ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಖಾಸಗಿ ಲಾಬಿಗೆ ಮಣಿದಿದ್ದು ಸರ್ಕಾರವಲ್ಲ, ವ್ಯವಸ್ಥಿತ ಸಂಚಿಗೆ ಪಾಲಕರು, ವಿದ್ಯಾರ್ಥಿಗಳು ಬಲಿಯಾಗಿದ್ದಾರೆ!

ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ-2006ರಿಂದ...

Mainashree
Updated On : 23 Dec 2013, 1:27 am

ಒಂದು ಕಾಯಿದೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಜನರನ್ನು ಹೇಗೆಲ್ಲ ದಾರಿ ತಪ್ಪಿಸಬಹುದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಕಾಯಿದೆಯಲ್ಲಿರದ ಅಂಶಗಳನ್ನು ಸೇರಿಸಿ ರಾಜಕೀಯ ಹಾಗೂ ಸಂಘಟನೆಯ ಹೋರಾಟಕ್ಕಾಗಿ ಕೆಲ ಜನ ಬೀದಿಗಿಳಿದರು. ಇದನ್ನೇ ನಂಬಿ ವಿದ್ಯಾರ್ಥಿಗಳು ಹಾಗೂ ಪಾಲಕರು ಧ್ವನಿಗೂಡಿಸಿದರು. ಮಾಧ್ಯಮಗಳು ಕೂಡ ಇದಕ್ಕೆ ಪ್ರಚೋದನೆ ನೀಡಿದವು. ಆದರೆ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ-2006ರಿಂದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಅನ್ಯಾಯವಾಗುತ್ತದೆಯೇ? ಅಥವಾ ಇವೆಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಿತ ಸಂಚೇ?
ಈ ಕಾಯಿದೆಯನ್ನು ಯಾವದೋ ರಾಜಕೀಯ ಪಕ್ಷದ ಸಭೆಯಲ್ಲಿ ರೂಪಿಸಲಾಗಿಲ್ಲ. 2006ರಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚಿಸಿ ರೂಪಿಸಲಾಗಿದೆ. ಶಿಕ್ಷಣ ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿದ ಡಿ.ಎಚ್.ಶಂಕರಮೂರ್ತಿ ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದರು. ಇಂದು ಕಾಯಿದೆಯನ್ನು ವಿರೋಧಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ 20-20 ದೋಸ್ತಿ ಸರ್ಕಾರ ನಡೆಸುತ್ತಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಈ ಕಾಯಿದೆ ರೂಪುಗೊಂಡಿತ್ತು. ಅಲ್ಲಿಯವರೆಗೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರದ ನಡುವೆ ಅನೈತಿಕ 'ಲಿವಿಂಗ್ ಟುಗೆದರ್‌' ಸಂಬಂಧ ಜಾರಿಯಲ್ಲಿತ್ತು. ಆದರೆ 2006ರಿಂದ ಸತತ 7 ವರ್ಷಗಳ ಕಾಲ ಲಿವಿಂಗ್ ಟುಗೆದರ್‌ನಲ್ಲಿಯೇ ಸಂಸಾರ ನಡೆಸಿದವು. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಲಾಭವಾಗಿಲ್ಲ. ಆದರೆ ಪ್ರತಿ ವರ್ಷ ನಾಲ್ಕು ಗೋಡೆಯ ಒಳಗೆ ನಡೆಯುವ 'ರಹಸ್ಯ' ಒಪ್ಪಂದ ವ್ಯವಹಾರದಲ್ಲಿ ಮುಕ್ತಾಯವಾಗಿದೆ. ಮಾರುಕಟ್ಟೆಯಲ್ಲಿ ನಡೆಯುವ ಕುರಿ ವ್ಯಾಪಾರದಂತೆ ಎಲ್ಲ ಚುಪ್ ಚಾಪ್ ಆಗಿಯೇ ಮುಗಿದಿದೆ.
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ಸಂಬಂಧವನ್ನು 'ಲಿವಿಂಗ್ ಟುಗೆದರ್‌'ಗೆ ಹೋಲಿಸಿದ್ದರು. 2006ರ ಕಾಯಿದೆಯನ್ನು ಏಕೆ ಜಾರಿಗೆ ತರುತ್ತಿಲ್ಲ ಎಂದು ಪ್ರಶ್ನಿಸಿದ್ದರು. 'ಲಿವಿಂಗ್ ಟುಗೆದರ್‌'ಗೆ ಈ ಬಾರಿ ಅವಕಾಶ ಕೊಡಿ, ಮುಂದಿನ ವರ್ಷದಿಂದ ಕಾಯಿದೆ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದಾಗ ಬಹುತೇಕ ಸದಸ್ಯರು ಸ್ವಾಗತಿಸಿದ್ದರು. ಆದರೆ ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಯಿದೆ ರೂಪಿಸಿದ ಪಕ್ಷದ ಮುಖಂಡರಿಗೆ ಜ್ಞಾನೋದಯವಾದಂತೆ ಆಡುತ್ತಿದ್ದಾರೆ. ಅಷ್ಟಕ್ಕೂ ಈ ಕಾಯಿದೆ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವರಾಗಿದ್ದ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದು ಜೀವನದುದ್ದಕ್ಕೂ ಹೆಸರು ಮಾಡಿದ್ದ ವಿ.ಎಸ್.ಆಚಾರ್ಯ ಅವರು ಸಾಕಷ್ಟು ಶ್ರಮ ಪಟ್ಟಿದ್ದರು. ಜತೆಜತೆಗೆ ನ್ಯಾ.ಪದ್ಮರಾಜ್ ಅವರ ಆಯೋಗವನ್ನು ಇದಕ್ಕಾಗಿಯೇ ರಚಿಸಿದ್ದರು.
ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆಯು ಬಡ ವಿದ್ಯಾರ್ಥಿಗಳಿಗೆ ಮರಣ ಶಯ್ಯೆಯಾಗುತ್ತಿದೆ ಎಂದು ಕೂಗುತ್ತಿರುವವರೆಲ್ಲ ಕಾಯಿದೆಯನ್ನು ಒಮ್ಮೆ ಕೂಲಂಕುಷವಾಗಿ ಓದಬೇಕು. ಖಾಸಗಿ ಕಾಲೇಜುಗಳ ಮಾಲೀಕರನ್ನು ತುಂಬಿಕೊಂಡಿರುವ ಕಾಂಗ್ರೆಸ್ ಪಕ್ಷ ಈ ಕಾಯಿದೆಯನ್ನು ಜಾರಿಗೆ ತರುತ್ತಿದೆಎಂಬ ಆಲೋಚನೆಯಿಂದ ವಿರೋಧಿಸಿದ್ದರೇ ಇದು ಈ ರಾಜ್ಯದ ವಿದ್ಯಾರ್ಥಿಗಳು ಹಾಗೂ ಪಾಲಕ ವಲಯಕ್ಕೆ ಮಾಡಿದ ಅನ್ಯಾಯವಾಗುತ್ತದೆ. ಕಾಯಿದೆ ಜಾರಿ ವಿಚಾರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಹಾಗೂ ಮೂಲ ಕಾಂಗ್ರೆಸ್‌ನ ಜಗಳವಿದೆ. ಡೀಮ್ಡ್ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹಾಗೂ ಅಲ್ಪಸಂಖ್ಯಾತ ಕಾಲೇಜುಗಳ ಲಾಬಿ ಹೊಂದಿರುವ ಕಾಂಗ್ರೆಸ್ ನಾಯಕರು ಇದನ್ನು ವ್ಯವಸ್ಥಿತವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಈ ಕಾಯಿದೆಯು ಡೀಮ್ಡ್ ಹಾಗೂ ಖಾಸಗಿ ವಿವಿಗಳ ಹಣ ಲೂಟಿಗೆ ನಿಯಂತ್ರಣ ಹೇರಲಿದೆ. ಮತ್ತೊಂದೆಡೆ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಮಾಡುತ್ತಿರುವ ಹಗಲು ದರೋಡೆಗೆ ಕಡಿವಾಣ ಬೀಳಲಿದೆ. ಇದೇ ಕಾರಣಕ್ಕೆ ಈ ಮೂರು ಶಿಕ್ಷಣ ಸಂಸ್ಥೆಗಳು ಕಾಯಿದೆಗೆ ವಿರೋಧವ್ಯಕ್ತಪಡಿಸಿವೆ ಹಾಗೂ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಹವಾಲುಗಳನ್ನು ಸರ್ಕಾರದ ಮುಂದಿಟ್ಟಿದ್ದವು.
ಆದರೆ ಈಗ ಎಲ್ಲರೂ ವ್ಯವಸ್ಥಿತವಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ.
ಈ ಕಾಯಿದೆಯ ಜಾರಿಯಿಂದ ಕಾಲೇಜಿನ ಗುಣಮಟ್ಟ ಆಧರಿಸಿ ಶುಲ್ಕ ನಿಗದಿಯಾಗುತ್ತದೆ. ಇದರರ್ಥ ಶುಲ್ಕ ಮಿತಿ ಮೀರುತ್ತದೆಯೆಂದಲ್ಲ. ಇಂದು ಪ್ರತಿ ಕಾಲೇಜುಗಳು ಪಡೆಯುತ್ತಿರುವ ಸರ್ಕಾರಿ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕ ಸೇರಿಸಿ ಆಗುವ ಒಟ್ಟು ಮೊತ್ತದ ಆಸುಪಾಸಿನಲ್ಲಿರುತ್ತದೆ. ಆದರೆ ಪದ್ಮರಾಜ್ ಸಮಿತಿಯ ವರದಿಯನ್ನು ಬಲ್ಲವರ ಪ್ರಕಾರ ರಾಜ್ಯದ 50 ಎಂಜಿನಿಯರಿಂಗ್ ಹಾಗೂ ಎಲ್ಲ ವೈದ್ಯ ಕಾಲೇಜುಗಳ ಶುಲ್ಕವು ಈಗಿನ ಸರ್ಕಾರಿ ಶುಲ್ಕಕ್ಕಿಂತ ಸ್ವಲ್ಪ ಹೆಚ್ಚಾಗಲಿದೆ. ಉಳಿದ 150ಕ್ಕೂ ಅಧಿಕ ಕಾಲೇಜುಗಳ ಶುಲ್ಕ ಸರ್ಕಾರಿ ಶುಲ್ಕದಷ್ಟೇ ಇರುತ್ತದೆ ಅಥವಾ ಅದಕ್ಕಿಂತಲೂ ಕಡಿಮೆಯಾಗುತ್ತದೆ. ಇದರಿಂದ ರಾಜ್ಯದಲ್ಲಿನ ಅತಿ ನಿಕೃಷ್ಟ ಮೂಲಭೂತ ಸೌಕರ್ಯ ಹೊಂದಿರುವ ಕಾಲೇಜುಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ. ಇದೇ ಭಯವು ಹೆಚ್ಚಿನ ಆಡಳಿತ ಮಂಡಳಿಗಳಿಗೆ ಕಾಡುತ್ತಿದೆ. ಅದಕ್ಕೆ ಕೆಲವರು ಆಂಧ್ರದ ಪರಿಸ್ಥಿತಿಯನ್ನು ಉದಾಹರಿಸುತ್ತಾರೆ. ಆದರೆ ಆಂಧ್ರದಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಮಚ್ಚಲು ಕಾರಣವಾಗಿದ್ದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ಶುಲ್ಕ ಕೊಡುತ್ತದೆ ಎಂದು ಘೋಷಿಸಿದ್ದರಿಂದ ನಾಯಿಕೊಡೆಗಳಂತೆ ಕಾಲೇಜುಗಳು ಪ್ರಾರಂಭವಾಗಿದ್ದವು. ಇದು ನಿಂತಕೂಡಲೇ ಕಾಲೇಜುಗಳು ಕೂಡ ಶಟರ್ ಎಳೆದವು. ಇದೆಲ್ಲದಕ್ಕಿಂತ ಹೆಚ್ಚಾಗಿ ಕಾಯಿದೆ ಜಾರಿಗೆ ಬಂದಿದ್ದರೇ ಶೇ.50ರಷ್ಟು ಆಡಳಿತ ಮಂಡಳಿ ಹಾಗೂ ಕಾಮೆಡ್-ಕೆ ಮೂಲಕ ಸೀಟು ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಅದರ ಅರ್ಧಕ್ಕಿಂತಲೂ ಕಡಿಮೆ ಶುಲ್ಕ ನೀಡಿ ಪ್ರವೇಶ ಪಡೆಯುವ ಭಾಗ್ಯ ಸಿಗುತ್ತಿತ್ತು. ಈಗಾಗಲೇ ಹೆಚ್ಚುವರಿ ಶುಲ್ಕದ ನೆಪದಲ್ಲಿ ವಿದ್ಯಾರ್ಥಿಗಳು ಕಟ್ಟುತ್ತಿರುವ ಶುಲ್ಕವನ್ನೇ ಶೇ.92.50 ವಿದ್ಯಾರ್ಥಿಗಳು ಪಡೆಯುವುದು ಲೇಸೋ ಅಥವಾ ಹೆಸರಿಗೆ ಮಾತ್ರ ಸರ್ಕಾರಿ ಶುಲ್ಕ ಎಂದು ಕೇವಲ ಶೇ.40ರಿಂದ ಶೇ.50ರಷ್ಟು ವಿದ್ಯಾರ್ಥಿಗಳು ಪಡೆಯುವುದು ಉತ್ತಮವೋ?
ಎರಡನೇ ರಗಳೆಯೆಂದರೆ ರಾಜ್ಯದಲ್ಲಿ ಅನಿವಾಸಿ ಭಾರತೀಯರ ಕೋಟಾ ಸಿಗುತ್ತಿರುವುದು ಬೆರಳೆಣಿಕೆಯ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ. ಈ ಕಾಯಿದೆಯಲ್ಲಿ ಶಿಕ್ಷಣ ಸಂಸ್ಥೆಗಳು ದುಡ್ಡು ಮಾಡಿಕೊಳ್ಳಲು ಅವಕಾಶವಿರುವುದು ಎನ್‌ಆರ್‌ಐ ಕೋಟಾದಲ್ಲಿ ಮಾತ್ರ. ಶೇ.80ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ ಈ ಲಾಭವೇ ದೊರಕದಿರುವುದರಿಂದ ಹೆಚ್ಚಿನ ಶುಲ್ಕ ವಸೂಲಿಯ ಅವಕಾಶವೇ ಇರುವುದಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ಈ ಕಾಯಿದೆಗೆ ವಿರೋಧ ಬರಲು ವ್ಯವಸ್ಥಿತ ಸಂಚು ರೂಪಿಸಿದವರು ಡೀಮ್ಡ್, ಖಾಸಗಿ ವಿವಿ ಹಾಗೂ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಆಡಳಿತ ಮಂಡಳಿಯವರು. ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಕಾಲೇಜು ಕೂಡ ಡೀಮ್ಡ್ ವಿವಿ ಎಂದು ಪರಿಗಣಿಸಲ್ಪಟ್ಟಿದೆ. ಈ ಕಾಲೇಜು ಹೈದ್ರಾಬಾದ್‌ನ ವಿವಿಯ ಅಡಿಯಲ್ಲಿ ಬರುತ್ತದೆ ಎನ್ನುವುದು ತಿಳಿದಿರಲಿ. ಇವರು ರಾಜ್ಯ ಸರ್ಕಾರಕ್ಕೆ ನೀಡುತ್ತಿದ್ದ ಸೀಟಿನ ಪ್ರಮಾಣ ಬೆರಳೆಣಿಕೆಯಷ್ಟು. ಆದರೆ 2006 ಕಾಯಿದೆ ಜಾರಿಗೆ ಬಂದಿದ್ದರೆ ಇವೆಲ್ಲ ಕಾಲೇಜುಗಳು ಶೇ.92.5 ಸೀಟುಗಳಿಗೆ ಏಕರೂಪ ಶುಲ್ಕ ಪಡೆಯಬೇಕಿತ್ತು. ಇನ್ನು ಹಿಂದಿನ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರಿಗೆ ದುಂಬಾಲು ಬಿದ್ದು ಕೆಲವು ಖಾಸಗಿ ಕಾಲೇಜುಗಳು ಅನುಮತಿಗಿಟ್ಟಿಸಿಕೊಂಡಿವೆ. ಈ ಕಾಯಿದೆಯು ಈ ಕಾಲೇಜುಗಳ ಹಿತ ಕಾಪಾಡುತ್ತಿರಲಿಲ್ಲ. ಇದೇ ಶಕ್ತಿಗಳು ಸರ್ಕಾರ ಖಾಸಗಿ ಕಾಲೇಜುಗಳ ಪರವಾಗಿದೆ ಎಂಬ ಸುದ್ದಿ ಹಬ್ಬಿಸಿ ಮಜಾ ನೋಡುತ್ತಿವೆ. ಇವರು ಹೇಳುತ್ತಿರುವುದೆಲ್ಲ ನಿಜ ಎಂದು ವಿದ್ಯಾರ್ಥಿ ಸಂಘಟನೆಗಳು ಕುಣಿಯುತ್ತಿವೆ. ಬೀದಿಯಲ್ಲಿ ಹೋಗುವವರ ಬಳಿ ಕಾಯಿದೆ ಬಗ್ಗೆ ಕೇಳುವ ಬದಲು ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಕೇಳಿನೋಡಿ, ನಿಜಾಂಶ ತಿಳಿಯುತ್ತದೆ.
ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 96 ಸಾವಿರ ಎಂಜಿನಿಯರಿಂಗ್, ವೈದ್ಯ ಹಾಗೂ ದಂತವೈದ್ಯ ಸೇರಿಸಿ 8100 ಸೀಟುಗಳು ಸೀಟುಗಳು ಲಭ್ಯವಿದ್ದವು. ಇದರಲ್ಲಿ ಸರ್ಕಾರಕ್ಕೆ ಸಿಕ್ಕಿದ್ದು ಕೇವಲ 46 ಸಾವಿರ ಎಂಜಿನಿಯರ್ ಹಾಗೂ ಮತ್ತೊಂದು 3 ಸಾವಿರ ವೈದ್ಯ ಮತ್ತು ದಂತ ವೈದ್ಯ ಸೀಟುಗಳ ಮಾತ್ರ. ಈ ಕಾಯಿದೆಯಿಂದ ಸುಮಾರು 80 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಸೀಟುಗಳು, 5 ಸಾವಿರಕ್ಕೂ ಅಧಿಕ ವೈದ್ಯ ಮತ್ತು ದಂತವೈದ್ಯ ಸೀಟುಗಳು ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಅಷ್ಟಕ್ಕೂ ಖಾಸಗಿ ಹಾಗೂ ಸರ್ಕಾರ ಎಂಬ ಬೇಧವೇ ಇರುವುದಿಲ್ಲ. ಏಕೆಂದರೆ ಎಲ್ಲರಿಗೂ ಸಮಾನ ಶುಲ್ಕವಾಗುತ್ತದೆ. ಒಂದೇ ಪ್ರವೇಶ ಪರೀಕ್ಷೆ ಮಾಡಲು ಕಾಯಿದೆಯಲ್ಲಿ ಅವಕಾಶವಿದೆ.
ಈ ಕಾಯಿದೆ ಜಾರಿಗೆ ಬಂದರೆ 100 ಸೀಟುಗಳಿದ್ದರೆ 50 ಸೀಟುಗಳು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತವೆ. ಇನ್ನು 50 ಸೀಟುಗಳಲ್ಲಿ 7ರಿಂದ 8 ಸೀಟುಗಳು ಅನಿವಾಸಿ ಭಾರತೀಯರ ಪಾಲಾಗುತ್ತವೆ. ಅಂದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 42ರಿಂದ 43 ಸೀಟುಗಳು ದೊರೆಯುತ್ತವೆ. ಆದರೆ ಕಾಯಿದೆ ಓದದೇ ಬಾಯಿಗೆ ಬಂದಂತೆ ಕೂಗುತ್ತಿರುವವರು ಈ ಸೀಟುಗಳು ದೇಶದ ಎಲ್ಲ ವಿದ್ಯಾರ್ಥಿಗಳಿಗೂ ಲಭ್ಯವಾಗುತ್ತವೆ, ಕರ್ನಾಟಕದ ವಿದ್ಯಾರ್ಥಿಗಳು ಅವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಯಿದೆಯಲ್ಲಿ ಅಂತಹ ಅಸಂಬದ್ಧಗಳನ್ನು ಎಲ್ಲಿಯೂ ಹೇಳಲಾಗಿಲ್ಲ.  ಅನಿವಾಸಿ ಭಾರತೀಯ ಕೋಟಾ ಹೊರತುಪಡಿಸಿ ಮತ್ಯಾವುದೇ ರೂಪದಿಂದ ಬೇರೆ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದ ಕಾಲೇಜಿಗೆ ವಕ್ಕರಿಸಿ ಕುಲಗೆಡಿಸುವ ಪ್ರಸಂಗ ಎದುರಾಗುವುದಿಲ್ಲ. ಅನಿವಾಸಿ ಭಾರತೀಯರ ಶೇ.7.50ರಷ್ಟು ಸೀಟು ಹೊರತುಪಡಿಸಿ ಉಳಿದೆಲ್ಲ ಸೀಟುಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಲಿದೆ. ಈ ಸೀಟುಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇನ್ನು ಪ್ರತಿವರ್ಷ ಪ್ರಸಕ್ತ ವ್ಯವಸ್ಥೆಯ ದುರುಪಯೋಗ ಪಡೆದು 300ಕ್ಕೂ ಅಧಿಕ ವೈದ್ಯ ಸೀಟುಗಳನ್ನು ಧಾರ್ಮಿಕ ಹಾಗೂ ಅಲ್ಪಸಂಖ್ಯಾತ ಕಾಲೇಜುಗಳು ನುಂಗುತ್ತಿವೆ. ಅಲ್ಪಸಂಖ್ಯಾತ ಮಾನ್ಯತೆ ಪಡೆದ ಕಾಲೇಜುಗಳು ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದವು. ಆದರೆ ಈ ಕಾಯಿದೆಯ ಪ್ರಕಾರ ಶೇ.66ರಷ್ಟು ಸೀಟುಗಳನ್ನು ಕಡ್ಡಾಯವಾಗಿ ರಾಜ್ಯದ ಅಲ್ಪಸಂಖ್ಯಾತರಿಗೆ ಮಾತ್ರ ನೀಡಬೇಕು. ಇಲ್ಲವಾದಲ್ಲಿ ಆ ಸೀಟುಗಳು ಸಾಮಾನ್ಯ ಸೀಟುಗಳಾಗಿ ಪರಿವರ್ತನೆಗೊಳ್ಳುತ್ತವೆ.
ಕಳೆದ ಆಗಸ್ಟ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳ ಸೀಟು ಹಂಚಿಕೆ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ. ವೈದ್ಯ ಕೋರ್ಸ್‌ನಲ್ಲಿ ಶೇ.40, ದಂತ ವೈದ್ಯ ಶೇ.35 ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ.45 ಸೀಟುಗಳು ಮಾತ್ರ ಸರ್ಕಾರಿ ಸೀಟುಗಳಾಗಿದ್ದವು. ಇದನ್ನು ಹೊರತುಪಡಿಸಿ ಪ್ರತಿ ಕಾಲೇಜಿನಲ್ಲೂ ಶೇ.5ರಷ್ಟು ಸೀಟುಗಳನ್ನು ಸೂಪರ್ ನ್ಯೂಮರರಿ ಕೋಟಾದಡಿ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ವೈದ್ಯದಲ್ಲಿ ಶೇ.60, ದಂತವೈದ್ಯದಲ್ಲಿ ಶೇ.65 ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ.50ರಷ್ಟು ಸೀಟುಗಳು ಆಡಳಿತ ಮಂಡಳಿಗಳ ಪಾಲಾಗುತ್ತಿದ್ದವು. ಇದರಲ್ಲಿ ಶೇ.25ರಷ್ಟು ಸೀಟುಗಳಿಗೆ ಕಾಮೆಡ್-ಕೆ ಪರೀಕ್ಷೆ ನಡೆಸುತ್ತಿತ್ತು. ಇದಕ್ಕೆ 1.25 ಲಕ್ಷ ದಿಂದ 2.50 ಲಕ್ಷ ಶುಲ್ಕ ವಸೂಲಿ ಮಾಡುತ್ತಿದ್ದರು. ಇನ್ನುಳಿದ ಶೇ.25ಕ್ಕೂ ಅಧಿಕ ಆಡಳಿತ ಮಂಡಳಿಗಳ ಸೀಟುಗಳಿಗೆ ವಿದ್ಯಾರ್ಥಿಗಳಿಂದ ಕಿತ್ತುಕೊಳ್ಳುವ ದುಡ್ಡಿಗೆ ಲೆಕ್ಕವೇ ಇಲ್ಲ. ಕಾಮೆಡ್-ಕೆಯಲ್ಲಿ ಉಳಿಯುವ ಸೀಟುಗಳು ಕೂಡ ಆಡಳಿತ ಮಂಡಳಿ ಕೋಟಾದಡಿ ಬಿಕರಿಯಾಗುತ್ತವೆ. ಇದೇ ಕಾರಣದಿಂದ ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಸೀಟ್ ಬ್ಲಾಕಿಂಗ್ ದಂದೆ ನಡೆಯುತ್ತಿದೆ. ಈ ಕಾಯಿದೆ ಪ್ರಕಾರ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶವೇ ಸಿಗುವುದಿಲ್ಲ. ಇದರಿಂದ ಬಿಹಾರದ ಕಾಂಗ್ರೆಸ್ ಮುಖಂಡ ರಾಜ್ಯದ ರಾಜಧಾನಿಯ ಎಂ.ಜಿ.ರಸ್ತೆಯಲ್ಲಿ ಕಚೇರಿಯನ್ನಿಟ್ಟು ದಂದೆ ನಡೆಸುತ್ತಿರುವುದಕ್ಕೆ ಆಸ್ಪದವೇ ಇರುವುದಿಲ್ಲ. ಏಕೆಂದರೆ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಇಲ್ಲಿಗೆ ಕುರಿಮಂದೆಗಳಂತೆ ತಂದು ಪರೀಕ್ಷೆ ಬರೆಸಿ ಸೀಟ್‌ಗಳನ್ನು ಬ್ಲಾಕ್ ಮಾಡಿಸಿ ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ ಆ ಸೀಟುಗಳನ್ನು ಆಡಳಿತ ಮಂಡಳಿಗೆ ಶರಣು ಮಾಡಿ 5 ಲಕ್ಷ ಪಡೆದು ವಾಪಸ್ ಆಗುತ್ತಿದ್ದರು. ರಾಜ್ಯ ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವವರು ಕೂಡ ಈ ಲಾಬಿಯ ಭಾಗವಾಗಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 1.50ಲಕ್ಷ ಹಾಗೂ ವೈದ್ಯ ಕೋರ್ಸ್‌ಗಳಿಗೆ 3 ಲಕ್ಷಕ್ಕೂ ಅಧಿಕ ಶುಲ್ಕವಾಗುತ್ತದೆ ಎಂದೆಲ್ಲ ಬೀದಿಗಿಳಿದರು. ಆದರೆ ಇದು ನಿಜವಾಗಿಯೂ ಸಂಭವಿಸುತ್ತದೆಯೇ ಎಂದೂ ಕಿಂಚಿತ್ ಕೂಡ ಯೋಚಿಸುವ ಗೋಜಿಗೆ ಹೋಗಲಿಲ್ಲ. ಇದೇ ಕಾಯಿದೆ ಜಾರಿಗಾಗಿ 2010ರಲ್ಲಿ ನ್ಯಾ.ಪದ್ಮರಾಜ್ ಅವರ ಸಮಿತಿ ವರದಿ ನೀಡಿತ್ತು. ಈಗ ನೇಮಕವಾಗಿದ್ದ ನ್ಯಾ.ಅಜಿತ್ ಗುಂಜಾಳ್ ಅವರ ಸಮಿತಿಯೂ ಇದೇ ವ್ಯಾಪ್ತಿ ಹೊಂದಿದೆ. ಅದರ ಪ್ರಕಾರ ಬೆಂಗಳೂರಿನ ಆರ್.ವಿ.ಕಾಲೇಜಿಗೆ 63 ಸಾವಿರ ಶುಲ್ಕ ನಿಗದಿಯಾಗಿತ್ತು. ಈಗ ಸಿಇಟಿ ಪ್ರಕಾರ ಸೀಟು ಪಡೆದ ಪ್ರತಿ ವಿದ್ಯಾರ್ಥಿಯು ಸರ್ಕಾರದ ಶುಲ್ಕದ ಪ್ರಕಾರ 41,500 ತುಂಬುತ್ತಿದ್ದಾನೆ. ಇದನ್ನು ಹೊರತುಪಡಿಸಿ ಪ್ರತಿ ಕಾಲೇಜುಗಳು ಹೆಚ್ಚುವರಿ ಶುಲ್ಕದ ನೆಪದಲ್ಲಿ 10 ಸಾವಿರದಿಂದ 60 ಸಾವಿರದವರೆಗೂ ಪಾಲಕರಿಂದ ಹಣ ಕಿತ್ತುಕೊಂಡಿದ್ದಾರೆ. ಇನ್ನು ವೈದ್ಯಕೀಯ ಕಾಲೇಜುಗಳಲ್ಲಿ ಇದು 50 ಸಾವಿರದಿಂದ 1.50ಲಕ್ಷದವರೆಗೂ ಹೋಗಿದೆ. ಬೀದಿಯಲ್ಲಿ ನಿಂತು ಒದರುತ್ತಿರುವವರಿಗೆ ಈ ಶುಲ್ಕದ ಬಗ್ಗೆ ತಿಳಿದೇ ಇಲ್ಲ. ಸತ್ಯ ತಿಳಿದಿರುವ ಹಿಂದಿನ ಉನ್ನತ ಶಿಕ್ಷಣ ಸಚಿವರು ಈ ಹೆಚ್ಚುವರಿ ಶುಲ್ಕವನ್ನು ನಿಯಂತ್ರಿಸುವ ಕೆಲಸಕ್ಕೆ ಕೈ ಹಾಕಲೇ ಇಲ್ಲ. 2006ರ ಕಾಯಿದೆ ಜಾರಿಯೊಂದೇ ಇದಕ್ಕೆಲ್ಲ ಬ್ರಹ್ಮಾಸ್ತ್ರ ಎಂದು ಹಿಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರೇ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಅತಿ ಹೆಚ್ಚು ಖಾಸಗಿ ವಿವಿಗಳಿಗೆ ಅನುಮತಿ ಸಿಕ್ಕಿದ್ದು ಇವರ ಕಾಲಾವಧಿಯಲ್ಲಿಯೇ.
ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಇಂದು ವೃತ್ತಿ ಶಿಕ್ಷಣ ಕೋರ್ಸ್‌ಗಳಿಗಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಸಾಮಾನ್ಯ ಡಿಗ್ರಿ ಕೋರ್ಸ್‌ಗಳಿವೆ. ಅಲ್ಲಿ ವಿದ್ಯಾರ್ಥಿಗಳು ಶೇ.13ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದು ಓದಿನ ಪ್ರಾರಂಭದ ದಿನದಿಂದಲೇ ಸಾಲ ಮತ್ತು ಬಡ್ಡಿ ಕಟ್ಟುವ ಸ್ಥಿತಿಯಿದೆ. ಆದರೆ ಈ ವೃತ್ತಿಪರ ವಿದ್ಯಾರ್ಥಿಗಳಿಗೆ ಓದುವ ಸಂದರ್ಭದಲ್ಲಿ ಶೂನ್ಯ ಬಡ್ಡಿದರ ಹಾಗೂ ನಂತರದ ದಿನಗಳಲ್ಲಿ ಶೇ.4ರ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ದೊರೆಯುತ್ತದೆ. ಶಿಕ್ಷಣವೆಂದರೆ ಎಂಜಿನಿಯರಿಂಗ್, ವೈದ್ಯ ಅಥವಾ ದಂತವೈದ್ಯ ಎಂಬ ಹುಚ್ಚನ್ನು ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ.

- ರಾಜೀವ್ ಹೆಗಡೆ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement