ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕಿವೆ ವಿನೂತನ ಪ್ರಯೋಗಗಳು
ಕಳೆದ ವಾರ ನಾನು ಶಿಕ್ಷಣ ಇಲಾಖೆಯ ಲಕ್ಷಣಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಿದ್ದೆ...
ಕಳೆದ ವಾರ ನಾನು ಶಿಕ್ಷಣ ಇಲಾಖೆಯ ಲಕ್ಷಣಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಿದ್ದೆ. ಸಾಕ್ಷರತೆಯ ಕೊರತೆ, ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ, ಹೆಣ್ಣು ಮಕ್ಕಳ ಹಾಜರಾತಿಯ ಇಳಿಮುಖ...ಇಂತಹ ವಾತಾವರಣದಲ್ಲಿ ಶಿಕ್ಷಣವನ್ನು ಯಾವರೀತಿ ಆಕರ್ಷಕವಾಗಿ ಮಾಡಬೇಕು ಎಂಬ ದಿಸೆಯಲ್ಲಿ ನಾವು ಮೂರು ವಿನೂತನ ಪ್ರಯೋಗಗಳನ್ನು ನಡೆಸಿದೆವು.
ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆ ಮಾಹಿತಿ ಸಿಂಧು ಎಂಬ ಯೋಜನೆಯ ಅಡಿಯಲ್ಲಿ ಐದು ಗಣಕಯಂತ್ರಗಳನ್ನು ಹೊಂದಿರುವ ಒಂದು ಕೊಠಡಿಯನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಆ ಗಣಕ ಯಂತ್ರಗಳನ್ನು ನೋಡಿಕೊಳ್ಳುವವರು ಮತ್ತು ತರಬೇತಿ ನೀಡುವವರ ಕೊರತೆಯಿಂದ ಸದರಿ ಗಣಕ ಯಂತ್ರಗಳು ಹಾಳಾಗಿ ಬಿದ್ದಿದ್ದವು. ಗಣಕಯಂತ್ರಗಳು ಹಾಗೂ ಶಿಕ್ಷಕರು ಲಭ್ಯವಿದ್ದರೆ ಅಲ್ಲಲ್ಲಿ ವಿದ್ಯುಚ್ಛಕ್ತಿ ಸಮಸ್ಯೆಯಿಂದ ಸರಿಯಾಗಿ ಬಳಕೆ ಆಗುತ್ತಿರಲಿಲ್ಲ. ಈಗ ಹೊಸದಾಗಿ ಸರ್ಕಾರಿ ಯೋಜನೆ ಅಡಿಯಲ್ಲಿ ಅನುದಾನವನ್ನು ಪಡೆದು ಹೊಸ ಗಣಕ ಯಂತ್ರಗಳನ್ನು ಮತ್ತೊಂದು ಸಲ ಶಾಲೆಗಳಿಗೆ ಸೇರಿಸುವುದು ಒಂದು ಕಷ್ಟಕರ ಕೆಲಸ. ಆದರೆ ಖಾಸಗಿ-ಸರ್ಕಾರಿ ಸಹಭಾಗಿತ್ವದಿಂದ ಇರುವಂತಹ ಸಂಪನ್ಮೂಲಗಳನ್ನು ಹೇಗೆ ಉಪಯೋಗಿಸುವುದು ಎಂದು ನಾವು ದಾರಿ ಹುಡುಕಿದೆವು. ಆ ಸಮಯದಲ್ಲಿ ಐ.ಟಿ. ಕಂಪೆನಿ ಹೊಂದಿರುವ ಪ್ರಸನ್ನ ಎಂಬ ಉದ್ಯಮಿಯೊಬ್ಬರು ನನ್ನ ಸಂಪರ್ಕಕ್ಕೆ ಬಂದರು. ಅವರು ಈ ಭಾಗದಲ್ಲಿ ಐ.ಟಿ. ಪಾರ್ಕ್ ಮಾಡಬೇಕೆಂಬ ಕನಸನ್ನು ಇಟ್ಟುಕೊಂಡವರು. ಆಗ ಅವರಿಗೆ ನಾನು ಒಂದು ಪ್ರಶ್ನೆ ಕೇಳಿದೆ, "ನೀವು ಐ.ಟಿ. ಪಾರ್ಕ್ ಅನ್ನು ಸ್ಥಾಪಿಸಬೇಕೆಂದು ಇಚ್ಚಿಸಿದ್ದೀರಿ. ಆದರೆ ಐ.ಟಿ. ಬಗ್ಗೆ ತಿಳಿದುಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇದೆಯಾ?" ಆಗ, ಅವರು "ನನಗೆ ಅವಕಾಶ ಕೊಟ್ಟರೆ ಕನಿಷ್ಠ ಐದುನೂರು ಶಾಲೆಗಳಲ್ಲಿ ಗಣಕಯಂತ್ರ ಬಳಕೆ ಬಗ್ಗೆ ಸ್ಥಳೀಯರಿಂದ ತರಬೇತಿಯನ್ನು ನೀಡುತ್ತೇನೆ. ಹೀಗೆ ಪ್ರತಿಯೊಂದು ಶಾಲೆಯಲ್ಲಿ ಮೂವತ್ತರಿಂದ ನಲವತ್ತು ಮಕ್ಕಳ ಶಾಲೆ ಮುಗಿದ ನಂತರ ಆರು ತಿಂಗಳು ಗಣಕಯಂತ್ರವನ್ನು ಕಲಿತಿದ್ದರೆ ಅವರಿಗೆ ತಂತ್ರಜ್ಞಾನದ ಬಗ್ಗೆ ಉತ್ತಮ ತಿಳಿವಳಿಕೆ ಬರುತ್ತದೆ. ತರಬೇತಿ ಪಡೆದಿರುವ ಮಕ್ಕಳಿಂದ ನಾನು ಕಾಲ್ಸೆಂಟರನ್ನು ತೆರೆದು ವ್ಯವಹಾರ ಮಾಡಬಹುದು" ಎಂದು ಹೇಳಿದರು.
ನಮ್ಮ ಸಮಿತಿಯಲ್ಲಿ- ಶಾಲೆಗಳಲ್ಲಿ ಇರುವ ಮೂಲಭೂತ ಸೌಕರ್ಯ ಅಂದರೆ ಕೊಠಡಿ, ಪೀಠೋಪಕರಣಗಳು ಮತ್ತು ವಿದ್ಯಚ್ಛಕ್ತಿಯ ಪಾಯಿಂಟ್ಗಳನ್ನು ಅವರಿಗೆ ನಾವು ಯಾವುದೇ ಖರ್ಚಿಲ್ಲದೇ ನೀಡುವುದಕ್ಕೆ ಒಪ್ಪಂದವನ್ನು ಮಾಡಿದೆವು. ಮತ್ತು ಶಾಲೆ ನಡೆಸುವ ಸಮಯದಲ್ಲಿ ಕನಿಷ್ಠ ಒಂದು ಅಥವಾ ಎರಡು ತರಗತಿಗಳನ್ನು ಸದರಿ ತರಬೇತುದಾರರು ಮಕ್ಕಳಿಗಾಗಿ ನಡೆಸಬೇಕೆಂಬ ಷರತ್ತನ್ನು ಹಾಕಿದೆವು. ಅಲ್ಲದೇ ಅವರಿಗೆ ಬೇರೆಬೇರೆ ಸ್ವಯಂ-ಸೇವಾ ಸಂಸ್ಥೆಗಳಿಂದ ಅಂದರೆ, ಅಜೀಂ ಪ್ರೇಮ್ಜಿ ಫೌಂಡೇಷನ್, ರಾವ್ ಫೌಂಡೇಷನ್, ಅಕ್ಷರ ಫೌಂಡೇಷನ್ ತಯಾರಿಸಿರುವ ಆಡಿಯೋ/ವಿಡಿಯೋ ಸಿ.ಡಿ.ಗಳ ಪ್ರತಿಗಳನ್ನು ಮಕ್ಕಳಿಗೆ ತೋರಿಸಲು ಕೊಟ್ಟಿದ್ದೆವು. ಈ ಸಿ.ಡಿ. ಗಳಲ್ಲಿ ಗಣಿತ ಹಾಗೂ ವಿಜ್ಞಾನದ ವಿಷಯಗಳ ಬಗ್ಗೆ ಬಹಳ ಸುಲಭವಾಗಿ ಚಲನಚಿತ್ರಗಳ ಮೂಲಕ ಅರಿತುಕೊಳ್ಳುವ ಅವಕಾಶ ಇತ್ತು. ವೀಡಿಯೋ ನೋಡಿ ಕಲಿಯುವುದಕ್ಕೆ ಮಕ್ಕಳಿಗೆ ಆಸಕ್ತಿ ಇರುತ್ತದೆ. ಮಾತ್ರವಲ್ಲ ಅದರಲ್ಲಿ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಐ.ಟಿ. ಕಂಪೆನಿಯವರು ಈ ಶಾಲೆಗಳಲ್ಲಿ ಕನಿಷ್ಠ ಐದು ಗಣಕ ಯಂತ್ರ, ಪ್ರಿಂಟರ್ ಮತ್ತು ಯು.ಪಿ.ಎಸ್. ಬ್ಯಾಟರಿ ಒದಗಿಸುತ್ತೇವೆಂದು ಆಶ್ವಾಸನೆ ಕೊಟ್ಟರು. ಈ ಗಣಕಯಂತ್ರಗಳನ್ನು ಅವರು ದೊಡ್ಡ ದೊಡ್ಡ ಕಂಪೆನಿಗಳಾದ ಹೆಚ್.ಪಿ, ಐ.ಬಿ.ಎಂ, ಮತ್ತು ವಿಪ್ರೋ ಸಂಸ್ಥೆಗಳು ಬಳಸಿ, ಕೆಲ ಸಮಯದ ನಂತರ ಕೊಟ್ಟು ಬಿಡುವಂಥಹ ಉಪಕರಣಗಳನ್ನು ರೋಟರಿ ಕ್ಲಬ್ ಮೂಲಕ ದೇಣಿಗೆ ರೂಪದಲ್ಲಿ ತರುತ್ತಾರೆಂದು ಪ್ರಸ್ತಾಪಿಸಿದರು. ಅಲ್ಲದೆ ಹತ್ತನೇ ತರಗತಿ ಉತ್ತೀರ್ಣನಾದ ಸ್ಥಳೀಯ ಒಬ್ಬ ಹುಡುಗ ಅಥವಾ ಹುಡುಗಿಯನ್ನು ಗ್ರಾಮ ಪಂಚಾಯತ್ ಸದಸ್ಯರ ಸಹಭಾಗಿತ್ವದಿಂದ ಆಯ್ಕೆ ಮಾಡಿ ಒಂದು ತಿಂಗಳ ಶಿಕ್ಷಣವನ್ನು ಈ ಕಂಪೆನಿಯವರು ಕೊಡಬೇಕಾಗಿತ್ತು. ಆ ನಂತರ ಅವರು ಮಕ್ಕಳಿಗೆ ತರಬೇತಿ ನೀಡಬೇಕಾಗಿತ್ತು. ಕೇಂದ್ರ ಸರ್ಕಾರದ ಒಂದು ಹೊಸ ಕೌಶಲ್ಯ ಅಭಿವೃದ್ಧಿ ತರಬೇತಿ ಎಂಬ ಯೋಜನೆಯ ಅಡಿಯಲ್ಲಿ ಒಬ್ಬ ವೃತ್ತಿಪರ ತರಬೇತಿ ಒದಗಿಸುವವರು (Vocational Training Provider) ಕಾರ್ಮಿಕ ಇಲಾಖೆಯ ಮೂಲಕ ನೋಂದಣಿ ಮಾಡಿದರೆ ಅವರು ನಡೆಸಿರುವ ಕೌಶಲ್ಯ ಅಭಿವೃದ್ಧಿ ತರಬೇತಿಯ ವಿವರವನ್ನು ದಾಖಲಿಸಿದಂತೆ, ಪ್ರತೀ ತರಬೇತಿ ಪಡೆದವರ ಸಂಖ್ಯೆಗೆ ಅನುಗುಣವಾಗಿ ರು. ಹದಿನೈದರಂತೆ ಪ್ರತೀ ಗಂಟೆಗೆ ಲೆಕ್ಕ ಹಾಕಿ ಸಂಸ್ಥೆಗೆ ತರಬೇತಿ ಅನುದಾನ ಮರುಪಾವತಿ ಮಾಡಲಾಗುವುದು ಎಂದು ಖಚಿತಪಡಿಸಿ ಐ.ಟಿ. ಉದ್ಯಮಿ ಪ್ರಸನ್ನರವರಿಗೆ ಇದರಲ್ಲಿ ನೋಂದಣಿ ಕೊಡಿಸಿದೆವು.
ಮುಂದಿನ ಆರು ತಿಂಗಳಲ್ಲಿ ಸಾವಿರಾರು ಮಕ್ಕಳು ಗಣಕಯಂತ್ರದ ತರಬೇತಿಯನ್ನು ಪಡೆದರು. ಮಾತ್ರವಲ್ಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಏಕೆಂದರೆ, ಗಣಕಯಂತ್ರ ತರಬೇತಿ ಸಿಗುತ್ತದೆಂಬ ವಿಷಯ ಅವರಿಗೆ ತುಂಬಾ ಆಕರ್ಷಕವಾಯಿತು. ಸುಮಾರು ಎಂಟು ತಿಂಗಳ ನಂತರ ಪ್ರಸನ್ನರವರು ಬೀದರ್ ಜಿಲ್ಲೆಯಲ್ಲಿ ಹಳ್ಳಿಯ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ಕಾಲ್ಸೆಂಟರನ್ನು ಸಹ ಸ್ಥಾಪಿಸಿದರು. ಈ ರೀತಿ ಎಲ್ಲಾ ಶಾಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನದ ಬಗ್ಗೆ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೆ ಸರ್ಕಾರದ ಯಾವುದೇ ಹೆಚ್ಚುವರಿ ಅನುದಾನವನ್ನು ಕೇಳದೆ, ಇರುವಂತಹ ಸಂಪನ್ಮೂಲಗಳನ್ನು ಮತ್ತು ಯೋಜನೆಗಳನ್ನು ಉಪಯೋಗಿಸಿ ಅಭಿವೃದ್ಧಿಯನ್ನು ಸಾಧಿಸಬಹುದಲ್ಲವೆ?
ಇನ್ನು ನಮ್ಮ ಗುಂಪಿನ ಚರ್ಚೆಯಲ್ಲಿ ಬಂದ ಎರಡನೇ ಪ್ರಶ್ನೆಯೆಂದರೆ, ನಮ್ಮ ಮಕ್ಕಳು ಇವತ್ತು ಶಿಕ್ಷಣವನ್ನು ಪಡೆದು ಅವರ ಪಾಲಕರ ಮೂಲಭೂತ ಕಸುಬಾದ ಕೃಷಿಯಿಂದ ದೂರ ಹೋಗುತ್ತಿರುವುದರ ಬಗ್ಗೆಯಾಗಿತ್ತು. ಕೃಷಿ ಕೂಲಿಯನ್ನು ಮಾಡುವುದರಲ್ಲಿ ಅವರಿಗೆ ನಾಚಿಕೆ ಆಗುತ್ತದೆ ಮತ್ತು ಬೇರೆ ಕೆಲಸ ಹಳ್ಳಿಯಲ್ಲಾಗಲಿ ಅಥವಾ ಹೊರಗಡೆಯಲ್ಲಾಗಲಿ ಅವರ ಅಪೇಕ್ಷೆಗೆ ತಕ್ಕಂತೆ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಯುವ ಪೀಳಿಗೆ ನಿರುದ್ಯೋಗಿಗಳಾಗಿ ಕೆಟ್ಟ ಚಟಗಳ ಕಡೆ ಆಕರ್ಷಿತರಾಗುವುದು ಸಹಜ. ಈ ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ನಾವು ಮಕ್ಕಳಲ್ಲಿ ಕೃಷಿ ಬಗ್ಗೆ ಗೌರವ ಹಾಗೂ ತಿಳಿವಳಿಕೆಯನ್ನು ಚಿಕ್ಕ ವಯಸ್ಸಿನಿಂದಲೇ ಮೂಡಿಸಿದರೆ ಖಂಡಿತವಾಗಿ ಅವರು ಕೃಷಿ ಕ್ಷೇತ್ರದಲ್ಲಿ ಉತ್ತಮ ಪದ್ಧತಿಗಳನ್ನು ಅನುಸರಿಸಿ ಹೆಚ್ಚು ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗುವುದು. ಅದರಂತೆ ನಾವು ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಸಂಪರ್ಕಿಸಿ, ಕೃಷಿಯ ಬಗ್ಗೆ ಪ್ರಾಯೋಗಿಕ ಪಠ್ಯಕ್ರಮವನ್ನು ತಯಾರಿಸಲು ಕೋರಿದೆವು. ಅವರೂ ಸಹ ಬಹಳ ಉತ್ಸಾಹದಿಂದ ಒಂದು ತಂಡವನ್ನು ರಚಿಸಿದರು. ಸುಮಾರು ಒಂದು ತಿಂಗಳ ಒಳಗೆ ಒಂದು ಪಠ್ಯಕ್ರಮವನ್ನು ಅವರು ತಯಾರು ಮಾಡಿಕೊಟ್ಟರು. ಈ ಪಠ್ಯಕ್ರಮದಲ್ಲಿ ನಾವು ಹೇಗೆ ಮಕ್ಕಳಿಗೆ ವಿಜ್ಞಾನದ ಪಠ್ಯ ಪುಸ್ತಕದಲ್ಲಿ ಬೀಜ, ಚಿಗುರು, ಗಿಡ, ಮರ ಮುಂತಾದವುಗಳ ಬಗ್ಗೆ ಕಲಿಸುತ್ತೇವೋ, ಅದೇ ರೀತಿಯಲ್ಲಿ ಮಾಹಿತಿ ಆಧಾರಿತ ಪ್ರಯೋಗವನ್ನು ನಡಿಸುವುದು. ಉದಾ: ಶಾಲಾ ಆವರಣದಲ್ಲಿ ಖಾಲಿ ಭೂಮಿಯನ್ನು ಮಳೆಗಾಲದ ಮುಂಚೆ ಉಳುಮೆ ಮಾಡುವುದು ಮತ್ತು ಗೊಬ್ಬರ ಹಾಕಲು ಸುತ್ತಮುತ್ತ ಇರುವ ಹಸಿರು ತ್ಯಾಜ್ಯವನ್ನು ಒಂದು ಗುಂಡಿಯಲ್ಲಿ ಕೊಳೆಯಿಸಿ ಗೊಬ್ಬರ ತಯಾರಿಸುವುದು. ಪ್ಲಾಸ್ಟಿಕ್ ಚೀಲಗಳು ಮತ್ತು ಹಾಲಿನ ಕವರ್ಗಳನ್ನು ಸಂಗ್ರಹಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಅದರಲ್ಲಿ ಮಣ್ಣು ತುಂಬಿ ಬೀಜಗಳನ್ನು ನೆಡುವುದು ಮತ್ತು ಸಣ್ಣಸಣ್ಣ ಚಿಗುರು ಬಂದಾಗ ಅದನ್ನು ಪೋಷಿಸುವುದು ಹಾಗೂ ಗಿಡಗಳನ್ನು ಗುಂಡಿಯಲ್ಲಿ ನೆಡುವುದು ಮತ್ತು ತುಂತುರು ನೀರಾವರಿ ಮೂಲಕ ಕೃಷಿ ಮಾಡುವುದು. ಅಲ್ಲದೆ ಬೇವಿನ ಮರದ ಎಲೆಗಳು ಹಾಗೂ ಬೀಜಗಳ ಹಿಂಡಿಗಳನ್ನು ಕೀಟನಾಶಕವಾಗಿ ಉಪಯೋಗಿಸುವುದು ಇತ್ಯಾದಿ. ಒಟ್ಟಾರೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಗುರುತಿಸಿ ಅವುಗಳಿಂದ ಉತ್ಪಾದನೆಯನ್ನು ಸಾಧಿಸುವುದು ಈ ಪಠ್ಯಕ್ರಮದ ಉದ್ದೇಶವಾಗಿತ್ತು. ಅಷ್ಟೇ ಅಲ್ಲದೇ, ಯಾವ ಮಕ್ಕಳ ಪೋಷಕರು ಕೃಷಿಕರಾಗಿರುತ್ತಾರೋ ಅವರ ಭೂಮಿಯಲ್ಲಿ ಇರುವಂತಹ ಸಮಸ್ಯೆಗಳನ್ನು ಮಕ್ಕಳು ಕೇಳಿಕೊಂಡು ಶಾಲೆಯಲ್ಲಿ ಶಿಕ್ಷಕರಿಗೆ ತಿಳಿಸಿದರೆ ಅವರು ವಿಶ್ವವಿದ್ಯಾನಿಲಯದ ನುರಿತ ಕೃಷಿ ತಜ್ಞರೊಡನೆ ಸಮಾಲೋಚಿಸಿ ಸಮರ್ಪಕ ಉತ್ತರವನ್ನು ಪಡೆದು ಪೋಷಕರಿಗೆ ತಿಳಿಸುತ್ತಾರೆ. ಇದರಿಂದ ಕೃಷಿಕ ಕುಟುಂಬಕ್ಕೆ ಪ್ರಯೋಜನವಾಗುತ್ತದೆ ಮತ್ತು ಶಿಕ್ಷಣ ಕಾರ್ಯವ್ಯಾಪ್ತಿ ಮನೆಯ ಸದಸ್ಯರವರೆಗೂ ತಲುಪಿ, ಅವರು ಹೆಚ್ಚಿನ ಆದಾಯ ಗಳಿಸಬಹುದಾಗಿದೆ.
ಈ ಪಠ್ಯ ಕ್ರಮವನ್ನು ಕೇವಲ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬಹುದು ಎಂದು ನಾವು ಶಿಕ್ಷಣ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆವು.
ಕೊನೆಯದಾಗಿ, ಶಿಕ್ಷಣದಲ್ಲಿ ನಾವು ಎಲ್ಲಾ ವಿಷಯಗಳನ್ನು ಸರಿಯಾಗಿ ಕಲಿತಿದ್ದರೂ ಸಹ ನಮ್ಮ ನೈತಿಕ ಮೌಲ್ಯಗಳು ದುರ್ಬಲವಾಗಿವೆ. ನಮ್ಮ ಸಮಾಜಕ್ಕೆ ಅದು ಒಂದು ದೊಡ್ಡ ಧಕ್ಕೆ ತರಬಹುದಾಗಿದೆ. ಹೈದರಾಬಾದ್ ಕರ್ನಾಟಕದ ಯುವಪೀಳಿಗೆಯಲ್ಲಿ ಬಸವಣ್ಣನವರ ವಚನ ಸಂಸ್ಕೃತಿ ಎಷ್ಟರಮಟ್ಟಿಗೆ ತಲುಪಿದೆ ಎಂದು ಒಂದು ಸಣ್ಣ ಪ್ರಯೋಗ ಮಾಡಿದೆವು. ಇದೆಲ್ಲ ಹಿರಿಯರಿಗೆ ಬಿಟ್ಟಿದ್ದು ಎಂಬ ಭಾವನೆ ಮಕ್ಕಳಲ್ಲಿ ಇರುತ್ತದೆ. ಆದುದರಿಂದ ಮಕ್ಕಳು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ವಚನಗಳಲ್ಲಿ ಇರುವ ಸಾರಾಂಶವನ್ನು ಕಥೆಗಳು ಮತ್ತು ಚಿತ್ರಗಳ ಮೂಲಕ ಕೊಡಬೇಕು ಎಂಬ ಪ್ರೇರಣೆ ನನಗೆ ಸಿಕ್ಕಿದ್ದು ಒಂದು ಕಲಾ ಪ್ರದರ್ಶನಕ್ಕೆ ಹೋದಾಗ. ಪಾಟೀಲ್ ಎಂಬ ಕಲಾವಿದರು ಬಸವಣ್ಣನವರ ಜೀವನ ಚರಿತ್ರೆಯನ್ನು ಅವರು ತಯಾರಿಸಿರುವ ಅತಿ ಆಕರ್ಷಕ ಚಿತ್ರಕಲೆಗಳಲ್ಲಿ ತೋರಿಸಿದರು. ನಾನು ಈ ಚಿತ್ರಗಳನ್ನು ಮಕ್ಕಳಿಗೆ ಪಾಠ ಕಲಿಸುವುದಕ್ಕೆ ಉಪಯೋಗಿಸಬಹುದಾ ಎಂದು ಕೇಳಿದಾಗ, ಅವರು ತುಂಬಾ ಖುಷಿಪಟ್ಟು ಒಪ್ಪಿದರು. ಅದೇ ಸಮಯದಲ್ಲಿ ಒಂದು ಮಹಿಳಾ ಸಂಸ್ಥೆಯವರು ನನ್ನನ್ನು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭೇಟಿ ಮಾಡಿದರು. ಅವರ ಪುಸ್ತಕವನ್ನು ನೋಡಿ, ಮಕ್ಕಳಿಗೆ ಕಥೆಯನ್ನು ಬರೆಯುವ ಹಾಗೆಯೇ, ವಚನಗಳ ವಿಷಯದಲ್ಲಿ ಏಕೆ ಬರೆಯಬಾರದು ಎಂದು ಕೇಳಿದಾಗ ಅವರು ಕೂಡ ಬಹಳ ಉತ್ಸಾಹದಿಂದ ಒಪ್ಪಿದರು. ಹೀಗೆ ಕಲಾವಿದರ ಕೃತಿಗಳು ಹಾಗೂ ಸಣ್ಣ ಕಥೆ ಬರೆಯುವ ಮಹಿಳಾ ಲೇಖಕಿಯರ ಸಂಘದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ನಮ್ಮ ಕೇಂದ್ರದ ವತಿಯಿಂದ ಒಂದು ಪುಸ್ತಕವನ್ನು ಪ್ರಕಟಿಸಲಾಯಿತು. ಹಾಗೂ ಅದನ್ನು ಪ್ರಾಥಮಿಕ ಶಾಲೆಗಳಿಗೆ ಕಳುಹಿಸಲಾಯಿತು. ಮಕ್ಕಳ ಅಭಿಪ್ರಾಯವನ್ನು ಸಂಗ್ರಹಿಸಿ ಕಳುಹಿಸಬೇಕೆಂದು ಶಿಕ್ಷಣ ಇಲಾಖೆಗೆ ಕೋರಲಾಯಿತು. ಮಕ್ಕಳು " ಎಲ್ಲಾ ವಿಷಯಗಳನ್ನೂ ನಮಗೆ ಈ ರೀತಿಯಲ್ಲಿ ಏಕೆ ಕಲಿಸುತ್ತಿಲ್ಲವೆಂದು" ಮಕ್ಕಳು ಅಭಿಪ್ರಾಯ ಬರೆದು ಕಳುಹಿಸಿದ್ದರು.. ಮಕ್ಕಳ ಮಿದುಳು ತುಂಬಾ ಸಂವೇದನಾಶೀಲವಾಗಿರುತ್ತದೆ. ಮಕ್ಕಳಿಗೆ ಉತ್ತಮ ವಿಷಯಗಳನ್ನು ಕೊಟ್ಟರೆ ಅವರು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಹಾಗೂ ಸಣ್ಣ ವಯಸ್ಸಿನಲ್ಲೇ ಮೈಗೂಡಿದ ಗುಣಗಳನ್ನು ಅವರು ಜೀವನ ಪರ್ಯಂತ ಮರೆಯುವುದಿಲ್ಲವೆಂದು ಮನೋ ವೈಜ್ಞಾನಿಕರು ಹೇಳುತ್ತಾರೆ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com