ಕನ್ನಡದ ಹಣತೆ ಜಿಎಸ್ಸೆಸ್
ಜಿ.ಎಸ್.ಶಿವರುದ್ರಪ್ಪನವರು ಕನ್ನಡದ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕಕ್ಕೆ...
ತಾವು ವಹಿಸಿಕೊಂಡ ಯಾವುದೇ ಗುರುತರ ಜವಾಬ್ದಾರಿಯನ್ನೂ ಅತ್ಯುತ್ತಮ ಮಟ್ಟದಲ್ಲಿ ನಿರ್ವಹಿಸುವುದು ಅವರ ಜಾಯಮಾನ. ಬೆಂಗಳೂರು ವಿವಿಯ ಕನ್ನಡ ವಿಭಾಗ ಮುಖ್ಯಸ್ಥರಾಗಿ ಅದನ್ನು ಕನ್ನಡ ಸಾರಸ್ವತಲೋಕದ ಒಂದು ಆಧುನಿಕ ಅನುಭವ ಮಂಟಪವನ್ನಾಗಿ ಪರಿವರ್ತಿಸಿದ್ದು ಅವರ ಹೆಗ್ಗಳಿಕೆ. ಅಲ್ಲಿಂದ ನಿವೃತ್ತರಾದ ಬಳಿಕ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅವರು ಹಮ್ಮಿಕೊಂಡ ವಿಚಾರ ಸಂಕಿರಣ, ಸಾಹಿತ್ಯ ಸಮಾವೇಶಗಳು ಹಾಗೂ ಹೊರತಂದ ಶತಮಾನದ ಸಾಹಿತ್ಯ ಸಂಪುಟಗಳು ಇತರ ಅಕಾಡೆಮಿಗಳಿಗೆ ಮಾದರಿ ಎನಿಸಿದವು.
ಜಿ.ಎಸ್.ಶಿವರುದ್ರಪ್ಪನವರು ಕನ್ನಡದ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತರಾದ ಹಿರಿಯ ಜೀವ, ಧೀಮಂತ ಚೇತನ. ತಮ್ಮ ಗುರುಗಳಾದ ಕುವೆಂಪು ಅವರ ನಂತರ ಕನ್ನಡದ ಸಮರ್ಥ ಸಾಂಸ್ಕೃತಿಕ ನಾಯಕರೆಂದು ಪರಿಗಣಿತರಾದವರು. ಇದಕ್ಕೆ ಅವರ ಸಾಹಿತ್ಯಿಕ ಸಾಧನೆಯಷ್ಟೇ, ಅವರು ಅದ್ವಿತೀಯವಾಗಿ ನಿರ್ವಹಿಸಿದ ಮಹತ್ವದ ಕನ್ನಡದ ಕೆಲಸಕಾರ್ಯಗಳು ಕಾರಣವೆಂಬುದು ಎಲ್ಲರೂ ಬಲ್ಲ ಸಂಗತಿ. ಹಾಗೆಯೇ, ಕೋಮು ಸೌಹಾರ್ದತೆಗೆ ಮತ್ತು ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಅವರು ಪ್ರಕಟಿಸಿದ ದಿಟ್ಟ ಪ್ರತಿಭಟನೆ, ಅದಕ್ಕಾಗಿ ಅವರು ಅನುಭವಿಸಬೇಕಾಗಿ ಬಂದ ಮಾನಸಿಕ ಹಿಂಸೆ, ಬೆದರಿಕೆ, ಬಹಿಷ್ಕಾರ ಇತ್ಯಾದಿಗಳೂ ಸಹ ಸರ್ವವಿದಿತ ಸಂಗತಿಗಳೇ. ಕನ್ನಡದ ಸ್ಥಾನಮಾನಗಳಿಗೆ ಚ್ಯುತಿ ಬಂದಾಗಲಂತೂ ಅವರು ಉಗ್ರ ನರಸಿಂಹರೇ ಸೈ. ಆದರೆ ಆಳದಲ್ಲಿ ಅತ್ಯಂತ ಸಾತ್ವಿಕ ವ್ಯಕ್ತಿ, ಮುಕ್ತ ಮೃದು ಮನಸ್ಸು.
ಜಿಯೆಸ್ಸೆಸ್ ಅವರನ್ನು ನಾನು ಮೊದಲ ಬಾರಿ ಕಂಡದ್ದು 1965ರಲ್ಲಿ. ಅವರು ಅದೇ ತಾನೇ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯ ಬಿಟ್ಟು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಮುಖ್ಯಸ್ಥರಾಗಿ ಬಂದಿದ್ದರು. ನಾನಾಗ ಬೆಂಗಳೂರಲ್ಲಿ ಬಿ.ಎ. ಓದುತ್ತಿದ್ದೆ. ಅದೊಂದು ದಿನ ಲಂಕೇಶ್, ಜಿಯೆಸ್ಸೆಸ್ ಅವರನ್ನು ಕಾಣಲು ಹೋಗುವಾಗ ತನನ್ನನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು. ಬಿಳಿ ಜುಬ್ಬ, ಕಚ್ಚೆಪಂಚೆ ಧರಿಸಿದ್ದ ಜಿಯೆಸ್ಸೆಸ್ ಅವರ ಕಾವ್ಯ ಅಥವಾ ವಿಮರ್ಶೆಯ ಬಗ್ಗೆ ಆಗ ನನಗೆ ಹೆಚ್ಚಿಗೇನೂ ತಿಳಿದಿರಲಿಲ್ಲ. ಅದು ನವ್ಯದ ವಿಜೃಂಭಣೆಯ ಕಾಲವಾಗಿದ್ದುದರಿಂದ, ಜಿಯೆಸ್ಸೆಸ್ ಅಥವಾ ಕಣವಿ ಅವರಿರಲಿ, ಸ್ವತಃ ಕುವೆಂಪು ಅವರ ಕಾವ್ಯದ ಬಗ್ಗೆ ಸಹ ನನ್ನಂಥವರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಮುಕ್ತ ವಾತಾವರಣ ಆಗ ಇರಲಿಲ್ಲ. ತದನಂತರದ ವರ್ಷಗಳಲ್ಲಿ, ಜಿಯೆಸ್ಸೆಸ್ ಪ್ರತಿವರ್ಷ ತಮ್ಮ ಕನ್ನಡ ವಿಭಾಗದ ಮೂಲಕ ಏರ್ಪಡಿಸುತ್ತಿದ್ದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಗಳಲ್ಲಿ ನಾನು ಹಲವು ಸಲ ಭಾಗವಹಿಸಿದ್ದೆ. ಕ್ರಮೇಣ ಜಿಯೆಸ್ಸೆಸ್ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಮಹತ್ವದ ಅರಿವು ನನಗಾಗಿ, ಅವರಲ್ಲಿ ನನಗೆ ಗೌರವಾದರಗಳು ಹೆಚ್ಚಾದವು.
ಜಿಯೆಸ್ಸೆಸ್ ಅವರು ವ್ಯಕ್ತಿಯಾಗಿ ನನಗೆ ಹತ್ತಿರಾದದ್ದು ನನ್ನ ಪರಮಾಪ್ತ ಮಿತ್ರ, ಕವಿ ಎಚ್.ಎಸ್.ವೆಂಕಟೇಶಮೂರ್ತಿಯ ಮೂಲಕ. ಮೂರ್ತಿಗೆ ತನ್ನ ಗುರು ಜಿಯೆಸ್ಸೆಸ್ ಅವರ ಬಗ್ಗೆ ಅಪಾರ ಗೌರವ, ಪ್ರೀತಿ. ಅವನ ಸಿಂದಾಬಾದನ ಆತ್ಮಕಥೆ ಕವನ ಸಂಕಲನಕ್ಕೆ ಜಿಯೆಸ್ಸೆಸ್ ಬರೆದಿರುವ ಸೊಗಸಾದ, ಮೌಲಿಕವಾದ ಮುನ್ನುಡಿ ನಿಜಕ್ಕೂ ಅವರ ಬಗ್ಗೆ ನನ್ನ ಕಣ್ತೆರೆಸಿತು. ಅಲ್ಲಿಂದಾಚೆಗೆ ಅವರ ಕಾವ್ಯ, ವಿಮರ್ಶೆ, ಮೀಮಾಂಸೆಗಳನ್ನು ನಾನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡಿದೆ. ಅಲ್ಲಿಂದ ಮುಂದೆ ಸುಗಮ ಸಂಗೀತ ಜಿಯೆಸ್ಸೆಸ್ ಅವರನ್ನು ನನಗೆ ಇನ್ನಷ್ಟು ಹತ್ತಿರವಾಗಿಸಿತು.
ಸುಗಮ ಸಂಗೀತದ ದಿಗ್ಗಜ ಸಿ.ಅಶ್ವತ್ಥ್ 1986ರಲ್ಲಿ ಜಿಯೆಸ್ಸೆಸ್ ಅವರ ಎಂಟು ಭಾವಗೀತೆಗಳ ಚೈತ್ರ ಎಂಬ ಧ್ವನಿಸುರುಳಿಯನ್ನು ಹೊರತರಲು ಮುಂದಾದರು. ಅದಕ್ಕೆ ಸ್ವರಸಂಯೋಜನೆ ನಡೆದದ್ದು ಅಶ್ವತ್ಥ್ ಅವರ ಖಾಯಂ ಹೋಟೆಲಾದ ಮಿನರ್ವ ಕಾಮತ್ನಲ್ಲಿ. ಅವರ ಖಾಯಂ ಜೊತೆಗಾರರಾಗಿ ಎಚ್ಚೆಸ್ವಿ, ವ್ಯಾಸ ಮತ್ತು ನಾನು ಅಲ್ಲಿದ್ದೆವು. ಸ್ವರಸಂಯೋಜನೆ ಮುಗಿದ ನಂತರ ಆ ಹಾಡುಗಳನ್ನು ಕೇಳಿಸಲೆಂದು ಅಶ್ವತ್ ಜಿಯೆಸ್ಸೆಸ್ ಅವರನ್ನು ಅಂದು ಸಂಜೆ ಹೋಟೆಲಿಗೆ ಆಹ್ವಾನಿಸಿದ್ದರು. ಹಾಡುಗಳನ್ನು ಕೇಳಿ ಜಿಯೆಸ್ಸೆಸ್ ಎಷ್ಟು ಖುಷಿಪಟ್ಟರೆಂದರೆ ನಂತರ ನಮ್ಮೊಂದಿಗೆ ತಾವೂ (ಅಪರೂಪಕ್ಕೆ) ಒಂದು ಪೆಗ್ಗೇರಿಸಿ ಸಂಭ್ರಮಿಸಿದರು.
ಚೈತ್ರ ಧ್ವನಿಸುರುಳಿ ಅಪಾರ ಜನಪ್ರಿಯತೆ ಗಳಿಸಿತು. ಅದರಲ್ಲಿನ ಆಕಾಶದ ನೀಲಿಯಲ್ಲಿ ಮತ್ತು ಯಾವುದೀ ಪ್ರವಾಹವು ಹಾಗೂ ಅನಂತರದಲ್ಲಿ ಸ್ವರಸಂಯೋಜಿಸಲಾದ ಕಾಣದ ಕಡಲಿಗೆ ಅಶ್ವತ್ಥರ ಟ್ರಂಪ್ಕಾರ್ಡುಗಳ ಸಾಲಿಗೆ ಸೇರಿದವು. ಜಿಯೆಸ್ಸೆಸ್ ಅಶ್ವತ್ಥರ ಅಚ್ಚುಮೆಚ್ಚಿನ ಕವಿಯಾದರು. ನಂತರದ ಸುಮಾರು ಇಪ್ಪತ್ತು ವರ್ಷ ಸುಗಮ ಸಂಗೀತದ ಜೈತ್ರಯಾತ್ರೆಗೆ ಜಿಯೆಸ್ಸೆಸ್ ಅವರದೇ ಮುಖಂಡತ್ವ. ಆ ಯಾತ್ರೆಯಲ್ಲಿ ನಾನೂ ಇದ್ದೆನಾದ್ದರಿಂದ ಜಿಯೆಸ್ಸೆಸ್ ಅವರ ನಿರಂತರ ಒಡನಾಟ ನನಗೆ ಲಭಿಸಿ, ಅವರೊಂದಿಗೆ ನನ್ನ ಪರಿಚಯ ಆತ್ಮೀಯತೆಯ ಹಂತಕ್ಕೇರಿತು.
ಜಿಯೆಸ್ಸೆಸ್ ಕವಿಯಾಗಿ ನನಗೆ ಪ್ರಿಯರಾಗಲು ಕಾರಣ ಅವರ ಮುಕ್ತ ಮನಸ್ಸು ಮತ್ತು ಪ್ರಬುದ್ಧ ಜೀವನದೃಷ್ಟಿ. ಅವರ ಕಾವ್ಯ ನವೋದಯದಿಂದ ಮೊದಲಾಗಿ ನವ್ಯ ಬಂಡಾಯ ಮುಂತಾದ ಎಲ್ಲ ಚಳುವಳಿಗಳನ್ನೂ ಹಾದುಬಂದಿದೆ. ಈ ಎಲ್ಲದಕ್ಕೂ ಅವರು ತೆರೆದ ಮನಸ್ಸಿನಿಂದ ಸ್ಪಂದಿಸಿದ್ದಾರೆ, ಸುಗಮ ಸಂಗೀತಕ್ಕೂ ಸಹ. ಆದರೆ ಎಲ್ಲೂ ಅವರು ತಮ್ಮ ಸ್ವಂತಿಕೆ ಮತ್ತು ಅನನ್ಯತೆ ಬಿಟ್ಟುಕೊಟ್ಟಿಲ್ಲ.
ಜಿಯೆಸ್ಸೆಸ್ ಎದೆ ತುಂಬಿ ಹಾಡಿದ ಕವಿ. ಸರಳವೆಂದು ತೋರಿದರೂ ಗಹನವಾದ ಭಾವಗೀತೆ ಮತ್ತು ಭಾವಗೀತಾತ್ಮಕ ಕವಿತೆ ಅವರ ವೈಶಿಷ್ಟ್ಯ. ಹಾಗೆಂದು ತಮ್ಮ ಸುತ್ತಲಿನ ಸಾಮಾಜಿಕ ಪಲ್ಲಟಗಳಿಗೆ ಅವರೆಂದೂ ಕುರುಡಾದವರಲ್ಲ. ಹಲವಾರು ವೈಚಾರಿಕ, ವಿಡಂಬನಾತ್ಮಕ ಕವಿತೆಗಳನ್ನೂ ಅವರು ರಚಿಸಿದ್ದಾರೆ. ಆದರೆ ಅವುಗಳಲ್ಲಿ ಅಬ್ಬರ ಆಕ್ರೋಶಗಳಿಲ್ಲ. ವಿಷಾದವಿದೆ, ಅನುಕಂಪವಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಶಾವಾದವಿದೆ. ಆದ್ದರಿಂದಲೇ ಅವರು ಹಣತೆಯ ಕವಿ. ಶತಶತಮಾನಗಳಿಂದಲೂ ಬೆಳಕನ್ನು ಕಬಳಿಸಿ, ಅಟ್ಟಹಾಸ ಮಾಡುತ್ತಿರುವ ಕತ್ತಲಿನೆದುರು ಹತಾಶರಾಗದೆ, ಅವರು ತಮ್ಮ ಹಣತೆ ಹಚ್ಚುತ್ತಲೇ ಬಂದಿದ್ದಾರೆ. ಕತ್ತಲನ್ನು ಗೆಲ್ಲಬೇಕೆಂಬ ಹಠದಿಂದಲ್ಲ, ತಾವು ನೆಚ್ಚಿದ ಏಕಮಾತ್ರ ಸತ್ಯವಾದ ಮಾನವೀಯ ಸೌಹಾರ್ದ ಸಂಬಂಧಗಳನ್ನು ಉಳಿಸಲೆಂದು, ಅಂತಃಕರಣ ಬೆಳಗಲೆಂದು. ಹೀಗಾಗಿ ಅವರು ಸಹೃದಯರಿಗೆ ಎಂದೆಂದಿನಿಂದಲೂ ಪ್ರಿಯರಾಗಿಯೇ ಉಳಿದುಬಂದಿದ್ದಾರೆ.
ಹೊರನೋಟಕ್ಕೆ ಜಿಯೆಸ್ಸೆಸ್ ತುಂಬ ರಿಜರ್ವ್ಡ್ ಎಂಬಂತೆ ತೋರುತ್ತಿದ್ದರೂ ಅವರಲ್ಲಿರುವುದು ಪರಿಶುದ್ಧ ಸ್ನೇಹ, ಪ್ರೀತಿ ಮತ್ತು ಹೃದಯವಂತಿಕೆ. ಹನ್ನೆರಡು ವರ್ಷ ಹಿಂದೆ ನಡೆದ ಒಂದು ಘಟನೆ ನೆನಪಾಗುತ್ತದೆ. ಪಂಪ ಪ್ರಶಸ್ತಿಗೆ ಪಾತ್ರರಾದ ಜಿಯೆಸ್ಸೆಸ್ ಮತ್ತು ಕಣವಿ ಅವರನ್ನು ಚಿಂತಾಮಣಿಯ ಗೆಳೆಯರ ಬಳಗದ ಸಾಹಿತ್ಯ ಸಂವಾದ ಮತ್ತು ಅಭಿನಂದನೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಅಚಾತುರ್ಯದಿಂದ ಇಬ್ಬರಿಗೂ ಕಾರ್ಯಕ್ರಮದ ದಿನಾಂಕವನ್ನು ತಪ್ಪಾಗಿ ತಿಳಿಸಿಬಿಟ್ಟಿದ್ದೆ. ಆ ದಿನಾಂಕದಂದು ಇಬ್ಬರಿಗೂ ಮೊದಲೇ ಗೊತ್ತಾದ ಬೇರೆ ಕಾರ್ಯಕ್ರಮಗಳಿದ್ದವು. ಜಿಯೆಸ್ಸೆಸ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಸಭೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಬೇಕಿತ್ತು. ಕಣವಿ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು. ನನ್ನ ತಪ್ಪಿನ ಅರಿವಾಗಿ ನಾನು ಇಬ್ಬರಿಗೂ ಫೋನ್ ಮಾಡಿ, ಕ್ಷಮೆ ಯಾಚಿಸಿ, ಚಿಂತಾಮಣಿಯ ಕಾರ್ಯಕ್ರಮಕ್ಕೆ ದಯವಿಟ್ಟು ಬರಬೇಕೆಂದು ಕೋರಿದೆ. ಇಬ್ಬರೂ ಹಿರಿಯರು ನನ್ನ ಮತ್ತು ಚಿಂತಾಮಣಿಯ ಮೇಲಿನ ಪ್ರೀತಿಯೇ ಕಾರಣವಾಗಿ ತಮ್ಮ ಅಂದಿನ ಕಾರ್ಯಕ್ರಮಗಳನ್ನು ರದ್ದು ಮಾಡಿ, ನಮ್ಮಲ್ಲಿಗೆ ಬಂದು ನಮ್ಮ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ, ಅವಿಸ್ಮರಣೀಯವಾಗಿ ನಡೆಸಿಕೊಟ್ಟರು. ಇದನ್ನು ನೆನೆದಾಗಲೆಲ್ಲ ನನಗೆ ಈ ಇಬ್ಬರೂ ಹಿರಿಯರ ಬಗ್ಗೆ ಪ್ರೀತ್ಯಾದರಗಳಿಂದ ಹೃದಯ ತುಂಬಿಬರುತ್ತದೆ. ಅಂದು ರಾತ್ರಿ ಕನ್ನಡದ ಅಶ್ವಿನೀ ದೇವತೆಯರೆಂದೇ ಹೆಸರಾದ ಕವಿದ್ವಯರಿಬ್ಬರೂ ನಮ್ಮೂರಲ್ಲೇ ಉಳಿದುಕೊಂಡರು.
ಇನ್ನೊಂದು ಮರೆಯಲಾಗದ ಸಂಗತಿ ಎಂದರೆ ಜಿಯೆಸ್ಸೆಸ್ ಅವರ ಮನೆಯಲ್ಲಿ ಪ್ರತಿವರ್ಷ ಮಾವಿನಹಣ್ಣಿನ ಕಾಲದ ಒಂದು ದಿನ ಏರ್ಪಾಟಾಗುತ್ತಿದ್ದ ಹೋಳಿಗೆ ಮತ್ತು ಮಾವಿನಹಣ್ಣಿನ ಸೀಕರಣೆಯ ಔತಣಕೂಟ. ಅದಕ್ಕೆ ಜಿಯೆಸ್ಸೆಸ್ ತಮ್ಮ ಆತ್ಮೀಯ ಬಂಧುಮಿತ್ರರನ್ನು ಖುದ್ದಾಗಿ ಆಹ್ವಾನಿಸುತ್ತಿದ್ದರು. ಅದಕ್ಕೆಂದೇ ನಾನು ಚಿಂತಾಮಣಿಯಿಂದ ಹೆಂಡತಿ ಗಿರಿಜಳೊಂದಿಗೆ ಬೆಂಗಳೂರಿಗೆ ಬಂದು ಹೋದದ್ದುಂಟು. ಅಂದಿನ ಔತಣದಲ್ಲಿ ಸಾಂಪ್ರದಾಯಿಕವಾದ ಪಲ್ಯ, ಕೋಸಂಬರಿ, ಸಾರು, ಚಿತ್ರಾನ್ನ ವಗೈರೆ ಎಲ್ಲವೂ ಇರುತ್ತಿತ್ತಾದರೂ ವಿಶೇಷ ಖಾದ್ಯವೆಂದರೆ ಹೋಳಿಗೆ ಮತ್ತು ಮಾವಿನಹಣ್ಣಿನ ಸೀಕರಣೆಯೇ. ಅದೇ ಕ್ಲೈಮಾಕ್ಸ್. ಆ ಸೀಕರಣೆಗೆಂದು ಜಿಯೆಸ್ಸೆಸ್ ವಿವಿಧ ಬಗೆಯ ಅತ್ಯುತ್ತಮ ಮಾವಿನಹಣ್ಣುಗಳನ್ನು ತರಿಸುತ್ತಿದ್ದರು. ತಾವೇ ಖುದ್ದಾಗಿ ಸಕುಟುಂಬ ನಿಂತು ಅತಿಥಿಗಳನ್ನು ಉಪಚರಿಸುತ್ತಿದ್ದರು. ಬಲ್ಲವರೇ ಬಲ್ಲರು ಆ ಔತಣದ ಸವಿಯ.
ತಮಗಿಂತ ಹಿರಿಯರಾದ ಕವಿ, ಸಾಹಿತಿಗಳ ಬಗ್ಗೆ ಜಿಯೆಸ್ಸೆಸ್ ಅತ್ಯಂತ ಗೌರವ ಮತ್ತು ವಿನಯದಿಂದ ನಡೆದುಕೊಳ್ಳುತ್ತಿದ್ದರು. ಇದಕ್ಕೆ ನಾನೇ ಬಲ್ಲ ಒಂದು ಉದಾಹರಣೆ ಹೀಗಿದೆ- ಸುಮಾರು ಇಪ್ಪತ್ತು ವರ್ಷ ಹಿಂದಿನ ಮಾತು. ಬೆಂಗಳೂರು ದೂರದರ್ಶನ ಒಂದು ಕವಿಗೋಷ್ಠಿ ಏರ್ಪಡಿಸಿತ್ತು. ಅದರ ಅಧ್ಯಕ್ಷತೆ ವಹಿಸಲು ಜಿಯೆಸ್ಸೆಸ್ ಅವರನ್ನು ಆಹ್ವಾನಿಸಲಾಯಿತು. ಆ ಕವಿಗೋಷ್ಠಿಯಲ್ಲಿ ನರಸಿಂಹಸ್ವಾಮಿಯವರೂ ಭಾಗವಹಿಸಲಿರುವ ವಿಷಯ ಜಿಯೆಸ್ಸೆಸ್ಗೆ ತಿಳಿಯಿತು. ಕೂಡಲೇ ಅವರು ದೂರದರ್ಶನದ ಅಧಿಕಾರಿಗಳನ್ನು ಸಂಪರ್ಕಿಸಿ, ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವವನ್ನು ತಮಗಿಂತ ಹಿರಿಯರಾದ ನರಸಿಂಹಸ್ವಾಮಿ ಅವರಿಗೆ ನೀಡಲು ಸೂಚಿಸಿ, ಒಪ್ಪಿಸಿದ್ದಷ್ಟೇ ಅಲ್ಲದೆ, ತಾವೂ ಸಹ ಆ ಗೋಷ್ಠಿಯಲ್ಲಿ ಒಬ್ಬ ಕವಿಯಾಗಿ ಭಾಗವಹಿಸಿದರು.
ತಾವು ವಹಿಸಿಕೊಂಡ ಯಾವುದೇ ಗುರುತರ ಜವಾಬ್ದಾರಿಯನ್ನೂ ಅತ್ಯುತ್ತಮ ಮಟ್ಟದಲ್ಲಿ ನಿರ್ವಹಿಸುವುದು ಅವರ ಜಾಯಮಾನ. ಬೆಂಗಳೂರು ವಿವಿಯ ಕನ್ನಡ ವಿಭಾಗ ಮುಖ್ಯಸ್ಥರಾಗಿ ಅದನ್ನು ಕನ್ನಡ ಸಾರಸ್ವತಲೋಕದ ಒಂದು ಆಧುನಿಕ ಅನುಭವ ಮಂಟಪವನ್ನಾಗಿ ಪರಿವರ್ತಿಸಿದ್ದು ಅವರ ಹೆಗ್ಗಳಿಕೆ. ಅಲ್ಲಿಂದ ನಿವೃತ್ತರಾದ ಬಳಿಕ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅವರು ಹಮ್ಮಿಕೊಂಡ ವಿಚಾರ ಸಂಕಿರಣ, ಸಾಹಿತ್ಯ ಸಮಾವೇಶಗಳು ಹಾಗೂ ಹೊರತಂದ ಶತಮಾನದ ಸಾಹಿತ್ಯ ಸಂಪುಟಗಳು ಇತರ ಅಕಾಡೆಮಿಗಳಿಗೆ ಮಾದರಿ ಎನಿಸಿದವು. ಅದಾದ ನಂತರ ಅವರು ವಹಿಸಿಕೊಂಡದ್ದು ಪುತಿನ ಪ್ರತಿಷ್ಠಾನದ ಅಧ್ಯಕ್ಷತೆಯನ್ನು. ಅದು ಸ್ವತಃ ಪುತಿನ ಅವರೇ ಆಶಿಸಿದ್ದು. ಅದಕ್ಕೆ ಕಾರಣ ಪುತಿನ ಅವರಿಗೆ ಜಿಯೆಸ್ಸೆಸ್ ಅವರಲ್ಲಿದ್ದ ಅಪಾರ ಪ್ರೀತಿ ಮತ್ತು ವಿಶ್ವಾಸ. ಇಂದು ಆ ಪ್ರತಿಷ್ಠಾನದ ವತಿಯಿಂದ ಮೇಲುಕೋಟೆಯಲ್ಲಿ ಪುತಿನ ಮನೆ ನವೀಕರಣಗೊಂಡು ಕವಿಯ ಸಾರ್ಥಕವಾದ ಒಂದು ಸಾಂಸ್ಕೃತಿಕ ಸ್ಮರಣೆಯಾಗಿದೆ.
ನನ್ನ ಜೀವನದ ಸಾರ್ಥಕ ಗಳಿಗೆಗಳಲ್ಲಿ ಒಂದನ್ನು ನಾನಿಲ್ಲಿ ನೆನೆಯಲೇ ಬೇಕು. 2006ರಲ್ಲಿ ನನಗೆ ಅರವತ್ತು ತುಂಬಿದಾಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಜಿಯೆಸ್ಸೆಸ್ ಅವರ ನೇತೃತ್ವದಲ್ಲಿ, ನನಗೊಂದು ಅಭಿನಂದನ ಸಮಾರಂಭ ಏರ್ಪಾಟಾಗಿತ್ತು. ನನ್ನ ಕಾವ್ಯ ಹಾಗೂ ನನ್ನ ಬಗ್ಗೆ ಜಿಯೆಸ್ಸೆಸ್ ಪ್ರಾಸ್ತಾವಿಕವಾಗಿ ಮೌಲಿಕ ಮಾತುಗಳನ್ನಾಡಿದರು. ಅಂದು ನನ್ನ ಜೀವ ಧನ್ಯವಾಗಿತ್ತು.
ಮೊದಲೇ ಹೇಳಿದ ಹಾಗೆ ಅವರು ಇಹವನ್ನು ಮತ್ತು ಸೌಹಾರ್ದಯುತ ಮಾನವೀಯ ಸಂಬಂಧಗಳನ್ನು ನೆಚ್ಚಿದ ಕವಿ. ಅವರದೇ ಪ್ರಖ್ಯಾತ ಕವಿತೆ ಹೇಳುವಂತೆ, 'ಪ್ರೀತಿ ಸ್ನೇಹಗಳಲ್ಲೇ ದೇವರನ್ನು ಕಂಡ', ಕಾಣಿಸಿದ, ಅದಮ್ಯ ಜೀವನೋತ್ಸಾಹದ ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿಗೆ, ಕನ್ನಡಿಗರೆಲ್ಲರ ಪರವಾಗಿ ನನ್ನ ಹೃತ್ಪೂರ್ವಕ ನಮನಗಳು.
- ಬಿ.ಆರ್. ಲಕ್ಷ್ಮಣರಾವ್
ಖ್ಯಾತ ಕವಿ