ಕಮಲದೊಳಗಿನ 11 ಕನಸುಗಳು
ಈ ರಾಜ್ಯಗಳು ಸ್ವತಂತ್ರ ಭಾರತದಲ್ಲಿ ನಿರಂತರವಾಗಿ 30 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಅನ್ನು 1977ರಲ್ಲಿ ಮೊದಲ...
ಈ ರಾಜ್ಯಗಳು ಸ್ವತಂತ್ರ ಭಾರತದಲ್ಲಿ ನಿರಂತರವಾಗಿ 30 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಅನ್ನು 1977ರಲ್ಲಿ ಮೊದಲ ಬಾರಿಗೆ ಬಗ್ಗು ಬಡಿದವು. ತುರ್ತು ಪರಿಸ್ಥಿತಿಯಿಂದಾಗಿ ಆಗ ದೇಶದಲ್ಲೆಲ್ಲಾ ಕಾಂಗ್ರೆಸ್ ವಿರೋಧಿ ಅಲೆಯೆದ್ದಿತ್ತು. ಈಗ ಭ್ರಷ್ಟಾಚಾರದಿಂದ ಕಳೆಗುಂದಿರುವ ಕಾಂಗ್ರೆಸ್ಗೆ ಈ ರಾಜ್ಯಗಳ ಮೂಲಕವೇ ಪಾಠ ಕಲಿಸಬೇಕು ಎಂದು ಬಿಜೆಪಿ ಯೋಚಿಸುತ್ತಿದೆ.
ಇತ್ತೀಚೆಗೆ ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ಗಡದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ದೆಹಲಿಯಲ್ಲಿಯೂ ಉತ್ತಮ ಪ್ರದರ್ಶನ ತೋರಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಅಲೆ ಇದೇ ತೆರನಾಗಿರಲಿದೆಯೇ? ಅದಕ್ಕಾಗಿ ಅದು ಯಾವ ರೀತಿಯ ಚುನಾವಣಾ ತಂತ್ರಗಳನ್ನು ರಚಿಸಿದೆ? ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ನಡೆಯೇನು? ಇತ್ತೀಚಿನ ವಿಧಾನಸಭಾ ಚುನಾವಣೆಗಳು ಮುಂಬರುವ ಲೋಕಸಭಾ ಚುನಾವಣೆಗಳಿಗೆ ಕೈಗನ್ನಡಿಯಾಗಿವೆಯೇ? ಈ ಕುರಿತು ಡೈಲಿ ಮೇಲ್ ಪತ್ರಿಕೆ ಮಾಡಿರುವ ವಿಶ್ಲೇಷಣೆ ಇಲ್ಲಿದೆ...
===
ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಗಳಿಗಾಗಿ ತನ್ನ ಅಂತಿಮ ಸಿದ್ಧತೆಯನ್ನು ಚುರುಕುಗೊಳಿಸಿದೆ. ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್, 272ಕ್ಕೂ ಹೆಚ್ಚಿನ ಸ್ಥಾನ ಪಡೆಯುವ ಹೊಸ ಗುರಿಯ ಬೆನ್ನತ್ತಿದ್ದಾರೆ. ಸರ್ಕಾರ ರಚಿಸುವುದಕ್ಕಾಗಿ ಅವರು 11 ರಾಜ್ಯಗಳ ಮೇಲೆ ವಿಶೇಷವಾಗಿ ಗಮನಕೊಡಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ 590 ಸ್ಥಾನಗಳಲ್ಲಿ 408 ಸ್ಥಾನಗಳನ್ನು ಬಾಚಿಕೊಂಡಿತ್ತು. ಇದೇ ರಭಸದೊಂದಿಗೆ ಲೋಕಸಭಾ ಚುನಾವಣೆಗಳತ್ತಲೂ ಸಾಗಬೇಕೆಂದು ಅದು ಬಯಸುತ್ತಿದೆ. "ನಮ್ಮ ಗುರಿಯೇನಿದ್ದರೂ ಮೊದಲು 272ರ ಗಡಿಯನ್ನು ದಾಟಬೇಕು ಮತ್ತು ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸಿ, ಉತ್ತಮ ಆಡಳಿತ, ಭ್ರಷ್ಟಾಚಾರದ ವಿರುದ್ಧದ ನಮ್ಮ ನಿಲುವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು ಎನ್ನುವುದು" ಎನ್ನುತ್ತಾರೆ ರಾಜ್ನಾಥ್ ಸಿಂಗ್. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮತ್ತು ಪೋಸ್ಟರ್ ಬಾಯ್ ಆಗಿರುವ ನರೇಂದ್ರ ಮೋದಿಯವರು, ಈ ನಾಲ್ಕೂ ರಾಜ್ಯಗಳಲ್ಲಿನ 72 ಸಂಸತ್ ಸ್ಥಾನಗಳ ಮೇಲಷ್ಟೇ ಅಲ್ಲದೆ, ಉತ್ತರ ಮತ್ತು ಕೇಂದ್ರ ವಲಯಗಳಲ್ಲಿನ ಮತಗಳ ಮೇಲೂ ಹೆಚ್ಚು ಗಮನ ಕೇಂದ್ರಿಕರಿಸಲು ಬಯಸಿದ್ದಾರೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಡ, ದೆಹಲಿ, ರಾಜಸ್ಥಾನ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರವೇ ಈ 11 ರಾಜ್ಯಗಳು. ಈ 11 ರಾಜ್ಯಗಳಲ್ಲಿ ಒಟ್ಟು 293 ಲೋಕಸಭಾ ಸ್ಥಾನಗಳಿವೆ. 272 ಸ್ಥಾನಗಳಲ್ಲಿ ಅರ್ಧದಷ್ಟಾದರೂ ಈ ರಾಜ್ಯಗಳಿಂದಲೇ ಪಡೆಯಬಹುದು ಎಂದು ಬಿಜೆಪಿ ಹೇಳುತ್ತಿದೆ.
ನರೇಂದ್ರ ಮೋದಿ ಇದಕ್ಕಾಗಿ ತೀವ್ರ ತಯಾರಿ ನಡೆಸಿದ್ದಾರೆ. ಗುಜರಾತಿನ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಕಠಿಣ ಗುರಿಯತ್ತ ಅವರು ದೃಷ್ಟಿ ನೆಟ್ಟಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿನ ವಿಧಾನಸಭಾ ಚುನಾವಣೆಗಳ ಫಲಿತಾಂಶದಿಂದ ಹುಮ್ಮಸ್ಸಿನಲ್ಲಿರುವ ಬಿಜೆಪಿಯ ಚಿತ್ತ, ಗುಜರಾತ್ನಂತೆಯೇ ಮಧ್ಯಪ್ರದೇಶದ ಎಲ್ಲಾ 29 ಸ್ಥಾನಗಳತ್ತಲೂ ನೆಟ್ಟಿದೆ.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್ ಅವರು ಈಗ ಉಗಮವಾಗಿರುವ ಕಾಂಗ್ರೆಸ್ ವಿರೋಧಿ ಅಲೆಯನ್ನು 1977ರ ಚುನಾವಣೆಯಲ್ಲಿ ಇಂದಿರಾಗಾಂಧಿಯವರ ಸರ್ಕಾರದ ವಿರುದ್ಧ ಸೃಷ್ಟಿಯಾಗಿದ್ದ ಆಡಳಿತ ವಿರೋಧಿ ಅಲೆಗೆ ಹೋಲಿಸುತ್ತಾರೆ. ಅವರು ಹೇಳುತ್ತಾರೆ-"ಉತ್ತರ ಭಾರತದಲ್ಲಿ ನಮ್ಮ ಪಕ್ಷಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೇಗೆ ಇಂದಿರಾರ ಸರ್ಕಾರ ಅಂದು ಉತ್ತರ ಭಾರತದಲ್ಲಿ ಬೆವರಿತೋ, ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲೂ ಅಂಥದ್ದೇ ಪರಿಸ್ಥಿತಿಯನ್ನು ಕಾಂಗ್ರೆಸ್ ಎದುರಿಸಲಿದೆ". ಮುಂದುವರಿಯುತ್ತಾ, "ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಸುಮಾರು 50 ಪ್ರತಿಶತಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಾವು ಹೊಂದಿದ್ದೇವೆ. ಅಂದರೆ ಅಲ್ಲಿನ 120 ಸ್ಥಾನಗಳಲ್ಲಿ 60-70 ಸ್ಥಾನಗಳು" ಎನ್ನುತ್ತಾರೆ. ಇನ್ನು ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ನೇತೃತ್ವದ ಎಮ್ಎನ್ಎಸ್ ಅಥವಾ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂದು ಆಶಿಸುತ್ತಿದೆ ಭಾರತೀಯ ಜನತಾ ಪಾರ್ಟಿ.
'ಆಗ ನಾವು ಮಹಾರಾಷ್ಟ್ರದಲ್ಲೂ ಗೆಲ್ಲಲಿದ್ದೇವೆ ಮತ್ತು ಪಂಜಾಬ್ನ ಶಿರೋಮಣಿ ಅಕಾಲಿ ದಳದ ಜೊತೆಗೂಡಿ ಅಲ್ಲಿಯೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ" ಎನ್ನುತ್ತಾರೆ ಅನಂತಕುಮಾರ್.
ಪಕ್ಷದ ಮೂಲಗಳ ಪ್ರಕಾರ ಬಿಜೆಪಿಯ ನಾಯಕತ್ವ ಈಶಾನ್ಯ ರಾಜ್ಯಗಳ ಬಗ್ಗೆಯೂ ಈ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದೆಯಂತೆ. ಅದರಲ್ಲೂ, ಮುಖ್ಯವಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದತ್ತ ಹೆಚ್ಚು ಗಮನ ಕೊಡಲು ಅದು ನಿರ್ಧರಿಸಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಶಕ್ತಿಯನ್ನು ಕುಗ್ಗಿಸಲು ಅದು "Strong BJP and Extended NDA'' ಎನ್ನುವ ಘೋಷಣೆಯೊಂದಿಗೆ ಚುನಾವಣಾ ಪ್ರಚಾರಕ್ಕಿಳಿಯಲು ನಿರ್ಧರಿಸಿದೆ. ದೆಹಲಿಯ ಮಾಜಿ ಮೇಯರ್ ಆರತಿ ಮೆಹ್ರಾ ಹೇಳುತ್ತಾರೆ- "ದೆಹಲಿಯಲ್ಲಿ ಈ ಬಾರಿ ನಮ್ಮ ಸಾಧನೆ ಉತ್ತಮವಾಗಿಯೇ ಇದೆಯಾದರೂ, ಹೊಸ ಯೋಚನೆಯೊಂದಕ್ಕೂ(ಆಪ್) ಮತದಾರರು ಮನ್ನಣೆ ಕೊಟ್ಟಿದ್ದಾರೆ. ಆದರೆ ರಾಷ್ಟ್ರೀಯ ಮಟ್ಟದ ಚಿತ್ರಣ ಭಿನ್ನವಾಗಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಲ್ಲಿ ನೋಡಲು ಜನರು ಉತ್ಸುಕರಾಗಿದ್ದಾರೆ". ಆದರೆ ಕಾಂಗ್ರೆಸ್ಸಿಗರ ವಾದವೇ ಭಿನ್ನವಾಗಿದೆ. "1998ರಲ್ಲಿ ದೆಹಲಿ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು. ಆದರೆ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಅದು ಸೋಲನುಭವಿಸಿತು. ಅದೇ ರೀತಿ 2003ರಲ್ಲಿ ಬಿಜೆಪಿ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಗೆದ್ದರೂ, 2004ರ ಲೋಕಸಭಾ ಚುನಾವಣೆಯಲ್ಲಿ ಸೋತಿತ್ತು. ರಾಜ್ಯ ಚುನಾವಣೆಯಲ್ಲಿ ಗೆದ್ದಾಕ್ಷಣ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವುದಕ್ಕೆ ಅರ್ಥವಿಲ್ಲ" ಎನ್ನುತ್ತಾರೆ ಕಾಂಗ್ರೆಸ್ ನಾಯಕ ಕಿರಣ್ ವಾಲಿಯಾ.