ಸಲಿಂಗ ಕಾಮ 'ಪ್ರೇಮ' ಯಾಕಾಗಬಾರದು?
ಐಪಿಸಿ 377. ಸದ್ಯ ಭಾರಿ ಸುದ್ದಿಯಲ್ಲಿರುವ ಸಂಖ್ಯೆಯಿದು.
ಸಲಿಂಗಕಾಮ 'ಅಪರಾಧವಲ್ಲ' ಎಂಬ ದಿಲ್ಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದಾಗಿನಿಂದ ಭಾರಿ ಚರ್ಚೆಯಲ್ಲಿದೆ ಈ 377. ಸಾಮಾನ್ಯವಾಗಿ ಯಾವುದೇ ಕಾನೂನು, ಕಾಯ್ದೆಗಳು ಆಯಾ ಕಾಲಘಟ್ಟಕ್ಕೆ ಮತ್ತು ಒಂದಿಷ್ಟು ದೂರದೃಷ್ಟಿಯನ್ನಿಟ್ಟುಕೊಂಡು ರೂಪಿತವಾಗಿರುತ್ತವೆ. ಇಂಥ ಕಾನೂನುಗಳು ಎಲ್ಲ ದೇಶಗಳಲ್ಲೂ ಇವೆ. ಆದರೆ, 'ಕಾಲ' ಎಂಬುದು ಮಾತ್ರ ನಿಂತಲ್ಲೇ ನಿಲ್ಲುವುದಿಲ್ಲವಲ್ಲ. ಅದು ಓಡುತ್ತಲೇ ಇರುತ್ತದೆ. ಅದರ ಜತೆಗೆ ನಾಗರಿಕ ಸಮಾಜ ಹೆಜ್ಜೆ ಹಾಕಲೇಬೇಕಾಗುತ್ತದೆ. ಒಂದು ವೇಳೆ 'ಕಾಲ'ನ ಹಿಂದೆ ಬಿದ್ದರೆ 377ನಂಥ ಗೊಂದಲಗಳು ಸೃಷ್ಟಿಯಾಗಿ ಬಿಡುತ್ತವೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಲಿಂಗಕಾಮವನ್ನು ಅಪರಾಧ ಎಂದು ಹೇಳಿದೆ ಎನ್ನುವ ಮೂಲಕ ಗುಲ್ಲೆಬ್ಬಿಸಲಾಗಿದೆ. ವಾಸ್ತವದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದು, '2009ರಲ್ಲಿ ಸಲಿಂಗಕಾಮದ ಬಗ್ಗೆ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪು 377 ಐಪಿಸಿಗೆ ವಿರುದ್ಧವಾಗಿದೆ. ಆದರೆ, ಸಲಿಂಗಕಾಮ ಅಪರಾಧೀಕರಣ ನ್ಯಾಯಾಲಯಗಳೇ ಸರಿಪಡಿಸಬೇಕಾಗಿಲ್ಲ. ಸಂಸತ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು' ಎಂದಿತೇ ಹೊರತು ಸಲಿಂಗಕಾಮವನ್ನು ನಿಷೇಧಿಸಬೇಕೆಂದು ಹೇಳಿಲ್ಲ. ಇದರ ಬಗ್ಗೆ ವಿಮರ್ಶೆ ಅಗತ್ಯ ಎಂಬುದು ಅದರ ಉದ್ದೇಶವಾಗಿದೆ.
ಆದರೆ, ಕೆಲವರು ಹಾಗೂ ಕೆಲವು ರಾಜಕೀಯ ಪಕ್ಷಗಳು ಮಾತ್ರ ಸುಪ್ರೀಂ ಕೋರ್ಟ್ ಹೇಳಿದ್ದನ್ನು ಕೂಲಂಕುಷವಾಗಿ ಗಮನಿಸದೆ, ಸಲಿಂಗಕಾಮಕ್ಕೆ ಪ್ರೋತ್ಸಾಹ ಬೇಡ, ಅದನ್ನು ನಿಷೇಧಿಸಬೇಕು ಎನ್ನುವ ಅರ್ಥದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಹೀಗೆ ಗೊಂದಲ ಸೃಷ್ಟಿಸುತ್ತಿರುವ ರಾಜಕೀಯ ಪಕ್ಷಗಳ ಮಿದುಳಲ್ಲಿ ಸುತ್ತುಹೊಡೆಯುತ್ತಿರುವುದು ಸ್ವಹಿತಾಸಕ್ತಿಯೇ! ಸಲಿಂಗಕಾಮದ ಬಗ್ಗೆ ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯಗಳು. ಆದರೆ, ಈ ಸಮುದಾಯಗಳೂ homosexuality criminalization ಕುರಿತು ಚಕಾರವೆತ್ತಿಲ್ಲ. ಅಂದರೆ, ಅವುಗಳದ್ದು ವಿರೋಧವಷ್ಟೇ. ಇದನ್ನೇ ನಂಬಿಕೊಂಡು ಸಮಾಜವಾದಿ ಪಕ್ಷ ಹಾಗೂ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ಮಾಡುತ್ತಿವೆ. ಬಿಜೆಪಿಯಂತೂ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರ ಹೂಡಿದೆ. ಆ ಪಕ್ಷದ ಅಧ್ಯಕ್ಷರ ಮಾತಿನಲ್ಲೂ ಇದು ವ್ಯಕ್ತವಾಗಿದೆ. ಹೇಗೆಂದರೆ, ಹೇಗೂ ಅಲ್ಪಸಂಖ್ಯಾತ ಸಮುದಾಯಗಳು ಸಲಿಂಗಕಾಮವನ್ನು ವಿರೋಧಿಸುತ್ತಿವೆ. ಇದೇ ವೇಳೆ, ಸಂಘ ಪರಿವಾರಕ್ಕೂ ಈ ವಿಷಯ ಅಪಥ್ಯ. ಹಾಗಾಗಿ, ಬಿಜೆಪಿ ಈ ವಿಷಯಕ್ಕೆ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗೆ ಮಾಡುವುದರಿಂದ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಬಹುದೆಂಬ ಲೆಕ್ಕಾಚಾರವಷ್ಟೇ ಇಲ್ಲಿ ಕೆಲಸ ಮಾಡುತ್ತಿದೆ. ಅಷ್ಟಕ್ಕೂ ಸಲಿಂಗಕಾಮವನ್ನು ಯಾರು, ಯಾತಕ್ಕಾಗಿ ವಿರೋಧಿಸುತ್ತಿದ್ದಾರೆಂದರೆ, ಇದೊಂದು 'ಅನೈಸರ್ಗಿಕ ಕ್ರಿಯೆ' ಎಂತಲೂ, ಸೃಷ್ಟಿ ಹಾಗೂ ನಮ್ಮ ಸಂಸ್ಕೃತಿಯ ನಿಯಮಕ್ಕೆ ವಿರುದ್ಧವಾದದ್ದು ಎಂತಲೂ ಅಲ್ಲವೇ? ಓಕೆ, ಒಪ್ಪಿಕೊಳ್ಳೋಣ. ಆದರೆ, ಸಲಿಂಗಕಾಮ ಕೂಡಾ 'ನೈಸರ್ಗಿಕ ಕ್ರಿಯೆ' ಮತ್ತು 'ಸೃಷ್ಟಿಯ ನಿಯಮ'ವೇ ಅಲ್ಲವೇ? ಗಂಡು-ಹೆಣ್ಣು ಆಕರ್ಷಣೆ ನೈಸರ್ಗಿಕ ಪ್ರಕ್ರಿಯೆ ಎನ್ನುವುದಾದರೆ, ಗಂಡು-ಗಂಡು ಹಾಗೂ ಹೆಣ್ಣು-ಹೆಣ್ಣು ಕೂಡಾ ಪರಸ್ಪರ ಆಕರ್ಷಣೆಗೊಳಗಾಗುವುದು ನೈಸರ್ಗಿಕವೇ! ಗಂಡು ಗಂಡನ್ನು ಅಥವಾ ಹೆಣ್ಣು ಹೆಣ್ಣನ್ನು ಆಕರ್ಷಿಸುವುದು ಕೂಡಾ ಹುಟ್ಟಿನಿಂದಲೇ ಬಂದಿರುವಂಥದ್ದು. ಅಂಥ ವಾಂಛೆ ಬದುಕಿನ ಯಾವುದೋ ಘಟ್ಟದಲ್ಲಿ ಸೃಷ್ಟಿಯಾಗಿರುವಂಥದಲ್ಲ. ಹಾಗಾಗಿ, ಇದು ಕೂಡಾ ಸೃಷ್ಟಿಯ ನಿಯಮದ ಒಂದು ಭಾಗವೇ. ಸಲಿಂಗ ಭಾವನೆಗಳನ್ನು ಉದ್ದೇಶಪೂರ್ವಕವಾಗಿಯೇ ಬರುವಂತೆ ಮಾಡಿಕೊಳ್ಳುವ ಹಾಗಿದ್ದರೆ ಅದನ್ನು ವಿರೋಧಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹೀಗಿರುವಾಗ ಸಲಿಂಗ ಮೋಹವನ್ನು ಅನೈಸರ್ಗಿಕ ಕ್ರಿಯೆ ಎಂದು ಹೇಳುವುದು ಹೇಗೆ?
ಅಷ್ಟಕ್ಕೂ 'ಸಲಿಂಗಕಾಮ' ಎಂಬ ಪದ ಬಳಕೆಯೇ ತಪ್ಪು. ಯಾಕೆಂದರೆ, ಗಂಡು-ಗಂಡು, ಹೆಣ್ಣು-ಹೆಣ್ಣು ನಡುವಿನ ಆಕರ್ಷಣೆ ಕೇವಲ ಕಾಮಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ ಪ್ರೀತಿ, ಪ್ರೇಮ, ಕಕ್ಕುಲಾತಿ, ವಾತ್ಸಲ್ಯ ಇರುತ್ತದೆ. ಗಂಡು-ಹೆಣ್ಣಿನ ಮಧ್ಯೆ ಯಾವ ರೀತಿಯ ಭಾವ- ಭಾವುಕತೆ, ಆಕರ್ಷಣೆ, ವಿಕರ್ಷಣೆ, ಸರಸ, ವಿರಸಗಳ ಬಂಧ ಇರುತ್ತದೋ ಅಂಥದ್ದೇ ಭಾವನೆಗಳು ಅವರ ಮಧ್ಯೆಯೂ ಇರುತ್ತವೆ. ಇಲ್ಲಿ ಕೇವಲ ಕಾಮವೇ ಮಾತ್ರ ಮುಖ್ಯವಾಗಿರುವುದಿಲ್ಲ. ಆದರೆ, ನಮ್ಮ ಸಮಾಜ ಅದನ್ನು ಸಲಿಂಗ'ಕಾಮ'ಕ್ಕೆ ಮಾತ್ರ ಮಿತಿಗೊಳಿಸಿದೆ. ಸಲಿಂಗಕಾಮವೆಂಬ ಹಣೆಪಟ್ಟಿ ಕಳಚಿ ಅದನ್ನು 'ಸಲಿಂಗಪ್ರೇಮ'ದಂತೆ ಯಾಕೆ ನೋಡಬಾರದು? ಈ ರೀತಿಯ ಬದಲಾವಣೆಯ ಕಾಲ ಇದೀಗ ಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ, 'ಸಲಿಂಗಪ್ರೇಮಿ'ಗಳು ಕೂಡಾ ಮನುಷ್ಯರು. ನಮ್ಮ ನಿಮ್ಮ ನಡುವೆ ಇರುವಂಥವರು. ಮನುಷ್ಯರನ್ನು ಮನುಷ್ಯರ ತರಹ ನೋಡಬೇಕೇ ಹೊರತು ಪ್ರಾಣಿಗಳಂತಲ್ಲ.
- ಮಲ್ಲಿಕಾರ್ಜುನ ತಿಪ್ಪಾರ
ಕನ್ನಡಪ್ರಭ