ಅಂಕಣಗಳು

ದಿಲ್ಲಿಯ ಬಿಸಿ ಬೆಂಗಳೂರಿಗೂ ತಟ್ಟುತ್ತಾ?

ಆಮ್ ಆದ್ಮಿ ಕಾರ್ಯಕರ್ತರು ವಿಶೇಷವಾದ ತಂತ್ರವಾಗಿ ಸೆಲ್ ಫೋನ್ ಬಳಸಿ..

ಉತ್ತರ ಭಾರತದ ಮೂರು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ವಿಧಾನ ಸಭೆ ಚುನಾವಣೆಯಲ್ಲಿ ಸೋತು, ದೆಹಲಿಯಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿರುವುದು ರಾಜಕೀಯವಾಗಿ ಎಲ್ಲ ಪಕ್ಷಗಳಿಗೂ ಚುರುಕು ಮುಟ್ಟಿಸುವಂತಹ ವಿಚಾರವೇ.
ಆದರೂ ಇನ್ನು ದೆಹಲಿಯ ಅಧಿಕಾರದ ಗದ್ದುಗೆಯ ರಾಜಕೀಯ ಅಸ್ಥಿರ ಸ್ಥಿತಿಯಲ್ಲಿರುವಾಗಲೇ ಆಮ್ ಆದ್ಮಿ ಪಕ್ಷದ ಸುಶಿಕ್ಷಿತ ಬೆಂಬಲಿಗ ಕಾರ್ಯಕರ್ತರು, ಅವರ ವಿಶೇಷವಾದ ತಂತ್ರವಾಗಿ ಸೆಲ್ ಫೋನ್ ಬಳಸಿ, "ರಾಷ್ಟ್ರೀಯ" ಪ್ರಚಾರವನ್ನೇ  ಆರಂಭಿಸಿರುವಂತಿದೆ. ಮಂಗಳವಾರ, ದೆಹಲಿಯಿಂದ ಕರೆ ಮಾಡಿದ ಅಪರಿಚಿತ ಆದರೆ ಮೆದು ಧ್ವನಿಯ ಹೆಣ್ಣು ಮಗಳೊಬ್ಬಳು ಬೆಂಗಳೂರಿನಲ್ಲಿ ಈಗ ಚುನಾವಣೆ ನಡೆದರೆ, ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಿದರೆ, ನೀವು ಅದಕ್ಕೆ ಮತ ನೀಡ್ತೀರಾ? ಎಂದು ಹಠಾತ್ತನೆ ಕೇಳಿದಾಗ, ದೆಹಲಿಯ ಚುನಾವಣೆ ಫಲಿತಾಂಶದ ಬಿಸಿಯನ್ನು ಇತರ ಕಡೆಗಳಿಗೂ ಹಬ್ಬಿಸುವ ಪ್ರಯತ್ನ ನಡೆದಿರುವುದು ಖಚಿತವಾಯಿತು.
ಉತ್ತರ ಭಾರತದ ದೊಡ್ಡ ರಾಜ್ಯಗಳ ಹಾಗೂ ರಾಷ್ಟ್ರೀಯ ರಾಜಧಾನಿಯ ಚುನಾವಣೆ ಫಲಿತಾಂಶ ಹಾಗೂ ಆಂಧ್ರ ಪ್ರದೇಶದ ವಿಭಜನೆ, ತೆಲಂಗಾಣದ ರಚನೆಯ ಸಂಬಂಧದ ಬೆಳವಣಿಗೆಗಳು ಕರ್ನಾಟಕದ ಮೇಲೆ ಪರಿಣಾಮ ಬೀರುವುದು ನಿರೀಕ್ಷಿತವೇ. ಒಂದು ವೇಳೆ ತಾನೇ ತಾನಾಗಿ ಅಂತಹ ಪರಿಣಾಮ ಕಂಡು ಬರದಿದ್ದರೆ, ಅದನ್ನು ಮೂಡಿಸುವ ಶಕ್ತಿಗಳು ಜಾಗೃತವಾಗಿವೆ ಎನ್ನುವುದಂತೂ ನಿಜ.  ಮೇಲ್ನೋಟಕ್ಕೆ, ಕರ್ನಾಟಕದ, ಅದರಲ್ಲೂ ಕಾಂಗ್ರೆಸ್ಸಿನ ಮೇಲೆ ದೆಹಲಿ ಚುನಾವಣೆಯ ಪರಿಣಾಮ ದೊಡ್ಡ ರೀತಿಯಲ್ಲೇ ಆಗಬಹುದೆಂದು ಊಹಿಸುವುದಕ್ಕೆ ಸದ್ಯಕ್ಕೆ ಆಧಾರವಿಲ್ಲ. 2012ರ ವಿಧಾನ ಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಈ ವರ್ಷ ನಡೆದ ರಾಮನಗರ, ಮಂಡ್ಯದ ಲೋಕಸಭೆ ಉಪ ಚುನಾವಣೆಯಲ್ಲಿ ಪಕ್ಷ ವಿಶ್ವಾಸಾರ್ಹವಾದ ರೀತಿಯಲ್ಲಿ ಗೆದ್ದಿದೆ.
 ಆದ್ದರಿಂದ ಕಾಂಗ್ರೆಸ್ ಈಗ ದುರ್ಬಲವಾಗುವುದೆಂದು ಊಹಿಸುವುದಕ್ಕೆ ಬಲವತ್ತರವಾದ ಕಾರಣಗಳೇನೂ ಇಲ್ಲ. ನಿಜ. ಉತ್ತರ ಭಾರತದ ಚುನಾವಣೆಗೆ ಮುಂಚೆಯೇ, ಜಾತ್ಯತೀತ ಜನತಾ ದಳದ ವ್ಯವಹಾರಗಳನ್ನು ಪಕ್ಷದ ರಾಷ್ಟ್ರೀಯ ನಾಯಕ ದೇವೇಗೌಡರೇ ವಹಿಸಿಕೊಂಡು, ಪಕ್ಷದ ಸ್ವರೂಪವನ್ನೇ ಬದಲಾಯಿಸಬೇನ್ನುವ ದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ಪ್ರಕಟಿಸಿದ್ದರೂ, ಅದರಿಂದ ಹೇಳಿಕೊಳ್ಳುವ ಪ್ರಯೋಜನವೇನೂ ಕಂಡು ಬಂದಂತೆ ಆಗಿಲ್ಲ.
 ಹಿಂದೆ ರಾಜ್ಯವನ್ನು ಆಳಿದ್ದ ಭಾರತೀಯ ಜನತಾ ಪಾರ್ಟಿಯ ನಾಯಕತ್ವದಲ್ಲಿ ಕಂಡು ಬಂದಿರುವ ನೈತಿಕ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ನಿವಾರಿಸುವುದು, ದೆಹಲಿಯ ಚುನಾವಣೆಯಲ್ಲಿ ಬಿಜೆಪಿಯ ಸಂಪೂರ್ಣವಲ್ಲದೇ ಹೋದರೂ ದೊಡ್ಡದೇ ಆದ ಸಾಧನೆಯಿಂದಲೂ ಸಾಧ್ಯವಿಲ್ಲ.
 ಹಿಂದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಸ್ಥಾನ-ಮಾನ, ಅಧಿಕಾರದ ಸೌಲಭ್ಯಗಳೆಲ್ಲವನ್ನೂ ಅನುಭವಿಸಿದ್ದ ಅನೇಕ ಮುಖಂಡರೂ ಈಗ "ನಾಯಕತ್ವದ ವಿರುದ್ಧ ಗೊಣಗಾಟವನ್ನು ಆರಂಭಿಸಿದ್ದಾರೆ. ಅದಕ್ಕೆ ಕಾರಣಗಳೇ ಇಲ್ಲ
 ಆದರೂ ಬಿಜೆಪಿ ನಾಯಕರಲ್ಲಿ ಉತ್ತರ ಭಾರತದ ದೊಡ್ಡ ರಾಜ್ಯಗಳು ಹಾಗೂ ದೆಹಲಿಯಲ್ಲಿನ ಫಲಿತಾಂಶ ಸ್ವಲ್ಪ ಮಟ್ಟಿಗೆ ಹತಾಶೆಯ ಸ್ಥಿತಿಯನ್ನು ಹೊಡೆದೋಡಿಸಿ, ಉತ್ಸಾಹವನ್ನು ತುಂಬುವುದು ಸಾಧ್ಯ ಎನ್ನುವ ನಂಬಿಕೆ ಮೂಡಿರುವಂತಿದೆ.
 ನಿಜ. ಈಗ ರಾಜ್ಯದಲ್ಲಿ ಇನ್ಯಾವ ರಾಜಕೀಯ ಅಗ್ನಿ ಪರೀಕ್ಷೆಯೂ ಸಮೀಪದಲ್ಲಿ ನಡೆಯಲಿಕ್ಕಿಲ್ಲ. ಆದ್ದರಿಂದ ಎಲ್ಲ ಪಕ್ಷಗಳೂ ಇನ್ನು ಕೆಲವೇ ತಿಂಗಳಲ್ಲಿ ಎದುರಾಗುವ ಲೋಕಸಭೆ ಚುನಾವಣೆಯನ್ನು ಗಮನಿಸಿಯೇ ತಮ್ಮ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ತಂತ್ರಗಳನ್ನು ಹೊಸೆಯಲು ಆರಂಭಿಸಬೇಕು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿ ಆಗಿರುವ ಕೆಲಸ, ಜನ ಜೀವನದ ಮೇಲೆ ಅದು ಬೀರಿರಬಹುದಾದ ಪರಿಣಾಮ ಪ್ರಸ್ತುತವಾಗುತ್ತದೆ. ಸಹಜವಾಗಿಯೇ ಸರ್ಕಾರದ ಆರು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಆಗಿರುವ ಕೆಲಸಕ್ಕಿಂತ, ಆಗಲೇ ಬೇಕಾಗಿದ್ದ ಆದರೆ ಆಗದೇ ಇರುವ ಕೆಲಸಗಳತ್ತ ಗಮನ ಹರಿಯುತ್ತದೆ.

ರೋಷಾವೇಶದ ಮಾತೆಲ್ಲಿ?: ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, ಕಾಂಗ್ರೆಸ್ ನಾಯಕರಾಗಿ, ಸಿದ್ದರಾಮಯ್ಯ ಅವರೇ ಮಾಡಿದ ಆರೋಪಗಳು ಹೇರಳವಾಗಿವೆ. ಬೆಂಗಳೂರು- ಬಳ್ಳಾರಿ ಅಕ್ರಮ ಗಣಿಗಾರಿಕೆಯ ವಿರುದ್ಧದ ಪಾದಯಾತ್ರೆಯ ಕಾಲದಲ್ಲಿ ಪ್ರತಿನಿತ್ಯ ಮಾಡಿದ ಆರೋಪಗಳೂ ಇನ್ನೂ ನೆನಪಿನಲ್ಲಿ ಉಳಿದಿದೆ. ಆದರೆ ಯಾವ ಒಂದು ನಿರ್ದಿಷ್ಟವಾದ ಆರೋಪದ ಸಂಬಂಧದಲ್ಲೂ ತನಿಖೆ, ವಿಚಾರಣೆ, ಸೂಕ್ತ ಕ್ರಮ ಎನ್ನುವ ಪದಗಳು ತಮ್ಮ ತರ್ಕಬದ್ಧ ಅಂತ್ಯವನ್ನು ಮುಟ್ಟಿಲ್ಲ.  ಈಗಲೂ ಅದೆಲ್ಲವೂ ಇನ್ನೂ ಮುಖ್ಯಮಂತ್ರಿ, ಮಂತ್ರಿಗಳ ಭಾಷಣಕ್ಕಷ್ಟೇ ಗ್ರಾಸ ಒದಗಿಸುತ್ತಿವೆ, ಲೋಕಸೇವಾ ಆಯೋಗದ ವ್ಯವಹಾರಗಳು, ವಿಶ್ವವಿದ್ಯಾಲಯಗಳ ಹಲವು ಪ್ರಕರಣಗಳು ಎಲ್ಲವೂ ಎಲ್ಲಿದ್ದವೋ ಅಲ್ಲೇ ಸ್ಥಗಿತವಾಗಿವೆ. ಆ ದಿಕ್ಕಿನಲ್ಲಿ ಯಾರೂ ಗಮನವನ್ನೇ ಹರಿಸುತ್ತಿಲ್ಲ. ಆಡಳಿತದಲ್ಲಿ ಇಷ್ಟು ಬೇಗ ಆಲಸ್ಯದ ಅವಸ್ಥೆ ಮೂಡಿರುವುದು ನಿಜವಾಗಿಯೂ ಆಶ್ಚರ್ಯವೇ. ಮಂತ್ರಿಗಳು ಆರಂಭದಲ್ಲಾದರೂ ಚುರುಕಾಗಿ ಕೆಲಸ ಮಾಡಿ, ವಾತಾವರಣವನ್ನು ಬದಲಾಯಿಸುವುದು ಸಾಧ್ಯವಿತ್ತು. ಆದರೆ ಅದೇಕೋ ಮಂತ್ರಿ ಮಾನ್ಯರಿಗೆ ವಿಧಾನ ಸೌಧಕ್ಕೆ ಬರುವುದೇ ಒಂದು ಮುಜಗರದ ಕೆಲಸವಾದಂತಾಗಿದೆ.

ಆಂತರಿಕ ತಿಸ್ರಗಳು: ಕಾಂಗ್ರೆಸ್ಸಿನ ಆಂತರಿಕ ಸಮಸ್ಯೆಗಳೆಲ್ಲವೂ ಹಾಗೆಯೇ ಉಳಿದು ಬಿಟ್ಟಿದೆ. ಸರ್ಕಾರದ ಕೆಲಸದ ವೈಖರಿ, ಮಂತ್ರಿಗಳ ಭಾಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಖ್ಯಮಂತ್ರಿಯ ಕೈಯಲ್ಲೇ ಎಲ್ಲ ಅಧಿಕಾರವೂ ಕೇಂದ್ರೀಕೃತವಾಗಿರುವುದರಿಂದ (ಸರ್ಕಾರದ ಇಲಾಖೆಗಳ ಅರ್ಧಕ್ಕೂ ಹೆಚ್ಚಿನ ಪಾಲು ಅವರ  ನೇರ ಉಸ್ತುವಾರಿಗೇ ಒಳಪಟ್ಟಿದೆ) ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಜಾತಿ-ಜಾತಿಗಳ ಸಂಘರ್ಷದ ದೃಷ್ಟಿಯಿಂದಲೇ ನೋಡುವುದು, ಹಾಗೇ ವಿಶ್ಲೇಷಿಸುವುದು ಅನೇಕರಿಗೆ ಸಾಧ್ಯವಾಗಿದೆ ಎನಿಸುತ್ತಿದೆ.
ನಿಜ, ಇದುವರೆಗೆ ಸಿದ್ದರಾಮಯ್ಯ ಅವರಿಗೆ, ಕಾಂಗ್ರೆಸ್ ವರಿಷ್ಠರ ರಕ್ಷಾಕವಚವಿತ್ತು. ಅದರ ಪ್ರದರ್ಶನವೂ ಆಗಿತ್ತು. ಆದರೆ ಆ ರಕ್ಷಾಕವಚ ಶಾಶ್ವತವಾದದ್ದಲ್ಲ, ಅದರಲ್ಲಿ ಈಗ ಅಲ್ಲಿ-ಇಲ್ಲಿ ಅಪವಾದಗಳು ಎದ್ದು ಕಾಣುತ್ತಿವೆ.
ಉದಾಹರಣೆಗೆ ಸರ್ಕಾರದ ಅಧಿಕಾರದಲ್ಲಿ ಶಾಸಕರಿಗೆ, ಪ್ರಮುಖ ಕಾರ್ಯಕರ್ತರಿಗೆ ಸಾಧ್ಯವಿರುವಷ್ಟು ಪಾಲನ್ನು ಹಂಚಬಹುದು, ಬೋರ್ಡು, ನಿಗಮ, ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರ ನೇಮಕಕ್ಕೆ ಇಷ್ಟು ದಿನ ಯಾಕೆ ಬೇಕೆನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ, ಮಂತ್ರಿಮಂಡಲದ ವಿಸ್ತರಣೆಯ ವಿಚಾರವೂ ಅಷ್ಟೇ. ಈ ಹಿನ್ನೆಲೆಯಲ್ಲಿ ಸರ್ಕಾರದ ಆರು ತಿಂಗಳ ಕೆಲಸದ ಮೌಲ್ಯಮಾಪನ ಎಂದರೆ ಅದರಲ್ಲಿ ಅರ್ಧಕ್ಕೂ ಹೆಚ್ಚಿನ ಭಾಗ ಮುಖ್ಯಮಂತ್ರಿಗಳ ಕೆಲಸವೇ ಅಲ್ಲವೇ ? ಆ ಮೌಲ್ಯ ಮಾಪನವನ್ನು ಮಾಡುವವರು ಯಾರು ?
ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲೇ ಅನೇಕ ಶಾಸಕರು, ಅಧಿವೇಶನದ ಸಮಯದಲ್ಲಿ ಬೆಳಗಾವಿಗೆ ಹೋಗಿದ್ದ ಪ್ರಮುಖ ಕಾರ್ಯಕರ್ತರು, ಮುಖ್ಯಮಂತ್ರಿಗೆ ತಾವಿನ್ನು ಬಹುಕಾಲ, ತಮ್ಮ ಪಾಲಿನ ಅಧಿಕಾರಕ್ಕಾಗಿ ಕಾಯುವ ಸಹನೆಯನ್ನು ಪ್ರದರ್ಶಿಸುವುದು ಸಾಧ್ಯವಿಲ್ಲವೆಂದು "ನೋಟಿಸ್‌" ನೀಡಿದ್ದೂ ಆಗಿದೆ.

ರಾಜ್ಯಪಾಲರು - ಸರ್ಕಾರ: ಉತ್ತರ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶದ ಪ್ರಕಟಣೆಗೆ ಮುಂಚೆಯೇ, ರಾಜ್ಯಪಾಲ ಹಂಸರಾಜ ಭಾರದ್ವಾಜರ ಹಾಗೂ ಸರ್ಕಾರದ ನಡುವಣ ಬಾಂಧವ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ. ರಾಜ್ಯಪಾಲರು ಅವಕಾಶ ಸಿಕ್ಕಾಗಲೆಲ್ಲ ಕುಟುಕಲು ಆರಂಭಿಸಿದ್ದಾರೆ ಎನ್ನುವ ವದಂತಿಗಳು, ವರದಿಗಳ ರೂಪದಲ್ಲಿ ಮಾಧ್ಯಮ ಪ್ರಪಂಚದಲ್ಲಿ ಕಾಣಿಸಿಕೊಂಡಿದ್ದೂ ಆಗಿತ್ತು.
ಈ ವಿಚಾರದಲ್ಲಿ ರಾಜ್ಯಪಾಲರು ಎಚ್ಚರಿಕೆಯಿಂದ ಸಂವಿಧಾನದ ಚೌಕಟ್ಟಿನ ಒಳಗೇ ಮಾತಾಡುತ್ತಿದ್ದಾರೆ. ಅಂತರಂಗ, ಬಹಿರಂಗ ಮಾತುಕತೆಯಲ್ಲಿ ರಾಜ್ಯಪಾಲರು ಸರ್ಕಾರದ ಕೆಲಸದ ವಿಚಾರಕ್ಕಿಂತ ಹೆಚ್ಚಾಗಿ ಶಾಸನ ರಚನೆಯ ವಿಚಾರವನ್ನೇ ಪ್ರಸ್ತಾಪಿಸುತ್ತಿರುವುದೂ ಈಗ ಗುಟ್ಟಾಗಿ ಉಳಿದಿಲ್ಲ.
ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರ, ಸರ್ಕಾರಿ ಭೂಮಿಯಲ್ಲಿ ಖಾಸಗಿಯವರು ನಿರ್ಮಿಸಿದ್ದ ಆಶ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಭೂ ಸುಧಾರಣೆ ಕಾಯಿದೆಯ ಬದಲಾವಣೆ ವಿಧೇಯಕವನ್ನು ವಿಧಾನ ಸಭೆಯಲ್ಲಿ ತನ್ನ ಬಹುಮತದ ಪ್ರದರ್ಶನದಿಂದ ಅಂಗೀಕಾರ ಮಾಡುವಂತೆ ಮಾಡಿದರೂ, ಮರುದಿನವೇ ವಿಧಾನ ಪರಿಷತ್ತಿನಲ್ಲಿ ಆ ವಿಧೇಯಕವನ್ನು ತಡೆಹಿಡಿಯಲು ಸೂಕ್ತ ಕಾರಣವನ್ನೇ ಕೊಡಲಿಲ್ಲ. ಆ ವಿಧೇಯಕದ ವಿಚಾರದಲ್ಲಿ ಸರ್ಕಾರ ವಿಧಾನ ಸಭೆಯ ಅಧಿವೇಶನದಲ್ಲಿ ಪ್ರಕಟಿಸಿದ್ದ ಆತುರ, ರಾತ್ರಿ ಕಳೆದು ಬೆಳಗಾಗುವುದರ ಒಳಗಾಗಿ ಮಾಯವಾಗಿದ್ದೇಕೆ ?
ಈ ಪ್ರಕರಣ ವಿಶ್ಲೇಷಣೆಗೆ ತುಂಬಾ ಅಮುಖ್ಯವಾದದ್ದು ಎಂದು ಒಕಂಡು ಬರಬಹುದು. ಆದರೆ ಇಂತಹ ಪ್ರಕರಣಗಳೇ, ಭವಿಷ್ಯದಲ್ಲಿ ಸರ್ಕಾರದ ಅನುಭವದ ಕೊರತೆಗೆ ಸಾಕ್ಷಿಗಳೆಂದು ಉದಾಹರಣೆಗಳೆಂದು ಹೇಳಲು ಅವಕಾಶ ಮಾಡಿ ಕೊಡುವುದು. ಸರ್ಕಾರ ತನ್ನ 'ಬಿದಾಯಿ' ಯೋಜನೆಯನ್ನು (ಮುಸ್ಲಿಮ್ ಅವಿವಾಹಿತ ಹೆಣ್ಣು ಮಕ್ಕಳಿಗೆ, ವಿವಾಹವಾದರೆ 50,000 ರುಪಾಯಿಗಳ ಮೊತ್ತದ ಬಳಕೆ ವಸ್ತುಗಳ ಕೊಡುಗೆ) ಒಂದೇ ಸಮುದಾಯಕ್ಕೆ ನೆರವನ್ನು ಪ್ರಕಟಿಸುವುದು ಸಂವಿಧಾನ ಬಾಹಿರ ಎಂದು ಪರಿಗಣಿಸಬಹುದೆಂದು ಟೀಕಿಸುವ ಶಾಸಕರಿಗೆ, ಸಾರ್ವಜನಿಕರಿಗೆ, ಅಂತಹ ಭಾವನೆ ನಿಮ್ಮಲ್ಲಿದ್ದರೆ, ಅದನ್ನು ನ್ಯಾಯಾಲಯಕ್ಕೆ ಹೋಗಿ ಪರೀಕ್ಷಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಹೇಳಿರುವುದು ಸದ್ವರ್ತನೆಯ ಲಕ್ಷಣವಲ್ಲ.
ಇಂತಹ ಸವಾಲನ್ನು ಒಬ್ಬ ಜನತಾಂತ್ರಿಕ, ಸಮಾಜವಾದಿ, ಸೆಕ್ಯುಲರ್ ನಾಯಕರಿಂದ ಜನರು ನಿರೀಕ್ಷಿಸುವುದಿಲ್ಲ. ಕೋರ್ಟಿಗೆ ಹೋಗಲು, ಯಾರಿಗೂ ಯಾರ ಪರವಾನಗಿಯೂ ಅಗತ್ಯವಿಲ್ಲ.

ಕಿಡಿಗೇಡಿತನ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸಂಗಾತಿಗಳು ತಮ್ಮ ರಾಜಕೀಯ ನಿಘಂಟಿನಿಂದ "ಶೀಘ್ರದಲ್ಲಿ" "ಆದಷ್ಟು ಬೇಗ" ಎನ್ನುವ ಪದಗಳನ್ನು ತೆಗೆದು ಹಾಕಬೇಕು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!