ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದೇವಯಾನಿ ಅವಮಾನಕ್ಕೆ ಧಿಕ್ಕಾರವಿರಲಿ, ಶರ್ಮಿಷ್ಠೆಗೂ ಬೆಲೆ ಸಿಗಲಿ

Vishwanath S
Updated On : 24 Dec 2013, 12:00 pm

ದೇವಯಾನಿ ಖೋಬ್ರಾಗಡೆಗಾಗಿ ಇಡೀ ದೇಶವೇ ಮಿಡಿಯುತ್ತಿದೆ. ಮಾಧ್ಯಮಗಳು "ದೇವಯಾನಿಗಾದ ಅವಮಾನವನ್ನು ಯಾವುದೇ ಕಾರಣಕ್ಕೂ ಭಾರತ ಸಹಿಸಲ್ಲ" ಅನ್ನೋ ಸಂದೇಶವನ್ನು ಒಕ್ಕೊರಲಿನಿಂದ ನೀಡುತ್ತಿವೆ. ಇಷ್ಟಕ್ಕೂ ದೇವಯಾನಿ ಖೋಬ್ರಾಗಡೆಯವರಿಗೆ ಇಂಥಹದೊಂದು ಅವಮಾನ ಎದುರಿಸಬೇಕಾದ ಪ್ರಸಂಗ ಬಂದಿದ್ದಾದರೂ ಏಕೆ ಅನ್ನೋ ವಿಷಯ ಹಲವು ತಿರುವುಗಳಲ್ಲಿ ಹುದುಗಿದೆ.
ಜೂನ್ 2013ರಿಂದ ಅಮೆರಿಕದಿಂದ ನಡೆಯುತ್ತಿದ್ದ ಪೊಲೀಸ್ ಕೇಸ್‌ಗಳು, ಕಾನೂನು ಕ್ರಮಗಳು, ವೀಸಾ ವಂಚನೆಯ ಆರೋಪಗಳು ಇದಕ್ಕೆಲ್ಲ ಐಎಫ್‌ಎಸ್ ಅಧಿಕಾರಿ, ವೈದ್ಯಕೀಯ ಪದವೀಧರೆಯೂ ಆಗಿರುವ ದೇವಯಾನಿಗೆ ತಿಳಿದಿರಲಿಲ್ಲವೇ? ಪರಿಸ್ಥಿತಿ ಈಗ ಎಲ್ಲಿಗೆ ಬಂದಿದೆ ಎಂದರೆ, ಸುಮಾರು ಒಂದೂವರೆ ಕೋಟಿ ಹಣ ನೀಡಿ ಜಾಮೀನು ಪಡೆದು ಹೊರಬಂದಿರುವ ದೇವಯಾನಿಗೆ ಇದೀಗ ಅಮೆರಿಕವೇ ಜೈಲಿನಂತಾಗಿದೆ. ಭಾರತವೆಷ್ಟೇ ಕೂಗು ಹಾಕಿದರೂ, ಆಕೆಯ ವಿರುದ್ಧದ ಆರೋಪಗಳನ್ನು ಅಮೆರಿಕ ತಳ್ಳಿ ಹಾಕುತ್ತಿಲ್ಲ. ಭಾರತದ ನಿದ್ದೆಗೆಡಿಸಿರುವ ವಿಷಯದೇ ಇದಾಗಿದೆ.
ದೇವಯಾನಿಗೆ ಸಂಪೂರ್ಣ ರಾಜತಾಂತ್ರಿಕ ವಿನಾಯಿತಿ ದೊರೆಯುವಂತಾಗಲು ಅವರನ್ನು ಕೂಡಲೇ ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಲಾಯಿತಾದರೂ, ಅಮೆರಿಕ ಒಪ್ಪಿದರೆ ಮಾತ್ರ ಭಾರತದ ಪ್ರಯತ್ನ ಫಲ ನೀಡಲಿದೆ. ಇಲ್ಲದಿದ್ದರೆ ಹತ್ತು ವರ್ಷ ಸೆರೆವಾಸದ ತೂಗುಗತ್ತಿ ದೇವಯಾನಿಯ ತಲೆ ಮೇಲಿಂದ ದೂರಾಗದು. ಮಹಾರಾಷ್ಟ್ರದ ನಿವೃತ್ತ ಐಎಎಸ್ ಅಧಿಕಾರಿ ಉತ್ತಮ ಖೋಬ್ರಾಗದೆ ಅದ್ಯಾಕೆ ಮಗಳಿಗೆ ದೇವಯಾನಿ ಎಂದು ಹೆಸರಿಟ್ಟರೋ? ಪುರಾಣದ ದೇವಯಾನಿಗೂ ಇಂದಿನ ದೇವಯಾನಿಗೂ ಸಾಮ್ಯತೆಗಳೇ ಇವೆ.
ಪುರಾಣದಲ್ಲಿ ರಾಜಕುಮಾರಿ ನಂತರ ಕೆಲಸದಾಕೆಯಾಗುವ ಶರ್ಮಿಷ್ಠೆಯಿಂದ ಬಾವಿಯ ಪಾಲಾಗಿರುತ್ತಾಳೆ ದೇವಯಾನಿ. ತನ್ನೆಲ್ಲ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ತಂದೆ ಶುಕ್ರಾಚಾರ್ಯರ ಬಳಿ ದೂರು ಹೇಳಿದ ದೇವಯಾನಿ, ಶರ್ಮಿಷ್ಠೆಯನ್ನು ತನ್ನ ದಾಸಿಯನ್ನಾಗಿಸಿಕೊಂಡಿರುತ್ತಾಳೆ. ಈ ದೇವಯಾನಿಯೂ ಕೆಲಸದಾಕೆಗಾಗಿ ಹೇಳಿದ ಸುಳ್ಳು ಆಕೆಯನ್ನು ಅವಮಾನದ ಕೂಪಕ್ಕೆ ತಳ್ಳಿದೆ. ಅಮೆರಿಕದ ಪೊಲೀಸರೆದುರು ವಿವಸ್ತ್ರ ಪರೀಕ್ಷೆಗೆ ಗುರಿಯಾಗಿಸಿದೆ. ಪುರಾಣದ ದೇವಯಾನಿಗೆ ಶರ್ಮಿಷ್ಠೆಯಂತೆ ಇಂದಿನ ದೇವಯಾನಿಯೊಂದಿಗೆ ತಳಕು ಹಾಕಿಕೊಂಡಿರುವ ಹೆಸರು ಸಂಗೀತಾ ರಿಚರ್ಡ್. ಸಂಗೀತಾ ಕೂಡ ಶರ್ಮಿಷ್ಠೆಯಂತೆ ಶೋಷಿತಳೇ. ಆದರೆ ಯಾರಿಗೂ ಈಕೆಯ ಬಗ್ಗೆ ಅನುಕಂಪವೇ ಮೂಡುತ್ತಿಲ್ಲ. ಕಾನೂನು ಯಾವ ದೇಶದ್ದೇ ಆಗಿರಲಿ. ಅಲ್ಲಿನ ನೆಲದ ಕಟ್ಟಳೆಗೆ ಎಲ್ಲರೂ ಒಳಗಾಗಲೇಬೇಕು.  ನವೆಂಬರ್ 2013ರಲ್ಲಿ ಕೆಲಸದಾಕೆ ಸಂಗೀತಾ ರಿಚರ್ಡ್ ವೀಸಾ ಪಡೆಯಲು ಆಕೆಯೊಂದಿಗೆ ಎಂಪ್ಲಾಯ್ಮೆಂಟ್ ಕಾಂಟ್ರಾಕ್ಟ್ ಮಾಡಿಕೊಳ್ಳಬೇಕಿತ್ತು. ಭಾರತದಂತೆ ತಿಂಗಳಿಗೆ ಸಾವಿರಾರು ರುಪಾಯಿ ಸಂಬಳದ ಕೆಲಸದವರು ಅಲ್ಲಿ ಸಿಗಲ್ಲ. ಇಲ್ಲಿನಿಂದ ಕರೆದುಕೊಂಡು ಹೋದರೂ ಅಲ್ಲಿನಷ್ಟೇ ಸಂಬಳ ಕೊಡುತ್ತೇವೆ, ಅಲ್ಲಿನ ಕಾನೂನು ಪಾಲಿಸುತ್ತೇವೆ ಎನ್ನುವ ಒಪ್ಪಂದ ಮಾಡಿಕೊಳ್ಳಲೇಬೇಕು. ಅದರಂತೆ ದೇವಯಾನಿ ಸಂಗೀತಾ ರಿಚರ್ಡ್‌ಗೆ ಪ್ರತಿ ಗಂಟೆಯ ಕೆಲಸಕ್ಕೆ ಕನಿಷ್ಠ 9.75 ಡಾಲರ್ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಳು. ಬೆಳಗ್ಗೆ 7ರಿಂದ 12.30, ಸಂಜೆ 6.30ರಿಂದ 8.30ರವರೆಗೆ ಕೆಲಸದ ವೇಳೆ. ಶನಿವಾರ ಅರ್ಧದಿನ ಕೆಲಸ, ಭಾನುವಾರ ವಾರದ ರಜೆ. ಇದಲ್ಲದೇ, ಏಳು ದಿನ ಸಂಬಳ ಸಹಿತ ರಜೆ, ಏಳು ದಿನ ಅನಾರೋಗ್ಯ ರಜೆ, ಏಳು ದಿನ ಸಾಂದರ್ಭಿಕ ರಜೆಯನ್ನು ಸಂಬಳ ಸಹಿತವಾಗಿ ನೀಡುವ ಕರಾರು ಅದಾಗಿತ್ತು. ವೀಸಾ ಪಡೆಯುವ ವೇಳೆ ಇದೇ ಗಿಳಿಪಾಠ ಒಪ್ಪಿಸಬೇಕೆಂದು ದೇವಯಾನಿಯೇ ಸಂಗೀತಾಳಿಗೆ ತಿಳಿಸಿರುತ್ತಾಳೆ. (ಇಲ್ಲದಿದ್ದರೆ ವೀಸಾ ಸಿಗುತ್ತಿರಲಿಲ್ಲ) ಇದರಂತೆ ವಾರಕ್ಕೆ ಕನಿಷ್ಠ 40 ಗಂಟೆಯ ಕೆಲಸವೆಂದರೂ ನಾಲ್ಕು ವಾರಗಳ ಕೆಲಸಕ್ಕೆ ದೇವಯಾನಿ ಸಂಗೀತಾಳಿಗೆ 93,000 ರುಪಾಯಿ ಪಾವತಿಸಬೇಕಿತ್ತು. ಆದರೆ, ನವೆಂಬರ್ 23ರಂದು ಸಂಗೀತಾಳನ್ನು ನ್ಯೂಯಾರ್ಕ್‌ಗೆ ಕರೆತಂದ ದೇವಯಾನಿ, ತಿಂಗಳಿಗೆ 25,000 ರು. ಸಂಬಳ, ಹೆಚ್ಚುವರಿ ಕೆಲಸಕ್ಕೆ 5000 ರುಪಾಯಿ ( ಭಾನುವಾರಗಳಂದು ಕೆಲಸ ಮಾಡಿದ್ರೆ ) ಸೇರಿ 30,000 ರುಪಾಯಿ ನೀಡುವುದಾಗಿ ಬೇರೊಂದು ಒಪ್ಪಂದ ಮಾಡಿಕೊಳ್ಳುತ್ತಾಳೆ. ಎಷ್ಟೇ ಹೆಚ್ಚುವರಿ ಕೆಲಸವಾದರೂ ತಿಂಗಳಿಗೆ ಗರಿಷ್ಠ 30,000 ಮಾತ್ರ ಸಂಬಳ ಅಂತಾ ಬರೆಯಿಸಿಕೊಂಡಿದ್ದಾಳೆ. ಅದರಂತೆ ಆರು ತಿಂಗಳು ಸಂಗೀತಾ ದೇವಯಾನಿಯ ಮನೆಯಲ್ಲಿ ಮಗುವನ್ನು ನೋಡಿಕೊಂಡು, ಮನೆಗೆಲಸ ಮಾಡಿಕೊಂಡಿದ್ದಾಳೆ.
ಭಾರತೀಯ ವಿದೇಶ ಸೇವೆಯ ಅಧಿಕಾರಿಗಳು ಅಥವಾ ಐಎಫ್‌ಎಸ್ ಅರ್ಹತೆ ಪಡೆದ ಅಭ್ಯರ್ಥಿಗಳು ತರಬೇತಿಯ ಬಳಿಕ ತಾವು ವಿದೇಶಗಳಲ್ಲಿ ನಿಯುಕ್ತಿಗೊಳ್ಳುವುದನ್ನೇ ಕಾಯುತ್ತಿರುತ್ತಾರೆ. ಭಾರತದ ವಿದೇಶಾಂಗ ಕಚೇರಿಯಲ್ಲಿ ಕೆಲಸ ಮಾಡುವುದನ್ನು ಯಾರು ಇಷ್ಟಪಡುವುದಿಲ್ಲ. ಕಾರಣ, ಅಲ್ಲಿ ಸಂಬಳದ ಹೊರತಾಗಿ ಅವರಿಗೆ ತಿಂಗಳಿಗೆ 60ರಿಂದ 80ಸಾವಿರ ರುಪಾಯಿ ಸಿಕ್ಕರೆ ಹೆಚ್ಚು. ವಿದೇಶದಲ್ಲಾದರೆ ಕನಿಷ್ಠ 2 ರಿಂದ 5 ಲಕ್ಷದವರೆಗೆ ಸಿಗುತ್ತೆ. ನವದೆಹಲಿಯಲ್ಲಿದ್ದರೆ, ಪುಟ್ಟದೊಂದು ಕಾರು, ಫರ್ನಿಚರ್, ಎಸಿ ಇಲ್ಲದ ಎರಡು ಬೆಡ್‌ರೂಂ ಮನೆಗೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕು. ವಿದೇಶವಾದರೆ ಬೆಂಜ್ ಕಾರಿನಲ್ಲಿ ಭಾರತದ ಬಾವುಟ ಸಿಕ್ಕಿಸಿಕೊಂಡು ಓಡಾಡಬಹುದು ಫರ್ನಿಷ್ಡ್ ಆಗಿರೋ ಐದು ಬೆಡ್ರೂಂಗಳ ಮನೆ ಮಾಡಿಕೊಳ್ಳಬಹುದು. ಸರ್ಕಾರಿ ಲೆಕ್ಕದಲ್ಲಿ ಅತಿಥಿಗಳೊಂದಿಗೆ ತಾವು ಕೂಡ ತಿಂದು ತೇಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರುಪಾಯಿಯನ್ನು ಸರ್ಕಾರವೇ ನೀಡುತ್ತೆ. ವರ್ಷಕ್ಕೆರಡು ಬಾರಿ ಸರ್ಕಾರಿ ವೆಚ್ಚದಲ್ಲೇ ಭಾರತಕ್ಕೆ ಬಂದು ರಜೆ ಕಳೆಯಬಹುದು. ಇವೆಲ್ಲ ಸವಲತ್ತುಗಳು ದೇವಯಾನಿಗೂ ಇದ್ದವು. ಕೆಲಸದಾಕೆಯ ಸಂಬಳದಲ್ಲಿ ಅದ್ಯಾವ ಅರಮನೆ ಕಟ್ಟಬೇಕಿತ್ತೋ ಗೊತ್ತಿಲ್ಲ. 2005ರಲ್ಲಿ ಮುಂಬೈನ ಓಶೀವರಾ ಸರ್ಕಾರಿ ಹೌಸಿಂಗ್ ಸೊಸೈಟಿಯಲ್ಲಿ ದೇವಯಾನಿಗೊಂದು ಫ್ಲ್ಯಾಟ್ ಮಂಜೂರಾಗಿತ್ತು. ಸ್ವಂತದ ಫ್ಲ್ಯಾಟ್ ಇದ್ದರೂ, ಈ ಸತ್ಯವನ್ನು ಮುಚ್ಚಿಟ್ಟು, ಮುಂಬೈನ ಸಾವಿರಾರು ಕೋಟಿ ರು. ಹಗರಣದ ಆದರ್ಶ್ ಸೊಸೈಟಿಯಲ್ಲಿ ಮತ್ತೊಂದು ಫ್ಲ್ಯಾಟ್ ಮಂಜೂರು ಮಾಡಿಸಿಕೊಂಡಿದ್ದಾಳೆ. ಮಹಾರಾಷ್ಟ್ರ ವಸತಿ ಪ್ರಾಧಿಕಾರದ ಮುಖ್ಯಸ್ಥರಾಗಿದ್ದ ಉತ್ತಮ ಖೋಬ್ರಾಗದೆ, ಆದರ್ಶ್ ಹೌಸಿಂಗ್‌ಗೆ ಪ್ರಮುಖ ಮಂಜೂರಾತಿಗಳು ದೊರಕಿಸಿ ಕೊಡುವಲ್ಲಿ ಭಾಗಿಯಾಗಿದ್ದರು.
ದೇವಯಾನಿ ವಿರುದ್ಧ ಇರುವ ಆರೋಪದ ಸಾಂಸ್ಥಿಕ ಸ್ವರೂಪವೇ ಇನ್ಫೋಸಿಸ್ ಕಂಪನಿಯ ವಿರುದ್ಧವೂ ಇದ್ದದ್ದು. ಅಮೆರಿಕದಲ್ಲಿ ಕೆಲಸ ಮಾಡಲು ದುಬಾರಿ ಎಚ್1ಬಿ ವೀಸಾ ಪಡೆಯಬೇಕಾಗುತ್ತದೆ. ಇದಕ್ಕೆ 5000 ಡಾಲರ್ ತೆರಬೇಕು. ಆದರೆ ವ್ಯಾಪಾರಿ ಸಂದರ್ಶಕರಿಗೆಂದು ಬಿ1 ವೀಸಾ ನೀಡುತ್ತದೆ. ಇದಕ್ಕೆ 160 ಡಾಲರ್ ಪಾವತಿಸಿದರೆ ಸಾಕು. ಆದರೆ ಇದನ್ನು ಬಳಸಿ ಕೆಲಸ ಮಾಡುವಂತಿಲ್ಲ. ಆದ್ರೆ ಇನ್ಫೋಸಿಸ್ ಈ ಅಕ್ರಮ ಎಸಗಿದೆ ಅಂತಾ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿ 20.4 ಕೋಟಿ ರೂಪಾಯಿಗಳನ್ನು ದಂಡ ವಿಧಿಸಿತು. ಆರೋಪ ಒಪ್ಪಿಕೊಳ್ಳದೇ, ಸುದೀರ್ಘ ನ್ಯಾಯಾಂಗ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ದಂಡ ಭರಿಸುವುದಾಗಿ ಇನ್ಫೋಸಿಸ್ ಹೇಳಿತ್ತು.
ಇನ್ಫೋಸಿಸ್‌ನಂತೆಯೇ ತಪ್ಪನ್ನು ಒಪ್ಪಿಕೊಳ್ಳದೇ ದಂಡದ ಮೂಲಕ ಈ ಪ್ರಕರಣದ ಇತ್ಯರ್ಥವಾಗುವುದೇ ಒಳಿತು ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೂರುದಾರರಿಗೆ ಭಾರೀ ಪ್ರಮಾಣದ ಪರಿಹಾರ ಮೊತ್ತವೂ ಲಭಿಸಲಿದೆ. ಇನ್ಫೋಸಿಸ್ ವಿರುದ್ಧ ದೂರು ನೀಡಿದ ಅಮೆರಿಕನ್ ಪ್ರಜೆಗೆ ದಕ್ಕಿದ್ದು ಬರೋಬ್ಬರಿ 3.5ಕೋಟಿ ರುಪಾಯಿ! ವೀರಾವೇಶದ ಮಾತುಗಳನ್ನಾಡುತ್ತಿದ್ದ ಭಾರತದ ಅಧಿಕಾರಿಗಳನ್ನು ಕೂಡ ಅಮೆರಿಕದ ಕಠಿಣ ಕಾನೂನು ತಣ್ಣಗಾಗಿಸಿದೆ. ಸಂಗೀತಾ ರಿಚರ್ಡ್ ಕುಟುಂಬದ ಹಿನ್ನೆಲೆ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ, ದೇವಯಾನಿ ಜೈಲುಪಾಲಾದ್ದರ ಹಿಂದೆ ಭಾರತ ಮೂಲದ ವಕೀಲರದ್ದೇ ಕೈವಾಡವಿದೆ. ಮನೆಕೆಲಸದವರನ್ನು ಸೆಳೆಯಲು ಅಲ್ಲಿನ ಅನಿವಾಸಿ ಭಾರತೀಯರು ಗಾಳ ಹಾಕುತ್ತಲೇ ಇರುತ್ತಾರೆ.
ದೇವಯಾನಿಗಾದ ಅವಮಾನಕ್ಕೆ ಖಂಡಿತ ಧಿಕ್ಕಾರವಿರಲಿ. ಉದ್ಯೋಗ ಒಪ್ಪಂದ ಪಾಲಿಸಲಾಗದ್ದು ಸಣ್ಣತನವಲ್ಲ. ಅದು  ನಮ್ಮವರಿಂದಲೇ ನಮ್ಮವರ ಶೋಷಣೆ. ಹಕ್ಕಿನ ಸಂಬಳ ಪಡೆಯದ ಸಂಗೀತಾಳಿಗೂ ನ್ಯಾಯ ಸಿಗಲಿ. ಇಷ್ಟಕ್ಕೂ ಅಮೆರಿಕದಲ್ಲಿ ಮನೆಕೆಲಸದವರ ಕಾರಣದಿಂದಾಗಿ ಸಂಕಷ್ಟ ಅನುಭವಿಸಿದ ರಾಜತಾಂತ್ರಿಕ ಅಧಿಕಾರಿಗಳಲ್ಲಿ ದೇವಯಾನಿ ಮೊದಲಿಗರಲ್ಲ. ಕೊನೆಯವರಾಗಲೀ ಅನ್ನೋದಷ್ಟೇ ಎಲ್ಲರ ಆಶಯ.

- ರಮೇಶ್ ಮೈಸೂರು
ಸುವರ್ಣ ನ್ಯೂಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement