ಸಂಸದೀಯ ವ್ಯವಸ್ಥೆಯಲ್ಲಿ ದೇವೇಗೌಡರ ಮಾದರಿ
ಕರ್ನಾಟಕದವರಾದ ಹೆಚ್. ಡಿ. ದೇವೇಗೌಡರು ಈ ದೇಶದ ಉನ್ನತ ಸ್ಥಾನವಾದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಕರ್ನಾಟಕದವರು ಪ್ರಧಾನಮಂತ್ರಿ ಸ್ಥಾನಕ್ಕೇರುವುದು ಕಷ್ಟಕರವೆನ್ನುವ ಸತ್ಯದ ನಡುವೆಯೂ ಪ್ರಧಾನ ಮಂತ್ರಿಗಳಾಗಿ ಕಳಂಕ ರಹಿತ ಆಡಳಿತವನ್ನು ನೀಡಿದ್ದು, ಅವರ ಹಿರಿಮೆಗೆ ಹಿಡಿದ ಕನ್ನಡಿಯಾಗಿರುತ್ತದೆ. ಆದರೆ ಅವರು ರಾಜ್ಯ ಮುಖ್ಯಮಂತ್ರಿಗಳಾಗಿ ಜನಪರ ಆಡಳಿತದ ಮೂಲಕ ಪ್ರಧಾನಮಂತ್ರಿ ಸ್ಥಾನ ಪಡೆಯಲು ಕಾರಣರಾದರೆಂಬುದನ್ನು ನಾವು ಅರಿಯಬೇಕಿದೆ. ಇವತ್ತಿನ ಡಿಸೆಂಬರ್ 11ಕ್ಕೆ ಹೆಚ್. ಡಿ. ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನೆನಪಿನ 20ನೇ ವರ್ಷಕ್ಕೆ ಕಾಲಿಟ್ಟಂತಾಗುತ್ತದೆ.
ಹೆಚ್. ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ್ದು, ಸಾರ್ವಜನಿಕ ಜೀವನದಲ್ಲಿ ಸಹಕಾರ ಸಂಘದ ನಿರ್ದೇಶಕರಾಗಿ, ತಾಲ್ಲೂಕು ಬೋರ್ಡ್ ಸದಸ್ಯರಾಗಿ, ವಿಧಾನ ಸಭೆಯ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯ ಸರ್ಕಾರದ ಸಂಪುಟ ದರ್ಜೆಯ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಮತ್ತು ಈ ದೇಶದ ಪ್ರಧಾನಮಂತ್ರಿಗಳಾಗಿ ಸಂಸದೀಯ ವ್ಯವಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಿರುತ್ತಾರೆ. ಈ ಸಂದರ್ಭದಲ್ಲಿ ನಾವು ಬಹಳ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ತಮ್ಮ ಸುದೀರ್ಘ ಸಂಸದೀಯ ರಾಜಕೀಯ ಹಾದಿಯಲ್ಲಿ ಎಂದೂ ಹೆಚ್. ಡಿ. ದೇವೇಗೌಡರು ವಿಧಾನ ಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಅಸಂವಿಧಾನಿಕ ಪದಗಳ ಬಳಕೆಯನ್ನು ಮಾಡಿರುವುದಿಲ್ಲ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಅವರು ಬಳಸಿದ ಪದಗಳನ್ನು ಕಡತದಿಂದ ತೆಗೆದುಹಾಕಿರುವುದಿಲ್ಲ. ಬಹಳ ಪ್ರಮುಖವಾಗಿ ಅವರ ರಾಜಕೀಯ ಜೀವನದಲ್ಲಿ ಸದನದ ಬಾವಿಯೊಳಗೆ ಪ್ರವೇಶ ಮಾಡಿ ಪ್ರತಿಭಟನೆಯನ್ನು ಮಾಡಿರುವುದಿಲ್ಲ.
ಉತ್ತಮ ಸಂಸದೀಯ ಪಟುಗಳು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಯುವ ಶಾಸಕರಿಗೆ ಹಾಗೂ ಸಂಸದರಿಗೆ ಮಾದರಿಯಾಗಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ, ವಿಧಾನ ಸಭೆಗಳಲ್ಲಿ ಹಾಗೂ ದೇಶದ ಸಂಸತ್ತಿನಲ್ಲಿ ರಾಜಕೀಯ ಟೀಕೆಗಳು ವ್ಯಕ್ತಿಗತ ಟೀಕೆಗಳಾಗಿ ಮಾರ್ಪಟ್ಟಿವೆ. ಸದನಗಳಲ್ಲಿ ಅಸಂವಿಧಾನಿಕ ಪದಗಳ ಬಳಕೆ, ಸದನಗಳ ದುರ್ಬಳಕೆ ಯಾವುದೇ ಮಿತಿಯಿಲ್ಲದೆ ನಡೆಯುತ್ತಿದೆ. ಸಣ್ಣಪುಟ್ಟವಿಚಾರಗಳಿಗೆ ಸದನದ ಬಾವಿಯೊಳಗೆ ಪ್ರವೇಶ ಮಾಡುವುದು, ಸದನದ ಕಲಾಪಗಳಿಗೆ ತಡೆಯೊಡ್ಡುವುದು, ಸದನದ ಚರ್ಚೆಯ ವಿಷಯಗಳ ಪ್ರತಿಗಳನ್ನು ಹರಿದುಹಾಕುವುದು, ಸದನಗಳನ್ನು ಬಹಿಷ್ಕರಿಸುವುದು ಮತ್ತು ವೈಯಕ್ತಿಕ ವಿಚಾರಗಳ ಚರ್ಚೆಗೆ ಸದನಗಳನ್ನು ಬಳಸಿಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ. ಅದು ವಿಧಾನ ಸಭೆ ಆಗಿರಲಿ ಅಥವಾ ಸಂಸತ್ ಆಗಿರಲಿ, ಕೆಳಮನೆ ಆಗಿರಲಿ ಅಥವಾ ಮೇಲ್ಮನೆ ಆಗಿರಲಿ, ಯಾವುದೇ ರಾಜ್ಯ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ಸದನಗಳ ಚರ್ಚೆಯನ್ನು ವ್ಯಾಪ್ತಿ ಮೀರಿ ಹಾಳುಮಾಡುತ್ತಿರುವುದು ವ್ಯವಸ್ಥೆಯ ವಿಫಲತೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಉತ್ತಮ ಸಂಸದೀಯ ಪಟುಗಳ ಹಿನ್ನೆಲೆ ಹಾಗೂ ಅವರು ಸದನಗಳಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ನೆನೆಯುವ ಮತ್ತು ಮಾದರಿಯಾಗಿ ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಸರ್ಕಾರಗಳ ಮೇಲಿರುತ್ತದೆ.
ನಮ್ಮ ರಾಜ್ಯದ ಬೆಳಗಾವಿ ಅಧಿವೇಶನದಲ್ಲಿ ಮೊದಲ ಐದು ದಿನಗಳು ವಿಷಯ ಚರ್ಚೆಗಿಂತ ಪ್ರತಿಭಟನೆಗೆ ಆಹುತಿಯಾಗಿ ಜನಸಾಮಾನ್ಯರು ಬೇಸರಪಡುವಂತಾಯಿತು. ಬಹುಶಃ ಅತಿ ಸಣ್ಣ ವಿಷಯಗಳಿಗೆ ಸದನದ ಬಾವಿಗಿಳಿದು ಪ್ರತಿಭಟನೆ ಮಾಡದಂತೆ ನಿಯಮಾವಳಿಗಳನ್ನು ರಚಿಸಬೇಕಾಗಿರುತ್ತದೆ. ಕೆಲವೊಮ್ಮೆ ಸದಸ್ಯರು ಸಾಂವಿಧಾನಿಕ ಪದಗಳನ್ನು ಬಳಸಿ, ತಮ್ಮ ಅಭಿಪ್ರಾಯ ತಿಳಿಸಲು ಪ್ರಯತ್ನಿಸಿದರೆ ಅದನ್ನು ಸಮರ್ಪಕವಾಗಿ ಉತ್ತರದ ಮೂಲಕ ಪ್ರತಿಭಟಿಸುವ ಬದಲು ಅದಕ್ಕೂ ಬಾವಿಗಿಳಿದು ಪ್ರತಿಭಟಿಸಿದ ಘಟನೆಯನ್ನು ನೋಡಿರುತ್ತೇವೆ. ಹಿರಿಯ ಸದಸ್ಯರೊಬ್ಬರು ತಮ್ಮ ಮೇಲಿನ ಆರೋಪವನ್ನು ಹಕ್ಕುಚ್ಯುತಿಯ ಹಿನ್ನೆಲೆಯಲ್ಲಿ ಸದನ ಸಮಿತಿಗೆ ಎಳೆದಿರುವುದನ್ನು ಗಮನಿಸಿರುತ್ತೇವೆ. ನಮ್ಮ ರಾಜ್ಯದ ಶಾಸನ ಸಭೆಯಲ್ಲಿ ಹಿಂದಿನ ದಿನಗಳಲ್ಲೂ ಇಂತಹ ಘಟನೆಗಳು ನಡೆದಿರುತ್ತವೆ. ಅನೇಕ ಪ್ರಸಂಗಗಳು ನಮ್ಮ ಸದನಗಳಲ್ಲಿ ವಾಸ್ತವ ವಿಚಾರಗಳು ಚರ್ಚೆಗೆ ಒಳಪಡುತ್ತವೆಯೇ ಎಂಬಂತಹ ಗೊಂದಲವನ್ನು ನಿರ್ಮಾಣ ಮಾಡಿವೆ.
ಕರ್ನಾಟಕದ ಶಾಸನ ಸಭೆಯಲ್ಲಿ ಬಹಳಷ್ಟು ಹಿರಿಯ ಶಾಸಕರು ಸದನದ ಗೌರವ ಮತ್ತು ಪಾವಿತ್ರ್ಯಕ್ಕೆ ಧಕ್ಕೆ ಬರದಂತೆ ನಡೆದುಕೊಂಡಿರುತ್ತಾರೆ. ಸಮಾಜವಾದಿಗಳಾದ ಶಾಂತವೇರಿ ಗೋಪಾಲ ಗೌಡರು, ಕೆಂಗಲ್ ಹನುಮಂತಯ್ಯನವರು, ದೇವರಾಜ ಅರಸುರವರು, ಎಂ. ವೈ. ಘೋರ್ಪಡೆಯವರು, ಹೆಚ್. ಡಿ. ದೇವೇಗೌಡರು ಹಾಗೂ ಇನ್ನೂ ಅನೇಕ ಚೇತನಗಳು ಈ ಸಾಲಿನಲ್ಲಿ ನಿಲ್ಲುತ್ತಾರೆ ಮತ್ತು ಇತರರಿಗೆ ಮಾದರಿಯಾಗುತ್ತಾರೆ. ಸರ್ಕಾರದ ವೈಫಲ್ಯಗಳನ್ನು ಎಳೆ-ಎಳೆಯಾಗಿ ಬಿಚ್ಚಿಡಲು ಸಾಮಾನ್ಯವಾಗಿ ವಿರೋಧ ಪಕ್ಷದ ಸದಸ್ಯರಿಗೆ ಅವಕಾಶಗಳಿರುತ್ತವೆ. ಸದನಗಳು ನಡೆಯುವಾಗ ಸದಸ್ಯರು ಇಂತಹ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು, ಸರ್ಕಾರವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಸದನದ ಬಾವಿಗಿಳಿದು ಪ್ರತಿಭಟಿಸುವುದು ಆರೋಗ್ಯಕರ ಬೆಳವಣಿಗೆ ಆಗಿರುವುದಿಲ್ಲ. ಅದೇ ರೀತಿ ಯಾವುದೇ ಸದಸ್ಯರ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿದರೆ ಅದನ್ನು ಅಷ್ಟರ ಮಟ್ಟಿಗೆ ಅಂತಹ ಸದಸ್ಯರಿಗೆ ಆದ ಹಿನ್ನೆಡೆಯೆಂದೇ ಸಂಸದೀಯ ವ್ಯವಸ್ಥೆಯಲ್ಲಿ ಮತ್ತು ನಡವಳಿಕೆಗಳಲ್ಲಿ ಭಾವಿಸಲಾಗುತ್ತದೆ. ಇದೇ ಕಾರಣಕ್ಕಾಗಿ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ಸದನದ ಒಳಗೆ ತಾವು ಬಳಸಿದ ಪದಗಳನ್ನು ಕಡತದಿಂದ ತೆಗೆಸುವ ಸಂದರ್ಭಕ್ಕೆ ಅವಕಾಶ ನೀಡದ ಹೆಚ್. ಡಿ. ದೇವೇಗೌಡರು ನಮಗೆ ಮಾದರಿಯಾಗುತ್ತಾರೆ.
1962ರಿಂದಲೂ ಇಲ್ಲಿಯವರೆಗೆ ಸಂಸದೀಯ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಕಾರ್ಯ-ನಿರ್ವಹಿಸಿರುವ ಹೆಚ್. ಡಿ. ದೇವೇಗೌಡರು ರಾಜಕೀಯವಾಗಿ ಅಧಿಕಾರ ಅನುಭವಿಸಿದ್ದು ಬಹಳ ಕಡಿಮೆ. ನಾಲ್ಕೂವರೆ ವರ್ಷ ರಾಜ್ಯ ಸರ್ಕಾರದ ಸಚಿವರಾಗಿ, ಸುಮಾರು ಹದಿನೆಂಟು ತಿಂಗಳು ಮುಖ್ಯಮಂತ್ರಿಗಳಾಗಿ ಮತ್ತು ಹತ್ತು ತಿಂಗಳ ಅವಧಿಗೆ ಪ್ರಧಾನಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದ ಹೆಚ್. ಡಿ. ದೇವೇಗೌಡರು, ಸುಮಾರು ಹದಿನೆಂಟು ವರ್ಷಗಳಿಂದ ಯಾವುದೇ ಪದವಿಯಿಲ್ಲದೆ ಸಾರ್ವಜನಿಕ ಜೀವನದಲ್ಲಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿಗೂ ಹಳ್ಳಿಯಿಂದ ದಿಲ್ಲಿಯವರೆಗೆ ಅವರ ರಾಜಕೀಯ ಚಲನಶೀಲತೆಯನ್ನು ಕಾಣಲು ಸಾಧ್ಯ. ಸ್ವಾಭಿಮಾನದ ವಿಷಯ ಬಂದಾಗ ರಾಜಿ ಸಂಧಾನಕ್ಕೆ ಶರಣಾಗದೆ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಅವರ ಇಚ್ಛಾಶಕ್ತಿಯನ್ನು ಮೆಚ್ಚಲೇಬೇಕು. ಕರ್ನಾಟಕದಲ್ಲೂ ಮುಖ್ಯಮಂತ್ರಿಗಳಾಗಿ ಅವರು ನೀಡಿದ ಆಡಳಿತ ಆರೋಪ ಮುಕ್ತವಾಗಿರುವುದನ್ನು ಕಾಣಬಹುದು. ಇವರ ಆರೋಪರಹಿತ ಆಡಳಿತವೂ ಪ್ರಧಾನಮಂತ್ರಿಗಳ ಸ್ಥಾನದ ಅವರ ಆಯ್ಕೆಗೆ ಒಂದು ಕಾರಣವಾಗಿತ್ತು.
ನಮ್ಮ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಂಸದೀಯ ವ್ಯವಸ್ಥೆಗಳ ಬಲಪಡಿಸುವಲ್ಲಿ ಅನೇಕ ಕಾರ್ಯಯೋಜನೆಗಳನ್ನು ಪ್ರತೀ ವರ್ಷ ರೂಪಿಸುತ್ತದೆ. ಸಂಸದೀಯ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಆಡಳಿತ ಸುಧಾರಣೆಯ ಹಿನ್ನೆಲೆಯಲ್ಲಿ ಶಾಸನ ಸಭೆಯ ಪರಿಚಯ ಹಾಗೂ ಸಂಸದೀಯ ಪಟುಗಳ ಮಾಹಿತಿಯನ್ನು ನೀಡುತ್ತದೆ. ಆದರೆ ಇಲ್ಲಿಯವರೆಗೆ ನಮ್ಮ ರಾಜ್ಯದ ಉತ್ತಮ ಸಂಸದೀಯ ಪಟುಗಳ ಮಾಹಿತಿಯನ್ನು ನೀಡುವಂತಹ ಪ್ರಯತ್ನವನ್ನು ಈ ಇಲಾಖೆ ಮಾಡಿರುವುದಿಲ್ಲ. ಕನಿಷ್ಟ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಸಂಸದೀಯ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ನೀಡುವ ಜವಾಬ್ದಾರಿ ಈ ಇಲಾಖೆಯ ಮೇಲೆ ಇರುತ್ತದೆ. ಸಂಸದೀಯ ವ್ಯವಸ್ಥೆಯಲ್ಲಿ ಇತರರಿಗೆ ಮಾದರಿಯಾಗುವ ಹೆಚ್. ಡಿ. ದೇವೇಗೌಡರ ಕುರಿತು ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣವಾದ ಯಾವುದೇ ಪ್ರಕಟಣೆಯು ಹೊರಬಂದಿರುವುದಿಲ್ಲ. ಸಾಂಕೇತಿಕವಾಗಿ ಅವರು ವಿಧಾನ ಸಭೆಯನ್ನು ಪ್ರವೇಶಿಸಿದ ಮೊದಲ ದಿನ ಅಥವಾ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದ ನೆನಪಿನ ಆಧಾರದ ಮೇಲೆ ಇಂತಹ ಸಂಸದೀಯ ಪಟುಗಳ ನಡವಳಿಕೆಗಳನ್ನು ಜನಸಾಮಾನ್ಯರಿಗೆ ಮತ್ತು ಯುವ ಶಾಸಕರಿಗೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ಶಾಸನ ಸಭೆಗಳು ಯಾವ ರೀತಿ ನಡೆಯಬೇಕು ಮತ್ತು ಸದಸ್ಯರ ನಡವಳಿಕೆಗಳು ಯಾವ ರೀತಿ ಇರಬೇಕೆಂಬ ಕಲ್ಪನೆಗೆ ಅವಕಾಶ ದೊರೆಯುತ್ತದೆ. ಸಂಸದೀಯ ಪಟುಗಳು ನಡೆದುಕೊಂಡುಬಂದ ದಾರಿಯನ್ನು ಇತರರಿಗೆ ತಿಳಿಸುವ ಮೂಲಕ ಶಾಸನ ಸಭೆಗಳಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶವಾಗಲೆಂದು ಆಶಿಸುತ್ತೇನೆ.
- ರಮೇಶ್ ಬಾಬು, ಜೆಡಿಎಸ್ ವಕ್ತಾರರು