ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅವಕಾಶ ಕೈ ಚೆಲ್ಲಿದರೆ ಆಮ್‌ಆದ್ಮಿ ಪಾರ್ಟಿ ಪರಿತಪಿಸಬೇಕಾದೀತು

Vishwanath S
Updated On : 20 Dec 2013, 12:55 pm

ದಿಲ್ಲಿ ಚುನಾವಣಾ ಫಲಿತಾಂಶ ಹೆಚ್ಚು ನಿರಾಶೆ ತಂದಿರಬಹುದಾದದ್ದು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿದ ಜನರಿಗೆ ಎಂದರೆ ಅವಸರದ ಹೇಳಿಕೆಯಾಗಲಾರದು. ಆಪ್‌ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು ಬೇಡ. ಅದನ್ನು ಒರೆಗೆ ಹಚ್ಚುವ ಅವಕಾಶ ಕಲ್ಪಿಸುವ ಸಂಕಲ್ಪವೂ ಅವರಿಗೆ ಇಲ್ಲವೆಂಬ ಹಾಗೆ ಭಾಸವಾಗುತ್ತಿದೆ. ವಿದ್ಯಮಾನವನ್ನು ಅವಲೋಕಿಸುವಾಗ ಎಎಪಿಗೆ ವಾಸ್ತವದ ಅರಿವಾಗಲಿ, ವ್ಯವಹಾರ ನಿಪುಣತೆಯಾಗಲಿ, ಬೆಂಬಲಿಸಿದ ಜನರ ಬಗ್ಗೆ ಸ್ಪಂದನವೂ ಇಲ್ಲ ಎಂಬ ಶಂಕೆ ಅಂಕುರಿಸುತ್ತದೆ. ಯಾಕೆಂದರೆ ಒಟ್ಟು ಸ್ಥಾನ 70ರಲ್ಲಿ 28 ಸ್ಥಾನ ಗಳಿಸಿ ಎಎಪಿ ಸುಮಾರು ಶೇಕಡಾ 40ರಷ್ಟು ಜನರ ಮನ್ನಣೆಗೆ ಪಾತ್ರವಾಗಿದೆ. ಹೊಸ ಪಕ್ಷಕ್ಕೆ ಇದೊಂದು ಅಭೂತಪೂರ್ವ ಜಯವೇ. ಇಂಥ ಪಕ್ಷ ನಿಸ್ವಾರ್ಥವಾಗಿ ನೀಡುವ ಇನ್ನೊಂದು ರಾಜಕೀಯ ಪಕ್ಷದ ಬೆಂಬಲವನ್ನು ಬಳಸಿಕೊಂಡು ಆಡಳಿತ ನಡೆಸಲು ಆಸಕ್ತಿ ತೋರಿಸುವುದಿಲ್ಲವೆಂದಾದರೆ ಆ ಪಕ್ಷದ ಭಾವಶುದ್ಧಿಯನ್ನು ಪ್ರಶ್ನಿಸಬೇಕಾಗುತ್ತದೆ.
ತಮ್ಮದು ಶುದ್ಧೀಕರಣದ ಉದ್ದೇಶ ಎಂದು ಹೇಳಿಕೊಳ್ಳುವ ಪಕ್ಷ ಸಮಾಜ ಸುಧಾರಣಾ ಸಂಘಟನೆಯಾಗಿಯೇ ಉಳಿಯಬೇಕಿತ್ತು. ರಾಜಕೀಯ ಪ್ರವೇಶವೇ ಬೇಡವಿತ್ತು. ರಾಜಕೀಯದಿಂದ ಹೊರಗಿದ್ದು ಆಡಳಿತ ಸುಧಾರಣೆ ಅಸಾಧ್ಯವೆಂಬ ತೀರ್ಮಾನಕ್ಕೆ ಬಂದ ಸಂಘಟನೆ ರಾಜಕೀಯ ಪ್ರವೇಶ ಮಾಡಿದ ನಂತರ ಆಡಳಿತ ನಡೆಸಲು ಒದಗಿ ಬರುವ ಅವಕಾಶಗಳನ್ನು ಬಳಸಿಕೊಂಡು ಆಡಳಿತ ನಡೆಸಲು ಪ್ರಯತ್ನಿಸಬೇಕಲ್ಲವೇ? ಆ ಮೂಲಕ ತನ್ನನ್ನು ನಂಬಿ ಬೆಂಬಲಿಸಿದ ಜನರ ಭಾವನೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಆದರೆ ಆಪ್ ಕೇವಲ ಸಿನಿಕತನವನ್ನೇ ತೋರಿಸುತ್ತಿದೆ. ಈಗ ತಾನು ಆಡಳಿತ ನಡೆಸಲು ಒಪ್ಪಿಗೆ ನೀಡಬೇಕಾದರೆ 18 ಷರತ್ತುಗಳನ್ನು ಒಪ್ಪಿಕೊಳ್ಳಬೇಕೆಂಬ ಪಟ್ಟಿ ನೀಡಿದೆ. ಈ ಷರತ್ತುಗಳ ಪಟ್ಟಿಯನ್ನು ಅವಲೋಕಿಸುವಾಗ ಆಡಳಿತದ ಬಗ್ಗೆ ಈ ಪಕ್ಷಕ್ಕೆ ಒಂದಿನಿತೂ ಜ್ಞಾನವಿಲ್ಲ ಎನ್ನುವುದು ಅರ್ಥವಾಗುತ್ತದೆ.
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರದ್ದು ಪಡಿಸುವುದು, ದಿಲ್ಲಿಯಲ್ಲಿ ವಿಐಪಿ ಸಂಸ್ಕೃತಿಯನ್ನು ಕೊನೆಯಾಗಿಸುವುದು ಹಾಗೂ ವಿದ್ಯುತ್ ನಿಗಮಗಳ ಲೆಕ್ಕ ಪರಿಶೋಧನೆ ನಡೆಸುವುದು ಇತ್ಯಾದಿ ವಿಚಾರಗಳನ್ನು ಈ ಪಟ್ಟಿ ಒಳಗೊಂಡಿದೆ. ಇವುಗಳೆಲ್ಲ ಶಾಸನ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ವಿಚಾರಗಳು. ಶಾಸಕ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯ ಕುರಿತು ಈಗಾಗಲೇ ನ್ಯಾಯಾಲಯ ತೀರ್ಮಾನಿಸಿದೆ. ಇದೇ ಲೇಖಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ದೂರು ಅರ್ಜಿ ಸಂಖ್ಯೆ ಡಬ್ಲ್ಯುಪಿ 18635/2002ರ ಪ್ರಕರಣದಲ್ಲಿ ದಿನಾಂಕ 18/02/11ರಂದು ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಆ ಮುನ್ನ ಇದೇ ವಿಚಾರದಲ್ಲಿ ಘನ ಸರ್ವೋಚ್ಚ ನ್ಯಾಯಾಲಯ ಡಾ. ಕೃಷ್ಣಮೂರ್ತಿ ವಿರುದ್ಧ ಭಾರತ ಸರಕಾರದ ಪ್ರಕರಣದಲ್ಲಿ ದಿನಾಂಕ 11-05-2010ರಂದು ನೀಡಿದ ತೀರ್ಪನ್ನು ಉಲ್ಲೇಖಿಸುತ್ತಾ ಸಂವಿಧಾನದ ವಿಧಿ 282ರಂತೆ ಶಾಸಕ, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆ ಸಂವಿಧಾನ ಬದ್ಧ ಎಂದು ಹೇಳಿದೆ. ಮುಂದುವರಿದು, ಯೋಜನೆ ಸಂವಿಧಾನ ಬದ್ಧವೇ? ಎಂದು ತೀರ್ಮಾನಿಸುವುದಷ್ಟೇ ನ್ಯಾಯಾಲಯದ ಕೆಲಸ. ಅದರ ಯುಕ್ತಾಯುಕ್ತತೆ, ನಿರ್ವಹಣೆ ದುರುಪಯೋಗ ತಡೆ ಇತ್ಯಾದಿ ಶಾಸನ ಸಭೆಯ ಕರ್ತವ್ಯ ಹಾಗೂ ಹೊಣೆಗಾರಿಕೆ. ಹಾಗಾಗಿ ಈ ವಿಚಾರವನ್ನು ಶಾಸನ ಸಭೆಯ ಚರ್ಚೆಗೆ ಬಿಡುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದೆ.
ಈ ನೆಲೆಯಲ್ಲಿ ಆಪ್ ದಿಲ್ಲಿಯಲ್ಲಿ ಸರ್ಕಾರ ನಡೆಸುವ ಅವಕಾಶ ಗಿಟ್ಟಿಸಿಕೊಂಡರೆ ಆ ಸರ್ಕಾರ ಸ್ವಇಚ್ಚೆಯಿಂದಲೇ ಶಾಸಕ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯನ್ನು ರದ್ದು ಪಡಿಸುವ ಕ್ರಮಕೈಗೊಳ್ಳಬಹುದು. ಹಾಗೆಯೇ ಇಲ್ಲಿ ಉಲ್ಲೇಖಿಸಿದ ಉಳಿದೆರಡು ಷರತ್ತುಗಳನ್ನು ಅಧಿಕಾರಕ್ಕೆ ಬಂದ ನಂತರ ಪರಿಹರಿಸಿಕೊಳ್ಳಬಹುದಾಗಿದೆ. ಬಹುಶಃ ಇನ್ನುಳಿದ ಷರತ್ತುಗಳು ಇದೇ ಸ್ವರೂಪದವುಗಳಾಗಿದ್ದು ದಿಲ್ಲಿ ಗದ್ದುಗೆ ಏರಿದ ಬಳಿಕ ಒಂದೊಂದಾಗಿ ನಿವಾರಿಸಿಕೊಳ್ಳಲು ಸರ್ಕಾರ ಶಕ್ತವಾಗಬಹುದು.
ಅಗತ್ಯವುಳ್ಳ ಸದಸ್ಯ ಬಲಕ್ಕಿಂತ ತುಸು ಕಡಿಮೆ ಮತ ಪಡೆದ ಆಪ್ ಬಾಹ್ಯ ಬೆಂಬಲ ಪಡೆದು ಸರ್ಕಾರ ನಡೆಸುವ ಆಸಕ್ತಿ ತೋರದಿರುವುದು ಆಶ್ಚರ್ಯ. ಈ ನಡೆ ಆ ಪಕ್ಷದ ಕುರಿತು ದಿಲ್ಲಿಯ ಜನತೆ ಮಾತ್ರವಲ್ಲ ಇಡೀ ದೇಶದ ಜನತೆಯನ್ನು ಮರುಚಿಂತನೆ ನಡೆಸುವಂತೆ ಮಾಡಿದೆ. ಯಾಕೆಂದರೆ ಈ ಪಕ್ಷ ಇತ್ತೀಚೆಗಷ್ಟೇ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿದ್ದು ಇದರ ಕಾರ್ಯ ನಿರ್ವಹಣೆ ಜನತೆಗೆ ಗೊತ್ತಿಲ್ಲ. ಪ್ರಸಕ್ತ ರಾಜಕೀಯದ ಹುಳುಕುಗಳನ್ನು ಎಎಪಿ ಜನರ ಮುಂದೆ ಬಿಚ್ಚಿಟ್ಟು ಅರಿವನ್ನುಂಟು ಮಾಡಿದೆ. ಈ ಪಕ್ಷದಲ್ಲಿ ಬಹುಸಂಖ್ಯೆಯಲ್ಲಿ ಓದಿದ ಜನರಿದ್ದಾರೆ. ಕೆಲವರಂತೂ ಉತ್ತಮ ವರಮಾನ ತರುವ ಉದ್ಯೋಗವನ್ನು ತೊರೆದು ಪಕ್ಷ ಸೇರಿದ್ದಾರೆ ಎಂದಾಗ ಅವರು ಖಂಡಿತಾ ಸೇವಾ ಮನೋಭಾವ ಹೊಂದಿರುವರು ಎಂಬ ತೀರ್ಮಾನಕ್ಕೆ ಜನ ಬಂದಿದ್ದಾರೆ. ಹಿಂದೆ ಆಡಳಿತ ನಡೆಸಿದ ಅನುಭವವಿಲ್ಲ ಎನ್ನುವುದರ ಹೊರತಾಗಿ ಇವರ ಸೇವಾ ತತ್ಪರತೆಯನ್ನು ಶಂಕಿಸುವುದು ಸುಲಭದ ಮಾತಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇವರು ದಿಲ್ಲಿಯ ಜನರನ್ನು ಹುಚ್ಚು ಕಟ್ಟಿಸಿರುತ್ತಾರೆ. ಮುಖ್ಯವಾಗಿ ಯುವಜನತೆಯನ್ನು. ಪಾಪ ದಿಲ್ಲಿಯ ರಾಜಕೀಯ ಕ್ಷೊಭೆ ಹಾಗಿತ್ತು. ಒಟ್ಟಿನಲ್ಲಿ ದಿಲ್ಲಿಯ ಜನರು ಮಳೆಯ ಮುನ್ನೋಟವನ್ನೇ ಕಾಯುವ ಚಾತಕ ಪಕ್ಷಿಯಂತೆ ಆಮ್ ಆದ್ಮಿ ಪಕ್ಷದ ನಿಸ್ವಾರ್ಥ ಸೇವೆಯನ್ನೇ ಎದುರು ನೋಡುತ್ತಿದ್ದರು.
ಶೇಕಡಾ 40ರಷ್ಟು ಮತದಾರರು ಹರಸಿದ್ದಾರೆಂದರೆ ಅದು ನಿಜವಾಗಿಯೂ ಸತ್ವಯುತ ಬೆಂಬಲ. ಅಂಥ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಪಕ್ಷ ಆಸಕ್ತಿ ತೋರಿಸುವುದಿಲ್ಲ ಎನ್ನುವಾಗ ಜನರು ಆ ಪಕ್ಷದ ಕುರಿತು ಇನ್ನೊಮ್ಮೆ ಯೋಚಿಸುವಂತಾಗಿದೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಆಮ್ ಆದ್ಮಿ ಪಕ್ಷ ದಿಲ್ಲಿ ಜನರ ಅಂತರಾಳವನ್ನು ಅರಿಯಲು ಅಸಮರ್ಥವಾಗಿದೆ.
ಪ್ರಜಾಸತ್ತೆಯಲ್ಲಿ ಜನ ಪ್ರತಿನಿಧಿ ಅಧಿಕಾರಕ್ಕೆ ಬಂದ ಮೇಲೆಯೇ ಆತ ಜನರ ಆಶೋತ್ತರಗಳನ್ನು ಈಡೇರಿಸಲು ಶಕ್ತನಾಗುವುದು. ಆ ಉದ್ದೇಶಕ್ಕಾಗಿಯೇ ಒಂದು ಸಮಾಜ ಪರಿವರ್ತನಾ ತಂಡ ರಾಜಕೀಯ ಪಕ್ಷವಾಗಿ ರೂಪುಗೊಂಡಿರುವುದಲ್ಲವೇ? ಹಾಗೆ ಪರಿವರ್ತಿತವಾದ ಆಪ್ ಈಗ ದೊರೆತಿರುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ತನ್ನ ಸಂಕಲ್ಪವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು. ನಮ್ಮ ಸಂವಿಧಾನದಲ್ಲಿ ಮೂರು ಸ್ವತಂತ್ರ ಅಂಗಗಳಿದ್ದರೂ ಶಾಸಕಾಂಗದ ಪಾರಮ್ಯವನ್ನು ಎಂದೂ ಅಲ್ಲಗಳೆಯಲಾಗದು. ಅಲ್ಲಿ ಧೀಮಂತ, ಸಚ್ಚಾರಿತ್ರ್ಯವುಳ್ಳ ಪ್ರತಿನಿಧಿಗಳಿರಬೇಕು. ಅವರ ಸಂಖ್ಯೆ ಕಡಿಮೆಯೇ ಇರಲಿ ಅವರ ಪ್ರಭಾವ ಸದನದ ಕಾರ್ಯವೈಖರಿಯ ಚಿತ್ರವನ್ನೇ ಬದಲಿಸಬಲ್ಲುದು. ಇದು ಸಂವಿಧಾನದ ಆಶಯ. ಹಿಂದೆ ನಮ್ಮ ಸದನದಲ್ಲಿ ಕೆ.ಎಂ. ಮುನ್ಶಿ, ಸಿ. ರಾಜಗೋಪಾಲಾಚಾರಿ, ಡಾ. ರಾಧಾಕೃಷ್ಣನ್‌ರಂಥ ವಿದ್ವಾಂಸರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿಯವರಂಥ ಅಪ್ರತಿಮ ರಾಜಕೀಯ ಮುತ್ಸದ್ದಿಗಳಿದ್ದರು. ಆಪ್‌ನಲ್ಲಿ ಅನೇಕ ಶಿಕ್ಷಣವೇತ್ತರು, ಬುದ್ಧಿಜೀವಿಗಳು ಇದ್ದು ಅವರಲ್ಲಿ ಅನೇಕರು ಮೊನ್ನೆಯ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರೆಲ್ಲ ಸಂಸತ್ತಿನೊಳಗೆ ಈಗ ಪ್ರವೇಶ ಮಾಡಬೇಕು. ತಮ್ಮ ನಿಜ ಸಾಮರ್ಥ್ಯ ಹಾಗೂ ಸಾಮಾಜಿಕ ಕಳಕಳಿ ತೋರಿಸಬೇಕು. ಪ್ರಸ್ತುತ ಆಮ್ ಆದ್ಮಿ ಪಕ್ಷ ತಾನಾಗಿಯೇ ಒದಗಿರುವ ಅವಕಾಶವನ್ನು ಕೈ ಚೆಲ್ಲಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು.

- ಬೇಳೂರು ರಾಘವ ಶೆಟ್ಟಿ
ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement