ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚರ್ಚೆಯಾಗಬೇಕಿರುವ ಕಲಿಕಾ ಮಾನಕಗಳ ಪರಿಕಲ್ಪನೆ

Srinivasa Murthy VN
Updated On : 12 Dec 2013, 11:51 am

ರಾಜ್ಯದ  ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ವರ್ಷಗಳಿಂದ ಕಲಿಕೆಯ ಕನಿಷ್ಠ ಮಟ್ಟಗಳನ್ನು (minimum levels of learning)  ಕೇಂದ್ರೀಕರಿಸಿದಂತೆ ಬೋಧನಾ ಕಲಿಕಾ ಪ್ರಕ್ರಿಯೆಗಳು ಅನುಷ್ಠಾನದಲ್ಲಿರುವುದು ತಿಳಿದಿರುವ ಸಂಗತಿ. ಪ್ರಾಥಮಿಕ ಹಂತದಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ನಮಗೆ ಸಿಕ್ಕರೂ, ಹಿರಿಯ ಪ್ರಾಥಮಿಕ ಹಂತದಲ್ಲಿ ಅಸ್ಪಷ್ಟತೆ ಇಂದಿಗೂ ನಮ್ಮಲ್ಲಿದೆ. ಪ್ರಾಥಮಿಕ ಹಂತದಿಂದ ಪ್ರೌಢಹಂತದವರೆಗೂ, ತರಗತಿವಾರು ಮತ್ತು ವಿಷಯವಾರು ನಿರ್ದಿಷ್ಟಗೊಳಿಸಿಕೊಂಡ ಕಲಿಕೆಯ ಅಂಶಗಳನ್ನು ಶಿಕ್ಷಣದ ಗುಣಾತ್ಮಕತೆಗೆ ಶೋಧಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯ ಕಾರ್ಯವೆನಿಸಿಕೊಳ್ಳುತ್ತದೆ. ಕಲಿಕೆಯ ಗುಣಮಟ್ಟದ ದೃಷ್ಟಿಯಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ, ಗರಿಷ್ಠ ವ್ಯಾಪ್ತಿಯನ್ನು ನಾವಿಂದು ಗುರ್ತಿಸಿಕೊಳ್ಳಲೇಬೇಕು. ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ನಾವೀನ್ಯಯುತ ಬದಲಾವಣೆಗಳು ಕಲಿಕೆಯನ್ನು ಶೀಘ್ರವಾಗಿ ಪ್ರಭಾವಿಸುತ್ತಿರುವುದರಿಂದ, ಅದರ ಸಮಗ್ರತೆಯ ಹೊಳಹುಗಳಿಂದಾಗಿ ಶಿಕ್ಷಣವನ್ನು ನಾವಿಂದು  ನೋಡಬೇಕು. ರಾಜ್ಯದ ಪ್ರಾದೇಶಿಕ ಭಿನ್ನತೆಯಡಿಯಲ್ಲಿಯೂ ತರಗತಿಯ ಕಲಿಕೆಯು ಗರಿಷ್ಠವನ್ನು ತಲುಪಬೇಕಾಗಿರುವ ಸಂದಿಗ್ಧತೆ ಎದುರಾಗಿದೆ. ಇತ್ತೀಚೆಗೆ ನಿರ್ದೇಶಕ ವೃತ್ತಿಯಿಂದ ನಿವೃತ್ತನಾದರೂ, ಸೇವಾವಧಿಯಲ್ಲಿನ ಅನುಭವಗಳಿಂದಾಗಿ ಇದನ್ನು ಕಂಡುಕೊಂಡಿದ್ದೇನೆ.
ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ತರಗತಿಯಲ್ಲಿನ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಲು, 2013-14 ನೇ ಸಾಲಿನಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆ.ಎಸ್.ಕ್ಯು.ಎ.ಎ.ಸಿ.) ತರಗತಿವಾರು-ವಿಷಯವಾರು ಕಲಿಕೆಗಾಗಿ ನಿರ್ದಿಷ್ಟಪಡಿಸಿದ ಮಾನಕಗಳನ್ನು ಸಿದ್ಧಪಡಿಸಿ, ಸಾರ್ವತ್ರಿಕ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸಿರುವುದು ಪ್ರಶಂಸನೀಯ. 2012 ರಲ್ಲಿ ಪರಿಷತ್ತು ಈ ಕಾರ್ಯವನ್ನು ಕೈಗೆತ್ತಿಕೊಂಡಾಗ, ಕಾರ್ಯನಿರ್ವಾಹಕ ನಿರ್ದೇಶಕನಾಗಿ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಹೊಸ ಬದಲಾವಣೆಗೆ ಅವಶ್ಯಕವಾದ ಶೈಕ್ಷಣಿಕ ಅಂಶಗಳನ್ನು ಕಾಲಕ್ಕೆ ಅನುಗುಣವಾಗಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುತ್ತಾ, ಆ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತಾ, ನಿರಂತರವಾಗಿ ಪ್ರಗತಿಯೆಡೆಗೆ ಮುನ್ನಡೆಯುವ ಮನೋಧರ್ಮ ನಮ್ಮದಾಗಬೇಕು. ಗುಣಮಟ್ಟ ಶಿಕ್ಷಣದ ಬಗೆಗಿನ ಉತ್ತರದಾಯಿತ್ವಕ್ಕೆ ಬದ್ಧರಾಗಲೇಬೇಕು. ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕು-2009 ನಮ್ಮನ್ನು ಗುಣಮಟ್ಟದ ಶಿಕ್ಷಣದ ಕಡೆಗೆ ಸದಾ ಪ್ರೇರೇಪಿಸುತ್ತಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಪರಿವರ್ತನೆ ಜಗದ ನಿಯಮ. ಇದು ಯಾವ ಕಡೆಗೆ, ಎಷ್ಟು ವೇಗದಲ್ಲಿ ಕ್ರಮಿಸುತ್ತದೆ ಎಂಬುದು ಊಹೆಗೂ ಮೀರಿದ್ದು. ಜಗತ್ತೇ ಒಂದು ಗ್ರಾಮವಾಗಿ ಬೆಳೆಯುತ್ತಿರುವಾಗ, ಶಿಕ್ಷಣದ ಅಗತ್ಯ ಸಹ ಶರವೇಗದಲ್ಲಿ ಬದಲಾಗುತ್ತಿರುತ್ತದೆ. ಪ್ರತಿ ವಿದ್ಯಾರ್ಥಿ ವಿಶಿಷ್ಟ ಎಂಬುದನ್ನು ಮಾನ್ಯಮಾಡಿದರೂ, ಪ್ರಾದೇಶಿಕ ಭಿನ್ನತೆಯಿದ್ದಾಗಿಯೂ, ಜಗತ್ತಿನಲ್ಲಿರುವ ಒಂದೇ ವಯೋವಾನದ ಮಕ್ಕಳೆಲ್ಲರೂ ಕಲಿಯುವಂತಹ ಅಂಶಗಳಲ್ಲಿ ಸಾಧ್ಯವಾದಷ್ಟು ಏಕತೆ ಇರಬೇಕು. ಸ್ಪರ್ಧಾ ಮನೋಭಾವದಲ್ಲಿ ಎಲ್ಲರೂ ಸಮಾನ ಚಿಂತನೆಯಿಂದ ಒಂದುಗೂಡುವಂತಾಗಬೇಕು. ಶಿಕ್ಷಣದಲ್ಲಿ ಅಂತಹ ಕಲಿಕೆಯ ಬೆಳವಣಿಗೆಯನ್ನು ನಾವು ಗುರುತಿಸಬೇಕಿದೆ.
ಆಸ್ಟ್ರೇಲಿಯಾ, ಬ್ರಿಟನ್, ಫಿಲಿಫೈನ್ಸ್‌ನಂತಹ ರಾಷ್ಟ್ರಗಳು ಈ ಬಗ್ಗೆ ದೃಢನಿಲುವನ್ನು ತಳೆದಿವೆ. ಕಲಿಕೆಗಾಗಿ ವಿಶಾಲವಾದ ಚೌಕಟ್ಟನ್ನು ರೂಪಿಸುತ್ತಿವೆ. ಇಲ್ಲಿ ಒಂದು ವಿಷಯವನ್ನು ನೆನಪಿಸಲೇಬೇಕು. ಹಿಂದಿನ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರು ಆಸ್ಟೇಲಿಯಾ ರಾಷ್ಟ್ರಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಂಡಾಗ, ಶಿಕ್ಷಣದ ಬದಲಾವಣೆಯ ಅಗತ್ಯತೆಗಾಗಿ ಅಲ್ಲಿನ ಪ್ರಯೋಗವಾದ ವಿಕ್ಟೋರಿಯನ್ ಎಸೆನ್‌ಷಿಯಲ್ ಲರ್ನಿಂಗ್ ಸ್ಟ್ಯಾಂಡರ್ಡ್ ಬಗ್ಗೆ ಆಸಕ್ತಿ ಹೊಂದಿದ್ದರು. ಅವುಗಳ ಅವಲೋಕನದೊಂದಿಗೆ, ಕರ್ನಾಟಕ ರಾಜ್ಯವು ಸಹ ರಚನೆಯ ಕಾರ್ಯಕ್ಕೆ ಮುಂದಾಗಬೇಕು, ಅಲ್ಲದೆ ಸಹಪಠ್ಯದಲ್ಲೂ ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದು ತಿಳಿಸಿದ್ದರು. ಕಲಿಕಾ ಮಾನಕಗಳನ್ನು ಅಂತಿಮಗೊಳಿಸುವ ಹಂತದಲ್ಲಿ ಆಗಿನ ಕಾರ್ಯದರ್ಶಿಗಳಾದ ಜಿ. ಕುಮಾರ್ ನಾಯಕ್ ಮತ್ತು ರಾಜ್ಯ ಯೋಜನಾ ನಿರ್ದೇಶಕರಾದ ವಿಫುಲ್ ಬನ್ಸಲ್ ಅವರು ಇವುಗಳನ್ನು ಸೂಕ್ಷ್ಮವಾಗಿ ಆಲಿಸಿ ಸಲಹೆ ನೀಡುತ್ತಿದ್ದುದ್ದನ್ನು ಕಂಡಿದ್ದೇನೆ. ಉದಾಹರಣೆಗೆ ಸಹಪಠ್ಯದಲ್ಲಿ 3 ಮತ್ತು 4ನೇ ತರಗತಿಗಾಗಿ ಕಪ್ಪೆಜಿಗಿತ, ಪೋಟ್ಯಾಟೋರೇಸ್‌ನಂತಹ ಮಾನಕಗಳು ಇದ್ದುದ್ದನ್ನು ಕಂಡು ರೇಗಿದ್ದರು. ಆದ್ದರಿಂದಲೇ ಒಲಂಪಿಕ್‌ಲ್ಲಿ ಸಾಧನೆ ಹೀಗಾಗಿರುವುದು. ನೀವು ಇವುಗಳನ್ನು ಸ್ಟ್ಯಾಂಡರ್ಡ್ ಮಾಡಿದರೆ ಮಗು 100 ಮೀ ಓಡುವುದು ಯಾವಾಗ?  50 ಮೀ ಓಡುವುದಕ್ಕಾದರೂ ಅವಕಾಶ ಕಲ್ಪಿಸಿ. ಮನೆಯ ಸುತ್ತಮುತ್ತಲು ಅವರ ಓಟ 100ಮೀ ಮೀರಿಸುವಂತಿರುತ್ತದೆ ಎಂದಿದ್ದರು. ಸಹಪಠ್ಯಗಳಲ್ಲೂ ಗರಿಷ್ಠತೆಯನ್ನು ಪ್ರೋತ್ಸಾಹಿಸಿದ ಅಧಿಕಾರಿಗಳನ್ನು ನೆನೆಯುತ್ತೇನೆ. ಮೊನ್ನೆ ನವೆಂಬರ್ 21ರಂದು ಮಾನ್ಯ ಶಿಕ್ಷಣ ಮಂತ್ರಿಗಳು ಇವುಗಳನ್ನು ಬಿಡುಗಡೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಇದರ ಸದ್ಬಳಕೆ ಹೇಗಾಗುತ್ತದೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಶಿಕ್ಷಣದ ಕಲ್ಪನೆ, ಶಿಕ್ಷಕರು, ಪಠ್ಯಪುಸ್ತಕ, ತರಗತಿ ಕಲಿಕೆ ಮತ್ತಿತರ ಅಂಶಗಳು ಮಗುವಿನ ಬೆಳವಣಿಗೆಗೆ ಪೂರಕವಾಗಿ ಹೇಗಿರಬೇಕೆಂಬುದನ್ನು ವಿವರಿಸಿದೆ. ಇವುಗಳನ್ನು ಗಮನದಲ್ಲಿರಿಸಿಕೊಂಡು, ಕರ್ನಾಟಕ ರಾಜ್ಯವು ಸ್ಥಳೀಯ ಅಗತ್ಯಕ್ಕನುಗುಣವಾಗಿ ಕಲಿಕಾಮಾನಕಗಳನ್ನು ವಿನ್ಯಾಸಗೊಳಿಸಿದೆ. ಕಲಿಕೆಯನ್ನು ಇಂತಿಷ್ಟು ಕಲಿಯಬೇಕು ಎಂಬುದರ ಚೌಕಟ್ಟಿನಿಂದ ಬೇರ್ಪಡಿಸಿ, ಅದರ ಸೀಮಾರೇಖೆಯ ಆಚೆಗೂ ಕಲಿಕೆಯು ವಿಸ್ತರಿಸಲ್ಪಡಬೇಕು ಎಂಬುದರ ಕಡೆಗೆ ಚಿಂತಿಸುತ್ತಾ, ಕಲಿಕೆಯ ಆಯಾಮವನ್ನು ಅರ್ಥ್ಥಪೂರ್ಣವಾಗಿ ರೂಪಿಸಿಕೊಳ್ಳುವುದರ ಹಿನ್ನೆಲೆಯಲ್ಲಿಯೂ ಇವು ವಿನ್ಯಾಸಗೊಂಡಿರುತ್ತವೆ. ಇದೊಂದು ರಾಜ್ಯದ ಪ್ರಥಮ ಪ್ರಯೋಗ ಎಂದು ಹೇಳಲು ಹರ್ಷವಾಗುತ್ತದೆ.
ಕಲಿಕಾಮಾನಕಗಳ ಆಶಯಗಳು ಹೀಗಿವೆ
-ಇವು ರಾಜ್ಯಪಠ್ಯವಸ್ತುವಿನ ಪರಿಷ್ಕರಣೆಯ ಅವಲೋಕನಕ್ಕೆ ಪೂರಕ ಸಂಪನ್ಮೂಲ ಸಾಮಗ್ರಿಗಳಾಗಿವೆ.
ಜ್ಞಾನಸಂರಚನೆಯ (constructivism) ತರಗತಿ ಪ್ರಕ್ರಿಯೆಗಳಿಗೆ ಅನುಕೂಲಕರವಾಗಿರುವಂತೆ ಕಲಿಕೆಯಫಲಗಳನ್ನು ಇವು ಒಳಗೊಂಡಿವೆ.
-ತರಗತಿವಾರು ಮತ್ತು ವಿಷಯವಾರು ರಚಿಸಲ್ಪಟ್ಟಿದ್ದು, ಪ್ರತಿ ವಿದ್ಯಾರ್ಥಿಗಳ ಕಲಿಕೆಯನ್ನು ಗರಿಷ್ಠತೆಯ ಕಡೆಗೆ ನಿರ್ದೇಶಿಸುತ್ತವೆ.
-ಶಿಕ್ಷಕರಿಗೆ ನಿರ್ದಿಷ್ಟ ಆಯಾಮವನ್ನು ಒದಗಿಸುವುದಲ್ಲದೆ, ಅದಕ್ಕೂ ಮೀರಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯಲ್ಲಿ ಜೊತೆಜೊತೆಯಾಗಿ ಬೆಳೆಯುವುದನ್ನು ಪ್ರೋತ್ಸಾಹಿಸುತ್ತವೆ.
-ಪಠ್ಯವಸ್ತು ಹಾಗೂ ಪಠ್ಯಪುಸ್ತಕಗಳಲ್ಲಿನ ಚಟುವಟಿಕೆಗಳ ರೂಪುರೇಷೆಗೆ ಚೌಕಟ್ಟನ್ನು ಒದಗಿಸಿಕೊಡುತ್ತವೆ.
-ಶಾಲಾ ಹಂತದಲ್ಲಿ ಶಿಕ್ಷಕರು ಕಲಿಕೆಯ ವಿಧಾನಗಳನ್ನು ಗಟ್ಟಿಗೊಳಿಸಿಕೊಳ್ಳಲು ಮತ್ತು ಪರ್ಯಾಯವಾದುದನ್ನು ಕಂಡುಕೊಳ್ಳಲು ದಾರಿತೋರಿಸುತ್ತವೆ.
-ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಲು ಮತ್ತು ತರಬೇತಿಯ ಅಗತ್ಯತೆಗಳ ಪುನರವಲೋಕನಕ್ಕೆ ಅವಕಾಶವನ್ನು ನೀಡುತ್ತವೆ.
-ಶೈಕ್ಷಣಿಕ ಮಾರ್ಗದರ್ಶಕರಿಗೆ ತರಗತಿ ಕಲಿಕೆಯಲ್ಲಿನ ಗರಿಷ್ಠತೆಯ ಆಯಾಮಗಳನ್ನು ವಿವರಿಸುತ್ತವೆ.
ಪ್ರತಿ ವಿದ್ಯಾರ್ಥಿ, ಪ್ರತಿ ಕಲಿಕೆಯನ್ನು ತಲುಪಬೇಕಾಗಿರುವ ವಿಧಾನಗಳ ಬಗೆಗೆ ಇವು ದಿಕ್ಸೂಚಿಯಾಗಿವೆ.
ವಿದ್ಯಾರ್ಥಿಗಳ ಕಲಿಕೆಯ ಸಾಧನೆಯನ್ನು ಮೌಲ್ಯಾಂಕನಗೊಳಿಸಲು  ವ್ಯಾಪ್ತಿಯನ್ನು ಅರ್ಥೈಸಿಕೊಡುತ್ತವೆ.
ಈ ಕಲಿಕಾಮಾನಕಗಳು ವಿಷಯವಾರು ಮತ್ತು ತರಗತಿವಾರು ರೂಪಿಸಲ್ಪಟ್ಟಿವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕಲಿಕೆಯ ಬೆಳವಣಿಗೆಯನ್ನು ಇವು ಒಳಗೊಂಡಿರುತ್ತವೆ. ಪ್ರಮುಖವಾಗಿ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಪರಿಸರ ಅಧ್ಯಯನ, ಸಮಾಜ ವಿಜ್ಞಾನ ವಿಷಯಗಳಿಗೆ ರಚನೆಯು ಇದ್ದು, ಎರಡು ಪ್ರತ್ಯೇಕ ಸಾಹಿತ್ಯವನ್ನು ಹೊಂದಿರುತ್ತವೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಇವು ಮುದ್ರಿತಗೊಂಡಿರುತ್ತವೆ.
ರಾಜ್ಯ ಹಂತದಲ್ಲಿ, ಇವುಗಳ ರಚನೆಗಾಗಿ ಅಧಿಕಾರಿಗಳ ತಂಡ ರಚನೆ ಹಾಗೂ ಶಿಕ್ಷಣ ತಜ್ಞರ ಗುರುತಿಸುವಿಕೆ ಇದ್ದು, ಚಾಲನಾ ಸಮಿತಿಯ ರಚನೆ ಹಾಗೂ ವಿಷಯವಾರು ಪರಿಣಿತರ/ತಜ್ಞರನ್ನು ಆಯ್ಕೆ ಮಾಡಲಾಗಿದೆ. ಅನುಭವಿ ಶಿಕ್ಷಕರು ಹಾಗೂ ವಿವಿಧ ಕಾರ್ಯಾಗಾರಗಳಲ್ಲಿ ತಮ್ಮನ್ನು ರಚನಾತ್ಮಕವಾಗಿ ತೊಡಗಿಸಿಕೊಂಡ ಸಂಪನ್ಮೂಲವ್ಯಕ್ತಿಗಳು ಸಹ ಇದರ ರಚನೆಯಲ್ಲಿ ಕೆಲಸಮಾಡಿರುತ್ತಾರೆ.
ಪೋಷಕರು, ವಿವಿಧ ಭಾಗೀದಾರರು ಮಕ್ಕಳ ಕಲಿಕೆಗಿರುವ ಅವಕಾಶಗಳನ್ನು ಅರ್ಥೈಸಿಕೊಳ್ಳಲು, ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿನ, ಶೈಕ್ಷಣಿಕ ತರಬೇತಿಯ ವಿನ್ಯಾಸವನ್ನು ರಚಿಸಿಕೊಳ್ಳಲು, ವಿದ್ಯಾರ್ಥಿಯು ಕಲಿಕೆಯಲ್ಲಿ ಏನನ್ನು ಅವಶ್ಯವಾಗಿ ತಾನು ಗಳಿಸಿಕೊಳ್ಳಬೇಕೆಂಬುದನ್ನು ಕಂಡುಕೊಳ್ಳಲು ಹಾಗೂ
ಶಿಕ್ಷಕರು ಸ್ವತಂತ್ರವಾಗಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಮತ್ತು ಬಲವರ್ಧನೆಗೊಳಿಸಲು ಕಲಿಕಾ ಮಾನಕಗಳ ಬಳಕೆಯು ಅರ್ಥಪೂರ್ಣವೆನಿಸಿಕೊಳ್ಳುತ್ತದೆ.
ಸದರಿ ಕಲಿಕಾ ಮಾನಕಗಳು ಅಂತಿಮ ಎಂದೇನೂ ಅಲ್ಲ. ಇದು ಪುನರಾವಲೋಕನಕ್ಕೆ ಮುಕ್ತವಾಗಿದೆ. ಕಲಿಕಾ ಮಾನಕಗಳಿಗನುಗುಣವಾಗಿ ಸದ್ಯಕ್ಕೆ ಪಠ್ಯಪುಸ್ತಕಗಳು ಬದಲಾಗಬೇಕು ಎಂಬುದೇನೂ ಇಲ್ಲ. ಆದರೆ, ಇವುಗಳ ಆಶಯದಂತೆ ಪ್ರತಿ ವಿಷಯದಲ್ಲೂ ತರಗತಿಯಲ್ಲಿ ಕಲಿವಿನ ಚಟುವಟಿಕೆಗಳು ರೂಪುಗೊಳ್ಳಬೇಕು, ಶಿಕ್ಷಕರು ಇವುಗಳನ್ನು ತರಗತಿಯಲ್ಲಿ ಸಮನ್ವಯಗೊಳಿಸಬೇಕು ಹಾಗೂ ಆ ಮೂಲಕ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕು ಎಂಬುದು ಸದಾಶಯ.

- ಡಿ. ವೆಂಕಟೇಶಯ್ಯ
ನಿವೃತ್ತ ನಿರ್ದೇಶಕರು (ಪರೀಕ್ಷೆಗಳು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement