ಕೇಜ್ರಿವಾಲ್ ಏಕೆ ಗೆಲ್ಲಬೇಕು ಮತ್ತು ಗೆಲ್ಲಲಾರರು?!
ಕೇಜ್ರಿವಾಲ್ರ ಮುಂದಿರುವ ಸವಾಲುಗಳೇನು? ಅವರ ಭರವಸೆಗಳು ಪ್ರಾಯೋಗಿಕವೇ?...
"ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವುದು ಕಷ್ಟದ ಕೆಲಸ. ಕ್ರಿಯಾತ್ಮಕ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯೆಂದರೆ, ಅದರ ಪೆಂಡುಲಮ್(ಗಡಿಯಾರದ ಲೋಲಕದಂಡ) ಆಕಡೆ ಈಕಡೆ ಹುಚ್ಚುಹುಚ್ಚಾಗಿ ವಾಲದೇ ಇರುವುದು. ಸರಿಯಾದ ಸಮತೋಲನವನ್ನು ಅದು ಕಾಯ್ದುಕೊಳ್ಳುತ್ತದೆ"ಎನ್ನುತ್ತಾರೆ ಬ್ಲಾಗಿಗ ರೋಹಿತ್ ಪ್ರಧಾನ್. ಕೇಜ್ರಿವಾಲ್ರ ಮುಂದಿರುವ ಸವಾಲುಗಳೇನು? ಅವರ ಭರವಸೆಗಳು ಪ್ರಾಯೋಗಿಕವೇ? ಎನ್ನುವ ಬಗ್ಗೆ ಅವರು ವಿಶ್ಲೇಷಣೆ ಮಾಡಿದ್ದಾರೆ...
2009ರಲ್ಲಿ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾದರು. ಅದೊಂದು ಮನಮುಟ್ಟುವ ಸಂದರ್ಭವಾಗಿತ್ತು. "ಮೊದಲ ಆಫ್ರಿಕನ್-ಅಮೆರಿಕನ್ ವ್ಯಕ್ತಿಯನ್ನು ಜನರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಿ, ಜನಾಂಗೀಯ ತಡೆಗೋಡೆಯನ್ನು ಕೆಡವಿಹಾಕಿದ್ದಾರೆ" ಎಂದು 'ನ್ಯೂರ್ಯಾಕ್ ಟೈಮ್ಸ್' ಪತ್ರಿಕೆ ಬರೆಯಿತು. "ಕ್ಲಿಂಟನ್ರ ಬಲಾಢ್ಯ ಕೂಟವನ್ನು, ಹೆಚ್ಚು ಪರಿಚಿತವಲ್ಲದ ಇಲ್ಲಿನಾಯ್ಸ್ನ ಸೆನೆಟ್ ಸದಸ್ಯ ಮಣಿಸಿದ್ದಾರೆ. ಅಂತರ್ಜಾಲದ ಶಕ್ತಿ ಮತ್ತು ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರ ಬೆಂಬಲ ಪಡೆದು ಅಧಿಕಾರಕ್ಕೇರಿದ್ದಾರೆ" ಎಂದು ಉಳಿದ ಪತ್ರಿಕೆಗಳು ಬರೆದವು. ಹಾಗೆ ನೋಡಿದರೆ ಅವುಗಳಿಗೆ ಮೊದಲಿನಿಂದಲೂ ಜಾನ್ ಮೆಕೇನ್ ಮೆಚ್ಚಿನ ವ್ಯಕ್ತಿಯಾಗಿದ್ದರು.
ಆದರೆ ಒಬಾಮಾರ ಈ ಗೆಲವಿಗೆ ಪ್ರಮುಖ ಕಾರಣ "Change we can believe in" ಎನ್ನುವ ಅವರ ಸರಳ ಆದರೆ ಪರಿಣಾಮಕಾರಿ ಘೋಷಣೆಯಲ್ಲಿತ್ತು. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ನಾಯಕರೂ(ವಿರೋಧ ಪಕ್ಷದವರನ್ನೂ ಒಳಗೊಂಡು) ಜೊತೆಯಾಗಿ ಕೆಲಸ ಮಾಡುತ್ತೇವೆ ಎನ್ನುವ ಅವರ ವಾಗ್ದಾನಕ್ಕೆ ಜನತೆ ಜೈಕಾರ ಹಾಕಿದರು. ಅವರಿಗೆ ಒಬಾಮಾರ ಮಾತುಗಳ ಮೇಲೆ ಅಷ್ಟೊಂದು ನಂಬಿಕೆ ಮೂಡಿತ್ತು.
5 ವರ್ಷಗಳ ನಂತರ? ಒಬಾಮಾ ಆಡಳಿತ ನೆಲಕಚ್ಚಿದೆ. ಡೆಮಾಕ್ರಟಿಕ್ ಪಕ್ಷ ಅಶಕ್ತವಾಗಿ ಕುಳಿತಿದ್ದರೆ, ರಿಪಬ್ಲಿಕನ್ ಪಕ್ಷ ಅವರ ಆಡಳಿತದ ವಿರುದ್ಧ ಆರ್ಭಟಿಸುತ್ತಾ ಕುಳಿತಿದೆ. ಒಬಾಮಾ ಅಂದು ನೀಡಿದ್ದ ಭರವಸೆಗಳೆಲ್ಲ ಜನಮಾನಸದಲ್ಲಿ ಈಗ ಕೇವಲ ಅಸ್ಪಷ್ಟ ನೆನಪಾಗಿ ಉಳಿದಿವೆ. ಅಮೆರಿಕದ ರಾಜಕೀಯದಲ್ಲಿ ಜನಾಂಗದಾಟವೇ ಹೆಚ್ಚು ವೇಗ ಪಡೆದಿದ್ದು, ಒಬಾಮಾರ ಎರಡನೆ ಅವಧಿಯ ಅಜೆಂಡಾ ಸತ್ತು ಬಿದ್ದಿದೆ. ಸತ್ಯವೇನೆಂದರೆ, ಜಾರ್ಜ್ ಬುಷ್ಗೆ ಎದುರಾದಂಥ ಪರಿಸ್ಥಿತಿಯೇ ಒಬಾಮಾರಿಗೂ ಎದುರಾಗಿದೆ.
ಹಾಗಂತ ಅವರ ಆಡಳಿತ ಅಷ್ಟೊಂದು ಕೆಟ್ಟದಾಗಿದೆ ಎಂದು ನಾನು ವಾದಿಸುತ್ತಿಲ್ಲ. ಕೆಲವೊಂದು ಮೆಚ್ಚುವ ಕಾರ್ಯಗಳನ್ನೂ ಅವರು ಮಾಡಿದ್ದಾರೆ. AFFORDABLE CARE ACT ಕಾನೂನು ಯಶಸ್ವಿಯಾಗಿ ಜಾರಿಯಾಗಿದ್ದು, ಅತಿ ಕಡಿಮೆ ದರದಲ್ಲಿ ಎಲ್ಲರಿಗೂ ಆರೋಗ್ಯ ಸೌಲಭ್ಯಗಳು ಸಿಗುತ್ತಲಿದೆ. ಅಮೆರಿಕದ ವಿವಿಧ ಭಾಗಗಳ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಡಾಡ್-ಫ್ರಾಂಕ್ ಮಸೂದೆಗೆ ಒಬಾಮಾ ಸಹಿ ಹಾಕಿದ್ದರು. ಎರಡನೆಯ ಅವಧಿಗೆ ಸ್ಪರ್ಧಿಸುವಾಗ ಒಬಾಮಾ ಬರೀ 'ಪಾಲಿಸಿ ವಿಕ್ಟರಿ'ಯ ಬಗ್ಗೆ ಮಾತನಾಡಲಿಲ್ಲ, ಬದಲಾಗಿ ನಿಜವಾದ ಬದಲಾವಣೆ ತರುವ ಬಗ್ಗೆ ಹೇಳಿದರು. "ಬರೀ ಮಾತನಾಡುವುದಿಲ್ಲ ಮಾಡಿಯೂ ತೋರಿಸುತ್ತೇನೆ. ಹೊಸ ಅಮೆರಿಕ ಉದಯವಾಗಲಿದೆ" ಎಂದರು. ಆದರೆ ಅದೆಲ್ಲಾ ಸುಳ್ಳಾಯಿತು.
---------
ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ. ಎಲ್ಲಾ ರೀತಿಯಿಂದಲೂ ಅವರದ್ದು ಅದ್ಭುತ ಸಾಧನೆ. ಭಾರತದ ರಾಜಕಾರಣದಲ್ಲಿ ಹೊರಗಿನವರಿಗೆ ಅಷ್ಟೊಂದು ಸುಲಭವಾಗಿ ಜಾಗ ಸಿಗುವುದಿಲ್ಲ. ಕೇಜ್ರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧದ ತಮ್ಮ ಆಂದೋಲನವನ್ನು ಪ್ರಬಲ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ರಾಜಕೀಯಕ್ಕೆ ಆಗಮಿಸಿದ್ದಾರೆ. ದೆಹಲಿ, ದೇಶದ ಅತ್ಯಂತ ಪ್ರಭಾವಿ ಮತ್ತು ಪ್ರಬಲ ರಾಜಕೀಯ ಅಖಾಡ. ಶೀಲಾ ದೀಕ್ಷಿತ್ರನ್ನು ಕೇಜ್ರಿವಾಲ್ ಸೋಲಿಸಿದ್ದನ್ನು ನೋಡಿದರೆ, ಎಲ್ಲಾ ವರ್ಗಗಳ/ ಜಾತಿಗಳ ಮತದಾರರನ್ನು ಒಲಿಸಿ ಅದನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಅವರ ಸಾಮರ್ಥ್ಯದ ಪರಿಚಯವಾಗುತ್ತದೆ. ತಮ್ಮ ಟೀಕಾಕಾರರನ್ನು ಸುಮ್ಮನಾಗಿಸಿರುವ ಕೇಜ್ರಿವಾಲ್, ಹೊಸ ರಾಜಕೀಯ ಅಧ್ಯಾಯವೊಂದನ್ನು ರಚಿಸಿದ್ದಾರೆ. ಈಗ ಭಾರತದ ರಾಜಧಾನಿಯ ಚುಕ್ಕಾಣಿ ಅವರ ಕೈಯಲ್ಲಿರುವುದರಿಂದ ಕೇಜ್ರಿವಾಲ್ರ ಮುಂದಿನ ನಡೆ ಹೇಗಿರಲಿದೆ, ಅವರು ಎಲ್ಲಿಗೆ ತಲುಪಲಿದ್ದಾರೆ ಎನ್ನುವ ಪ್ರಶ್ನೆಯೂ ಎದುರಾಗಿದೆ. ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಮೊದಲನೆಯದಾಗಿ, 'ನೀತಿ' ನಿರೂಪಣೆಯ ವಿಷಯವನ್ನು ನೋಡಿದಾಗ, ಕೇಜ್ರಿವಾಲ್ ಜನಪ್ರಿಯ ಮಾರ್ಗವನ್ನು ಹಿಡಿದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ವಿದ್ಯುತ್ ದರಗಳಲ್ಲಿ ಇಳಿಕೆ ಮಾಡುತ್ತೇವೆ ಮತ್ತು ಉಚಿತವಾಗಿ ನೀರು ಪೂರೈಸುತ್ತೇವೆ ಎಂಬ ಅವರ ವಾಗ್ದಾನ ಇದಕ್ಕೊಂದು ಉದಾಹರಣೆ. ಆಡಳಿತದ ಕಷ್ಟಗಳು ಅವರಿಗೆ ಈ ವಿಷಯದಲ್ಲಿ ಎದುರಾಗಲಿವೆ. ವಾರದ ಇಪ್ಪನಾಲ್ಕು ಗಂಟೆಗಳೂ ಅಗ್ಗದ ದರದಲ್ಲಿ ವಿದ್ಯುತ್ ಪೂರೈಸುವುದು ಕಷ್ಟದ ಕೆಲಸ ಎಂದು ಅವರಿಗೆ ಅರಿವಾಗಿ, ಆ ವಿಷಯದಲ್ಲಿ ಸ್ವಲ್ಪ ಕಾಂಪ್ರಮೈಸ್ ಮಾಡಿಕೊಳ್ಳುವ ಅನಿವಾರ್ಯತೆಗೆ ಬೀಳುತ್ತಾರೆ. ಅಥವಾ ದೆಹಲಿಯ ವಿದ್ಯುತ್ ವಲಯದಲ್ಲಿ ಏಕಾಂಗಿಯಾಗಿ ಬದಲಾವಣೆ ತರಲು ಮುಂದಾಗುವರೆ? ಸಮಯವೇ ಉತ್ತರಿಸಲಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ, ಕೇಜ್ರಿವಾಲ್ ಅವರಿಗೆ 'ಹೊಂದಾಣಿಕೆ' ಮಾಡಿಕೊಳ್ಳುವ ಗುಣವಿದೆ ಎನ್ನುವುದು ಅರ್ಥವಾಗುತ್ತದೆ.
ಆದರೆ ಕೇಜ್ರಿವಾಲ್ ಅವರು ಎಲ್ಲರಂತೆ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಅತಿ ಸಹಜವಾಗಿರುವ "ಉಚಿತ" ವಿತರಣೆಯ ಭರವಸೆಗಳನ್ನು ನೀಡುತ್ತಿಲ್ಲ. ಭಾರತೀಯ ರಾಜಕಾರಣದಲ್ಲೇ ಮೂಲಭೂತ ಬದಲಾವಣೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಉದಾಹರಣೆಗೆ, ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ರಚಿಸಬೇಕೆ ಎನ್ನುವ ಬಗ್ಗೆ ನಡೆದ 'ಎಸ್ಎಮ್ಎಸ್ ಅಭಿಪ್ರಾಯ ಸಂಗ್ರಹ'. ಹಾಗೆ ನೋಡಿದರೆ ವೈಜ್ಞಾನಿಕವಾಗಿ
ಇದು ನೆಚ್ಚಿಕೊಳ್ಳಲಾಗದ ನಡೆಯೇ ಆದರೂ, ಇದು ಸಹಭಾಗಿತ್ವ ಪ್ರಜಾಪ್ರಭುತ್ವದ ಹೊಸ ಮಾದರಿಯೆನ್ನುವುದಂತೂ ನಿಜ. ಆದರೆ 1.6 ಕೋಟಿ ಜನಸಂಖ್ಯೆಯಿರುವ ರಾಜಧಾನಿಯಲ್ಲಿ ಅಥವಾ 120 ಕೋಟಿ ಜನರಿರುವ ಈ ರಾಷ್ಟ್ರದಲ್ಲಿ ಇಂಥ ಮಾದರಿ ಹೇಗೆ ಕೆಲಸ ಮಾಡಲಿದೆ? ಎಲ್ಲಾ ವಿಷಯವನ್ನೂ ಮತದಾರರೇ ನಿರ್ಧರಿಸಬೇಕೇ? ಒಂದು ವೇಳೆ ಇದು ಪ್ರಾಯೋಗಿಕವಲ್ಲದ ಮಾದರಿಯಾಗಿದ್ದರೆ, ಕೇಜ್ರಿವಾಲ್ ಅವರು ಇದನ್ನು 'ಯಶಸ್ವಿ ಬದಲಾವಣೆ' ಎಂದ್ಹೇಗೆ ಕರೆಯಬಲ್ಲರು? ಅಲ್ಲ, ಎನ್ನುವುದಾದರೆ ಅವರೂ ಉಳಿದೆಲ್ಲರಂತೆ ಒಬ್ಬ ರಾಜಕಾರಣಿಯಷ್ಟೇ ಎನ್ನುವ ಮಾತು ನಿಜವೆಂದೆನಿಸದೇ? ಜನಲೋಕಪಾಲ್ ಬಿಲ್ ಅನ್ನು ಜಾರಿಮಾಡ ಹೊರಟಿರುವುದು, ಅದರ ವ್ಯಾಪ್ತಿಯಲ್ಲಿ ರಚನಾತ್ಮಕ ಆರ್ಥಿಕ ಸಮಸ್ಯೆಗಳೂ ಬರುತ್ತವೆ ಎನ್ನುವ ಕಾರಣಕ್ಕೆ. ಒಂದು ವೇಳೆ ಆ ಕಾನೂನು ಜಾರಿಯಾದ ನಂತರವೂ ಭ್ರಷ್ಟಾಚಾರ ನಿರ್ಮೂಲನೆಯಾಗದಿದ್ದರೆ ಏನಾಗುತ್ತದೆ? ಕೇಜ್ರಿವಾಲ್ ಏನು ಮಾಡುತ್ತಾರೆ?
ಹೇಗೆ, ಅಮೆರಿಕ ಬದಲಾಗುತ್ತದೆ ಎಂದು ಒಬಾಮಾರ ಬೆಂಬಲಿಗರು ಭಾವಿಸಿದರೋ, ಅದೇ ರೀತಿಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಕೇಜ್ರಿವಾಲ್ ಅವರ ಮಾದರಿಯ ಬಗ್ಗೆ ಭಾವಿಸುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವುದು ಕಷ್ಟದ ಕೆಲಸ. ಕ್ರಿಯಾತ್ಮಕ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯೆಂದರೆ, ಅದರ ಪೆಂಡುಲಮ್(ಗಡಿಯಾರದ ಲೋಲಕದಂಡ) ಆಕಡೆ ಈಕಡೆ ಹುಚ್ಚುಹುಚ್ಚಾಗಿ ವಾಲುವುದಿಲ್ಲ. ಬದಲಾಗಿ ಸರಿಯಾದ ಸಮತೋಲನವನ್ನು ಅದು ಕಾಯ್ದುಕೊಳ್ಳುತ್ತದೆ. ಹಾಗಂತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮಾತನಾಡುವ ನಾಯಕರೆಲ್ಲರೂ ವೈಫಲ್ಯ ಅನುಭವಿಸುತ್ತಾರೆ ಎಂದಲ್ಲ.
ಸಿನಿಕ ಮತದಾರರು ರಾಜಕಾರಣಿಯೊಬ್ಬ ತಾನು ನೀಡಿದ ಭರವಸೆಗಳಿಂದ ನುಣುಚಿಕೊಳ್ಳುತ್ತಾನೆ ಎಂದು ಭಾವಿಸುತ್ತಾರೆ. ಇನ್ನೊಂದೆಡೆ ರಾಜಕೀಯ ಕ್ರಾಂತಿಯ ಬೆಂಬಲಿಗರು, ತಮ್ಮ ಮಾದರಿ ನಿಚ್ಚಳವಾದದ್ದು ಮತ್ತು ಅಲುಗಾಡದ್ದು ಎಂದು ನಂಬುತ್ತಾರೆ. ಆದರೆ ಯಾವಾಗ ಅವರ ನಾಯಕ ಆ ಮಾದರಿಯನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗುತ್ತಾನೋ ಆಗ, ಆ ಬೆಂಬಲಿಗರು ವೇಗವಾಗಿ ಮತ್ತು ಸ್ಪಷ್ಟವಾಗಿ ಭ್ರಮನಿರಸನಗೊಳ್ಳುತ್ತಾರೆ.
ಈ ನಿಟ್ಟಿನಲ್ಲಿ ಕೇಜ್ರಿವಾಲ್ ಸೋಲುವುದು ಖಚಿತ. ಆದರೆ ಒಂದು ವೇಳೆ ಅವರು ತಮ್ಮ ರಾಜಕೀಯ ಭಾಷಣಗಳಲ್ಲಿ ಸ್ವಲ್ಪ ವಾಸ್ತವಿಕತೆಯನ್ನೂ ಸೇರಿಸಿದರೆ ಆಗ ಈ "ಕ್ರಾಂತಿಯ ಕಿಡಿಗಳನ್ನು" ಆರದಂತೆ ಇಡಬಹುದು! ಆದರೆ ಆ ಕೆಲಸ ಅಷ್ಟು ಸುಲಭವಲ್ಲ. ಇತಿಹಾಸವನ್ನು ನೋಡಿದಾಗ, ಎಷ್ಟೋ ಮಹಾನ್ ನಾಯಕರು ಈ ಪರೀಕ್ಷೆಯಲ್ಲಿ ಸೋತಿರುವುದು ಕಾಣಿಸುತ್ತದೆ.
ವಿ.ಪಿ. ಸಿಂಗ್ರ ಅಂತಃಸ್ಫೋಟ ಹೇಗೆ ಆ ಕಾಲದ ಯುವಜನಾಂಗದ ಸಿದ್ಧಾಂತಗಳನ್ನು ದೋಚಿಕೊಂಡು ಮತ್ತು ಅವರನ್ನು ರಾಜಕೀಯ ಪ್ರಕ್ರಿಯೆಯ ಬಗ್ಗೆ ಮುಂದೆ ಅತ್ಯಂತ ಎಚ್ಚರದಿಂದಿರುವಂತೆ ಮಾಡಿತು ಎನ್ನುವುದು ನಮಗೆ ತಿಳಿದೇ ಇದೆ. ಹೊಸ ತಲೆಮಾರಿನವರನ್ನು ರಾಜಕೀಯದೊಂದಿಗೆ ಬೆಸೆಯುವಲ್ಲಿನ ಕೇಜ್ರಿವಾಲರ ಪ್ರಯತ್ನ ಮೆಚ್ಚುವಂಥದ್ದೆ. ಈ ನಿಟ್ಟಿನಲ್ಲಿ ಅವರ ಮೇಲಿನ ಜವಾಬ್ದಾರಿ ಅತ್ಯಂತ ಹೆಚ್ಚಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಕೇಜ್ರಿವಾಲರೇ, ದಯವಿಟ್ಟೂ ಹೊಸ ತಲೆಮಾರಿನ ಮತದಾರರನ್ನು ಸಿನಿಕರನ್ನಾಗಿ ಮಾಡಬೇಡಿ!