ನಮ್ಮ ದೇಹ, ನಮ್ಮ ಲೈಂಗಿಕ ಹಕ್ಕು
ಗಂಡು-ಹೆಣ್ಣು ಸಂತಾನಾಪೇಕ್ಷೆಯಿಂದ ಕೂಡುವುದು ಮಾತ್ರ ನೈಸರ್ಗಿಕ ಲೈಂಗಿಕ ಕ್ರಿಯೆ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿರುವುದು ಸರಿಯಲ್ಲ...
ಗಂಡು-ಹೆಣ್ಣು ಸಂತಾನಾಪೇಕ್ಷೆಯಿಂದ ಕೂಡುವುದು ಮಾತ್ರ ನೈಸರ್ಗಿಕ ಲೈಂಗಿಕ ಕ್ರಿಯೆ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿರುವುದು ಸರಿಯಲ್ಲ. ಎಷ್ಟೋ ಸಂಸಾರದಲ್ಲಿ ಮಕ್ಕಳಾಗುವುದಿಲ್ಲ, ಮಕ್ಕಳಾಗದ ನಂತರ ಸತಿ-ಪತಿ ಕೂಡುವುದಿಲ್ಲವೇ? ಹಾಗಾದರೆ ಇದೆಲ್ಲವನ್ನೂ ಅಸ್ವಾಭಾವಿಕ ಎಂದು ಪರಿಗಣಿಸಲು ಸಾಧ್ಯವೇ? ಇದು ಲೈಂಗಿಕ ಅಲ್ಪಸಂಖ್ಯಾತರ ನಾಯಕಿ ಅಕಾಯಿ ಪದ್ಮಶಾಲಿ ಅವರು ಸುಪ್ರೀಂ ಕೋರ್ಟ್ಗೆ ಎಸೆದಿರುವ ಪಾಟಿ ಸವಾಲು.
ಸುಪ್ರೀಂ ಕೋರ್ಟ್ ತೀರ್ಪನ್ನು ನೀವು ಹೇಗೆ ಪರಿಗಣಿಸುತ್ತೀರಿ ?
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದುಃಖಕರ. ಆಘಾತಕಾರಿ ಎಂದರೆ ಸಾಲದು. ಇದು ಲೈಂಗಿಕ ಅಲ್ಪಸಂಖ್ಯಾತರ ಚಳವಳಿಯ ಪಾಲಿಗೆ ಕರಾಳ ತೀರ್ಪು. ಭಾರತದಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮದು ಅತ್ಯಂತ ಚಿಕ್ಕ ಸಮುದಾಯ ಎಂದು ಸುಪ್ರೀಂ ಕೋರ್ಟ್ಪರಿಗಣಿಸಿದೆ. ಸಮಾನತೆ, ಆಯ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದ್ದ ಭಾರತದ ಸರ್ವೋಚ್ಛ ನ್ಯಾಯಾಲಯವೇ ನಮ್ಮ ಮಾನವ ಹಕ್ಕನ್ನು ಕಸಿದುಕೊಂಡಿರುವುದು ದುರದೃಷ್ಟಕರ.
ಹಾಗಾದರೆ ಮುಂದೇನು?
ಸಂವಿಧಾನ, ಸಂಸತ್ತು, ಕಾನೂನು, ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎನ್ನುತ್ತಾರೆ. ಹಾಗಾದರೆ ನಮಗೆ ಸಮಾನ ಗೌರವ ಎಲ್ಲಿದೆ ? ನಾವು ಈ ದೇಶದ ನಾಗರಿಕರೇ ಅಲ್ಲವೇ? ನಮಗೆ ನಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕೇ ಇಲ್ಲ ಎಂದು ನ್ಯಾಯಾಲಯ ಹೇಳುತ್ತಿದೆ. ಆ ರೀತಿ ನಡೆದುಕೊಳ್ಳುವುದನ್ನೇ ತಪ್ಪು ಎಂದು ಪರಿಗಣಿಸಿ ನಮ್ಮನ್ನು ಈ ದೇಶದ ಕ್ರಿಮಿನಲ್ಗಳು ಎಂದು ಪರಿಗಣಿಸಿದೆ. ಸರ್ವೋಚ್ಛ ನ್ಯಾಯಾಲಯವೇ ನಮ್ಮನ್ನು ಈ ರೀತಿ ಕಡೆಗಣಿಸಿದರೆ ನಾವು ಎಲ್ಲಿಗೆ ಹೋಗಬೇಕು? ಯಾರ ಮುಂದೆ ನಾವು ನಮ್ಮ ಅಳಲನ್ನು ತೋಡಿಕೊಳ್ಳಬೇಕು? ನಿಜಕ್ಕೂ ದೇಶದ ಲೈಂಗಿಕ ಅಲ್ಪಸಂಖ್ಯಾತರು ದಿಕ್ಕುಗೆಟ್ಟಿದ್ದಾರೆ.
ಹಾಗಾದರೆ ನಿಮ್ಮ ಪ್ರಕಾರ ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಯಾರು ? ನಿಮ್ಮ ಹೋರಾಟವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ?
ಸಲಿಂಗ ಕಾಮಿಗಳು, ದ್ವಿಲಿಂಗ ಕಾಮಿಗಳು, ಲೆಸ್ಬಿಯನ್ಸ್ಗಳು, ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಂಡವರು, ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡವರು ಲೈಂಗಿಕ ಅಲ್ಪಸಂಖ್ಯಾತರು ಎಂಬ ಛತ್ರದ ಕೆಳಗೆ ಬರುತ್ತಾರೆ. ಭಾರತ ದೇಶದಲ್ಲಿ ಧರ್ಮದ ಆಧಾರವಾಗಿ, ಶ್ರೀಮಂತಿಕೆ, ಮಡಿವಂತಿಕೆ ಆಧಾರದಲ್ಲಿ ಮಾತನಾಡುವಾಗ, ವ್ಯಕ್ತಿಯಾಗಿ ನಿನಗೆ ಏನು ಬೇಕಾಗಿದೆ ಎಂಬುದೂ ಮುಖ್ಯ. ವ್ಯಕ್ತಿಯ ಆಯ್ಕೆ ಯಾವುದು? ಆತನ ಅಭಿವ್ಯಕ್ತಿ ಏನು?ಎಂಬುದರ ಬಗ್ಗೆ ಬೆಲೆ ನೀಡದೇ ಇದ್ದರೆ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಸಿಕೊಳ್ಳುವುದು ದೂರದ ಮಾತಾಗುತ್ತದೆ.
ಹೋರಾಟ ಯಶ ಕಂಡಿದೆಯೇ?
ಹದಿನೈದು ವರ್ಷದ ಕೆಳಗಿನ ಸಾಮಾಜಿಕ ಸ್ಥಿತಿಯಲ್ಲಿ ನಮ್ಮ ಲಿಂಗತ್ವ ಹೋರಾಟವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯೇ ಇರಲಿಲ್ಲ. ಅಂದು ಇದೇ ಸಮಾಜದ ಜನರು ನಮ್ಮನ್ನು ಕಲ್ಲು ಹೊಡೆದು ಸಾಯಿಸುತ್ತಿದ್ದರು. ದಾರಿಯಲ್ಲಿ ಹೋಗುವಾಗ ಟೊಮೆಟೋ, ಮೊಟ್ಟೆಯಲ್ಲಿ ಹೊಡೆಯುತ್ತಿದ್ದರು. ಆದರೆ ಈಗ ಸಮಾಜ ಪರಿವರ್ತನೆಯಾಗಿದೆ. ನಮ್ಮನ್ನು ಕರೆದು ಮಾತಾಡಿಸುತ್ತಾರೆ. ಈ ಹೋರಾಟದಲ್ಲಿ ಸಂಗಮ ಸಂಸ್ಥೆಯ ಪ್ರಯತ್ನವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆ ಸಂಸ್ಥೆ ಇಲ್ಲದೇ ಇದಿದ್ದರೆ ಎಷ್ಟೋ ಲೈಂಗಿಕ ಅಲ್ಪಸಂಖ್ಯಾತರು ನೇಣಿಗೆ ಬಲಿಯಾಗುತ್ತಿದ್ದರು, ರೈಲು ಕಂಬಿಗೆ ತಲೆಕೊಡುತ್ತಿದ್ದರು. ಬದುಕು ಅಸಹನೀಯ ಎಂಬ ಸ್ಥಿತಿಯಲ್ಲಿ ನಾವಿದ್ದಾಗ ಯಾವ ರಾಜ್ಯಾಂಗ ನಮ್ಮ ಬಗ್ಗೆ ಮಾತನಾಡಬೇಕಿತ್ತೋ ಅದೇ ಸುಮ್ಮನಾಯಿತು. ಹೀಗಾಗಿ ನಾವು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋದೆವು. ಮನೆ ಸಿಗುವುದಿಲ್ಲ, ಕೆಲಸ ಸಿಗುವುದಿಲ್ಲ, ಶಿಕ್ಷಣವಿಲ್ಲ ಜತೆಗೆ ಸಮಾಜದ ನಿಂದನೆ ಇತ್ತು. ಮಾನ್ಯ ದೆಹಲಿ ಉಚ್ಚ ನ್ಯಾಯಾಲಯದ ಗಮನಕ್ಕೆ ನಾವು ಈ ವಿಚಾರವನ್ನು ತಂದೆವು. 2004ರಲ್ಲಿ ದೂರು ಸ್ವೀಕರಿಸಿ 2009ರಲ್ಲಿ ಐತಿಹಾಸಿಕ ತೀರ್ಪು ನೀಡಿತು. ಅದರ ಪ್ರಕಾರ ವಯಸ್ಕರು ತನಗೆ ಅನ್ವಯಿಸುವ ಖಾಸಗಿ ವಲಯದಲ್ಲಿ ಪರಸ್ಪರ ಒಪ್ಪಿಗೆ ಇದ್ದು ನಡೆಸುವ ಲೈಂಗಿಕತೆ ಶಿಕ್ಷಾರ್ಹವಲ್ಲ. ಅಂದರೆ ಇದರ ಪ್ರಕಾರ ವ್ಯಕ್ತಿಗೆ ಯಾವುದು ಒಪ್ಪಿಗೆಯಾಗುತ್ತದೋ ಅದು ಕಾನೂನು ಬದ್ಧ. ಅದು ಹೆಣ್ಣು-ಗಂಡು, ಹೆಣ್ಣು-ಹೆಣ್ಣು, ಗಂಡು-ಗಂಡು ಯಾವುದೇ ಇರಬಹುದು ಒಪ್ಪಿಗೆ ಮತ್ತು ಖಾಸಗಿತನ ಮುಖ್ಯವಾಗುತ್ತದೆ.
ಇದಕ್ಕೆ ಅಡ್ಡಗಾಲು ಹಾಕಿದ್ದು ಯಾರು ?
ಆದರೆ ಕೆಲ ಮೂಲಭೂತವಾದಿಗಳು ಇದನ್ನು ಪ್ರಶ್ನಿಸಿದರು. ಧಾರ್ಮಿಕ ಮುಖಂಡರೆಲ್ಲರೂ ನಮ್ಮ ವಿರೋಧಿಗಳಲ್ಲ. ಅವರಿಗೂ ನಮ್ಮ ಬಗ್ಗೆ ಸಹಾನುಭೂತಿ ಇದೆ. ಆದರೆ ಸ್ವಲ್ಪ ಮಂದಿ ನಮ್ಮ ವಿರೋಧಿ ಸ್ನೇಹಿತರು ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದರು. ಮಾರ್ಚ್13ರಂದೇ ವಿಚಾರಣೆ ಮುಗಿದಿತ್ತು. 11-12-2013 ತೀರ್ಪು ಬಂತು. ಅದು ದುಃಖಕರ ಮತ್ತು ಆಘಾತಕಾರಿ ಮಾತ್ರವಲ್ಲ ಲೈಂಗಿಕ ಅಲ್ಪಸಂಖ್ಯಾತರ ಚಳವಳಿಯ ಪಾಲಿಗೆ ಕಪ್ಪು ದಿನ. ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅನೇಕ ರಾಷ್ಟ್ರಗಳು ಈ ತೀರ್ಪನ್ನು ಖಂಡಿಸಿವೆ.
ನಮ್ಮ ಶಾಸಕಾಂಗ ಮತ್ತು ಜನಪ್ರತಿನಿಧಿಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ಪರಿಗಣಿಸಿವೆ ?
ಅಯ್ಯೋ, ಅವರ ಬಗ್ಗೆ ಮಾತನಾಡದಿರುವುದೇ ಉತ್ತಮ. ಎಷ್ಟು ಮಂತ್ರಿಗಳು ನಮ್ಮ ಬಗ್ಗೆ ಮಾತನಾಡುತ್ತಾರೆ ? ಎಷ್ಟು ಜನ ಶಾಸಕರು ನಮ್ಮ ಪರ ಧ್ವನಿ ಎತ್ತಿದ್ದಾರೆ ? ಯಾವ ಜನಪ್ರತಿನಿಧಿಗಳು ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ ? ಎಷ್ಟು ಜನರಿಗೆ ಲಿಂಗತ್ವದ ಬಗ್ಗೆ ಪರಿಜ್ಞಾನವಿದೆ ? ದುರಂತದ ವಿಚಾರ ಎಂದರೆ ದೆಹಲಿ ಉಚ್ಚ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಿದಾಗ ಜನಪ್ರತಿನಿಧಿಗಳು ಇದನ್ನು ಸ್ವಾಗತಿಸುವುದಕ್ಕೆ ಹಿಂಜರಿದರು. ಕಾನೂನು ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರನ್ನು ಹೊರತುಪಡಿಸಿ ರಾಷ್ಟ್ರದ ಎಲ್ಲ ಸಂಸದರು ಹಿಂದೆ-ಮುಂದೆ ನೋಡಿದರು. ಎಷ್ಟು ರಾಜಕಾರಣಿಗಳು ಲೈಂಗಿಕ ಅಲ್ಪಸಂಖ್ಯಾತರ ಜತೆ ಬೆರೆತು ನಿಮ್ಮ ಸಮಸ್ಯೆ ಏನೆಂದು ಕೇಳಿದ್ದಾರೆ ? ಯಾರೂ ಕೇಳಿಲ್ಲ.
ಆದರೂ ಕೇಂದ್ರದಲ್ಲಿ ಈ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆಯಲ್ಲ ?
ಹೌದು. ಈ ವಿಚಾರದಲ್ಲೂ ರಾಜಕಾರಣ ನಡೆಯುತ್ತಿದೆ. ಕಪಿಲ್ ಸಿಬಲ್, ಸುಶೀಲ್ಕುಮಾರ್ ಶಿಂದೆ, ಸೋನಿಯಾ ಗಾಂಧಿ ಮೊದಲಾದವರು ಸಪೋರ್ಟ್ ಮಾಡಿದರು. ಪುರೋಗಾಮಿ ರಾಜಕೀಯ ಪಕ್ಷಗಳು ಬಹಿರಂಗವಾಗಿ ಬೆಂಬಲ ನೀಡಿದ್ದರಿಂದ ಖುಷಿಯಾಯ್ತು. ಆದರೆ ಬಿಜೆಪಿ ತಮ್ಮ ದ್ವಂದ್ವ ನಿಲುವನ್ನು ಮಂಡನೆ ಮಾಡಿದ್ದರಿಂದ ಬೇಸರವಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿದ್ದಾರೆ. ಆದರೆ ಎಲ್ಲದಕ್ಕಿಂತ ಮೊದಲು ಅವರು ಲೈಂಗಿಕತೆ ಎಂದರೇನು ? ಲಿಂಗತ್ವ ಎಂದರೇನು ಎಂಬುದನ್ನು ಅರಿತುಕೊಳ್ಳಲಿ.
ರಾಜ್ಯ ಸರ್ಕಾರದಿಂದ ನೀವು ಬಯಸುವುದೇನು ?
ರಾಜ್ಯ ಸರ್ಕಾರ ನಮ್ಮ ಸಮುದಾಯದವರಿಗೆ ಪಿಂಚಣಿ ನೀಡುತ್ತಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುತ್ತಿದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ನಮ್ಮ ನಿಯೋಗ ನೀವು ನಮಗೆ ಏನನ್ನೂ ಕೊಡುವುದು ಬೇಡ. ಆದರೆ ನಮ್ಮನ್ನು ಗುರುತಿಸಿ. ನಮಗೆ ಉದ್ಯೋಗಾವಕಾಶ ಕೊಡಿ ಎಂದು ಮನವಿ ಮಾಡಿದ್ದೇವೆ. ನಮಗೊಂದು ಕಲ್ಯಾಣ ಮಂಡಳಿ ಮಾಡಿಕೊಡಿ. ಬೇರೇನು ಬೇಡ. ನಮ್ಮ ಕೆಲಸ ನಾವೇ ಮಾಡಿಕೊಳ್ಳುತ್ತೇವೆ.
ಮುಂದಿನ ಹೋರಾಟ ಏನು?
ನಮ್ಮ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನೆ ಅರ್ಜಿ ಹಾಕಿದೆ. ಇದರಿಂದ ಸಂತೋಷವಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನೇ ಆಧಾರವಾಗಿಸಿಕೊಂಡು ಜನ ನಮ್ಮನ್ನು ಅಪರಾಧಿಯಾಗಿ ಪರಿಗಣಿಸಿ ದೌರ್ಜನ್ಯ ಎಸಗುತ್ತಾರೆ. ನಾವು ನಿಮ್ಮಂತೆ ಮನುಷ್ಯರು. 2009ರಲ್ಲಿ ನಮ್ಮನ್ನು ಸ್ವತಂತ್ರ ಹಕ್ಕಿ ಎಂದು ಪರಿಗಣಿಸಿದ ನ್ಯಾಯಾಲಯ ಈಗ ಅಪರಾಧಿ ಎಂದು ಪರಿಗಣಿಸಿದರೆ ನ್ಯಾಯಾಲಯದ ಘನತೆ ಕುಂದುವುದಿಲ್ಲವೇ? ಮೈ ಬಾಡಿ ಮೈ ರೈಟ್, ಮೈ ಸೆಕ್ಸ್ ಮೈ ರೈಟ್, ಮೈ ಪ್ರೈವೆಸಿ ಮೈ ರೈಟ್, ಮೈ ಇಕ್ವಾಲಿಟಿ ಮೈ ರೈಟ್. ಇದರಲ್ಲಿ ಇನ್ನೊಬ್ಬರು ಮಧ್ಯಪ್ರವೇಶ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ.
- ರಾಘವೇಂದ್ರ ಭಟ್, ಕನ್ನಡಪ್ರಭ