ನಮ್ಮ ಬದುಕ ಬಣ್ಣಗಳೆಲ್ಲ ಮಗಳೊಂದಿಗೇ ಮಾಯವಾದವು...
ಈಗ ನಿರ್ಭಯಾಳ ಕುಟುಂಬ ದೆಹಲಿಯ ಉಪನಗರವೊಂದರಲ್ಲಿ ಸರ್ಕಾರ ಕೊಟ್ಟ...
ದೆಹಲಿಯಲ್ಲಿ ಕಳೆದ ಡಿಸೆಂಬರ್ನಂದು 23 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕೊಳಗಾದಳು. ಅದಾದ ಕೆಲವೇ ದಿನಗಳಲ್ಲಿ ಆಕೆ ಸಾವನ್ನಪ್ಪಿದಳು. ಈ ಘಟನೆ ಅದ್ಯಾವ ಪರಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಉಂಟುಮಾಡಿತೆಂದರೆ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಭಾರತ ಕಠಿಣ ಕಾನೂನನ್ನು ಜಾರಿಗೆ ತಂದಿತು. ಆತ್ಯಾಚಾರದ ಆರೋಪಿಗಳಿಗೆ ಈಗ ಗಲ್ಲು ಶಿಕ್ಷೆ ವಿಧಿಸಲಾಗಿದೆ. ನಿರ್ಭಯಾಳ ಸಾವಿನ ನಂತರ ಆಕೆಯ ಕುಟುಂಬದ ಬದುಕು ಹೇಗೆ ಬದಲಾಗಿದೆ ಎನ್ನುವುದನ್ನು 'ಬಿಬಿಸಿ'ಯ ಸೌತಿಕ್ ಬಿಸ್ವಾಸ್ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ...
ಈಗ ನಿರ್ಭಯಾಳ ಕುಟುಂಬ ದೆಹಲಿಯ ಉಪನಗರವೊಂದರಲ್ಲಿ ಸರ್ಕಾರ ಕೊಟ್ಟ ಎರಡು ರೂಮುಗಳ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದೆ. ಆ ಮನೆ ಅಷ್ಟೇನೂ ಹೇಳಿಕೊಳ್ಳುವಂತಿಲ್ಲದಿದ್ದರೂ, ಮಳೆಗಾಲದಲ್ಲಿ ಅರ್ಧ ಮುಳುಗಿರುತ್ತಿದ್ದ ಆ ಕುಟುಂಬದ ಮೊದಲಿನ ಮನೆಗಿಂತಲೂ ಉತ್ತಮ ಸ್ಥಿತಿಯಲ್ಲಿಯೇ ಇದೆ.
ಖಾಸಗಿ ಕಂಪನಿಯೊಂದು ನಿರ್ಭಯಾಳ ತಂದೆಗೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಲಸ ಕೊಟ್ಟಿದೆ. ಅವರಿಗೀಗ ಪ್ರಯಾಣಿಕರಿಗೆ ಎಂಟ್ರಿ ಪಾಸ್ಗಳನ್ನು ಕೊಡುವ ಕೆಲಸ. ತಿಂಗಳಿಗೆ 20 ಸಾವಿರ ಸಂಬಳ. ಹಿಂದೆ ಅವರು ಅದೇ ಸ್ಥಳದಲ್ಲೇ ಲಗೇಜ್ಗಳನ್ನು ಹೊರುವ ಕೆಲಸ ಮಾಡುತ್ತಿದ್ದರು. ಡಬಲ್ ಶಿಫ್ಟ್ ಮಾಡಿದರೂ ತಿಂಗಳ ಕೊನೆಗೆ ಅವರ ಕೈಗೆ ಹೆಚ್ಚೆಂದರೆ 6 ಸಾವಿರ ರುಪಾಯಿ ಸಿಗುತ್ತಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳು. ಇಂಜಿನಿಯರಿಂಗ್ ಕಾಲೇಜಲ್ಲಿ ಓದುತ್ತಿರುವ 23 ವರ್ಷದ ಹಿರಿಯ ಮಗನಿಗೆ ಕಂಪ್ಯೂಟರ್ ವಿಜ್ಞಾನಿಯಾಗಬೇಕೆಂಬ ಕನಸು. ಇನ್ನು, ಶಾಲೆಗೆ ಹೋಗುತ್ತಿರುವ 17 ವರ್ಷದ ಕಿರಿಯ ಮಗನಿಗೆ ಡಾಕ್ಟರ್ ಆಗಬೇಕೆಂಬ ಬಯಕೆ. ಅವರ ಶಿಕ್ಷಣದ ಖರ್ಚನ್ನೆಲ್ಲ ಈಗ ಸರ್ಕಾರವೇ ನೋಡಿಕೊಳ್ಳುತ್ತಿದೆ.
ಚಿಕ್ಕದಾದರೂ ಅವರ ಮನೆ ಚೊಕ್ಕದಾಗಿದೆ. ಪುಟ್ಟದೊಂದು ಟಿ.ವಿ., ಕಡಿಮೆ ದರದ ವಾಶಿಂಗ್ ಮಶೀನ್, ಬಾತ್ರೂಮ್ನಲ್ಲೊಂದು ಹೊಸ ವಾಟರ್ ಹೀಟರ್... ಬಲಿಷ್ಠವಾಗದಿದ್ದರೂ, 'ಬದಲಾದ' ಅವರ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ.
ಆದರೆ ನಿರ್ಭಯಾಳ ತಂದೆ ಹೇಳುವುದೇ ಬೇರೆ. ಅವರನ್ನುತ್ತಾರೆ- "ಬಡತನವೇ ಚೆನ್ನಾಗಿತ್ತು ಅಂತ ಕೆಲವೊಂದು ಬಾರಿ ಅನ್ಸುತ್ತೆ ಸರ್. ಆಗ ಖುಷಿಯಾಗಿದ್ವಿ. ಈಗ ನಮ್ಮ ಬಳಿ ಎಲ್ಲಾ ಇದೆ, ಆದರೂ ಏನೂ ಇಲ್ಲ.. ನಮ್ಮ ಬದುಕಿನಲ್ಲಿದ್ದ ಬಣ್ಣಗಳನ್ನೆಲ್ಲ ನನ್ನ ಮಗಳು ತನ್ನ ಜೊತೆಗೆ ತೆಗೆದುಕೊಂಡು ಹೋಗಿಬಿಟ್ಲು."
---
ನಿರ್ಭಯಾಳ ಕೆಲವು ವಸ್ತುಗಳನ್ನು ಆ ಹೊಸ ಮನೆಗೆ ತಂದಿಟ್ಟುಕೊಂಡಿದ್ದಾರೆ ಆಕೆಯ ಅಮ್ಮ. ನ್ಯೂರಾಲಜಿ, ನ್ಯೂರೋ ಸೈನ್ಸ್ ಮತ್ತು ಮಾನವ ಅಂಗರಚನಶಾಸ್ತ್ರ ಪುಸ್ತಕದ ಪ್ರತಿಗಳನ್ನೂ ಆ ಕುಟುಂಬ ಜೋಪಾನವಾಗಿ ಇಟ್ಟಿದೆ. ಹೊಸ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗದಿದ್ದ ಕಾರಣ ಆ ಪುಸ್ತಕಗಳನ್ನೆಲ್ಲ ನಿರ್ಭಯಾ ಜೆರಾಕ್ಸ್ ಮಾಡಿಸಿಟ್ಟುಕೊಂಡಿದ್ದಳು. ಆದರೆ ಆಕೆಯ ಹಲವಾರು ಬಟ್ಟೆಗಳು, ಪುಸ್ತಕಗಳು ಇನ್ನೂ ಹಳೆಯ ಮನೆಯಲ್ಲಿಯೇ ಇವೆಯಂತೆ. ಕೊರಗುತ್ತಾ ಕೂಡುವುದರಿಂದ ಉಪಯೋಗವಿಲ್ಲ ಎನ್ನುವುದು ಗೊತ್ತಿದ್ದರೂ, ಆ ಕೊರಗಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ತಮಗೆ ತಿಳಿಯುತ್ತಿಲ್ಲವೆನ್ನುತ್ತಾರೆ ನಿರ್ಭಯಾಳ ಅಮ್ಮ.
"ನನ್ನ ಮಗಳಿಗೆ ಈ ಪಿಂಕ್ ಕಲರ್ ಗೊಂಬೆ ಅಂದರೆ ಬಹಳ ಇಷ್ಟವಿತ್ತು" ಎನ್ನುವ ಅವರು "ನನ್ನ ಮಗಳ ಫೋಟೋನೂ ತೆಗೀರಿ" ಎಂದು ಆ ಗೊಂಬೆಯನ್ನು ಮಂಚದ ಮೇಲಿಟ್ಟು ಮಾತು ಮುಂದುವರಿಸಿದರು. "ಒಂದು ವರ್ಷದಿಂದ ರಾತ್ರಿ ಸರಿಯಾಗಿ ನಿದ್ರೆಯೇ ಬರೋದಿಲ್ಲ. ನನ್ನ ಮಗಳು ಆ ಕಿರಾತಕರಿಂದ ಎಷ್ಟು ಹಿಂಸೆ ಅನುಭವಿಸಿದಳೋ ಎನ್ನುವುದನ್ನು ನೆನೆದಾಗಲೆಲ್ಲ ಉಸಿರು ಕಟ್ಟಿದಂತಾಗುತ್ತದೆ. ಕೆಲವೊಮ್ಮೆ ರಾತ್ರಿ ಕೆಟ್ಟ ಕನಸು ಬಿದ್ದು ಎಚ್ಚರವಾಗಿ ಬಿಕ್ಕಿ ಬಿಕ್ಕಿ ಅತ್ತುಬಿಡುತ್ತೇನೆ. ಆ ಘಟನೆಯ ನಂತರ ನಾನು ಮನೆಯಿಂದ ಹೆಚ್ಚು ಹೊರಗೆ ಹೋಗೋದಿಲ್ಲ. ಅವತ್ತಿಂದ ನನಗಾಗಿ ನಾನು ಏನನ್ನು ಖರೀದಿಸಿಲ್ಲ"
ಭಾನುವಾರ ಬಂದಾಗಲೆಲ್ಲ ನಿರ್ಭಯಾಳ ತಾಯಿ ಇನ್ನಷ್ಟು ಭಾವುಕರಾಗುತ್ತಾರೆ. ಪ್ರತಿ ಭಾನುವಾರ ಆ ಕುಟುಂಬ ಖುಷಿಯಾಗಿ ಕಾಲಕಳೆಯುತ್ತಿತ್ತಂತೆ. ದುರ್ದೈವವೆಂದರೆ, ಆ ಖುಷಿಯನ್ನು ಕೊಂದು ಹಾಕಿದ ದಿನ, ಅಂದರೆ ನಿರ್ಭಯಾ ಅತ್ಯಾಚಾರಕ್ಕೊಳಗಾದ ದಿನವೂ ಭಾನುವಾರವೇ...
===
ಆ ಕುಟುಂಬದ ಬಳಿ ಈಗ ಉಳಿದಿರುವುದು ಬರೀ ನಿರ್ಭಯಾಳ ನೆನಪು ಮಾತ್ರ. ಒಳ್ಳೆಯ ಮತ್ತು ಕೆಟ್ಟ ನೆನಪು.
ಜೊತೆಗೆ ಒಂದು ಕನಸೂ ಕೂಡ...
ಹಣದ ಬಗ್ಗೆ ಚಿಂತೆ ಮಾಡಬೇಡ, ಮನೆಯ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ನಿರ್ಭಯಾ ತನ್ನ ತಂದೆಗೆ ಹೇಳುತ್ತಿದ್ದಳಂತೆ. ಬಹುಶಃ ಈ ಕಾರಣಕ್ಕೋ ಏನೋ ತಮಗೆ ಆಗಾಗ ಒಂದು ಕನಸು ಬೀಳುತ್ತದೆ ಎಂದು ಆಕೆಯ ತಂದೆ ಹೇಳುತ್ತಾರೆ. "ಆ ಕನಸಿನಲ್ಲಿ ನಾವು ಮಗಳನ್ನು ನೋಡಲು ಹೊಟೆಲ್ ಒಂದಕ್ಕೆ ಹೋಗಿರುತ್ತೇವೆ. ಅಲ್ಲಿ ಹೋದಾಗ ಆಕೆ ನನ್ನ ಬಳಿ ಬಂದು ನನಗೆ ಹಣದ ಅವಶ್ಯಕತೆಯಿದೆಯೇ ಎಂದು ಕೇಳುತ್ತಾಳೆ. ಆಗ ನಾನು ಆಕೆಗೆ ಹೇಳ್ತೇನೆ, 'ನನಗೆ ಹಣಬೇಡ, ನಿನ್ನ ತಮ್ಮಂದಿರನ್ನ ಚೆನ್ನಾಗಿ ನೋಡಿಕೋ ಅಷ್ಟೇ ಸಾಕು.' ನಾನು ಹೀಗೆ ಹೇಳುತ್ತಿದ್ದಂತೆಯೇ ಆಕೆ ಮಾಯವಾಗಿಬಿಡುತ್ತಾಳೆ"
ಮುಂದುವರಿಯುತ್ತಾ ಅವರು, "ಬಡತನ ನಿಮ್ಮ ಮೇಲೆ ಬೀರುವ ಪರಿಣಾಮವಿದು. ನೀವು ಯಾವಾಗಲೂ ಹಣದ ಬಗ್ಗೆಯೇ ಯೋಚಿಸುತ್ತೀರಿ. ಡಿಸೆಂಬರ್ 16ರಂದು ನನ್ನ ಗೆಳೆಯನೊಬ್ಬನ ಜೊತೆಗೆ ಮಗಳನ್ನು ನೋಡಲು ಆಸ್ಪತ್ರೆಗೆ ಹೋದೆ. ಹೆಚ್ಚೆಂದರೆ ಇನ್ನೊಂದು ಮೂರ್ನಾಲ್ಕು ತಾಸು ಮಾತ್ರ ಆಕೆ ಬದುಕಬಲ್ಲಳು ಅಂತ ವೈದ್ಯರು ಹೇಳಿದರು. ಆಗ ನನ್ನ ಬಳಿ ಇದ್ದ ಹಣವೆಷ್ಟು ಗೊತ್ತೇ? ಬರೀ 1,000 ರುಪಾಯಿ. ಔಷಧಕ್ಕೆ ಅಥವಾ ಆ್ಯಂಬುಲೆನ್ಸ್ಗೆ ಕೊಡಲು ಇಷ್ಟು ಹಣ ಸಾಕಾ? ಮರುದಿನ ರಾಜಕಾರಣಿಯೊಬ್ಬರು ಬಂದು 25,000 ರುಪಾಯಿ ಕೊಟ್ಟುಹೋದರು. ಆಗ ಸ್ವಲ್ಪ ಧೈರ್ಯ ಬಂತು. ಕಡೇಪಕ್ಷ ಆಕೆಯ ದೇಹವನ್ನು ಮನೆಗೆ ತೆಗೆದುಕೊಂಡುಹೋಗುವುದಕ್ಕಾದರೂ ನನಗೆ ಸಾಧ್ಯವಾಗುತ್ತದಲ್ಲ ಎನ್ನುವ ಕಾರಣಕ್ಕೆ! ಬಡತನದ ಪರಿಣಾಮವಿದು ಸರ್".
ನಿರ್ಭಯಾಳ ನೆನಪಿನಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದಕ್ಕೆ ಬರುವ ದೇಣಿಗೆ ಹಣದಲ್ಲಿ ಬಡಮಕ್ಕಳಿಗೆ ಆಹಾರ ಮತ್ತು ಶಿಕ್ಷಣ ಒದಗಿಸಬೇಕೆಂಬ ಕನಸು ಆ ಕುಟುಂಬಕ್ಕಿದೆ.
"ನಮ್ಮ ಮಗಳ ಹಣವನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ದಿನ ಜೀವಂತವಾಗಿ ಉಳಿಸಲು ನಾವು ಪ್ರಯತ್ನಿಸುತ್ತೇವೆ. ಎಲ್ಲರೂ ಆಕೆಯನ್ನು ಒಂದು ದಿನ ಮರೆತುಬಿಡುತ್ತಾರೆ ಎನ್ನುವುದು ನನಗೆ ಗೊತ್ತು. ಆದರೆ ಆಕೆಯ ಸಾವು ಕಾನೂನಿನಲ್ಲಿ, ಜನರ ಪ್ರಜ್ಞೆಯಲ್ಲಿ ತಂದ ಬದಲಾವಣೆಯನ್ನು ಮಾತ್ರ ಅವರು ಮರೆಯಲಾರರು.
ಹೆಣ್ಣು ಮಕ್ಕಳು ಈಗ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಮಾತನಾಡತೊಡಗಿದ್ದಾರೆ, ಕಾನೂನಿನ ಬಗ್ಗೆ ಜನರಿಗೆ ಈಗ ಒಂದು ಹೆದರಿಕೆ ಮೂಡಿದೆ. ಇದು ನಮ್ಮ ಮಗಳ ಕೊಡುಗೆಯೇ ಅಲ್ಲವೇ?" ಎಂದು ಪ್ರಶ್ನಿಸುತ್ತಾರೆ ಆಕೆಯ ತಂದೆ...