ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಟಲ್ ಎಂಬ ಹೋಲಿಕೆಗೆ ಸಿಗದ ಆಕಾಶ

ವಾಜಪೇಯಿಯವರ ವಿಶಾಲ ಮನಸ್ಸನ್ನು, ಹೃದಯಾಂತರಾಳವನ್ನು ಯಾವುದರೊಂದಿಗೆ...

Rashmi Kasaragodu
Updated On : 25 Dec 2013, 11:56 am

ವಾಜಪೇಯಿಯವರ ವಿಶಾಲ ಮನಸ್ಸನ್ನು, ಹೃದಯಾಂತರಾಳವನ್ನು ಯಾವುದರೊಂದಿಗೆ ಹೋಲಿಸಬೇಕೋ ತಿಳಿಯುವುದೇ ಇಲ್ಲ. ಅಟಲ್ ಅವರನ್ನು ಹತ್ತಿರದಿಂದ ನೋಡಿದ, ಅವರೊಂದಿಗೆ ಪ್ರಪಂಚದಾದ್ಯಂತ ಸುತ್ತಾಡಿದ ಸೌಭಾಗ್ಯಶಾಲಿಗಳಲ್ಲಿ ನಾನೂ ಒಬ್ಬ. ಅವರೊಂದಿಗೆ ವಾದ ಮಾಡುವುದು, ಕೋಪಿಸಿಕೊಳ್ಳುವುದು, ಅವರ ನಡೆಯ ಬಗ್ಗೆ 'ಪಾಂಚಜನ್ಯ' ಪತ್ರಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸುವುದು ನಡೆಯುತ್ತಲೇ ಇತ್ತಾದರೂ, ಅವರ ಬಗೆಗಿರುವ ಅಭಿಮಾನ ಮಾತ್ರ ನನಗೆ ಕಡಿಮೆಯಾಗಲೇ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಮತ್ತು ರಜ್ಜು ಭಯ್ಯಾ ಅವರ ವ್ಯಕ್ತಿತ್ವ ನನ್ನನ್ನು ಬಹುವಾಗಿ ಕಾಡಿದೆ. ಹೊಸ ಆಲೋಚನೆಗಳನ್ನು ಆಲಿಸಲು ಅವರುಗಳು ಎಂದಿಗೂ ಹಿಂದೇಟು ಹಾಕಿದವರಲ್ಲ. ಹಾಗೆಯೇ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳುವ ವಿಷಯದಲ್ಲೂ ಕೂಡ. ಇವರು ಪ್ರಚಾರದಲ್ಲಿರಲಿ, ಇಲ್ಲದಿರಲಿ ದೇಶದ ಯಾವುದೇ ಮೂಲೆಯಲ್ಲಿರುವ ಕಾರ್ಯಕರ್ತನೊಬ್ಬ ನೊಂದಾಗ, ಸಂತಸಗೊಂಡಾಗ ಈ ಇಬ್ಬರು ಮಹಾನುಭಾವರನ್ನು ನೆನೆಯುತ್ತಾನೆ.
ಪೋಖ್ರಾನ್-2 ಅಣು ಪರೀಕ್ಷೆ ಅಟಲ್ ಅವರ ಬೆಟ್ಟದಂಥ ದೃಢ ಮನಸ್ಸು ಮತ್ತು ರಾಷ್ಟ್ರ ರಕ್ಷಣೆಯ ಅತೀವ ಇಚ್ಛೆಯ ಪ್ರತೀಕವಾಗಿತ್ತು. ಅಮೆರಿಕದ ಬೆದರಿಕೆಗೂ ಜಗ್ಗದೆ ಅಟಲ್ ಪೋಖ್ರಾನ್ನಲ್ಲಿ ವಿಜಯ ಪತಾಕೆಯನ್ನು ಹಾರಿಸಿದರು. ಇದು ಅವರಂಥ ಸ್ವಯಂಸೇವಕ ಪ್ರಧಾನಿಯಿಂದ ಮಾತ್ರ ಸಾಧ್ಯ. ಅಮೆರಿಕ ಆಗಲೂ ಕೂಡ ಭಾರತವನ್ನು ವಿರೋಧಿಸಿತು. ಪ್ರತಿಬಂಧ ಹೇರಿತು. ಸೂಪರ್ ಕಂಪ್ಯೂಟರ್ ಕೊಡುವುದಕ್ಕೆ ಒಪ್ಪಲಿಲ್ಲ. ನಮ್ಮ ಪರಮಾಣು ಕಾರ್ಯಕ್ರಮಕ್ಕಾಗಿನ ಹೆವಿ ವಾಟರ್ನ ಪೂರೈಕೆಯನ್ನು ನಿಲ್ಲಿಸಿಬಿಟ್ಟಿತು. ಸೇನೆಯ ಉಪಕರಣ ಮತ್ತು ಅವಶ್ಯಕ ಯುದ್ಧೋಪಕರಣಗಳ ಪೂರೈಕೆಯನ್ನು ತಡೆಹಿಡಿಯಿತು. ಅಮೆರಿಕದ ನಂತರ ಯುರೋಪ್ ನಮ್ಮ ವಿರುದ್ಧ ಧ್ವನಿಯೆತ್ತಿತು. ಆದರೆ ಅಟಲ್ಜಿ ಮಾತ್ರ ಅಚಲವಾಗಿಯೇ ನಿಂತರು. ಪ್ರೊ. ವಿಜಯ್ ಭಾಟ್ಕರ್ರಂಥ ವಿಜ್ಞಾನಿಗಳ ನೇತೃತ್ವದಲ್ಲಿ ಅಮೆರಿಕಕ್ಕಿಂತ ಅತಿ ಕಡಿಮೆ ವೆಚ್ಚದಲ್ಲಿ ಭಾರತ ಸೂಪರ್ ಕಂಪ್ಯೂಟರ್ ಅನ್ನು ತಯಾರಿಸಿಬಿಟ್ಟಿತು. ಸ್ವದೇಶಿ ಕ್ರಯೋಇಂಜಿನ್ ಅನ್ನೂ ಅಭಿವೃದ್ಧಿಪಡಿಸಿತು. ಕಡೆಗೆ ಅಮೆರಿಕ ತಾನಾಗಿಯೇ ನಮ್ಮ ಮುಂದೆ ಬಂದು ಸ್ನೇಹದ ಹಸ್ತ ಚಾಚಿತು!
ಕಾರ್ಗಿಲ್ ಯುದ್ಧದ ಸಮಯದಲ್ಲೂ ಕೂಡ ವಾಜಪೇಯಿ ಅವರು ಅದೇ ಕೆಚ್ಚೆದೆಯನ್ನು ತೋರಿಸಿದರು. ಯುದ್ಧರಂಗಕ್ಕೆ ಹೋಗಿ ಸೈನಿಕರ ಮನೋಬಲವನ್ನು ಹೆಚ್ಚಿಸಿದರು. ಪಾಕಿಸ್ತಾನಕ್ಕೆ ಪಾಠ ಕಲಿಸುವುದಕ್ಕೆ ಮುಂದಾದ ಸೈನಿಕರ ಕೈಗಳನ್ನು ಅವರು ಕಟ್ಟಿಹಾಕಲಿಲ್ಲ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಶರಣುಹೋದಾಗ, ಶ್ವೇತಭವನದಿಂದ ಮಾತುಕತೆಗಾಗಿ ಅಟಲ್ಗೆ ಸಂದೇಶ ಬಂದಿತು.
ಆದರೆ ಅವರು "ಇದು ನಮ್ಮಿಬ್ಬರ ನಡುವಿನ ಸಮಸ್ಯೆ, ನಾವೇ ಇದನ್ನು ಪರಿಹರಿಸಿಕೊಳ್ಳುತ್ತೇವೆ" ಎಂದು ಕ್ಲಿಂಟನ್ರಿಗೆ ಸಂದೇಶ ಕಳುಹಿಸಿದರು.
ಯಾವ ವ್ಯಕ್ತಿ ದೇಶದ ರಕ್ಷಣೆಗಾಗಿ ಇಡೀ ಪ್ರಪಂಚದ ಎದುರೇ ದೃಢತೆಯಿಂದ ನಿಲ್ಲುತ್ತಿದ್ದರೋ, ಅದೇ ವ್ಯಕ್ತಿ ಶಾಂತಿಸ್ಥಾಪನೆಗಾಗಿ ಅಷ್ಟೇ ದೃಢತೆಯಿಂದ ಸ್ನೇಹಹಸ್ತ ಚಾಚುವ ಸಾಮರ್ಥ್ಯವನ್ನೂ ಹೊಂದಿದ್ದರು. ಪರ್ವೇಜ್ ಮುಷರಫ್ ತಾವು ಭಾರತಕ್ಕೆ ಬರಲು ಸಿದ್ಧರಿದ್ದೇವೆಂದು ಪದೇ ಪದೆ ಹೇಳಿದಾಗ, ಅವರನ್ನು ಆಹ್ವಾನಿಸೋಣ ಎಂದು ವಾಜಪೇಯಿಯವರಿಗೆ ಸಲಹೆ ಕೊಟ್ಟಿದ್ದು ಆಡ್ವಾಣಿಯವರು. ನನಗಿನ್ನೂ ನೆನಪಿದೆ. ಭಾರತ-ಟಿಬೆಟ್ ಗಡಿ ಪೊಲೀಸರು ಆಯೋಜಿಸಿದ್ದ  ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮಾರ್ಚ್ 2001ರಲ್ಲಿ ಆಡ್ವಾಣಿಯವರೊಂದಿಗೆ ನಾನು ಮಸೂರಿಗೆ ಹೊರಟಿದ್ದೆ. ಮಾರ್ಗ ಮಧ್ಯದಲ್ಲಿ ಅವರು ನನ್ನತ್ತ ತಿರುಗಿ ಕೇಳಿದರು, "ತರುಣ್ ಒಂದು ವೇಳೆ ನಾವು ಪರ್ವೇಜ್ ಮುಷರಫ್ರನ್ನು ಭಾರತಕ್ಕೆ ಕರೆಸಿಕೊಂಡರೆ ಜನತೆಯ ಪ್ರತಿಕ್ರಿಯೆ ಹೇಗಿರಬಹುದು?'. ಅದಕ್ಕೆ ನಾನಂದೆ, ಒಂದು ವೇಳೆ ಮುಷರಫ್ ಅವರೊಂದಿಗೆ ಕಠೋರವಾಗಿ ಮಾತನಾಡಿದರೆ ನಿಸ್ಸಂಶಯವಾಗಿಯೂ ಭಾರತೀಯರು ಸಿಟ್ಟಾಗರು. ಆಡ್ವಾಣಿಯವರು ಇದೇ ಮಾತನ್ನು ಅಟಲ್ ಅವರಿಗೆ ಹೇಳಿದರು. ಅಟಲ್ಜೀ ಕೂಡಲೇ ಒಪ್ಪಿಕೊಂಡರು. ಮುಷರಫ್ ಅವರಂತೂ ಅತ್ಯಂತ ಕೀಳು ಮನಸ್ಥಿತಿಯ ಸೈನ್ಯಾಧಿಕಾರಿಯಾಗಿದ್ದರು. ವಾಘಾ ಗಡಿಯ ಮೂಲಕ ಅಟಲ್ ಲಾಹೋರ್ಗೆ ತೆರಳಿದಾಗ, ಮುಷರಫ್ ನಮ್ಮ ಪ್ರಧಾನಿಗೆ ಸೆಲ್ಯೂಟ್ ಮಾಡಲೇ ಇಲ್ಲ. ಮುಂದೆ ಮುಷರಫ್ ದೆಹಲಿಗೆ ಬಂದಾಗ ವಾಯುಸೇನೆಯ ಅಂದಿನ ಅಧ್ಯಕ್ಷರಾಗಿದ್ದ ಯಶವಂತ್ ಟಿಪ್ನಿಸ್ ಕೂಡ ಅವರಿಗೆ ಸೆಲ್ಯೂಟ್ ಮಾಡದೆ, ದೇಶಭಕ್ತರ ಮನೋಬಲವನ್ನು ಹೆಚ್ಚಿಸಿದರು! ಟಿಪ್ನಿಸ್ ಅವರಿಗೆ ಯೋಗ್ಯ ಮಹತ್ವಪೂರ್ಣ ಸ್ಥಾನ ದೊರೆಕಬೇಕಾಗಿತ್ತು ಎಂದು ನನಗೆ ಈಗಲೂ ಅನ್ನಿಸುತ್ತದೆ. ಆಗ್ರಾದಲ್ಲಿ ಮುಷರಫ್ ಮತ್ತೆ ತಮ್ಮ ಕೆಟ್ಟ ಗುಣವನ್ನು ಪ್ರದರ್ಶಿಸಿದರು. ಕೂಡಲೇ ಅಟಲ್ ಮುಷರಫ್ರನ್ನು ವಾಪಸ್ ಪಾಕಿಸ್ತಾನಕ್ಕೆ ಓಡಿಸಿದರು.
ಚತುರ್ಭುಜ ಯೋಜನೆಯ ಮೂಲಕ ಇಡೀ ದೇಶವನ್ನು ಏಕತೆಯ ಸೂತ್ರದಲ್ಲಿ ಜೋಡಿಸುವ ಮೂಲಕ
ಒಂದು ಅದ್ಭುತ ರಾಜಮಾರ್ಗ ಕ್ರಾಂತಿಗೆ ಅಟಲ್ ಅವರು ಚಾಲನೆ ನೀಡಿದರು. ಸುರ್ ಸಾಮ್ರಾಜ್ಯದ ಸ್ಥಾಪಕ ಶೇರ್ ಷಾ ಸೂರಿಯ ಒಂದು ರಸ್ತೆಗೇ ನಮ್ಮಲ್ಲಿ ಬಹುಪರಾಕ್ ಹಾಕಲಾಗುತ್ತದೆ (ಗ್ರ್ಯಾಂಡ್ ಟ್ರಂಕ್ ರೋಡ್ನ ನಿಮಾರ್ತೃ- ಈ ಮಾರ್ಗ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ರಸ್ತೆಗಳಲ್ಲಿ ಒಂದು). ಅಂಥದ್ದರಲ್ಲಿ ಅಟಲ್ ಅವರು ಸೂರಿಗಿಂತಲೂ ಕ್ರಾಂತಿಕಾರಿ ಸಾಧನೆಯನ್ನು ಮಾಡಿದವರು. ಅವರ ಈ ಅಸಾಧಾರಣ ಮತ್ತು ಅಭೂತಪೂರ್ವ ಕೆಲಸ ಭಾರತದ ಸಂಚಾರ ಕ್ಷೇತ್ರದಲ್ಲಿ ಮಹತ್ವಪೂರ್ಣ ಅಧ್ಯಾಯವಾಗಿದೆ. ಅದೇ ಸಮಯದಲ್ಲೇ ಅವರು ಇಡೀ ದೇಶದಲ್ಲಿ ಮೊಬೈಲ್ ಟೆಲಿಫೋನ್ನ ಹೊಸ ಯುಗವನ್ನು ಹುಟ್ಟುಹಾಕಿದರು. ಇಂದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಮೊಬೈಲ್ ಇದೆಯೆಂದರೆ, ನಮ್ಮ ದೇಶದಲ್ಲಿ ಅಂತರ್ಜಾಲ ಕ್ರಾಂತಿಯಾಗಿದೆಯೆಂದರೆ ಅದಕ್ಕೆ ವಾಜಪೇಯಿ ಕಾರಣ.
ವಾಜಪೇಯಿ ಶಾಂತ ಸ್ವಭಾವದವರು. ಹಾಗಂತ ಅವರಿಗೆ ಸಿಟ್ಟು ಬರುತ್ತಿರಲಿಲ್ಲವೆಂದಲ್ಲ, ಬಂದಾಗ ಮೌನಕ್ಕೆ ಮೊರೆಹೋಗುತ್ತಿದ್ದರು. ಕೆಲವೊಂದು ಸಂದರ್ಭ ಹೇಗಿದ್ದವೆಂದರೆ ಸಂಘದ ಹಿರಿಯ ನಾಯಕರಿಗೆ ಕಠೋರ ಶಬ್ದಗಳಿಂದಲೇ ಅವರು ಉತ್ತರಿಸಬಹುದಿತ್ತು. ಆದರೆ ಅವರು ಆ ಕೋಪವನ್ನೆಲ್ಲ ಅದುಮಿಟ್ಟುಕೊಂಡರು. ನಾನೊಮ್ಮೆ ಅವರಿಗೆ ಹೇಳಿದ್ದೆ, "ಅಟಲ್ಜೀ, ನೀವು ಕಠೋರವಾಗಿ ಮಾತನಾಡಿದ್ದರೂ ಅದನ್ನು ನ್ಯಾಯೋಚಿತವೆಂದೇ ಭಾವಿಸಲಾಗುತ್ತಿತ್ತು. ಆದರೆ ನೀವು ಸುಮ್ಮನಿದ್ದು, ಸ್ವಯಂಸೇವಕನ ಗೌರವ ಮತ್ತು ಪರಿವಾರದ ಹಿರಿಮೆಯನ್ನು ಕಾಪಾಡಿದಿರಿ"
ಅವರು ಪಾಂಚಜನ್ಯ ಪತ್ರಿಕೆಯ ಮೊದಲ ವಾಚಕರಾಗಿದ್ದರು. ನಮ್ಮ ಪತ್ರಿಕೆಯ "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ವಿಶೇಷಾಂಕದ ಪ್ರಥಮ ಪುಟದಲ್ಲಿ ಕಾಶಿಯ ಡೋಮರಾಜನ ನಿವಾಸದಲ್ಲಿ ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ಮತ್ತು ವಿಶ್ವ ಹಿಂದು ಪರಿಷತ್ನ ತತ್ಕಾಲೀನ ಅಧ್ಯಕ್ಷ ಅಶೋಕ್ ಸಿಂಘಾಲ್ ಭೋಜನ ಸೇವಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದೆವು. ಅಲ್ಲದೆ ಹಿಂದು ಧರ್ಮದಲ್ಲಿನ ಅಸ್ಪೃಷ್ಯತೆ, ಮೂಢನಂಬಿಕೆಗಳನ್ನು ಜಾಡಿಸಿ ನಾವು  ಲೇಖನ ಬರೆದಿದ್ದೆವು. ಇದನ್ನು ಓದಿದ್ದೇ ತಡ ಅಟಲ್ ಅವರು ನಮಗೆ ಕರೆ ಮಾಡಿ, "ತರುಣ್ ಅಭಿನಂದನೆಗಳು. ತುಂಬಾ ಉತ್ತಮ ಸಂಚಿಕೆ ಬಂದಿದೆ. ಹೀಗೆಯೇ ಬರೆಯಬೇಕು" ಎಂದು ಮೆಚ್ಚುಗೆ ಸೂಚಿಸಿದರು. ನಮ್ಮ ಇಡೀ ಸಂಪಾದಕೀಯ ವರ್ಗ ಖುಷಿಯಿಂದ ಗದ್ಗದಿತವಾಯಿತು. ಒಂದು ಬಾರಿ ನಾವು ಭಾರತ ಮಾತೆಯ ಮೇಲಾಗುತ್ತಿರುವ ದಾಳಿಯನ್ನು ಬಿಂಬಿಸಲು ವಸ್ತ್ರಾಪಹರಣದ ಚಿತ್ರವನ್ನು ಬಳಸಿ, ವಿದೇಶಿ ಹಣ ಮತ್ತು ವಿದೇಶೀ ಮನಸ್ಥಿತಿ ಭಾರತದ ಅಸ್ಮಿತೆಯ ಮೇಲೆ ಹೇಗೆ ದೌರ್ಜನ್ಯ ನಡೆಸುತ್ತಿದೆ ಎನ್ನುವುದರ ಬಗ್ಗೆ ಬರೆದಿದ್ದೆವು. ಪತ್ರಿಕೆ ಮಾರುಕಟ್ಟೆಯನ್ನು ತಲುಪುತ್ತಿದ್ದಂತೆಯೇ ನಮಗೆ ಪ್ರಧಾನಿ ಕಚೇರಿಯಿಂದ ಕರೆಬಂದಿತು. ಅತ್ತಕಡೆಯಿಂದ ಅಟಲ್ ಅವರ ಧ್ವನಿ. ಅವರು ಹೇಳಿದ್ದೇನು ಗೊತ್ತೇ? "ತರುಣ್, ನೀವು ಮಾಡಿದ್ದು ಸರಿಯಿಲ್ಲ. ಭಾರತ ಮಾತೆಯ ಮೇಲೆ ದೌರ್ಜನ್ಯವಾಗುವುದಕ್ಕೆ ನಾವು ಬಿಡೆವು. ಇದು ಸಾಧ್ಯವೇ ಇಲ್ಲ. ನೀತಿಯಲ್ಲಿ ಮತಭೇದವಿರಬಹುದು, ಆದರೆ ಅದನ್ನು ಈ ರೀತಿ ಉಗ್ರವಾದ ಭಾಷಾ ಬಳಕೆಯ ಮೂಲಕ ತೋರಿಸುವುದು ಸರಿಯಲ್ಲ".
ಕಾಂಗ್ರೆಸ್ನ ಮೇಲೆ ಪ್ರಹಾರವಾಗುತ್ತಿರುವ ಸಮಯದಲ್ಲೆಲ್ಲ ಸೋನಿಯಾಗಾಂಧಿಯವರ ಮೇಲೂ ಪ್ರಹಾರವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಒಮ್ಮೆ  ಅಟಲ್ - ಕಾಂಗ್ರೆಸ್ ಅನ್ನು ನೆಲಕ್ಕೆ ಕೆಡವಬೇಕೆಂದರೆ, ಅದರ ಕಾರ್ಯಕ್ರಮಗಳು ಮತ್ತು ನೀತಿಯ ಮೇಲೆ ಪ್ರಹಾರ ಮಾಡಿ. ವ್ಯಕ್ತಿಗತ ಆಕ್ಷೇಪ ಅಥವಾ ದಾಳಿ ನಮ್ಮ ರಾಜನೈತಿಕ ಭಾಷೆಯ ಅಂಗವಾಗಬಾರದು- ಎಂದು ನಮ್ಮನ್ನು ಎಚ್ಚರಿಸಿದ್ದರು.
ಪಾಂಚಜನ್ಯದ ಸುವರ್ಣ ಮಹೋತ್ಸವ ನಡೆಸಬೇಕೆಂದು ಯೋಚಿಸಿದಾಗ, ಅಧ್ಯಕ್ಷ ಸ್ಥಾನಕ್ಕೆ ವಾಜಪೇಯಿಯವರ ಬದಲು ನಮಗೆ ಬೇರೆ ಯಾವ ಹೆಸರೂ ತಲೆಗೆ ಬರಲಿಲ್ಲ. ಒಂದು ಪತ್ರಿಕೆಯ ಸಂಸ್ಥಾಪಕ ಮತ್ತು ಸಂಪಾದಕನೊಬ್ಬ ಒಂದು ದೇಶದ ಪ್ರಧಾನಿಯಾದ ಉದಾಹರಣೆ ಬೇರೆ ಯಾವ ದೇಶದಲ್ಲಿದೆ? ಅದೂ ಅವರದ್ದೇ ಪತ್ರಿಕೆಯ ಸುವರ್ಣ ಮಹೋತ್ಸವ ನಡೆಯುತ್ತಿರುವ ವೇಳೆಯಲ್ಲಿ!? ವಾಜಪೇಯಿ ಕೂಡಲೇ ನಮ್ಮ ಆಹ್ವಾನವನ್ನು ಒಪ್ಪಿಕೊಂಡು ಕಾರ್ಯಕ್ರಮದ ಪರಿಕಲ್ಪನೆಯ ಬಗ್ಗೆ ಚರ್ಚಿಸಲು ತಮ್ಮ ನಿವಾಸಕ್ಕೆ ನಮ್ಮನ್ನು ಕರೆಸಿಕೊಂಡರು. ಅಷ್ಟೊಂದು ಬ್ಯುಸಿ ಶೆಡ್ಯೂಲ್ನ ನಡುವೆಯೂ ಅವರು ಪಾಂಚಜನ್ಯದ ಕಾರ್ಯಕ್ರಮಕ್ಕಾಗಿ ಸಮಯ ಮೀಸಲಿಟ್ಟರು. ಈ ಪತ್ರಿಕೆ ನೀಡುವ 'ನಚಿಕೇತ' ಪುರಸ್ಕಾರ ಭಾರತೀಯ ಪತ್ರಿಕೋದ್ಯಮದಲ್ಲಿ ಅತ್ಯಂತ ವಿಭಿನ್ನವಾದದ್ದು. ಅಟಲ್ ಯಾವಾಗಲೂ ಹೇಳುತ್ತಿದ್ದರು- "ಅದು ಯಾರೇ ಇರಲಿ, ದೇಶದ ಬಗ್ಗೆ ಕಾಳಜಿಯಿಟ್ಟುಕೊಂಡು ಬರೆಯುತ್ತಿದ್ದಾರೆಂದರೆ ಅವರಿಗೆ ಈ ಪ್ರಶಸ್ತಿ ಸಿಗಬೇಕು. ಅವರ ವಿಚಾರಧಾರೆ ನಮಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಪರವಾಗಿಲ್ಲ, ಅವರಿಗೆ ನಮ್ಮ ಸಿದ್ಧಾಂತಗಳೊಂದಿಗೆ ಅಸಮ್ಮತಿಯಿದ್ದರೂ ಪರವಾಗಿಲ್ಲ. ಒಟ್ಟಿನಲ್ಲಿ ಸಾಧಕರನ್ನು ಸನ್ಮಾನಿಸುವುದು ಪಾಂಚಜನ್ಯ ಪರಂಪರೆಯ ಭಾಗವಾಗಬೇಕು" ಎಂದು. ಅವರು ಹೇಳಿದಂತೆಯೇ ಆಗುತ್ತಿದೆ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ಭಾರತೀಯ ರಾಜಧರ್ಮದಲ್ಲಿ ಋಷಿ ಸಮಾನರು. ವೇದನೆಯನ್ನು ತಾಳಿಕೊಂಡು ರಾಷ್ಟ್ರದ ಪೀಡೆಯನ್ನು ದೂರಮಾಡುವುದು ಹೇಗೆಂಬುದನ್ನು ಅವರು ಕಲಿಸಿಕೊಟ್ಟರು. 5 ವರ್ಷದ ಹಿಂದೆ ಅವರ ಆರೋಗ್ಯ ಬಹಳ ಹದಗೆಟ್ಟಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ನಾನು ಅವರಿಗೆ ಫೋನ್ ಮಾಡಿದೆ. ನಗು ನಗುತ್ತಲೇ ಮಾತನಾಡಿದ ಅವರು, "ಈ ವಯಸ್ಸಲ್ಲಿ ಇದೆಲ್ಲ ಆಗೋದೇ ತರುಣ್" ಎಂದರು. ನಂತರ ಅವರ ಮನೆಗೆ ತೆರಳಿದಾಗ ದ್ವಿಪದಿಯೊಂದನ್ನು ಹೇಳಿದರು-
"ದೇಹ ಧರನ್ತೋ ದಂಡ ಹೇ, ಸಬ್ ಕಾಹೂಂಕೋ ಹೋಯ್/ ಜ್ಞಾನಿ ಭುಗತೇ ಜ್ಞಾನ ಸೇ, ಮೂರಖ್ ಭುಗತೇ ರೋಯೇ" (ಎಲ್ಲರಿಗೂ ವೇದನೆಗಳು ಎದುರಾಗುತ್ತವೆ. ಜ್ಞಾನಿಯಾದವನು ತನ್ನ ಜ್ಞಾನದಿಂದ ಅದನ್ನು ಎದುರಿಸುತ್ತಾನೆ, ಮೂರ್ಖ ಅದನ್ನು ಎದುರಿಸುವುದು ಅಳುತ್ತಲೇ)
ಒಂದು ಅದ್ಭುತ ದಾರ್ಶನಿಕ ಮಾತನ್ನು ಅವರಂದು ಹೇಳಿದ್ದರು. ಅಟಲ್ಜೀ ಈ ದೋಹಾ ಯಾರದ್ದು ಎಂದು ಕೇಳಿದಾಗ, ಅದು ತಮಗೆ ತಿಳಿಯದೆಂದೂ, ತಮ್ಮ ತಂದೆ ಇದನ್ನು ಪದೇ ಪದೆ ಹೇಳುತ್ತಿದ್ದರೆಂದೂ ಅವರು ಹೇಳಿದರು.
ಪಾಂಚಜನ್ಯ ಲೇಖಕ ಸಮ್ಮೇಳನದಲ್ಲಿ ಅವರು ಬಹಳ ಗಾಂಭೀರ್ಯದಿಂದ ತಮ್ಮದೇ ಶೈಲಿಯಲ್ಲಿ "ಗಗನ್ ಮೇ ಲಹರತಾ ಹೇ ಭಗವಾ ಹಮಾರಾ" (ಗಗನದಲ್ಲಿ ಹಾರುತ್ತಿದೆ ನಮ್ಮ ಧ್ವಜ) ಎಂಬ ಕವಿತೆಯನ್ನು ಹೇಳಿದಾಗ ಅಲ್ಲಿ ನೆರದಿದ್ದವರ ನರನಾಡಿಗಳಲ್ಲಿ ಆದ ರೋಮಾಂಚನ ಅಷ್ಟಿಷ್ಟಲ್ಲ.
ವಾಜಪೇಯಿಯವರಿಗೆ ಸಮನಾದ ವ್ಯಕ್ತಿಗಳು ಯಾರೂ ಇಲ್ಲ. ಲಕ್ಷಾಂತರ ಕಾರ್ಯಕರ್ತರಿಗೆ ಅವರು ಪಿತೃ ಸಮಾನರು. ಅದ್ಭುತ ಕವಿ, ಲೇಖಕ, ಪತ್ರಕರ್ತ, ಸಾಹಿತಿ, ಸಂಪಾದಕ ಮತ್ತು ರಾಜಋಷಿ ವಾಜಪೇಯಿ. ಅವರು ಶತಾಯುಷಿಗಳಾಗಲಿ, ಶೀಘ್ರ ಗುಣಮುಖರಾಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸೋಣ.

- ತರುಣ್ ವಿಜಯ್
ಅಂಕಣಕಾರ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement