. ಅವರ ಹೆಸರು ಶಾಂತಿದೇಸಾಯಿ ಎಂದು. ಅವರು ಒಂದು ಖಾಸಗಿ ಶಾಲೆಯನ್ನು ನಡೆಸುತ್ತಾ ಇದ್ದರು. ಒಂದು ದಿನ ಅವರು ನನ್ನ ಹತ್ತಿರ ಬಂದು ತುಂಬಾ ಆತ್ಮವಿಶ್ವಾಸದಿಂದ ಹೇಳಿದರು-"ನೀವು ಶಿಕ್ಷಣದ ಗುಣಮಟ್ಟ ಹಾಗೂ ಎಸ್.ಎಸ್.ಎಲ್.ಸಿ. ಪರಿಣಾಮಗಳ ಬಗ್ಗೆ ತುಂಬಾ ಚಿಂತಿತರಾಗಿದ್ದೀರಿ. ಒಂದು ದಿನ ನನ್ನ ಬಳಿ ನೂರರಿಂದ ಒಂದು ಸಾವಿರ ಮಕ್ಕಳನ್ನು ಕಳಿಸಿಕೊಡಿ. ನಾನು ಕೇವಲ ಮೂರು ತಾಸಿನಲ್ಲಿ ಅವರಿಗೆ ಇಡೀ ಎಸ್.ಎಸ್.ಎಲ್.ಸಿ.ಯ ಆಂಗ್ಲಭಾಷೆಯ ಪಠ್ಯಕ್ರಮವನ್ನು ಓದಿಸುತ್ತೇನೆ. ನನ್ನ ಪಾಠ ಪ್ರಾರಂಭವಾಗುವ ಮುಂಚೆ ನೀವು ನಿಮ್ಮ ಇಲಾಖೆ ಶಿಕ್ಷಕರಿಂದ ಈ ಮಕ್ಕಳ ಒಂದು ಪರೀಕ್ಷೆಯನ್ನು ನಡೆಸಿಕೊಳ್ಳಿ. ಮೂರು ತಾಸು ಆದ ನಂತರ ಇನ್ನೊಂದು ಪರೀಕ್ಷೆಯನ್ನು ಮಾಡಿರಿ ವ್ಯತ್ಯಾಸ ನಿಮ್ಮ ಕಣ್ಣಿಗೆ ಕಾಣಿಸುತ್ತದೆ."
ಅವರ ಆತ್ಮವಿಶ್ವಾಸವನ್ನು ಹಾಗೂ ಮಕ್ಕಳ ಭವಿಷ್ಯದ ಮತ್ತು ವಿಭಾಗದ ಬೆಳವಣಿಗೆಯ ಬಗೆಗಿನ ಕಳಕಳಿಯನ್ನು ವೀಕ್ಷಿಸಿ ನಾನು ಒಂದು ದಿನ ಅವರ ಕಾರ್ಯಾಗಾರದಲ್ಲಿ ಭಾಗವಹಿಸಿದೆ. ಅವರು ಕಲಿಸುವ ಶೈಲಿಯನ್ನು ನೋಡಿದರೆ ಅವರು ಮಕ್ಕಳ ಮಾನಸಿಕತೆಯನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂದು ಮನವರಿಕೆಯಾಗುತ್ತದೆ.
ಆಂಗ್ಲಭಾಷೆಯ ಪಠ್ಯಕ್ರಮವನ್ನು ಅವರು ಮಾತೃಭಾಷೆ ಕನ್ನಡದಲ್ಲಿ ವ್ಯಾಖ್ಯಾನ ಮಾಡಿ ಪಾಠದಲ್ಲಿ ಇರುವ ಕಠಿಣ ಶಬ್ದಗಳನ್ನು ಕಪ್ಪುಹಲಗೆ ಮೇಲೆ ಬರೆದು ಮಕ್ಕಳನ್ನು ಜ್ಞಾಪಿಸಿಕೊಳ್ಳಲು ಚಿತ್ರಗಳ ಸಹಾಯವನ್ನು ತೆಗೆದುಕೊಂಡರು. ಉದಾ: ಡೆಫೊಡಿಲ್ಸ್ ಎಂಬ ಒಂದು ಕವಿತೆ ಪುಸ್ತಕದಲ್ಲಿ ಇತ್ತು. ಸಾಮಾನ್ಯವಾಗಿ ನಾವು ಈ ಶಬ್ಧವನ್ನು ಪ್ರಯೋಗಿಸುವುದಿಲ್ಲ. ಇದರ ಅರ್ಥ ಹೂವುಗಳು ಅಥವಾ ಫ್ಲವರ್ಸ್. ಒಂದು ಹೂವಿನ ಚಿತ್ರವನ್ನು ರಚಿಸಿ ಪಕ್ಕದಲ್ಲಿ ಡೆಫೊಡಿಲ್ ಎಂದು ಬರೆದು ಮೂರು-ನಾಲ್ಕು ಸಲ ವಿದ್ಯಾರ್ಥಿಗಳಿಂದಲೇ ಹೇಳಿಸಿ ಕವಿತೆಯ ಅರ್ಥವನ್ನು ಕನ್ನಡದಲ್ಲಿ ಹೇಳಿದರು. ತಕ್ಷಣ ಎಲ್ಲಾ ಮಕ್ಕಳು ಸುಲಭವಾಗಿ ಅರ್ಥ ಮಾಡಿಕೊಂಡರು. ಹೀಗಾಗಿ ಪಾಠಗಳನ್ನು ಒಂದು ಸಾಲಿನ ನಂತರ ಮತ್ತೊಂದು ಸಾಲಿನಂತೆ ಹೋಗದೇ ಸಾರಾಂಶವನ್ನು ಒಂದು ಕಥೆ ಮೂಲಕ ಹೇಳಿದ್ದರಿಂದ ಮೂರು ತಾಸು ಯಾವಾಗ ಕಳೆದು ಹೋಯಿತು ಎಂದು ನನಗೂ ಗೊತ್ತಾಗಲಿಲ್ಲ. ಮಕ್ಕಳು ಭಾಗವಹಿಸುವ ರೀತಿಯಲ್ಲಿ ಶಿಕ್ಷಣವನ್ನು ನೀಡಿರುವ ಆ ಮಹಿಳೆ ಜಾದೂ ಮಾಡಿ ತೋರಿಸಿದರು. ಈ ತರಬೇತಿ ಪ್ರಾರಂಭದಲ್ಲಿ ಶೇಕಡ 30 ರಿಂದ 40 ರಷ್ಟು ಅಂಕಗಳನ್ನು ಗಳಿಸುವ ಮಕ್ಕಳು ಮೂರು ತಾಸಿನ ನಂತರ ಶೇಕಡ 60 ರಿಂದ 70 ರವರೆಗೂ ಅಂಕಗಳನ್ನು ಪಡೆದರು.
ಈ ಒಂದು ಪ್ರಯೋಗವನ್ನು ಇಡೀ ವಿಭಾಗದಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರದ ಮೂಲಕ ನಡೆಸಲಾಯಿತು. ನಮ್ಮ ಶಿಕ್ಷಕರಿಗೆ ಮಕ್ಕಳಿಗೆ ಕಲಿಸುವ ಪದ್ಧತಿಯನ್ನು ಹೇಳಿಕೊಡುವುದು ಒಂದು ದೊಡ್ಡ ಸವಾಲಾಯಿತು. ಆದರೂ, ಶಿಕ್ಷಣ ಇಲಾಖೆಯ ಮುಖ್ಯಸ್ಥರು ತುಂಬಾ ಗಂಭೀರವಾಗಿ ಇಂಥ ತರಬೇತಿ ಶಿಬಿರಗಳನ್ನು ವಿಭಾಗಾದ್ಯಂತ ನಡೆಸಿದರು. ಶಿಕ್ಷಕರ ಸಂಘ ಈ ಒಂದು ವಿನೂತನ ಪದ್ಧತಿ ಬಗ್ಗೆ ತುಂಬಾ ಕಾಳಜಿ ವಹಿಸಿತು ಹಾಗೂ ತಮ್ಮ ವತಿಯಿಂದಲೇ ಕಾರ್ಯಾಗಾರಗಳನ್ನು ಪ್ರಾರಂಭಿಸಿದರು. ಇದೇರೀತಿ ಕೆಲವು ಸಂಪನ್ಮೂಲ ವ್ಯಕ್ತಿಗಳನ್ನು ಗಣಿತ ಮತ್ತು ವಿಜ್ಞಾನದಲ್ಲಿ ಸಹ ಆಯ್ಕೆ ಮಾಡಲಾಯಿತು. ನಗುನಗುತಾ ಹಾಗೂ ಆಟದ ಮೂಲಕ ಮತ್ತು ಕೆಲವು ಸಲಕರಣೆಗಳನ್ನು ಉಪಯೋಗಿಸಿ ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಸಿಕೊಡುವ ಪ್ರಯತ್ನದಿಂದಾಗಿ ಎಸ್.ಎಸ್.ಎಲ್.ಸಿ. ಫಲಿತಾಂಶಗಳಲ್ಲಿ ಬಹಳಷ್ಟು ಸುಧಾರಣೆ ಕಂಡಿರುವುದು ಸಂತೋಷದ ವಿಷಯ.
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com