ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಮಾಜ ನೆಚ್ಚಿಕೊಳ್ಳಬೇಕಾದ ನಂಬಿಕೆಗೆ ರೂಪಕ ನೆಲ್ಸನ್ ಮಂಡೆಲಾ

ಡಿಸೆಂಬರ್ 6, ಬೆಳಗಾವಿಯಲ್ಲಿ ನಡೆಯುತ್ತಿದ್ದ ರಾಜ್ಯ ವಿಧಾನಮಂಡಲದ ಅಧಿವೇಶನದ..

Vishwanath S
Updated On : 18 Dec 2013, 12:08 pm

ಡಿಸೆಂಬರ್ 6, ಬೆಳಗಾವಿಯಲ್ಲಿ ನಡೆಯುತ್ತಿದ್ದ ರಾಜ್ಯ ವಿಧಾನಮಂಡಲದ ಅಧಿವೇಶನದ ಕೊನೆಯ ದಿನ. ಸದನ ಪ್ರಾರಂಭವಾಗುವ ಮುನ್ನವೇ ನೆಲ್ಸನ್ ಮಂಡೆಲಾ ಅವರ ಸಾವಿನ ಸುದ್ದಿ ಹೊರಬಿದ್ದಿತು. ವಿಧಾನಸಭೆಯಲ್ಲಿ ನೆಲ್ಸನ್ ಮಂಡೆಲಾ ಕುರಿತು ಶೋಕ ಪ್ರಸ್ತಾವನೆಯನ್ನು ಮಂಡಿಸಿ ವಿವಿಧ ಪಕ್ಷಗಳ ಪ್ರಮುಖರು ತಮ್ಮ ವಿಚಾರವನ್ನು ವ್ಯಕ್ತ ಮಾಡಿದ ನಂತರ ಅಧಿವೇಶನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಯಿತು. ಆ ದಿನ ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ನನ್ನ ಜೊತೆ ಇದ್ದ ಶಾಸಕ ಸ್ನೇಹಿತರೊಬ್ಬರು ಮಂಡೆಲಾರವರ ಸಾವಿನ ಬಗ್ಗೆ ಎಲ್ಲಾ ಕಡೆ ಪ್ರಕಟವಾಗುತ್ತಿದ್ದ ಭಾವನೆಗಳು, ಪ್ರತಿಕ್ರಿಯೆಗಳ ಮಹಾಪೂರದ ಔಚಿತ್ಯ ಕುರಿತು ಪ್ರಶ್ನಿಸಿದರು. ಆ ಪ್ರಶ್ನೆ ನನ್ನಲ್ಲಿ ವಿಚಾರ ಮಂಥನಕ್ಕೆ ಕಾರಣವಾಯಿತು.
ನಿಜ. ಪ್ರಪಂಚದಲ್ಲಿ ಪ್ರತಿನಿತ್ಯ ಅನೇಕ ಸಾವುಗಳು ಸಂಭವಿಸುತ್ತವೆ. ಆಗಾಗ ಅನೇಕ ಪ್ರಮುಖರ ಸಾವನ್ನೂ ನಾವು ಕಾಣುತ್ತಿರುತ್ತೇವೆ. ಎಲ್ಲಾ ಸಾವುಗಳೂ ಸಂಬಂಧ ಪಟ್ಟ ಬಂಧು-ಮಿತ್ರರ ಜೀವನದಲ್ಲಿ ಶೂನ್ಯ ವಾತಾವರಣ ಉಂಟು ಮಾಡಿ ಖಿನ್ನರಾಗಿಸುವುದು ಸಹಜ. ಇನ್ನೂ ಕೆಲವು ಪ್ರಮುಖರ ಸಾವಿಗೆ ಸಂಪ್ರದಾಯದಂತೆ ಸರ್ಕಾರಿ ಮನ್ನಣೆ ತೋರಿಸಿ ನಾಡಿನ ಗೌರವ ಸಲ್ಲಿಸಲಾಗುತ್ತದೆ. ಮತ್ತೆ ಕೆಲವು ಸಾವುಗಳು ಬಹಳ ಅನಿರೀಕ್ಷಿತವಾಗಿ ಸಂಭವಿಸಿ ಆಘಾತವನ್ನು ಉಂಟು ಮಾಡುತ್ತವೆ. ಉದಾಹರಣೆಗೆ ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವ್ ಗಾಂಧಿಯವರ ಅಮಾನವೀಯ ಹತ್ಯೆಗಳು, ಮುಂಬೈ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಉನ್ನೀಕೃಷ್ಣನ್... ಇತ್ಯಾದಿ. ಮಹಾತ್ಮಾ ಗಾಂಧಿಯವರ ಹತ್ಯೆಯಂತೂ ಇಡೀ ಜಗತ್ತಿನಲ್ಲಿಯೇ ಬಹಳ ದೊಡ್ಡ impact ಉಂಟು ಮಾಡಿತ್ತು. ಕೆಲವು ಸಾವುಗಳು ನಿರೀಕ್ಷಿತವಾಗಿದ್ದರೂ ಆ ಸಾವಿನಿಂದ ಒಟ್ಟು ಸಮಾಜಕ್ಕೆ ದುಃಖ ಉಂಟಾಗುತ್ತದೆ. ನೆಲ್ಸನ್ ಮಂಡೆಲಾರವರ ಸಾವು ಆ ರೀತಿ ವ್ಯಾಪಕ ಪರಿಣಾಮ ಬೀರಿತು.
ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಜನಪ್ರಿಯತೆ ಗಳಿಸಿದ್ದವರು ಮಂಡೆಲಾ. ಅವರನ್ನು ದಕ್ಷಿಣ ಆಫ್ರಿಕಾದ ಅಂಬೇಡ್ಕರ್ ಎಂದೂ ಸಹ ಕರೆಯುವುದುಂಟು. ಮಹಾತ್ಮಾ ಗಾಂಧಿಯವರಿಂದ ಪ್ರೇರಣೆ ಪಡೆದು ದಕ್ಷಿಣ ಆಫ್ರಿಕಾದ ಧ್ವನಿ ಇಲ್ಲದವರ ಸ್ವಾತಂತ್ರ್ಯಕ್ಕಾಗಿ ಸಂಪೂರ್ಣ ಅಹಿಂಸಾ ಚಳವಳಿಯನ್ನು ಮಾಡಿ 27 ವರ್ಷ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸೆರಮನೆ ಶಿಕ್ಷೆ ಅನುಭವಿಸಿದವರು ನೆಲ್ಸನ್ ಮಂಡೆಲಾ. ಬಹಳಷ್ಟು ಸಲ ಮಂಡೆಲಾ ಅವರ ಸೆರೆಮನೆವಾಸ ಸ್ವಾತಂತ್ರ ವೀರ ಸಾವರ್ಕರ್ ಅವರಿಗೆ ವಿಧಿಸಿದ ಶಿಕ್ಷೆಯನ್ನು ನೆನಪು ತರುತ್ತದೆ. 27 ವರ್ಷಗಳ ಕಠಿಣ ಶಿಕ್ಷೆ ನಮ್ಮ ಊಹೆಗೂ ನಿಲುಕದು. ಶಿಕ್ಷೆ ಪೂರೈಸಿದ ಕೊನೆಯ ದಿನ ಜೈಲರ್ ನೆಲ್ಸನ್ ಮಂಡೆಲಾ ರವರಿಗೆ 'ಇಂದು ನಿಮ್ಮ ಬಿಡುಗಡೆಯ ದಿನ. ನೀವಿನ್ನು ಸ್ವತಂತ್ರರು' ಎಂದು ಹೇಳಿದಾಗ ನೆಲ್ಸನ್ ಮಂಡೆಲಾ, 'ನಾನು ಈ 27 ವರ್ಷವೂ ಸೆರೆಮನೆಯಲ್ಲಿಯೂ ಸ್ವತಂತ್ರವಾಗಿಯೇ ಇದ್ದೆ' ಎಂದು ನೀಡಿದ ಉತ್ತರ ನಿಜಕ್ಕೂ ಅತ್ಯಧ್ಭುತ. ದೇಹವನ್ನು ಸೆರೆಮನೆಯಲ್ಲಿ ಇಟ್ಟಿರಬಹುದು ಆದರೆ ನನ್ನ ಮನಸ್ಸನ್ನು ಸೆರೆಯಲ್ಲಿಡಲು ಯಾರಿಗೂ ಸಾಧ್ಯವಿಲ್ಲ. ನಾನು ಸದಾ ಸ್ವತಂತ್ರ ಎಂಬ ಭಾವನೆಯನ್ನು ಎಂದೂ ಯಾರೂ ಅಪಹರಿಸಲಾರರು ಎಂಬ ನೆಲ್ಸನ್ ಮಂಡೆಲಾ ರವರ ಕಲ್ಪನೆಯೇ ಅದ್ಭುತ. ಈ ಅಂತಃಶಕ್ತಿ ಕೆಲವೇ ಮಂದಿಯಲ್ಲಿ ಸಾಧ್ಯ. ಅವರನ್ನೇ ಮಹನೀಯರೆಂದು, ಮಹಾತ್ಮರೆಂದು ಕರೆಯುವುದು.
ನೆಲ್ಸನ್ ಮಂಡೆಲಾರವರಂತಹ ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಹಿಂದೆಂದಿಗಿಂತಲೂ ಇಂದು ಅತ್ಯಾವಶ್ಯಕ. ನಮಗೆ ಎಲ್ಲೆಡೆ ಮಾಡೆಲ್‌ಗಳು ವಿಫುಲವಾಗಿ ದೊರಕುತ್ತಾರೆ. ಆದರೆ ರೋಲ್ ಮಾಡಲ್‌ಗಳು ದೊರಕುವುದು ಅತ್ಯಂತ ದುರ್ಲಭ. ಏಕೆಂದರೆ ಇದು ಅಪನಂಬಿಕೆಯ ಕಾಲ. ಬಹಳ ಸಲೀಸಾಗಿ, ಬಲವಾದ ಕಾರಣಗಳಿಲ್ಲದೇ, ಯಾವುದೇ ವ್ಯಕ್ತಿಯ ಮೇಲೆ ಅಪನಂಬಿಕೆ ಹುಟ್ಟಿಸಿ ಬಿಡಬಹುದು. ಅಪನಂಬಿಕೆಗಳನ್ನು ಹುಟ್ಟಿಸುವುದು, ತೇಜೋವಧೆ ಮಾಡುವುದು ಒಂದು ದಂಧೆಯೇ ಆಗಿದೆ. ಅಪನಂಬಿಕೆ ಸಹಜ, ನಂಬಿಕೆ ಹುಟ್ಟುವುದಕ್ಕೆ ಬಲವಾದ ಕಾರಣ ಇರಬೇಕು ಎಂಬುದು ಇಂದಿನ ನೀತಿಯಾಗಿ ಬಿಟ್ಟಿದೆ.
ಬಹಳ ಹಿಂದೆ ನಂಬಿಕೆ ಸಹಜವಾಗಿರುತ್ತಿತ್ತು. ಅಪನಂಬಿಕೆ ಹುಟ್ಟಲು ಬಲವಾದ ಕಾರಣಗಳು ಬೇಕಾಗಿತ್ತು. ನಂಬಿಕೆ ಹುಸಿಯಾಗಲು ಏನಾದರೂ ಮಹತ್ವದ ಘಟನೆ ಜರುಗಬೇಕಿತ್ತು. ಮನುಷ್ಯ ಮನುಷ್ಯನ ನಡುವೆ ನಂಬಿಕೆ ಎನ್ನುವುದು ಅತ್ಯಂತ ಸಹಜವಾಗಿತ್ತು. ಒಮ್ಮೆ ಮಾತು ಕೊಟ್ಟರೆ ಬೇರೆಯವರು ನಂಬುತ್ತಿದ್ದರು. ಛಾಪಾ ಕಾಗದ, ಷೂರಿಟಿ, ಸೆಕ್ಯೂರಿಟಿ ಮುಂತಾದವುಗಳು ಇನ್ನೂ ಚಾಲನೆಗೆ ಬರದ ಆ ದಿನಗಳಲ್ಲಿ ಒಂದು ಮರದ ಕೆಳಗೆ ನಿಂತು ಆ ಮರವನ್ನೇ ಸಾಕ್ಷಿಯಾಗಿಸಿ ಹಣ-ಆಸ್ತಿ ಕೊಟ್ಟು-ತೆಗೆದುಕೊಳ್ಳುವುದು ನಡೆಯುತ್ತಿದ್ದ ಕಾಲವದು. ಆದರೆ ಇಂದು ಯಾವುದೇ ವ್ಯಕ್ತಿಯನ್ನು ನಾವು ಅಪನಂಬಿಕೆಯಿಂದಲೇ ನೋಡುವ ಕಾಲ ಬಂದುಬಿಟ್ಟಿದೆ. ಯಾರ ಪ್ರಾಮಾಣಿಕತೆಯ ಬಗ್ಗೆಯೂ ವಿಶ್ವಾಸವಿಲ್ಲ. ಒಂದು ರೀತಿಯಿಂದ ಸಮಾಜದಲ್ಲಿ ಯಾರೂ ಸರಿ ಇಲ್ಲ, ಯಾರೂ ಪ್ರಾಮಾಣಿಕರಲ್ಲ, ಯಾರೂ ಸತ್ಯವಂತರಲ್ಲ ಎಂಬ ಸನ್ನಿವೇಶ ಗಟ್ಟಿಯಾಗುತ್ತಾ ಬರುತ್ತಿದೆ. ಇದಕ್ಕೆ ಕೆಲವು ಸುದ್ದಿ ಮಾಧ್ಯಮಗಳ ಕೊಡುಗೆಯೂ ಕಾರಣವಿರಬಹುದು.
ನಮ್ಮ ದೇಶದಲ್ಲಿ ಬಹಳ ಯಶಸ್ವಿಯಾಗಿ ನಡೆದಿರುವ ಕಾರ್ಯಕ್ರಮಗಳ ಪೈಕಿ ಪಲ್ಸ್ ಪೋಲಿಯೋ ಎಲ್ಲರಿಗೂ ತಿಳಿದಿರುವ ಕಾರ್ಯಕ್ರಮ. ಮಕ್ಕಳಲ್ಲಿ ವ್ಯಾಪಕವಾಗಿ ಬರುತ್ತಿದ್ದ ಪೋಲಿಯೋ ಕಾಯಿಲೆಯಿಂದಾಗಿ ಅನೇಕ ಎಳೆ ಕಂದಮ್ಮಗಳು ವಿವಿಧ ರೀತಿಯ ವಿಕಲತೆಗಳಿಂದ ನರಳುತ್ತಿದ್ದುದನ್ನು ನಾವು ಕಂಡಿದ್ದೇವೆ. ಇದನ್ನು ಮನಗಂಡು ಬಿಲ್‌ಗೇಟ್ ಫೌಂಡೇಶನ್ ಪ್ರಾಯೋಜಿತ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಪಂಚದಾದ್ಯಂತ ಜಾರಿಗೆ ಬಂದಿತು. ನಮ್ಮ ದೇಶದಲ್ಲಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಭೂತಪೂರ್ವ ಯಶಸ್ಸು ಗಳಿಸಿದ್ದನ್ನು ನಾವು ನೋಡಿದ್ದೇವೆ. ಕಳೆದ ವರ್ಷ ಇಡೀ ದೇಶದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ವರದಿಯಾಗಲಿಲ್ಲವೆಂಬುದು ಅತ್ಯಂತ ಚೈತನ್ಯ ನೀಡಿದ ಸಂಗತಿ. ನೆರೆಯ ರಾಷ್ಟ್ರವೊಂದರಲ್ಲಿ ಈ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಕೆಲವು ಉಗ್ರಗಾಮಿ ಸಂಘಟನೆಗಳು ಬಹಿಷ್ಕಾರ ಹಾಕಿದ ಕಾರಣ ಅಲ್ಲಿನ ಮಕ್ಕಳಿಗೆ ಈ ಅಭಿಯಾನದ ಲಾಭ ದೊರಕಲೇ ಇಲ್ಲ. ಆದರೆ ಈ ಕಾರ್ಯಕ್ರಮಕ್ಕೂ ಮಸಿ ಬಳಿಯುವ ಪ್ರಯತ್ನವೊಂದು ನಮ್ಮ ರಾಜ್ಯದಲ್ಲಿ ಕೆಲವು ವರ್ಷಗಳ ಹಿಂದೆ ನಡೆಯಿತು. ಪಲ್ಸ್ ಪೋಲಿಯೋ ಅಭಿಯಾನದ ದಿನ ಸುದ್ದಿ ಮಾಧ್ಯಮ ಒಂದು ಪಲ್ಸ್ ಪೋಲಿಯೋ ಹನಿಯನ್ನು ಸ್ವೀಕರಿಸಿದ ಮಗು ನಿಸ್ತೇಜಗೊಂಡು ಸಾವನ್ನಪ್ಪಿತು ಎಂಬ ಸುದ್ದಿಯನ್ನು ಪ್ರಕಟಿಸಿಬಿಟ್ಟಿತು. ಇಡೀ ರಾಜ್ಯದಲ್ಲಿ ಆತಂಕಗೊಂಡ ಪೋಷಕರು ತಮ್ಮ ಎಳೆಯ ಕಂದಮ್ಮಗಳನ್ನು ಎತ್ತಿಕೊಂಡು ಆಸ್ಪತ್ರೆಗಳಿಗೆ ಧಾವಿಸಿದ ದೃಶ್ಯ ಇನ್ನೂ ನೆನಪಿನಲ್ಲಿದೆ. ಅಂದು ಯಾವುದೇ ಕಾರಣವಿಲ್ಲದೇ ಉದ್ರೇಕದಿಂದ ಕೂಡಿದ ಗುಂಪುಗಳಿಂದ ಹಾನಿಗೊಳಗಾದ ವೈದ್ಯರೆಷ್ಟೊ? ನಷ್ಟಕ್ಕೀಡಾದ ಆಸ್ಪತ್ರೆಗಳ ಆಸ್ತಿಪಾಸ್ತಿ ಎಷ್ಟೋ? ಕೊನೆಗೆ ತಿಳಿದು ಬಂದುದೇನೆಂದರೆ ಯಾವುದೇ ಮಗುವಿಗೂ ಏನೂ ಪ್ರಾಣಾಪಾಯವಾಗಿಲ್ಲವೆಂಬುದು. ಆದರೆ ಕೊನೆಗೂ ಅಸತ್ಯವಾದ,  ಆ ಆಂತಕಕಾರಿ ಸುದ್ದಿಯನ್ನು ಪ್ರಕಟಿಸಿದ ಆ ವಾಹಿನಿ ತನ್ನಿಂದ ಲೋಪವಾಯಿತೆಂದು ವಿಷಾದ ವ್ಯಕ್ತಪಡಿಸಲೇ ಇಲ್ಲ.
ನನಗೆ ಒಮ್ಮೊಮ್ಮೆ ಅನಿಸುತ್ತದೆ. ಮಹಾತ್ಮಾಗಾಂಧಿಯವರ ಐತಿಹಾಸಿಕ ದಂಡಿಯಾತ್ರೆ ಇಡೀ ದೇಶದ, ಇಡೀ ಜಗತ್ತಿನ ಗಮನ ಸೆಳೆದು ಕೋಟ್ಯಂತರ ದೇಶ ಭಕ್ತರಿಗೆ ಪ್ರೇರಣೆಕೊಟ್ಟಿದ್ದು ಹೇಗೆ  ಅಂದು ಮೊಬೈಲ್‌ಗಳಿರಲಿಲ್ಲ, ಸಾಮಾಜಿಕ ತಾಣಗಳಿರಲಿಲ್ಲ, ಅಂತರ್ಜಾಲವಿರಲಿಲ್ಲ, 24್ಢ7 ಸುದ್ದಿ ವಾಹಿನಿಗಳಿರಲಿಲ್ಲ. ಇವೆಲ್ಲದರ ಅನುಪಸ್ಥಿತಿಯಲ್ಲಿ ಗಾಂಧಿಯವರ ದಂಡಿಯಾತ್ರೆ ಮಹಾನ್ ಘಟನೆಯಾಗಿ ಇಡೀ ದೇಶಕ್ಕೆ ವಿದ್ಯುತ್ ಸಂಚಲನವಾಗುವಂತೆ ಮಾಡಿ ಪ್ರೇರಣೆ ಕೊಟ್ಟಿದ್ದು ಹೇಗೆ? ಇದಕ್ಕೆ ಕಾರಣ  ಮಹಾತ್ಮಾಗಾಂಧಿಯವರ ಉದ್ದೇಶದ ಬಗ್ಗೆ ಹಾಗೂ ಆ ಮಹಾನ್ ಕಾರ್ಯದ ಬಗ್ಗೆ ಜನಕ್ಕಿದ್ದ ನಂಬಿಕೆ ಮತ್ತು ವಿಶ್ವಾಸ. ಒಂದೊಮ್ಮೆ ದಂಡಿ ಯಾತ್ರೆ ಇಂದು ಜರುಗಿದಿದ್ದರೆ ಏನಾಗಬಹುದು?  ಆ ದಂಡಿ ಯಾತ್ರೆಯ ಉದ್ದೇಶ-ಗುರಿಗಿಂತ, ಒಟ್ಟು ಪರಿಣಾಮಕ್ಕಿಂತ ಅನಗತ್ಯ ಸಂಗತಿಗಳು ಪ್ರಾಮುಖ್ಯತೆ ಪಡೆಯುತ್ತಿದ್ದವೇನೋ?  ಆ ಯಾತ್ರೆಯಲ್ಲಿ ಎಷ್ಟು ಜನ ಅರ್ಧ ನಡೆದರು, ಒಂದು ದಿನಕ್ಕೆ ಸೋತು ಕುಳಿತವರು ಎಷ್ಟು ಮಂದಿ, ಪ್ರತಿ ದಿನದ ತಿಂಡಿ-ಊಟದ ಮೆನು ಏನಿತ್ತು, ಗಾಂಧಿ ಯಾರ ಹೆಗಲ ಮೇಲೆ ಕೈ ಇಟ್ಟು ನಡೆದರು, ಗಾಂಧೀಜಿಯವರ ಸಮೀಪ ಯಾರಿದ್ದರು, ಗಾಂಧೀಜಿಯವರ ಹತ್ತಿರ ಹೋಗುವಲ್ಲಿ ಯಾರು ವಿಫಲರಾದರು, ಯಾರ್ಯಾರು ನೃತ್ಯ ಮಾಡಿದರು... ಇವುಗಳೇ ಪ್ರಾಮುಖ್ಯ ಗಳಿಸಿಬಿಡುತ್ತಿದ್ದವೇನೋ... ಅಂದರೆ ಒಬ್ಬ ಮಹಾನ್ ನಾಯಕನ ಮಹಾನ್ ಉದ್ದೇಶದಿಂದ ಕೂಡಿರುವ ಕಾರ್ಯದ ಬಗ್ಗೆಯೂ ಹಾಸ್ಯ-ಅಪಹಾಸ್ಯ, ವ್ಯಂಗ್ಯೋಕ್ತಿಗಳ ಮೂಲಕ ಅಪನಂಬಿಕೆ ಹುಟ್ಟಿಸುವ ಶಕ್ತಿ ಇಂದಿನ ಜನಪ್ರಿಯ ಸಾಧನಗಳಲ್ಲಿವೆ.
ಕೆಲವು ವರ್ಷಗಳ ಹಿಂದೆ ನಾನಿರುವ ರಾಜಾಜಿನಗರದಲ್ಲಿ ಇಂದು ಡಾ. ರಾಜ್‌ಕುಮಾರ್ ರಸ್ತೆ ಎಂದು ಕರೆಯಲ್ಪಡುವ ರಸ್ತೆಯಲ್ಲಿ ಒಬ್ಬ ಗುತ್ತಿಗೆದಾರ ಒಂದೇ ರೀತಿಯ ಸುಮಾರು 9 ಬೃಹತ್ ಬಂಗಲೆಗಳನ್ನು ನಿರ್ಮಿಸಿ ಕೃತಾರ್ಥರಾದರು. ಆದರೆ ಸೋಜಿಗದ ವಿಚಾರವೆಂದರೆ ಆ ಮನೆಗಳೆಲ್ಲವೂ ಅಂದಿನ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಆಸ್ತಿಗಳೆಂದು ಸುಳ್ಳು ವದಂತಿ ಅದು ಹೇಗೂ ಜನಿಸಿ, ಹರಡಿ ಎಲ್ಲರ ಬಾಯಿಯಲ್ಲಿಯೂ ನಲಿಯುವಂತೆ ಆಯಿತು. ಆದರೆ ನಿಜಲಿಂಗಪ್ಪನವರಿಗೆ ಬೆಂಗಳೂರಿನಲ್ಲಿ ಯಾವುದೇ ಮನೆ ಇರಲಿಲ್ಲ ಎಂಬ ಸತ್ಯಕ್ಕೆ ಈ ವದಂತಿಯನ್ನು ಸುಳ್ಳಾಗಿಸುವ ಶಕ್ತಿ ಇರಲಿಲ್ಲವೆಂದು ನಿಜಕ್ಕೂ ವಿಪರ್ಯಾಸ.
ಈ ಹಿನ್ನೆಲೆಯಲ್ಲಿ ನಮ್ಮ ಕಣ್ಣ ಮುಂದೆ ಇರುವ, ನಾವು ಕಂಡಿರುವ ನಿಜವಾದ ರೋಲ್‌ಮಾಡಲ್‌ಗಳಾದ ಮಹಾನ್ ವ್ಯಕ್ತಿಗಳನ್ನು ಜನರಿಗೆ ಪರಿಚಯಿಸಿ ಅವರು ಮಾಡಿರುವ ಸಾಧನೆಗಳು, ಅವರ ತ್ಯಾಗ, ಅವರ ದೇಶ ಭಕ್ತಿ, ಅವರ ಸಮಾಜಮುಖಿ ಚಿಂತನೆ ಇವುಗಳನ್ನು ಜನಕ್ಕೆ ಪರಿಚಯಿಸಿ ಸಮಾಜದಲ್ಲಿ ಎಲ್ಲವೂ ಹಾಳಾಗಿಲ್ಲ. ಇನ್ನು ಸಮಾಜದ ಒಳಿತನ್ನು ಬಯಸುವ ಅನೇಕ ಮನಸ್ಸುಗಳಿವೆ ಎಂದು ಕೂಗಿ ಹೇಳುವುದಕ್ಕೆ ನೆಲ್ಸನ್ ಮಂಡೆಲಾ ರವರ ಶ್ರದ್ಧಾಂಜಲಿಯ ದೊಡ್ಡ ಕಾರ್ಯ ಅಗತ್ಯವಾಗಿದೆ. ಸಮಾಜದಲ್ಲಿ ನಂಬಿಕೆ ಎಂಬುದು ಸಂಪೂರ್ಣ ಬತ್ತಿ ಹೋದರೆ ಉಂಟಾಗುವ ಸನ್ನಿವೇಶ ಊಹೆಗೂ ನಿಲುಕದು.
ಒಂದೆರಡು ವರ್ಷಗಳ ಹಿಂದೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ನಾಡಿನ ಮನ್ನಣೆ ಪಡೆದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಆಯ್ಕೆ ಮಾಡಲಾಯಿತು. ಘನವೆತ್ತ ರಾಜ್ಯಪಾಲರು ಆ ಆಯ್ಕೆಗೆ ಅನುಮೋದನೆ ನೀಡಿ ನೇಮಕಾತಿಯು ಘೋಷಣೆಯಾಯಿತು. ನ್ಯಾಯಮೂರ್ತಿಗಳಾಗಿ ಅವರ ಮೇಧಾವಿತನ, ನಿಸ್ಪೃಹತೆ, ಹೃದಯ ವೈಶಾಲ್ಯವನ್ನು ಎಲ್ಲರೂ ಅರಿತಿದ್ದರು. ಆದರೆ ಅವರ ವ್ಯವಹಾರ ಜೀವನದಲ್ಲಿ ಜರುಗಿದ್ದ ಸಂಗತಿಯೊಂದನ್ನು ಬಹಳ ದೊಡ್ಡದಾಗಿ ಚಿತ್ರಿಸಿದಾಗ ಮನನೊಂದ ಅವರು ಆ ಹುದ್ದೆಗೆ ರಾಜಿನಾಮೆ ಕೊಟ್ಟರು. ಕರ್ನಾಟಕ ಉತ್ತಮ ಲೋಕಾಯುಕ್ತರನ್ನು ಪಡೆಯುವುದರಿಂದ ವಂಚಿತವಾಯಿತು.
ಆದುದರಿಂದ ಇಂದು ಸಮಾಜದಲ್ಲಿ ಸಕಾರಾತ್ಮಕ ಸಂಗತಿಗಳ ಬಗ್ಗೆ ನಂಬಿಕೆಯನ್ನು ಮೂಡಿಸಿ, ಜನತೆ ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಭೋಗ ಜೀವನವೇ ಪ್ರಧಾನವಾಗುತ್ತಿರುವ ಜಾಹೀರಾತಿನ ಈ ದಿನಗಳಲ್ಲಿ ಎಲ್ಲದರ ಬಗ್ಗೆ ಸಹಜವಾಗಿ ಉಂಟಾಗುತ್ತಿರುವ ಅಪನಂಬಿಕೆಯೇ ರಾರಾಜಿಸಿಬಿಟ್ಟರೆ ನಾಳಿನ ಸಮಾಜಕ್ಕೆ ಯಾವ ಹೊರ ಶತ್ರುಗಳೂ ಬೇಕಿಲ್ಲ. ಆದುದರಿಂದ ಸಮಾಜದ ಹೀರೊಗಳನ್ನು ಗುರುತಿಸಿ ಅವರ ಸಾಧನೆಗಳ ಬಗ್ಗೆ ಎಲ್ಲರಿಗೂ ಪರಿಚಯಿಸುವ ಕಾರ್ಯ ಅಗತ್ಯವಾಗಿ ಆಗಬೇಕು. ಆ ಕಾರಣಕ್ಕಾಗಿ ನೆಲ್ಸನ್ ಮಂಡೆಲಾರಂತಹ ಆದರ್ಶ ವ್ಯಕ್ತಿಗಳ ಬಗ್ಗೆ, ಮೈಸೂರು ಅರಸರ ಕೊಡುಗೆಗಳ ಬಗ್ಗೆ ನೆನಪು ಮಾಡಿಕೊಳ್ಳುವ ಸಭೆಗಳು ಎಷ್ಟು ನಡೆದರೂ ಅಷ್ಟು ಒಳ್ಳೆಯದು.

- ಎಸ್. ಸುರೇಶ್‌ಕುಮಾರ್
ಮಾಜಿ ಸಚಿವರು
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement