ಶ್ರೀಕಂಠದತ್ತರ ಶಿಕ್ಷಣ ಪ್ರೀತಿಯಿಂದ ಗುರುಮನೆಯಾದ ಅರಮನೆ
ಗತಿಸಿದ ಶ್ರೀಕಂಠದತ್ತ ನರಸಿಂಹರಾಜ ...
ಗತಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಲವು ಕಾರ್ಯಕ್ಷೇತ್ರಗಳು ಎಷ್ಟೋ ಪ್ರಚಾರವಾಗಿವೆ. ಆದರೆ ಅವರ ಶೈಕ್ಷಣಿಕ ಆಸಕ್ತಿ ಅರಮನೆಯನ್ನು ಗುರುಮನೆಯನ್ನಾಗಿಸಿದ್ದನ್ನು ಹೇಳುವವರೇ ಇಲ್ಲ. ಅವರಿಗೆ ತಾವು ರಾಜಮನೆತನದವರು ಎನ್ನುವುದಕ್ಕಿಂತ ತಾವು ಪಡೆದ ಶಿಕ್ಷಣದಲ್ಲಿ ಹೊಸ ವಿಷಯ ಕಲಿಯುವುದರಲ್ಲಿ ಹೆಚ್ಚು ಖುಷಿ. ತಮ್ಮ ಹೆಸರನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂಎ, ಎಲ್ಎಲ್ಬಿ ಎಂದು ಶೈಕ್ಷಣಿಕ ಪದವಿ ಸಹಿತ ಬರೆಯುವುದನ್ನು ಇಷ್ಟಪಡುತ್ತಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ದೇಶದಲ್ಲಿ ಇದ್ದ ನೂರಾರು ರಾಜಸಂಸ್ಥಾನಗಳಲ್ಲಿ ಅರಸರ ಆಳ್ವಿಕೆ ಅಂತ್ಯವಾಗಿ ನೂತನ ಸರ್ಕಾರಗಳ ರಚನೆಯಾಯಿತು. ಆದರೆ ಮಹಾರಾಜರಾಗಿದ್ದವರು ತಮ್ಮ ರಾಜಮನೆತನದ ಪರಂಪರೆ, ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದರಲ್ಲದೆ ಆಯಾ ರಾಜ್ಯಗಳಲ್ಲಿ ರಾಜಪ್ರಮುಖ (ರಾಜ್ಯಪಾಲರಿಗೆ ಸಮಾನ) ಹುದ್ದೆ ಅವರಿಗಿತ್ತು. ಅರಸೊತ್ತಿಗೆಯ ಸಂಪ್ರದಾಯ, ವಿಧಿ ಆಚರಣೆಗಳು, ಹಬ್ಬಗಳು, ಪೂಜೆ ಕೈಂಕರ್ಯಗಳು ಮುಂದುವರಿದವು. ಹಿಂದಿನ ಮೈಸೂರು ಸಂಸ್ಥಾನದ ದಸರಾದಲ್ಲಿ ಅನೇಕ ಮಾರ್ಪಾಟುಗಳಾದರೂ ಈವರೆಗೂ ನಾಡಹಬ್ಬವಾಗಿ ಹಿಂದಿನಂತೆ ಜನಾಕರ್ಷಣೆ ಉಳಿಸಿಕೊಂಡಿದೆ. ಶ್ರೀಕಂಠದತ್ತರ ದೇಹಾಂತ್ಯದಿಂದಾಗಿ ಇನ್ನು ಮುಂದಿನ ದಸರಾ ಆಚರಣೆಗಳೆಲ್ಲ ಇನ್ನೆಂದೂ ಹಿಂದಿನಂತಿರವು.
ಸ್ವಾತಂತ್ರ್ಯಾನಂತರ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ರಾಜಾಳ್ವಿಕೆಯನ್ನು ಕಳೆದುಕೊಂಡು ಮೈಸೂರು ರಾಜ್ಯದ ರಾಜಪ್ರಮುಖರಾಗಿ 1956ರಲ್ಲಿ ಏಕೀಕರಣಗೊಂಡ ಕನ್ನಡ ರಾಜ್ಯವಾದ ನವ ಮೈಸೂರಿಗೆ ರಾಜ್ಯಪಾಲರಾದರು. ಮುಂದೆ ಕೆಲವು ಕಾಲ ತಮಿಳುನಾಡಿಗೆ ವರ್ಗವಾಗಿ ಅಲ್ಲಿ ರಾಜ್ಯಪಾಲರಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅವರ ಏಕಮಾತ್ರ ಪುತ್ರ ಶ್ರೀಕಂಠದತ್ತ (ಜನನ 1953). ತಂದೆಯ ನಂತರ ರಾಜಮನೆತನದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದವರು. ಲೋಕಸಭೆಗೆ ಚುನಾಯಿತರಾಗಿ ನಾಲ್ಕು ಬಾರಿ ಸಂಸದರಾದರೇ ಹೊರತು ಯಾರದೇ ಮರ್ಜಿಯಿಂದ ಯಾವುದೇ ಸ್ಥಾನಮಾನ ಪಡೆಯಲಿಲ್ಲ. ರಾಜಕೀಯ ಪಕ್ಷಗಳು ಅವುಗಳ ಪರವಾಗಿ ಶ್ರೀಕಂಠದತ್ತರನ್ನು ಸ್ಪರ್ಧೆಗೆ ನಿಲ್ಲಿಸಲು ಪೈಪೋಟಿಗೆ ನಿಂತದ್ದುಂಟು. ಅವರ ಮುಂದೆ ಯಾರದೇ ವಶೀಲಿ ಬಾಜಿ ನಡೆಯುತ್ತಿರಲಿಲ್ಲ.
1916ರಲ್ಲಿ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ರಿಂದ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾಲಯ ಈಗ ರಾಜ್ಯದ ಸ್ವತ್ತು. ಆದ್ದರಿಂದ ಶ್ರೀಕಂಠದತ್ತ ಒಡೆಯರ್ ಅವರಿಗೆ ಈ ಕಾಲಕ್ಕೆ ತಕ್ಕ ತಮ್ಮದೇ ಒಂದು ಆನ್ಲೈನ್ ವಿಶ್ವವಿದ್ಯಾನಿಲಯ ಸ್ಥಾಪಿಸುವ ಆಕಾಂಕ್ಷೆ ಅವರಿಗಿತ್ತು. ಯೂನಿವರ್ಸಿಟಿ ಆಫ್ ಮಹಾರಾಜ ಆಫ್ ಮೈಸೂರು (ಯುಎಂಎಂ) ಆನ್ಲೈನ್ ವಿವಿ ಪ್ರಾರಂಭಕ್ಕಾಗಿ ಸಿದ್ಧತೆ ನಡೆಯುವ ವೇಳೆಯಲ್ಲಿಯೇ ಶ್ರೀಕಂಠದತ್ತರು ಇನ್ನಿಲ್ಲವಾದರು.
ರಾಜಕೀಯ ವಿಜ್ಞಾನ ಮತ್ತು ಕಾನೂನು ಶಿಕ್ಷಣದಿಂದ ಪಡೆದ ಜ್ಞಾನದಿಂದ ಅವರು ಕಾನೂನು ತಿಳಿವಳಿಕೆಯಲ್ಲಿ ತಮ್ಮ ತಂದೆಗಿಂತ ಹೆಚ್ಚು ವ್ಯಾವಹಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲವರಾಗಿದ್ದರು. ಹಾಗಾಗಿಯೇ ಅರಮನೆ ಆಸ್ತಿ ವಿವಾದಗಳು ಮತ್ಯಾರದೋ ಸಂಧಾನದಿಂದ ಇತ್ಯರ್ಥವಾಗುವುದರ ಬದಲು ಸುಪ್ರೀಂಕೋರ್ಟ್ನಲ್ಲೇ ಬಗೆಹರಿಯಲಿ ಎನ್ನುತ್ತಿದ್ದರು. ನ್ಯಾಯಾಲಯದಲ್ಲಿ ತಾವು ಗೆಲ್ಲುವ ವಿಶ್ವಾಸವೂ ಅವರಿಗಿತ್ತು.
ರಾಜಮನೆತನದ ಬದಲಾದ ಕಾಲದಲ್ಲಿ ಶ್ರೀಕಂಠದತ್ತ ಅವರಿಗೆ ಕೆಲವು ವಿಶಿಷ್ಟ ಆಸಕ್ತಿ, ಹವ್ಯಾಸಗಳಿದ್ದವು. ರಾಜಮನೆತನದ ಆಡಳಿತ, ಸಂಪ್ರದಾಯ ಆಚರಣೆ, ವ್ಯಾವಹಾರಿಕ ನಿರ್ವಹಣೆ, ರಾಜಮನೆತನಕ್ಕೇ ಮೀಸಲಾಗಿದ್ದ ಕೆಲವು ನಿಷ್ಠೆ- ನಿಯಮ- ನಿಬಂಧನೆಗಳನ್ನು ಪರಿಪಾಲಿಸುವುದರ ಜೊತೆಗೆ ಆಧುನಿಕ ಪರಿವರ್ತನಪರ ಪ್ರಾಯೋಗಿಕ ಮನೋಭಾವನ್ನು ರೂಢಿಸಿಕೊಂಡಿದ್ದರು.
ಅತಿ ಉತ್ಸಾಹಿಯಾಗಿದ್ದ ಶ್ರೀಕಂಠದತ್ತ ಅವರ ಕನಸುಗಳು ಸಾಕಷ್ಟು ಇದ್ದವು. ಮುಂದಿನ ಐದು- ಹತ್ತು ವರ್ಷಗಳಲ್ಲಿ ಅವರು ಮಾಡಲು ಹಾಕಿಕೊಂಡಿದ್ದ ಯೋಜನೆಗಳು ಹಲವು. ಅವುಗಳನ್ನು ಕಾರ್ಯರೂಪಕ್ಕೆ ತರಲು ಅವರು ಬಹಳಷ್ಟು ಶ್ರಮಿಸಿದರು. ಯೋಜನೆಗಳಿಗೆ ಸರ್ಕಾರದಿಂದ ನೆರವು ಪಡೆಯುವ ಅಪೇಕ್ಷೆಯಂತೂ ಇರಲಿಲ್ಲ. ಅವರು ನಿರೀಕ್ಷಿಸಿದ ಸಹಕಾರವಂತೂ ಸಿಗಲಿಲ್ಲ. ಸಸ್ಯ ವಿಜ್ಞಾನ ಉದ್ಯಾನ (ಬೊಟಾನಿಕಲ್ ಗಾರ್ಡನ್ ನಿರ್ಮಿಸುವುದು, ಆರ್ಥಿಕ ಅಡಚಣೆಯಿಂದಾಗಿ ಕೈಬಿಟ್ಟಿದ್ದ ಸ್ಕೈ ಪ್ಯಾಲೆಸ್ ಏರ್ಲೈನ್ಸ್ ಯೋಜನೆಯನ್ನು ಮುಂದುವರಿಸುವುದು, ಹೊಸೂರಿನಲ್ಲಿ ಕಾಲೇಜು ತೆರೆಯುವುದು (ಇದಕ್ಕಾಗಿ ಜಮೀನು ಹುಡುಕಾಟದಲ್ಲಿದ್ದರು) ಕೌಶಲಯುಕ್ತ ಕೋರ್ಸ್ಗಳನ್ನು ನಡೆಸುವುದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ನೆರವಾಗುವ ಉದ್ದೇಶಕ್ಕಾಗಿ ಹಣ ಕ್ರೋಢೀಕರಿಸಲು ಹೆಚ್ಚು ವಿದೇಶಿಗರನ್ನು ಆಕರ್ಷಿಸುವ ಸ್ಟಾರ್ಹೊಟೇಲ್ಗಳನ್ನು ನಿರ್ಮಿಸುವುದು ಅವರ ಯೋಜನೆಗಳಾಗಿದ್ದವು. ಛತ್ತೀಸ್ಗಢ, ಮೇಘಾಲಯಗಳಂತಹ ಶಿಕ್ಷಣದ ಅಗತ್ಯವಿರುವ ರಾಜ್ಯಗಳಲ್ಲಿ ಯುವಜನತೆಗೆ ಬದುಕನ್ನು ಕಟ್ಟಿಕೊಡುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅಲ್ಲಿನ ಸರ್ಕಾರಗಳನ್ನು ಸಂಪರ್ಕಿಸಿದ್ದರು. ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದಂತೆ ದುಬೈ, ಚೀನಾ, ಹಾಂಕಾಂಗ್, ಮಲೇಶಿಯಾ, ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಿಗೆ ಭೇಟಿ ನೀಡಿದ್ದಾರೆ.
ಭಾರತದಲ್ಲಿ ವ್ಯವಸ್ಥೆಯ ಭ್ರಷ್ಟಾಚಾರಗಳಿಗೆ ಮಣಿಯದೆ ತಮ್ಮ ಪ್ರಸ್ತಾಪಗಳನ್ನು ಕಾರ್ಯಗತಗೊಳಿಸಲಾಗದು ಎಂಬ ನಿರಾಶೆಯ ಅನುಭವದಿಂದ ಹೊರದೇಶದ ಕಡೆ ಮುಖಮಾಡಿದರು. ಇತ್ತೀಚೆಗೆ ಅಮೆರಿಕದ ಹಲವು ವಿಶ್ವವಿದ್ಯಾನಿಲಯಗಳ ಸಂಪರ್ಕ ಬೆಳೆಸಿದ್ದರು. ಮಾರಿಷಸ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಆ ಮೂಲಕ ತಮ್ಮ ಶಿಕ್ಷಣ ಕಾರ್ಯಕ್ರಮಗಳನ್ನು ವಿದೇಶದ ನಾನಾ ಕಡೆಗಳಲ್ಲಿ ವಿಸ್ತರಿಸುವ ಗುರಿ ಅವರದಾಗಿತ್ತು.
ಬೆಂಗಳೂರು ಅರಮನೆಯ ರಾಯಲ್ ಕಾಟೇಜ್ನಲ್ಲಿರುವ ಮಹಾರಾಜ ಶಿಕ್ಷಣ ಸಂಸ್ಥೆಯ ಜೆಮ್ಸ್ ಬಿ ಸ್ಕೂಲ್ ಅವರ ಕನಸಿನ ಮೊದಲ ಕೂಸು. ಇಂಟಿಗ್ರೇಟೆಡ್ ಎಂಬಿಎ ಕೋರ್ಸ್ ನಡೆಸುವ ಮ್ಯಾನೇಜ್ಮೆಂಟ್ ಜೆಮ್ಸ್ ಬಿ ಸ್ಕೂಲ್ ಶಿಕ್ಷಣ ಸಂಸ್ಥೆ 2005ರಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕದ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಪ್ರಾರಂಭವಾಗಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ.
ಸರ್ಕಾರಿ ವಿಶ್ವವಿದ್ಯಾನಿಲಯಗಳಿಗೆ ಸಂಯೋಜಿತವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಕ್ಕಿಂತ ತಾವೇ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ನಿರ್ಧರಿಸಿ ಡೀಮ್ಡ್ ವಿ.ವಿ.ಗಿಂತ ವಿಶೇಷ ಆವಿಷ್ಕಾರಗಳಿಗೆ ತಕ್ಕುದಾದ ಡಿನೋವಾ ವಿ.ವಿ. ಸ್ಥಾಪಿಸಲು ಶ್ರೀಕಂಠದತ್ತ ಒಡೆಯರ್ ಸಿದ್ಧತೆ ನಡೆಸಿದ್ದರು. ಬರುವ 2014ರಲ್ಲಿ ಅಂದರೆ ಅವರ ಡೊಡ್ಡಜ್ಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯ 1916ರಲ್ಲಿ ಸ್ಥಾಪನೆಯಾದ ಶತಮಾನದ ಅಂತರದಲ್ಲಿ ಯೂನಿವರ್ಸಿಟಿ ಆಫ್ ಮಹಾರಾಜ ಆಫ್ ಮೈಸೂರು ಹೆಸರಿನಲ್ಲಿ ಡಿನೋವಾ ವಿಶ್ವವಿದ್ಯಾನಿಲಯ ಸ್ಥಾಪನೆಗೊಳ್ಳಲು ಯೋಜನೆ ಸಜ್ಜಾಗಿದೆ. ಈ ಸಂಬಂಧದಲ್ಲಿ 2014ರ ಫೆಬ್ರವರಿ ಮೊದಲ ವಾರದಲ್ಲಿ ದುಬೈ ಮತ್ತು ಮಾರಿಷಸ್ಗೆ ಹೋಗುವವರಿದ್ದರು. ಮಾರಿಷಸ್ ರಾಷ್ಟ್ರಾಧ್ಯಕ್ಷ ರಾಜ್ಕೇಶ್ವುರ್ ಪುರಿಯಾಗ್ ಅವರು ಒಪ್ಪಂದಕ್ಕೆ ಸಹಿ ಹಾಕಲು ಆಹ್ವಾನಿಸಿದ್ದರು.
ಯೋಜನೆಯ ಅಂತಿಮ ರೂಪವನ್ನು ಡಿಸೆಂಬರ್ 7ರಂದು, ಅಂದರೆ ಅವರ ನಿಧನದ ಮೂರು ದಿನಗಳ ಹಿಂದೆಯಷ್ಟೇ ನಿರ್ಧರಿಸಿದ್ದರು. ತಮ್ಮ ಶೈಕ್ಷಣಿಕ ಕನಸುಗಳ ಸಲಹೆಗಾರ ಪ್ರೊ.ಚಂಬಿ ಪುರಾಣಿಕ್ ಅವರೊಡನೆ ಪ್ರಸ್ತಾಪಿತ ವಿಶ್ವವಿದ್ಯಾಲಯದ ಲಾಂಛನ, ಪ್ರಮುಖ ಹುದ್ದೆಗಳು ಸೇರಿದಂತೆ ಎಲ್ಲಾ ವಿವರಗಳನ್ನು ಚರ್ಚಿಸಿದ್ದರು. ಪ್ರೊ. ಪುರಾಣಿಕ್ ಅವರು ಶ್ರೀಕಂಠದತ್ತರಿಗೆ ಬಿ.ಎ. ವಿದ್ಯಾರ್ಥಿ ದೆಸೆಯಲ್ಲೇ ಪ್ರಾಧ್ಯಾಪಕರು ಮತ್ತು ಅರಮನೆಗೂ ಹೋಗಿ ಮನೆಪಾಠ ಮಾಡಿದ ಗುರು. ಶ್ರೀಕಂಠದತ್ತರು ಕೊನೆಯುಸಿರಿನ ತನಕ ಪ್ರೊ. ಪುರಾಣಿಕ್ರನ್ನು ತಮ್ಮ ಮಾರ್ಗದರ್ಶಕರಾಗಿ ಪರಿಗಣಿಸಿದವರು. ಪ್ರೊ. ಪುರಾಣಿಕ್ ಅವರು ತಮ್ಮ ಶಿಷ್ಯ ಮಹಾರಾಜರನ್ನು 'ಶ್ರೀಕಂಠ್' ಎಂದೇ ಸಂಬೋಧಿಸಿದವರು. ಅವರು ಪ್ರಾರಂಭಿಸಿದ ಜೆಮ್ಸ್ ಬಿ ಶಾಲೆಗೂ ಪ್ರೊ. ಪುರಾಣಿಕ್ ಶೈಕ್ಷಣಿಕ ಸಲಹೆಗಾರರು. ಹೀಗೆ ದೀರ್ಘಕಾಲ ಗುರು ಸಂಬಂಧವನ್ನು ಉಳಿಸಿಕೊಂಡ ಮೌಲ್ಯ ಶ್ರೀಕಂಠದತ್ತರದ್ದು.
ಈಗ ನಡೆಯುತ್ತಿರುವ ಹಾಗೂ ಹೊಸದಾಗಿ ಪ್ರಾರಂಭವಾಗುವ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನು ರಾಜ ಕುಟುಂಬದ ಸಹಕಾರದೊಂದಿಗೆ ಮುಂದುವರಿಸುವ ಹೊಣೆ ಗುರು ಪ್ರೊ.ಚಂಬಿ ಪುರಾಣಿಕ್ ಮತ್ತು ಅವರ ಶೈಕ್ಷಣಿಕ ಸಹವರ್ತಿಗಳದ್ದಾಗಿದೆ. (ಮಾಧ್ಯಮ ಭಾರತಿ ಫೀಚರ್)
- ಡಿ. ಯಶೋದಾ
ಅಧ್ಯಯನ ಸಂಯೋಜಕರು,ಮಾಧ್ಯಮ ಭಾರತಿ, ಬೆಂಗಳೂರು